ಲೇಖಕರಾದ ಶ್ರೀ ಹರಿನರಸಿಂಹ ಉಪಾಧ್ಯಾಯರು ತಮ್ಮ ಹದಿನಾರನೆಯ ಕೃತಿಯಾಗಿ “ಅಷ್ಟಾವಕ್ರ ಗೀತೆ” ಈ ಕೃತಿಯ ಕುರಿತು ಪದ್ಮನಾಭ. ಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ಅಷ್ಟಾವಕ್ರ ಗೀತೆ
ಲೇಖಕರು/ ಅನುವಾದಕರು: ಹರಿ ನರಸಿಂಹ ಉಪಾಧ್ಯಾಯ
ಪ್ರಕಾಶಕರು : ಹೆಚ್ ಎಸ್ ಆರ್ ಎ ಪ್ರಕಾಶನ
ಬೆಲೆ : 120.00
ಪದ್ಯ ಪ್ರಕಾರದಲ್ಲಿ ನಿರಂತರವಾಗಿ ಕೃಷಿ ಮಾಡುತ್ತಿರುವ ಶ್ರೀ ಹರಿನರಸಿಂಹ ಉಪಾಧ್ಯಾಯರು ತಮ್ಮ ಹದಿನಾರನೆಯ ಕೃತಿಯಾಗಿ “ಅಷ್ಟಾವಕ್ರ ಗೀತೆ” ಎಂಬ ವಿಶಿಷ್ಟ ಕೃತಿಯನ್ನು ಸಾಹಿತ್ಯಲೋಕಕ್ಕೆ ಸಮರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಲೇಖಕರನ್ನು ಅಭಿನಂದಿಸುತ್ತಾ ನನ್ನೆರಡು ಮಾತುಗಳನ್ನು ಹಂಚಿಕೊಳ್ಳುವೆ.
ಅಷ್ಟಾವಕ್ರ ಗೀತೆ ಮೂಲತಃ ಸಂಸ್ಕೃತದಲ್ಲಿದೆ. ಇದನ್ನು ಹರಿನರಸಿಂಹ ಉಪಾಧ್ಯಾಯರು ತಮ್ಮದೇ ಆದ ಶೈಲಿಯಲ್ಲಿ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಪ್ರತಿಯೊಂದು ಪದ್ಯದ ಕೆಳಗೆ ಆ ಪದ್ಯದ ವಿವರಣೆಯನ್ನೂ ನೀಡಿದ್ದಾರೆ.

ನ್ಯೂನತೆಗಳು ದೇಹಕ್ಕೇ ಹೊರತು ನನಗಲ್ಲ . ನಾನು ಎಂಬುದು ಈ ದೇಹವಲ್ಲ. ಎಂಬುದೇ ಅಷ್ಟಾವಕ್ರನ ಸಂದೇಶ. ಜ್ಞಾನ, ವೈರಾಗ್ಯ ಮತ್ತು ಮೋಕ್ಷ ಸಿದ್ಧಿಗಳ ಬಗ್ಗೆ ತಿಳಿಸಿಕೊಡುವಂತೆ ಜನಕನು ಅಷ್ಟಾವಕ್ರನನ್ನು ಪ್ರಾರ್ಥಿಸುತ್ತಾನೆ. ಆಗ ಅಷ್ಟಾವಕ್ರನು ಜನಕನಿಗೆ ಹೇಳಿದ ಮಾತುಗಳೇ ಅಷ್ಟಾವಕ್ರ ಗೀತೆ.
“ಕಥಂ ಜ್ಞಾನಂ ಅವಾಪ್ನೋತಿ ಕಥಂ ಮುಕ್ತಃ ಭವಿಷ್ಯತಿ
ವೈರಾಗ್ಯಂ ಚ ಕಥಂ ಪ್ರಾಪ್ತಂ ಏತಂ ಬ್ರೂಹಿ ಮಮ ಪ್ರಭೋ”
ಎಂದು ಜನಕ ಪ್ರಾರ್ಥಿಸುವುದರೊಂದಿಗೆ ಇದು ಆರಂಭವಾಗುತ್ತದೆ. ಕಥಂ ಎಂದರೆ ಹೇಗೆ ಎಂದರ್ಥ. ಜ್ಞಾನ ವೈರಾಗ್ಯ ಮತ್ತು ಮುಕ್ತಿಯನ್ನು ಹೇಗೆ ಪಡೆಯುವುದು ಎಂದು ಹೇಳಿ (ತಿಳಿಸಿಕೊಡಿ) ಎಂದು ಈ ಶ್ಲೋಕದ ಅರ್ಥ. ಆಗ ಅಷ್ಟಾವಕ್ರರು ಉತ್ತರ ಹೀಗಿದೆ…
“ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ ತ್ಯಜ
ಕ್ಷಮಾರ್ಜವದಯಾತೋಷ ಸತ್ಯಂ ಪೀಯೂಷವತ್ ಭಜ”
ನೀನು ಮುಕ್ತಿಯನ್ನು ಬಯಸುವುದಾದರೆ ವಿಷಯಾಸಕ್ತಿ (ಇಂದ್ರಿಯಸುಖ)ಯನ್ನು ವಿಷದಂತೆ ದೂರವಿರಿಸು. ಕ್ಷಮೆ, ಸರಳತೆ ದಯೆ, ತೃಪ್ತಿ ಮತ್ತು ಸತ್ಯವನ್ನು ಅಮೃತದಂತೆ ಸ್ವೀಕರಿಸು..
ಇದನ್ನು ಉಪಾಧ್ಯಾಯರು ಹೀಗೆ ಹೇಳಿದ್ದಾರೆ.
ಜ್ಞಾನವಂ ಗಳಿಸುವುದು ಎಂತೋ
ಮುಕ್ತಿ ಸಾಧನೆ ಗೈವುದೆಂತೋ
ವೈ|ರಾಗ್ಯ ಪ್ರಾಪ್ತಿಯ ಬಗೆಯದೆಂತೋ ಪ್ರಭುವೆ ಇದನರುಹು |
ಎಂಬ ಜನಕನ ಮಾತ ಕೇಳುತ
ಅಷ್ಟವಕ್ರನು ಪೇಳ್ದನಾತಗೆ
ಸುತನೆ ! ಮುಕ್ತಿಯ ಬಯಕೆಯಿದ್ದೊಡೆ ವಿಷಯಗಳ ತ್ಯಜಿಸು ||
ಈ ಕೃತಿಯ ನಾಲ್ಕನೇ ಶ್ಲೋಕ ಹೀಗಿದೆ…
“ಯದಿ ದೇಹಂ ಪೃಥಕ್ ಕೃತ್ಯ ಚೇತಿ ವಿಶ್ರಾಮ್ಯ ತಿಷ್ಠಸಿ
ಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ”
ಇದರ ಕನ್ನಡ ಅವತರಣಿಕೆ ಹೀಗಿದೆ
ದೇಹ ಮೋಹವ ತೊರೆದು ಸತ್ಚಿತ್
ರೂಪದೊಳು ನೆಲೆಯಾಗಿ ನಿಲ್ಲಲು
ಒಡನೆ ಶಾಂತಿಯು ಲಭಿಸುವುದು ಕೇಳಯ್ಯ ಕಿವಿಗೊಟ್ಟು |
ಆಗಲಾಗಲೆ ನಿತ್ಯ ಸುಖಿಯೈ
ಆಗಲಾಗಲೆ ಶಾಂತಮೂರ್ತಿಯು
ಆಗ ನೀನೇ ಬಂಧ ಮುಕ್ತ ಭವಿಷ್ಯದಲಿ ಕೇಳೈ ||
ಈ ದೇಹ ಎಂದಿಗೂ ಶಾಶ್ವತವಲ್ಲ. ಆದ್ದರಿಂದ ಬಿದ್ದು ಹೋಗುವ ದೇಹದ ಮೇಲಿನ ವ್ಯಾಮೋಹವನ್ನು ತೊರೆದು ಸಚ್ಚಿದಾನಂದ ರೂಪದಲ್ಲಿ ಸ್ಥಿರವಾಗಿ ನೆಲೆಸು. ಆಗ ಮಾತ್ರ ಶಾಂತಿಯು ದೊರಕುವುದು. ಅಂತಹ ಸ್ಥಿರ ಸಚ್ಚಿದಾನಂದ ರೂಪದಲ್ಲಿ ನೆಲೆಸಿದಾಗ ನೀನು ನಿತ್ಯ ಸುಖಿಯಾಗುವೆ. ಆಗಲೇ ಶಾಂತ ಮೂರ್ತಿಯಾಗುವೆ. ಆಗ ನೀನು ಬಂಧನದಿಂದ ಮುಕ್ತನಾಗುವೆ ಎಂಬುದನ್ನು ತಿಳಿ.
ಭಗವದ್ಗೀತೆಯ ಸಾಂಖ್ಯ ಯೋಗದ ೭೨ ನೇ ಶ್ಲೋಕ ಹೀಗಿದೆ…
“ವಿಹಾಯ ಕಾಮಾನ್ ಯಃ ಸರ್ವಾನ್ ಪುಮಾಂಶ್ಚರತಿ ನಿಸ್ಪೃಹಃ |
ನಿರ್ಮಮೋ ನಿರಹಂಕಾರೋ ಸಃ ಶಾಂತಿಂ ಅಧಿಗಚ್ಛತಿ” ||
ಎಲ್ಲ ಐಹಿಕ ವಸ್ತು ವಿಷಯಗಳ ಬಯಕೆಯನ್ನು ಬದಿಗಿರಿಸಿ ನಾನು ನನ್ನದು ಎಂಬ ಭಾವನೆಗಳನ್ನು ತೊರೆದವನು ಶಾಂತಿಯನ್ನು ಪಡೆಯುತ್ತಾನೆ. ಇದನ್ನೇ ಈ ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ.
ಕೃಷ್ಣಸರ್ಪದ ವಿಷಕೆ ಸಮವೈ
ನಾನು ಕರ್ತಾ ಎಂಬ ಭಾವವು
ನಾಶಗೊಳಿಪುದು ನಿನ್ನ ನೀನಿದನರಿತು ನಡೆಯುವುದು|
ಇದನುಳಿದು ನಾನಲ್ಲವೆಂದರೆ
ಅಮೃತಪಾನದ ಸುಖವು ನಿನಗಿದೆ…. ಎನ್ನುತ್ತಾರೆ.
‘ನಾನಲ್ಲ’ ಎನ್ನುವ ಸತ್ಯವನ್ನು ಅರಗಿಸಿಕೊಂಡರೆ ನಿನಗೆ ಅಮೃತವನ್ನೇ ಕುಡಿದ ಅನುಭವ ಉಂಟಾಗುವುದು. ಆದ್ದರಿಂದ ನಾನು ಎಂಬ ಮಾಯೆಯನ್ನು ದೂರ ಹೊಡೆದೋಡಿಸಿ ಸುಖವಾಗಿ ಬಾಳು. ಬಹುತೇಕ ಎಲ್ಲ ದಾರ್ಶನಿಕರೂ ಆಧ್ಯಾತ್ಮ ಚಿಂತಕರೂ ಹೇಳುವ ಮಾತಿದು.
ಲೋಕದಲ್ಲಿ ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ. ಇಂತಹ ಜ್ಞಾನವನ್ನು ಸಂಪಾದಿಸಿ ದುರಾಲೋಚನೆಗಳನ್ನು ದುರ್ವರ್ತನೆಗಳನ್ನು ದೂರ ಮಾಡಿದರೆ ಸುಖಿಯಾಗಿರುವನು
“ಯಥೈದಾಂಸಿ ಸಮಿದ್ಧೋಗ್ನಿಃ ಭಸ್ಮಾತ್ ಕುರುತೇರ್ಜುನ
ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ” ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಇದನ್ನೇ ಅಷ್ಟಾವಕ್ರ ಮುನಿ…
ಏಕೋ ವಿಶುದ್ಧ ಬೋಧೋಹಮಿತಿ ನಿಶ್ಚಯವಹ್ನಿನಾ
ಪ್ರಜ್ವಾಲ್ಯಾಜ್ಞಾನಗಹನಂ ವೀತಶೋಕ ಸುಖೀ ಭವ” ಎನ್ನುತ್ತಾರೆ.
ಇದನ್ನು ಈ ಕೃತಿಯಲ್ಲಿ ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ..
ನಾನು ಏಕ ವಿಶುದ್ಧ ಬೋಧಾ
ಎಂಬ ಜ್ಞಾನಾಗ್ನಿಯಲಿ ಹೋಮಿಸಿ
ಕವಿದ ಅಜ್ಞಾನಗಳನದರೊಳು ಆಹುತಿಯ ನೀಡು |
ಇಂತು ನೀ ಪರಿಶುದ್ಧನಾಗುತ
ಶೋಕ ಭಸ್ಮೀಕರಿಸಿ ಬುವಿಯೊಳು
ನಾಕ ಕಾಣಲ್ ಸೌಖ್ಯವಪ್ಪುದು ಹರಿಸು ಚಿತ್ತವನು ||
ನಾನೇ ಏಕ, ಶುದ್ಧ ಚೈತನ್ಯ ಎಂಬ ಜ್ಞಾನದ ಅಗ್ನಿಯಲ್ಲಿ ಹೋಮವನ್ನು ಮಾಡು. ಅದರಲ್ಲಿ ನಿನ್ನ ಅಜ್ಞಾನಗಳನ್ನು ಆಹುತಿಯಾಗಿ ನೀಡು. ಅಲ್ಲಿ ಅವೆಲ್ಲವೂ ಭಸ್ಮವಾಗಿ ಹೋಗಲಿ. ಆ ಮೂಲಕ ಲೋಕದಲ್ಲಿ ಶೋಕ ರಹಿತವಾಗಿ ಸ್ವರ್ಗದ ಅನುಭವ ನಿನಗೆ ಉಂಟಾಗುವುದು. ಈ ದಿಕ್ಕಿನಲ್ಲಿ ನಿನ್ನ ಚಿತ್ತವನ್ನು ಹರಿಸಿ ಸುಖವಾಗಿ ಬಾಳು. ಇದೇ ಅರ್ಥವನ್ನು ಕೊಡುವ, ಇದೇ ಭಾವದ ಮುಂದುವರಿಕೆ ಈ ಸಾಲಿನಲ್ಲಿದೆ.

“ಬೊಧೋಹಂ ಜ್ಞಾನಖಡ್ಗೇನ ತಂ ನಿಕೃತ್ಯ ಸುಖೀ ಭವ”
“ಜ್ಞಾನದಲಗಿನ ಹರಿತ ಖಡ್ಗವ ಬೀಸಿ ಬಂಧನದಿಂದ ಬಿಡಿಸಿಕೋ”
ಹಾಗಾದರೆ ನಾವು ಎಲ್ಲ ಕರ್ಮಗಳನ್ನು ಬಿಟ್ಟುಬಿಡಬೇಕೆ? ಖಂಡಿತಾ ಇಲ್ಲ. ಅಷ್ಟಾವಕ್ರ ಗೀತೆಯಾಗಲೀ ಭಗವದ್ಗೀತೆ ಆಗಲೀ ಇದನ್ನು ಹೇಳುವುದಿಲ್ಲ.
“ಯೋಗಸ್ಥ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ” ಎಂದು ಗೀತೆ ಹೇಳಿದರೆ ಅಷ್ಟಾವಕ್ರ ಮುನಿ ಹೀಗೆ ಹೇಳುತ್ತಾರೆ.
“ಯದಾ ಯತ್ಕರ್ತುಮಾಯಾತಿ ತದಾ ತತ್ಕುರುತೇ ಋಜುಃ
ಶುಭಂವಾಪ್ಯಶುಭಂ ವಾಪಿತಸ್ಯ ಚೇಷ್ಟಾ ಹೀ ಬಾಲವತ್”
ವಿಷಯಾಸಕ್ತಿಯನ್ನು ತ್ಯಜಿಸಿ ನಾನು ಎಂಬ ಭಾವ ತ್ಯಜಿಸಿ ಸ್ಥಿತಪ್ರಜ್ಞನಾಗಿ ನಿಯಮಿತವಾದ ಕರ್ಮಗಳನ್ನು ಮಾಡಿದಾಗ ಅಶಾಂತಿ ಕ್ಷೋಭೆಗೆ ಅವಕಾಶವಿರದು. ಇಲ್ಲಿ ಮನಸನ್ನು ಕಾಡುವ ದ್ವಂದ್ವಗಳಿಂದ ಮುಕ್ತನಾಗಿ ಶಾಂತಿಯನ್ನು ಪಡೆ ಎಂಬ ಅರ್ಥವನ್ನು ಕೊಡುವ ” ನಿರ್ದ್ವಂದ್ವೋ ನಿರಹಂಕಾರೋ ಸ ಶಾಂತಿಂ ಅಧಿಗಚ್ಛತಿ” ಎಂಬ ಗೀತೆಯ ಸಾಲನ್ನು ನೆನೆಯಬಹುದು.
ಕೊನೆಯದಾಗಿ ಅಷ್ಟಾವಕ್ರ ಮುನಿ ತನ್ನ ಅಭಿಪ್ರಾಯವನ್ನು ಒಪ್ಪಲೇಬೇಕೆಂದು ಕಡ್ಡಾಯ ಮಾಡುವುದಿಲ್ಲ ಎನ್ನಲು ಈ ಶ್ಲೋಕವನ್ನು ನೋಡಿ.
“ಮೋಕ್ಷೋ ವಿಷಯವೈರಸ್ಯಂ ಬಂಧೋ ವೈಷಯಿಕೋ ರಸಃ
ಏತಾವದೇವ ವಿಜ್ಞಾನಂ ಯಥಾ ಇಚ್ಛಸಿ ತಥಾ ಕುರು”
ವಿಷಯವಸ್ತುಗಳ ಅಂದರೆ ಇಂದ್ರಿಯಸುಖಗಳ ದ್ವೇಷವೇ ಮೋಕ್ಷ. ಅವುಗಳ ಮೇಲಿನ ಪ್ರೀತಿಯೇ ಬಂಧನ. ಇದೇ ಜ್ಞಾನ. ಇದನ್ನು ತಿಳಿದು ನಿನಗೆ ಇಚ್ಛೆ ಬಂದಂತೆ ಮಾಡು..
ಅಭಿಪ್ರಾಯ ಬೇಧಕ್ಕೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಅವಕಾಶವಿತ್ತು ಎನ್ನಲು ಇದೇ ಸಾಕ್ಷಿ.
ಇಂತಹ ಆಧ್ಯಾತ್ಮಿಕ ಚಿಂತನೆಯ, ಆತ್ಮಜ್ಞಾನದ ಕುರಿತಾಗಿ ನಡೆದ ತಾತ್ವಿಕ ಸಂಭಾಷಣೆಯ ಕೃತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿರುವ ಶ್ರೀ ಹರಿನರಸಿಂಹ ಉಪಾಧ್ಯಾಯರಿಗೆ ಶುಭವಾಗಲಿ.
- ಪದ್ಮನಾಭ. ಡಿ – ಕವಿಗಳು, ಲೇಖಕರು, ಬೆಂಗಳೂರು.
