‘ಹಳ್ಳಿ ನೆನಪಾಗ್ತದ ಹೊಳ್ಳಿ’ ಕವನ

ಸ್ವಚ್ಛಂದದೇ ಹಾರುವ ಚಿಟ್ಟೆ..‌. ಕಂಡಾಗ ಹಳ್ಳಿ ನೆನಪಾಗ್ತದ ಹೊಳ್ಳಿ… ಕವಿ ಮಹಾಂತೇಶ ಆರ್.ಕುಂಬಾರ (ಎಮ್ಮಾರ್ಕೆ) ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…

ಬೇಧ ಮಾಡದೇ ಬಾ ಎಂದು
ಕರೆವ ಅಗಸಿಯ ಬಾಗಿಲು,
ಸುತ್ತಮುತ್ತ ಹಚ್ಚ ಹಸಿರ ಪೈರು
ಮೇಲೆ ಬೆಳ್ಳಿಯ ಮುಗಿಲು…ಕಂಡಾಗ
ಹಳ್ಳಿ ನೆನಪಾಗ್ತದ ಹೊಳ್ಳಿ

ತಂಟೆ, ತಕರಾರುಗಳಿಗೆಲ್ಲ ತಕ್ಕ
ಪರಿಹಾರಕೆ ಪಂಚಾಯ್ತಿ ಕಟ್ಟೆ,
ಪಂಜರವ ಕಾಣದ ಪಕ್ಷಿ ಪ್ರಾಣಿ
ಸ್ವಚ್ಛಂದದೇ ಹಾರುವ ಚಿಟ್ಟೆ..‌ಕಂಡಾಗ
ಹಳ್ಳಿ ನೆನಪಾಗ್ತದ ಹೊಳ್ಳಿ

ಹಾಳು ಹರಟೆ, ಮಾತುಕತೆಗೆ
ಮೀಸಲಿಟ್ಟಿರುವಂತ ಚಾವಡಿ,
ಕೊಂಚ ಯಾಮಾರಿದರೆ ಸರಿ
ಸೋಮಾರಿಗಳಿಂದ ಲೇವಡಿ…ಕಂಡಾಗ
ಹಳ್ಳಿ ನೆನಪಾಗ್ತದ ಹೊಳ್ಳಿ

ಹಸುವಿನತ್ತ ಛಂಗನೆ ನೆಗೆನೆಗೆದು
ಹಾಲು ಹೀರುವ ಪುಟ್ಟ ಕರು,
ಮುದದಿ ರೈತ ಹದಗೊಳಿಸಿ ನೆಲವ
ಉತ್ತಲು ಬೀಜ ಬಿತ್ತಲು ಶುರು…ಆದಾಗ
ಹಳ್ಳಿ ನೆನಪಾಗ್ತದ ಹೊಳ್ಳಿ

ನೆಲ, ಜಲ, ಗಾಳಿಗಳೆಲ್ಲವೂ ಇಲ್ಲಿ
ಉಳಿದುಕೊಂಡಿವೆ ಪರಿಶುದ್ಧ,
ಜಗದ ಜೀವಿಗಳಿಗೆಲ್ಲಕೂ ಅನ್ನವ
ನೀಡಲು ದುಡಿಮೆಯು ಶತಸಿದ್ಧ…ಎಂದಾಗ
ಹಳ್ಳಿ ನೆನಪಾಗ್ತದ ಹೊಳ್ಳಿ

ಜಾತ್ರೆ – ಉತ್ಸವ, ಹಬ್ಬ-ಹರಿದಿನಕೆ
ಇಲ್ಲವೇ ಇಲ್ಲ್ಯಾವುದೇ ಕೊರತೆ,
ಸಂತಸದ ಸಂತೆಯಲಿ ಚಿಂತೆಯ
ಮರೆಯು(ಸು)ವ ಹಳ್ಳಿ ಜನತೆ…ಇದ್ದಾಗ
ಹಳ್ಳಿ ನೆನಪಾಗ್ತದ ಹೊಳ್ಳಿ

ಹಳ್ಳಿಯೆಂದರೆ ಹಾಗೆಯೇ ಭುವಿಯ
ಮೇಲಿನ ಸ್ವರ್ಗ ಅದಕಿಲ್ಲ ಹೋಲಿಕೆ,
ಕೊಂಚ ಕೃತ್ರಿಮದ ಲೇಪವಿರದ ಹಳ್ಳಿ
ಹೊ(ಬೆ)ಸೆದಷ್ಟು ಹೊಸತು ಮಾಲಿಕೆ…ನಂಗೀಗ
ಹಳ್ಳಿ ನೆನಪಾಗ್ತದ ಹೊಳ್ಳಿ.


  • ಮಹಾಂತೇಶ ಆರ್.ಕುಂಬಾರ (ಎಮ್ಮಾರ್ಕೆ) – ರನ್ನ ಬೆಳಗಲಿ

Leave a Reply

Home
Search
Menu
Recent
About
×