ಬದುಕಿಗೊಂದು ಸೆಲೆ (ಭಾಗ- ೭೬)

ರಾಧಾನಾಥರು ತಮ್ಮ ಭೂಮಾಪನ ಕೌಶಲದಿಂದ ಹಿಮಾಲಯನ್ ಪೀಕ್ 15 ಎಂದು ಕರೆಯಲ್ಪಡುತ್ತಿದ್ದ ಪರ್ವತವೇ ಜಗತ್ತಿನ ಅತಿ ಎತ್ತರವಾದ ಪರ್ವತ ಎಂದು ತಮ್ಮ ಮೌಲಿಕ ಅಧ್ಯಯನ ಹಾಗೂ ಮಾಪನದ ಮೂಲಕ ಕಂಡುಕೊಂಡರು. ಅಂದಿನ ಸರ್ವೆಯರ್ ಜನರಲ್ ಅಂಡ್ರ್ಯೂ ವಾಹ್ ಅವರಿಗೆ 1852 ರಲ್ಲಿ ಹಿಮಾಲಯನ್ ಪೀಕ್ 15 ಅತ್ಯಂತ ಎತ್ತರವಾದ ಶಿಖರ ಎಂಬ ಅತ್ಯಂತ ಖಚಿತವಾದ ಮಾಹಿತಿ ನೀಡಿದರು. ಅಂಕಣಕಾರ್ತಿ ವೀಣಾ ಹೇಮಂತ್ ಗೌಡ ಅವರ ‘ಬದುಕಿಗೊಂದು ಸೆಲೆ’ ಅಂಕಣದಲ್ಲಿ ‘ಗೌರಿಶಂಕರ ಪರ್ವತ ಹಾಗೂ ರಾಧಾನಾಥ ಸಿಕದರ್ ಎಂಬ ಅಪ್ರತಿಮ ಗಣಿತಜ್ಞ’ ತಪ್ಪದೆ ಮುಂದೆ ಓದಿ…

ಭಾರತ ದೇಶದ ಉತ್ತರ ಭಾಗದಲ್ಲಿ ಅಚಲವಾಗಿ ನಿಂತಿರುವ ಮೌಂಟ್ ಎವರೆಸ್ಟ್ ಎಂಬ ಹೆಸರಿನ ಗೌರಿಶಂಕರ ಪರ್ವತದ ಶಿಖರಾಗ್ರವನ್ನು 29 ಮೇ 1953 ರಂದು ತೇನ್ ಸಿಂಗ್ ನೋರ್ಗೆ ಹಾಗೂ ಎಡ್ಮಂಡ್ ಹಿಲರಿ ಎಂಬ ಪರ್ವತಾರೋಹಿಗಳು ಮೊತ್ತ ಮೊದಲ ಬಾರಿಗೆ ಚಾರಣದ ಮೂಲಕ ತಲುಪಿದರು. ಈ ಐತಿಹಾಸಿಕ ಚಾರಣದ ವರ್ಷಕ್ಕೆ ಶತಮಾನಗಳ ಮೊದಲು ಓರ್ವ ಬೆಂಗಾಲಿ ಗಣಿತಜ್ಞ ಜಗತ್ತಿನಲ್ಲಿಯೇ ಅತಿ ಎತ್ತರವಾದ ಪರ್ವತ ಮೌಂಟ್ ಎವರೆಸ್ಟ್ ಎಂದು ಸಾಬೀತುಪಡಿಸಿದ್ದ. ಆ ಗಣಿತಜ್ಞನೇ ರಾಧಾನಾಥ ಸಿಕದರ್.

ಫೋಟೋ ಕೃಪೆ : ಅಂತರ್ಜಾಲ

ಕಲ್ಕತ್ತಾ ಬಳಿಯ ಜೊರಾಸಾಕೋ ಎಂಬ ಊರಿನಲ್ಲಿ 1813ರಲ್ಲಿ ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ ರಾಧಾನಾಥ್ ಅವರು ಅಸಾಧಾರಣ ಜಾಣ್ಮೆಯನ್ನು ಹೊಂದಿದ ಗಣಿತಜ್ಞರಾಗಿದ್ದರು. ಹಿಂದೂ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸಮಯದಲ್ಲಿಯೇ ಅವರ ಅಸಾಧಾರಣ ಗಣಿತದ ಜ್ಞಾನದಿಂದ ಅವರ ಶಿಕ್ಷಕರು ಪ್ರಭಾವಿತರಾಗಿದ್ದರು.
1831 ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ಅವರು ಭಾರತ ದೇಶದ ಟ್ರಿಗನೋಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ ಎಂಬ ಬ್ರಿಟಿಷ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ವೈಜ್ಞಾನಿಕ ಯೋಜನೆಯೊಂದರಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದರು. ಅತ್ಯಂತ ಶೀಘ್ರದಲ್ಲಿಯೇ ತಮ್ಮ ಅಸಾಧಾರಣ ಅಂಕಗಣಿತದ ಲೆಕ್ಕಾಚಾರದಿಂದ ರಾಧಾನಾಥ ಅವರು ಎಲ್ಲರ ಗಮನವನ್ನು ಸೆಳೆದರು.. ಅದರಲ್ಲೂ ವಿಶೇಷವಾಗಿ ಸ್ಪಿರಿಕಲ್ ಟ್ರಿಗ್ನಾಮೆಟ್ರಿ ಅಂದರೆ ಗೋಲಮಿತಿಯಲ್ಲಿ ಅವರ ಲೆಕ್ಕಾಚಾರ ಅದ್ಭುತವಾಗಿತ್ತು. ಅವರ ಕಾರ್ಯ ಕೌಶಲವು ಅಂದಿನ ಭಾರತ ದೇಶದ ಸರ್ವೆಯರ್ ಜನರಲ್ ಆಫ್ ಇಂಡಿಯಾ ಎಂಬ ಹುದ್ದೆಯನ್ನು ನಿರ್ವಹಿಸುತ್ತಿದ್ದ ಆಂಗ್ಲ ಮೇಲಧಿಕಾರಿ ಜಾರ್ಜ್ ಎವರೆಸ್ಟ್ ರ ಮೇಲೆ ಗುರುತರವಾದ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದವು. ಎವರೆಸ್ಟ್ ರವರು ರಾಧಾನಾಥರನ್ನು ಆ ಕಾಲದ ಅತ್ಯಂತ ಪ್ರತಿಭಾವಂತ ಭೂಮಾಪಕ ಎಂದು ಗುರುತಿಸಿದ್ದರು.

ಅಲ್ಲಿಯವರೆಗೂ ಕಾಂಚನ ಗಂಗಾ ಎಂದು ನಮ್ಮ ಭಾರತೀಯರಿಂದ ಗುರುತಿಸಲ್ಪಟ್ಟು, ಆರಾಧಿಸಲ್ಪಟ್ಟ ಪರ್ವತವೇ ಜಗತ್ತಿನ ಅತಿ ದೊಡ್ಡ ಪರ್ವತ ಎಂದು ನಂಬಲಾಗಿತ್ತು. ಆದರೆ ತಮ್ಮ ಭೂಮಾಪನ ಕೌಶಲದಿಂದ ರಾಧಾನಾಥರು ಹಿಮಾಲಯನ್ ಪೀಕ್ 15 ಎಂದು ಕರೆಯಲ್ಪಡುತ್ತಿದ್ದ ಪರ್ವತವೇ ಜಗತ್ತಿನ ಅತಿ ಎತ್ತರವಾದ ಪರ್ವತ ಎಂದು ತಮ್ಮ ಹಲವಾರು ವರ್ಷಗಳ ಮೌಲಿಕ ಅಧ್ಯಯನ ಹಾಗೂ ಮಾಪನದ ಮೂಲಕ ಕಂಡುಕೊಂಡರು. ಹಲವಾರು ವರ್ಷಗಳ ಸತತ ಲೆಕ್ಕಾಚಾರಗಳ ನಂತರ ರಾಧಾನಾಥರು ಅಂದಿನ ಸರ್ವೆಯರ್ ಜನರಲ್ ಅಂಡ್ರ್ಯೂ ವಾಹ್ ಅವರಿಗೆ 1852 ರಲ್ಲಿ ಹಿಮಾಲಯನ್ ಪೀಕ್ 15 ಅತ್ಯಂತ ಎತ್ತರವಾದ ಶಿಖರ ಎಂಬ ಅತ್ಯಂತ ಖಚಿತವಾದ ಮಾಹಿತಿ ನೀಡಿದರು.

ಫೋಟೋ ಕೃಪೆ : ಅಂತರ್ಜಾಲ

ಸಾರ್ವಜನಿಕವಾಗಿ ಈ ವಿಷಯದ ಕುರಿತು ಹೇಳಿಕೆ ನೀಡುವ ಮೊದಲು ಈ ಕುರಿತು ಹೆಚ್ಚಿನ ವಿಚಾರಣೆಗಳನ್ನು ಮಾಡಬೇಕು ಎಂದು ಅವರು ಬ್ರಿಟಿಷ್ ಸರ್ಕಾರವನ್ನು ವಿನಂತಿಸಿಕೊಂಡರು. ಪರಿಣಾಮವಾಗಿ ಎಲ್ಲ ಲೆಕ್ಕಾಚಾರಗಳನ್ನು ಪರಿಗಣಿಸಿ ವಿಚಾರಣೆಗೊಳಪಡಿಸಿದ ನಂತರ ಹಿಮಾಲಯನ್ ಪೀಕ್ 15 ಶಿಖರವು ಜಗತ್ತಿನ ಅತಿ ಎತ್ತರದ ಪರ್ವತ ಶಿಖರ ಎಂದು ಘೋಷಿಸಲಾಯಿತು. ಇದರಿಂದ ರಾಧಾನಾಥ್ ಅವರಿಗೆ ಸ್ವಲ್ಪಮಟ್ಟಿನ ಖ್ಯಾತಿ ದೊರೆಯಿತಾದರೂ ಹೆಚ್ಚಿನ ಲಾಭವನ್ನು ಬ್ರಿಟಿಷರು ಪಡೆದುಕೊಂಡರು. ಈ ಹಿಂದಿನಿಂದಲೂ ಭಾರತ ದೇಶದಲ್ಲಿ ಗುರುತಿಸುತ್ತಿದ್ದ ಚೋಮೋಲುಂಗ್ಲಾ ಅಥವಾ ಸಗರಮಾತ ಎಂಬ ಹೆಸರುಗಳ ಬದಲಾಗಿ ಆಂಡ್ರ್ಯೂ ವಾ ಅವರು ತಮ್ಮ ಹಿಂದಿನ ಮೇಲಧಿಕಾರಿ ಜಾರ್ಜ್ ಎವರೆಸ್ಟ್ ಅವರ ಹೆಸರನ್ನು ಈ ಪರ್ವತಕ್ಕೆ ನಾಮಕರಣ ಮಾಡಿದರು.

ಬ್ರಿಟಿಷ್ ಸರ್ಕಾರವು ರಾಧಾನಾಥ್ ಅವರ ಕೆಲಸವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು. ಜಾರ್ಜ್ ಎವರೆಸ್ಟ್ ಅವರ ನೇತೃತ್ವದಲ್ಲಿ ಭೂಮಾಪನ ನಡೆದು ಅವರ ಹೆಸರನ್ನು ಇಡಲಾಯಿತು ಎಂದು ಇತಿಹಾಸಕಾರರು ಪ್ರಜ್ಞಾಪೂರ್ವಕವಾಗಿ ದಾಖಲಿಸಿದ ಕಾರಣ ರಾಧಾನಾಥರ ಹೆಸರು ಹಾಗೂ ಅವರ ದಾಖಲೀಕರಣ ನಿಧಾನವಾಗಿ ಜನರ ಮನದಿಂದ ಮರೆಯಾಗುತ್ತಾ
ಹೋಯಿತು. ಆದರೆ ಅವರ ಸಾಧನೆ ಮಾತ್ರ ಅಸಾಧಾರಣ.

ಸ್ನೇಹಿತರೆ, ಇಂದಿಗೂ ಕೂಡ ಮೌಂಟ್ ಎವರೆಸ್ಟ್ ಎಂದೇ ಕರೆಯಲ್ಪಡುವ, ಜಾಗತಿಕವಾಗಿ ಅತ್ಯಂತ ಎತ್ತರದ ಈ ಪರ್ವತವನ್ನು ಚಾರಣ ಮಾಡುವ ಮೂಲಕ ತಮ್ಮ ಜೀವನದ ಮಹಾದಾಕಾಂಕ್ಷೆಯನ್ನು ಪೂರೈಸಿಕೊಳ್ಳುವ ಆಶಯವನ್ನು ತಮ್ಮ ಬದುಕಿನ ಉಸಿರಾಗಿಸಿಕೊಂಡಿರುವ ಸಾವಿರ ಸಾವಿರ ಸಂಖ್ಯೆಗಳಲ್ಲಿ ಪ್ರಯತ್ನಿಸುವ ಆ ಎಲ್ಲ ಚಾರಣಿಗರಿಗೆ ಗೊತ್ತಿರಲಿ ತಮ್ಮ ಅಗಾಧವಾದ ಗೋಲಮಿತಿ ಲೆಕ್ಕಾಚಾರದ ಅರಿವಿನಿಂದ ಹಲವಾರು ವರ್ಷಗಳ ಪರಿಶ್ರಮದಿಂದ ರಾಧಾನಾಥ್ ಸಿಕದರ್ ಅವರು ಗೌರೀಶಂಕರ ಶಿಖರದ ಎತ್ತರವನ್ನು ಅಳೆದಿದ್ದಾರೆ ಎಂಬುದನ್ನು ಏನಂತೀರಾ ?


  • ವೀಣಾ ಹೇಮಂತ್ ಗೌಡ ಪಾಟೀಲ್ – ಮುಂಡರಗಿ, ಗದಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading