ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಮಹಿಳೆಯರು ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ರೇಷ್ಮಾ ಗುಳೇದಗುಡ್ಡಕರ್ ಅವರು ತಮ್ಮ ಲೇಖನಿಯಲ್ಲಿ ಹೆಣ್ಣಿನ ಧ್ವನಿಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
- ಧ್ವನಿ : ಅಶ್ವಿನಿ ಸುನಿಲ್, ಗುಂಟೂರು
ಎರಡು ದಶಕಗಳ ಹಿಂದೆ ಹೋಲಿಸಿದರೆ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನದಲ್ಲಿ ಬಹಳಷ್ಟು ಬದಲಾಗಿದೆ.ಇಂದು ಹೆಣ್ಣು ಕೂಡಾ ಗಂಡಿಗೆ ಸರಿಸಮನಾಗಿ ಶಿಕ್ಷಣ ಪಡೆಯುತ್ತಿದ್ದಾಳೆ. ಪುರುಷನಿಗೆ ಸಮಾನವಾಗಿ ದುಡಿಯುತ್ತಿದ್ದಾಳೆ. ಇಂಜಿನಿಯರ್, ಡಾಕ್ಟರ್, ಲಾಯರ್ ಟೀಚರ್ ಎನ್ನುವ ಉದ್ಯೋಗಗಳಷ್ಟೇ ಅಲ್ಲ, ದೈಹಿಕ ಶ್ರಮ ಬೇಡುವ ಕೆಲಸಗಳನ್ನೂ ಯಶಸ್ವಿಯಾಗಿ ಮಾಡುತ್ತಿದ್ದಾರೆ. ಬಹಳಷ್ಟು ಸ್ತ್ರೀಯರು ಸ್ವಂತ ಉದ್ಯಮದಲ್ಲೂ ಯಶಸ್ಸು ಕಂಡಿದ್ದಾರೆ. ತಮ್ಮಂತೇ ಅನೇಕ ಮಹಿಳೆಯರಿಗೆ ಉದ್ಯೋಗವನ್ನು ನೀಡುತ್ತಿದ್ದಾರೆ.
ಹೆಣ್ಣು ಮಗು ಎಂದು ಕೊರಗುವ ಕಾಲವೂ ಇದಲ್ಲ. ಗಂಡು ಮಗನಿಗೆ ಸರಿಸಮಾನಳಾಗಿ ಹೆಣ್ಣು ಜವಾಬ್ದಾರಿ ನಿಭಾಯಿಸಬಲ್ಲಳು. ಸಂಸಾರದ ಜವಾಬ್ದಾರಿ , ಮಕ್ಕಳ ಶಿಕ್ಷಣ, ಅಡುಗೆ ಮನೆಯ ಕೆಲಸ , ಉದ್ಯೋಗ ಎಲ್ಲವನ್ನೂ ನಿಭಾಯಿಸುವುದೆಂದರೆ ಸುಲಭವೇ? ಅಂತಹ ಚಾಕಚಕ್ಯತೆ ಬಹುಶಃ ಮಹಿಳೆಯರಿಗೆ ಮಾತ್ರಾ ಸಾಧ್ಯ ಎನಿಸುತ್ತದೆ.
ಹಾಗೆಂದು ಮಹಿಳೆಯರಿಗೆ ಸಂಪೂರ್ಣ ಸಮಾನತೆ ದೊರಕಿದೆ ಎಂದಲ್ಲ. ಉದ್ಯೋಗ ಕ್ಷೇತ್ರದಲ್ಲಿ ಹೆಣ್ಣು ಮೇಲೇರದಂತೆ ಕಾಲೆಳೆಯುವವರು ಇದ್ದಾರೆ. ಎಷ್ಟೋ ಸಲ ಮಹಿಳೆ ತಮಗಿಂತ ಉನ್ನತ ಸ್ಥಾನಕ್ಕೆ ಏರುವುದನ್ನು ಪುರುಷ ಸಹಿಸುವುದಿಲ್ಲ. ಮನೆ, ಸಂಸಾರದ ಜವಾಬ್ದಾರಿಯನ್ನು ಹೆಣ್ಣೇ ನಿರ್ವಹಿಸಬೇಕೆಂಬ ಅಲಿಖಿತ ಸಂಪ್ರದಾಯ ಇನ್ನೂ ಮುಂದುವರಿದಿದೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗುವುದೇನೂ ಹೊಸತಲ್ಲ. ಮತ್ತೊಂದು ಹೆಣ್ಣಿನ ಏಳಿಗೆಯನ್ನು ಸಹಿಸದೆ ಕೆಳಕ್ಕೆ ತಳ್ಳಲು ಯತ್ನಸುವ ಮಹಿಳೆಯರೂ ನಮ್ಮ ನಡುವೆ ಇದ್ದಾರೆ.
ಇದನ್ನೆಲ್ಲಾ ಮೆಟ್ಟಿನಿಂತು ಯಶಸ್ಸು ಗಳಿಸುವುದು ಹೆಣ್ಣಿಗೆ ಸುಲಭದ ಮಾತಲ್ಲ.ಎಷ್ಟೇ ಕಠಿಣ ಕೆಲಸವನ್ನಾದರೂ ಅವಳು ಜವಾಬ್ದಾರಿಯುತವಾಗಿ ನಡೆಸಬಲ್ಲಳು. ಆದರೆ ಅವಳನ್ನು ಕಂಗೆಡಿಸುವುದು ದೈಹಿಕ ಶ್ರಮಕ್ಕಿಂತ ಹೆಚ್ಚು ಮಾನಸಿಕ ಒತ್ತಡ ಆಕೆ ಸಮಾಜದಿಂದ ಹೆಚ್ಚೇನೂ ನಿರೀಕ್ಷಿಸುವುದಿಲ್ಲ. ಆಕೆಯ ಮೇಲೆ ಭರವಸೆ, ಒಂದಷ್ಟು ಪ್ರೀತಿ, ಕಾಳಜಿ, ಹಾಗೂ ಮಾಡುವ ಕೆಲಸದಲ್ಲಿ ಬೆಂಬಲ ದೊರಕಿದರೆ ಅವಳು ಏನನ್ನೂ ಬೇಕಾದರೂ ಸಾಧಿಸಬಲ್ಲಳು ಎಂಬುದನ್ನು ಕುಟುಂಬ ಮತ್ತು ಸಮಾಜ ಅರ್ಥಮಾಡಿಕೊಳ್ಳಬೇಕು.
- ಧ್ವನಿ : ಶರಣ್ಯಬೆಳುವಾಯಿ , ಯುವಕವಿಯತ್ರಿ, ಶಿಕ್ಷಕಿ, ನಿರೂಪಕಿ, ಮೂಡಬಿದ್ರಿ, ದ.ಕ.ಜಿಲ್ಲೆ
“ಎದೆಗೆ ಬಿದ್ದ ಬೆಂಕಿಯ ಬೆಳಕಿನಲ್ಲೇ ಬದುಕಿನರ್ಥವ ಹುಡುಕಬೇಕು” ಎಂಬ ಮನಸ್ಥಿತಿಯಲ್ಲೇ ತನ್ನ ಬದುಕಿನ ದಾರಿಯನ್ನು ಕಲ್ಲು ಮುಳ್ಳುಗಳ ಹಾದಿಯಲ್ಲಿ ಸವೆಸುವವಳು ಹೆಣ್ಣು.
ಭೂಮಿಗೆ ಪಾದಯೂರಿದ ಮರುಕ್ಷಣದಿಂದಲೇ ಅವಕೃಪೆ, ಅನ್ಯಾಯ, ಅತ್ಯಾಚಾರವನ್ನು ಎದುರಿಸಬೇಕಾದ ದುಸ್ಥಿತಿ ಮಹಿಳೆಯರದು. ಈ ಬದುಕಿನ ನಾಟಕದಲ್ಲಿ ಬಾಲ್ಯದಿಂದ ಮುಪ್ಪಿನವರೆಗೂ ಮಗಳಾಗಿ,ತಾಯಿಯಾಗಿ, ಹೆಂಡತಿಯಾಗಿ, ಅಕ್ಕಳಾಗಿ, ತಂಗಿಯಾಗಿ, ಅಜ್ಜಿಯಾಗಿ ನಾನಾ ರೀತಿಯ ಪಾತ್ರವನ್ನ ಸಮರ್ಪಕವಾಗಿ ನಿರ್ವಹಿಸುತ್ತ ತನ್ನ ಬದುಕಿನ ಪಥವನ್ನ ಸಾಗಿಸುತ್ತಿದ್ದಾಳೆ.
ಸೂರ್ಯೋದಯದ ಮಂಜುಗತ್ತಲಿನಿಂದ ಹಿಡಿದು,ಸೂರ್ಯಾಸ್ತದ ಮಬ್ಬುಕತ್ತಲೆಯವರೆಗೂ ಅಡುಗೆ ಮನೆಯಲ್ಲಿ ಮುಗಿಯದ ಕೆಲಸ ಒಂದೆಡೆಯಾದ್ರೆ,ಅದರ ನಡುವೆ ಆಫೀಸು ,ಮನೆ, ಮಕ್ಕಳ ,ಜವಬ್ದಾರಿ ಉಸಿರುಗಟ್ಟಿಸುವಷ್ಟಿರುತ್ತದೆ. ಆದರೂ ತಾಳ್ಮೆಯಿಂದ ನಿಭಾಯಿಸುವ ಆಕೆಗೆ ಕೊನೆಗೆ ಒಂದಿಷ್ಟು ತಿಂಡಿ ತಿಂದೆಯಾ ಎಂದು ಪ್ರೀತಿಯಿಂದ ಕೇಳುವ ಸೌಜನ್ಯ ಹಲವು ಗಂಡಂದಿರಿಗೆ ಇರದು.
ಮಹಿಳಾ ದಿನಾಚರಣೆಯ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋದ ವ್ಯಕ್ತಿ ಮಹಿಳೆಯರ ಬಗ್ಗೆ ಅವರ ಪ್ರೀತಿ, ತ್ಯಾಗ, ಸಹನೆಯ ಬಗ್ಗೆ ಕೊಂಡಾಡುತ್ತ ಮಹಿಳೆಗೆ ಗೌರವ ಕೊಡಿ ,ಪ್ರೀತಿ ಕೊಡಿ ನಿಮಗೆ ರುಚಿರುಚಿಯಾಗಿ ಅಡುಗೆ ಮಾಡಿ ಬಡಿಸುವ ಆಕೆಗೂ ಒಂದೊಮ್ಮೆ ಕೈತುತ್ತು ಕೊಡಿ ಅಂತೆಲ್ಲಾ ಉದ್ದುದ್ದ ಭಾಷಣ ಬಿಗಿದವನೊಬ್ಬ ತನ್ನ ಮನೆಗೆ ಬಂದೊಡನೇ ಅಡುಗೆಯಲ್ಲಿ ಉಪ್ಪಿಲ್ಲ ಖಾರ ಇಲ್ಲ ಎಂದು ತನ್ನ ಹೆಂಡತಿಗೆ ಹೊಡೆದು ಬಡಿದು ಮಾಡಿದನಂತೆ, ಇದೇ ಏನು ಹೆಣ್ಣಿನ ಬಗೆಗಿನ ಕಾಳಜಿ!? ಪ್ರೀತಿ. ಭಾಷಣಕ್ಕೆ ಹೆಣ್ಣು ” ವಿಷಯ ವಸ್ತು ” ಆಗಿದ್ದಾಳೆ ಹೊರತು ವಾಸ್ತವ ಶೋಷಣೆಯಿಂದ ಅವಳಿಗೆ ಇನ್ನೂ ಕೂಡಾ ಬಿಡುಗಡೆ ದೊರೆತಿಲ್ಲ.
ಬೆಳಗ್ಗೆದ್ದು ಪ್ಯಾಂಟ್ ಬೆಲ್ಟ್ ನಿಂದ ಹಿಡಿದು ತಿನ್ನೋ ತಿಂಡಿಯವರೆಗೂ ಕಾಲ ಬುಡಕ್ಕೆ ಕೊಂಡೊಯ್ದರೂ… ಸಿಟ್ಟು, ದರ್ಪದಲ್ಲಿ ಹೊಡೆದು, ಬಡಿದು ಮಾಡೊ ಗಂಡಸರಿಗೇನೂ ಕಮ್ಮಿ ಇಲ್ಲ…..!? ಸಿನಿಮಾದಲ್ಲಿ ಬರುವ ಪಾತ್ರಗಳಿಗೆ ಅತ್ತು ಕರೆಯುವ ಬದಲು ಪಕ್ಕದಲ್ಲಿದ್ದ ಹೆಂಡತಿ ,ತಂಗಿ ,ತಾಯಿ,ಮಗಳಿಗೆ ಒಂದೊಮ್ಮೆಯಾದರೂ ಮೊದಲು ಮಿಡಿಯಿರಿ.
ನನ್ನ ಆಪ್ತ ವಲಯದಲ್ಲೇ ಹಲವಾರು ನೋವಿನ ಸಂಗತಿಗಳಿವೆ. ತಾನು ದುಡಿಯದೇ ಹೆಂಡತಿ ದುಡಿಮೆಯಲ್ಲಿ ಮೂರು ಹೊತ್ತು ಉಂಡು ತೇಗುವ ಗಂಡ ಒಬ್ಬಳದಾದರೆ, ಮತ್ತೊಬ್ಬನದು ಕುಡಿದ ಮತ್ತಿನಲ್ಲಿ ಸಿಂಹಪೌರುಷ ತೋರಿಸುವ ನೀಚತನ.
ಮದುವೆಯ ಮೊದಲು ಪ್ರೇಯಸಿಯೇ ಜೀವ ಜೀವನ ಎಂದು ವಿಷ ಕುಡಿಯಲೆತ್ನಿಸಿ, ಕರುಣೆ ಗಿಟ್ಟಿಸಿಕೊಂಡು ಪೋಷಕರ ವಿರುದ್ಧವಾಗಿ ವಿವಾಹವಾಗಿ ಎರಡು ವರ್ಷದ ಸಂಸಾರದ ನಂತರ ಮತ್ತೊಬ್ಬಳಿಗೆ ಜೊಲ್ಲು ಸುರಿಸುತ್ತ ನಿಂತಿರುವ ಕೆಲವು ಗಂಡಸರ ಕೊಳಕು ಮನಸ್ಥಿತಿ ಅಸಹ್ಯ ಹುಟ್ಟಿಸುತ್ತಿದೆ. ಸಂಪ್ರದಾಯ, ಆಚಾರ ವಿಚಾರದ ಹೆಸರಿನಲ್ಲಿ ಗಂಡನ ಕಿರುಕುಳ ಸಹಿಸಿಕೊಂಡು ಅತ್ತ ತವರಲ್ಲಿ ಹೇಳಲಾಗದೇ ಇತ್ತ ಸಂಸಾರ ನಿಭಾಹಿಸಲಾಗದೇ ಆತ್ಮಹತ್ಯೆಗೈಯ್ಯುತ್ತಿರುವ ಸೋದರಿಯರ ನೆನೆದು ದುಃಖವಾಗುತ್ತಿದೆ.
ಸಹಿಸುವಷ್ಟು ಸಹಿಸೋಣ! ಕ್ಷಮಿಸುವಷ್ಟು ಕ್ಷಮಿಸೋಣ. ಎಲ್ಲಾ ಗಂಡಸರು ಕೆಟ್ಟವರಲ್ಲ ನಿಜ, ಕೆಲವೊಂದು ಅನರ್ಘ್ಯ ರತ್ನಗಳು ಅಲ್ಲಲ್ಲಿ ಕಾಣ ಸಿಗುತ್ತವೆ…ಅದ್ರೆ ಇನ್ನೂ ಹಲವರಲ್ಲಿರುವ ಕಾಡು ಮೃಗತ್ವ, ಅವುಗಳ ಕೈಗೆ ಸಿಕ್ಕು ಜೀವಂತ ನರಳುವ ಹೆಣ್ಣು ಜೀವಗಳ ಕಂಡು ಒಬ್ಬಂಟಿಯಾಗಿ ಬದುಕುವುದೆ ಲೇಸು ಎನಿಸುತ್ತಿದೆ….!?
ಸಂವಿಧಾನ ನಮಗೆ ಬದುಕುವ ಹಕ್ಕು ಕಲ್ಪಿಸಿಕೊಟ್ಟಿದೆ. ಆದರೆ ಇರುವ ಸಣ್ಣ ಬದುಕಿನಲ್ಲಿ ನಮಗಿಷ್ಟ ಬಂದಂತೆ ಬದುಕುವ ಹಕ್ಕು ಎಷ್ಟು ಮಹಿಳೆಯರಿಗೆ ದಕ್ಕಿದೆ..?
ಜೊತೆಗೆ ಸ್ತ್ರೀ ಎಂಬ ಪದಕ್ಕೆ ತನ್ನದೇ ಆದ ಮೌಲ್ಯ ಉಳಿಸಿಕೊಂಡು ಬಾಳುವ ಹೆಣ್ಣಿಗೆ, ಗೌರವವಾದರೂ ನೀಡುತ್ತರಾ ಈ ಭಾಷಣ ಬಿಗಿಯುವ ಜನ ಮತ್ತು ಸಮಾಜ?
ಲಿಂಗಾತ್ಮಕ ತಾರತಮ್ಯ ತೊರೆದು ಶೋಷಣೆ ದೌರ್ಜನ್ಯಗಳಿಂದ ಮುಕ್ತವಾದ ಹೆಣ್ಣಿನ ಬದುಕೇ ನಿಜವಾದ ಸಮಾಜದ ಏಳಿಗೆ.
- ಬರಹ : ರೇಶ್ಮಾ ಗುಳೇದಗುಡ್ಡಾಕರ್