ಹೇಮಂತ್ ಪಾರೇರ್ ಅವರ ನಾಲ್ಕನೇ ಕೃತಿ “ಶಕುನದ ಹಕ್ಕಿ” ಬಿಡುಗಡೆಯಾಗುತ್ತಿದ್ದು, ಸತಃ ಕಾದಂಬರಿಕಾರ ತಮ್ಮ ಅನುಭವದ ಕುರಿತು ಹೇಳಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಇದೇ ಮೇ29, 2026 ರಂದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆಯಲಿರುವ ಹದಿನೇಳನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗುತ್ತಿದೆ. 2024 ಅಕ್ಟೋಬರ್ ತಿಂಗಳಿನಲ್ಲಿ ನಾನೊಂದು ಕಾದಂಬರಿಯನ್ನು ರಚಿಸಬೇಕೆಂದು ತೀರ್ಮಾನಿಸಿ ಬರೆಯಲು ಕುಳಿತ್ತಿದ್ದೆ. ಸರಿ ಸುಮಾರು ನಾಲ್ಕೈದು ತಿಂಗಳುಗಳ ಕಾಲ ಸಮಯ ಸಿಕ್ಕಾಗಲೆಲ್ಲಾ ಬರೆಯುತ್ತಲೇ ಇದ್ದೆ. ಪ್ರತಿಫಲವಾಗಿ ಒಂದು ಹಂತಕ್ಕೆ ಕಾದಂಬರಿಯನ್ನು ಬರೆದು ಮುಗಿಸಿದ್ದೆ. ಆನಂತರ ಆ ಕೃತಿಯನ್ನು ಒಂದಷ್ಟು ಸಮಯ ಪಕ್ಕಕ್ಕಿಟ್ಟಿದ್ದೆ.

ಒಂದು ಪುಸ್ತಕವನ್ನು ಹೊರ ತರಬೇಕೆಂದು ನಿರ್ಧರಿಸುವುದು ಸುಲಭ. ಆನಂತರದಲ್ಲಿ ಪುಸ್ತಕ ಅಚ್ಚಾಗಿ ಕೈಸೇರುವ ತನಕ ಅದೆಷ್ಟು ಸವಾಲುಗಳನ್ನು ಎದುರಿಸಬೇಕೆಂದು ನಾನು ಬಲ್ಲೆ.
ಈ ಮೊದಲು ನಾನು ಎರಡು ಕವನ ಸಂಕಲನ, ಒಂದು ಕಥಾ ಸಂಕಲನ ಹೊರತಂದಿದ್ದು, ಈಗಿನದು ನಾಲ್ಕನೆಯ ಮತ್ತು ನನ್ನ ಮೊದಲ ಕಾದಂಬರಿಯಾಗಿದೆ. ಕವನ ಸಂಕಲನ ಮತ್ತು ಕಥಾಸಂಕಲನಗಳಿಗಿಂತ ಕಾದಂಬರಿಯ ರಚನೆ ಕ್ಲಿಷ್ಟಕರವಾದುದ್ದು ಎಂಬುದು ನನ್ನ ಭಾವನೆ.
ಕಾದಂಬರಿಯ ಪ್ರಾರಂಭದಿಂದ ಹಿಡಿದು ನೂಲೆಳೆಯಂತೆ ಪಾತ್ರ ಸನ್ನಿವೇಶಗಳನ್ನು ಹೆಣೆದು ಓದುಗರನ್ನು ನಿರಾಶೆಗೊಳಿಸಿದಂತೆ ಕೊನೆಯವರೆಗೂ ಪುಟ ತಿರುವುವಂತೆ ಹಿಡಿದಿಟ್ಟುಕೊಂಡು ಅಂತ್ಯವನ್ನು ತಲುಪಿಸುವುದು ಬರಹಗಾರನಿಗೆ ಸವಾಲಾಗಿರುತ್ತದೆ. ಈ ಕಾದಂಬರಿಯೂ ನಿಮ್ಮ ಮನ ಗೆಲ್ಲಲು ನಾನು ಪ್ರಾಮಾಣಿಕ ಪ್ರಯತ್ನ ಪಟ್ಟಿರುವೆನೆಂದು ಭಾವಿಸುತ್ತೇನೆ.
ನನ್ನ ಈ ಹಿಂದಿನ ಮೂರು ಕೃತಿಗಳು ಸಾವಿರಾರು ಓದುಗರ ಕೈ ಸೇರಿ ಉತ್ತಮವಾದ ಅಭಿಪ್ರಾಯ, ಅನಿಸಿಕೆ, ಸಲಹೆ, ವಿಮರ್ಶೆಗಳ ಜೊತೆಗೆ ನೂರಾರು ಓದುಗ ಮಿತ್ರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಸಂತೋಷಿಸುತ್ತೇನೆ.
ಈ ಬಾರಿ ನನ್ನ ಕೃತಿಯ ನಿರೀಕ್ಷೆಯಲ್ಲಿರುವ ಓದುಗರಿಗೆ ನಿರಾಸೆಯಾಗದಂತೆ ಕಥೆಯೊಂದನ್ನು ಹೊತ್ತು ತಂದಿದ್ದೇನೆ. ಈ ಕೃತಿಯು ನಿಮಗೆ ಇಷ್ಟವಾಗಬಹುದೆಂದು ನನಗೆ ನಂಬಿಕೆ ಇದೆ.
ಇನ್ನೇನು ಕೆಲವೇ ದಿನಗಳಲ್ಲಿ ಈ ಕೃತಿಯನ್ನು ನಿಮ್ಮ ಕೈಗಿಡುತ್ತಿದ್ದೇನೆ. ಎಂದಿನಂತೆ ಓದುಗ ದೇವರುಗಳಾದ ನಿಮ್ಮ ಸಹಕಾರ ಪ್ರೋತ್ಸಾಹ ನನಗಿರುವುದೆಂದು ನಂಬಿದ್ದೇನೆ.
ಧನ್ಯವಾದಗಳೊಂದಿಗೆ,
- ಹೇಮಂತ್ ಪಾರೇರಾ -ಕವಿ, ಲೇಖಕರು, ಕೊಡಗು
