ಜಪಾನಿನಲ್ಲಿ ಪ್ರವಾಸಿಗರು ಗಗನ ಚುಂಬಿ ಕಟ್ಟಡಗಳ ಬದಲು ಬೀದಿಯಲ್ಲಿ ಬಗ್ಗಿ ನೆಲದ ಫೋಟೋ ತೆಗೆಯುವುದು ಸಾಮಾನ್ಯ ದೃಶ್ಯ. ಜಪಾನ್ ಪ್ರವಾಸಿಗರಿಗೆ “ಮ್ಯಾನ್‌ಹೋಲ್ ಕಾರ್ಡ್‌ಗಳನ್ನು” ಕೊಡುತ್ತದೆ. ಅವುಗಳನ್ನು ನೋಡುವಾಗ ಆ ಪ್ರದೇಶದ ಇತಿಹಾಸ ಮತ್ತು ಬೆಳವಣಿಗೆಯನ್ನು ತಿಳಿಯಬಹುದು. ಲೇಖಕರಾದ ಅಂಜಲಿ ರಾಮಣ್ಣ ಅವರು ಜಪಾನಲ್ಲಿನ ಮ್ಯಾನ್‌ಹೋಲ್ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಪ್ರವಾಸ ಎಂದರೆ ಅಚ್ಚರಿಗಳ ಪೆಟಾರಿಯಿಂದ ಕ್ಷಣಕ್ಕೊಂದು ನೋಟವನ್ನು ಮೃದುವಾಗಿ ಸವರುತ್ತಾ ಕೆನ್ನೆಗಿರಿಸಿಕೊಳ್ಳುವ ಹಾಗೆ. ಪ್ರಾಣಿ ಪಕ್ಷಿಗಳು, ಊಟ, ಇತಿಹಾಸ, ಸಂಸ್ಕೃತಿ, ಆಚರಣೆ, ಪುರಾಣ, ಜಾನಪದ ಇವುಗಳ ಜೊತೆಗೆ ಮೋರಿ, ಹೌದು, ಸರಿಯಾಗಿಯೇ ಓದಿದ್ದೀರಿ ಕೆಲವು ದೇಶಗಳ ‘ಮೋರಿಗಳು’ ಅಪ್ರತಿಭವಾದವು. ನಂಬಲು ಸಾಧ್ಯವೇ ಆಗದ್ದು “Drain Spotting Tourism” ಎನ್ನುವ ಪ್ರವಾಸ. ಮೋರಿಗಳನ್ನು ಪತ್ತೆ ಹಚ್ಚುವ ಪ್ರವಾಸ ಇದು.
ಪ್ರವಾಸ ಮಾಡುವಾಗ ರಸ್ತೆಯಲ್ಲಿ ಕಣ್ಣಿಗೆ ಬೀಳುವ ಮುಚ್ಚಿದ ಮೋರಿಗಳನ್ನು ಜನರು ಎರಡನೇ ಬಾರಿ ನೋಡದೆ ನಡೆದು ಹೋಗುತ್ತಾರೆ. ಸಾಮಾನ್ಯವಾಗಿ ಮೋರಿ ಮುಚ್ಚಳವು ತುಕ್ಕುತುಕ್ಕು ಕಾಣುವ ಲೋಹದಿಂದ ಮಾಡಿರುವ ಚಪ್ಪಟ್ಟೆ ತಟ್ಟೆಯಾಗಿರುತ್ತದೆ. ಆದರೆ ಒಂದಷ್ಟು ದೇಶಗಳು ಅವುಗಳನ್ನು ತಮ್ಮ ನಾಗರೀಕತೆಯ ವಿಕಾಸದ ಒಂದು ಕಥೆಯನ್ನು ಹೇಳುವ ಕ್ಯಾನ್ವಾಸ್ ಆಗಿ ಮಾಡಿಕೊಂಡಿವೆ.

ಫೋಟೋ ಕೃಪೆ : ಅಂತರ್ಜಾಲ
ನಗರಗಳನ್ನು ಸುಂದರಗೊಳಿಸಲು ಪ್ರಾಯೋಗಿಕ ಪರಿಹಾರವಾಗಿ ಪ್ರಾರಂಭವಾದ “ಮೋರಿ ಮುಚ್ಚಳಗಳು ” ಈಗ ಒಂದು ಅನನ್ಯ ಸಾಂಸ್ಕೃತಿಕ ಕುರುಹು ಆಗಿದೆ. ಒಂದು ರಾಷ್ಟ್ರವು ತನ್ನನ್ನು, ತನ್ನ ಇತಿಹಾಸವನ್ನು ಮತ್ತು ತನ್ನ ಮೌಲ್ಯಗಳನ್ನು ಹೇಗೆ ನೋಡುತ್ತದೆ ಎಂಬುದನ್ನು ತೋರಿಸುತ್ತಿವೆ ಮೋರಿಗಳ ಢಕ್ಕನ್ನುಗಳು.
ಮೊದಲ ಬಾರಿಗೆ ಈ ಆಲೋಚನೆಯು 1980ರಲ್ಲಿ ಜಪಾನ್ ದೇಶದ ನಿರ್ಮಾಣ ಕ್ರಾಂತಿಯ ಸಮಯದಲ್ಲಿ ಪ್ರಾರಂಭವಾಯಿತು. ನಗರಗಳು ಒಳಚರಂಡಿ ವ್ಯವಸ್ಥೆಯನ್ನು ವಿಸ್ತರಿಸಿದಾಗ ಹೊರವಲಯದ ಸ್ಥಳೀಯ ಸರ್ಕಾರಗಳು ಜಾಗದ ಮತ್ತು ಹಣಕಾಸಿನ ಸಮಸ್ಯೆಯನ್ನು ಎದುರಿಸಿದವು. ತೆರಿಗೆದಾರರಿಗೆ ತಮ್ಮ ಕಣ್ಣಿಗೆ ಕಾಣದ ಮೂಲಸೌಕರ್ಯಕ್ಕೆ ಹಣ ನೀಡಲು ಇಷ್ಟಪಡಲಿಲ್ಲ. ನಿರ್ಮಾಣ ಸಚಿವಾಲಯದ ಯಾಸುತಕೆ ಕಮೇದ ಎನ್ನುವ ಸರ್ಕಾರಿ ಅಧಿಕಾರಿ ಇದಕ್ಕೆ ಒಂದು ಪರಿಹಾರವನ್ನು ಸೂಚಿಸಿದರು.
ಪೌರಪ್ರಜ್ಞೆಯನ್ನು ಉತ್ತೇಜಿಸಲು ಮತ್ತು ಒಳಚರಂಡಿ ತೆರಿಗೆಗೆ ಸಾರ್ವಜನಿಕರ ಬೆಂಬಲ ಪಡೆಯಲು ನಗರಗಳು ತಮ್ಮದೇ ಆದ ಮ್ಯಾನ್‌ಹೋಲ್ ಮುಚ್ಚಳಗಳನ್ನು ವಿನ್ಯಾಸಗೊಳಿಸಿಕೊಳ್ಳಲು ಅವಕಾಶ ನೀಡುವುದು ಆ ಉಪಾಯವಾಗಿತ್ತು. ಅದಕ್ಕಾಗಿ ಒಂದು ಸಂಘಟನೆಯ ಪ್ಲಾಟ್‌ಫಾರ್ಮ್ ಹುಟ್ಟಿಕೊಂಡಿತು. ನಗರಗಳು ಮ್ಯಾನ್‌ಹೋಲ್ ಮುಚ್ಚಳಗಳ ಮೇಲೆ ವರ್ಣರಂಜಿತ, ಸಂಕೀರ್ಣ ವಿನ್ಯಾಸಗಳನ್ನು ಬಿತ್ತರಿಸಲು ಪ್ರಾರಂಭಿಸಿದವು.
ನಗರಗಳನ್ನು ಸುಂದರಗೊಳಿಸಲು ಏಕತಾನತೆಯಿಂದ ಇರುವ ಬೀದಿಗಳು ಕಲಾ ಗ್ಯಾಲರಿಗಳಾಗಿ ಬದಲಾಗಲು ಆರಂಭಿಸಿದವು. ಸ್ಥಳೀಯತೆಯ ಬಗ್ಗೆ ಗರ್ವಿತರಾಗಲು ಪ್ರತಿ ಪಟ್ಟಣವು ತನ್ನದೇ ಆದ ವಿಶೇಷ ಚಿನ್ಹೆಗಳನ್ನು ಮುಚ್ಚಳದ ಮೇಲೆ ಹಾಕಲು ಮುಂದೆ ಬಂದವು. ಹೀಗೆ ಕಲಾತ್ಮಕ ಮೋರಿ ಮುಚ್ಚಳಗಳು ಸಾಂಸ್ಕೃತಿಕ ಗುರುತ್ತಾಗುತ್ತಾ ಹೋಯಿತು.
ಜಪಾನ್ ದೇಶದಲ್ಲಿ ಈಗ ಮೋರಿ ಎಂದರೆ ಗಬ್ಬು ನಾರುವ, ಮನುಷ್ಯನ ಹೊಲಸನ್ನೆಲ್ಲಾ ತಂದು ರಸ್ತೆರಸ್ತೆಯಲ್ಲಿ ಹೊರಹಾಕುವ ವಮನಕ್ರಿಯೆ ಅಲ್ಲ, ಅದೊಂದು ಸಂಭ್ರಮ. ಅಲ್ಲಿ ಈಗ 12000ಕ್ಕೂ ಅಧಿಕ ಮೋರಿ ಮುಚ್ಚಳಗಳ ವಿನ್ಯಾಸಗಳಿವೆ. ಜಪಾನ್ ದೇಶದಲ್ಲಿ ವಿಶ್ವದ ಪ್ರಜೆಗಳು ನಡೆದಾಡ ಬಹುದಾದ ಅತಿದೊಡ್ಡ ಸಾರ್ವಜನಿಕ ಕಲಾ ಯೋಜನೆಯಾಗಿದೆ ಮೋರಿ ಮುಚ್ಚಳಗಳ ಮುದ್ದಾದ ರಚನೆಗಳು.

ಫೋಟೋ ಕೃಪೆ : ಅಂತರ್ಜಾಲ
ಕಲಾತ್ಮಕ ಮೋರಿ ಮುಚ್ಚಳಗಳು ಸ್ಥಳೀಯ ಸಂಸ್ಕೃತಿಗಳ, ಪದ್ಧತಿ, ಹಬ್ಬಗಳ, ಸ್ಮಾರಕ ಇತಿಹಾಸಗಳ, ಪ್ರಕೃತಿಯ ವರಗಳನ್ನು ಎರಕಹೊಯ್ದ ಕಬ್ಬಿಣದಲ್ಲಿ ಹೊತ್ತು ದೇಶದ ಹೆಗ್ಗುರುತು ಎನಿಸಿಕೊಂಡಿವೆ. ಸಂಸ್ಕೃತಿಯ ಪಾಠವನ್ನು ತ್ವರಿತವಾಗಿ ಕಲಿಯಲು ಪ್ರಪಂಚದ ವಿದ್ಯಾರ್ಥಿಗಳೆಲ್ಲಾ ಇಲ್ಲಿಗೆ ಬರುತ್ತಾರೆ. ಮೋರಿ ಮುಚ್ಚಳದ ಮೇಲಿನ ಚಿತ್ರಗಳನ್ನು ನೋಡುವಾಗ ಪ್ರವಾಸಿ ಯಾವ ಊರಿನಲ್ಲಿದ್ದಾನೆ ಎಂದು ತಿಳಿಯುವುದು ಮಾತ್ರವಲ್ಲ ಆ ದೇಶದಲ್ಲಿನ ಋತುವಿನ ಬಗ್ಗೆಯೂ ಮಾಹಿತಿ ಸಿಗುತ್ತದೆ.
ಮೌಂಟ್ ಫುಜಿ, ಒಸಾಕಾ ಕೋಟೆ, ಚೆರ್ರಿ ಹೂವುಗಳು, ಶರತ್ಕಾಲದ ಎಲೆಗಳು, ಸಮುರಾಯ್, ಹಳೆಯ ನಕ್ಷೆಗಳು, ಕೊಕ್ಕರೆಗಳು, ಕೋಯಿ ಮೀನುಗಳು ಮತ್ತು ಶಿಂಟೋ ದೇವಾಲಯದ ತೋಪುಗಳು, ಪವಿತ್ರ ದೇವದೂತರು ಎಂದು ನಂಬಿರುವ ಕೊಂಬಿನ ಜಿಂಕೆಗಳು ಮೋರಿ ಮುಚ್ಚಳಗಳ ಮೇಲೆ ಕಾಣಸಿಗುತ್ತವೆ. ಹಲವು ನಗರಗಳಲ್ಲಿ ಪಾಪ್ ಸಂಸ್ಕೃತಿ ಮತ್ತು ಮ್ಯಾಸ್ಕಾಟ್‌ಗಳನ್ನೂ ನೋಡಬಹುದು. ಪ್ರಸಿದ್ಧ ಪೋಕೆಮಾನ್, ಹಲೋ ಕಿಟ್ಟಿ, ಮತ್ತು ಸ್ಥಳೀಯ “ಯುರು-ಚಾರಾ” ಮ್ಯಾಸ್ಕಾಟ್‌ಗಳು.
ಜಪಾನ್ ಸಂಪ್ರದಾಯವನ್ನು ಆಧುನಿಕತೆಯ ವ್ಯಾಮೋಹದೊಂದಿಗೆ ಬೆರೆಸುತ್ತಾ ಮೋರಿ ಮುಚ್ಚಳಗಳು ಜಪಾನ್ ದೇಶವನ್ನು ಎಲ್ಲರಿಗಿಂತ ವಿಭಿನ್ನವಾಗಿ ಪ್ರತಿಬಿಂಬಿಸುತ್ತಿದೆ. ಮೋರಿಯಂತಹ ಸಾಮಾನ್ಯ ಎನಿಸಬಹುದಾದ ವಿಷಯಕ್ಕೂ ಪ್ರವಾಸಿಯ ಗಮನ ಜಾರದಂತೆ ತಡೆಯುವ ವಿನ್ಯಾಸಗಳನ್ನು ಮತ್ತು ಉತ್ಕೃಷ್ಟ ಕರಕುಶಲತೆಯನ್ನು ಪ್ರತಿಬಿಂಬಿಸುತ್ತಿವೆ ಮೋರಿ ಮುಚ್ಚಳಗಳು. ಅದರಿಂದಾದ ಮುಖ್ಯ ಲಾಭವೆಂದರೆ ಈಗ ಸಮುದಾಯ ಹೆಮ್ಮೆಯ ಗುರುತಿಗಾಗಿ ನಗರಗಳು ಅತ್ಯುತ್ತಮ ವಿನ್ಯಾಸಕ್ಕಾಗಿ ಸ್ಪರ್ಧಿಸುತ್ತವೆ. ತಮ್ಮ ಊರಿನ ಮೋರಿ ಮುಚ್ಚಳಗಳನ್ನು ಸ್ಥಳೀಯರೇ ರಕ್ಷಿಸಿಕೊಳ್ಳುತ್ತಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಉಳಿಸಿಕೊಳ್ಳುವುದೂ ಪ್ರಜೆಗಳ ಮೂಲಭೂತ ಕರ್ತವ್ಯವೇ ಆಗಿದೆ.
ಇದನ್ನು ಸಾಮಾಜಿಕ ಜವಾಬ್ದಾರಿಯನ್ನಾಗಿ ಪರಿವರ್ತಿಸಲು ಮಾಡಿರುವ ಮತ್ತೊಂದು ಉಪಾಯ ಎಂದರೆ ಯಾವ ಮುಚ್ಚಳಗಳ ಮೇಲೂ ಅದನ್ನು ರಚಿಸಿದ ಕಲಾವಿದರ ಸಹಿ ಇರುವುದಿಲ್ಲ. ಅವು ನಗರವನ್ನಷ್ಟೇ ಪ್ರತಿನಿಧಿಸುತ್ತವೆ, ವ್ಯಕ್ತಿಯನ್ನಲ್ಲ. ಸಂಸ್ಕೃತಿಯು ವೈಯಕ್ತಿಕ ಖ್ಯಾತಿಗಿಂತ ಸಮುದಾಯದ ಕಥೆಯನ್ನು ಮೌಲ್ಯೀಕರಿಸಬೇಕು ಎನ್ನುವುದು ಜಪಾನೀಯರ ನಂಬಿಕೆ ಮತ್ತು ಆಚರಣೆ.

ಫೋಟೋ ಕೃಪೆ : ಅಂತರ್ಜಾಲ
ಹಿರಿಯಕ್ಕನ ಚಾಳಿ ಮನೆಮಂದಿಗೂ ಎನ್ನುವಂತೆ ಜಪಾನ್ ದೇಶದ ಈ ಅಪರೂಪದ ಕೆಲಸವನ್ನು ನೋಡಿ ಮತ್ತೊಂದಷ್ಟು ದೇಶಗಳು ಮೋರಿ ಮುಚ್ಚಳಗಳನ್ನು ತಮ್ಮ ಸಮಾಜ ಜೀವನದ ಸಂಕೇತಗಳನ್ನಾಗಿಸಿಕೊಳ್ಳಲು ಶುರು ಮಾಡಿವೆ. ಜರ್ಮನಿಯು ತನ್ನ ನಗರದ ಲಾಂಛನಗಳು, ಬರ್ಲಿನ್ ಕರಡಿಗಳು, ಹ್ಯಾಂಬರ್ಗಿನ ಬಂದರು ವಿನ್ಯಾಸಗಳನ್ನು ಅಚ್ಚಿಸಿದ್ದರೆ, ಫ್ರಾನ್ಸ್ ದೇಶವು ಪ್ಯಾರಿಸ್ ಆರ್ಟ್, ಲಿಯಾನ್ ರೇಷ್ಮೆ ನೇಕಾರರ ವಿನ್ಯಾಸಗಳು, ಸುಗಂಧ ತಯಾರಾಗುವ ಬಗೆಗಳು, ವಿವಿಧ ವೈನ್ ಬಾಟಲಿಗಳ ಡಿಸೈನ್ಗಳನ್ನು ಮೋರಿ ಮುಚ್ಚಳಕ್ಕಾಗಿ ಬಳಸಿಕೊಳ್ಳುತ್ತಿದೆ.
ರೋಮ್‌ನಲ್ಲಿ ತೋಳ, ವೆನಿಸ್‌ನಲ್ಲಿ ರೆಕ್ಕೆಯ ಸಿಂಹ, ಫ್ಲಾರೆನ್ಸ್‌ನಲ್ಲಿ ಫ್ಲರ್-ಡೆ-ಲಿಸ್ ಸಾಮ್ರಾಜ್ಯಶಾಹಿಯ ನೆನಪುಗಳನ್ನು ಲೋಹಕ್ಕೆ ಎರಕ ಹುಯ್ಯಲಾಗಿದೆ. ಅಮೆರಿಕೆಯ ನ್ಯೂಯಾರ್ಕಿನಲ್ಲಿ NYC ವೃತ್ತಾಕಾರದ ಮುಚ್ಚಳಗಳು, ಸಿಯಾಟಲ್ನಲ್ಲಿ ಸಾಲ್ಮನ್ ಮೀನುಗಳು, ಹೊನೊಲುಲುವಿನಲ್ಲಿ ಸಮುದ್ರದ ಅಲೆಗಳು ಮತ್ತು ಮೀನು ವ್ಯಾಪಾರದ ಚಿತ್ತಾರಗಳನ್ನು ಬಿಡಿಸಿಕೊಂಡು ನಿಂತಿವೆ ಮೋರಿ ಮುಚ್ಚಳಗಳು. ದಕ್ಷಿಣ ಕೊರಿಯಾದಲ್ಲಿ ರಾಷ್ಟ್ರೀಯ ಚಿಹ್ನೆಗಳು ಮತ್ತು ಮತ್ಸ್ಯೋದ್ಯಮದ ಚಿತ್ರಗಳನ್ನು ಹಾಕಿದ್ದಾರೆ. ತೈವಾನಿನಲ್ಲಿ ಬಿಸಿನೀರಿನ ಬುಗ್ಗೆಗಳ ಚಿತ್ರವನ್ನೇ ಇಳಿಸಲಾಗಿದೆ. ಪೋರ್ಚುಗಲ್ಲಿನಲ್ಲಿ ಸಮುದ್ರಯಾನ, ಹಡಗುಗಳು, ನೀರಿನ ಕುಶಾಲತೆ ಕುಣಿಯುತ್ತಿವೆ ಮೋರಿ ಮುಚ್ಚಳಗಳ ಮೇಲೆ.
ಈ ದೇಶಗಳು ಪ್ರತಿ ನಗರಕ್ಕೆ ಒಂದು ಅಥವಾ ಎರಡು ಪ್ರಮಾಣಿತ ವಿನ್ಯಾಸಗಳನ್ನು ಸರಳ ಲೋಹದಲ್ಲಿ ಬಿತ್ತರಿಸುತ್ತವೆ. ಆದರೆ ಸಾವಿರಾರು ಬಣ್ಣಬಣ್ಣದ ಮತ್ತು ನಿರಂತರವಾಗಿ ನವೀಕರಿಸಿಕೊಳ್ಳುತ್ತಿರುವ ವಿನ್ಯಾಸಗಳನ್ನು ಜಪಾನ್ ದೇಶದಲ್ಲಿ ಮಾತ್ರ ಕಾಣಬಹುದು.
ಜಪಾನ್ ಪ್ರವಾಸಿಗೆ “ಮ್ಯಾನ್‌ಹೋಲ್ ಕಾರ್ಡ್‌ಗಳನ್ನು” ಕೊಡುತ್ತದೆ. ಅದನ್ನು ನೋಡಿಕೊಂಡು GPS ಮಾರ್ಗದರ್ಶನದೊಂದಿಗೆ ಆ ಸ್ಥಳಗಳಿಗೆ ಹೋಗಿ ಮೋರಿ ಮುಚ್ಚಳವನ್ನು ನೋಡುತ್ತಾ ಅವುಗಳೊಂದಿಗೆ ಸೆಲ್ಫೀ ತೆಗೆದುಲೊಳ್ಳುವುದು ಮಾತ್ರವಲ್ಲ ಅವುಗಳನ್ನು ನೋಡುವಾಗ ಆ ಪ್ರದೇಶದ ಇತಿಹಾಸ ಮತ್ತು ಬೆಳವಣಿಗೆಯನ್ನು ತಿಳಿಯಬಹುದು. ಪ್ರವಾಸಿಗರು ಈಗ “ಡ್ರೈನ್ ಸ್ಪಾಟಿಂಗ್ ಪ್ರವಾಸೋದ್ಯಮ” ಮಾಡುತ್ತಿದ್ದಾರೆ. ಮ್ಯಾನ್‌ಹೋಲ್ ಕೋಸ್ಟರ್‌ಗಳು, ಟಿ-ಶರ್ಟ್‌ಗಳು, ಚಾಕೊಲೇಟ್‌ಗಳನ್ನು ಸಹ ಖರೀದಿಸುತ್ತಾರೆ.
ಕಲಾತ್ಮಕ ಮೋರಿ ಮುಚ್ಚಳಗಳು ಒಂದು ಅಂಶವನ್ನಂತೂ ಖಚಿತವಾಗಿ ಸಾಬೀತುಪಡಿಸುತ್ತವೆ, ಒಂದು ದೇಶದ ಅಭಿವೃದ್ಧಿಗೆ ಯಾವುದೇ ಮೂಲಸೌಕರ್ಯವೂ ಗೌಣವಲ್ಲ. ಒಂದು ನಗರವು ತನ್ನ ಕಥೆಯನ್ನು ನಮ್ಮ ಪಾದದ ಕೆಳಗೆ ಇರಿಸಿದಾಗ ನಾವು ವಿವರಗಳನ್ನು ಗಮನಿಸುತ್ತೇವೆ, ನಿವಾಸಿಗಳು ತಮ್ಮ ಸ್ಥಳದ ಬಗ್ಗೆ ಹೆಮ್ಮೆ ಪಡುತ್ತಾರೆ. ಸಾಮಾನ್ಯವೂ ಸಹ ಸುಂದರವಾಗಿರಬೇಕು ಎನ್ನುವ ಸ್ವಸ್ಥ ಅಭಿರುಚಿ ಜನರಲ್ಲಿ ಬೆಳೆಯುತ್ತದೆ. ಜಪಾನಿನಲ್ಲಿ ಒಳಚರಂಡಿ ತೆರಿಗೆಯನ್ನು ಪಾವತಿಸಿಕೊಳ್ಳಲು ಮಾಡಿದ ಕಲಾತ್ಮಕ ಮೋರಿ ಮುಚ್ಚಳಗಳ ವ್ಯವಸ್ಥೆಯಿಂದ ನಾಗರೀಕರ ಪ್ರೀತಿಯನ್ನು ಸಂಪಾದಿಸುವಂತಾಗಿದೆ.
ಜಪಾನಿನಲ್ಲಿ ಪ್ರವಾಸಿಗರು ಗಗನಚುಂಬಿ ಕಟ್ಟಡಗಳ ಬದಲು ಬೀದಿಯಲ್ಲಿ ಬಗ್ಗಿ ನೆಲದ ಫೋಟೋ ತೆಗೆಯುವುದು ಸಾಮಾನ್ಯ ದೃಶ್ಯ ಯಾಕೆಂದರೆ ಕೆಲವೊಮ್ಮೆ, ದೇಶದ ಆತ್ಮವು ಅದರ ಸ್ಮಾರಕಗಳಲ್ಲಿ ಕಾಣಲಾಗುವುದಿಲ್ಲ ಬದಲಿಗೆ ಅದರ ಮ್ಯಾನ್‌ಹೋಲ್‌ಗಳಲ್ಲಿ ಉಸಿರಾಡುತ್ತಿರುತ್ತದೆ. ಮೋರಿ ಮುಚ್ಚಳಗಳು ನಮ್ಮ ಕನ್ನಡಿಗಳು ಎನ್ನುವ ಅರಿವು ಇಲ್ಲಿಯೂ ಬಂದರೆ ಸೌಂದರ್ಯದ ಸಮರದಲ್ಲಿ ನಾವೆಲ್ಲರೂ ಅಮರರೇ.
- ಅಂಜಲಿ ರಾಮಣ್ಣ
