ವಲಸೆಯನ್ನು ನಿಯಂತ್ರಿಸಲು ಉದ್ದೇಶಿಸಲಾದ ಪ್ರತಿಯೊಂದು ಹೊಸ ನಿಯಮವು ಪ್ರವಾಸಿಗರಿಗೆ ಹೆಚ್ಚುವರಿ ಖರ್ಚು ಮತ್ತು ದಾಖಲೆಗಳನ್ನು ಪಡೆಯುವಲ್ಲಿ ಸಂಕೀರ್ಣತೆ ಹಾಗೂ ಕಾಯುವ ಸಮಯವನ್ನು ಏರಿಸಿದೆ. ಇವುಗಳಿಂದ ವಿಶ್ವದಾದ್ಯಂತ ಪ್ರವಾಸಿ ತಾಣಗಳು ವಾರ್ಷಿಕವಾಗಿ 22% ಪ್ರವಾಸಿಗರನ್ನು ಕಳೆದುಕೊಳ್ಳಲಿದೆ ಎಂದು ವರ್ಲ್ಡ್ ಟ್ರಾವೆಲ್ ಮತ್ತು ಟೂರಿಸಂ ಕೌನ್ಸಿಲ್ ವರದಿ ನೀಡಿದೆ. ಲೇಖಕರಾದ ಅಂಜಲಿ ರಾಮಣ್ಣ ಅವರು ಪ್ರವಾಸದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಈಗ ಎಲ್ಲೆಲ್ಲೂ ವಲಸಿಗರದ್ದೇ ಕಾರುಬಾರು. ಒಂದು ದೇಶದ ರಾಜಕೀಯದ ಚಿತ್ರಣ, ಒಂದು ಸಮುದಾಯದ ಸಾಂಸ್ಕೃತಿಕ ಚರ್ಯೆ, ಭೂಮಿಯ ಪ್ರಾಕೃತಿಕ ಸಂಪತ್ತಿನ ಪರಿಮಾಣ ಮತ್ತು ಗುಣಮಟ್ಟ ಹೀಗೆ ಎಲ್ಲದರಲ್ಲೂ ಬದಲಾವಣೆ ತರುವಲ್ಲಿ ವಲಸಿಗರು ಪ್ರಬಲರು ಎನ್ನುವುದಕ್ಕೆ ನಿತ್ಯವೂ ಸಾಕ್ಷಿ ಸಿಗುತ್ತಿದೆ.
ಒಂದೊಮ್ಮೆ ಪ್ರವಾಸಿ ಸ್ಥಳಗಳ ಮಹಿಮೆಯನ್ನು, ಸೌಂದರ್ಯವನ್ನು ತಿಳಿಸಿಕೊಡುತ್ತಿದ್ದ ರೀಲ್ಸ್ ಈಗ ಅಲ್ಲಿನ ಗಲೀಜನ್ನು, ಅಕ್ರಮವಾಗಿ ಬಂದು ಹಾವಳಿ ಮಾಡುತ್ತಿರುವ ವಲಸಿಗರನ್ನು, ನಿರೋದ್ಯೋಗಿಗಳನ್ನು, ಭಿಕ್ಷುಕರನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಅವ್ಯಾಹತವಾಗಿ ಬಿತ್ತರಿಸುತ್ತಿವೆ. ಅಕ್ರಮ ವಲಸೆಯ ಸಮಸ್ಯೆಯನ್ನು ತೋರಿಸುತ್ತಿರುವವರು ಶತ್ರುಗಳ ಬದಲಿಗೆ ಅಲ್ಲಿಗೆ ಭೇಟಿ ಕೊಟ್ಟಿರುವ ಪ್ರವಾಸಿಗಳು ಮತ್ತು ಆಯಾ ಜಾಗದಲ್ಲಿರುವ ನಿಯಮಾನುಸಾರಿ ವಲಸಿಗರೇ ಆಗಿದ್ದಾರೆ. ಅದರಲ್ಲೂ ಅಕ್ರಮ ವಲಸಿಗರಿಂದ ಮೂಲನಿವಾಸಿಗಳಿಗೆ ಅಭದ್ರತೆ ಎನ್ನುವ ಕೂಗು ಎಲ್ಲೆಡೆಯಲ್ಲಿಯೂ ಜೋರಾಗಿದೆ. ಅದಕ್ಕೇ ಅದೊಂದು ಕಗ್ಗಂಟಾದ ಸಮಸ್ಯೆ ಎನ್ನುವಂತಾಗಿದೆ. ಅಷ್ಟೇ ಅಲ್ಲ ಅಕ್ರಮ ವಲಸೆ ಸಮಸ್ಯೆಯು ಪ್ರವಾಸೋದ್ಯಮದ ಭೂಪಟವನ್ನೂ ಮರು ರೂಪಿಸುತ್ತಿದೆ.
ದಶಕಗಳ ಕಾಲ, ಅಮೆರಿಕ, ಫ್ರಾನ್ಸ್, ಇರೋಪ್ ದೇಶಗಳು ಮತ್ತು ಗಲ್ಫ್ ರಾಷ್ಟ್ರಗಳು ಜಗತ್ತಿನ “ಪ್ರವಾಸಿ ಅತಿಥೇಯರು” ಎನ್ನುವ ಹೆಗ್ಗಳಿಕೆ ಹೊತ್ತಿದ್ದವು. ಐತಿಹಾಸಿಕ ಸ್ಮಾರಕಗಳನ್ನು ಕಾಣಲು, ಶಾಪಿಂಗ್ ಮಾಡಲು ಮತ್ತು ವೈಭವೋಪೇತ ಜೀವನ ಶೈಲಿಯನ್ನು ನೋಡಲು ಜನರು ತುದಿಗಾಲಿನಲ್ಲಿ ತಯಾರಾಗಿ ಧಾವಿಸುತ್ತಿದ್ದ ತಾಣಗಳು ಅವು.

ಫೋಟೋ ಕೃಪೆ : ಅಂತರ್ಜಾಲ
ಆದರೆ 2024 ರಿಂದ ಹೊಸ ಶಕ್ತಿಯೊಂದು ಪ್ರವಾಸದ ಹರಿವನ್ನು ಬದಲಿಸುತ್ತಿದೆ. ಅಕ್ರಮ ವಲಸೆಯನ್ನು ಹತ್ತಿಕ್ಕುವಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ರೂಪಿಸಲಾಗಿರುವ ನೀತಿಗಳು, ಅಕ್ರಮ ಪ್ರವೇಶವನ್ನು ನಿಯಂತ್ರಿಸಲು ಉದ್ದೇಶಿಸಿದ ದಮನಕ್ರಿಯೆಗಳು, ವೀಸಾ ನೀಡುವಲ್ಲಿ ಆಗುತ್ತಿರುವ ವಿಳಂಬಗಳು ಮತ್ತು ಗಡಿಯಲ್ಲಿನ ಆತಂಕಗಳು ಈಗ ಕಾನೂನುಬದ್ಧ ಪ್ರವಾಸಿಗರನ್ನು ದೂರ ಓಡಿಸುತ್ತಿವೆ. ಅಕ್ರಮ ವಲಸೆಗಳನ್ನು ತಡೆಯಲು ಕೈಗೊಳ್ಳುತ್ತಿರುವ ಸಂಘರ್ಷಕಾರಿ ಕ್ರಮಗಳು ಹಳೆಯ “ದೊಡ್ಡ ಆಟಗಾರರು” ಎನಿಸಿಕೊಂಡಿದ್ದ ಈ ರಾಷ್ಟ್ರಗಳ ಪ್ರವಾಸೋದ್ಯಮಕ್ಕೆ ಹಾನಿ ಮಾಡುತ್ತಿದೆ.
ಅವರ ಸ್ಥಾನದಲ್ಲಿ, ಸರಳ ಪ್ರವೇಶ ನಿಯಮಗಳನ್ನು ಹೊಂದಿರುವ ಸಣ್ಣ, ಶಾಂತಿಯುತ ದೇಶಗಳು ಉನ್ನತಿಯ ದಿನಗಳನ್ನು ಕಾಣುತ್ತಿವೆ. ಅಮೆರಿಕಾದ ಸಂಕೀರ್ಣ ವೀಸಾ ಪ್ರಕ್ರಿಯೆಗಳು ಮತ್ತು ವೀಸಾ ನೀಡಲು ತೆಗೆದುಕೊಳ್ಳುವ ದೀರ್ಘ ಸಮಯವು ಕೇವಲ ನೈತಿಕ ವಲಸಿಗರ ಪ್ರಯಾಣಕ್ಕೆ ಮಾತ್ರ ಅಡ್ಡಿಯಾಗುತ್ತಿಲ್ಲ ಪ್ರವಾಸಿಗರ ಉತ್ಸಾಹಕ್ಕೂ ತಡೆಯಾಗುತ್ತಿದೆ.
ಕಟ್ಟುನಿಟ್ಟಾದ ಗಡಿ ಭದ್ರತಾ ಕ್ರಮಗಳಿಂದಾಗಿ ‘ ನಿಮಗೆ ಸ್ವಾಗತವಿಲ್ಲ’ ಎನ್ನುವ ಭಾವವನ್ನು ಪ್ರವಾಸಿಗರಲ್ಲಿ ಹುಟ್ಟಿಸಿರುವ ಅಮೆರಿಕ ದೇಶವು ಅಂತರರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ
“ದೊಡ್ಡ ಕುಸಿತ” ಎದುರಿಸುತ್ತಿದೆ ಎಂದು ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ವರದಿಯಲ್ಲಿ ದಾಖಲಾಗಿದೆ.
ಜನವರಿ 21, 2026ರಿಂದ ಭಾರತ, ಬ್ರೆಜಿಲ್, ನೈಜೀರಿಯಾ, ಈಜಿಪ್ಟ್ ಮತ್ತು ಥೈಲ್ಯಾಂಡ್ ಸೇರಿದಂತೆ 75 ದೇಶಗಳಿಗೆ ಅಮೇರಿಕಾ ದೇಶವು ವಲಸೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿತು. ಇದು ವಲಸಿಗರನ್ನು ಗುರಿಯಾಗಿಸಿದ್ದರೂ, ಆ ದೇಶಕ್ಕೆ ಹೋಗುತ್ತಿದ್ದ ದೇಶಗಳ ಪ್ರವಾಸಿಗರನ್ನು ಸಹ ನಿರುತ್ಸಾಹಕ್ಕೆ ತಳ್ಳಿತು.
2026ರ ವಿಶ್ವಕಪ್ ಆತಿಥ್ಯ ಕೊಡುತ್ತಿರುವ ದೇಶಗಳಲ್ಲಿ ಸುಮಾರು 80% ಹೋಟೆಲ್ ನಿರ್ವಾಹಕರು ಬುಕಿಂಗ್‌ಗಳು ನಿರೀಕ್ಷೆಗಿಂತ ತುಂಬಾ ಕಡಿಮೆ ಇವೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈಗಾಗಲೇ ಅಕ್ರಮ ವಲಸಿಗರಿಂದ ತಮ್ಮದೆಲ್ಲವನ್ನೂ ಕಳೆದುಕೊಳ್ಳುತ್ತಿರುವ ದೇಶಗಳು ಹೆಚ್ಚಿನ ವಲಸೆ ಅಧಿಕಾರಿಗಳನ್ನು ನೇಮಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿವೆ.
ಭೌಗೋಳಿಕ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿರುವ ಅಕ್ರಮ ವಲಸಿಗರಿಂದಾಗಿ ಕ್ರೀಡಾ ಅಭಿಮಾನಿ ಪ್ರವಾಸಿಗರು ಸಾಮಾನ್ಯ ಪ್ರವಾಸಿಗರಿಗಿಂತ ಈವರೆಗೂ 1.7 ಪಟ್ಟು ಹೆಚ್ಚು ಖರ್ಚು ಮಾಡಿ ಪ್ರಯಾಣ ಮಾಡುತ್ತಿದ್ದು ಈಗ ಅವರುಗಳು ಸುಲಭವಾಗಿ ಬರಲು ಒಪ್ಪದಿರುವ ಕಾರಣ ವಿಶ್ವ ಪ್ರವಾಸೋದ್ಯಮದಲ್ಲಿ ಶತಕೋಟಿ ಡಾಲರುಗಳ ನಷ್ಟ ಎದುರಾಗಿದೆ.
ಗಡಿಯಾಚೆಗಿನ ದಾಳಿಗಳು ಮತ್ತು ಅಕ್ರಮ ವಲಸಿಗರಿಂದ ಪ್ರಾದೇಶಿಕ ಅಶಾಂತಿಯು ಹೆಚ್ಚಾದ ಹಿನ್ನೆಲೆಯಲ್ಲಿ ಫ್ರಾನ್ಸ್, ಯುಎಸ್, ಯುಕೆ, ಜರ್ಮನಿ ಪ್ರವಾಸಕ್ಕಾಗಿ ಬರುತ್ತಿದ್ದ ವಿದೇಶಿಯರಿಗೆ ಕಡಿವಾಣ ಹಾಕಿವೆ.

ಫೋಟೋ ಕೃಪೆ : ಅಂತರ್ಜಾಲ
ಪರಿಣಾಮವಾಗಿ ಜೋರ್ಡಾನ್‌ನ ಪ್ರವಾಸೋದ್ಯಮ ಆದಾಯ 3%ಕ್ಕಿಂತ ಹೆಚ್ಚು, ದುಬೈ ಹೋಟೆಲ್ ಬುಕಿಂಗ್‌ಗಳು 60% ಕುಸಿದಿವೆ. 2026ರಲ್ಲಿ ಮಧ್ಯಪ್ರಾಚ್ಯಕ್ಕೆ ಆಗಮಿಸುವವರ ಸಂಖ್ಯೆ 11-27% ಕುಸಿಯಲಿದೆ ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ಅಂದಾಜಿಸಿದೆ, ಇದು $34-$56 ಶತಕೋಟಿ ಡಾಲರ್ಗಗಳಷ್ಟು ನಷ್ಟಕ್ಕೆ ಸಮವಾಗಿದೆ. ವಲಸೆ ಸಮಸ್ಯೆಯಿಂದ ಪಾರಾಗಲು ಬೆಲ್ಜಿಯಂ ಪ್ರವಾಸಿಗಳ ಮೇಲಿನ ವೀಸಾ ಶುಲ್ಕವನ್ನು ಹೆಚ್ಚಿಸಿದೆ. ಈ ಕ್ರಮವು ಪ್ರವಾಸಿಗಳ ವೆಚ್ಚವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಥೈಲ್ಯಾಂಡ್ ಕಡ್ಡಾಯವಾಗಿ ಆರೋಗ್ಯ ವಿಮೆಯನ್ನು ಜಾರಿಗೊಳಿಸಲಿದೆ.
ವಲಸೆಯನ್ನು ನಿಯಂತ್ರಿಸಲು ಉದ್ದೇಶಿಸಲಾದ ಪ್ರತಿಯೊಂದು ಹೊಸ ನಿಯಮವು ಪ್ರವಾಸಿಗರಿಗೆ ಹೆಚ್ಚುವರಿ ಖರ್ಚು ಮತ್ತು ದಾಖಲೆಗಳನ್ನು ಪಡೆಯುವಲ್ಲಿ ಸಂಕೀರ್ಣತೆ ಹಾಗೂ ಕಾಯುವ ಸಮಯವನ್ನು ಏರಿಸಿದೆ.
ವಿಶ್ವದಾದ್ಯಂತ ಪ್ರವಾಸೀ ತಾಣಗಳು ವಾರ್ಷಿಕವಾಗಿ 22% ಪ್ರವಾಸಿಗರನ್ನು ಕಳೆದುಕೊಳ್ಳಲಿದೆ ಎಂದು ವರ್ಲ್ಡ್ ಟ್ರಾವೆಲ್ ಮತ್ತು ಟೂರಿಸಂ ಕೌನ್ಸಿಲ್ ವರದಿ ನೀಡಿದೆ.
ದೇಶಗಳು ತಮ್ಮನ್ನು ಸಂರಕ್ಷಿಸಿಕೊಳ್ಳಲು ಖಚಿತವಾದ ಗಡಿರೇಖೆಗಳನ್ನು ಎಳೆದಾಗ ಅಕ್ರಮ ವಲಸಿಗರ ಸಮಸ್ಯೆ ಉಲ್ಬಣಗೊಂಡು ನಿಯತ್ತಿನ ಪ್ರವಾಸಿಗರ ಸಂಖ್ಯೆಯನ್ನು ಕ್ಷೀಣಗೊಳಿಸುತ್ತಿದೆ. ಪ್ರವಾಸಿಗಳು ಈಗ ತಾಣದ ಆಕರ್ಷಣೆಗಿಂತ ರಕ್ಷಣೆ, ಶಾಂತಿ ಮತ್ತು ಭದ್ರತೆ ಇರುವ ದೇಶಗಳಲ್ಲಿ ಪ್ರವಾಸ ಮಾಡಲು ಆಸಕ್ತಿ ತೋರುತ್ತಿದ್ದಾರೆ.
ಯಾವುದೇ ದೇಶದ ಗಡಿಯು ಜಗಳ ಕದನದ ಸುದ್ದಿಯಲ್ಲಿದ್ದರೆ, ಪ್ರವಾಸಿಗರು ಅಲ್ಲಿಗೆ ಹೋಗುವ ಯೋಚನೆಯನ್ನು ಮುಲಾಜಿಲ್ಲದೆ ಕೈಬಿಟ್ಟು ಬೇರೆಡೆಗೆ ಹೋಗಲು ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಶಾಂತಿಯುತ ಚಿಕ್ಕ ದೇಶಗಳು ಪ್ರವಾಸಿಗರನ್ನು ಆಕರ್ಷಿಸಿ ಲಾಭ ಮಾಡಿಕೊಳ್ಳುತ್ತಿವೆ. ಮಧ್ಯಪ್ರಾಚ್ಯಕ್ಕೆ ಆಗಮಿಸುವವರು ಕುಸಿದಾಗ, ಸ್ಪೇನ್, ಪೋರ್ಚುಗಲ್, ಪೆರುಗ್ವೆ, ಜಾರ್ಜಿಯಾ, ಕೋಸ್ಟ ರಿಕ ಮತ್ತು ಗ್ರೀಸ್ ದೇಶಗಳು ಪ್ರವಾಸಿಗರ ಆಗಮನದಲ್ಲಿ ಹೆಚ್ಚಳ ಕಂಡಿವೆ. ಪ್ರವಾಸಿಗರನ್ನು ಆಕರ್ಷಿಸಲು ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸಿಕೊಂಡಿವೆ.
“ಸಣ್ಣ ದೇಶಗಳು ದೊಡ್ಡ ದೇಶಗಳು ಕಳೆದುಕೊಂಡದ್ದನ್ನು ಮಾರಾಟ ಮಾಡುತ್ತವೆ” ಎನ್ನುವ ಪುರಾತನ ಮಾತನ್ನು ಜಗತ್ತು ಈಗ ಅನುಭವಕ್ಕೆ ಕೊಟ್ಟಿದೆ. ಯು.ಎಸ್, ಫ್ರಾನ್ಸ್, ದುಬೈ ಕಣ್ಣುಕೊರೈಸುವ ಶ್ರೀಮಂತಿಕೆಯನ್ನು ವ್ಯಾಪಾರಕ್ಕೆ ನಿಲ್ಲಿಸಿದರೆ ಪೋರ್ಚುಗಲ್, ಅಲ್ಬೇನಿಯಾ, ಕೋಸ್ಟ ರಿಕ ಮತ್ತಿತರೆ ಸಣ್ಣ ದೇಶಗಳು ಸರಳತೆ ಮತ್ತು ಸ್ನಿಗ್ಧತೆಯನ್ನು ಮಾರುತ್ತಿವೆ. ಫಲಿತಾಂಶವಾಗಿ ಜಾಗತಿಕ ಪ್ರವಾಸೋದ್ಯಮದ ಭೂಪಟ ಬದಲಾಗಿದೆ. ಪ್ರವಾಸದ ದಿಕ್ಕಿನಲ್ಲಿ ದೊಡ್ಡವರ ಅನಿಶ್ಚಿತತೆಯಿಂದ ಚಿಕ್ಕವರು ಶ್ರೀಮಂತರಾಗುತ್ತಿದ್ದಾರೆ.
ದೊಡ್ಡ ದೇಶಗಳು ಅಕ್ರಮ ವಲಸಿಗರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹೆಣಗುತ್ತಿರುವಾಗ ಅವರುಗಳನ್ನು ಹೊರಗಿಡಲು ಗೋಡೆಗಳನ್ನು ಕಟ್ಟುವಲ್ಲಿ ವ್ಯಸ್ತರಿರುವಾಗ ಸಣ್ಣ ದೇಶಗಳು ತಮ್ಮ ಬಾಗಿಲು ತೆರೆದು “ಅತಿಥಿ ದೇವೋಭವ” ಎನ್ನುತ್ತಿವೆ. ಅವುಗಳ ಸಭ್ಯತೆಯನ್ನು ಉಳಿಸಿಕೊಡುವ ಜವಾಬ್ದಾರಿ ಈಗ ಪ್ರವಾಸಿಗಳ ಮೇಲಿದೆ.
- ಅಂಜಲಿ ರಾಮಣ್ಣ – ವಕೀಲರು, ಲೇಖಕರು
