ಕವಿ, ಲೇಖಕರಾದ ಪ್ರತಿಭಾ ನಂದಕುಮಾರ್ ಅವರ ಪ್ರತಿಭಾ ಉವಾಚ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪ್ರತಿಭಾ ಉವಾಚ
ಲೇಖಕರು : ಪ್ರತಿಭಾ ನಂದಕುಮಾರ್
ಪ್ರಕಾಶನ : ಚಾರುಮತಿ ಪ್ರಕಾಶನ
ಬೆಲೆ : ೨೨೫ ರೂಪಾಯಿ
ಲಂಕೇಶ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳನ್ನು ಆರಿಸಿ ಪ್ರಕಟಿಸಿದ ಈ ಸಂಕಲನವನ್ನು , ಲೇಖಕಿ ಪ್ರತಿಭಾ ನಂದಕುಮಾರ್ ಅವರು ಪಿ ಲಂಕೇಶ್ ರಿಗೆ ಅರ್ಪಿಸಿರುವುದು ಸರಿಯಾಗಿಯೆ ಇದೆ. ತಮ್ಮ’ ಬಿಚ್ಚು’ ಕವನ ಸಂಕಲನದ ಮೂಲಕ ತಮ್ಮನ್ನು ಒಳಗೊಂಡಂತೆ, ಸಮಾಜ ತೊಟ್ಟ ವಿವಿಧ ಮುಖವಾಡಗಳನ್ನು ಬಿಚ್ಚಿಹಾಕಿದ ಶ್ರೇಯಸ್ಸು, ಕನ್ನಡದಲ್ಲಿ ಯಾರಿಗಾದರೂ ಸಲ್ಲಬೇಕಾದರೆ ಅದು ಲಂಕೇಶ್ ರಿಗೆ ಸರಿ. ಅವರು ವಾರಸುಧಾರಿಣಿಯಂತೆ ಇರುವ ಪ್ರತಿಭಾ ಇದನ್ನು ಅವರಿಗೆ ಅರ್ಪಿಸಿರುವುದು ಸಾರ್ಥಕವಾಗಿದೆ.
ಈ ಸಂಕಲನದ ಮೊದಲ ಲೇಖನ ಪೂಲನ್ ದೇವಿಯ ಕುರಿತು ಬಂದ ಬ್ಯಾಂಡಿಟ್ ಕ್ವೀನ್, ಕಫೂರ್ ಚಲನಚಿತ್ರದಲ್ಲಿ ಬರುವ ಗಂಡಿನ ಮೇಲೇರಿ ಹೆಣ್ಣು ಸಂಭೋಗ ನಡೆಸುವ ದೃಶ್ಯ ಕುರಿತು, ಉಂಟಾದ ವಿವಾದದ ಹಿನ್ನೆಲೆಯಲ್ಲಿ. ಯಾರೋ ಪತ್ರಕರ್ತರೊಬ್ಬರು ಇದು ನಮ್ಮ ಸಂಸ್ಕೃತಿಗೆ ವಿರುದ್ಧ ಎಂದು ಹುಯಿಲೆಬ್ಬಿಸಿದರು. ಅದಕ್ಕೆ ಇನ್ನೊಬ್ಬ ಖ್ಯಾತ ಪತ್ರಕರ್ತರಾದ ಖುಷವಂತ್ ಸಿಂಗ್ ಸರಿಯಾದ ಉತ್ತರ ಕೊಟ್ಟರು. ಇದನ್ನು ಕುರಿತು ಬರೆದ ಲೇಖಕಿ ಇದರಲ್ಲಿ ಕಾಮದಲ್ಲಿ ಹಿಂದೆ ನಮ್ಮಲ್ಲಿ ಇಲ್ಲದ ಮಡಿವಂತಿಕೆ, ಇದ್ದಕ್ಕಿದ್ದಂತೆ ಉಂಟಾಗಿರುವ ಕುರಿತು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಕಾಮದಲ್ಲಿ ಯಾವುದು ಸರಿ ಮತ್ತು ತಪ್ಪು ಎನ್ನುವುದು ಆಯಾ ಗಂಡು ಹೆಣ್ಣಿಗಳಿಗೆ ಸಂಬಂಧಿಸಿದ್ದು. ಅದರಲ್ಲಿ ಸಮಾಜ ಮೂಗುತೂರಿಸುವ ಅಗತ್ಯವಿಲ್ಲ, ಎಂಬ ಖಚಿತವಾದ ನಿಲುವು ತಳೆದಿದ್ದಾರೆ. ಅದರಂತೆ ನಮ್ಮ ಸಮಾಜದ ಗಂಡಿಗೊಂದು ಹೆಣ್ಣಿಗೊಂದು ನೀತಿಯ ಹಿಂದೆ ಇರುವ ಪೂರ್ವಾಗ್ರಹವನ್ನು ಬಿಚ್ಚಿಟ್ಟಿದ್ದಾರೆ ಇದನ್ನು ನನ್ನ ಸಂಗಾತಿಯೊಡನೆ ನೋಡಿ ಸಂತೋಷಪಟ್ಟ ನೆನಪು ಮರುಕಳಿಸಿತು. ಇದರ ಜೊತೆಗೆ ಇವರ ಆತ್ಮಚರಿತ್ರೆಯಲ್ಲಿ ಒಂದು ಕಡೆ ದಂಪತಿಗಳು ಸಂತೋಷವಾಗಿದ್ದಾಗ ಬಿಯರ್ ಕುಡಿದು ಸಂಭೋಗ ನಡೆಸಿದ್ದನ್ನು ದಾಖಲಿಸಿದ ನೆನಪು ಕೂಡಾ.
ಪದ್ಯ ಇಷ್ಟು ಲೈಟಾದರೆ ಹೇಗೆ ಸ್ವಾಮಿ ಎಂಬ ವೈ ಎನ್ ಕೆ ಅವರ ಪ್ರತಿಕ್ರಿಯೆಗೆ ಇನ್ನೊಂದು ಪ್ರತಿಕ್ರಿಯೆ ಎನ್ನುವಂತೆ ಅವರ ಈ ಲೇಖನ ರೂಪಗೊಂಡಿದೆ. ಪದ್ಯ ತನ್ನ ಸಂಕೀರ್ಣತೆಯನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದಕ್ಕೆ ಉತ್ತರವೆನ್ನುವಂತೆ “ಇಷ್ಟು ಲೈಟಾಗದಿದ್ದರೆ ಹೇಗೆ ಸ್ವಾಮಿ? ” ಎಂದಿದ್ದಾರೆ.

ಮುಂದಿನ ಅವರ ಬರಹ’ ಕಾವ್ಯದಲ್ಲಿ ಚಳಿಗಾಲ’. ಸಂಸ್ಕೃತದ ಪ್ರಸಿದ್ದ ಸುಭಾಷಿತದಿಂದ ಪ್ರಾರಂಭವಾಗಿ, ಜಯಂತಕಾಯ್ಕಿಣಿ ಅವರ ಕವಿತೆಯೊಂದಿಗೆ ಮುಗಿಯುತ್ತದೆ. ಮೊದಲಿನದು ಹೆಣ್ಣಿನ ಸ್ಥನ ಮಂಡಲದಿಂದ ಕೊನೆಯಾದರೆ , ಕೊನೆಯದು ನೀನಿರಲು ಪಕ್ಕ ಬೆಚ್ಚಗೆ, ಚಳಿಯ… ಎಂದು ಕೊನೆಗೊಳ್ಳುತ್ತದೆ. ಇವುಗಳ ನಡುವೆ ಹಲವಾರು ಭಾಷೆಗಳಲ್ಲಿ ಬಂದ ಚಳಿಗಾಲದ ವರ್ಣನೆಗಳನ್ನು ಕೊಡಲಾಗಿದೆ. ಎಲ್ಲದರಲ್ಲೂ ರಮ್ಯತೆ ಹಾಸುಹೊಕ್ಕಾಗಿದೆ ಸಹಜವಾಗಿಯೆ. ಬದುಕು ಬದಲಾದರೂ ,ಋತುಗಳು ನಿರಂತರ ಎಂದು ಲೇಖಕಿ ಭರತವಾಕ್ಯ ನುಡಿದಿದ್ದಾರೆ. ಬಂಡಾಯದ ಕಹಳೆ ಊದಿದ ಕವಿ ಸಿದ್ದಲಿಂಗಯ್ಯ ಅವರ ” ಆಹಾ ಚಳಿಯು ಬಂತಣ್ಣ” ಹಾಡು ಬಿಟ್ಟುಹೋಗಿದೆ. ಅದರಂತೆ ನಮ್ಮ ಮೇಷ್ಟ್ರು ಜಿ ಎಸ್ ಎಸ್ ಋತುಗಳನ್ನು ಕುರಿತು ಬರೆದ ಕವಿತೆ ಕೂಡಾ.
ಜಾನಪದವನ್ನು ಸಿನೆಮಾದಲ್ಲಿ ಬಳಸುವ ಕುರಿತ ಒಬ್ಬ ಸ್ವಾಮೀಜಿಯ ಆಕ್ಷೇಪಣೆಯ ಬಗ್ಗೆ ಪ್ರತಿಕ್ರಿಯಿಸುತ್ತಾ , ಹಾಗೆ ನಿರ್ಬಂಧ ವಿಧಿಸುವುದರ ವಿರುದ್ದ ಪ್ರತಿಭಟನೆ ಸಲ್ಲಿಸಿದ್ದಾರೆ. ಜಾನಪದವನ್ನು ನವೀಕರಿಸಿ ಬಳಸುವ ಸಿನೆಮಾದವರ ಸ್ವಾತಂತ್ರ್ಯವನ್ನು ಸಮರ್ಥಿಸಿದ್ದಾರೆ. – -ಮಾದೇವ ಕುರಿತ ಹಾಡನ್ನು . ಅಲ್ಲದೆ ಪತಿಯನ್ನು ಬೈಯ್ಯಬಾರದು ಎನ್ನುವುದು ನಾಗರಿಕ ಕಲ್ಪನೆ. ಅದಕ್ಕೆ ವಿರುದ್ದವಾಗಿ ,ಜಾನಪದದಲ್ಲಿ ಪತಿಯನ್ನು ಬಾಯಿಗೆ ಬಂದಂತೆ ಬೈಯಲು ಇರುವ ಸ್ವಾತಂತ್ರ್ಯವನ್ನು, ಸಾಧಾರವಾಗಿ ಮಂಡಿಸಿದ್ದಾರೆ.
ಸ್ತ್ರೀ ಶಕ್ತಿಯ ಬ್ರಹ್ಮಾಂಡ ಸ್ವರೂಪವನ್ನು, ಅವಳ ಅನಂತರೂಪಗಳ ಅನಾವರಣವನ್ನು, ಅವಳಿಗಿರುವ ಅನಂತ ಹೆಸರುಗಳನ್ನು ವೇದದ ಋಗ್ವೇದದ ಅಂಬ್ರಣಿಯ ಸೂಕ್ತವನ್ನು ಆಧರಿಸಿ, ಅವರ ಇನ್ನೊಂದು ಲೇಖನದಲ್ಲಿ ವಿವರಿಸಿದ್ದಾರೆ. ಶಕ್ತಿಯನ್ನು ಸ್ತ್ರೀಯೊಂದಿಗೆ ಸಮೀಕರಿಸಿರುವ ಅವರು, ಶಿವನ ಚಲನಶೀಲತೆಗೆ ಅವಳೆ ಕಾರಣಕರ್ತೆ ಎಂದು ಸಾಧಿಸಿದ್ದಾರೆ. ಸ್ತ್ರೀ ಕೇಂದ್ರಿತ ಇಲ್ಲಿನ ಬರಹಗಳಲ್ಲಿ ಹೆಣ್ಣು ಮಕ್ಕಳನ್ನು ಶೋಷಿಸುವ ಸಮಾಜದ ಗಮನ ಸೆಳೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಉದಾ: ಶ್ಯಾಮಿಲಿ ಎಂಬ ಸೆಕ್ಸ್ ಸಿಂಬಲ್ : ಹತ್ತರ ಹರೆಯದ ಹೆಣ್ಣುಮಕ್ಕಳನ್ನು ಮಾಧುರಿ ದೀಕ್ಷಿತ್ ನಂತೆ ಅಂಗಾಂಗಗಳನ್ನು ಕುಣಿಸುವಂತೆ ಮಾಡಲು, ಬಳಸಿಕೊಳ್ಳುವುದು ಘೋರ ಅಪರಾಧವೆ ಸರಿ ಮತ್ತು ಇದನ್ನು ಕುರಿತು ಯಾರೂ ಪ್ರತಿಭಟಸದಿರುವುದು, ಕೂಡಾ ಅನ್ಯಾಯ ಎಂದಿದ್ದಾರೆ.
ಹುಟ್ಟಿಸುವ ಯೋಗ್ಯತೆ ಕುರಿತ ಲೇಖನದಲ್ಲಿ ,ಹೆಣ್ಣು ಮಕ್ಕಳ ಹೆರುವ ಸಾಮರ್ಥ್ಯವನ್ನು ಅವರ ಆರ್ಥಿಕ ಸ್ಥಿತಿಗತಿಯನ್ನು ಅನುಸರಿಸಿ ನಿರ್ಧರಿಸಬೇಕೇ ಹೊರತು ,ಸರಕಾರ ಅದರಲ್ಲಿ ಮೂಗು ತೂರಿಸುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಇಂದಿನ ಅನೇಕ ಹೆಣ್ಣು ಮಕ್ಕಳಿಗೆ ಕೂಡಾ ಮುಟ್ಟು, ಸಂಭೋಗ, ಬಸಿರು ಇತ್ಯಾದಿಗಳ ಕುರಿತು ಇರುವ ಅಜ್ಞಾನವನ್ನು ಬಯಲಿಗೆಳೆದಿದ್ದಾರೆ. ಸ್ತ್ರೀವಾದ ಕುರಿತ ಲೇಖನದಲ್ಲಿ ಗಂಡಸರು ಮೂಗು ಮುರಿಯುವುದಂತೂ ಸರಿ, ಅದರ ಜೊತೆಗೆ ಹೆಣ್ಣುಮಕ್ಕಳಿಗೂ ಕೂಡಾ ಅದರ ಬಗ್ಗೆ ಸರಿಯಾದ ಕಲ್ಪನೆಯಿಲ್ಲ. ಹೆಣ್ಣು ಗಂಡುಗಳ ಹಕ್ಕುಗಳ ಕುರಿತು ಇರುವ ಪೂರ್ವಾಗ್ರಹಗಳನ್ನು ಇಲ್ಲಿ ಬಯಲಿಗೆಳೆದು , ಎಲ್ಲದಕ್ಕು ಅಕ್ಕಮಹಾದೇವಿ ಪರ್ಯಾಯವಲ್ಲ ಎಂದು ವಾಸ್ತವಕ್ಕೆ ಕನ್ನಡಿ ಹಿಡಿದಿದ್ದಾರೆ. ಗಂಡಿಗೊಂದು ಹೆಣ್ಣಿಗೊಂದು ನೀತಿ ಇರುವ ಈ ಸಮಾಜದಲ್ಲಿ ,ತನ್ನ ಸ್ತ್ರೀವಾದದ ಪಡಿಪಾಟಲನ್ನು, ಲೇಖನದ ಕೊನೆಗೆ ಸ್ವಾರಸ್ಯಕರವಾಗಿ ಪಟ್ಟಿಮಾಡಿದ್ದಾರೆ.
ರ್ಯಗಿಂಗ್ ಹೆಸರಿನಲ್ಲಿ ಕಾಲೇಜುಗಳಲ್ಲಿ ಕೆಲವು ವಿದ್ಯಾರ್ಥಿಗಳು ಉಂಟುಮಾಡಿರುವ ಅನಾಹುತಗಳನ್ನು, ಅದರ ಪರಿಣಾಮಗಳು ಮತ್ತು ಅದಕ್ಕೆ ಒಳಗಾದ ಕೆಲವು ವಿದ್ಯಾರ್ಥಿಗಳ ಬದುಕನ್ನು ಮೂರಾಬಟ್ಟೆಯಾಗಿಸಿರುವುದನ್ನು, ಸೋದಾಹರಣೆಗಳೊಂದಿಗೆ ಇಲ್ಲಿ ನಿರೂಪಿಸಲಾಗಿದೆ. ಅದನ್ನು ತಡೆಯಲು ಕಾಲೇಜು ಆಡಳಿತಮಂಡಳಿಗಳು, ಮತ್ತು ಪೊಲೀಸರು ಜಂಟಿಯಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸಿರುವುದಲ್ಲದೆ , ಕೆಲವು ಮನೆಯಲ್ಲಿ ಮಕ್ಕಳನ್ನು ಸರಿಯಾಗಿ ಬೆಳೆಸದಿರುವುದು, ಇದಕ್ಕೆ ಕಾರಣವೆಂದು ಸರಿಯಾಗಿಯೆ ಸೂಚಿಸಲಾಗಿದೆ. ಇದರಿಂದಾಗಿ ಮೊದಲಿನ ವೀರದ ಸ್ಥಾನವನ್ನು ಇಂದು ಕ್ರೂರ ಆಕ್ರಮಿಸಿದೆ ಎಂದು ಸರಿಯಾಗಿಯೆ ಗುರುತಿಸಲಾಗಿದೆ. ಗುಂಪುಗೂಡಿ ಕೆಲವು ವಿದ್ಯಾರ್ಥಿಗಳು ಮಾಡುವ ಈ ರ್ಯಾಗಿಂಗ್ ಇಂದು ಕಾಲೇಜುಗಳಲ್ಲಿ ದೊಡ್ಡ ತೊಡಕಾಗಿರುವುದರ ಕಡೆ ಕಾಳಜಿಪೂರ್ವಕ ಗಮನಸೆಳೆದಿರುವುದು, ಈ ಬರಹದ ವೈಶಿಷ್ಟ್ಯ ಇಂದಿಗೂ ಅದು ಪ್ರಸ್ತುತವಾಗಿದೆ.
ಸಲಿಂಗ ಕಾಮ ಸಂಬಂಧಗಳ ಕುರಿತು, ನಮ್ಮ ಸಮಾಜದಲ್ಲಿ ಇರುವ ಪೂರ್ವಗ್ರಹಗಳನ್ನು ಬಯಲಿಗೆಳೆದಿರುವ ಇನ್ನೊಂದು ಲೇಖನದಲ್ಲಿ, ಅದನ್ನು ಅನೈಸರ್ಗಿಕ ಎಂದು ಪರಿಗಣಿಸುವ ಸಮಾಜದ ನಡೆಯನ್ನು, ಯಾವುದು ನೈಸರ್ಗಿಕ ಮತ್ತು ಅದನ್ನು ನಿರ್ಧರಿಸುವವರು ಯಾರು ಸರಿಯಾಗಿಯೆ ಪ್ರಶ್ನಿಸಲಾಗಿದೆ. ಪ್ರಾಚೀನ ಕಾಲದಿಂದಲೂ ಇರುವ ಈ ಸಂಬಂಧಗಳನ್ನು ಒಪ್ಪಿ, ಅದನ್ನು ಆಯಾ ಗಂಡು ಹೆಣ್ಣುಗಳ ಪಾಲಿಗೆ ಬಿಡುವುದೆ ಸರಿಯಾದ ಕ್ರಮ ಎಂಬ ನಿಲುವಿಗೆ ತಲುಪಲಾಗಿದೆ.
ತಾಯ್ತನದ ಹೊಣೆಗಾರಿಕೆಯನ್ನು ವೈಜ್ಞಾನಿಕವಾಗಿ ನಿಭಾಯಿಸುವುದನ್ನು, ತಮ್ಮ ಅನುಭವವನ್ನು ಆಧರಿಸಿಯೆ ನಿರೂಪಿಸುವ ಮೂಲಕ, ಹೊಸ ತಾಯಿಯರಿಗೆ ಮಾದರಿಯಾಗುವ ಲೇಖನ ಇಲ್ಲಿದೆ. ಅದರಂತೆ ದೇಹವೆಂಬುದು :ಹೆಣ್ಣಾಗುವ ವಿವಿಧ ಪ್ರಕ್ರಿಯೆಗಳನ್ನು, ಉಡುಗೆ ತೊಡುಗೆಗಳನ್ನು ಬದಲಾಯಿಸಲು ತಾಯಿಯಾದ ಕೂಡಲೆ ಮೀರುವ ಸಂಕೋಚಗಳನ್ನು , ಭಾವರಾಗಗಳನ್ನು ಕಲ್ಲಿನಂತಾಗುವ ಸ್ಥಿತಿಯ ಮೇಲೆ, ಮತ್ತೆ ಭಾವ ಸ್ಪಂದನೆಯ ಉಗಮಗಳನ್ನು , ಹೀಗೆ ಹೆಣ್ಣಿನ ವಿವಿಧ ಭಾವಗಳ ಅನಾವರಣವನ್ನು ವಸ್ತುನಿಷ್ಟವಾಗಿ ಇನ್ನೊಂದು ಬರಹದಲ್ಲಿ ಮಾಡಲಾಗಿದೆ.
ಹೆಣ್ಣಾಗಿರುವುದು ಜೊತೆಗೆ ಕವಿಯಾಗಿರುವುದು: ಬರಹದಲ್ಲಿ ಕವನ ಬರೆಯುವುದಕ್ಕಿಂತ ಹೆಣ್ಣಾಗಿರುವುದೆ ಕಷ್ಟ, ಎಂದು ಬರೆಯುತ್ತಾ ತಾನು ಬರೆಯುವುದು, ಎಲ್ಲರು ಮಲಗಿದ ಮೇಲೆ ಅದಕ್ಕಾಗಿ ತಾನು ನಿದ್ದೆ ತೊರೆಯಬೇಕು ಎಂದಿರುವುದಲ್ಲದೆ, ತಾನೊಮ್ಮೆ ಕೆಟ್ಟ ಗಂಡನ ಕುರಿತು ಬರೆದಾಗ ಅದನ್ನು ಓದಿದ ತನ್ನ ಗಂಡ, ತಕರಾರು ಮಾಡಿದ್ದನ್ನು ದಾಖಲಿಸಿದ್ದಾರೆ. ಹೀಗೆ ಬರೆದ ಲೇಖಕಿಯೆ, ಮುನ್ನುಡಿ ತಾನು ಬರೆಯುವುದನ್ನು ಓದದ ಮನೆಯವರ ಸಹಕಾರಕ್ಕೆ, ಧನ್ಯವಾದ ಹೇಳಿರುವುದು ಅದಕ್ಕೆ ವಿರುದ್ದವಾಗಿದೆ. ಅಲ್ಲದೆ ಲೇಖನದ ಕೊನೆಗೆ ಪ್ಯಾರಿಸನಲ್ಲಿ ಶ್ಯಾಮಲೆಯ ಫೋಟೋ ತೆಗೆಯಲು ಹೊರಟಾಗ, ಅವಳ ಗಂಡ ಒಂದೇ ಒಂದು ಎಂದು ಅನುಮತಿಕೊಟ್ಟಾಗ, ತಮ್ಮ ಈ ವೈಯಕ್ತಿಕ ಅನುಭವವನ್ನು ಆಧರಿಸಿ , ಜಗತ್ತಿನ ಗಂಡಸರು, ಹೆಂಗಸರೆಲ್ಲಾ ಒಂದೇ ಎಂದು ಷರಾ ಬರೆದಿರುವುದು ಸಾಮಾನ್ಯೀಕೃತ ಹೇಳಿಕೆಯಾಗಿದೆ.

ಅನ್ನಪೂರ್ಣೆ ಸದಾಪೂರ್ಣೆ: ಹೆಣ್ಣಿಗು ಗಂಡಿಗೂ ಇರುವ ತಾರತಮ್ಯ ಹೆಣ್ಣು ಸದಾ ಅಡುಗೆ ಮಾಡಬೇಕೆಂದು ನಿರೀಕ್ಷಿಸುವ ಸಮಾಜವೆ , ಗಂಡು ಅದನ್ನು ಮಾಡಹೊರಾಟಾಗ ಹೆಣ್ಣಿನ ಮೇಲೆ ಗೂಬೆ ಕೂರಿಸುವುದು ಸಾಮಾನ್ಯವಾಗಿದೆ. ಇವರು ಯುರೋಪ್ ಪ್ರವಾಸಕ್ಕೆ ಹೊರಟಾಗ ಇವರನ್ನು ಕೇಳಿದ ಮೊದಲ ಪ್ರಶ್ನೆ ಮನೆಯಲ್ಲಿ ಯಾರು ಅಡಿಗೆ ಮಾಡುತ್ತಾರೆ ಎಂದು. ಬಂದ ಮೇಲೆ ಮಕ್ಕಳು ಅಪ್ಪ ಮಾಡಿದ ಅಡುಗೆ ಉಂಡು ಇನ್ನೂ ಗುಂಡು ಗುಂಡಾಗಿದ್ದರು. ಅದನ್ನು ಕೇಳಿ ಅವರ ಗಂಡನ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ. ಸಮತಾವಾದಿ ಲೇಖಕರೆಂದು ಖ್ಯಾತರಾದ ನಿರಂಜನರು ಮನೆಯಲ್ಲಿ ಜೇಡರ ಬಲೆ ಕಟ್ಟಿಕೊಂಡಿರುವುದನ್ನು, ಅನಪಮಾ ನಿರಂಜನರಿಗೆ ತೋರಿಸಿ ” ಜೇಡರ ಬಲೆ ಕಟ್ಡಿಕೊಂಡಿದೆ” ಎಂದರೆ ಅದಕ್ಕೆ ಅನುಪಮ ಅವರ ಉತ್ತರ” ಕಟ್ಟಿಕೊಂಡಿದೆ” ಎಂಬ ಉಲ್ಲೇಖದೊಂದಿಗೆ ಅಂತ್ಯಗೊಂಡಿರುವುದು, ಬರಹಕ್ಕೂ ಬದುಕಿಗೂ ಇರುವ ಅಂತರದ ಮೇಲಿನ ವಿಡಂಬನೆಯಾಗಿದೆ. ನಿರಂಜನರು ಅಂಗವಿಕಲರು ಎಂಬುದನ್ನು ಲೇಖಕಿ ಮರೆತಂತಿದೆ.
ಹೈಟೆಕ್ ಚೆಲುವೆಯರು: ಕೇವಲ ತಾರೆಯರಿಗೆ ಮಾತ್ರ ಮೀಸಲಾದ ಅಂಗಾಂಗಳ ಪ್ಲಾಸ್ಟಿಕ್ ಸರ್ಜರಿ ಈಚೆಗೆ, ಮಧ್ಯಮವರ್ಗದವರಿಗೂ ವಿಸ್ತಿರಿಸುತ್ತಿರುವುದರ ಕುರಿತ ಕಾಳಜಿ ಅವರ ಇನ್ನೊಂದು ಬರಹದ ವಸ್ತುವಾಗಿದೆ. ಅದರಲ್ಲಿ ಅವರ ಗಂಡನನ್ನು ಒಳಗೊಂಡಿರುವುದು ಅವರ ವಸ್ತುನಿಷ್ಠೆಗೆ ಸಾಕ್ಷಿ .
ಹಿಂಸಿಸುವ ಹೆಂಗಸರು: ಕಾನೂನು ತಮ್ಮ ಪರವಾಗಿದೆ ಎಂದು ತಿಳಿದ ಕೆಲವು ಹೆಂಗಸರು ಅದನ್ನು ದುರುಪಯೋಗಪಡಿಸಿಕೊಂಡ ಹಲವು ಉದಾಹರಣೆಗಳನ್ನು ಈ ಬರಹದಲ್ಲಿ ನೀಡಲಾಗಿದೆ. ಅವುಗಳ ಪರಿಣಾಮವಾಗಿ ಇಂದು ಗಂಡಂದಿರ ಸಂರಕ್ಷಣಾ ಸಂಘಗಳು ಹುಟ್ಟಿಕೊಂಡಿರುವುದಕ್ಕೆ ಇದಕ್ಕೆ ನಿದರ್ಶನ. ಇದು ಕೂಡಾ ಲೇಖಕಿಯ ವಸ್ತುನಿಷ್ಟತೆಗೆ ಸಾಕ್ಷಿ.
ಪುರುಷರ ನಪುಂಸಕತ್ವ: ಹೆಣ್ಣಿನ ಬಂಜೆತನಕ್ಕೆ ಅವಳೇ ಕಾರಣವೆಂದು ಅನಂತ ಕಾಲದಿಂದ ಹಂಗಿಸುತ್ತ ಬಂದ ನಮಗೆ ,ಅದಕ್ಕೆ ಪುರುಷರ ನಪುಂಸಕತ್ವ, ಅವನ ವೀರ್ಯಾಣುಗಳ ಸಂಖ್ಯೆಯ ಕೊರತೆ ಕೂಡಾ ಕಾರಣ ಇರಬಹುದು. ಅದು ಕೂಡಾ ಹೆಣ್ಣಿನ ಬಂಜೆತನದಷ್ಟೆ ಇಂದು ಸಮಸ್ಯಾತ್ಮಕವಾಗಿದೆ, ಎಂಬುದರ ಅರಿವಾಗಲು, ಈ ಬರಹ ತನ್ನ ವೈಜ್ಞಾನಿಕ ವಿವರಗಳಿಂದ ನೆರವಿಗೆ ಬರುತ್ತದೆ,
ಮತ್ತು ಅದನ್ನು ಕುರಿತ ಅನೇಕ ತಪ್ಪು ತಿಳಿವಳಿಕೆಯನ್ನು ನಿವಾರಿಸುತ್ತದೆ ಈ ಬರಹ. ಇಲ್ಲಿ “ಆರಾಳುದ್ದದ ಬಾವಿಗೆ ಮೂರಾಳುದ್ದದ ಹಗ್ಗ” ಆಲನಹಳ್ಳಿ ಕೃಷ್ಣರ ಕಾಡು ಕಾದಂಬರಿಯಲ್ಲಿ ಬರುವ ಹೇಳಿಕೆಯನ್ನು ಉದ್ದರಿಸಲಾಗಿದೆ.ಸ್ತ್ರೀ ಲೈಂಗಿಕತೆಯ ದ್ಯೋತಕವಾಗಿ.
ಸೈಬರ್ ಸೆಕ್ಸ್: ವಿಕೃತಕಾಮಿಗಳ ಗಂಡು ಹೆಣ್ಣುಗಳ ಬೇಧವಿಲ್ಲದೆ, ಅವರ ನೆರವಿಗೆ ಬಂದಿರುವ ಈಚಿನ ತಂತ್ರಜ್ಞಾನದ ಪರಿಣಾಮವಾಗಿದೆ. ಇದು ನಿರಪಾಯಕಾರಿಯಾಗಿದೆ. ಅದನ್ನು ಬಳಸುವವರ ಕ್ಷಣಿಕ ಲೈಂಗಿಕ ತೃಪ್ತಿಗೆ ಕಾರಣವಾಗುತ್ತದೆ. ಇದು ಕೇವಲ ವಿದೇಶೀಯರಿಗೆ ಮಾತ್ರ ಎನ್ನವವರು, ಭಾರತೀಯ ಮಧ್ಯಮವರ್ಗಕ್ಕೂ ಕೂಡಾ ಇದು ಹಬ್ಬುತ್ತಿದೆ ಎನ್ನುವುದನ್ನು ಇಲ್ಲಿ ಸಾಧಾರವಾಗಿ ನಿರೂಪಿಸಲಾಗಿದೆ.
ಕುಡುಕಗಂಡ: ಲೇಖನದಲ್ಲಿ ಕುಡುಕ ಗಂಡನನ್ನು ಕಟ್ಟಿಕೊಂಡು ಏಗಿದ, ಪಾಶ್ಚಾತ್ಯ ಲೇಖಕಿಯೊಬ್ಬರ ಪ್ರೇಮ ಕುರಿತ ಕಾದಂಬರಿಯ ಓದನ್ನು ಆಧರಿಸಿ ಬರೆದ ಪದ್ಯವಿದೆ. ಅದರಲ್ಲಿ ಅವಳು ಎದುರಿಸಿದ ಸವಾಲುಗಳನ್ನು, ಸಮಾಜದ ಪೂರ್ವಗ್ರಹ ಪೀಡಿತ ಅಭಿಪ್ರಾಯಗಳನ್ನು ಆಪ್ತವಾಗಿ ಅನಾವರಣ ಮಾಡಲಾಗಿದೆ.
ತನ್ಮಯಿ ; ಸಾದಾ ಸೀದಾ ಮದುವೆಯಾದ ಈ ಹೆಸರಿನ ಇವರ ಗೆಳತಿಯೊಬ್ಬಳು ಪ್ರವಾಸಕ್ಕೆ ಹೋದಾಗ, ಈಗಾಗಲೆ ಮದುವೆಯಾಗಿ ಮಕ್ಕಳನ್ನು ಹೊಂದಿದ ಗಂಡಸೊಬ್ಬನ ಪ್ರೇಮಪಾಶಕ್ಕೆ ಒಳಗಾದಾಗ,ಎರಡೂ ಸಂಸಾರಗಳು, ಎದುರಿಸುವ ಸವಾಲುಗಳನ್ನು ಇನ್ನೊಂದು ಬರಹದಲ್ಲಿ ಬಿಚ್ಚಿಡಲಾಗಿದೆ.
ಅವಳು- ಇವಳು: ಅವರ ಇನ್ನೊಂದು ಬರಹದಲ್ಲಿ ತಮ್ಮ ಹೆಂಡತಿಯರು ಗರತಿಯರಾಗಿರಬೇಕು ಎಂದು ಪೂರ್ವಗ್ರಹ ಹೊಂದಿದ ಗಂಡಂದಿರು, ಟಿ.ವಿ ಯಲ್ಲಿ ಬರುವ ಅರೆಬತ್ತಲೆ ಹೆಣ್ಣುಗಳನ್ನು ಕಣ್ಣು ಕಣ್ಣು ಬಾಯಿ ಬಿಟ್ಟುಕೊಂಡು ನೋಡುವುದನ್ನು ಬಯಲಿಗೆಳೆದಿದ್ದಾರೆ.
ಕನಸು,/ ಲಾಜಿಕ್: ವಾಸ್ತವ ಬದುಕಿನ ಹಲವು ವೈಪರೀತ್ಯಗಳಿಗೆ ,ಈ ಬರಹದಲ್ಲಿ ಕನ್ನಡಿ ಹಿಡಿದಿರುವ ಈ ಲೇಖಕಿ ಎಲ್ಲದಕ್ಕೂ ಲಾಜಿಕ್ ಅನ್ವಹಿಸಬಾರದು, ಎಂದು ಷರಾ ಬರೆದು,
ಕನಸುಗಳು ಇರಬೇಕು ಬದುಕು ಸಹ್ಯವಾಗಲು ಎಂಬ ನಿಲುವಿಗೆ ಬಂದಿದ್ದಾರೆ. ಇದು ಏಕಮುಖಿ ನಿಲುವೆ ಸರಿ.
ಸಾವನ್ನೆ ಬದುಕು ಮಾಡಿಕೊಂಡವರು: ಸ್ಮಶಾನದಲ್ಲಿ ಗುಂಡಿ ತೋಡುವವರ ಸಂದರ್ಶನ ಮಾಡಿದ ಈ ಲೇಖಕಿ, ಎಲ್ಲರೂ ಆಫೀಸ್ ಕೆಲಸವೆ ಬೇಕು ಎಂದರೆ ಈ ಕೆಲಸ ಮಾಡುವವರು ಯಾರು, ಎಂಬ ಅವನ ಪ್ರಶ್ನೆಗೆ ಅಪ್ರತಿಭರಾಗುತ್ತಾರೆ. ಅದರಂತೆ ಕ್ರಿಶ್ಚಿಯನ್ ರ ಸ್ಮಶಾನಕ್ಕೆ ಹೋಗಿ, ಅಲ್ಲಿ ಕೂಡಾ ಗುಂಡಿ ತೋಡುವವರನ್ನು ಸಂದರ್ಶನ ಮಾಡಿ ‘ಇಲ್ಲಿ ಬಂದು ಪ್ರೇಯರ್ ಮಾಡುವವರಿಗೆ ಶಾಂತಿ ಸಿಗಲು ಇದನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅಗತ್ಯ” ಎಂದಾಗ ಹೌದಲ್ಲವೆ ಎಂದು ಲೇಖಕಿ ತಲೆದೂಗುತ್ತಾರೆ. ಪಾರ್ಸಿಗಳು ಹೆಣಗಳನ್ನು ಹಕ್ಕಿಗಳಿಗೆ ಅರ್ಪಿಸಿ, ಅವು ಬಿಟ್ಟ ಮೂಳೆಗಳನ್ನು ಅಗ್ನಿಗೆ ಅರ್ಪಿಸುವುದು, ಶುದ್ದವಾದುದನ್ನು ಮಾತ್ರ ಅದಕ್ಕೆ ಅರ್ಪಿಸಬೇಕು ಎಂದು ತಿಳಿದು ಬೆರಗಾಗುತ್ತಾರೆ. ಇದನ್ನು ಓದಿ ನನ್ನ ಸಂಗಾತಿ ಮೈಸೂರಿನ ಸ್ಮಶಾನವೊಂದರಲ್ಲಿ ಗುಂಡಿ ತೋಡುವ ನಿಂಗಮ್ಮನನ್ನು, ಸಂದರ್ಶಿಸಿ ಬರೆದ ಲೇಖನದ ನೆನಪು ಮರುಕಳಿಸಿತು. ಬದುಕು: ಸೌಂದರ್ಯವೆ ಮೈವೆತ್ತಂತಿದ್ದ ತನ್ನ ತಾಯಿಯ ತನ್ನ ಭಾವಚಿತ್ರವನ್ನು ತೆಗೆಯಬಾರದು, ಎಂಬ ಷರತ್ತಿನ ನಿರ್ಬಂಧಕ್ಕೆ ಒಳಗಾಗಿ ತಾನು ಚಿತ್ರ ಕಲೆಯನ್ನು ಕಲಿಯದೆ ಹೋದ ಕೊರಗನ್ನು ಒಬ್ಬ ಹಿರಿಯರು ಹಂಚಿಕೊಂಡದ್ದನ್ನು ಕೇಳಿ, ತನ್ನ ಹನ್ನೆರಡು ಮಕ್ಕಳ ತಾಯಿಯ ನೆನಪು ಬರುತ್ತದೆ. ಪಾರ್ಕಿನಸ್ ನ ಗೆ ಒಳಗಾದರೂ ತನ್ನ ಜೀವನ ಪ್ರೀತಿಯನ್ನು ಕಳೆದುಕೊಳ್ಳದ ತಾಯಿಯ ನೆನಪಿಗಾಗಿ , ಅವರ ಮೂಗುತಿಯನ್ನು ತೆಗೆದಿಟ್ಟುಕೊಳ್ಳುತ್ತಾರೆ. ಡೆತ್ ಆಫ್ ಮದರ್ ಲೇಖಕಿಯ ಹೃದಯಸ್ಪರ್ಶಿ ಕವನ ಅನುವಾದ ಮಾಡಿ ಕೊಟ್ಟಿದ್ದಾರೆ.
ಸಂಸಾರ ತ್ಯಜಿಸಿ ಹೋದ ಅಕ್ಕಮಹಾದೇವಿಯ ಜೊತೆಗೆ ತನ್ನನ್ನು ಗುರುತಿಸಿಕೊಳ್ಳಲು ಒಲ್ಲದ ಈ ಜೀವನ ಪ್ರೀತಿಯ ಲೇಖಕಿ, ಅವಳ ಒಂದು ವಚನದಲ್ಲಿ ಪ್ರಕಟವಾಗಿರುವ ” ಲೋಕದ ಚೇಷ್ಟೆಗೆ ರವಿ ಬೀಜವಾದಂತೆ” ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವುದು, ಇಲ್ಲಿನ ಹಲವು ಬರಹಗಳಿಗೆ ಕಾರಣವಾಗಿದೆ. ಕನ್ನಡದ ಅಂತರರಾಷ್ಷ್ರೀಯ ಖ್ಯಾತಿ ಪಡೆದ ವಿರಳ ಕವಿಗಳಲ್ಲಿ ಒಬ್ಬರಾದ ಪ್ರತಿಭಾ, ಈ ಲೇಖನಗಳ ಸಂಕಲನದಲ್ಲಿ ಈ ನಾಡು ಎದುರಿಸುತ್ತಿರುವ ಹಲವಾರು ಸಮಕಾಲೀನ ಜ್ವಲಂತ ಸಮಸ್ಯೆಗಳಿಗೆ_ ಕನ್ನಡಿ ಹಿಡಿದಿರುವುದಲ್ಲದೆ, ಅವುಗಳಿಗೆ ವೈಜ್ಞಾನಿಕ ಪರ್ಯಾಯಗಳನ್ನು ಸೂಚಿಸಿರುವುದು ಈ ಕೃತಿಯ ವೈಶಷ್ಟ್ಯವೆಂದು ಕರೆಯಬಹುದು. ಇದಕ್ಕಾಗಿ ಲೇಖಕಿಗೆ ಅಭಿನಂದನೆ. ಇವರು ನನ್ನ ಸಂಗಾತಿಯ ಗೆಳತಿ ಎನ್ನುವುದು ನನಗೆ ವೈಯಕ್ತಿಕವಾಗಿ ಹೆಮ್ಮೆಯ ಸಂಗತಿ.
ಗಮನ ಸೆಳೆದ ಮೂರು ಮಾನವೀಯ ಪ್ರಸಂಗಗಳು:
* ಪುಟ್ ಪಾತ್ ನಲ್ಲಿ ಒಲೆ ಹಚ್ಚಲು ಗೃಹಿಣಿಯ ಪಡಿಪಾಟಲು ನೋಡಲಾರದ ಲೇಖಕಿ, ಅಂಗಡಿಯ ಹೊರಗೆ ಬೇಡವೆಂದು ಎಸೆದಿದ್ದ ರಟ್ಟಿನ ಪೆಟ್ಟಿಗೆಗಳನ್ನು ನೋಡಿ, ಅಂಗಡಿಯವನ ಅನುಮತಿ ಪಡೆದು, ಅವನ್ನು ಆ ಗೃಹಿಣಿಗೆ ತಂದುಕೊಡುವುದು.
- ಪ್ರಾಮಾಣಿಕವಾಗಿ ದುಡಿದು ನಿವೃತ್ತರಾದ. ಐ ಎ.ಸ್ ಅಧಿಕಾರಿಯೊಬ್ಬರು, ಮಗನಿಗೆ ತನ್ನ ನಿವೃತ್ತಿ ವೇತನವನ್ನು ಕೊಟ್ಟು ಖಾಲಿ ಕೈಯಾಗಿ, ತನ್ನ ಪತ್ನಿಯ ಪಾನಿಪೂರಿ ತಿನ್ನುವ ಆಸೆಯನ್ನು ಈಡೇರಿಸಲಾರದೆ ಹೋದಾಗ, ಅದನ್ನು ಕೇಳಿ ಕರಗಿಹೋದ ಲೇಖಕಿ, ಪಾನಿಪೂರಿ ತೆಗೆದುಕೊಂಡು ಹೋಗಿ ಅವರನ್ನು ಕರೆದುಕೊಡುವುದು.
- ಯಾವುದೋ ಪ್ರಶಸ್ತಿಗೆ ಎರಡು ಸಾವಿರ ಬಂದ ಗೆಳತಿ ಅದನ್ನು ಯುದ್ದನಿಧಿಗೆ ಕೊಡುವೆನೆಂದು ಹೇಳಿದಾಗ, ಒಂದು ಸಾವಿರ ಕೊಡು ಎಂದು ಜೊತೆಗೆ ಹೋಗಿ ಕೊಟ್ಟು ಬರುವುದು.
- ಆಫ್ರಿಕಾದ ಪ್ರಸಿದ್ದ ಬರಹಗಾರ ಓಲೆ ಸೊಯಿಂಕಾ ಅವರ ಜೈಲಿನಲ್ಲಿ ಕಬ್ಬಿಣದ ಸರಪಣಿಯಲ್ಲಿ ಬಂಧಿಸಿದಾಗ ಬರೆದ ಟಿಪ್ಪಣಿಯ ಅನುವಾದ. ಅದರಲ್ಲಿ ಅದನ್ನು ಹಾಕಿಕೊಂಡು ಟಾಯ್ಲೆಟ್ ಗೆ ಹೋಗುವ ಕಷ್ಟದಿಂದ ಪಾರಾಗಲು, ಒಂದೇ ಲೋಟ ನೀರು ಕುಡಿದು ಇರುವುದು. ಅವರು ಬರೆದದ್ದು ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಬಂದಾಗ ಅವರ ಜನಪ್ರಿಯತೆಯನ್ನು ಕಂಡು ಕರುಬಿ ಬೇರೆ ಜೈಲಿಗೆ ವರ್ಗಾಯಿಸುವುದು. ಅವರ ಎಲ್ಲಾ ಕೃತಿಗಳು ಕನ್ನಡಕ್ಕೆ ಬರಬೇಕು ಎಂದು ಲೇಖಕಿಯ ಅಪೇಕ್ಷೆ.
- ಹದಿಹರೆಯದವರಲ್ಲಿ ಇಂದು ಹೆಚ್ಚುತ್ತಿರುವ ಆತ್ಮಹತ್ಯೆ ಪ್ರವೃತ್ತಿಗೆ ಕಾರಣಗಳನ್ನು ಮತ್ತು ಅದಕ್ಕೆ ಪರ್ಯಾಯವಾಗಿ ಹಲವಾರು ಉಪಯುಕ್ತ ಸಲಹೆ ಸೂಚನೆಗಳನ್ನು ತಂದೆತಾಯಿಗಳಿಗೆ ಕೊಟ್ಟಿರುವುದು.
ವ್ಯವಸ್ಥೆಯ ಕ್ರೌರ್ಯದ ಸ್ವರೂಪವನ್ನು ತೋರಿಸಲು , ಈ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ ,ಎನ್ನುವ ಕೊನೆಯ ಬರಹದಲ್ಲಿ ,ನಮಗೆ ಪಠ್ಯವಾಗಿದ್ದ ಕಾಮೂನ ಔಟ್ ಸೈಡರ್ ಕೃತಿಯ ಒಂದು ಭಾಗವನ್ನು ಅನುವಾದ ಮಾಡಿಕೊಟ್ಟಿದ್ದಾರೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
