ಅಂಚೆ ದಿನದಂದು ಅಂಚೆ ಇಲಾಖೆಯ ಎಲ್ಲ ಬಾಂಧವರಿಗಾಗಿ ಕವಿ ಶಿವದೇವಿ ಅವನೀಶಚಂದ್ರ ಅವರು ಬರೆದ ಈ ಕವನವನ್ನು ಪೂರ್ತಿಯಾಗಿ ಓದಿ…
ಅಂಚೆಯೊಂದು ಬರಿ ಸಾರಿಗೆಯಲ್ಲ
ಅದು ಬಾಂಧವ್ಯದ ರಹದಾರಿ
ಅಂಚೆಯಣ್ಣನೆಂದರೆ ಬರಿ ಪೇದೆಯಲ್ಲ
ಆಪ್ತತೆಯ ರೂವಾರಿ
ಆ ನೀಲಿ ಹಳದಿ ಕಾಗದ
ಬರಿಯ ಹಾಳೆಯಲ್ಲ
ಎದೆಗಳಲ್ಲಿ ದ್ರವಿಸುವ
ಭಾವಗಳ ಒರತೆ
ಕಷ್ಟಸುಖಗಳ ಕಂತೆ
ಇಷ್ಟಗಳ ಪ್ರೇಮಲತೆ
ದೂರದೂರಿನ ವರ್ತಮಾನಗಳ
ಐತರುವ ಜೀವಂತಿಕೆ
ಎಷ್ಟು ಕಾತರ ಏನು ಆತುರ
ತೆರೆದು ನೋಡಲು ಪತ್ರವ
ಅದೆಂತಹ ಭಾವ ಜೀವಮಧುರ
ಆ ಪ್ರೀತಿಯ ಮೊರೆತವ ಆಲಿಸಲು
ಯೋಗ ಕ್ಷೇಮ ವಿಹಿತ
ಉಭಯ ಕುಶಲೋಪರಿಗೆ
ಸದಾ ತುಡಿತ
ಬರೆಹದಲಿ ತುಂಬಿದ ಪ್ರೀತಿ ಕಾಳಜಿ,ವಾತ್ಸಲ್ಯ
ಕಣ್ಣಿಗೂ ಮನಸಿಗೂ ತಂಪು ತಂಪು..
ಲಿಪಿಗಿಲ್ಲದ ದನಿಯೂ ಬರೆದವರ ಮುಖದಲ್ಲಿ
ಹೊಮ್ಮಿದ ಅಕ್ಕರೆಯ ನುಡಿಯೂ
ಬೆರೆತು ಹೊಮ್ಮುವ ಖುಷಿಯ ಗೀತ..
ಬಂದನೇನು ಅಂಚೆಯಣ್ಣ…?
ಕೇಳಿಸಿತೇ ಅವನ ಸೈಕಲಿನ ಗಂಟೆ ದನಿ..
ಇವತ್ತೂ ನಮಗಿಲ್ವಾ ಕಾಗದ
ಎಂಬ ಎಷ್ಟು ಮಂದಿಯ ನಿಟ್ಟುಸಿರಿಗೆ ಸಾಂತ್ವನವಾಗಿ
ವಿಹಿತವನೆ ನುಡಿದು
ತನ್ನ ದಾರಿಯ ಹಿಡಿದು
ಮರೆಯಾಗುವ ಆ ತಿರುವಿನಲ್ಲಿ
ಏನೋ ಶೂನ್ಯ..
ಮತ್ತೆ ನಾಳಿನ ನಿರೀಕ್ಷೆ….
ಬೆಸೆದಿತ್ತು ಅನುಬಂಧ
ಈ ಅಂಚೆಯಣ್ಣನೂ…
ಆ ಬಳೆಗಾರ ಚೆನ್ನಯ್ಯನೂ
ಬರುತ್ತಿದ್ದ ಊರಲ್ಲಿ…
ಏನೋ ಸಂವೇದನೆ..ಸಂಭ್ರಮ
ನಿಟ್ಟುಸಿರು…ಹರ್ಷದುದ್ಗಾರ..
ಅವನೇ ಕೈಯಿಂದ ಕೊಟ್ಟನೇನೋ ಮನಿ ಆರ್ಡರ್ ಹಣವ ಎಂಬ ಅಭಿಮಾನ
ಟೆಲಿಗ್ರಾಂ ತಂದನೋ ಮುದುಡಿತು ಮನ ಅಮಂಗಳದ ಛಾಯೆಯಲಿ…
ಆದರೂ ಮತ್ತೆ ಮತ್ತೆ ಇನ್ನೊಂದೊಂದೇ ನಿರೀಕ್ಷೆ…
ಒಳ್ಳೆಯದೆ ಸುದ್ದಿಯ ಪ್ರತೀಕ್ಷೆ..
ಕಾಯುವ ಸುಖವೆಂದರೆ ಇದೇ…
ಮತ್ತೆ ಸವಿಯುವುದುಂಟೇ
ಈ ಬಾಂಧವ್ಯ ಸುಖವ
ಹೂತು ಹೋಗುತ್ತಿರುವ ಮನುಷ್ಯತ್ವದ ಈ ಯಾಂತ್ರಿಕತೆಯ ಮಾಯಾ ಜಾಲದಲ್ಲಿ…!
- ಶಿವದೇವಿ ಅವನೀಶಚಂದ್ರ – ನಿವೃತ್ತ ಶಿಕ್ಷಕರು, ಕವಿಗಳು, ಅಂಕಣಕಾರ್ತಿ, ಕೊಡಗು.
