ಒಂದು ಕಾರ್ಯಕ್ರಮದ ಯಶಸ್ಸಿಗೆ ನಿರೂಪಣೆ ಬಹಳ ಮುಖ್ಯ. ಅದಕ್ಕೆ ಪೂರ್ವ ತಯಾರಿ ಹೇಗಿರಬೇಕು ಎನ್ನುವ ಕುರಿತು ಇಂದಿನ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣವನ್ನು ತಪ್ಪದೆ ಮುಂದೆ ಓದಿ…
ಅದು ಒಂದು ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದ ಕಾರ್ಯಕ್ರಮ. ನಾಲ್ಕೈದು ತಿಂಗಳಿನಿಂದಲೇ ಭರ್ಜರಿ ತಯಾರಿ. ಪ್ರತಿಯೊಂದೂ ಹೀಗೇ ಆಗಬೇಕು ಎಂದು ತಾವೇ ಖುದ್ದು ಮುಂದೆ ನಿಂತು ಎಲ್ಲವನ್ನೂ ಅಚ್ಚುಕಟ್ಟಾಗಿ ಆಯೋಜನೆ ಮಾಡಿದವರು ಸಂಸ್ಥೆಯ ಮುಖ್ಯಸ್ಥರಾದ ರಘುರಾಮನ್ ಅವರು. ಗಣ್ಯಾತಿಗಣ್ಯ ಅತಿಥಿಗಳು, ಸಮಾಜ ಸೇವಕರು, ಪ್ರಾಯೋಜಕರು,
ನಟ-ನಟಿಯರು, ಸಂಸ್ಥೆಯ ಹಳೆಯ ಕೆಲಸಗಾರರು, ಈಗಿರುವವರು ಮತ್ತು ಅವರ ಕುಟುಂಬವರ್ಗ, ಗ್ರಾಹಕರು ಹೀಗೆ ಎಲ್ಲರಿಗೂ ಅಲ್ಲಿ ಆಹ್ವಾನವಿತ್ತು. ಊಟ-ತಿಂಡಿ, ಚೆಂದದ ವೇದಿಕೆ, ಹೂವಿನ ಅಲಂಕಾರ ಹೀಗೆ ಎಲ್ಲದರ ಜವಾಬ್ದಾರಿ ಅವರೇ ತೆಗೆದುಕೊಂಡಿದ್ದರೂ ತಮ್ಮ ಜೊತೆಗಿನವರ ಮಾತು ಕೇಳಿ ಒಂದು ವಿಷಯದಲ್ಲಿ ಅವರಿಗೇ ತಿಳಿಯದಂತೆ ಎಡವಿದ್ದರು. ಅದು ನಿರೂಪಕರ ವಿಷಯದಲ್ಲಿ. ಯಾರನ್ನು ಕರೆಸಬೇಕು ಎಂಬ ವಿಷಯ ಬಂದಾಗ ತಮ್ಮ ಕಡೆಯ ಹುಡುಗಿಯೊಬ್ಬಳು ಬಹಳ ಚೆನ್ನಾಗಿ ನಿರೂಪಣೆ ಮಾಡುತ್ತಾಳೆ ಎಂಬ ತಮ್ಮ ಸಿಬ್ಬಂದಿಯ ಮಾತು ಕೇಳಿ ಕವನಳನ್ನು ಆ ದಿನದ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದ್ದರು. ಹಾಗೂ ಅದರ ಎಲ್ಲಾ ಜವಾಬ್ದಾರಿಯನ್ನು ಆ ಸಿಬ್ಬಂದಿಗೇ ವಹಿಸಿದ್ದರು.
ಹತ್ತುಗಂಟೆಗೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ. 9:30ಆದರೂ ನಿರೂಪಕಿ ಬರಲಿಲ್ಲ. ಅತಿಥಿಗಳೆಲ್ಲಾ ಒಬ್ಬೊಬ್ಬರಾಗಿ ಆಗಮಿಸಲು ಪ್ರಾರಂಭಿಸಿದ್ದರು. ಸಭಾಂಗಣದಲ್ಲಿ ಜನರು ಬಂದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಈಗ ಶುರುವಾಯಿತು ನೋಡಿ ಪೀಕಲಾಟ. ಕರೆ ಮಾಡಿದರೆ ಒಮ್ಮೊಮ್ಮೆ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ, ಇನ್ನೊಮ್ಮೆ ಮಾತನಾಡುವುದು ಕೇಳಿಸುತ್ತಿಲ್ಲ, ಆಗಾಗ ಸಿಕ್ಕ ನೆಟ್ವರ್ಕಲ್ಲಿ ಬರ್ತಾ ಇದೀನಿ ಹತ್ತು ನಿಮಿಷ, ಹತ್ತು ನಿಮಿಷ ಎಂದು ಹೇಳುತ್ತಲೇ ಸಮಯ ಕಳೆಯುತ್ತಿತ್ತು. ಅತಿಥಿಗಳಿಗೆ ಪ್ರತ್ಯೇಕ ರೂಮಿನ ವ್ಯವಸ್ಥೆ ಇದ್ದದ್ದರಿಂದ ಅಲ್ಲೇ ಕಾಫಿ, ತಿಂಡಿ, ಹರಟೆ ಎಲ್ಲಾ ನಡೆದಿತ್ತು. ಆಗಾಗ ಸಮಯ ನೋಡಿ ತುಂಬಾ ತಡ ಆಗ್ತಾ ಇದೆ, ಇನ್ನೊಂದು ಕಾರ್ಯಕ್ರಮಕ್ಕೆ ಹೋಗ್ಬೇಕಿತ್ತು, ನಿಮ್ಮ ವಿಶ್ವಾಸಕ್ಕೆ ಸ್ವಲ್ಪ ಹೊತ್ತಿದ್ದು ಹೋಗೋಣಾಂತ ಬಂದ್ವಿ, ಹೀಗೆ ಒಬ್ಬೊಬ್ಬರು ಒಂದೊಂದು ತರದಲ್ಲಿ ತಡವಾಗಿದ್ದಕ್ಕೆ ಹೇಳುತ್ತಾ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರು. “ಬೇರೆ ಯಾರಾದ್ರು ನಿರೂಪಣೆ ಮಾಡೌರಿದ್ರೆ ಕರುದ್ ಮಾಡುಸ್ರೀ” ಅನ್ನೋ ಮಾತೂ ಬಂದ್ಹೋಯ್ತು. ಕುಳಿತವರೂ ಅಷ್ಟೇ, ಯಾಕೆ ತಡ ಎಂದು ಕೇಳುತ್ತಲೇ ಮೊಬೈಲ್ನಲ್ಲಿ ಮುಳುಗಿದ್ದರು.
ಅಂತೂ ಓಡೋಡುತ್ತಾ ಏದುಸಿರು ಬಿಡುತ್ತಲೇ ಬಂದ ನಿರೂಪಕಿ ತನ್ನನ್ನು ತಾನು ಸಂಭಾಳಿಸಿಕೊಳ್ಳಲೇ ಸ್ವಲ್ಪ ಸಮಯ ಬೇಕಾಯ್ತು. ಮೈಯ್ಯೆಲ್ಲಾ ಬೆವರಿ, ಮುಖವೆಲ್ಲಾ ತೋಯ್ದು ಹಾಕಿದ ಮೇಕಪ್ ಆಗಲೇ ತನ್ನ ಬಣ್ಣ ಕಳಚಲು ಪ್ರಾರಂಭ ಮಾಡಿತ್ತು. ಸಾರಿ, ಟ್ರಾಫಿಕ್ ಇತ್ತು ಅಂತ ತನ್ನಿಂದಾದ ತಪ್ಪಿಗೆ ಹೇಳುತ್ತಾ ಅಂತೂ ಕಾರ್ಯಕ್ರಮ ಶುರುಮಾಡಿದಾಗ ಹನ್ನೊಂದು ಗಂಟೆ. ಹೀಗಾಗಿ ಅಂದಿನ ಎಲ್ಲಾ ಕಾರ್ಯಕ್ರಮಗಳೂ ತಡವಾಗಿ ಊಟದ ಸಮಯವೂ 2:30 ಮೀರಿ ಬಂದವರೆಲ್ಲಾ ಬೇಸರಿಸುವಂತಾಯ್ತು. ಮಕ್ಕಳು ಹಸಿವಲ್ಲಿ ಕಿರಿಕಿರಿ ಮಾಡಿದ್ದೂ ಆಯ್ತು. ಅತಿಥಿಗಳು ಮುಖದಲ್ಲೇ ಅಸಮಾಧಾನ ಹೊರಹಾಕಿ ಕೆಲವರು ತಿಂದ ಶಾಸ್ತ್ರ ಮಾಡಿದರೆ, ಇನ್ನು ಕೆಲವರು ತಡವಾಯಿತೆಂದು ಹೊರಟೇ ಬಿಟ್ಟರು. ಬೆಳ್ಳಿಹಬ್ಬದ ಅಷ್ಟು ತಿಂಗಳ ತಯಾರಿ, ಮಾಡಿದ ಖರ್ಚು, ವ್ಯಯಿಸಿದ ಸಮಯ, ಹಾಕಿದ ಪರಿಶ್ರಮ, ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಯ್ತು.

ಅದೊಂದು ಸಾರ್ವಜನಿಕ ಸಮಾರಂಭ. ಜನ ಕಿಕ್ಕಿರಿದು ಸೇರಿದ್ದರು. ನಿರೂಪಕಿ, ಮೂರು ಜನ ಮುಖ್ಯ ಅತಿಥಿಗಳಲ್ಲಿ ಇಬ್ಬರನ್ನು ಮಾತ್ರ ಸ್ವಾಗತಿಸಿ ಮುಂದಿನ ಕಾರ್ಯಕ್ರಮದ ಬಗ್ಗೆ ಹೇಳಿಯಾಗಿತ್ತು. ಬಂದ ಮೂರನೇ ಅತಿಥಿಯನ್ನು ವೇದಿಕೆಗೆ ಕರೆಯಲೇ ಇಲ್ಲ. ಮತ್ತೆ ಒಂದಿಬ್ಬರು ಹೇಳಿ, ನಿರೂಪಕಿಯ ಗಮನಕ್ಕೆ ತಂದು ಅವರನ್ನು ವೇದಿಕೆಗೆ ಬರಮಾಡಿಕೊಂಡಿದ್ದಾಯ್ತು. ಇದರಿಂದ ಆ ಮೂರನೇ ಅತಿಥಿಗೆ ಎಲ್ಲರ ಮುಂದೆ ಮುಜುಗರವಾಗಿದ್ದಂತೂ ಸತ್ಯ.
“ನಿರೂಪಣೆ ಎನ್ನುವುದು ಒಂದು ಇಡೀ ಕಾರ್ಯಕ್ರಮದ ನೆಲೆಗಟ್ಟು ಎಂದರೆ ತಪ್ಪಲ್ಲ. ನಿರೂಪಕರ ಮುಷ್ಟಿಯಲ್ಲೇ ಕಾರ್ಯಕ್ರಮದ ರೂಪುರೇಷೆ ಬಿಗಿಯಾಗಿರುವುದು. ಅದನ್ನು ಎಲ್ಲೆಲ್ಲಿ, ಹೇಗ್ಹೇಗೆ, ಎಷ್ಟೆಷ್ಟು ಸಡಿಲಗೊಳಿಸಬೇಕು ಎನ್ನುವುದನ್ನು ಅವರು ಚೆನ್ನಾಗಿ ಅರಿತಿರಬೇಕು. ಆಗಲೇ ಒಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಸಾಧ್ಯ”.
ಉತ್ತಮ ನಿರೂಪಕರಾಗಲು ಅಳವಡಿಸಿಕೊಳ್ಳಬೇಕಾದ ಒಂದಷ್ಟು ಅಂಶಗಳು :
- ಸಮಯ ಪರಿಪಾಲನೆ: ಕಾರ್ಯಕ್ರಮಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಮುಂಚೆ ಬಂದು ಆಯೋಜಕರ ಬಳಿ ಇನ್ನೊಮ್ಮೆ ಎಲ್ಲವನ್ನೂ ಮಾತನಾಡಿ, ಗೊಂದಲಗಳಿದ್ದರೆ ಪರಿಹರಿಸಿಕೊಂಡು ತಯಾರಾಗಿರಬೇಕು.
- ಸಮಯಪ್ರಜ್ಞೆ : ಏನಾದರೂ ವ್ಯತ್ಯಾಸವಾದರೂ ಆ ಸಮಯದಲ್ಲಿ ಯಾರಿಗೂ ತಿಳಿಯದಂತೆ ತನ್ನ ಛಾತಿಯಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಂತಿರಬೇಕು.
- ಭಾಷಾಜ್ಞಾನ: ಸ್ಪಷ್ಟ ಉಚ್ಛಾರಣೆಯ ಜೊತೆಗೆ ಏನು ಮಾತಾಡುತ್ತಿದ್ದೇವೆಂಬ ಪರಿಜ್ಞಾನ ಹೊಂದಿರಬೇಕು.
- ಧ್ವನಿಯ ಏರಿಳಿತ: ಆಯಾ ಸಂದರ್ಭಕ್ಕೆ ತಕ್ಕಂತೆ. ಉದಾಹರಣೆಗೆ, ಯಾವ ರೀತಿಯ ಕಾರ್ಯಕ್ರಮ ಎಂಬ ಪರಿಜ್ಞಾನದಡಿಯಲ್ಲಿ ನಿರೂಪಣೆ ಮಾಡಬೇಕಾಗುತ್ತದೆ. ಯಾರಾದ್ದಾದರೂ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಜನರನ್ನು ಹುರಿದುಂಬಿಸುತ್ತಾ ಮಾತನಾಡಿದರೆ ತಪ್ಪಾಗುತ್ತದೆ. ಅಲ್ಲಿಯ ನೀರವ ಮೌನಕ್ಕೆ ತಕ್ಕಂತೆ ಧ್ವನಿಯೂ ಆಳದಿಂದ ಬಂದರೇ ಅದಕ್ಕೆ ನ್ಯಾಯ ಒದಗಿಸಿದಂತೆ. ಒಂದು ಸಂಗೀತದ ಕಾರ್ಯಕ್ರಮ ಎಂದರೆ ಅಲ್ಲಿ ಖಂಡಿತಾ ಜೋಶ್ ಬೇಕೇ ಬೇಕು. ಹಾಡುವವರನ್ನು, ನೋಡುಗರನ್ನು ಹುರಿದುಂಬಿಸುತ್ತಾ , ಅವರನ್ನೂ ಜೊತೆಜೊತೆಗೇ ಸೇರಿಸಿಕೊಂಡು ಇಡೀ ಕಾರ್ಯಕ್ರಮ ಸಾಗಬೇಕಾಗುತ್ತದೆ.
- ಶುರುವಿನಿಂದ ಕೊನೆಯವರೆಗೂ ಬತ್ತದ ಉತ್ಸಾಹ, ಆಯಾಸವಾಗದ ಧ್ವನಿ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ.
- ತನ್ನ ಮಾತಿನಲ್ಲಿ, ಕಂಗಳಲ್ಲಿ, ಹಾವಭಾವದಲ್ಲಿ ಎಲ್ಲರನ್ನೂ ತನ್ನೆಡೆಗೆ, ವೇದಿಕೆಯೆಡೆಗೆ, ಸೆಳೆದಿಡುವಂತಹ ಶಕ್ತಿ ಇರಬೇಕು.
- ಎಷ್ಟು ಜನರಿದ್ದರೂ ಧೈರ್ಯದಿಂದ ಮಾತನಾಡುವಂತಿರಬೇಕು.
- ಗೌರವಯುತ ನಡೆ, ಪ್ರೋತ್ಸಾಹಿಸುವ ಗುಣ, ಸಂದರ್ಭಕ್ಕನುಗುಣವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿರಬೇಕು.
- ಏನಾದರೂ ಬೇಸರವಾದರೂ ತಕ್ಷಣಕ್ಕೆ ಕುಗ್ಗದ ಮನಸ್ಥೈರ್ಯ, ದುಃಖವಿದ್ದರೂ ಮುಖದಲ್ಲಿ ತೋರಿಸದೇ ಮಾತನಾಡುವ ಕಲೆ ಮೈಗೂಡಿಸಿಕೊಂಡಿರಬೇಕು.
- ಸಂದರ್ಭಕ್ಕನುಗುಣವಾಗಿ ವೇಷಭೂಷಣ, ಅಲಂಕಾರ ಎಲ್ಲವೂ ಇಲ್ಲಿ ಮುಖ್ಯವಾಗುತ್ತದೆ.
- ಒಂದು ವೇಳೆ ಕಾರ್ಯಕ್ರಮದ ಮಧ್ಯದಲ್ಲಿ ಏನಾದರೂ ಬದಲಾವಣೆಯಾದರೂ, ವೇದಿಕೆ ಕೆಲವು ನಿಮಿಷಗಳ ಕಾಲ ಖಾಲಿಯಿರುವ ಸಂದರ್ಭ ಬಂದರೂ, ಯಾರೂ ವಿಚಲಿತರಾಗದಂತೆ ತನ್ನ ಮಾತಿನಿಂದ ಎಲ್ಲಿಯೂ ಅದು ಕಾಣಿಸದಂತೆ ಸಭಿಕರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿರಬೇಕು.
- ಕೆಲವು ಪದಗಳನ್ನು ಬಿಡಿಸಿ ಹೇಳಿದರೆ ಹೇಗೆ ಅನರ್ಥವಾಗುತ್ತದೆಯೋ ಹಾಗೆಯೇ ಕೆಲವೊಮ್ಮೆ ಎರಡೆರಡು ಪದಗಳನ್ನು ಜೋಡಿಸಿ ಹೇಳಿದರೂ ಅನರ್ಥವಾಗುತ್ತದೆ. ಉದಾಹರಣೆಗೆ ಮುಖ್ಯ ಅತಿಥಿಗಳು ಎನ್ನುವಲ್ಲಿ ಮುಖ್ಯಾತಿಥಿಗಳು ಎಂದು ಹೇಳಿದರೆ ಕೇಳಲು ತುಂಬಾ ಕಠೋರವಾಗಿರುತ್ತದೆ. ಅಂತೆಯೇ, ಅನೇಕ ಕಾರ್ಯಕ್ರಮಗಳಲ್ಲಿ ಅಕಾರ, ಹಕಾರಗಳ ಭರಾಟೆ ಭಾರೀ ಜೋರಾಗಿರುತ್ತದೆ. ಹಾಗಾಗಿ ಇವುಗಳಿಂದಾಗುವ ಅನರ್ಥದ ಅರಿವಿರುವುದೂ ಸಹ ಅಷ್ಟೇ ಮುಖ್ಯವಾಗುತ್ತದೆ.
- ಎಲ್ಲವುದಕ್ಕಿಂತ ಮುಖ್ಯವಾಗಿ ಜವಾಬ್ದಾರಿ, ಶಿಸ್ತು, ತಾನು ಮಾಡುವ ಕೆಲಸದಲ್ಲಿ ಬದ್ಧತೆ ಇರಬೇಕಾಗುತ್ತದೆ.
ನಿರೂಪಣೆಗೆ ಬೇಕಾದ ಅಂಶಗಳನ್ನು ಅಳವಡಿಸಿಕೊಂಡು ಬಹಳ ಅಚ್ಚುಕಟ್ಟಾಗಿ ನೂರಾರು/ಸಾವಿರಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡವರು ನಮ್ಮ ನಡುವೆ ಬಹಳ ಮಂದಿ ಇದ್ದಾರೆ. ಹಾಗಾಗೇ ಅವರು ಇಂದಿಗೂ ಬಹಳ ಬೇಡಿಕೆಯ ನಿರೂಪಕರು. ಇದೆಲ್ಲಾ ಒಮ್ಮೆಲೇ ಗಳಿಸಿದ್ದಲ್ಲ. ಇದರ ಹಿಂದೆ ಅವರ ಪರಿಶ್ರಮವೂ ಅಷ್ಟೇ ಇದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.
ಯಾವುದೇ ಒಂದು ಕಾರ್ಯಕ್ರಮದ ಯಶಸ್ಸಿಗೆ ನಿರೂಪಣೆ ಬಹಳ ಮುಖ್ಯ. ಹಾಗಾಗಿ ದುಡ್ಡಿಗಾಗಿಯೋ, ಪ್ರಖ್ಯಾತರಾಗುವ ಹಪಾಹಪಿಗೋ ನಿರೂಪಣೆಯನ್ನು ಒಪ್ಪಿಕೊಳ್ಳುವ ಮೊದಲು ತಮ್ಮಿಂದಾಗಿ ಕಾರ್ಯಕ್ರಮಕ್ಕೆ ಕಪ್ಪುಚುಕ್ಕೆ ಬೀಳದಿರಲಿ ಎಂದು ಮನಗಂಡು ಪೂರ್ವತಯಾರಿಯ ಜೊತೆಗೆ ಮುಂದಿನ ಹೆಜ್ಜೆ ಇಡಲಿ ಎಂಬ ಆಶಯದೊಂದಿಗೆ.
- ಮಂಗಳ ಎಂ ನಾಡಿಗ್
