‘ಅತಿ ಆಸೆಯ ಹಿಂದೆ’ ಸಣ್ಣಕತೆ

ಇಂದಿನ ಕಾಲದಲ್ಲಿ ಮಕ್ಕಳನ್ನು ಬೆಳೆಸುವುದು ಅತಿ ಕಷ್ಟದ ಕೆಲಸವಾಗಿದೆ. ಎಲ್ಲೆಂದರಲ್ಲಿ ಅಂಗಡಿಗಳು, ಮಾಲ್ ಗಳ ಮಧ್ಯೆ ಮಕ್ಕಳ ಕಣ್ಣು ತಪ್ಪಿಸುವುದು ಕಷ್ಟವಾಗಿದೆ. ಇವುಗಳ ನಡುವೆ ಅಪ್ಪ ಮಗನ ನಡುವೆ ನಡೆಯುವ ಒಂದು ಸಣ್ಣಕತೆಯನ್ನು ಹರಿಹರ ಬಿ ಆರ್ ಅವರು ಬರೆದಿದ್ದಾರೆ. ತಪ್ಪದೆ ಮುಂದೆ ಓದಿ…

ತನ್ನ ಅಪ್ಪ ತಾನು ಕೇಳಿದ್ದನ್ನೆಲ್ಲ ತೆಗೆದುಕೊಡುವರು ಎಂದು ಶರವಣ ಒಂದು ದಿನ ಚಾಕ್ಲೇಟು ಕೇಳಿದ. ಮಾರನೇ ದಿನ ಕೇಕು, ಮುಂದೆ ಹೋಟೆಲ್, ಮಾಲ್, ರಿಸಾರ್ಟ್ ಹೀಗೆ ಮುಂದೆ ಸಾಗುತ್ತಲೇ ಹೊಸ ಹೊಸ ಬೇಡಿಕೆಗಳು ಬೆಳೆಯುತ್ತಲೇ ಇತ್ತು.

ಆಗಾಗ ತಾತನ ಮಾತುಗಳು ಪ್ರತಿದಿನವೂ ಕೇಳುತ್ತಿದ್ದವು.

“ಕಾಸಿದ್ದರೆ ಕೈಲಾಸ”

“ಹಾಸಿಗೆ ಇದ್ದಷ್ಟು ಕಾಲು ಚಾಚು”

“ಅತೀ ಆಸೆ ಗತೀ ಕೇಡು”

“ಸಾಲನ್ನು ಕೊಂಬಾಗ ಹಾಲೋಗರುಂಡಂತೆ”

ರಾತ್ರಿ ಆಯ್ತು. “ಅಪ್ಪ, ಹಸಿತಾ ಇದೆ ತಿನ್ನಕ್ಕೆ ಏನಾದರೂ ಕೊಡು” ಎಂದು ಮಗ ಕೇಳಿದ. ಹೆಂಡತಿಯ ಕಡೆ ತಿರುಗಿದ ಅವಳಿಂದ ಏನೂ ಇಲ್ಲ ಎಂಬ ಉತ್ತರಕ್ಕೆ ತತ್ತರಿಸಿದ. ತನ್ನ ಕಚೇರಿಯ ಚೀಲದಲ್ಲಿ ಬಿಸ್ಕತ್ತು ಇದೆಯೇ ಎಂದು ಪರೀಕ್ಷಿಸಿದ, ಖಾಲಿಯಾಗಿತ್ತು. ಅಡುಗೆ ಮನೆಗೆ ಹೋದರೆ ಅರ್ಧ ಮಿಕ್ಕಿದ್ದ ಕ್ಯಾರೇಟ್ ಕಾಣಿಸಿತು. ‘ಅಬ್ಬಾ’ ಎಂದು ಅದನ್ನೇ ಕೊಟ್ಟು ನೀರು ಕುಡಿಸಿದ.

ಮತ್ತೆ ಮಾರನೆ ದಿನವೂ ಅಪ್ಪ ಶರವಣನಿಗೆ ಕೇಳಿದ್ದನ್ನು ಕೊಡಿಸಿದರು. ತಾತನ ಮಾತು ‘ಹೊಟ್ಟೆಗೆ ಹಿಟ್ಟಿಲ್ಲ, ಅಂದರೆ ಜುಟ್ಟಿಗೆ ಮಲ್ಲಿಗೆ ಹೂವು’ ಎನ್ನುತ್ತಿದ್ದರು. ಶರವಣ ಮತ್ತೆ ರಾತ್ರಿ ಹಸಿವು ಎನ್ನಲು ‘ನಾನು ಚಿಕ್ಕವನಿದ್ದಾಗ ಕೊಟ್ಟಿದ್ದನ್ನು ಹೊಟ್ಟೆಗೆ ಹಾಕಿ ಗಟ್ಟಿಯಾಗಿ ಇರುತ್ತಿದ್ದೆವು. ಈಗಿನ ಮಕ್ಕಳಿಗೆ ಏನೂ ಹೇಳಕ್ಕಾಗಲ್ಲ’ ಎಂದು ಈಗ ಅಳುವ ಸರದಿ ಅಪ್ಪನದಾಗಿತ್ತು.

ಹೊತ್ತು ಮೀರುತ್ತಿರಲು ಶರವಣನಿಗೆ ಹಸಿವು ಹೆಚ್ಚಾಗುತ್ತಿತ್ತು. ನೀರು ಕುಡಿದ. ಗೊತ್ತಿಲ್ಲದೆ ನಿದ್ದೆ ಬಂದಿತ್ತು. ಆದರೆ ಹಸಿವು ಅವನನ್ನು ಮಲಗಲು ಬಿಡಬೇಕಲ್ಲ. ‘ಅಪ್ಪ ಎಂದೂ ಕಣ್ಣೀರು ಹಾಕಿದ್ದವರಲ್ಲ. ಆದರೆ ಇಂದು?’ ಎಂದು ಆಗ ಯೋಚಿಸ ತೊಡಗಿದ. ತಾತನ ಒಂದೊಂದೇ ಮಾತುಗಳು ನೆನಪಾಗಿ ತನಗೇ ಹೇಳಿದ್ದು ಎಂದು ಈಗ ಅರಿತ. ತನಗಾಗಿ ಅಪ್ಪ ಕೊಡಿಸಿದ್ದ ಸಾಮಾನುಗಳನ್ನೆಲ್ಲ ಈಚೆಗೆಳೆದು, ಇವೆಲ್ಲವನ್ನೂ ಕೊಡಿಸಿಕೊಂಡವನು ಒಂದು ದಿನ ಬಳಸಲಿಲ್ಲ. ತಾತನ ಬಳಿ ಹೋದ. ಅವರು ನಿದ್ದೆಯಿಲ್ಲದೆ ಎದ್ದು ಕುಳಿತಿದ್ದರು. ಮೊಮ್ಮಗನ ಕೈ ಹಿಡಿದು “ಯಾಕಪ್ಪಾ ನಿದ್ದೆ ಬರಲಿಲ್ವಾ? ಹಸಿತಾ ಇದೆಯಾ?” ತಮ್ಮಲ್ಲಿ ಇಟ್ಟುಕೊಂಡಿದ್ದ ಬನ್ನನ್ನು ಅವನಿಗೆ ತಿನ್ನಲು ಕೊಟ್ಟು, ತಮ್ಮ ಪಕ್ಕದಲ್ಲಿ ಮಲಗಿಸಿಕೊಂಡು ತಟ್ಟುತ್ತಿದ್ದಾಗ, “ತಾತ ನಿಮಗೆ ಮುಂದಾಗೋದೆಲ್ಲ ಹೆಂಗೆ ಗೊತ್ತಾಯ್ತು? ನೀ ಹೇಳಿದ ಹಾಗೇ ಆಗ್ತಿತ್ತು.” ಎಂದು ಶರವಣ ಕೇಳಿದ.

“ಓ ಅದಾ ಹೇಳ್ತೀನಿ ಕೇಳು. ನಮ್ಮ ಕಾಲದಲ್ಲಿ ಜಾಸ್ತಿ ಖರ್ಚಿರಲಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡ್ವಿ. ಅದೇ ತರಹ ನಿಮ್ಮ ಅಪ್ಪ ನಿನ್ನನ್ನ ಚೆನ್ನಾಗಿ ನೋಡಿಕೊಳ್ಳಬೇಕು ಅಂತ ಅವರಿಗೂ ಆಸೆ ಇದೆ. ಈಗಿನ ಕಾಲದಲ್ಲಿ ಎಲ್ಲಾದಕ್ಕೂ ದುಡ್ಡು ಸುರೀಬೇಕು. ಇಷ್ಟು ನಿನಗೆ ಗೊತ್ತಿರಲಿ ಸಾಕು. ನಿನ್ನ ಆಸೆ ಏನೇನಿದೆಯೋ ಅದಾಗಲಿ, ನಾನೂ ಏನಾದರೂ ಮಾಡ್ತೀನಿ. ನೋಡೋಣಂತೆ” ಎಂದು ತಾತ ಹೇಳಿದರು.

ಶರವಣ ತಾತನಿಂದ ತನ್ನ ಕೈ ಬಿಡಿಸಿಕೊಂಡು ತನ್ನ ಜಾಗಕ್ಕೆ ಮರಳಿ ಮಲಗಿದನಾದರೂ ನಿದ್ದೆ ಬಾರದೆ ತಾತನ ಪ್ರತಿಯೊಂದು ಮಾತನ್ನೇ ಮೆಲುಕು ಹಾಕುತ್ತಿದ್ದ. ಕೊನೆಗೆ ತಾತನ ರಾತ್ರಿಯ ಮಾತು ‘ಹೊಟ್ಟೆಗೆ ಹಿಟ್ಟಿಲ್ಲ ಅಂದರೆ ಜುಟ್ಟಿಗೆ ಮಲ್ಲಿಗೆ ಹೂವು’ ನೆನಪಾಯಿತು. ಅಂದರೆ ಈ ಸಾಮಾನುಗಳಿಂದ ಹೊಟ್ಟೆ ತುಂಬಿಸಕ್ಕಾಗಲ್ಲ. ನನ್ನ ಅಪ್ಪನಿಗೆ ಏನೂ ಆಸೆ ಇಲ್ಲದಿರುವಾಗ ನಾನು ಯಾಕೆ ಆಸೆ ಪಡಬೇಕು? ಇದಕ್ಕೆಲ್ಲ ಸ್ನೇಹಿತರೇ ಕಾರಣ ಅವರೆಲ್ಲ ತಮ್ಮ ಬಳಿ ಕೊಂಡಿದ್ದ ಸಾಮಾನುಗಳನ್ನು ಇಟ್ಟುಕೊಂಡು ಬೇರೆಯವರನ್ನು ಹಂಗಿಸಬಾರದು. ಇನ್ನು ಮೇಲೆ ಆ ಸ್ನೇಹಿತರಿಂದ ದೂರಾಗಬೇಕು ಎಂದು ನಿಶ್ಚಯಿಸಿ ಮಲಗಿದ.


  • ಹರಿಹರ ಬಿ ಆರ್ – “ಅಕ್ಷಂತಲ ಬರಹ” ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading