ಚಿನ್ಮಯಿ ತನ್ನ ಅಪ್ಪ-ಅಮ್ಮ ನಾಲ್ಕು ವರ್ಷಗಳ ನಂತರ ಮತ್ತೇ ಅಮೇರಿಕಾಗೆ ಬಂದಿದ್ದರಿಂದ ತುಂಬಾ ಸಂತೋಷಪಟ್ಟಳು. ಮಗಳು ಅಮೇರಿಕಾದ ಹೈವೇ ರಸ್ತೆಗಳಲ್ಲಿ ಯಾವುದೇ ಭಯವಿಲ್ಲದೆ ಕಾರ್ ಡ್ರೈವ್ ಮಾಡುತ್ತಿರುವಾವುದನ್ನು ನೋಡಿದ ಶಾರದಾ ಮತ್ತು ಚಂದ್ರಶೇಖರ್ ಮಗಳ ಬಗ್ಗೆ ತುಂಬಾ ಹೆಮ್ಮೆಪಟ್ಟರು. ಸಾವಿನಿರ್ಮಡಿಯೇ ತನ್ನ ಮಗಳಾಗಿ ಹುಟ್ಟಿ ಬಂದಿದ್ದಾಳೆ ಎಂಬ ಭಾವ ಚಂದ್ರಶೇಖರ್ ಗೆ ಹೆಚ್ಚಾಯಿತು. ಮುಂದೇನಾಯಿತು ಕತೆಗಾರ ಪ್ರೊ. ಪ್ರಸನ್ನ ಸಂತೇಕಡೂರು ಅವರ ‘ಸಾವಿನಿರ್ಮಡಿ’ ಕತೆಯನ್ನು ಪೂರ್ತಿಯಾಗಿ ಓದಿ…
ಸೂರ್ಯೋದಯವಾಯಿತು, ಚಂದ್ರೋದಯವಾಯಿತು ಮತ್ತೇ ಸೂರ್ಯೋದಯವಾಯಿತು, ಭೂಮಿ ತಿರುಗಿತು, ಕಾಲಚಕ್ರ ಉರುಳಿತು. ನಾಲ್ಕು ವರ್ಷಗಳು ಕಳೆದವು. ಚಿನ್ಮಯಿ ನಾಲ್ಕು ವರ್ಷಗಳ ಪದವಿ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ ಅದೇ ಹಾರ್ವರ್ಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕಾಲೇಜಿನಲ್ಲಿ ಮೆಡಿಕಲ್ ಡಿಗ್ರಿ ಮಾಡಲು ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗಿದ್ದಳು. ಚೆನ್ನಾಗಿ ಅಧ್ಯಯನ ಮಾಡಿ ತುಂಬಾ ಪ್ರತಿಭಾವಂತರಾಗಿದ್ದರೆ ಮಾತ್ರ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗಲು ಸಾಧ್ಯವಾಗುವುದು. ಚಿನ್ಮಯಿ ಕೂಡ ತುಂಬಾ ಕಷ್ಟಪಟ್ಟು ಓದಿ ಅಲ್ಲಿನ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಾಸ್ತ್ರ ಅಧ್ಯಯನ ಮಾಡಲು ಆಯ್ಕೆಯಾಗಿರುವುದು ಚಂದ್ರಶೇಖರ್ ಮತ್ತು ಶಾರದಾ ದಂಪತಿಗಳಿಗೆ ತುಂಬಾ ಸಂತೋಷದ ವಿಷಯವಾಗಿತ್ತು. ಅವರು ಅವಳ ಪದವಿ ಪರೀಕ್ಷೆಯ ಘಟಿಕೋತ್ಸವಕ್ಕೆ ಹೋಗಲು ಉತ್ಸುಕುಕರಾಗಿ ಬೇಗನೆ ವಿಮಾನಗಳ ಟಿಕೆಟ್ ಬುಕ್ ಮಾಡಿದ್ದರು.
ಮತ್ತೇ ಇತಿಹಾಡ್ ಏರ್ ವೆಸ್ ನಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದ ಬೋಸ್ಟನ್ ಗೆ ಹೋದರು. ಮಗಳು ಚಿನ್ಮಯಿ ಸ್ವಲ್ಪ ದಪ್ಪವಾಗಿದ್ದಳು. ಅಲ್ಲಿನ ಚಳಿಗೆ ಹೆಚ್ಚು ಹೆಚ್ಚು ಆಹಾರ ತಿನ್ನುವುದು ಸಾಮಾನ್ಯ. ಅದರಲ್ಲೂ ಹೊಸದಾಗಿ ಅಲ್ಲಿಗೆ ಹೋದವರು ಕಂಡದ್ದನ್ನೆಲ್ಲಾ ತಿನ್ನಬೇಕು ಎಂದು ಮನಸಿಗೆ ಅನಿಸುವುದರಿಂದ ಹೆಚ್ಚು ಆಹಾರ ಸೇವಿಸುತ್ತಾರೆ. ಚಿನ್ಮಯಿ ತನ್ನ ಅಪ್ಪ ಅಮ್ಮ ನಾಲ್ಕು ವರ್ಷಗಳ ನಂತರ ಮತ್ತೇ ಅಮೇರಿಕಾಗೆ ಬಂದಿದ್ದರಿಂದ ತುಂಬಾ ಸಂತೋಷಪಟ್ಟಳು. ಅವರನ್ನ ತಾನೇ ಕಾರಿನಲ್ಲಿ ನ್ಯೂಯಾರ್ಕ್, ನಯಾಗರ ಜಲಪಾತಕ್ಕೆ ಕರೆದುಕೊಂಡು ಹೋಗಿ ಎಲ್ಲಾ ಪ್ರವಾಸಿ ತಾಣಗಳನ್ನು ತೋರಿಸಿಕೊಂಡು ಬಂದಳು. ಯಾವುದೇ ಭಯವಿಲ್ಲದೆ ಮಗಳು ಅಮೇರಿಕಾದ ಹೈವೇ ರಸ್ತೆಗಳಲ್ಲಿ ಕಾರ್ ಡ್ರೈವ್ ಮಾಡುತ್ತಿರುವಾವುದನ್ನ ನೋಡಿದ ಶಾರದಾ ಮತ್ತು ಚಂದ್ರಶೇಖರ್ ಮಗಳ ಬಗ್ಗೆ ತುಂಬಾ ಹೆಮ್ಮೆಪಟ್ಟರು. ಸಾವಿನಿರ್ಮಡಿಯೇ ತನ್ನ ಮಗಳಾಗಿ ಹುಟ್ಟಿ ಬಂದಿದ್ದಾಳೆ ಎಂಬ ಭಾವ ಚಂದ್ರಶೇಖರ್ ಗೆ ಹೆಚ್ಚಾಯಿತು. ಅದು ಅವನ ಭ್ರಮೆಯೋ ಅಥವಾ ಮುನಿ ವೆಂಕಟರೆಡ್ಡಿಯವರ ಮಾತಿನ ಪ್ರಭಾವವೋ ಅವನು ಯಾವುದೋ ಅವ್ಯಕ್ತ ಆನಂದದ ಕಡಲಲ್ಲಿ ತೇಲುತ್ತಿದ್ದ.
ಘಟಿಕೋತ್ಸವದ ದಿನ ಬಂತು. ಅದೊಂದು ದೊಡ್ಡ ಆಡಿಟೋರಿಯಂ. ಆ ವಿಶ್ವವಿದ್ಯಾನಿಲಯದ ಅಧ್ಯಕ್ಷರು, ಎಲ್ಲಾ ವಿಭಾಗದ ಡೀನ್ ಗಳು, ನೂರಾರು ವಿದ್ಯಾರ್ಥಿಗಳು ಸಂತೋಷದಿಂದ ಅಲ್ಲಿ ನೆರೆದಿದ್ದರು. ಚಿನ್ಮಯಿ ಕೂಡ ಪದವಿ ಪಡೆಯುವ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಾಲಿನಲ್ಲಿ ನಿಂತಿದ್ದಳು. ತಮ್ಮ ಮಗಳು ಅಷ್ಟೊಂದು ಪ್ರಖ್ಯಾತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆಯುವ ಕ್ಷಣವನ್ನು ಕಂಡು ಚಂದ್ರಶೇಖರ್ ಮತ್ತು ಶಾರದಾರ ಕಣ್ಣಿನಲ್ಲಿ ಆನಂದ ಭಾಷ್ಪ ಹರಿಯುತಿತ್ತು. ಕೇವಲ ಐದು ನಿಮಿಷದಲ್ಲಿ ಪತ್ರಿಕೋದ್ಯಮ ವಿಭಾಗದ ಡೀನ್ ಎಲ್ಲರನ್ನ ಸ್ವಾಗತಿಸಿದರು. ಮೊದಲಿಗೆ ಆ ವಿಶ್ವವಿದ್ಯಾನಿಲಯದ ಅಧ್ಯಕ್ಷರು ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಈಗ ಮುಖ್ಯ ಅತಿಥಿಯಾಗಿ ಬಂದಿದ್ದ ಹೆಸರಾಂತ ಸ್ತ್ರೀವಾದಿ ಲೇಖಕಿ ಏಂಜೆಲೋ ನಗುತ್ತ ಎಲ್ಲರಿಗೂ ಶುಭ ಹಾರೈಸಿದರು. ಶೇಕಡ ಎಂಬತ್ತಕ್ಕಿಂತ ಹೆಚ್ಚು ಇದ್ದ ವಿದ್ಯಾರ್ಥಿಯರನ್ನ ಗಮನಿಸಿದ ಅವರು “ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಅಧ್ಯಯನ ಮಾಡಿ ದೊಡ್ಡ ಸಾಧನೆ ಮಾಡುತ್ತಿದ್ದಾರೆ. ಅಮೇರಿಕಾದಲ್ಲಿ ಮತ್ತು ವಿಶ್ವದಾದ್ಯಂತ ಎಲ್ಲಾ ಕಡೆ ಇದೆ ರೀತಿಯ ಬೆಳವಣಿಗೆಯನ್ನ ನಾವು ಕಾಣುತ್ತಿರುವುದು ತುಂಬಾ ಸ್ವಾಗಾತಾರ್ಹ ಮತ್ತು ಸಂತೋಷದ ವಿಷಯ. ಸಾವಿರ ವರ್ಷಕ್ಕಿಂತ ಹಿಂದೆಯೇ ಮಹಿಳೆಯರು ಹೆಚ್ಚು ಓದಿ ಜ್ಞಾನ ಸಂಪಾದಿಸುತ್ತಿದ್ದರು. ಆದರೂ ಇಂದಿಗೂ ಮಹಿಳೆಯೊಬ್ಬಳು ಈ ನಮ್ಮ ದೇಶದ ರಾಷ್ಟ್ರಾಧ್ಯಕ್ಷೆಯಾಗಲು ಗಂಡು ಸಮಾಜ ಬಿಟ್ಟಿಲ್ಲ. ಅದನ್ನು ಮೆಟ್ಟಿನಿಂತು ಸ್ತ್ರೀ ಸಮಾಜ ಸಾಧನೆ ಮಾಡಬೇಕು.
ನಾನು ಒಬ್ಬಳು ಮಹಿಳೆಯ ಬಗ್ಗೆ ನಿಮಗೆ ತಿಳಿಸಬೇಕು. ಅವಳು ದೊಡ್ಡ ಸಾಧಕಿ. ಅವಳ ಹೆಸರು “ಸಾವಿನಿರ್ಮಡಿ”. ಅವಳ ಬಗ್ಗೆ ತೀವ್ರ ಕುತೂಹಲದಿಂದ ನಾನು ಓದಿದ್ದೇನೆ.
ಅವಳು ಸಾವಿರ ವರ್ಷಗಳ ಹಿಂದೆ ಇಂದಿನ ಬೆಂಗಳೂರಿಗೆ ಸಮೀಪ ಇದ್ದಳು. ಅವಳು ಆ ಕಾಲಕ್ಕೆ ಜಗದ್ವಿಖ್ಯಾತವಾಗಿದ್ದ ನಾಳಂದ ವಿಶ್ವವಿದ್ಯಾನಿಲಯಕ್ಕೆ ಹೋಗಿ ಚೆನ್ನಾಗಿ ಅಧ್ಯಯನ ಮಾಡಿ ಜ್ಞಾನ ಸಂಪಾದನೆ ಮಾಡಿದ್ದಳು. ಹಲವಾರು ಪಂಡಿತರನ್ನ ಚರ್ಚೆಯಲ್ಲಿ ಸೋಲಿಸಿದ್ದಳು. ಕೊನೆಗೆ ಬೌದ್ಧ ಭಿಕ್ಕುನಿಯಾಗಿ ಭಾರತದಾದ್ಯಂತ ಪ್ರವಾಸ ಮಾಡಿ ಸಾಮ್ರಾಟ್ ಅಶೋಕನ ಮಗಳು ಮಹಾ ಬೌದ್ಧ ಭಿಕ್ಕುನಿ ಸಂಘಮಿತ್ರೆಯ ಪ್ರಭಾವದಿಂದ ಸಾವಿರ ವರ್ಷಗಳ ಹಿಂದೆ ಶ್ರೀಲಂಕಾಗೆ ಪ್ರಯಾಣ ಬೆಳೆಸಿದಳು. ಅಲ್ಲಿ ಸಂಘಮಿತ್ರೆ ಎರಡು ಸಾವಿರ ವರ್ಷಗಳ ಹಿಂದೆ ಬದುಕಿದ್ದ ಅನುರಾಧಪುರದ ಅದೇ ಭಿಕ್ಕುನಿ ವಿಹಾರದಲ್ಲಿ ಇದ್ದುಕೊಂಡು ಸಂಘಮಿತ್ರೆಯ ಸಮಾಧಿ ಸ್ತೂಪದ ಹತ್ತಿರವೇ ಮಹಾನಿರ್ವಾಣ ಹೊಂದಿದಳು. ಆ ಕಾಲಕ್ಕೆ ಮಹಾಜ್ಞಾನಿಗಳಾಗಿದ್ದ ಭಿಕ್ಕುನಿ ಸಂಘಮಿತ್ರೆ, ಭಿಕ್ಕುನಿ ಸಾವಿನಿರ್ಮಡಿ ಸ್ತ್ರೀ ಕುಲದ ಗೌರವವನ್ನ ಹೆಚ್ಚಿಸಿದ್ದಾರೆ. ಇಂದಿಗೂ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ನಿಮ್ಮಲ್ಲಿ ಕೂಡ ಅಂತಹ ಮಹಾಜ್ಞಾನಿಗಳು ಇರಬಹುದು. ಮುಂದೆ ನಿಮ್ಮಲ್ಲಿ ಒಬ್ಬರು ಇಬ್ಬರಾದರೂ ಈ ದೇಶದ ರಾಷ್ಟ್ರಾಧ್ಯಕ್ಷೆಯಾರಾಗಬಹುದು. ಅದಕ್ಕಾಗಿ ಪ್ರಯತ್ನಿಸಿ. ಅದೇ ನಿಮ್ಮ ಬದುಕಿನ ಗುರಿಯಾಗಲಿ ಎಂದು ಎಲ್ಲರಿಗೂ ಮತ್ತೊಮ್ಮೆ ಶುಭ ಹಾರೈಸುತ್ತೇನೆ” ಎಂದು ಹೇಳಿ ತಮ್ಮ ಆಸನಕ್ಕೆ ಹೋಗಿ ಕುಳಿತರು.
ಏಂಜೆಲೋ ಅವರ ಮಾತನ್ನ ಕೇಳಿದ ಚಿನ್ಮಯಿ ನಾನು “ಸಾವಿನಿರ್ಮಡಿ” ಬಗ್ಗೆ ಎಲ್ಲೋ ಕೇಳಿದ್ದೇನೆ ಅಂದುಕೊಂಡಳು. ಅವಳನ್ನ ಹತ್ತಿರದಿಂದ ನೋಡಿರುವ ಹಾಗೆ ಅನಿಸುತಿತ್ತು ಅವಳಿಗೆ. ಆದರೆ ಅದು ಎಲ್ಲಿ? ಎಂದು ತಿಳಿಯಲಿಲ್ಲ.
ಚಂದ್ರಶೇಖರ್ ಗೆ ಸಾವಿನಿರ್ಮಡಿ ಕೊನೆಗೆ ಬೌದ್ಧ ಭಿಕ್ಕುನಿಯಾಗಿ ಶ್ರೀಲಂಕಾದ ಅನುರಾಧಪುರಕ್ಕೆ ಹೋಗಿದ್ದು ತಿಳಿದು ಆಶ್ಚರ್ಯ, ಸಂತೋಷ ಎರಡು ಆಯಿತು. ಅದಕ್ಕೆ ಮುಖ್ಯ ಕಾರಣ ಸಾವಿನಿರ್ಮಡಿ ಮುಂದೆ ಏನಾದಳು? ಎಂದು ಅವನಿಗೆ ತಿಳಿಯುವ ಕುತೂಹಲ ಇತ್ತು. ಅದು ಇಲ್ಲಿ ತಿಳಿಯಿತು.
ಈಗ ಒಬ್ಬೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನ ಕರೆದು ಪದವಿ ಸರ್ಟಿಫಿಕೇಟ್ ಪ್ರಧಾನ ಮಾಡುತ್ತಿದ್ದರು. ಚಿನ್ಮಯಿ ಆ ಸಾಲಿನಲ್ಲಿ ಬಂದಾಗ ಶಾರದಾಳು ಸಂತೋಷ ಪಟ್ಟಳು.
ಚಂದ್ರಶೇಖರ್ ಗೆ ಮುನಿ ವೆಂಕಟರೆಡ್ಡಿ ಜ್ಞಾಪಕಕ್ಕೆ ಬಂದರು. ಮಹಾಸರಸ್ವತಮ್ಮನ ದೇವಾಲಯ ನೆನಪಿಗೆ ಬಂತು. ಸಾವಿನಿರ್ಮಡಿ ಶಾಸನ, ನಾಳಂದ ವಿಶ್ವವಿದ್ಯಾನಿಲಯ, ಸಾವಿನಿರ್ಮಡಿ, ಭಿಕ್ಕುನಿ ಸಂಘಮಿತ್ರೆ, ಭಗವಾನ ಬುದ್ಧನ ಸೌಮ್ಯವಾದ ಮೂರ್ತಿ ಜ್ಞಾಪಕಕ್ಕೆ ಬಂತು. ಅವರೆಲ್ಲಾ ಒಟ್ಟಿಗೆ ಚಿನ್ಮಯಿಯ ಮೇಲೆ ಹೂಮಳೆ ಸುರಿಸಿ ಆಶೀರ್ವದಿಸುತ್ತಿರುವ ದೃಶ್ಯ ಅವನ ಮನಸಿನಲ್ಲಿ ಮೂಡಿತು. ಈಗ ನನ್ನ ಬದುಕು ಸಾರ್ಥಕವಾಯಿತು ಅಂದುಕೊಂಡ. ಮುಂದೊಂದು ದಿನ ಅನುರಾಧಪುರಕ್ಕೆ ಹೋಗಿ ಬರಲು ನಿರ್ಧರಿಸಿದ.
ಮುಂದುವರೆಯುವುದು…
ಹಿಂದಿನ :
- ಪ್ರೊ. ಪ್ರಸನ್ನ ಸಂತೇಕಡೂರು – ವಿಜ್ಞಾನಿ, ಲೇಖಕರು, ಮೈಸೂರು.
