‘ದ್ವೀಪವ ಬಯಸಿ’ ಪುಸ್ತಕ ಪರಿಚಯ

ಲೇಖಕರಾದ ಎಂ.ಆರ್.ದತ್ತಾತ್ರಿ ಅವರ ‘ದ್ವೀಪವ ಬಯಸಿ’ ಕೃತಿಗೆ ಸೂರ್ಯ ನಾರಾಯಣ ಚಡಗ ಪ್ರಶಸ್ತಿ ಮತ್ತು ಅಮ್ಮ ಪ್ರಶಸ್ತಿ ಪಡೆದಿದ್ದು, ಈ ಕಾದಂಬರಿಯ ಕುರುತು ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ‘ದ್ವೀಪವ ಬಯಸಿ’
ಪ್ರಕಾರ: ಕಾದಂಬರಿ.
ಲೇಖಕರು:  ಎಂ.ಆರ್.ದತ್ತಾತ್ರಿ.
ಪ್ರಕಾಶನ: ಛಂದ ಪುಸ್ತಕ.
ಮೊದಲ ಮುದ್ರಣ:2011

ಈಗ ಎಲ್ಲಾ ಕಡೆ ಭರದಿಂದ ಮದುವೆ, ಮುಂಜಿ, ಗೃಹ ಪ್ರವೇಶಗಳು ಒಂದಾದ ಮೇಲೊಂದು ನಡೆಯುತ್ತಿದೆ. ಸಮಾರಂಭಗಳೆಂದರೆ ಎಲ್ಲಾ ನೆಂಟರಿಷ್ಟರು ಭೇಟಿಯಾಗಲು ಒಂದು ಸದಾವಕಾಶ. ಮೊದಲೆಲ್ಲಾ ಈ ರೀತಿ ಭೇಟಿ ಆದಾಗ ಸೀರೆ, ಓಡವೆಗಳ ಬಗ್ಗೆ ಮಾತನಾಡುವುದು ಸಾಮಾನ್ಯವಾಗಿತ್ತು. ಆದರೆ ಈಗ ಆ ವಿಷಯಗಳು ಮಾತನಾಡುವುದು ಕಡಿಮೆಯಾಗಿದೆ. ಅದು ಬಂಗಾರದ ಬೆಲೆ ಜಾಸ್ತಿ ಆಗಿದೆ ಎಂದಲ್ಲ. ಅದರ ಬದಲು ಮಗಳ ಬಾಣಂತನ ಮಾಡಲು ಹೋಗ ಬೇಕೆಂದರೂ ಅಮೆರಿಕಾ ವೀಸಾ ಪಡೆಯಲು ಸಂದರ್ಶನದ ದಿನಾಂಕ ಸಿಗದೇ ಇರುವುದರ ಬಗ್ಗೆ ಮಾತನಾಡುತ್ತಾರೆ. ಹೆಚ್1ಬಿ, ಗ್ರೀನ್ ಕಾರ್ಡ, ಡೈರೆಕ್ಟ್ ಫ್ಲೈಟ್ ಬಗ್ಗೆ ಮಾತನಾಡುವ ಜನರನ್ನು ಈ ಸಮಾರಂಭಗಳಲ್ಲಿ ಹೆಚ್ಚಾಗಿ ಈಗ ಕಾಣಬಹುದು. ಕೈತುಂಬ ಬರುವ ಡಾಲರ್ ಗಳು, ಕಾರಿನಲ್ಲಿ ಜೂಂಮ್ ಎಂದು ಹೋಗುವ ಪರಿ, ಇಂಗ್ಲೀಷ್ ಮಾತನಾಡುವ ಮೊಮ್ಮಕ್ಕಳು ಹೀಗೆ ಸಾಗುವ ಮಾತುಕತೆಗಳು ಯಾವಾಗಲೂ ಹೊರ ಮೈಮೇಲೆ ಇರುತ್ತವೆ ಹೊರತು, ಅಲ್ಲಿ ಕೆಲಸ ಮಾಡುತ್ತಿರುವವರ ಅಂತರಾಳದ ಭಾವನೆಗಳೇನು ಎಂದು ಯಾವತ್ತೂ ತಿಳಿಯುವುದಿಲ್ಲ. ಆ ಭಾವನೆಗಳನ್ನು ‘ದ್ವೀಪವ ಬಯಸಿ’ ಕಾದಂಬರಿಯಲ್ಲಿ ಶ್ರೀಯುತ ಎಂ.ಆರ್. ದತ್ತಾತ್ರಿಯವರು ತೆರೆದಿಟ್ಟಿದ್ದಾರೆ. ಸ್ವತಃ ಕಂಫ್ಯೂಟರ್ ವಿಜ್ಞಾನದಲ್ಲಿ ಉನ್ನತ ಪದವಿ ಪಡೆದು ಅಮೆರಿಕಾದಲ್ಲಿ ಕೆಲಸ ಮಾಡಿ ಅನುಭವ ಇರುವ ಶ್ರೀಯುತರು ಬರೆದಿರುವುದರಿಂದ ಈ ಭಾವನೆಗಳಿಗೆ ಒಂದು ರೀತಿಯ ಪ್ರಾಮಾಣಿಕತೆಯ ಸ್ಪರ್ಶ ಇದೆ ಎಂದು ಅನಿಸಿದರೆ ತಪ್ಪಾಗಲಾರದು.

ಕಥೆ ಪ್ರಾರಂಭವಾಗುವುದೇ ಶ್ರಿಕಾಂತ್ ಅಮೆರಿಕಾದಲ್ಲಿ ಕೆಲಸ ಮಾಡಲು ಲಾಸ್ ಏಂಜಲೀಸ್ ನ ವಿಮಾನ ನಿಲ್ದಾಣದಲ್ಲಿ ಹೆಂಡತಿ ವಾಣಿ ಜೊತೆ ಬಂದು ಇಳಿಯುವ ದೃಶ್ಯದಿಂದ. ಆದರೆ ಅವರು ಮೊದಲು ಪ್ರಯಾಣ ಮಾಡ ಬೇಕಾಗಿದ್ದ ವಿಮಾನ ಫ್ರಾಂಕ್ ಫರ್ಟ ಮೂಲಕ ಬಾಸ್ಟನ್, ನಂತರ ಅಲ್ಲಿಂದ ಲಾಸ್ ಏಂಜಲಿಸ್ ಗೆ ಹೋಗಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಇವರ ಕಛೇರಿಯ ಅಣತಿಯಂತೆ ಬದಲಾಗಿ ಈಗ ಸಿಂಗಪೂರ್ ಮೇಲೆ ಬಂದಿಳಿದ್ದು. ಇವರು ಪ್ರಯಾಣ ಮಾಡಬೇಕಾಗಿದ್ದ ವಿಮಾನವೇ ಬಾಸ್ಟನ್ ನಿಂದ ಹೊರಟು ವಿಶ್ವ ವ್ಯಾಪಾರ ಕೇಂದ್ರವನ್ನು 9/11ರಂದು ಭೇಧಿಸಿದ್ದು ಎಂದು ಅವರ ಪ್ರಯಾಣದ ಮಧ್ಯ ದಾರಿಯಲ್ಲಿ ತಿಳಿದಾಗ ಮನಸ್ಥಿತಿ ಹೇಗೆ ಆಗಿರಬಹುದು ಎಂದು ಯೋಚಿಸಿ.

ಹಾಗೆ ನೋಡಿದರೆ ಈ ‘ದ್ವೀಪವ ಬಯಸಿ’ ಎಂಬ ಶೀರ್ಷಿಕೆಗೆ ಈ ಕಥೆಗೂ ಏನು ಸಂಬಂಧ ಎಂದು ನೋಡಬೇಕು. ಸುತ್ತಲೂ ನೀರಿನಿಂದ ಆವರಿಸಿರುವ ಭೂ ಪ್ರದೇಶಕ್ಕೆ ದ್ವೀಪವೆಂದು ಕರೆಯುತ್ತಾರೆ ಎಂದು ಎಲ್ಲ ಸಣ್ಣ ಮಕ್ಕಳಿಗೂ ಗೊತ್ತು ಬಿಡಿ. ಒಂದು ಕಡೆ ಈ ಶ್ರೀಕಾಂತ್ ಹುಟ್ಟಿ ಬೆಳೆದ ಪ್ರದೇಶ ಯಗಚಿ ಜಲಾಶಯದಿಂದಾಗಿ ಸಣ್ಣ ದ್ವೀಪದ ತರಹ ಆಗುತ್ತದೆ. ಎಷ್ಟೋ ಜನರಿಗೆ ಅಮೆರಿಕಾ ಒಂದು ರೀತಿಯ ಕನಸಿನ ದ್ವೀಪ. ಆದರೆ ಆ ಕನಸುಗಳು ಬೆಳಿಗಿನ ಜಾವದ ಕನಸುಗಳಾಗಿ ನನಸಾಗುತ್ತದೆಯೇ ಅಥವ ಹಾಗೇ ಉಳಿಯುತ್ತವೆಯೇ ಎಂದು ನೋಡಬೇಕು. ಹಾಗೆ ನೋಡಿದರೆ ಅವೆಲ್ಲ ನೀರ ಮೇಲಿನ ಗುಳ್ಳೆಯ ತರಹ. ನೀರ ಮೇಲಿನ ಗುಳ್ಳೆ ಕೂಡ ಸುತ್ತಲೂ ನೀರಿನಿಂದ ಆವರಿಸಿರುವ ದ್ವೀಪವೇ!

ಈಗಿನ ದಿನ ಪತ್ರಿಕೆಯ ಮುಖಪುಟ ನೋಡಿ. ಕೃತಕ ಬುದ್ಧಿಮತ್ತೆಯ ಬಳಕೆಯ ಕಾರಣದಿಂದ ಮೈಕ್ರೋಸಾಫ್ಟ್‌ ಕಂಪನಿಯಿಂದ ಹಿಡಿದು ಅನೇಕ ಕಂಪನಿಗಳು ಲೇಆಫ್ ಮಾಡುತ್ತಿರುವ ಸುದ್ದಿ ಪ್ರಕಟವಾಗಿರುತ್ತದೆ. ಕಾರಣವೇನೇ ಇರಲಿ, ಬಹಳಷ್ಟು ತಂತ್ರಜ್ಞರು ಕೆಲಸ ಕಳೆದುಕೊಂಡು ಹೊಸ ಕೆಲಸ ಹುಡುಕುವ ಅನಿವಾರ್ಯತೆ ಉಂಟಾಗುತ್ತಿದೆ. ಇತ್ತೀಚೆಗೆ ಇಪ್ಪತ್ತೊಂದು ವರ್ಷ ಕೆಲಸ ಮಾಡಿದ ಇಂಜನೀಯರ್ ಕೆಲಸ ಕಳೆದುಕೊಂಡರೂ ಕಂಪನಿಗೆ ಒಳ್ಳೆಯದಾಗಲಿ ಎಂದು ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಈ ಕಡೆ ಗಣಕಯಂತ್ರದ ಪದವಿ ಪಡೆಯಲು ಮತ್ತು ಆ ‘ಕನಸಿನ ರಾಜ್ಯ’ ಅಮೆರಿಕಗೆ ಹೋಗಲು ಕಾದಿರುವವವರ ಸಂಖ್ಯೆಯೇನು ಕಡಿಮೆಯಿಲ್ಲ. ಈ ವರ್ಷ ಏಳು ಲಕ್ಷಕ್ಕಿಂತ ಹೆಚ್ಚು ಜನ ವಿದ್ಯಾರ್ಥಿಗಳು ಹೊರದೇಶಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಹೊತ್ತು ಹೊರಟಿರುವುದಾಗಿ ಲೇಆಫ್ ಸುದ್ದಿ ಪ್ರಕಟಿಸಿದ ದಿನ ಪತ್ರಿಕೆಯ ಮೂರನೇಯ ಪುಟದಲ್ಲಿ ಬರುವುದು ಒಂದು ರೀತಿಯ ವಿಪರ್ಯಾಸವೇ ಸರಿ. ಒಂದು ಕಡೆ ಅನಿಶ್ಚಿತತೆಯಿದೆ. ಇನ್ನೊಂದು ಕಡೆ ಆಕರ್ಷಣೆಯಿದೆ. ಇವೆರಡರ ವಿರೋಧಾಭಾಸದ ಮಧ್ಯೆ ಇಂದಿನ ಮಧ್ಯಮ ವರ್ಗ ಬದುಕುತ್ತಿರುವಂತೆ ಕಾಣುತ್ತದೆ. ಹಾಗಾಗಿ 2011ರ ಸುಮಾರಿಗೆ ಬರೆದ ಕಥೆ ಈಗಲೂ ಪ್ರಸ್ತುತವೆನಿಸುತ್ತದೆ.

ಒಮ್ಮೆ ಸರ್ಕಾರಿ ಉದ್ಯೋಗ, ಸ್ವಂತ ಮನೆ, ಮಗಳ ಮದುವೆ ಮುಂತಾದವು ಮಧ್ಯಮ ವರ್ಗದ ಕನಸುಗಳಾಗಿದ್ದವು. ಇಂದು ಅದೇ ಜಾಗದಲ್ಲಿ ಡಾಲರ್ ಸಂಬಳ, ವಿದೇಶಿ ಉದ್ಯೋಗ, ಗ್ರೀನ್ ಕಾರ್ಡ್ ಮತ್ತು ವಲಸೆ ಜೀವನ ಹೊಸ ಸಾಮಾಜಿಕ ಮಾನದಂಡಗಳಾಗಿ ಬದಲಾಗಿವೆ. ಆದರೆ ಈ ಕನಸುಗಳ ಹಿಂದೆ ಇರುವ ಮೌನದ ಪ್ರಶ್ನೆಗಳನ್ನು ಕೇಳುವ ಕೃತಿಗಳು ವಿರಳ. “ದ್ವೀಪವ ಬಯಸಿ” ಅಂತಹ ಅಪರೂಪದ ಕಾದಂಬರಿಗಳಲ್ಲಿ ಒಂದು. ಡಾಲರ್ ಕನಸುಗಳ ಹೊಳಪಿನ ಹಿಂದೆ ಮೌನವಾಗಿ ನಿಂತಿರುವ ಒಂಟಿತನ, ಅಸ್ಥಿರತೆ, ಬೇರು ಕಳೆದುಕೊಳ್ಳುವ ಭಯ ಮತ್ತು ಬದುಕಿನ ಕ್ಷಣಭಂಗುರತೆಯನ್ನು ಈ ಕಾದಂಬರಿ ನಿಧಾನವಾಗಿ ಓದುಗರ ಮನಸ್ಸಿಗೆ ಇಳಿಸುತ್ತದೆ. ಆದ್ದರಿಂದ ಇದು ಕೇವಲ ಅಮೆರಿಕಾಗೆ ಹೋದವರ ಕಥೆಯಲ್ಲ; ಇಡೀ ಮಧ್ಯಮ ವರ್ಗದ ಕನಸುಗಳು ಮತ್ತು ಗೊಂದಲಗಳ ಕಥೆ.

‘ಗುಲಾಮಗಿರಿ ಮಾಡುವುದೇ ಆದರೆ, ಭಾರತದಲ್ಲಿ ಇದ್ದುಕೊಂಡು ಗುಲಾಮಗಿರಿ ಮಾಡುವುದಕ್ಕಿಂತಾ ಕ್ಯಾಲಿಫೋರ್ನಿಯಾದಲ್ಲಿನ ಐಟಿ ಮ್ಯಾನೇಜರನಿಗೇ ನೇರವಾಗಿ ಗುಲಾಮಗಿರಿ ಮಾಡಿದರೆ, ಇಲ್ಲಿಗಿಂತ ನಾಲ್ಕರಷ್ಟು ಜಾಸ್ತಿ ದಕ್ಕುತ್ತದೆ’ ಎನ್ನುವ ಕಾದಂಬರಿಯ ಸಾಲುಗಳು ಮಧ್ಯಮ ವರ್ಗದ ಆಶಯದ ಅನಾವರಣ ಮಾಡುತ್ತದೆ. ನಾಯಕ ಶ್ರೀಕಾಂತ್ ಈ ಮಧ್ಯಮ ವರ್ಗದ ಪ್ರತಿನಿಧಿಯಂತೆ ಕಾಣುತ್ತಾನೆ.

ಶ್ರೀಕಾಂತ್‌ ದೈಹಿಕವಾಗಿ ಅಮೆರಿಕಾದಲ್ಲಿದ್ದರೂ ನೆನಪುಗಳು ಊರಿನ ಮಣ್ಣಿನಲ್ಲೇ ಅಲೆದಾಡುತ್ತವೆ. ಮನಸ್ಸಿನ ಈ ಒಳಜಗಳವೇ ನಾಯಕನ ಪಾತ್ರಕ್ಕೆ ಜೀವ ಕೊಡುತ್ತದೆ. ಊರಿನ ಜನರಿಗೆ ಕಾಣುವ ಅಮೆರಿಕಾ ಹೊಳಪಿನ ಹಿಂದೆ ಇರುವ ಒಂಟಿತನ, ನಿರಂತರ ಸ್ಪರ್ಧೆ, ಕೆಲಸದ ಅನಿಶ್ಚಿತತೆ ಮತ್ತು ಭಾವನಾತ್ಮಕ ಖಾಲಿತನವನ್ನು ನಾಯಕ ಒಳಗೊಳಗೆ ಅನುಭವಿಸುತ್ತಾನೆ. “ದ್ವೀಪವ ಬಯಸಿ” ಎಂಬ ಶೀರ್ಷಿಕೆಯ ಅರ್ಥವೂ ಶ್ರೀಕಾಂತ್ ಪಾತ್ರದಲ್ಲಿ ಸ್ಪಷ್ಟವಾಗುತ್ತದೆ. ನಾಯಕ ಹುಡುಕುವುದು ಒಂದು “ದ್ವೀಪ” ಅಂದರೆ ಸುರಕ್ಷಿತ, ಸಮೃದ್ಧ, ಕನಸಿನ ಬದುಕಿನ ಜಾಗ. ಆದರೆ ಕೊನೆಯಲ್ಲಿ ಆತನೇ ಒಂದು ದ್ವೀಪವಾಗುತ್ತಾನೆ. ಸುತ್ತಲೂ ಜನರಿದ್ದರೂ, ಒಳಗೆ ತನ್ನದೇ ಯೋಚನೆಗಳು ಮತ್ತು ನೆನಪುಗಳೊಂದಿಗೆ ಒಂಟಿಯಾಗಿ ನಿಂತಿರುವ ಮನುಷ್ಯ. ಹೀಗಾಗಿ ನಾಯಕ ಪಾತ್ರ ಇಂದಿನ ಜಾಗತೀಕರಣದ ಯುಗದ ಅನೇಕ (ಸಾವಿರಾರು) ಭಾರತೀಯ ಯುವಕರ ಮನಸ್ಥಿತಿಯ ಪ್ರತಿಬಿಂಬದಂತೆ ಕಾಣುತ್ತದೆ.

ಸಾಮಾನ್ಯವಾಗಿ ಈ ರೀತಿಯ ಕಥೆಗಳಲ್ಲಿ ಗಮನವೆಲ್ಲಾ ಪುರುಷನ ಉದ್ಯೋಗ, ಸಾಧನೆ, ಸಂಬಳ, ವೃತ್ತಿಜೀವನದ ಮೇಲೆ ಹೆಚ್ಚು ಇರುತ್ತದೆ. ಆದರೆ ಶ್ರೀ ದತ್ತಾತ್ರಿಯವರು ವಾಣಿಯಂತಹ ಪಾತ್ರದ ಮೂಲಕ ವಿದೇಶಕ್ಕೆ ಹೋಗುವ ಕುಟುಂಬದ ಒಳಜಗತ್ತನ್ನೂ ತೆರೆದಿಡುತ್ತಾರೆ. ಆಕೆ ಅಮೆರಿಕಾಗೆ ಹೋಗುವುದು ಗಂಡನ ಬದುಕಿನ ಪ್ರಯಾಣದ ಭಾಗವಾಗಿ. ಹೊಸ ದೇಶ, ಹೊಸ ಭಾಷೆ, ಹೊಸ ಸಂಸ್ಕೃತಿಯ ನಡುವೆ ಅವಳು ತನ್ನ ಅಸ್ತಿತ್ವವನ್ನು ನಿಧಾನವಾಗಿ ಹುಡುಕಿಕೊಳ್ಳಬೇಕಾಗುತ್ತದೆ. ಊರಿನ ಮನೆ, ಬಂಧುಬಳಗ, ಪರಿಚಿತ ಬದುಕು ಇವೆಲ್ಲವನ್ನು ಬಿಟ್ಟು ಅನ್ಯ ದೇಶದಲ್ಲಿ ಬದುಕುವುದು ಕೇವಲ ಭೌಗೋಳಿಕ ಬದಲಾವಣೆ ಮಾತ್ರವಲ್ಲದೇ ಅದೊಂದು ಭಾವನಾತ್ಮಕ ವಲಸೆಯೂ ಆಗಿರುವುದನ್ನು ಲೇಖಕರು ಚಿತ್ರಿಸಿರುವ ರೀತಿ ಅನನ್ಯ.

ಶ್ರೀಕಾಂತ್ ಹೊರಗಿನ ಜಗತ್ತಿನ ಒತ್ತಡಗಳನ್ನು ಎದುರಿಸುತ್ತಿದ್ದರೆ, ವಾಣಿ ಮನೆಯ ಒಳಗಿನ ಮೌನವನ್ನು ಎದುರಿಸುತ್ತಾಳೆ. ವಾಣಿಯ ಪಾತ್ರದ ಇನ್ನೊಂದು ಮುಖ್ಯ ಅಂಶ ಎಂದರೆ ಅವಳ ಹೊಂದಾಣಿಕೆ ಮಾಡಿಕೊಂಡು ಕುಟುಂಬವನ್ನು ಮುನ್ನೆಡೆಸುವ ಶಕ್ತಿ. ವಲಸೆ ಬದುಕಿನಲ್ಲಿ ಮಹಿಳೆಯರು ಅನುಭವಿಸುವ ಈ “ಅದೃಶ್ಯ ಒತ್ತಡ”ವನ್ನು ಕಾದಂಬರಿ ಸೂಕ್ಷ್ಮವಾಗಿ ತೋರಿಸುತ್ತದೆ. ಈ ಕಾರಣಕ್ಕೆ “ದ್ವೀಪ” ಎಂಬ ರೂಪಕ ವಾಣಿಯ ಪಾತ್ರಕ್ಕೂ ಸಮಾನವಾಗಿ ಅನ್ವಯಿಸುತ್ತದೆ. ಹೀಗಾಗಿ ನಾಯಕನ ಪತ್ನಿ ಕುಟುಂಬದ ಜೊತೆ ಹೊಸ ಜಗತ್ತಿಗೆ ಕಾಲಿಡುವ ಅನೇಕ ಭಾರತೀಯ ಮಹಿಳೆಯರ ಪ್ರತಿನಿಧಿಯಾಗಿ ಕಾಣುತ್ತಾಳೆ.

ನಾಯಕನಿಗೆ ನಾಯಕಿಯ ಪರಿಚಯ ಹೇಗಾಯಿತು? ಅವರ ದಾಂಪತ್ಯ ಹೇಗಿತ್ತು? ಹೊಸ ದೇಶದಲ್ಲಿ ಹೊಂದಿಕೊಳ್ಳಲು ಏನೇನು ಮಾಡಿದರು? ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಲು ಕಾದಂಬರಿ ಓದಿದರೆ ಚೆನ್ನ. ಈ ವಿಷಯವನ್ನು ಅನೇಕ ಘಟನೆ ಮತ್ತು ಪ್ರಸಂಗಗಳ ಮೂಲಕ ಲೇಖಕರು ಕಾದಂಬರಿಯನ್ನು ಹೆಣೆದಿರುವ ರೀತಿ ಅನನ್ಯ. ಹಾಗಾಗಿ ಮೊದಲ ಪುಟದಿಂದಲೇ ಓದುಗರನ್ನು ತನ್ನಲ್ಲಿ ಸೆಳೆದುಕೊಳ್ಳುತ್ತದೆ ಮತ್ತು ಸರಾಗವಾಗಿಯೂ ತನ್ನ ಜೊತೆಗೆ ಕರೆದೊಯ್ಯುತ್ತದೆ. ಹಾಗಾಗಿ ಓದುಗರೂ ನಾಯಕ ಮತ್ತು ನಾಯಕಿಯ ಜೊತೆ ಅಮೆರಿಕಾದ ಉದ್ದಗಲಕ್ಕೂ ಓಡಾಡಿದ ಅನುಭವ ಪಟ್ಟರೆ ಆಶ್ಚರ್ಯವಿಲ್ಲ.

“ಅಧುನಿಕ ಪ್ರಪಂಚದಲ್ಲಿ ಯುದ್ಧಗಳು ತರುವ ಅತಿ ದೊಡ್ಡ ಅನಿಶ್ಚಿತೆ ಎಂದರೆ ಪೆಟ್ರೋಲಿನ ಸರಬರಾಜು…” ಎಂದು ಬರುವ ಕಾದಂಬರಿಯ ಸಾಲುಗಳು ಈಗ ನಮಗೆಲ್ಲರಿಗೂ ಅನುಭವವಾಗಿರುವ ವಿಷಯ. ಪೆಟ್ರೋಲಿನ ಬದಲು ಜೈವಿಕ ಇಂಧನದ ಬಳಕೆಯ ಬಗ್ಗೆಯೂ ಕಾದಂಬರಿಯಲ್ಲಿ ಚರ್ಚೆಯಿದೆ. ಈ ಕಾರಣಗಳಿಗೂ ೨೦೧೧ರಲ್ಲಿ ಬರೆದ ಕಾದಂಬರಿಯು ಈಗಲೂ ಪ್ರಸ್ತುತವೆನಿಸುತ್ತದೆ.

ಕಾದಂಬರಿ ಅಮೆರಿಕಾದ ಕಾರ್ಪೋರೇಟ್ ಕಂಪನಿಗಳ ಕಾರ್ಯವೈಖರಿಯನ್ನು ಚಿತ್ರಿಸಿರುವ ರೀತಿ ಅನನ್ಯ. ಅದರ ಜೊತೆಗೆ ಕಮ್ಯುನಿಸ್ಟ್ ಸಿದ್ಧಾಂತ, ಸಮಾಜವಾದ, ಇಂಡಸ್ಟ್ರಿಯಲ್ ಸೈಕಾಲಜಿ, ಅನೇಕ ಕಡೆ ನಡೆದ ಯುದ್ಧಗಳು, ಆಂತರಿಕ ಕಲಹಗಳು ಹೀಗೆ ಅನೇಕ ವಿಷಯ ಮತ್ತು ವಿಚಾರಗಳು ಕಥೆಯಲ್ಲಿ ಹಾಸುಹೊಕ್ಕಾಗಿ ಬಂದಿರುವ ರೀತಿ ಚೆನ್ನಾಗಿದೆ.

“ಅರೆಬೆಂದ ದೇಹಗಳ ಫೋಟೋ ತೆಗೆಯುತ್ತಿದ್ದೇವೆ! ಮರಣವನ್ನು ಖಯಾಲಿನಿಂದ ದಾಖಲಿಸುತ್ತಿದ್ದೇವೆ! ಸತ್ತವರ ಚಿತ್ರಗಳು ತೆಗೆಯುವುದು ಎಂದರೆ ಅವರ ಆತ್ಮಗಳ ಕದ್ದಂತೆ…” ಕಾದಂಬರಿಯಲ್ಲಿ ಬರುವ ಈ ಸಾಲು ಯಾವ ಯುದ್ಧದ ಸಮಯದಲ್ಲಿ ಯಾರು ಹೇಳಿದ್ದು ಎಂದು ಪುಸ್ತಕ ಓದಿ ತಿಳಿದರೆ ಚೆನ್ನ. ಇಂಗ್ಲೀಷ್ ಲೇಖಕ ಎಂ.ಎಸ್.ಬ್ಯಾಟ್ ನ ಮ್ಯಾಟಿಸ್ ಸ್ಟೋರಿಸ್, ಇಟಲಿಯ ಜಾನಪದದ ದೊಡ್ಡ ಫ್ಯಾಂಟಸಿ ಕಥೆ, ಚಿತ್ರಗಳ ಪ್ರದರ್ಶನದಲ್ಲಿ ಇಟ್ಟಿದ್ದ “ಎಲ್ಲೋ ದೂರದ ದ್ವೀಪವ ಬಯಸಿ” ಚಿತ್ರದ ಹಿಂದಿನ ಕಥೆ, “ಚಿಕನ್ ಸೂಪ್ ಫಾರ್ ದಿ ಸೋಲ್”ನ ಒಂದು ಕಥೆ,….. ಯಾವ ವಿಷಯವನ್ನು ಪ್ರತಿಪಾದಿಸಲು ಲೇಖಕರು ಇವೆಲ್ಲವನ್ನೂ ಬಳಸಿದ್ದಾರೆ ಎಂಬ ಪ್ರಶ್ನೆಗೆ ಪುಸ್ತಕ ಓದಬೇಕು. ಇವೆಲ್ಲವೂ ಲೇಖಕರ ಓದಿನ ಆಳ ಮತ್ತು ವಿಸ್ತಾರದ ಬಗ್ಗೆ ಬೆಳಕು ಚೆಲ್ಲುತ್ತದೆ.

ನಾಯಕನ ತಮ್ಮ ಕೃಷ್ಣ, ಅಮೆರಿಕಾದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಫ್ರಾಂಕೋ, ಡೇಟಾಬೇಸ್ ಅಡ್ಮಿನಿಷ್ಟೇಟರ್ ಆಂಜನೇಯಲು, ಶ್ರೀಲಂಕಾ ಮೂಲದ ಮಧ್ಯವಯಸ್ಕ ಸಮಿಂದ ಮಧುರಸಿಂಘೆ, ವಿಪಿ ಡೆರಿಕ್,…. ಪಾತ್ರಗಳು ಪುಸ್ತಕ ಓದಿ ಮುಗಿದ ಮೇಲೂ ಓದುಗರ ಮನದಲ್ಲಿ ಉಳಿಯುತ್ತವೆ. ಇದರ ಜೊತೆಗೆ ಯೊಸಿಮಿಟಿ ಎನ್ನುವ ಪ್ರಕೃತಿಯ ಸ್ವರ್ಗದಲ್ಲಿ ನಾಯಕ ಮತ್ತು ನಾಯಕಿ ಕಳೆದ ದಿನಗಳು, ಸುಖೀ ದಾಂಪತ್ಯ ಜೀವನದ ದ್ಯೋತಕವಾಗಿ ಮೂಡಿ ಬಂದಿದೆ.

ಹಾಗಾದರೆ ನಾಯಕ ಅಮೆರಿಕಾದ ಡಾಲರ್ ಗಳಲ್ಲಿ ಕಳೆದುಹೋದನೆ? ಅಥವಾ ಭಾರತಕ್ಕೆ ಹಿಂದಿರುಗಿದನೇ? ಪುಸ್ತಕ ಓದಿ ತಿಳಿದರೆ ಚೆನ್ನ.

ಒಟ್ಟಿನಲ್ಲಿ ಜಾಗತೀಕರಣದ ಯುಗದಲ್ಲಿ ಮನುಷ್ಯನು ನಿಧಾನವಾಗಿ ಹೇಗೆ ಒಂದು ‘ದ್ವೀಪ’ವಾಗುತ್ತಾನೆ ಎಂಬುದನ್ನು ಈ ಕಾದಂಬರಿ ಮನಮುಟ್ಟುವಂತೆ ಚಿತ್ರಿಸುತ್ತದೆ.

ಉತ್ತಮ ಕಾದಂಬರಿ ಕೊಟ್ಟ ಶ್ರೀ ದತ್ತಾತ್ರಿಯವರಿಗೆ ಧನ್ಯವಾದಗಳು.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading