ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು – (ಭಾಗ-೧೦)

ಕಿಟ್ಟು-ಪುಟ್ಟುಗಳು ತಾವು ಹುಟ್ಟಿದ ಮನೆಯ ನಮ್ಮ ಸ್ನೇಹಿತರು ನಮ್ಮ ಮನೆಗೆ ಬಂದರೆ ಸಾಕು, ಅವರ ಸೀರೆಯನ್ನು ಮೂಸಿ ಮೂಸಿ ನೋಡುತ್ತಿದ್ದೆವು.ಅವರೊಬ್ಬರನ್ನು ಬಿಟ್ಟು, ನಮ್ಮ ಮನೆಗೆ ಬೇರೆ ಯಾರೇ ಹೊಸಬರು ಬಂದರೂ ಹೆದರಿಕೊಂಡು ಹೊರಗೆ ಓಡುತ್ತಿದ್ದವು. ಅಂಕಣಕಾರ್ತಿ ಕೆ.ಸಿ. ರತ್ನಶ್ರೀ ಶ್ರೀಧರ್ ಅವರ ಹಂಚಿಕೊಂಡಿದ್ದಾರೆ. ತಪ್ಪದೆ ಓದಿ ಅವರ ‘ಮೂಕ ಜಗತ್ತಿನ ಸುತ್ತ ನಮ್ಮ ಜಗತ್ತು’ ಅಂಕಣ…

ಕಿಟ್ಟು-ಪುಟ್ಟು ಇಬ್ಬರೂ ದಷ್ಟಪುಷ್ಟವಾಗಿ ಚೆನ್ನಾಗಿ ಬೆಳೆದವು. ಕಿಟ್ಟಿ ಎತ್ತರವೂ ಇದ್ದ, ರೈಲ್ ಬೋಗಿಯಂತೆ ಉದ್ದಕ್ಕೂ ಇದ್ದ. ಪುಟ್ಟು ಅವನಿಗಿಂತ ಒಂದಿಂಚು ಕುಳ್ಳ ಸ್ವಲ್ಪ ದಪ್ಪಗೆ ಮುದ್ದಾಗಿದ್ದ. ಪುಟ್ಟು ತನ್ನ ಮಧುರ ಧ್ವನಿಯಲ್ಲಿ “ಅಂಮ ಅಂಮ್ಮ” ಎಂದು ಕರೆದರೆ ಎಂಥವರೂ ಕರಗಿ ಹೋಗಬೇಕು. ಅಷ್ಟು ಇಂಪು ಅವನ ಧ್ವನಿ. ಅವನು ಗಂಡು ಬೆಕ್ಕು ಎನ್ನುವುದಕ್ಕಿಂತ ಪುಟ್ಟ ಹೆಣ್ಣು ಮಗು ಎಂದರೆ ಸರಿಯಾದೀತು. ಪ್ರೀತಿಯಿಂದ ಅವನನ್ನು ಒಮ್ಮೊಮ್ಮೆ ಪುಟ್ಟಿ ಪುಟ್ಟಿ ಎನ್ನುತ್ತಿದ್ದೆವು.

ಎಂಟೊಂಬತ್ತು ತಿಂಗಳಗಳ ನಂತರ ಕಿಟ್ಟು-ಪುಟ್ಟು ಆಚೆ ಹೋಗಿ ಬರುವ ಸಮಯ ಅಧಿಕವಾಗುತ್ತಾ ಸಾಗಿತ್ತು. ಕಿಟ್ಟು-ಪುಟ್ಟು ಪ್ರತ್ಯೇಕವಾಗಿ ಊರು ಸುತ್ತಲು ಹೋರಾಟರೆ ಮೂರ್ನಾಲ್ಕು ಗಂಟೆಗಳ ನಂತರ, ಊಟ ನೆನಪಾದಾಗ ಮನೆಗೆ ಬರುವುದನ್ನು ರೂಡಿಸಿಕೊಂಡವು. ರೌಂಡ್ಸ್ ಮುಗಿಸಿ ಬಂದು, ಗಡದ್ದಾಗಿ ಉಂಡು ಮಲಗಿದರೆ, ಸಂಜೆವರೆಗೂ ಮೈ ಮೇಲೆ ಎಚ್ಚರವಿಲ್ಲದೆ ನಿದ್ರಿಸುತ್ತಿದ್ದವು.

ಸಂಜೆ ಹಾಲು ಕುಡಿದು ಆಟದ ಅಖಾಡಕ್ಕೆ ಧುಮುಕಿದವೆಂದರೆ ಮುಗಿಯಿತು. ಬಾಕ್ಸಿಂಗ್, ಕುಸ್ತಿ, ಕಬ್ಬಡಿ, ಜೂಡೊ ಆಟದ ಭರಾಟೆಯಲ್ಲಿ ಮನೆಯ ಸಣ್ಣ ಪುಟ್ಟ ವಸ್ತುಗಳು ಚೆಲ್ಲಾ ಪಿಲ್ಲಿಯಾಗುತ್ತಿದ್ದವು. ಕೆಲವೊಮ್ಮೆ ರಾತ್ರಿ ಉಂಡು ಮಲಗಿ ಮಧ್ಯರಾತ್ರಿ ಎಚ್ಚರವಾದಾಗಲೂ ಕಿಟ್ಟು ಪುಟ್ಟುನ ಆಟದ ಪಂದ್ಯಾವಳಿ ನಡೆಯುತ್ತಿತ್ತು. ಕತ್ತಲ ರಾತ್ರಿಯ ನೀರವತೆಯಲ್ಲಿ ನಾಲ್ಕು ಕೊಳ್ಳಿ ದೆವ್ವಗಳು ಮನೆಯಲ್ಲಿ ಅಟ್ಟಾಡಿಸಿಕೊಂಡು ಓಡಾಡಿದಂಥ ದೃಶ್ಯ ಕಾಣುತ್ತಿತ್ತು. ಕತ್ತಲಿನಲ್ಲಿ ಟಾರ್ಚ್ ಬೆಳಕಿನಂತೆ ಹೊಳೆಯುವ ಅವುಗಳ ಕಣ್ಣುಗಳು ಬೆಳಕಿನ ಉಂಡೆಯಂತೆ ಭಾಸವಾಗುತ್ತಿದ್ದವು.

ಒಮ್ಮೆ, ಬೆಳಿಗ್ಗೆ ಬೇಗ ರೂಮಿನಿಂದ ಎದ್ದು ಬಂದ ಪತಿರಾಯರಿಗೆ ಮನೆಯೆಲ್ಲಾ ಕಿತ್ತು ಬಿಸಾಕಿದ ಕಸ ಸ್ವಾಗತ ಕೋರಿತ್ತು. ಬಾಗಿಲು ತೆಗೆಯುವುದನ್ನೇ ಕಾಯುತ್ತಾ ಕುಳಿತಿದ್ದ ಕಿಟ್ಟು-ಪುಟ್ಟುವಿನ ಜೋಡಿ ರಾಗ ಸುಪ್ರಭಾತ ಹಾಡಿದಂತಿತ್ತು. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಹಾಲು ಕೇಳುವುದು ಅವುಗಳ ಅಭ್ಯಾಸ. ಅಂದು ರಾತ್ರಿ ಇವುಗಳ ಚಿನ್ನಾಟಕ್ಕೆ ಸಿಕ್ಕ ಕಸದ ಬುಟ್ಟಿ ತನ್ನೊಡಲೊಳಗಿದ್ದ ಕಸವನ್ನೆಲ್ಲಾ ನೆಲದ ಮೇಲೆ ಕಾರಿಕೊಂಡು ಪಕ್ಕದಲ್ಲಿ ಅನಾಥವಾಗಿ ಬಿದ್ದಿತ್ತು.

ಇದನ್ನು ಕಂಡ ನನ್ನವರು, ಕಿಟ್ಟು-ಪುಟ್ಟು ಚೆಲ್ಲಾಡಿದ ಕಸವನ್ನು ತೋರಿಸುತ್ತಾ “ಯಾರ್ರೋ ಇದನ್ನು ಚೆಲ್ಲಿದ್ದು” ಎಂದು ಕೇಳಿದರೆ, ವಿಧೇಯ ಮಕ್ಕಳಂತೆ ನೆಲದಲ್ಲಿ ಅಕ್ಕಪಕ್ಕ ಕುಳಿತು ಒಂದರ ಮುಖ ಒಂದು ನೋಡಿಕೊಳ್ಳುತ್ತಾ “ಅವ್ಯಾ, ಅವ್ಯಾ” ಎಂದು ದೈನ್ಯದಿಂದ ಕೂಗುತ್ತಿದ್ದ ಅವುಗಳ ಮುದ್ದುಮುಖ ಇಂದಿಗೂ ನಮ್ಮ ಕಣ್ಣಲ್ಲಿ ಅಚ್ಚಾಗಿ ನಿಂತಿದೆ.

ಮನೆಯ ಎಲ್ಲಾ ಭಾಗಗಳಿಗೂ ಅನಿರ್ಬಂಧಿತ ಪ್ರವೇಶ ಪಡೆದಿದ್ದ ಕಿಟ್ಟು-ಪುಟ್ಟುಗೆ ಅದೊಂದು ದಿನ ನಾನು, “ನೀವಿಬ್ರೂ ಇನ್ಮೇಲೆ ಅಡಿಗೆ ಮನೆಗೆ ಬರಬಾರದು” ಎಂದು ಕಟ್ಟಾಜ್ಞೆ ವಿಧಿಸಿದೆ. ಅವುಗಳು ಅದೆಷ್ಟು ವಿಧೇಯವಾಗಿದ್ದವೆಂದರೆ, ಅಡುಗೆ ಮನೆಯ ಬಾಗಿಲಲ್ಲಿ ಅಕ್ಕ ಪಕ್ಕ ಕುಳಿತು ನಾನು ಅಡುಗೆ ಮಾಡುವುದನ್ನೇ ನೋಡುತ್ತ, ತೋಡಿರಾಗ ಹಾಡುತ್ತಾ ಊಟ ಕೇಳುತ್ತಿದ್ದವೇ ವಿನಹ ಅಡುಗೆ ಮನೆಗೆ ಕಾಲಿಡಲಿಲ್ಲ. ಅವುಗಳನ್ನು ನೋಡಿ ನನಗೇ ಕರುಳು ಚುರುಕ್ ಎಂದು, ಅವುಗಳಿಗೆ ಒಳಗೆ ಬರಲು ಅನುಮತಿಸಿದೆ.

ಹಸಿ ಕೊಬ್ಬರಿಯನ್ನು ಬಹಳ ಇಷ್ಟ ಪಡುತ್ತಿದ್ದ ಕಿಟ್ಟು, ಅದೆಷ್ಟೇ ಗಾಢ ನಿದ್ದೆಯಲ್ಲಿದ್ದಾಗಲೂ ನಾನು ತೆಂಗಿನ ಕಾಯಿ ತುರಿಯಲು ಕುಳಿತರೆ ಸಾಕು ಎದ್ದು ಬಂದು ತೂಕಡಿಸಿಕೊಂಡು ನನ್ನ ಪಕ್ಕ ಕೂರುತ್ತಿದ್ದ. ತುರಿದ ಕಾಯಿತುರಿಯನ್ನು ಅವನ ಬಟ್ಟಲಿಗೆ ಹಾಕಿದರೆ ತುಂಬಾ ಖುಷಿಯಿಂದ ತಿನ್ನುತ್ತಿದ್ದ. ಅಡುಗೆಗೆ ಬಳಸುವ ತೆಂಗಿನತುರಿ ಮೊದಲು ಕಿಟ್ಟಿಗೇ ನೈವೇದ್ಯವಾಗುತ್ತಿತ್ತು. ಪುಟ್ಟುಗೆ ಮಾತ್ರ ತೆಂಗಿನ ತುರಿ ಇಷ್ಟ ಇರಲಿಲ್ಲ. ಅವನು ಒಂದು ದಿನವೂ ತೆಂಗಿನತುರಿ ತಿನ್ನಲಿಲ್ಲ. ಎಷ್ಟು ಕೊಟ್ಟರೂ ಕಿಟ್ಟು ಮಾತ್ರ ಬೇಡ ಎನ್ನುತ್ತಿರಲಿಲ್ಲ.

ಕಿಟ್ಟು-ಪುಟ್ಟುಗಳು ಹುಟ್ಟಿದ ಮನೆಯ ನಮ್ಮ ಸ್ನೇಹಿತರು ನಮ್ಮ ಮನೆಗೆ ಬಂದರೆ ಸಾಕು, ಅವರ ಸೀರೆಯನ್ನು ಮೂಸಿ ಮೂಸಿ ನೋಡುತ್ತಿದ್ದೆವು. ಅವರ ಮನೆಯಲ್ಲಿದ್ದ ಕಿಟ್ಟು-ಪುಟ್ಟುನ ಅಮ್ಮ ಮತ್ತು ದೊಡ್ಡಮ್ಮನ ವಾಸನೆಯನ್ನು ಅವರ ಸೀರೆಯಲ್ಲಿ ಗ್ರಹಿಸುತ್ತಿದ್ದವು. ಅವರೊಬ್ಬರನ್ನು ಬಿಟ್ಟು, ನಮ್ಮ ಮನೆಗೆ ಬೇರೆ ಯಾರೇ ಹೊಸಬರು ಬಂದರೂ ಹೆದರಿಕೊಂಡು ಹೊರಗೆ ಓಡುತ್ತಿದ್ದವು.

ತುಂಬಾ ಸಂಕೋಚ ಮತ್ತು ಪುಕ್ಕಲು ಸ್ವಭಾವದ ಜಿಂಜರ್ ಜಾತಿಯ ಕಿಟ್ಟು-ಪುಟ್ಟು ನಾವು ಮೂವರನ್ನು ಬಿಟ್ಟು ಬೇರೆ ಯಾರಿಂದಲೂ ಮುಟ್ಟಿಸಿಕೊಳ್ಳುತ್ತಿರಲಿಲ್ಲ. ಮನೆಗೆ ಯಾರಾದರೂ ಬಂದಾಗ ಡೋರ್ ಬೆಲ್ ಸದ್ದು ಕೇಳಿದರೆ ಸಾಕು, ಓಡಿ ಹೋಗಿ ಮಂಚದ ಅಡಿಯಲ್ಲಿ ಅವಿತುಕೊಳ್ಳುತ್ತಿದ್ದವು. ಅವರು ಒಳಗೆ ಬರುತ್ತಿದ್ದಂತೆ ಇವುಗಳು ಮನೆಯ ಆಚೆಗೆ ಓಟ ಕೀಳುತ್ತಿದ್ದವು. ಮನೆಗೆ ಬಂದವರು ವಾಪಸ್ ಹೋಗುವವರೆಗೂ ಇವು ಮನೆ ಒಳಗೆ ಕಾಲಿಡುತ್ತಿರಲಿಲ್ಲ.

ನನ್ನ ಪತಿ ರಾತ್ರಿ ಟಿ.ವಿ. ನೋಡುತ್ತಾ ಹಾಗೇ ಸೋಫಾ ಮೇಲೆ ಒರಗಿದರೆಂದರೆ ಸಾಕು, ಕಿಟ್ಟಿ ಓಡಿಬಂದು ಸೋಫಾ ಕೆಳಗೆ ನಿಂತು “ಮಿಯಾವ್ ಮಿಯಾವ್” ಎಂದು ಸೂಚನೆ ಕೊಟ್ಟು, ಸೋಫಾ ಮೇಲೆ ಹತ್ತಿ ಬಂದು ಅವರ ಮೈಮೇಲೆ ಮಲಗುತ್ತಿದ್ದ. ಪುಟ್ಟು ಮೆಲ್ಲಗೆ ಹಿಂದಿನಿಂದ ಬಂದು ಅವರ ಕಾಲ ಮೇಲೆ ಪವಡಿಸುತ್ತಿದ್ದ. ಹಾಗೆ ಮಲಗುವುದು ಅವುಗಳಿಗೆ ಬಹಳ ಇಷ್ಟ. ದಿನವೂ ಇಂಥ ಸಮಯಕ್ಕಾಗಿ ಕಾಯುತ್ತಿದ್ದವು.

ಒಂದು ದಿನ ಬೆಳಗ್ಗೆ ಮನೆಯಾಚೆ ತಿರುಗಲು ಹೋಗಿದ್ದ ಕಿಟ್ಟಿ ಮರಳಿ ಮನೆಗೆ ಬಂದಾಗ, ಅವನ ಧ್ವನಿ ಸ್ವಲ್ಪ ಬದಲಾದಂತೆನಿಸಿತು. ಬಂದವನು ಊಟವನ್ನು ತಿನ್ನದೆ ಮಲಗಿದ. ಮುಖದಲ್ಲಿ ಅದೇನೋ ನೋವು ಇಣುಕುತ್ತಿತ್ತು. ಬಾಯಿಯನ್ನು ಸಂಪೂರ್ಣ ಮುಚ್ಚದೇ ಜೊಲ್ಲು ಸುರಿಸುತ್ತಿದ್ದ. ಇದನ್ನು ಗಮನಿಸಿದ ನಮ್ಮ ಮಗ, ಕಿಟ್ಟುವಿನ ಬಾಯನ್ನು ಅಗಲಿಸಿ ನೋಡಿದ. ಬಾಯಿಯ ಅಂಗಳದೊಳಗೆ ಅದೇನೋ ಕಡ್ಡಿಯಂಥ ವಸ್ತು ಸಿಕ್ಕಿಕೊಂಡಿರುವುದು ಕಾಣಿಸಿತು. ತಕ್ಷಣ ಕಿಟ್ಟಿಯ ಬಾಯೊಳಗೆ ಬೆರಳನ್ನು ತೂರಿಸಿ, ಅಲ್ಲಿ ಸಿಕ್ಕಿಕೊಂಡಿದ್ದ ಪುಟ್ಟ ಮೂಳೆಯನ್ನು ಹೊರ ತೆಗೆದ. ನಾನು ನಿಟ್ಟುಸಿರು ಬಿಟ್ಟೆ. ನಂತರ ಕಿಟ್ಟಿ ಊಟ ಮಾಡಿ ಮಲಗಿದ.

ಒಂದು ದಿನ ಹೊರಗೆ ಹೋಗಿದ್ದ ಕಿಟ್ಟಿ ಮನೆಗೆ ಬಂದನಾದರೂ, ಊಟವನ್ನೂ ಮಾಡದೇ ಚಡಪಡಿಸುತ್ತಿದ್ದವನು ಸ್ವಲ್ಪ ಹೊತ್ತಿನಲ್ಲೇ ಮತ್ತೆ ಹೊರಗೆ ಹೋಗಲು ಹಠ ಮಾಡಿದ. ಅವನು ಹೊರಗೆ ಹೋಗಲು ಬಿಡದಿದ್ದಕ್ಕೆ, ಬಾಗಿಲ ಬಳಿ ಕುಳಿತು ಜೋರಾಗಿ ಕೂಗುತ್ತಾ ಗಲಾಟೆ ಎಬ್ಬಿಸಿದ. ಅವನ ಹಠಕ್ಕೆ ಮಣಿದು ಬಾಗಿಲು ತೆಗೆದು ಹೊರಹೋಗಲು ಬಿಟ್ಟೆ. ಹಾಗೆ ಹೋದವನು ಮರಳಿ ಮನೆಗೆ ಬಂದಾಗ ಸೌಮ್ಯ ಸ್ವಭಾವದ ಕಿಟ್ಟಿ ಯಾವುದೋ ಬೇರೆ ಬೆಕ್ಕಿನೊಂದಿಗೆ ಜಗಳವಾಡಿ ಮುಖದ ಮೇಲೆ ಒಂದೆರಡು ಕುರುಪು ಹಾಕಿಸಿಕೊಂಡು ಬಂದಿದ್ದ.

ಒಂದು ದಿನ ಕಿಟ್ಟು-ಪುಟ್ಟುವನ್ನು ವೈದ್ಯಕೀಯ ಶೆಡ್ಯೂಲ್ನಂತೆ ರೇಬಿಸ್ ಇಂಜೆಕ್ಷನ್ ಕೊಡಿಸಲು ವೈದ್ಯರ ಬಳಿಗೆ ಕರೆದೊಯ್ದಾಗ, ಅವರು “ಎರಡು ಬೆಕ್ಕುಗಳಿಗೂ ಸರ್ಜರಿ ಮಾಡಿಸಲು ಸರಿಯಾದ ವಯಸ್ಸಿದು ಮಾಡಿಸಿಬಿಡಿ” ಎಂದರು. “ಸರಿ” ಎಂದು ಮುಂದಿನ ವಾರಕ್ಕೆ ವೈದ್ಯರ ಅಪಾಯಿಂಟ್ಮೆಂಟ್ ತೆಗೆದುಕೊಂಡೆವು. ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ದಿನ ಕಿಟ್ಟು ಪುಟ್ಟು ಇಬ್ಬರೂ ಮನೆಗೆ ತುಂಬಾ ತಡವಾಗಿ ಬಂದವು. ಆ ವೇಳೆಗೆ ಆಗಲೇ ವೈದ್ಯರು ಮನೆಗೆ ಹೋಗಿಯಾಗಿತ್ತು. ಇನ್ನೊಂದು ದಿನವೂ ಹೀಗೆ ಆಯಿತು. ನಿಗದಿಪಡಿಸಿದ ದಿನದಂದು ಮಧ್ಯರಾತ್ರಿಯವರೆಗೂ ಇಬ್ಬರ ಸುಳಿವೂ ಇರಲಿಲ್ಲ.

ನಂತರದ ದಿನಗಳಲ್ಲಿ ಕಿಟ್ಟು ಪುಟ್ಟು ಮನೆಯಿಂದ ಹೊರಗೆ ಹೋಗಿ ಬರುವ ಅವಧಿ ಹೆಚ್ಚುತ್ತಾ ಸಾಗಿತ್ತು. ಒಂದು ದಿನ ಕಿಟ್ಟಿ ಹೊರಗೆ ಹೋದವನು ಆ ದಿನವಿಡೀ ಬರಲಿಲ್ಲ. ಚಿನ್ನುವಿನಂತೆ ಇವನು ಎಲ್ಲಿ ಕಾಣೆಯಾಗುವನೋ ಎಂದು ನಮಗೆಲ್ಲ ತೀವ್ರ ಆತಂಕವಾಗಿತ್ತು. ಬೆಳಗಿನ ಜಾವ ಐದು ಗಂಟೆಗೆ ಕಿಟ್ಟಿ ಮನೆಗೆ ಮರಳಿದ. ಆಗ ಅದೆಷ್ಟು ಖುಷಿಯಾಯಿತು ಎಂದರೆ, ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ತನ್ನ ಅಣ್ಣನನ್ನು ಕಾಣದೆ ಮಂಕಾಗಿದ್ದ ಪುಟ್ಟು ಕೂಡ ಗೆಲುವಾದ. ಮತ್ತದೇ ಕುಸ್ತಿ, ಬಾಕ್ಸಿಂಗ್, ಕಬಡ್ಡಿ ಪಂದ್ಯಾವಳಿಗಳು ಶುರುವಾದವು.

ಆಮೇಲಾಮೇಲೆ ಹೊತ್ತು ಗೊತ್ತಿಲ್ಲದೆ ಹೊರಗೆ ತಿರುಗಲು ಶುರುವಿಟ್ಟುಕೊಂಡವು. ಹೊರಗೆ ಹೋದ ಕಿಟ್ಟು-ಪುಟ್ಟು ಯಾವಾಗ ಮನೆಗೆ ಬರುವವೋ ಎಂದು ಕಾಯುವುದೇ ನನ್ನ ಕೆಲಸವಾಯಿತು. ಎಲ್ಲಿದ್ದರೂ ರಾತ್ರಿಗೆ ಮಾತ್ರ ಮನೆಗೆ ಬರುತ್ತಿದ್ದವು. ಇನ್ನೊಮ್ಮೆ, ಹೊರಗೆ ಹೋದ ಕಿಟ್ಟು ಎರಡು ದಿನ ಮನೆಗೆ ಬರಲಿಲ್ಲ. ಮಾರನೇ ದಿನ ಬಂದವನು ಎರಡು ದಿನ ಎಲ್ಲೂ ಹೋಗದೇ ಎಚ್ಚರವಿಲ್ಲದಂತೆ ನಿದ್ದೆ ಮಾಡಿದ. ನಂತರದ ದಿನಗಳಲ್ಲಿ ಕಿಟ್ಟಿಯ ಜೊತೆಗೆ ಪುಟ್ಟುವಿಗೂ ಈ ಚಾಳಿ ಅಂಟಿತು.

ಮುಂದುವರೆಯುವುದು..


  • ಕೆ ಸಿ ರತ್ನಶ್ರೀ ಶ್ರೀಧರ್ – ಚೆನ್ನೈ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading