ಸಾವಿನಿರ್ಮಡಿ ಸಿಕ್ಕಳು (ಭಾಗ -೨)

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮುಂಭಾಗಕ್ಕೆ ಬಂದು ಆ ವಿಶ್ವವಿದ್ಯಾನಿಲಯದ ಹೆಸರಿನ ದೊಡ್ಡ ಫಲಕವಿರುವ ಜಾಗದಲ್ಲಿ ಚಿನ್ಮಯಿ ಮತ್ತು ಅವಳ ಅಪ್ಪ ಅಮ್ಮ ಇಬ್ಬರು ಫೋಟೋ ತೆಗೆಸಿಕೊಂಡರು. ತಮ್ಮ ಮಗಳು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯದಲ್ಲಿ ಪದವಿ ಮಾಡಲು ಆಯ್ಕೆಯಾಗಿರುವುದು ಅವರಿಗೆ ತುಂಬಾ ಸಂತೋಷದ ವಿಷಯವಾಗಿತ್ತು. ಮುಂದೇನಾಯಿತು ಕತೆಗಾರ ಪ್ರೊ. ಪ್ರಸನ್ನ ಸಂತೇಕಡೂರು ಅವರ ‘ಸಾವಿನಿರ್ಮಡಿ’ ಕತೆಯನ್ನು ಪೂರ್ತಿಯಾಗಿ ಓದಿ…

ಚಂದ್ರಶೇಖರ್ ಅವರು ಪ್ರಯಾಣಿಸುತ್ತಿದ್ದ ವಿಮಾನ “ಇನ್ನೇನು ಬೋಸ್ಟನ್ ನಗರದ ಲೋಗನ್ ವಿಮಾನ ನಿಲ್ದಾಣದಲ್ಲಿ ಸದ್ಯದಲ್ಲಿಯೇ ಇಳಿಯಲಿದೆ” ಎಂದು ಸುಂದರವಾದ ಚೈನಿಯಂತೆ ಕಾಣುತ್ತಿದ್ದ ಗಗನಸಖಿಯೊಬ್ಬಳು ತನ್ನ ಇಂಪಾದ ಧ್ವನಿಯ ಮೂಲಕ ಘೋಷಿಸಿದಳು.

ಎಚ್ಚರವಾಗಿಯೇ ಇದ್ದ ಚಿನ್ಮಯಿ “ಅಪ್ಪ, ಅಮ್ಮ, ಬೋಸ್ಟನ್ ಬಂತಂತೆ ಏಳಿ ಬೇಗ” ಎಂದು ಇಬ್ಬರನ್ನು ಎಚ್ಚರಿಸಿದಳು. ವಿಮಾನ ಕೆಳಗೆ ಇಳಿದು ನಿಧಾನವಾಗಿ ಓಡುತ್ತ ಟರ್ಮಿನಲ್ ಬಿ ಕಡೆಯ ೭ನೇ ನಂಬರ್ ಗೇಟ್ ಕಡೆ ಸಾಗಿತು. ವಿಮಾನ ನಿಂತ ಮೇಲೆ ಎಲ್ಲಾ ಪ್ರಯಾಣಿಕರು ನಿಧಾನವಾಗಿ ತಮ್ಮ ತಮ್ಮ ಚಿಕ್ಕ ಲಗೇಜ್ ಎತ್ತಿಕೊಂಡು ಟ್ಯಾಕ್ಸಿ, ಕಾರುಗಳು, ಬಸ್ಸುಗಳ ಕಡೆ ಹೋಗಿ ವಿಮಾನ ನಿಲ್ದಾಣದದಿಂದ ಹೊರ ಸಾಗಿದರು.


ಫೋಟೋ ಕೃಪೆ : ಅಂತರ್ಜಾಲ

ಚಂದ್ರಶೇಖರ್, ಶಾರದಾ ಮತ್ತು ಚಿನ್ಮಯಿ ಕೂಡ ತಮ್ಮ ಚಿಕ್ಕ ಚಿಕ್ಕ ಲಗೇಜ್ ಎತ್ತಿಕೊಂಡು ವಿಮಾನದಿಂದ ಇಳಿದು ದೊಡ್ಡ ಲಗೇಜ್ ಪಡೆಯುವ ಬ್ಯಾಗೇಜ್ ಏರಿಯಾ ಕಡೆ ನಡೆದರು. ಅಲ್ಲಿ ಆಗಲೇ ಅವರ ಲಗೇಜ್ ಬೆಲ್ಟ್ ಮೇಲೆ ಸುತ್ತುತಿತ್ತು. ತಕ್ಷಣವೇ ಅವರು ತಮ್ಮ ಎಲ್ಲಾ ದೊಡ್ಡ ಲಗೇಜ್ ಎತ್ತಿ ಟ್ರಾಲಿ ಮೇಲೆ ಹಾಕಿಕೊಂಡು ಏರ್ಪೋರ್ಟ್ ಶಟಲ್ ಸರ್ವಿಸ್ ಇರುವ ಜಾಗಕ್ಕೆ ಹೋದರು. ಅಲ್ಲಿ ಆನ್ಲೈನ್ ಮೂಲಕ ಚಿನ್ಮಯಿ ಟ್ಯಾಕ್ಸಿ ಬುಕ್ ಮಾಡಿ ಹಾಲಿಡೇ ಇನ್ ಎಕ್ಸ್ಪ್ರೆಸ್ ಮತ್ತು ಸೂಟ್ಸ್ ಎಂಬ ತಾವು ಭಾರತದಿಂದಲೇ ಮೊದಲೇ ಬುಕ್ ಮಾಡಿದ್ದ ಕೇಂಬ್ರಿಜ್ ನಲ್ಲಿರುವ ಲಾಡ್ಜ್ ಗೆ ತಮ್ಮನ್ನ ಬಿಡಲು ಹೇಳಿದಳು. ಬುಕ್ ಮಾಡಿದ ಆ ಟ್ಯಾಕ್ಸಿ ಡ್ರೈವರ್ ಭಾರತದ ಪಂಜಾಬಿ ಸಿಖ್ ಆಗಿದ್ದ. ಅವನು ಎಲ್ಲರನ್ನ ನಗುತ್ತ ಮಾತನಾಡಿಸಿ “ನನ್ನ ಮಗಳು ಕೂಡ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಳೆ” ಎಂದು ತಿಳಿಸಿದ.

“ನನ್ನ ಹೆಸರು ಅಮೃತ್ ಪಾಲ್ ಸಿಂಗ್” ಎಂದು ಹೇಳಿ “ನಿಮಗೆ ಅವಶ್ಯವಿದ್ದಾಗ ಯಾವುದೇ ಸಮಯದಲ್ಲಿ ಬೇಕಾದರೂ ನನಗೆ ಕರೆಮಾಡಿದರೆ ನೀವು ತಲುಪಬೇಕಾದ ಜಾಗಕ್ಕೆ ನಾನು ಸುಲಭವಾಗಿ ತಲುಪಿಸುವೆ” ಎಂದು ಹೇಳಿ ಅವನ ಫೋನ್ ನಂಬರ್ ಕೂಡ ಕೊಟ್ಟ. ಅವನು ಹೆಣ್ಣು ಮಗಳ ತಂದೆ ಎಂದು ಗೊತ್ತಾದಮೇಲೆ ಶಾರದಾ, ಚಿನ್ಮಯಿಗೆ “ಇವನು ತುಂಬಾ ಒಳ್ಳೆಯವನಾಗಿ ಕಾಣುತ್ತಾನೆ, ಇವನ ಫೋನ್ ನಂಬರ್ ಸೇವ್ ಮಾಡಿಕೋ, ಯಾವುದಾದರೂ ಸಮಯಕ್ಕೆ ಇವನು ಬೇಕಾಗಬಹುದು” ಎಂದು ಕನ್ನಡದಲ್ಲಿ ತಿಳಿಸಿದಳು.

ಸುಮಾರು ಹತ್ತು ಮೈಲು ದೂರದ ಬೋಸ್ಟನ್ ನಗರದ ಆ ಪಯಣ ಕೇವಲ ಎರಡನೇ ನಿಮಿಷದ ಪಯಣದ ಹಾಗೆ ಕಂಡು ಆ ಲಾಡ್ಜ್ ಬೇಗನೆ ಬಂತು. ಅಲ್ಲಿನ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಬರಿ ಕಾರುಗಳದ್ದೇ ಸಾಮ್ರಾಜ್ಯ. ಹತ್ತಿರವೇ ವಿಶ್ವವಿದ್ಯಾನಿಲಯವಿದ್ದದ್ದರಿಂದ ಅಲ್ಲಿ ಪ್ರಪಂಚದ ಎಲ್ಲಾ ದೇಶಗಳ, ಎಲ್ಲಾ ಜನಾಂಗಗಳ, ಎಲ್ಲಾ ಧರ್ಮದ ವಿದ್ಯಾರ್ಥಿಗಳು ತಮ್ಮ ವೈವಿಧ್ಯಮಯವಾದ ವೇಷಭೂಷಣಗಳಿಂದ ಭೂಷಿತರಾಗಿ ಓಡಾಡುತ್ತಿದ್ದರು. ಕರಿಯರು, ಏಷ್ಯಾದವರು, ಭಾರತೀಯರು, ಅರಬರು, ಆಫ್ರಿಕಾದವರು, ಯೂರೋಪಿಯನನ್ನರು, ಲ್ಯಾಟಿನೋಗಳು ತಾವು ಯಾವ ದೇಶ, ಯಾವ ಜನಾಂಗಕ್ಕೂ ಸೇರಿಲ್ಲ, ನಾವೆಲ್ಲ ಕೇವಲ ಮಾನವರು ಎಂದು ಎಲ್ಲವನ್ನು ಮರೆತು ಎಲ್ಲರೂ ಒಟ್ಟಿಗೆ ಓಡಾಡುತ್ತಿದ್ದರು. ಅಮೃತ್ ಪಾಲ್ ಸಿಂಗ್ ಅವನೇ ಎಲ್ಲಾ ಲಗೇಜ್ ಅನ್ನು ಇಳಿಸಿ ಆ ಲಾಡ್ಜ್ ನ ಸ್ವಾಗತಕಾರಿಣಿಯ ಹತ್ತಿರ ಕರೆದುಕೊಂಡು ಹೋಗಿ ಇಟ್ಟ. ಆ ಬಿಳಿಯ ಸ್ವಾಗತಕಾರಿಣಿ ಇವರನ್ನ ನೋಡಿ ನಗುತ್ತ
“ನಾನು ರೆಬೆಕ್ಕಾ ಥ್ಯಾಚರ್, ನೀವು ಬ್ಯಾಕಿ ಎಂದು ನನ್ನನ್ನು ಕರೆದರೆ ಆಯಿತು” ಅಂದಳು.

ಚಿನ್ಮಯಿ “ಓ.ಕೆ. ಬ್ಯಾಕಿ, ನಾನು ಚಿನ್ಮಯಿ” ಎಂದು ತನ್ನನ್ನು ಅವಳಿಗೆ ಪರಿಚಯಿಸಿಕೊಂಡು ಇವರು ನನ್ನ “ಪೇರೆಂಟ್ಸ್” ಅಂದಳು.

“ಓ, ಐ.ಸಿ.” ಎಂದು ರೆಬೆಕ್ಕಾ ಎಲ್ಲರ ಪಾಸ್ಪೋರ್ಟ್ಸ್, ವೀಸಾ ಸ್ಟಾಂಪಿಂಗ್ ನೋಡಿ, ಕ್ರೆಡಿಟ್ ಕಾರ್ಡ್ ಡಿಟೈಲ್ಸ್ ತೆಗೆದುಕೊಂಡು ಕೆಳಗೆ ಬಿದ್ದ ಪೆನ್ ಎತ್ತಿಕೊಳ್ಳಲು ಸ್ವಲ್ಪ ಬಗ್ಗಿದಳು. ರೆಬೆಕ್ಕಾ ಬಗ್ಗಿದಾಗ ಕಂಡ ಅವಳ ದೊಡ್ಡ ಕುಚಗಳ ದೃಶ್ಯವನ್ನ ನೋಡಿ “ಇದೇನು ಕರ್ಮನೋ ಎಲ್ಲಾ ತೋರಿಸುತ್ತಿದ್ದಾಳೆ” ಅಂದು ತನ್ನ ಮಗಳು ಚಿನ್ಮಯಿಗೆ ಹೇಳಿದಳು ಶಾರದಾ. ತನ್ನ ಗಂಡನಿಗೆ ನೀವು ಆ ಕಡೇ ಹೋಗಿ ಎಂದು ಕಣ್ಣಿನಲ್ಲಿಯೇ ಸನ್ನೆ ಮಾಡಿ ಅವನನ್ನು ದೂರ ಕಳಿಸಿದಳು.

ಚಿನ್ಮಯಿಯೇ “ಇದೆಲ್ಲಾ ಇಲ್ಲಿ ತುಂಬಾ ಕಾಮನ್ ಅಮ್ಮ. ಅವರ ಬಟ್ಟೆಗಳು ಇರುವುದೇ ಹೀಗೆ. ಈಗ ಭಾರತದಲ್ಲೂ ಎಲೈಟ್ ಕ್ಲಾಸ್ ಹುಡುಗಿಯರು ಆಧುನಿಕ ಬದುಕಿಗೆ ತೆರೆದುಕೊಂಡ ಹುಡುಗಿಯರು ಬಹಳಷ್ಟು ಜನ ಇದೆ ರೀತಿ ಡ್ರೆಸ್ ಹಾಕುತ್ತಾರೆ. ನೀನು ಅದಕ್ಕೆಲ್ಲಾ ತುಂಬಾ ತಲೆ ಕೆಡಿಸಿಕೊಳ್ಳಬಾರದು, ಈಗ ಭಾರತದ ಉಡುಗೆ ತೊಡುಗೆಗಳಿಗೂ ಅಮೇರಿಕಾದ ಉಡುಗೆ ತೊಡುಗೆಗಳಿಗೂ ಅಷ್ಟು ವ್ಯತ್ಯಾಸವಿಲ್ಲದಂತಾಗಿದೆ” ಅಂದಳು.

ಫೋಟೋ ಕೃಪೆ : ಅಂತರ್ಜಾಲ

ಫೋಟೋ ಕೃಪೆ : ಅಂತರ್ಜಾಲ

ಈಗ ರೆಬೆಕ್ಕಾ ಆ ಲಾಡ್ಜ್ ಅಲ್ಲಿ ಅವರಿಗೆ ರೂಮ್ ತೋರಿಸಲು ಅವರ ಜೊತೆಗೆ ಒಬ್ಬ ರೂಮ್ ಬಾಯ್ ನ ಕಳಿಸಿದಳು. ಅವನು ದೈತ್ಯಾಕಾರದ ಕರಿಯ ಹುಡುಗ. ಆ ಹುಡುಗನನ್ನ ನೋಡಿದ ತಕ್ಷಣ ಶಾರದಾಳಿಗೆ ತನ್ನ ಮಗಳು ಚಿನ್ಮಯಿ ಯಾವುದೋ ಕರಿಯ ಹುಡುಗನ ಜೊತೆ ಓಡಾಡುತ್ತಿರುವ ಹಾಗೆ ಮುಂದಿನ ಭವಿಷ್ಯದ ಚಿತ್ರ ಅಸ್ಪಷ್ಟವಾಗಿ ಮೂಡಿತು. ಅದೇ ಸಮಯಕ್ಕೆ ಚಂದ್ರಶೇಖರ್ ಗೆ ತಮ್ಮ ಮಗಳು ಯಾವುದೋ ಲ್ಯಾಟಿನ್ ಹುಡುಗನ ಸೊಂಟಹಿಡಿದು ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡುತ್ತ ಓಡಾಡುತ್ತಿರುವ ಭವಿಷ್ಯದ ದೃಶ್ಯ ಮೂಡಿಬಂತು. ಆದರೂ ಇಬ್ಬರು ಚಿನ್ಮಯಿಯ ಮುಂದೆ ಆ ವಿಷಯ ಮಾತನಾಡಬಾರದೆಂದು ಮಾಗಿಯ ಕೋಗಿಲೆಯ ರೀತಿ ಮೌನವಾಗಿ ಸುಮ್ಮನಿದ್ದರು. ನಂತರ ಇಬ್ಬರೂ “ಇಲ್ಲ ಅದೆಲ್ಲಾ ಸಾಧ್ಯವಿಲ್ಲ. ಚಿನ್ಮಯಿ ನಾವು ಹಾಕಿದ ಗೆರೆ ದಾಟುವುದಿಲ್ಲ. ನಮ್ಮ ಒಪ್ಪಿಗೆಯಿಲ್ಲದೇ ಅವಳು ಯಾವ ಹುಡುಗನನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ” ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಂಡರು.

ಸಂಜೆ ಏಳುವರೆ ಆದರೂ ಇನ್ನು ಸೂರ್ಯಾಸ್ತವಾಗಿರಲಿಲ್ಲ. ಪಶ್ಚಿಮದಲ್ಲಿ ರಕ್ತಕೆಂಪು ಚೆಲ್ಲಿತ್ತು. ಸುದೀರ್ಘ ಪಯಣದಿಂದ ಮೂವರಿಗೂ ಲಾಡ್ಜ್ ಅಲ್ಲಿ ಹೊಟ್ಟೆ ಹಸಿಯುತ್ತಿತ್ತು. ಅಲ್ಲಿಯೇ ಹತ್ತಿರವಿದ್ದ ಚಿಪೊಟ್ಲೆ ಎಂಬ ಮೆಕ್ಸಿಕನ್ ರೆಸ್ಟೋರೆಂಟ್ ಗೆ ಹೋದರು. ಅಲ್ಲಿನ ವೆಜ್ಜಿ ಬೌಲ್ ಬಗ್ಗೆ ಚಿನ್ಮಯಿ ಮೊದಲೇ ತಿಳಿದುಕೊಂಡಿದ್ದಳು. ಮೂವರಿಗೂ ಮೂರು “ವೆಜ್ಜಿ ಬೌಲ್” ಮತ್ತು ಮೂರು “ಬುರಿಟೋ” ಆರ್ಡರ್ ಮಾಡಿದಳು. ಈ ವೆಜ್ಜಿ ಬೌಲ್ ಮತ್ತು ಬುರಿಟೋ ಒಂದು ರೀತಿ ಅನ್ನವನ್ನ ಪಲ್ಯದ ಜೊತೆ ನೆಂಚಿಕೊಂಡು ತಿಂದ ಹಾಗೆ ಆಗುತ್ತದೆ. ಬುರಿಟೋ ಅಂದರೆ ಪಲ್ಯಮಿಶ್ರಿತ ಅನ್ನವನ್ನ ಒಂದು ದೊಡ್ಡ ರೊಟ್ಟಿಯ ಒಳಗ್ಗೆ ಇಟ್ಟು ಅದನ್ನೇ ದೊಡ್ಡ ಸುರುಳಿ ಸುತ್ತಿ ಸುರುಳಿಯ ಎರಡು ಕಡೆ ಮತ್ತೇ ಅದೇ ರೊಟ್ಟಿಯಿಂದ ಮುಚ್ಚಳದ ರೀತಿ ಮುಚ್ಚಿ ತಿನ್ನುವ ಒಂದು ಆಹಾರ. ಮೂವರು ಮೊದಲ ಬಾರಿಗೆ ಅವನ್ನ ತಿನ್ನುತ್ತಿದ್ದರು. ಆದರೂ ಏನೋ ಒಂದು ರೀತಿ ಭಾರತೀಯ ಆಹಾರವನ್ನೆ ತಿಂದ ಭಾವ ಅವರಲ್ಲಿ ಕಾಣುತ್ತಿತ್ತು.

“ಅನ್ನ ದೇವರ ಮುಂದೆ ಇನ್ನು ದೇವರುಂಟೇ?” ಎಂಬ ಸರ್ವಜ್ಞ ಕವಿಯ ಪ್ರಸಿದ್ಧ ತ್ರಿಪದಿ ಚಂದ್ರಶೇಖರನಿಗೆ ಜ್ಞಾಪಕಕ್ಕೆ ಬಂತು.

ಮರುದಿನ ಚಿನ್ಮಯಿ ಬೇಗನೆ ಎದ್ದು ಸ್ನಾನ ಮಾಡಿ ಸಿದ್ದಳಾದಳು. ಅವರ ಅಪ್ಪ ಅಮ್ಮನಿಗೂ ಬೇಗ ರೆಡಿಯಾಗಲು ಹೇಳಿದಳು. ಅವರು ಆದಷ್ಟೂ ಬೇಗ ಸಿದ್ದರಾದರು. ಚಿನ್ಮಯಿ ಜೀವವಿಜ್ಞಾನ ವಿಷಯದಲ್ಲಿ ಪದವಿ ಮಾಡಲು ಆಯ್ಕೆಯಾಗಿದ್ದಳು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಂತರರಾಷ್ಟ್ರೀಯ ವ್ಯವಹಾರಗಳನ್ನ ನೋಡಿಕೊಳ್ಳುವ ಡೀನ್ ಅವರ ಕಚೇರಿಗೆ ಹೋಗಿ ಅಲ್ಲಿನ ಸಿಬ್ಬಂದಿಗಳಿಗೆ ತಾನು ತರಗತಿಗಳಿಗೆ ಎಂದಿನಿಂದ ಹಾಜರಾಗಬೇಕು? ಎಂದು ಕೇಳಬೇಕಿತ್ತು. ಜೊತೆಗೆ ಜೀವವಿಜ್ಞಾನ ವಿಭಾಗದ ಡೀನ್ ಅವರನ್ನ ಭೇಟಿ ಮಾಡಿ ತರಗತಿಗಳು ಎಂದಿನಿಂದ ಆರಂಭವಾಗುತ್ತವೆ? ಎಂದು ಕೇಳಬೇಕಿತ್ತು. ಜುಲೈ ತಿಂಗಳ ಕೊನೆಯವಾರವಾದ್ದರಿಂದ ತರಗತಿ ಆರಂಭವಾಗಲು ಇನ್ನು ಒಂದು ವಾರ ಸಮಯವಿತ್ತು. ಆ ದಿನ ಚಿನ್ಮಯಿ ಡೀನ್ ರನ್ನ ಭೇಟಿಯಾಗಿ ತನ್ನ ಕೆಲಸಗಳನ್ನ ಆದಷ್ಟೂ ಬೇಗ ಮುಗಿಸಿಕೊಂಡಳು. ಬೇಗನೆ ಟಿ-ಮೊಬೈಲ್ ಶಾಪ್ ಗೆ ಹೋಗಿ ಒಂದು ಐ-ಫೋನ್ ಕೊಂಡು ತನ್ನ ಫೋನ್ ನಂಬರ್ ಆಕ್ಟಿವೇಟ್ ಮಾಡಿಕೊಂಡಳು.

ಫೋಟೋ ಕೃಪೆ : ಅಂತರ್ಜಾಲ

ಹಾರ್ವರ್ಡ್ ವಿಶ್ವವಿದ್ಯಾನಿಲಯದ ಮುಂಭಾಗಕ್ಕೆ ಬಂದು ಆ ವಿಶ್ವವಿದ್ಯಾನಿಲಯದ ಹೆಸರಿನ ದೊಡ್ಡ ಫಲಕವಿರುವ ಜಾಗದಲ್ಲಿ ಚಿನ್ಮಯಿ ಮತ್ತು ಅವಳ ಅಪ್ಪ ಅಮ್ಮ ಇಬ್ಬರು ಫೋಟೋ ತೆಗೆಸಿಕೊಂಡರು. ತಮ್ಮ ಮಗಳು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯದಲ್ಲಿ ಪದವಿ ಮಾಡಲು ಆಯ್ಕೆಯಾಗಿರುವುದು ಅವರಿಗೆ ತುಂಬಾ ಸಂತೋಷದ ವಿಷಯವಾಗಿತ್ತು. ಆ ಫೋಟೋಗಳನ್ನು ತಮ್ಮ ಕುಟುಂಬದವರು, ನೆಂಟರು, ಸ್ನೇಹಿತರು, ಬಂಧುಬಳಗದವರು ಎಲ್ಲರೂ ಫೇಸ್ಬುಕ್ ಅಲ್ಲಿ ನೋಡಲಿ ಎಂಬುದು ಶಾರದಾಳ ಆಸೆ. ಜೊತೆಗೆ ಎಲ್ಲರಿಗೂ ವಾಟ್ಸಾಪ್‌ ಬೇರೆ ಮಾಡಿಸಿದಳು.

ಆ ಮೂರು ಜನ ಹಲವಾರು ಕೋನಗಳಿಂದ ಬೇರೆ ಬೇರೆ ಜಾಗಗಳಲ್ಲಿ ಫೋಟೋ ತೆಗೆಸಿಕೊಳ್ಳುವಾಗಲೇ ಚಂದ್ರಶೇಖರ್ ಗೆ ಅಲ್ಲೊಬ್ಬಳು ಹುಡುಗಿ ಹುಲ್ಲು ಹಾಸಿನ ಮೇಲೆ ಕುಳಿತು ತನ್ನ ಒಂದು ಕೈಯಲ್ಲಿ ಯಾವುದೋ ಬೃಹತ್ ಗ್ರಂಥವನ್ನ ಹಿಡಿದುಕೊಂಡು ಓದುತ್ತಿದ್ದಳು. ಮುಂದೆ ಒಂದು ತವಣೆ ಕೋಲು ಅಥವಾ ಮರದ ಪುಸ್ತಕದ ಸ್ಟ್ಯಾಂಡ್ ಇಟ್ಟುಕೊಂಡಿದ್ದಳು. ಜೊತೆಗೆ ದೊಡ್ಡ ದಿಂಬಿನ ಆ ಕಾರದ ಬಟ್ಟೆಯ ವಸ್ತುವಿಗೆ ಹೊರಗಿ ಆರಾಮವಾಗಿ, ಸುಖವಾಗಿ ಕುಳಿತಿದ್ದಳು. ಅವಳು ತನ್ನ ತಲೆಯ ಕೂದಲನ್ನು ಋಷಿ ಮುನಿಗಳ ಕೂದಲಿನ ತರಹ ಮೇಲಕ್ಕೆ ದೊಡ್ಡ ಜಟೆ ಕಟ್ಟಿಕೊಂಡಿದ್ದಳು. ನೋಡಲು ಭಾರತೀಯ ಮೂಲದ ಹುಡುಗಿಯ ರೀತಿ ಕಾಣುತ್ತಿದ್ದಳು.

ಆದರೆ ಚಂದ್ರಶೇಖರ್ ಗೆ ಆ ಹುಡುಗಿಯನ್ನು ಎಲ್ಲೋ ನೋಡಿದ್ದೇನೆ ಎಂದು ತುಂಬಾ ಅನಿಸಿತು. ಆದರೆ ಎಲ್ಲಿ? ಎಂದು ತಿಳಿಯಲಿಲ್ಲ. ಕೆಲವೇ ನಿಮಿಷಗಳಲ್ಲಿ ನಾಲ್ಕೈದು ಹುಡುಗಿಯರು ಬಂದು ಅವಳ ತಲೆಗೆ ಒಂದು ಚಿಕ್ಕ ಕಿರೀಟ ಇಟ್ಟು, ಬಟ್ಟೆಯ ಪಟ್ಟಿಯ ಮೇಲೆ ಕಂಗ್ರಾಜುಲೇಷನ್ಸ್ ಎಂದು ಬರೆಸಿ ಅದನ್ನು ಹಾರದ ರೀತಿ ಅವಳ ಕುತ್ತಿಗೆಗೆ ಹಾಕಿ ಭುಜದ ಮೇಲಿನಿಂದ ಅವಳ ದೇಹದ ಮೇಲೆ ಇಳಿಬಿಟ್ಟರು. ಅವಳು ನಗುತ್ತಿದ್ದಳು. ಕೆಲವರು ಅವಳಿಗೆ ಹೂಗುಚ್ಛ ನೀಡಿ ಶುಭಕೋರಿ ಅಭಿನಂದಿಸಿದರು. ಐದು ನಿಮಿಷದಲ್ಲಿ ಅವಳ ತಂದೆ ತಾಯಿಯೂ ಬಂದು ಮಗಳನ್ನ ತಬ್ಬಿಕೊಂಡು ಅವಳ ಹಣೆಗೆ ಮುತ್ತುಕೊಟ್ಟು ಅಭಿನಂದಿಸಿದರು.

ಚಂದ್ರಶೇಖರ್ ಗೆ ಆ ಹುಡುಗಿಯ ಪೋಷಕರನ್ನ ಪರಿಚಯಿಸಿಕೊಳ್ಳಬೇಕೆಂಬ ಆಸೆಯಾಯಿತು. ಶಾರದಾಳಿಗೆ ಮತ್ತು ಚಿನ್ಮಯಿಗೆ ಹೇಳಿ ಅವನೇ ಮುಂದೆ ಹೋಗಿ “ನಾನು ಚಂದ್ರಶೇಖರ್, ಇವರು ನನ್ನ ಪತ್ನಿ ಶಾರದಾ ಮತ್ತು ಮಗಳು ಚಿನ್ಮಯಿ. ಚಿನ್ಮಯಿ ಈ ವರ್ಷ ಇಲ್ಲಿ ಪದವಿ ಓದಲು ಹೊಸದಾಗಿ ಸೇರಿಕೊಂಡಿದ್ದಾಳೆ. ಇವಳಿಗೆ ಇದು ಸಂಪೂರ್ಣ ಹೊಸ ಅನುಭವ, ಹೊಸ ದೇಶ, ಹೊಸ ಊರು, ಹೊಸ ಜನ ಅದಕ್ಕೆ ನಾವೇ ಜೊತೆಗೆ ಬಂದಿದ್ದೇವೆ. ಇವಳನ್ನ ಇಲ್ಲಿ ಬಿಟ್ಟು ನಾವು ನಾಡಿದ್ದು ಭಾರತಕ್ಕೆ ಹಿಂತಿರುಗುವೆವು” ಅಂದ.

ಆ ಹುಡುಗಿಯ ತಂದೆ “ನಾನು ನಾಗಾರ್ಜುನ್, ಇವಳು ನನ್ನ ಪತ್ನಿ ನಂದಿನಿ, ಅವಳು ನಮ್ಮ ಒಬ್ಬಳೇ ಮಗಳು ಪ್ರಜ್ಞಾ. ನಾವು ಆಂಧ್ರದ ಅಮರಾವತಿಯವರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿ ಬಂದು ನ್ಯೂಯಾರ್ಕ್ ನಗರದಲ್ಲಿ ನೆಲೆಸಿದ್ದೇವೆ. ನಮ್ಮ ಪ್ರಜ್ಞಾ ಪದವಿ ಪರೀಕ್ಷೆಯಲ್ಲಿ ಇಡೀ ವಿಶ್ವವಿದ್ಯಾನಿಲಯಕ್ಕೆ ಮೊದಲ ರ್‍ಯಾಂಕ್‌ ಪಡೆದಿದ್ದಾಳೆ. ಅದನ್ನ ಸೆಲೆಬ್ರೆಟ್ ಮಾಡಲು ನಾವು ಇಲ್ಲಿ ಸೇರಿದ್ದೇವೆ” ಅಂದರು.

“ನಿಮ್ಮ ಪರಿಚಯ ಆಗಿದ್ದು ಒಳ್ಳೆಯದೇ ಆಯಿತು. ನಿಮ್ಮ ಮಗಳು ಪ್ರಜ್ಞಾಳ ಪರಿಚಯವಾದರೆ ನಮ್ಮ ಮಗಳು ಚಿನ್ಮಯಿಗೆ ತುಂಬಾ ಸಹಾಯ ವಾಗುತ್ತದೆ” ಎಂದು ಹೇಳಿ ಅವರಿಬ್ಬರನ್ನು ಪರಿಚಯಿಸಿದ.

ಈಗ ಪ್ರಜ್ಞಾ “ಹಲೋ, ಐ ಆಮ್ ಪ್ರಜ್ಞಾ, ಎಂದು ಚಿನ್ಮಯಿಗೆ ಶೇಕ್ ಹ್ಯಾಂಡ್ ಕೊಟ್ಟು ತಬ್ಬಿಕೊಂಡಳು.

ಚಿನ್ಮಯಿ ಕೂಡ “ಹಲೋ, ಐ ಆಮ್ ಚಿನ್ಮಯಿ” ಎಂದು ಪ್ರಜ್ಞಾಳನ್ನು ನೋಡಿ ಮಂದಹಾಸ ಬೀರಿದಳು.

ಚಿನ್ಮಯಿಗೆ ಪ್ರಜ್ಞಾ ತಬ್ಬಿಕೊಂಡಾಗ ಅವಳ ದೇಹದಿಂದ ಇವಳ ದೇಹಕ್ಕೆ ಯಾವುದೋ ಅಗೋಚರ ಶಕ್ತಿ ಹರಿದಹಾಗೆ ಭಾವನೆ ಮೂಡಿತು. ಅವಳ ನಗು, ಗುಣ ಕೂಡ ಚಿನ್ಮಯಿಗೆ
ಇಷ್ಟವಾಯಿತು. ಅವರು ತಮ್ಮ ಫೋನ್ ನಂಬರ್ ಗಳನ್ನ ಕೂಡ ವಿನಿಮಯ ಮಾಡಿಕೊಂಡರು.

ಈಗ ನಾಗಾರ್ಜುನ್ ನಂದಿನಿ ದಂಪತಿಗಳಿಗೆ ಚಂದ್ರಶೇಖರ್ ಮತ್ತು ಶಾರದಾ ದಂಪತಿಗಳು “ಈಗ ನಾವು ಹೊರಡುತ್ತೇವೆ. ನಿಮ್ಮ ಪರಿಚಯ ಆಗಿದ್ದೂ ನಮ್ಮ ಮಗಳಿಗೆ ತುಂಬಾ ಒಳ್ಳೆಯದೇ ಆಯಿತು” ಎಂದು ಹೇಳಿ ಚಿನ್ಮಯಿಯನ್ನು ಕರೆದುಕೊಂಡು ತಾವು ಉಳಿದುಕೊಂಡಿದ್ದ ಲಾಡ್ಜ್ ಗೆ ಹೊರಟರು.

ಮರುದಿನ ಚಿನ್ಮಯಿಗೆ ಭಾರತೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪೋಸ್ಟ್ ಡಾಕ್ಟೋರಲ್ ಫೆಲೋಗಳು ಹೆಚ್ಚು ಇರುವ ಅಪಾರ್ಟಮೆಂಟ್ ಒಂದರಲ್ಲಿ ಇನ್ನು ಮೂರು ಜನ ಭಾರತೀಯ ಹುಡುಗಿಯರು ಇರುವ ರೂಮ್ ಬಾಡಿಗೆಗೆ ಪಡೆದುಕೊಂಡು ಅವಳ ಲಗೇಜ್, ಬುಕ್ಸ್ ಎಲ್ಲವನ್ನ ಅಲ್ಲಿಗೆ ಶಿಫ್ಟ್ ಮಾಡಿದರು. ಈಗ ಚಿನ್ಮಯಿಗೆ ಸ್ವಲ್ಪ ಸಮಾಧಾನವಾಯಿತು. ಸಂಜೆ ಆ ಅಪಾರ್ಟಮೆಂಟ್ ನ ಹುಡುಗಿಯರ ಜೊತೆ ಸ್ವಲ್ಪ ಸಮಯವನ್ನ ಕಳೆದಳು. ಅವರೆಲ್ಲರೂ ತುಂಬಾ ಸ್ನೇಹಪರವಾಗಿದ್ದಾರೆ, ಒಳ್ಳೆಯ ಕುಟುಂಬದ ಹೆಣ್ಣು ಮಕ್ಕಳ ರೀತಿ ಕಾಣುತ್ತಿದ್ದರು ಎಂದು ಅವಳಿಗೆ ಇನ್ನು ಹೆಚ್ಚು ಸಮಾಧಾನವಾಯಿತು. ಅದು ಅವಳ ಮುಖದಲ್ಲೂ ಕಾಣುತಿತ್ತು. ಈಗ ಚಂದ್ರಶೇಖರ್, ಶಾರದಾ ಅವರಿಗೂ ಸ್ವಲ್ಪ ಸಮಾಧಾನವಾಯಿತು.

ಆದರೂ ಸೂರ್ಯ ಮುಳುಗಿದ ಮತ್ತೇ ಹುಟ್ಟಿದ ಮರುದಿನವಾಯಿತು. ಅವರು ಮುದ್ದು ಮಗಳನ್ನು ಅವಳ ಸುಂದರ ಬದುಕನ್ನು ಕಟ್ಟಿಕೊಳ್ಳಲು ಬೋಸ್ಟನ್ ಅಲ್ಲಿ ಬಿಟ್ಟು ಬೆಂಗಳೂರಿಗೆ ಹೊರಟರು.


ಚಂದ್ರಶೇಖರ್, ಶಾರದಾ ಬೆಂಗಳೂರಿಗೆ ಬಂದಾಗ ಪ್ರತಿ ದಿನ ಮಗಳು ಜ್ಞಾಪಕ ಬರುತ್ತಿದ್ದಳು. ವೀಡಿಯೊ ಕರೆ ಮಾಡಿ ಅವಳು ಊಟ ಮಾಡಿದ್ದಾಳ?, ಆರಾಮಾಗಿ ಇದ್ದಾಳ? ಎಂದು ತಿಳಿದ ಮೇಲೆಯೇ ಅವರು ಮಲಗುತ್ತಿದ್ದದ್ದು. ಹೀಗೆ ಆರು ತಿಂಗಳಾದರೂ ಮಗಳು ಇಲ್ಲೇ ಎಲ್ಲೋ ಇದ್ದಾಳೆ ಎಂದು ಅವರಿಗೆ ಅನಿಸುತಿತ್ತು. ಅವಳು ಓದಿನಲ್ಲಿ ಚೆನ್ನಾಗಿ ಮಾರ್ಕ್ಸ್ ತೆಗೆಯುತ್ತಿರುವುದು ಚಂದ್ರಶೇಖರ್ ಗೆ ಒಂದು ರೀತಿ ಸಮಾಧಾನ ತಂದಿತ್ತು.

ಫೋಟೋ ಕೃಪೆ : ಅಂತರ್ಜಾಲ

ಚಂದ್ರಶೇಖರ್ ಚಿನ್ಮಯಿ ಹುಟ್ಟಿದಾಗ ಹೆಣ್ಣು ಮಗು ಎಂದು ಬೇಜಾರು ಮಾಡಿಕೊಂಡದ್ದು ನೆನೆದು ಅವನ ಮನಸಿಗೆ ನೋವಾಯಿತು, ಈಗ ಅವಳೇ ಅವನ ಬಾಳಿಗೆ ಬೆಳಕಾಗಿ ಬಂದು, ಅವನ ಬದುಕಿಗೆ ಅರ್ಥ ನೀಡಿದಳು ಎಂದು ನೆನೆದು ತಕ್ಷಣವೇ ಸಂತೋಷ ಪಡುತ್ತಿದ್ದ.

ಒಂದು ದಿನ ಅವನ ಹಳೆಯ ಸಹೋದ್ಯೋಗಿ ವಿನಯ್ ಕರೆ ಮಾಡಿ “ಏನು ಚಂದ್ರಶೇಖರ್ ಹೇಗಿದ್ದೀರ?”

“ಮಗಳನ್ನು ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ಓದಲು ಕಳಿಸಿದ್ದಿರಂತೆ?”

“ತುಂಬಾ ಸಂತೋಷದ ವಿಷಯ. ನಿಮ್ಮ ಮಗಳಿಗೆ ಒಳ್ಳೆಯದಾಗುತ್ತೆ ಎಂದು ನಾನು ಆ ದಿನವೇ ಹೇಳಿದ್ದೆ ಅಲ್ಲವೇ?” ಅಂದದ್ದು ಚಂದ್ರಶೇಖರ್ ಗೆ ಮತ್ತೇ ತನ್ನ ಬದುಕನ್ನ ಸಿಂಹಾವಲೋಕನ ಮಾಡುವಂತಾಯಿತು.

ಈಗ ಹಳೆಯ ಘಟನೆ ಒಂದು ಜ್ಞಾಪಕಕ್ಕೆ ಬಂತು.

ವಿನಯ್ ಅವರದು ಕೋಲಾರ ಜಿಲ್ಲೆಯ ಬಂಗಾರ ಪೇಟೆಯ ಹತ್ತಿರ ಕರಬೆಲೆ ಅಥವಾ ಕರುಬೆಲೆ ಎಂಬ ಹಳ್ಳಿ. ಅವರ ತಂದೆಯ ಹೆಸರು ಮುನಿ ವೆಂಕಟರೆಡ್ಡಿ. ಆಗರ್ಭ ಶ್ರೀಮಂತರಾಗಿದ್ದ ಜಮಿನ್ದಾರ್ ಮುನಿ ವೆಂಕಟರೆಡ್ಡಿಯವರು ಆ ಕಾಲಕ್ಕೆ ಕೇವಲ ಎಸ್.ಎಸ್.ಎಲ್. ಸಿ, ವರೆಗೂ ಓದಿದ್ದರೂ “ದೇಶ ಸುತ್ತು,ಕೋಶ ಓದು”, ಎಂಬಂತೆ ಅಪಾರವಾಗಿ ಪುಸ್ತಕಗಳನ್ನ ಓದಿ ಜ್ಞಾನ ಪಡೆದು, ಸ್ಥಿತಪ್ರಜ್ಞತೆಯಿಂದ ಬದುಕನ್ನ ಸಾಗಿಸುತ್ತ ಒಳ್ಳೆಯ ಹೆಸರು ಪಡೆದು ಊರಲ್ಲಿ ನ್ಯಾಯ ಹೇಳುವ ಮಟ್ಟಕ್ಕೆ ಎತ್ತರಕ್ಕೆ ಬೆಳೆದಿದ್ದರು. ಏಳು ಜನ ಹೆಣ್ಣು ಮಕ್ಕಳ ನಂತರ ಹುಟ್ಟಿದ್ದ ವಿನಯ್ ಗೆ ತುಂಬಾ ಚೆನ್ನಾಗಿ ಬೆಳೆಸಿ ಉನ್ನತ ಶಿಕ್ಷಣ ಮಾಡುವಂತೆ ಮುನಿ ವೆಂಕಟರೆಡ್ಡಿ ಪ್ರೇರೇಪಿಸಿದ್ದರು. ಹೆಣ್ಣು ಮಕ್ಕಳನ್ನ ಅಪಾರವಾಗಿ ಪ್ರೀತಿಸುತ್ತಿದ್ದ ಅವರು ಯಾವ ತಾರತಮ್ಯವಿಲ್ಲದೇ ತಮ್ಮ ಹೆಣ್ಣು ಮಕ್ಕಳಿಗೂ ಕೂಡ ಚೆನ್ನಾಗಿ ಓದಿಸಿದ್ದರು. ಒಂದು ದಿನ ಹೆಣ್ಣು ಮಗು ಹುಟ್ಟಿದಾಗ ತುಂಬಾ ಬೇಜಾರು ಮಾಡಿಕೊಂಡಿದ್ದ ಚಂದ್ರಶೇಖರ್ ಗೆ ವಿನಯ್ ತಮ್ಮ ಹಳ್ಳಿ ಕರಬೆಲೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ತನ್ನ ಸಹೋದ್ಯೋಗಿಯನ್ನು ತಮ್ಮ ತಂದೆಗೆ ಪರಿಚಯ ಮಾಡಿಕೊಟ್ಟಿದ್ದರು. ಮುನಿ ವೆಂಕಟಪ್ಪ ತನ್ನ ಮಗನ ಸಹೋದ್ಯೋಗಿಯನ್ನು ತುಂಬಾ ಆತ್ಮೀಯತೆಯಿಂದ ಮಾತನಾಡಿಸಿ ಉಪಾಚಾರ ಮಾಡಿ ತಮ್ಮ ತೋಟಕ್ಕೆ ಕರೆದುಕೊಂಡು ಹೋಗಿದ್ದರು. ಆ ತೋಟದಲ್ಲಿ ಓಡಾಡಿದ ಮೇಲೆ ಒಂದು ಚಿಕ್ಕ ದೇವಾಲಯದ ಹತ್ತಿರ ಕರೆದುಕೊಂಡು ಹೋಗಿ

“ಇದು ಮಹಾಸರಸ್ವತಮ್ಮನ ದೇವಾಲಯ” ಎಂದು ಚಂದ್ರಶೇಖರ್ ಗೆ ತಿಳಿಸಿದರು.

“ಈ ಮಹಾಸರಸ್ವತಮ್ಮನ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗಬಹುದು! ಚಂದ್ರಶೇಖರ್” ಅಂದಿದ್ದರು.

“ಇದೆ ಜಾಗದಲ್ಲಿ ಹಿಂದೆ ಒಂದು ಶಾಸನವಿತ್ತು. ಆ ಶಾಸನದಲ್ಲಿ ಸುಂದರವಾದ ಯುವ ಮಹಿಳೆಯೊಬ್ಬಳು ತಾಳೆಗರಿಗಳನ್ನು ಓದುತ್ತ ತುಂಬಾ ಸರಳವಾಗಿ ನಿರಾಭರಣೆಯಾಗಿ ಕುಳಿತಿರುವಂತೆ ಸುಂದರವಾಗಿ ಆ ಶಿಲ್ಪವನ್ನು ಕೆತ್ತಿದ್ದರು. ಅವಳು ಶ್ರದ್ಧೆಯಿಂದ ಅಧ್ಯಯನಕ್ಕೆ ಕುಳಿತಿರುವಾಗ ಅವಳ ಮುಂದೆ ಓದುವ ಗ್ರಂಥಗಳನ್ನು ಇಟ್ಟುಕೊಳ್ಳಲು ಬಳಸುವ ಪುಸ್ತಕದ ಒಂದು ಸ್ಟಾಂಡ್ ಕೂಡ ಇತ್ತು. ಅವಳೊಬ್ಬ ಸರ್ವಶಾಸ್ತ್ರಗಳನ್ನು ಅರೆದು ಕುಡಿದ ಮಹಾಜ್ಞಾನಿ ಹೆಣ್ಣು. ಅವಳು ಅರವತ್ತನಾಲ್ಕು ವಿದ್ಯೆಗಳಲ್ಲಿ ಪಾರಂಗತಳಾಗಿದ್ದಳು ಎಂದು ಜನ ಈಗಲೂ ಹೇಳುತ್ತಾರೆ. ಅವಳು ಆ ಕಾಲಕ್ಕೆ ನಾಳಂದ ವಿಶ್ವವಿದ್ಯಾನಿಲಯಕ್ಕೆ ಹೋಗಿ ಅಧ್ಯಯನ ಮಾಡಿ ಬಂದಿದ್ದಳು ಎಂದು ಹೇಳುತ್ತಾರೆ. ಅವಳ ತಂದೆ ಅವಳನ್ನು ಬಳ್ಳಿಗಾವಿಯ ಜಯಂತಿಪ್ರಭ ಬೌದ್ಧವಿಹಾರಕ್ಕೆ ಕಳಿಸಿ ಅಲ್ಲಿಯೂ ಓದಿಸಿದ್ದನಂತೆ. ಆಮೇಲೆ ಅವಳು ಯೋಗಿನಿಯಾಗಿ ಯಾವುದೋ ದೇಶಕ್ಕೆ ಹೋದಳೆಂದು ಹೇಳುತ್ತಾರೆ. ಅದು ಇಂದಿಗೂ ಯಾರಿಗೂ ತಿಳಿದಿಲ್ಲ. ನಮ್ಮ ಪೂರ್ವಜರು ಅವಳನ್ನ ಮಹಾಸರಸ್ವತಮ್ಮ ಎಂದು ಪೂಜಿಸುತ್ತಿದ್ದರು. ಆ ಶಾಸನದಲ್ಲಿ ಒಂದು ಸಾಲಿನಲ್ಲಿ ಅವಳ ಅಪ್ಪನ ಹೆಸರು, ಅಮ್ಮನ ಹೆಸರು ಮತ್ತು ಅವಳ ಹೆಸರನ್ನು ಕೂಡ ಬರೆದಿದ್ದರು. ನನಗೆ ಆ ಹೆಸರುಗಳು ಈಗ ಮರೆತು ಹೋಗಿವೆ. ನಮ್ಮೂರಿನ ಜನ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸವನ್ನ ಶೃಂಗೇರಿಗೋ ಮತ್ತೆಲ್ಲಿಗೋ ಹೋಗಿ ಮಾಡಿಸುತ್ತಲಿರಲಿಲ್ಲ. ಅವರು ಈ ಮಹಾಸರಸ್ವತಮ್ಮನ ಕಲ್ಲಿನ ಮುಂದೆಯೇ ಮಾಡಿಸುತ್ತಿದ್ದರು. ಇಂದು ನಮ್ಮೂರಿನ ಹಲವು ಮಕ್ಕಳು ಚೆನ್ನಾಗಿ ಓದಿ ಐ.ಎ.ಎಸ್., ಕೆ.ಎ.ಎಸ್. ಅಧಿಕಾರಿಗಳಾಗಿದ್ದಾರೆ. ಹಲವರು ಪ್ರಾಧ್ಯಾಪಕರುಗಳಾಗಿದ್ದಾರೆ, ಶಿಕ್ಷಕ, ಶಿಕ್ಷಕಿಯರಾಗಿದ್ದಾರೆ, ನೂರಾರು ಜನ ಸರ್ಕಾರಿ ಹುದ್ದೆಗಳನ್ನು ಪಡೆದಿದ್ದಾರೆ. ಒಂದು ಹತ್ತು ಜನ ವೈದ್ಯರಾಗಿದ್ದಾರೆ. ಇಲೆಕ್ಟ್ರಾನಿಕ್ ಸಿಟಿಯಲ್ಲಿ ಐಟಿ ಕಂಪೆನಿಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಇದು ಆ ಮಹಾಸರಸ್ವತಮ್ಮನ ಪವಾಡ ಎಂದು ನಮ್ಮೂರಿನ ಜನ ಭಾವಿಸಿದ್ದಾರೆ. ನಾನು ಕೂಡ ಅದನ್ನ ತುಂಬಾ ನಂಬಿದ್ದೇನೆ. ಆದರೆ, ಅದೇನು ದುರಂತವೋ ಏನೋ ನಮ್ಮೂರಿನ ಆ ಮಹಾಸರಸ್ವತಮ್ಮನ ಶಾಸನವನ್ನು ಪುರಾತತ್ವ ಇಲಾಖೆಯವರು ತೆಗೆದುಕೊಂಡು ಹೋಗಿ ಬೆಂಗಳೂರಿನ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿ ಇಟ್ಟಿದ್ದಾರಂತೆ” ಅಂದರು.

“ಆ ಶಾಸನವನ್ನು ತೆಗೆದುಕೊಂಡು ಹೋಗುವಾಗ ನಮ್ಮೂರಿನ ಜನ “ಆ ಶಾಸನ ಇಲ್ಲೇ ಇರಲಿ, ನಾವೇ ನಮ್ಮ ಮಹಾಸರಸ್ವತಮ್ಮನಿಗೆ ಒಂದು ದೊಡ್ಡ ದೇವಾಲಯ ಕಟ್ಟುತ್ತೇವೆ” ಎಂದು ಹೇಳಿದರೂ ಅವರು ಕೇಳದೆ ಅದನ್ನು ತೆಗೆದುಕೊಂಡು ಹೋದರು. ಆ ಶಾಸನ ತೆಗೆದುಕೊಂಡು ಹೋಗುವಾಗ ನಮ್ಮೂರಿನ ಹೆಣ್ಣು ಮಕ್ಕಳು ತಮ್ಮ ಮನೆಯ ಹೆಣ್ಣು ಮಗಳನ್ನೇ ಆ ಜನ ಎತ್ತಿಕೊಂಡು ಹೊಯ್ಯುತ್ತಿದ್ದಾರೆ, ಬಲವಂತವಾಗಿ ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿ ದುಃಖದಿಂದ ಅಳುತ್ತಿದ್ದರು. ನಮ್ಮೂರಿನ ಹೆಣ್ಣು ಮಕ್ಕಳ ಸಮಾಧಾನಕ್ಕೆ ನಾವೆಲ್ಲಾ ಸೇರಿ ಅದೇ ಜಾಗದಲ್ಲಿ ಈಗ ಒಂದು ದೇವತೆಯ ವಿಗ್ರಹವನ್ನು ಕೆತ್ತಿಸಿ ಅಲ್ಲಿ ಸ್ಥಾಪಿಸಿ ಪೂಜಿಸುತ್ತಿದ್ದೇವೆ. ಈಗ ಇದೆ ಆ ಮಹಾಸರಸ್ವತಮ್ಮನ ದೇವಾಲಯ”.

“ಕೆಲವು ದಿನಗಳ ಹಿಂದೆ ಹೆಣ್ಣು ಮಗು ಹುಟ್ಟಿರುವುದಕ್ಕೆ ನೀವು ತುಂಬಾ ಬೇಜಾರು ಮಾಡಿಕೊಂಡಿದ್ರಿ ಅಂತ ನಮ್ಮ ವಿನಯ್ ಹೇಳಿದ. ಆ ತಕ್ಷಣವೇ ನಿಮಗೆ ಈ ಸತ್ಯವಂತೆಯ ಬಗ್ಗೆ ತಿಳಿಯಲಿ ಎಂದು ನಾನೇ ವಿನಯ್ ಗೆ ಹೇಳಿ ನಿಮ್ಮನ್ನ ನಮ್ಮ ಊರಿಗೆ ಕರೆಸಿದೆ. ನಿಮಗೆ ಈ ಮಹಾಸರಸ್ವತಮ್ಮನ ಆಶೀರ್ವಾದ ಸದಾ ಇರುತ್ತೆ. ನಿಮ್ಮ ಮಗಳು ಓದಿ ದೊಡ್ಡ ಸಾಧನೆ ಮಾಡುತ್ತಾಳೆ. ನೀವು ಅವಳನ್ನ ಪ್ರೀತಿಯಿಂದ ಮಗನಂತೆಯೇ ಬೆಳಸಿ. ಅವಳೇ ನಿಮ್ಮ ಮನೆಯ ಆರತಿಗೆ ಮತ್ತು ಕೀರ್ತಿಗೆ ಕಾರಣವಾಗುತ್ತಾಳೆ” ಎಂದು ಮುನಿ ವೆಂಕಟರೆಡ್ಡಿ ಆಶೀರ್ವದಿಸಿ ಕಳಿಸಿದ್ದರು.

ಅದೆಲ್ಲಾ ಈ ದಿನ ವಿನಯ್ ಅವರು ಕರೆ ಮಾಡಿದ್ದರಿಂದ ಚಂದ್ರಶೇಖರ್ ಗೆ ಜ್ಞಾಪಕಕ್ಕೆ ಬಂತು. ಆ ಕರಬೆಲೆ ಇಂದ ಬಂದ ಮೇಲೆ ಚಂದ್ರಶೇಖರ್ ಗೆ ಸುಂದರವಾದ ಯುವತಿಯೊಬ್ಬಳು ಕುದುರೆ ಮೇಲೆ ಸವಾರಿ ಮಾಡುತ್ತಿರುವ, ಕತ್ತಿ ವರಸೆ ಮಾಡುತ್ತಿರುವ ಕನಸು ಬೀಳುತಿತ್ತು. ಆಮೇಲೆ ಅವಳು ಯೋಗಿನಿಯಾಗಿ ಹಿಮಾಲಯಕ್ಕೆ ಹೋಗಿರುವ ಹಾಗೆ ದೃಶ್ಯ ಕಾಣುತ್ತಿದ್ದ. ಆ ದೃಶ್ಯ ಮುನಿ ವೆಂಕಟರೆಡ್ಡಿಯವರು ಹೇಳಿದ್ದ ಮಹಾಸರಸ್ವತಮ್ಮನದೇ ಇರಬೇಕು ಅಂದುಕೊಂಡ.

ಆ ಮೇಲೆ ಒಂದು ದಿನ ತಮ್ಮ ಮತ್ತೀಕೆರೆಯಲ್ಲಿರುವ ಮನೆಯಿಂದ ಕಬ್ಬನ್ ಪಾರ್ಕ್ ಹತ್ತಿರ ಕಸ್ತೂರಬಾ ರಸ್ತೆಯಲ್ಲಿರುವ ಪ್ರಾಚ್ಯವಸ್ತು ಪ್ರದರ್ಶನದ ಕಚೇರಿಗೆ ಹೋಗಿದ್ದ. ಆ ವಸ್ತು ಪ್ರದರ್ಶನದ ಆವರಣದೊಳಗೆ ಹೋಗಿದ್ದು ಮಾತ್ರ ಅವನಿಗೆ ಗೊತ್ತು. ಆಮೇಲೆ ಏನಾಯಿತು ಎಂದು ಎಷ್ಟೂ ಯೋಚಿಸಿದರೂ ಅವನಿಗೆ ಜ್ಞಾಪಕ ಬರಲಿಲ್ಲ. ಅಲ್ಲೊಬ್ಬ ಸಿಬ್ಬಂದಿ ಇವನು ಕೇಳಿದ ಶಾಸನವನ್ನು ಇಲ್ಲಿದೆ ನೋಡಿ ಎಂದು ತೋರಿಸಿ

“ತಂಜಾವೂರಿನ ಚೋಳರು ಕೋಲಾರ ಪ್ರಾಂತ್ಯವನ್ನು ಯುದ್ಧ ಮಾಡಿ ಆಕ್ರಮಿಸಿಕೊಳ್ಳುವುದಕ್ಕಿಂತ ಮುಂಚೆಯೇ ನಮ್ಮ ಕೋಲಾರ ಜಿಲ್ಲೆಯ ಆ ಭಾಗವನ್ನ ಗಂಗರು, ನೊಳಂಬರು ಆಳುತ್ತಿದ್ದರು. ನಮ್ಮ ನಾಡಿನ ಹೆಣ್ಣು ಮಕ್ಕಳು ಆ ಕಾಲದಲ್ಲಿಯೇ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಜ್ಞಾನರಾಧನೆಯಲ್ಲಿ ತೊಡಗಿಕೊಳ್ಳುತ್ತಿದ್ದರು ಎಂಬುದಕ್ಕೆ ಈ ಶಾಸನವೇ ದೊಡ್ಡ ಸಾಕ್ಷಿ. ಇದು ಜಗತ್ತಿನ ಇತಿಹಾಸದಲ್ಲಿ ಅಪರೂಪದಲ್ಲಿಯೇ ಅಪರೂಪದ ಸ್ಮಾರಕ ಶಿಲೆ. ಈ ಶಾಸನದಲ್ಲಿ ಇರುವ ‘ಸರ್ವಶಾಸ್ತ್ರ ಪ್ರಸಿದ್ಧಿ’ ಎಂಬ ವಿಶೇಷಣವು ‘ಸಾವಿನಿಮ್ಮಡಿ’ ಎಂಬ ಹೆಸರಿನ ಹೆಣ್ಣುಮಗಳು ಉನ್ನತ ವಿದ್ಯಾಭ್ಯಾಸ ಮಾಡಿದ್ದಳು ಎಂಬುದನ್ನು ತಿಳಿಸುತ್ತದೆ. ಇವಳನ್ನ ಹೆಸರನ್ನ ಕೆಲವರು ‘ಸವಿನಿರ್ಮಡಿ’, ‘ಸಾವಿನಿರ್ಮಡಿ’ ಅಥವಾ ಸಾಮಿನಿರ್ಮ್ಮಡಿ’ ಎಂದು ಓದಿದ್ದಾರೆ. ಸಾವಿನಿರ್ಮಡಿ ಅಥವಾ ಸಾವಿನಿರ್ಮಿಡಿ ಎಂದು ಇವಳು ಹೆಚ್ಚು ಪ್ರಖ್ಯಾತಳಾಗಿದ್ದಾಳೆ. ಸುಮಾರು ಸಾವಿರ ವರ್ಷಗಳಿಗಿಂತ ಹಳೆಯದಾದ ಈ ಸ್ಮಾರಕಶಿಲ್ಪದಲ್ಲಿರುವ ಮಹಿಳೆಯ ಹೆಸರು ಸಾವಿನಿರ್ಮಡಿ ಎಂದೇ ಹಲವು ಇತಿಹಾಸಕಾರರು, ಲೇಖಕರು ತಮ್ಮ ಲೇಖನಗಳಲ್ಲಿ ಬರೆದಿದ್ದಾರೆ, ಅವಳ ತಂದೆಯ ಹೆಸರು ನಾಗಾರ್ಜುನಯ್ಯ ಅಥವಾ ನಾಗಾರ್ಜುನಯ್ಯನ್ ಎಂದು ಮತ್ತು ತಾಯಿ ನಿಜಗೆಯಬ್ಬೆಯ ಅಥವಾ ನಂದಿಗಬ್ಬೆ ಎಂಬ ಮಾಹಿತಿಯನ್ನು ಈ ಶಾಸನ ಒಳಗೊಂಡಿದೆ. ಸಾವಿನಿರ್ಮಡಿಯ ತಂದೆಯ ಹೆಸರು ನಾಗಾರ್ಜುನಯ್ಯ ಎಂದು ಇರುವುದರಿಂದ ಅವನು ಬೌದ್ಧ ಧರ್ಮದ ಅನುಯಾಯಿಯಾಗಿದ್ದ ಎಂದು ಇತಿಹಾಸಕಾರರು ಹೇಳುತ್ತಾರೆ ” ಎಂದು ತಿಳಿಸಿದ್ದ.

ಆ ಶಾಸನ ನೋಡಿಕೊಂಡು ಬಂದಾದ ಮೇಲೆ ಚಂದ್ರಶೇಖರನ ಮನಸ್ಸು ರೂಪಾಂತರವಾಯಿತು. ಅವನು ಬದಲಾದ. ತನ್ನ ಮಗಳನ್ನು ಚೆನ್ನಾಗಿ ಓದಿಸಿ ಸಾವಿನಿರ್ಮಡಿಗಿಂತ ಹೆಚ್ಚು ಓದಿಸಬೇಕು ಎಂದು ದೃಢ ನಿಶ್ಚಯ ಮಾಡಿದ. ಅಲ್ಲಿಂದ ತನ್ನ ಮಗಳ ಓದು, ಆರೋಗ್ಯ, ಅಭಿವೃದ್ಧಿಯೇ ಅವನ ಬದುಕಿನ ಗುರಿಯಾಯಿತು. ಅವಳನ್ನ ಚೆನ್ನಾಗಿ ಓದಿಸಲು ಹಗಲು ರಾತ್ರಿ ಪ್ರಯತ್ನಪಟ್ಟ. ಕೆಲವೊಮ್ಮೆ ಆ ಸಾವಿನಿರ್ಮಡಿಯೇ ತನ್ನ ಮಗಳಾಗಿ ಹುಟ್ಟಿ ಬಂದಿದ್ದಾಳೆ ಎಂದು ಅಂದುಕೊಂಡ. ಮಗಳು ಕೂಡ ಚೆನ್ನಾಗಿ ಓದಿದಳು. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಓದಲು ಸೀಟ್ ಸಿಗುವವರೆಗೂ ಚೆನ್ನಾಗಿ ಅಧ್ಯಯನ ಮಾಡಿದ್ದಳು. ಈಗ ತನ್ನ ಮಗಳನ್ನ ಯಾವುದೋ ದಿವ್ಯಶಕ್ತಿ ಕೈಹಿಡಿದು ನಡೆಸುತ್ತಿದೆ ಎಂದು ಚಂದ್ರಶೇಖರನಿಗೆ ತುಂಬಾ ಅನಿಸುತಿತ್ತು.

ಮುಂದುವರೆಯುವುದು…

ಹಿಂದಿನ  :


  • ಪ್ರೊ. ಪ್ರಸನ್ನ ಸಂತೇಕಡೂರು – ವಿಜ್ಞಾನಿ, ಲೇಖಕರು, ಮೈಸೂರು.

← Back

Thank you for your response. ✨

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading