ಲೇಖಕರಾದ ಗಾಯತ್ರಿ ರಾಜ್ ಅವರ ‘ಒಲವೇ ವಿಸ್ಮಯ’ ಕೃತಿಯು ಕನ್ನಡದಲ್ಲಿ ಒಲವು ಕುರಿತು ಕಾವ್ಯ ಪ್ರಕಟವಾದಷ್ಟು ಗದ್ಯದಲ್ಲಿ ಬಂದಿಲ್ಲ. ಇದಕ್ಕೆ ಅಪವಾದ ಎನ್ನುವಂತೆ ಈ ಕೃತಿಯನ್ನು ಕಾವ್ಯಮಯ ಗದ್ಯದಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಒಲವೇ ವಿಸ್ಮಯ
ಲೇಖಕರು : ಗಾಯತ್ರಿ ರಾಜ್
ಪ್ರಕಾಶನ : ಸಾಹಿತ್ಯಲೋಕ ಪ್ರಕಾಶನ
ಕನ್ನಡದಲ್ಲಿ ಒಲವು ಕುರಿತು ಕಾವ್ಯ ಪ್ರಕಟವಾದಷ್ಟು ಗದ್ಯದಲ್ಲಿ ಬಂದಿಲ್ಲ. ಇದಕ್ಕೆ ಅಪವಾದ ಎನ್ನುವಂತೆ ಈ ಕೃತಿಯನ್ನು ಕಾವ್ಯಮಯ ಗದ್ಯದಲ್ಲಿ ಪ್ರಕಟಿಸಿದ್ದಾರೆ. ಅಂಕಣಗಳ ರೂಪದಲ್ಲಿ ಬರೆದ ಇವು ಸಂಕಲನಗೊಂಡು ಹೊತ್ತಗೆಯ ರೂಪದಲ್ಲಿ ಮೈದಾಳಿದೆ. ಇದೊಂದು ಭಾವ ಲಹರಿ. ಪ್ರಧಾನವಾಗಿ ಹದಿಹರೆಯದಲ್ಲಿ ಪ್ರಾರಂಭವಾದ ಇದು ದಾಂಪತ್ಯದವರೆಗೂ ಇದರ ಹರಹು ಇದೆ.
ಗಂಡು ಹೆಣ್ಣುಗಳ ನಡುವೆ ನಡೆಯುವ ವಿವಿಧ ಮಾಧ್ಯಮಗಳ ಮೂಲಕ ಭಾವ ಸಂವಹನವೇ ಇದರ ಕೇಂದ್ರ ವಸ್ತು. ಈಗಾಗಲೇ ಬೇಂದ್ರೆಯವರ ಸಖೀಗೀತ ಮತ್ತು ಕೆ ಎಸ್ ನ ಅವರ ಮೈಸೂರು ಮಲ್ಲಿಗೆಗಳಲ್ಲಿ ಕಾವ್ಯದ ಮೂಲಕ ಪ್ರಕಟವಾಗಿರುವು ಇಲ್ಲಿ ಗದ್ಯದಲ್ಲಿ ಅವತಾರ ತಾಳಿದೆ. ಎರಡಕ್ಕೂ ಇರುವ ವ್ಯತ್ಯಾಸ ಎಂದರೆ ಅವು ದಾಂಪತ್ಯದ ಚೌಕಟ್ಟಿನಲ್ಲಿ ಅರಳಿದರೆ ಇಲ್ಲಿಯವಕ್ಕೆ ಆ ಬಂಧನವಿಲ್ಲ.

ಹದಿಹರೆಯದಲ್ಲಿ ಹುಟ್ಟಿದ ಈ ಭಾವಲಹರಿ ವಿವಿಧ ಹಂತಗಳಲ್ಲಿ ಮುಂದುವರೆದು ದಾಂಪತ್ಯದಲ್ಲೂ ಹಾಯುತ್ತದೆ ಎನ್ನುವುದು ಅದರ ಸಾತತ್ಯವನ್ನು ಸಾರುತ್ತಿದೆ. ಇದು ಮೊದಲ ತಲೆಮಾರುಗಳ ಈಗಿನ ತಲೆಮಾರಿನ ನಡುವೆ ಆಗಿರುವ ಪಲ್ಲಟಗಳನ್ಶು ದಾಖಲಿಸುತ್ತದೆ. ಅದಕ್ಕೆ ಇಲ್ಲಿ ಗಂಡು ಹೆಣ್ಣು ಇಬ್ಬರೂ ಸುಶಿಕ್ಷಿತ ಮತ್ತು ಕಾಯಕದಲ್ಲಿ ತೊಡಗಿರುವುದು ಅವರ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. ಆದ್ದರಿಂದಲೇ ಬೇಂದ್ರೆಯವರ ಕಾವ್ಯದಲ್ಲಿ ಬರುವ ಹೆಣ್ಣಿನ ” ನಾವೇನು ಬಲ್ಲೆವು ಕಲಿತವರ ಬೆಡಗು” ಎಂಬ ಹಿಂಜರಿಕೆ ಇಲ್ಲಿ ಕಾಣುವುದಿಲ್ಲ. ಅದಕ್ಕೆ ಇಬ್ಬರ ನಡುವೆ ಸರಿಸಮಭಾವ ಎದ್ದು ಕಾಣುತ್ತದೆ. ಇಬ್ಬರೂ ದುಡಿಯುವುದರಿಂದ ಒಟ್ಟಿಗೆ ಇರಲಾರದ ಒಬ್ಬರ ಅನುಪಸ್ಥಿತಿಯನ್ನು ತಮ್ಮ ಭಾವಾಭಿವ್ಯಕ್ತಿಯ ಮೂಲಕವೇ ತುಂಬಿಕೊಳ್ಳುವುದು ಅನಿವಾರ್ಯವಾಯಿತು. ಅದಕ್ಕೆ ಮೊಬೈಲ್ ನ್ನ ಅದರ ಮೆಸೇಜು ವಿಡಿಯೊ ಕಾಲ್ ಇತ್ಯಾದಿಗಳನ್ನು ಅವಲಂಬಿಸಿ ಸಾಮೀಪ್ಯದ ಕೊರತೆಯನ್ನು ತುಂಬಿ ಕೊಳ್ಳಲು ಹವಣಿಸುತ್ತಾರೆ. ಇಬ್ಬರೂ ದೂರ ಇರುವುದರಿಂದ ಆಗಾಗ ಸೇರಲು, ಒಂದು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗಿ ಏಕಾಂತವನ್ನು ಸೃಷ್ಟಿಸಿಕೊಳ್ಳುವದು ಕೂಡಾ ಅಗತ್ಯವಾಗುತ್ತದೆ. ಅದು ಸಾಧ್ಯವಾಗುವವರೆಗೆ ಸಂವಹನವೊಂದೇ ದಾರಿ. ಅಂತಹ ಸಂನಿವೇಶದಲ್ಲಿ ಮೂಡಿಬಂದವೇ ಇಲ್ಲಿನ ಭಾವಲಹರಿಗಳು. ಅವುಗಳ ತೀವ್ರತೆಯೇ ಅವುಗಳ ಅಭಿವ್ಯಕ್ತಿಯ ಪ್ರಾಣವಾಗಿದೆ. ಆಗ ಅದು ಸಹಜವಾಗಿಯೇ ಸಾಮಾಜಿಕ ಸಭ್ಯತೆಯ ಎಲ್ಲೆಗಳನ್ನು ದಾಟುತ್ತದೆ. ಆದ್ದರಿಂದಲೇ ಇಲ್ಲಿ ಪ್ರಾಣಿಗಳ ರೂಪಕಗಳು ಯಥೇಚ್ಚವಾಗಿ ಬಳಕೆಯಾಗಿವೆ.ಕೋತ ಕೋತಿ ಮುಂತಾದವುಗಳ ಜೊತೆಗೆ ಅರ್ಥ ರಹಿತ ಶಬ್ಧಗಳು ಇಲ್ಲಿ ಎಡೆಪಡೆದಿವೆ.
ಹೆಣ್ಣು ಇಲ್ಲಿ ತನ್ನ ಆಯ್ಕೆಯಲ್ಲಿ ಭಾವನೆಗಳನ್ನು ಸುಲಭವಾಗಿ ನಿವೇದಿಸುವಲ್ಲಿ ಹಿಂಜರಿಯುತ್ತಾಳೆ. ಯಾಕೆಂದರೆ ಅವಳಿಗೆ ಪ್ರೇಮ ಎಂದರೆ ಜವಾಬ್ದಾರಿ. “ಈ ಗಂಡು ಸಂಸಾರದಲ್ಲಿ ತನ್ನ ಹೆಗಲಿನ ಹೆಗಲು ಕೊಡಬಲ್ಲನೇ” ಎಂದು ಆತಂಕ. ಗಂಡಸಿಗಾದರೆ ಅದು ದೈಹಿಕ ಆಕರ್ಷಣೆ. ಇಂತಹ ಸ್ಥಿತಿಯಲ್ಲಿ ಹೆಣ್ಣು ಎಷ್ಟು ಎಚ್ಚರ ವಹಿಸಿದರು ಸಾಲದು.

ದಾಂಪತ್ಯದಲ್ಲಿನ ಸರಸ ವಿರಸಗಳಿಗೂ ಇಲ್ಲಿ ಎಡೆದೊರೆತಿರುವುದು ಲೇಖಕಿಯ ವಸ್ತು ನಿಷ್ಠೆಗೆ ಸಾಕ್ಷಿ. ಏಕೆಂದರೆ ದಾಂಪತ್ಯ ಎಂದರೆ ಅಲ್ಲಿ ಸರಸ ಒಂದು ಮುಖವಾದರೆ ವಿರಸ ಇನ್ನೊಂದು ಮುಖ.ಅದಕ್ಕೆ ಇವರ ಸರಸದ ಅನನ್ಯತೆಯನ್ನು ಕಂಡು ಹೊಟ್ಟೆ ಕಿಚ್ಚಿನ ಮಂದಿ ಪರಸ್ಪರ ಕಿವಿ ಊದುವುದೂ ಕಾರಣ. ಗಂಡು “ಐ ಹೇಟ್ ಯು ” “ನಾನು ನಿನ್ನ ದ್ವೇಷಿಸುತ್ತೇನೆ” ಎಂದಾಗಲೆಲ್ಲ, ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ , ಅವನಿಗೆ ತನ್ನ ತಪ್ಪಿನ ಮನವರಿಕೆ ಮಾಡಿ ಮಾಡಿ ಕೊಡಲು ಅವಳು ಹಿಂಜರಿಯುವುದಿಲ್ಲ. ಬಹುತೇಕ ಗಂಡನ ಅಹಂ ಈ ವಿರಸಕ್ಕೆ ಕಾರಣವಾಗುತ್ತದೆ. ಅದಕ್ಕೇ ನಮ್ಮ ಮೇಷ್ಟ್ರು ಜಿ ಎಸ್ ಎಸ್ ಅವರ ” ನಮ್ಮ ಅಹಮ್ಮಿನ ಕೋಟೆಯಲ್ಲಿ ಹತ್ತಿರವಿದ್ದೂ ದೂರ ನಿಲ್ಲುವೆವು ನಾಲ್ಕು ದಿನದ ಈ ಬಾಳಿನಲ್ಲಿ ” ಎಂಬುದನ್ನು ಇಲ್ಲಿ ಉಲ್ಲೇಖ ಮಾಡಿದ್ದಾರೆ. ಆಗ ಪರಸ್ಪರರು ಹೇಳುವ ಊಫಿ ಮಾಫಿಗಳು ಅದು ಹದಗೆಡದಂತೆ ಕಾಪಾಡುವ ಸಾಧನಗಳು. ಇದರೊಂದಿಗೆ ಹಿಂದಿ ಚಲನಚಿತ್ರದ ಸಾಲುಗಳನ್ನು ಅಲ್ಲಲ್ಲಿ ಸಮಯೋಚಿತವಾಗಿ ಬಳಸಲಾಗಿದೆ. ಇಂದು ನಾವು ಸಂಕರ ಸಂಸ್ಕೃತಿಯಲ್ಲಿ ಬದುಕುತ್ತಿರುವುದರ ಫಲವಾಗಿದೆ.
ಇಂತಹ ಒಂದು ಪ್ರೇಮ ಭಾವಲಹರಿಯನ್ನು ಗದ್ಯಕಾವ್ಯದ ಮೂಲಕ ಕಟ್ಟಿ ಕೊಟ್ಟ ಲೇಖಕಿಗೆ ಅಭಿನಂದನೆಗಳು. ಪುಸ್ತಕ ಕೊಟ್ಟು ಓದಲು ಅವಕಾಶ ಒದಗಿಸಿದ ಬಂಧು ಹರಿ ಅವರಿಗೆ ವಂದನೆಗಳು.
ನಾಲ್ಕು ದಶಕಗಳ ಹಿಂದೆ ನನ್ನ ಸಂಗಾತಿ ಗಿರಿಜಾ ಶಾಸ್ತ್ರಿ ಮೊದಲು ಬರೆದ ಪ್ರೇಮ ಪದ್ಯದಲ್ಲಿನ ” ಹಬೆ ಹಬೆಯಾಡುವ ನೆನಪುಗಳು” ಸಾಲಿನ ನೆನಪು ಮರುಕಳಿಸಿತು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
