ತಾನು ಮಾಡಿದ ತಪ್ಪನ್ನು ತನ್ನ ಮಗ ಮಾಡದಿರಲಿ ಎಂದು ಅವನನ್ನು ಮುದ್ದಿನಿಂದ, ಎಚ್ಚರಿಕೆಯಿಂದ ಏಕಾಂಗಿಯಾಗಿ ಸಾಕುತ್ತಾನೆ ಅಪ್ಪ. ಈಗಿನ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಸಿದ್ದರಿಲ್ಲ ಎಂಬ ಮಾತನ್ನು ಒಡೆಯುವುದರಲ್ಲಿ ಈ ಪ್ರೇಮದ ಊರಲಿ ಸಿನಿಮಾ ಯಶಸ್ವಿಯಾಗಿದೆ. ಈ ಸಿನಿಮಾದ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
೧:” ಅನುಮಾನಂ ಪೆದ್ದ ರೋಗಂ ‘ ಎನ್ನುವ ಒಂದು ಮಾತು ತೆಲುಗಿನಲ್ಲಿ ಇದೆ. ಅನುಮಾನವೆ ದೊಡ್ಡ ರೋಗ ಎನ್ನುವ ಅರ್ಥದ ಈ ಇದು , ಆಧುನಿಕ ಜಗತ್ತಿನಲ್ಲಿ ಮಾಡಿರುವ ಅನಾಹುತಗಳು ಅಷ್ಟಿಷ್ಟಲ್ಲ. ಪರಸ್ಪರ ನಂಬಿಕೆಯನ್ನು ಕಳೆದುಕೊಂಡ ಇಂತಹ ಸ್ಥಿತಿಯಲ್ಲಿ, ಇರುವ ಈ ಸಿನಿಮಾದ ನಾಯಕನ ತಂದೆ, ತನ್ನ ತಂಗಿಯ ಕುರಿತು ಅನುಮಾನಕ್ಕೆ ಒಳಗಾಗಿ, ಅವಳು ನೇಣು ಹಾಕಿಕೊಂಡು ಸಾಯಲು ಕಾರಣಕರ್ತನಾಗುತ್ತಾನೆ. ಇದು ಅವನನ್ನು ಜೀವನ ಪರ್ಯಂತ ಕಾಡಲು ತೊಡಗುತ್ತದೆ. ಅದಕ್ಕೆ ತಾನು ಮಾಡಿದ ತಪ್ಪನ್ನು ತನ್ನ ಮಗ ಮಾಡದಿರಲಿ, ಎಂದು ಅವನನ್ನು ಮುದ್ದಿನಿಂದ ,ಎಚ್ಚರಿಕೆಯಿಂದ ಏಕಾಂಗಿಯಾಗಿ ಸಾಕುತ್ತಾನೆ.

೨: ಗಂಡಸು ಎಂದೂ ತಾಯಿಯಾಗಲು ಸಾಧ್ಯವಿಲ್ಲ: ಕಿರಿ ವಯಸ್ಸಿನಲ್ಲೆ ಮಗನನ್ನು ದಯಪಾಲಿಸಿ ಕಣ್ಮರೆಯಾದ ಹೆಂಡತಿಯ ನೆನಪಿನಲ್ಲೆ ಕಾಲ ಕಳೆಯುವ ಕಥಾನಾಯಕನ ತಂದೆ , ಇನ್ನೊಂದು ಮದುವೆಯಾಗಲು ಹಲವರ ಒತ್ತಾಯಗಳ ನಡುವೆ ಕೂಡ ಅದನ್ನು ನಿರಾಕರಿಸಿ, ತಾಯಿಯಂತೆ ಮಗನಿಗೆ ಸ್ನಾನ ಮಾಡಿಸಿ , ಉಣಿಸಿ ಅಕ್ಕರೆಯಿಂದ ಅವನಿಗೆ ತಾಯಿಯ ಕೊರತೆ ಕಾಡದಂತೆ ಅಕ್ಕರೆಯಿಂದ ಬೆಳೆಸುತ್ತಾನೆ.ಆದ್ದರಿಂದಲೆ ಆ ಮಗ ಯಾವುದೆ ಕಾರಣಕ್ಕೂ ತಂದೆಯ ಮಾತನ್ನು ಮೀರದೆ ಬೆಳೆಯುತ್ತಾನೆ.
೩: ರೈತರನ್ನು ಮದುವೆಯಾಗಲು ,ನಗರದಲ್ಲಿ ಬೆಳೆದ ಹೆಣ್ಣು ಮಕ್ಕಳು,ಅವರ ತಂದೆ ತಾಯಿಗಳು ಮಗಳನ್ನು ಕೊಡಲು ಹಿಂಜರಿಯುತ್ತಾರೆ. ಇದನ್ನು ಕೂಡಾ ಈ ಸಿನೆಮಾ ಮುರಿದು ಕಟ್ಟುವಲ್ಲಿ ಯಶಸ್ವಿಯಾಗುತ್ತದೆ. ಇದರಲ್ಲಿ ರೈತನ ಮಗ ರೈತನಾದರೂ, ಅವನನ್ನು ಅಮೇರಿಕಾದಿಂದ ಮರಳಿಬಂದ ಹುಡುಗಿ ಮದುವೆಯಾಗುತ್ತಾಳೆ. ಅಲ್ಲದೆ ರೈತನ ಮಡದಿಯಾಗಿ ಹೊಲಕ್ಕೆ ಬುತ್ತಿ ಹೊತ್ತುಕೊಂಡು ಬರುವಂತೆಯೆ , ಗೊಬ್ಬರದ ಬುಟ್ಟಿಯನ್ನು ಹೊರಲು , ಅವನ ಜೊತೆಗೆ ನೇಗಿಲು ಹಿಡಿದು ಉಳಲು ಕೂಡಾ ಅನುವಾಗುತ್ತಾಳೆ. ಅಲ್ಲದೆ ಓದಿ ಮರಳಿ ಬಂದ ಯುವಕನಿಗೆ ನೇಗಿಲು ಕೊಡಲು ಹಿಂಜರಿದ ತಂದೆಗೆ ” ನೇಗಿಲು ಅನ್ನ ಕೊಡುತ್ತದೆ, ವಿದ್ಯೆ ವಿವೇಕ ಕೊಡುತ್ತದೆ ” ಎಂದು ಹೇಳಿ , ಅವನ ಮಗನಿಗೆ ನೇಗಿಲನ್ನು ಒಪ್ಪಿಸಲು ಮನವೊಲಿಸುವಲ್ಲಿ ಕೂಡಾ ಯಶಸ್ವಿಯಾಗುತ್ತಾಳೆ. ಈ ಮೂಲಕ ನಗರದ ಹುಡುಗಿಯರು, ರೈತರನ್ನು ಮದುವೆಯಾಗಲು ಹಿಂಜರಿಯುತ್ತಾರೆ ಎಂಬ ಮಿತ್ ನ್ನು ಒಡೆಯಲಾಗಿದೆ.
೪: ಮೊದಲ ಮಿತ್ ಗೆ ಬಲಿಯಾಗಲು ಹೊರಟ ಕಥಾನಾಯಕನ ಮಗ, ಕಡೆಗೂ ತನ್ನನ್ನು ಮೊದಲು ಏಕಮುಖಿಯಾಗಿ ಪ್ರೀತಿಸಿದ ಹುಡುಗಿಯಿಂದ ತನ್ನ ತಪ್ಪನ್ನು ತಿಳಿದು , ಮನೆ ಬಿಟ್ಟು ಹೋದ ಮತ್ತೆ ಅಮೆರಿಕಾಗೆ ಮರಳಲು ಸಿದ್ದಳಾದ ತನ್ನ ಹೆಂಡತಿಯ ಕಾಲಿಗೆ ಬಿದ್ದು ಕ್ಷಮೆ ಕೋರಿ, ನಿಜದ ಪ್ರೇಮ ಯಾವ ಸಾಕ್ಷಿಯನ್ನು ಬಯಸದು ಎಂದು ನಿರ್ಧರಿಸಿ , ಅವಳನ್ನು ಮರಳಿ ಕರೆತರುವಲ್ಲಿ ಯಶಸ್ವಿಯಾಗುತ್ತಾನೆ.

ಮರಳಿ ಬಂದ ಸೊಸೆ ‘ ಮಾವ ‘ಎಂದು ಕರೆದು ತನ್ನನ್ನು ಕರೆತಂದ, ಅವರ ಮಗನ ಕಡೆಗೆ ತೋರಿಸಿದಾಗ, ಕಥಾ ನಾಯಕದ ತಂದೆ ಅವರನ್ನು ತಬ್ಬಿಕೊಂಡು “ಈ ಮನೆಗೆ ಅಂಟಿದ ಶಾಪ ಇಂದಿಗೆ ಕಳೆಯಿತು” ಎಂದು ಈ ಮೂಲಕ ಮೊದಲಿನ ಅಪ್ಪನ ‘ಅನುಮಾನಂ ಪೆದ್ದ ರೋಗಕ್ಕೆ ‘ ಬಲಿಯಾಗದೆ, ಅದನ್ನು ಮಗ ಗೆಲ್ಲುವ ಮೂಲಕ, ತನ್ನ ಮನೆಯನ್ನು ಉಳಿಸಿಕೊಳ್ಳುತ್ತಾನೆ.
ಈಗ ಕೂಡ ಅನುಮಾನಕ್ಕೆ ಬಲಿಯಾಗುವ ಜೀವಗಳು, ಅದರಿಂದ ಪಾರಾಗುವ ಬಗೆಯನ್ನು ಈ ಸಿನೆಮಾ ತೋರಿಸಿ ಕೊಡುವಲ್ಲಿ ಯಶಸ್ವಿಯಾಗಿದೆ ಮಾತ್ರವಲ್ಲ , ಓದಿದ ನಗರದ ಹೆಣ್ಣು ಮಕ್ಕಳು ಹಳ್ಳಿಯ ಪರಿಶ್ರಮದ ಜೀವನಕ್ಕೆ ಹೊಂದಿಕೊಳ್ಳುವುದಿಲ್ಲ , ಆದ್ದರಿಂದ ಈಗಿನ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಸಿದ್ದರಾಗುವುದಿಲ್ಲ, ಎಂಬ ಎರಡೂ ಮಿತ್ ಗಳನ್ನು ಒಡೆಯುವುದರಲ್ಲಿ ಕೂಡಾ ಯಶಸ್ವಿಯಾಗಿದೆ. ಈ ಮೂಲಕ ಸಮಕಾಲೀನ ಗ್ರಾಮೀಣ ಸಮಾಜ ಎದುರಿಸುತ್ತಿರುವ ಸವಾಲುಗಳಿಗೆ, ಒಂದು ಪರ್ಯಾಯವನ್ನು ಸೂಚಿಸುವ ಮೂಲಕ , ಆಶಾದಾಯಕ ಭರವಸೆಯನ್ನು ಅವರಲ್ಲಿ ಬಿತ್ತುತ್ತದೆ. ಇಂದಿನ ವಿದೇಶಿಗಳಲ್ಲಿ ಯಶಸ್ವಿಯಾದ ಕೆಲವರಾದರು ಯುವಕರು, ಅದನ್ನು ತ್ಯಜಿಸಿ ಮರಳಿ ಬಂದು ತಾಯಿನೆಲದಲ್ಲಿ ನೆಲೆನಿಂತು, ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಮಾತ್ರವಲ್ಲದೆ, ಗ್ರಾಮೀಣ ಸಮಾಜದ ಪುನರ್ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೆ ನಿದರ್ಶನವಾಗಿದೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.
