‘ಚಿತಾಗಾರ’ ಕೃತಿ ಪರಿಚಯ

ಕಥಾಗಾರರಾದ ಸಿದ್ದೇಶ್ ಸಿದ್ದನಮಠ ಅವರ ‘ಚಿತಾಗಾರ’ ಕಥಾಸಂಕಲನವು ಕರೋನ ಮಹಾಮಾರಿಯಿಂದ ಆರಂಭವಾಗುತ್ತದೆ. ಈ ಕೃತಿಯ ಕುರಿತು ಮಂಜುನಾಥ ಜಮ್ಮಾಪುರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಚಿತಾಗಾರ
ಲೇಖಕರು: ಸಿದ್ದೇಶ್ ಸಿದ್ದನಮಠ
ಪ್ರಕಾಶನ: ತ್ರಿವರ್ಣ ಫೌಂಡೇಶನ್
ಬೆಲೆ: 150 ರೂಪಾಯಿಗಳು.

“ಒದು ವ್ಯಸನವಾಗಲಿ, ಬದುಕು ಹಸನಾಗಲಿ” ಎನ್ನುವ ಅದ್ಭುತ, ಪ್ರೇರಣೀಯ ವಾಕ್ಯದೊಂದಿಗೆ ಆರಂಭವಾಗುವ “ಚಿತಾಗಾರ” ಕಥಾ ಸಂಕಲನವು ನಮಗೆ ಒಂದು ಅದ್ಭುತ ಲೋಕವನ್ನೇ ತೆರದಿಡಿತ್ತದೆ. ಈ ಕಥಾಸಂಕಲನದಲ್ಲಿರುವ ಹದಿನಾಲ್ಕು ಕಥೆಗಳು ವಾಸ್ತವಕ್ಕೆ ಹತ್ತಿರವಾಗಿ ಇಂದಿನ ಸಮಾಜದ ಸ್ಥಿತಿಯನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ.

“ಚಿತಾಗಾರ” ಕಥೆಯಿಂದ ಪ್ರಾರಂಭವಾಗುವ ಕಥಾಸಂಕಲನವು ಈ ಕಥೆಯಲ್ಲಿ “ಕೊರೋನ” ಎಂಬ ಮಹಾಮಾರಿಯು ನಮ್ಮ ಮಾನವ ಸಂಬಂಧಗಳನ್ನು ಯಾವ ರೀತಿ ಓರೆಗೆ ಹಚ್ಚಿತು ಎನ್ನುವುದನ್ನು ಹಾಗು ಬದುಕಿದ್ದಾಗ ಮನೆ, ಮಡದಿ, ಮಕ್ಕಳು, ಆಸ್ತಿ ಅಂತಸ್ತು,ಅಧಿಕಾರ ಎಂದು ಹೊಡೆದಾಡುವ ಮನುಷ್ಯ ಅವನು ಸತ್ತಾಗ ಅವನನ್ನು ಯಾವ ರೀತಿ ನಿಕೃಷ್ಟವಾಗಿ ಕಂಡು ಒಂದು ಕೀಟದಂತೆ ಮಣ್ಣು ಮಾಡುವರು. ಅದು ಸಹ ಕೊರೊನಾ ಸಮಯದಲ್ಲಿ ಮನುಷ್ಯನ ಸ್ಥಿತಿಯನ್ನು ಕಣ್ಣಿಗೆ ಕಾಣುವಂತೆ ಚಿತ್ರಿಸಿದ್ದಾರೆ.

“ಕೋರ್ಟ್” ಕಥೆಯಲ್ಲಿ ತನ್ನ ಪಾಲಿಗೇ ತಾನಿದ್ದ ಈರ ತನ್ನ ಕೆಟ್ಟ ಸಮಯದಲ್ಲಿ ಅನಾವಶ್ಯಕವಾಗಿ ಯಾರದೋ ಮಾತು ಕೇಳಿ ನ್ಯಾಯಾಲಯ ಯಾವ ರೀತಿ ಇರುತ್ತದೆ ಎಂದು ಕುತೂಹಲಗೊಂಡು ನೋಡಲು ಹೋಗಿ ವ್ಯವಸ್ಥೆಯ ಕಪಿಮುಷ್ಠಿಯಲ್ಲಿ ಸಿಲುಕಿ ಜೈಲುವಾಸವನ್ನು ಅನುಭವಿಸಿ ಹೊರಬಂದರೂ ಅಕ್ಕಪಕ್ಕದವರ ವಕ್ರದೃಷ್ಟಿಗೆ ಬಿದ್ದು ಮತ್ತು ಅವರ ಕುತಂತ್ರಕ್ಕೆ ಬಲಿಯಾಗಿ ಅವನು ಮತ್ತೆ ಸರೆವಾಸ ಅನುಭವಿಸುವ ಪರಿಸ್ಥಿತಿ ಕಂಡು ಮನ ಮರುಗುತ್ತದೆ. ದೊಡ್ಡವರು ಹೇಳುವ ಗಾದೆ “ಗೆದ್ದವನು ಸೋತ, ಸೋತವನು ಸತ್ತ” ನೆನಪಾಗುತ್ತದೆ, ಹಾಗೂ “ಭೂತೆಯ್ಯನ ಮಗ ಅಯ್ಯು” ಚಲನಚಿತ್ರ ನೆನಪಾಗುತ್ತದೆ. ಈ ಸಮಾಜದಲ್ಲಿ ನಾವು ಯಾವುದೋ ಕಾರಣಕ್ಕಾಗಿ ಅಥವಾ ದುರದೃಷ್ಟವಶಾತ್ ಕೆಟ್ಟ ಸಮಯದಲ್ಲಿ ನಾವುಗಳು ಕೆಳಗಡೆ ಬಿದ್ದರೆ ನಮ್ಮನ್ನು ಹಾಳುಗೆಡವಲು ಯಾವ ರೀತಿ ನಮ್ಮವರೇ ಸಿದ್ಧವಾಗಿರುತ್ತಾರೆ ಎನ್ನುವುದು ನಮಗೆ ತಿಳಿಯುತ್ತದೆ. ಪ್ರೀತಿ, ಪ್ರೇಮ, ದುಶ್ಚಟಗಳಿಗೆ ಬಿದ್ದು ದಾರಿ ತಪ್ಪುವ ಇಂದಿನ ಯುವ ಜನಾಂಗಕ್ಕೆ ಈ ಕಥೆಯು ಒಂದು ದಾರಿದೀಪವಾಗಿದೆ.

“ಮರಳಿ ಮಣ್ಣಿಗೆ” ಕಥೆಯಲ್ಲಿ ಹಿಮವಂತನ ದುರಾದೃಷ್ಟದ ಬದುಕನ್ನು ಹಾಗು ತಂದೆ ತಾಯಿಗಳು ಎಷ್ಟೇ ಕಷ್ಟಪಟ್ಟು ತಮ್ಮ ಮನೆತನವನ್ನು ಕಾಪಾಡಿಕೊಂಡು ಬಂದಿದ್ದರೂ, ಮಕ್ಕಳು ವಿದ್ಯಾವಂತರಾಗದಿದ್ದಾಗ, ವಿವೇಕವುಳ್ಳವರಾಗದಿದ್ದಾಗ ಆ ಕುಟುಂಬವು ಎದುರಿಸಬೇಕಾದ ಸಂಕಷ್ಟಗಳನ್ನು ಈ ಕಥೆ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಈ ಕಥೆಯಿಂದ ಇಂದಿನ ಯುವಜನರು ಕಲಿಯಬೇಕಾದ ಪಾಠ ಬಹಳಷ್ಟಿದೆ. ನಮ್ಮ ಜೀವನವನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಬೇಕು, ತಂದೆ-ತಾಯಿಗಳ ಮಾತಿಗೆ ಬೆಲೆ ಕೊಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ಅವಿವೇಕದಿಂದ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದೆ ಎಚ್ಚರಿಕೆಯಿಂದ ಬದುಕಬೇಕು ಎಂಬ ಸಂದೇಶವನ್ನು ಈ ಕಥೆಯು ನಮಗೆ ನೀಡುತ್ತದೆ.

“ಮಕ್ಕಳಿಗಾಗಿ ಆಸ್ತಿಯನ್ನು ಮಾಡುವದಕ್ಕಿಂತ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು” ಎನ್ನುವ ನಾಣ್ನುಡಿಯಂತೆ ಮಕ್ಕಳಿಗೆ ಕೇವಲ ಹಣ ಮತ್ತು ಆಸ್ತಿಯನ್ನು ಮಾಡುವುದಷ್ಟೇ ತಂದೆ-ತಾಯಿಗಳ ಕರ್ತವ್ಯವಲ್ಲ. ಅವರಿಗೆ ಉತ್ತಮ ಶಿಕ್ಷಣ, ಸಂಸ್ಕಾರ, ವಿವೇಕ, ಆಚಾರ-ವಿಚಾರ ಹಾಗೂ ಜೀವನದಲ್ಲಿ ಅನುಸರಿಸಬೇಕಾದ ಮೌಲ್ಯಗಳನ್ನು ಕಲಿಸುವುದು ಅತ್ಯಂತ ಮುಖ್ಯವಾಗಿದೆ ಎಂಬುದನ್ನು ಸಹ ಈ ಕಥೆ ನಮಗೆ ಕಲಿಸುತ್ತದೆ.

“ನೆನಪಿನ ದೋಣಿಯಲ್ಲಿ” ಕಥೆಯಲ್ಲಿ ಪಶ್ಚಿಮಘಟ್ಟದ ಸೌಂದರ್ಯವನ್ನು ಸುಂದರವಾಗಿ ವರ್ಣಿಸಿ, ಅದರಲ್ಲಿ ಪವಿತ್ರ ಪ್ರೀತಿಯ ಮಹತ್ವವನ್ನು ನಮಗೆ ತುಂಬ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪ್ರೀತಿ ಮಧುರ ಎನ್ನುವಂತೆ ಒಬ್ಬ ಪ್ರೇಮಿಯು ತನ್ನ ಪ್ರೇಯಸಿಗೋಸ್ಕರ ಮೂರು ವರ್ಷ ಕಾಯುವುದನ್ನು ಈ ಕತೆಯಲ್ಲಿ ನಿರೂಪಿಸಿ “ಒಲವೇ ಜೀವನ ಸಾಕ್ಷಾತ್ಕಾರ, ಒಲವೇ ಮಮತೆಯ ಮಮಕಾರ” ಎನ್ನುವ ನಮ್ಮ ಅಣ್ಣಾವ್ರ ಚಲನಚಿತ್ರ “ಸಾಕ್ಷಾತ್ಕಾರ”ದಲ್ಲಿ ಬರುವ ಹಾಡಿನಂತೆ ಪವಿತ್ರ ಪ್ರೀತಿಯ ಮಹತ್ವವನ್ನು ಸಾರಿದ್ದಾರೆ. ಖ್ಯಾತ ಸಾಹಿತಿಗಳಾದ ಎಸ್.ವಿ.
ಶಾಂತಕುಮಾರ ಅವರ ಒಂದು ಚುಟುಕು “ಸಭ್ಯತೆ”ಯಲ್ಲಿ ಅವರು ಹೇಳಿರುವಂತೆ

“ಇರಬೇಕು ರಸಿಕತೆ ಪ್ರೇಮಿಗಳಲ್ಲಿ
ಸಭ್ಯತೆ ಮೀರಬಾರದು ವರ್ತನೆಯಲ್ಲಿ”

ಎನ್ನುವಂತೆ ಪವಿತ್ರ ಪ್ರೀತಿಯ ಮಹತ್ವವನ್ನು ನಮಗೆ ಸಾರಿದ್ದಾರೆ.

“ಬೆಳಕಿನ ಹಾದಿ” ಕಥೆಯಲ್ಲಿ ಒಬ್ಬ ಮನುಷ್ಯ ಸಾಲದ ಶೂಲಕ್ಕೆ ಏರಿದರೆ, ಯಾವ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಾಗೂ ಇದರಲ್ಲಿ ಸಾಲ ಪಡೆದವನ ಮಗಳಾದ ಅನನ್ಯಳ ದೈರ್ಯವನ್ನು ನಾವು ಮೆಚ್ಚಲೇಬೇಕು .ಒಂದು ಸ್ತ್ರೀ ಸ್ವಸಹಾಯ ಸಂಘ ಕಟ್ಟಿ ಅದರಿಂದ ತನ್ನ ತನ್ನ ತಂದೆಯ ಸಾಲವನ್ನು ತೀರಿಸುವುದಲ್ಲದೆ ಊರಿನ ಮಳೆಹಿಯರನ್ನು ಯಾವ ರೀತಿ ಸ್ವಾವಲಂಬಿಯಾಗಿ ಮಾಡುತ್ತಾರೆ, ಹಾಗೂ ಸಹಕಾರ ಚಳುವಳಿಯ ಮಹತ್ವವನ್ನು ನಮಗೆ ಸಾರುತ್ತದೆ.

“ಬಿಲ್ವಮರ”ದಲ್ಲಿ

“ಬಿಲ್ವಮರ” ಕಥೆಯಲ್ಲಿ ದುಡುಮೆಯ ಮಹತ್ವವನ್ನು , ರೈತ ಹಾಗೂ ಬಿಲ್ವ ಮರದ ನಡವೆ ಇರತಕ್ಕಂಥಹ ಒಂದು ಭಾವನಾತ್ಮಕ ಸಂಬಂಧವನ್ನು ತುಂಬ ಅದ್ಭುತವಾಗಿ ಚಿತ್ರಿಸಿದ್ದಾರೆ.
“ಹಸಿರು ಕಣಿವೆಯ ನೆರಳುಗಳು” ಕಥೆಯಲ್ಲಿ ತ್ರಿಕೋನ ಪ್ರೇಮವನ್ನು ಚಿತ್ರಿಸಿ ಪವಿತ್ರ ಪ್ರೀತಿಯ ಮಹತ್ವವನ್ನು ಪ್ರಸ್ತುತ ಪಡಿಸಿರುವುದಲ್ಲದೆ ಯಾವುದೇ ಕಲೆಯು ಕೇವಲ ಪಟ್ಟಣಗಳಲ್ಲಿ ಪ್ರಚಲಿತಗೊಂಡರೆ ಮಾತ್ರ ಶ್ರೇಷ್ಠ ಎನ್ನುವ ಚಿಂತನೆಯನ್ನು ತಪ್ಪು ಎಂದು ನಿರೂಪಿಸುತ್ತದೆ.

“ಕಣ್ಣು ಅರಿಯದಿದ್ದರೇನಂತೆ ಕರುಳರಿಯದೇ” ಈ ಒಂದು ಕಥೆಯಲ್ಲಿ ನಾವುಗಳು ಕೇವಲ ದುಡಿಮೆಯ ಹಿಂದೆ ಬಿದ್ದು ತಂದೆ ತಾಯಿಗಳನ್ನು ಮರೆತರೆ ಅದರಿಂದ ಆಗುವ ನಷ್ಟವನ್ನು ವಿಧಿ ಲಿಖಿತದಂತೆ ಅವನು ಕೊನೆಗೆ ತನ್ನ ತಂದೆ ತೀರಿಕೊಂಡ ದಿವಸ ತನ್ನ ತಂದೆಯ ಪಾರ್ಥೀವ ಶರೀರದ ಹತ್ತಿರ ಹೋದರೂ ಸಹಾ ತಾನು ಇವರ ಮಗ ಎಂದು ಸಹ ಹೇಳಕೊಳ್ಳಲಾರದ ಪರಿಸ್ಥಿತಿಯನ್ನು ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ.

“ಕನಸು” ಕಥೆಯಲ್ಲಿ ಒಬ್ಬ ಮಗನು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ತನ್ನ ತಂದೆಯ ಆಸೆಯಂತೆ ಕನಸಿನ ಮನೆ ಕಡ್ಡಲು ಪ್ರಾರಂಭಿಸಿದರೂ ತನ್ನ ತಂದೆಗೆ ಕ್ಯಾನ್ಸರ್ ಎಂಬ ಮಹಾಮಾರಿ ತಗುಲಿ ತನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸಲಾಗದೇ ಇರುವುದು ನಮ್ಮಗಳ ಕಣ್ಣಾಲೆಗಳಲ್ಲಿ ನೀರು ತರುವುದು ನಿಶ್ಚಿತ.

“ನಿನ್ನ ಪ್ರೇಮದ ಪರಿಯ” ಕಥೆಯಲ್ಲಿ ಇಂದಿನ ಯುವಜನಾಂಗ ಯಾವ ರೀತಿ ಪ್ರೀತಿ ಎಂಬ ಮಹಾ ಮಾಯೆಯಲ್ಲಿ ಬಿದ್ದು ತಮ್ಮ ತಂದೆ ತಾಯಿಗಳ ಕನಸನ್ನ ನುಚ್ಚುನೂರು ಮಾಡುವುದಲ್ಲದೆ ಸಮಾಜದಲ್ಲಿ ಮಕ್ಕಳಿಂದಾಗಿ ತಂದೆ ತಾಯಿಗಳು ಯಾವ ರೀತಿಯ ಕಷ್ಟವನ್ನು ಅನುಭವಿಸುತ್ತಾರೆ ಎಂಬುವುದನ್ನು ಅರ್ಥಗರ್ಭಿತವಾಗಿ ವಿವರಿಸಿದ್ದಾರೆ.

“ಡೆಸ್ಕ್” ಈ ಕಥೆಯಲ್ಲಿ ಪ್ರತಿಯೊಬ್ಬರು ಕಾಲೇಜು ದಿವಸಗಳಲ್ಲಿ ತಮ್ಮ ಪ್ರೀತಿಯ ನಿವೇದನೆಯನ್ನು ಮಾಡಲು ಪಡುವ ಕಷ್ಟವನ್ನು ಹಾಗು ಪ್ರೀತಿಯ ದುರಂತ ಅಂತ್ಯವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ.

“ನಂಜಾದ ಪಿತೃ ಪ್ರೀತಿ” ಕಥೆಯಲ್ಲಿ ಸುಖವಾಗಿ ಇರುವ ರಾಜಣ್ಣನ ಬದುಕು ಯಾವ ರೀತಿ ವಿಧಿಯ ಹೊಡೆತಕ್ಕೆ ಬಿದ್ದು ತನ್ನ ಮಡದಿಯನ್ನು ಕಳೆದುಕೊಂಡು, ಒಬ್ಬ ಮಗನು ಮಾನಸಿಕ ಅಸ್ವಸ್ಥನಾಗುವುದಲ್ಲದೆ ಹಣಕ್ಕಾಗಿ ಮಗಳೇ ಹಣಕ್ಕಾಗಿ ತಂದೆಗೆ ಮೋಸ ಮಾಡುವುದು ಹಾಗು ಆಸ್ತಿಗಾಗಿ ಇಂದಿನ ಜನರು ಎಂಥಹ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎನ್ನುವ ಕಹಿಸತ್ಯವನ್ನು ನಮಗೆ ತೋರ್ಪಡಿಸಿದ್ದಾರೆ.

“ಅಜ್ಜನ ಕಥೆ” ಯಲ್ಲಿ ನಾವುಗಳು ಗೃಹ ಸಾಲವನ್ನು ಪಡದಾಗ ಆ ಸಾಲಕ್ಕೆ ಇನ್ಸೂರೆನ್ಸ್‌ ಮಹತ್ವ ನಮಗೆ ತಿಳಿಸುತ್ತದೆ.ಯಾವುದೇ ದುರ್ಘಟನೆ ಸಂಭವಿಸಿದಾಗ ಅವಲಂಬಿತರ ಮೇಲೆ ಯಾವುದೇ ಹೊರೆ ಆಗುವುದಿಲ್ಲ ಎಂಬುದು ನಮಗೆ ಅರ್ಥವಾಗುತ್ತದೆ.ಒಟ್ಟಾರೆ ಸಿದ್ದೇಶ್ ಸಿದ್ದನಮಠ ರವರು ಉತ್ತಮವಾದ ಕಥೆಗಳನ್ನು ಹೆಣೆಯುವುದರಲ್ಲಿ ಸಿದ್ದಹಸ್ತರು…ಎಲ್ಲಾ ಕಥೆಗಳು ಸಹ ಓದಿಸಿಕೊಂಡು ಹೋಗುವ ಗುಣಗಳನ್ನು ಹೊಂದಿವೆ.

ಪುಸ್ತಕಾಸಕ್ತರು ತಮ್ಮ ತಮ್ಮ ಮನೆಯ ಗ್ರಂಥಾಲಯದಲ್ಲಿ ಸಂಗ್ರಹಿಸಿಡಬೇಕಾದ ಪುಸ್ತಕವಿದು.


  • ಮಂಜುನಾಥ ಜಮ್ಮಾಪುರ – ಕವಿಗಳು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading