ತಮಿಳು ಮತ್ತು ಮಳಿಯಾಳಂ ಲೇಖಕರಾದ ಜೆಯಮೋಹನ್ ಅವರ ಅನುವಾದಿತ ಕೃತಿ “ಆನೆ ಡಾಕ್ಟರ್ ಮತ್ತು ಇತರ ಕಥೆಗಳು” ಕೃತಿಯ ಕುರಿತು ಶ್ರೀಧರ್ ಡಿ ಸಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಆನೆ ಡಾಕ್ಟರ್ ಮತ್ತು ಇತರ ಕಥೆಗಳು
ಲೇಖಕರು : ಜೆಯಮೋಹನ್
ಪ್ರಕಾರ : ಕಥಾ ಸಂಕಲನ
ಮಾಲಿನ್ಯ ಮತ್ತು ಮನುಕುಲದ ಸ್ವಾರ್ಥದ ನಡುವೆ ಪ್ರಕೃತಿಯ ಆರ್ದ್ರತೆಯನ್ನು ನೆನಪಿಸುವ ಜೆಯಮೋಹನ್ ಅವರ “ಆನೆ ಡಾಕ್ಟರ್ ಮತ್ತು ಇತರ ಕಥೆಗಳು” ಕೃತಿಯು ಸಮಕಾಲೀನ ಭಾರತೀಯ ಸಾಹಿತ್ಯದ ಅತ್ಯಂತ ಮಹತ್ವದ ಅನುವಾದಿತ ಕೃತಿಗಳಲ್ಲಿ ಒಂದಾಗಿದೆ. ತಮಿಳು ಸಾಹಿತ್ಯದ ದಿಗ್ಗಜ ಜೆಯಮೋಹನ್ ಅವರ ‘ಅರಮ್’ ಸಣ್ಣಕಥೆಗಳ ಸಂಕಲನದಿಂದ ಆಯ್ದುಕೊಂಡು, ಬಹುವಚನ ಬಹುವಚನ ಪ್ರಕಾಶನದ ಮೂಲಕ ಕನ್ನಡಕ್ಕೆ ಬಂದಿರುವ ಈ ಕಥೆಗಳು ಮನುಷ್ಯತ್ವದ ವಿಭಿನ್ನ ಆಯಾಮಗಳನ್ನು ಶೋಧಿಸುತ್ತದೆ.
ಈ ಕೃತಿಯ ಕೇಂದ್ರಬಿಂದುವಾಗಿರುವ ಕಥೆಯು ಕಾಡಿನ ದೈತ್ಯಜೀವಿಗಳಾದ ಆನೆಗಳ ಹಾಗೂ ಅವುಗಳ ಆಪ್ತ ವೈದ್ಯರ ನಡುವಿನ ಅಪೂರ್ವ ಸಂಬಂಧವನ್ನು ಅನಾವರಣಗೊಳಿಸುತ್ತದೆ. ನಿಜ ಜೀವನದ ದಂತಕಥೆಯಾಗಿದ್ದ ಪಶುವೈದ್ಯ ಡಾ. ವಿ. ಕೃಷ್ಣಮೂರ್ತಿ (ಡಾ. ಕೆ) ಅವರ ಒಡನಾಟಗಳನ್ನು ಆಧರಿಸಿದ ಈ ಪ್ರಮುಖ ಕಥೆಯು, ಮನುಷ್ಯರು ಎಸೆದ ಮದ್ಯದ ಬಾಟಲಿಗಳ ಗಾಜಿನ ಚೂರುಗಳಿಂದ ಕಾಲಿಗೆ ಗಾಯ ಮಾಡಿಕೊಂಡು ನರಳುವ ಆನೆಗಳನ್ನು ಅವರು ಹೇಗೆ ಪ್ರೀತಿ ಮತ್ತು ಕರುಣೆಯಿಂದ ಗುಣಪಡಿಸುತ್ತಾರೆ ಎಂಬುದನ್ನು ಚಿತ್ರಿಸುತ್ತದೆ. ಪ್ರಕೃತಿಯ ನಡುವಿನ ಸಹಬಾಳ್ವೆಯ ಕಥಾಹಂದರವು ಓದುಗನನ್ನು ನಿಗೂಢವಾದ ಕಾಡಿನ ನಿಶ್ಯಬ್ದದೊಳಗೆ ಕೊಂಡೊಯ್ಯುತ್ತದೆ ಮತ್ತು ಮಾನವನ ಬೇಜವಾಬ್ದಾರಿತನಕ್ಕೆ ಕನ್ನಡಿ ಹಿಡಿಯುತ್ತದೆ.

ಕೃತಿಯುದ್ದಕ್ಕೂ ಪ್ರಕೃತಿಯ ನೈತಿಕತೆ, ಪರಿಸರ ಕಾಳಜಿ ಮತ್ತು ಸಕಲ ಜೀವಿಗಳ ಪ್ರೇಮದಂತಹ ಜ್ವಲಂತ ವಸ್ತುಗಳು ಮುಖ್ಯ ಆಕೃತಿಗಳಾಗಿ ಮೂಡಿಬಂದಿವೆ. ಮಾನವನ ನಾಗರಿಕತೆಯು ಪ್ರಕೃತಿಯ ಮೇಲೆ ನಡೆಸುತ್ತಿರುವ ನಿರಂತರ ಆಕ್ರಮಣವನ್ನು ಕಥೆಗಾರರು ಅತ್ಯಂತ ಮಾರ್ಮಿಕವಾಗಿ ಟೀಕಿಸುತ್ತಾರೆ. ಮೃಗಗಳೆಂದು ನಾವು ಕರೆಯುವ ಪ್ರಾಣಿಗಳಲ್ಲಿರುವ ಕೃತಜ್ಞತಾ ಭಾವ ಮತ್ತು ಸಾಮೂಹಿಕ ಪ್ರಜ್ಞೆಗಿಂತ ಸ್ವಾರ್ಥಿ ಮನುಷ್ಯ ಹೇಗೆ ಹೀನಾಯವಾಗಿ ಬದುಕುತ್ತಿದ್ದಾನೆ ಎಂಬ ವೈರುಧ್ಯವನ್ನು ಕಥೆಗಳು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತವೆ. ಭೌತಿಕ ಪ್ರಪಂಚದ ಆಚೆಗಿನ ಆಧ್ಯಾತ್ಮಿಕ ಮತ್ತು ನೈತಿಕ ಸಂಬಂಧವೊಂದು ಜೀವಿಗಳ ನಡುವೆ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಈ ಕಥೆಗಳೇ ಸಾಕ್ಷಿ.
ಡಾ. ಕೆ, ಕೇವಲ ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿರದೆ, ಅರಣ್ಯದ ಆದಿಮ ಜೀವಂತಿಕೆಯನ್ನು ಪೂಜಿಸುವ ಒಬ್ಬ ಆಧ್ಯಾತ್ಮಿಕ ಸಾಧಕನಂತೆ ಕಾಣಿಸುತ್ತಾರೆ. ಆನೆಗಳ ದೈಹಿಕ ನೋವಿಗೆ ಚಿಕಿತ್ಸೆ ನೀಡುತ್ತಾ, ಅವುಗಳ ಭಾಷೆಯನ್ನು, ಮೌನವನ್ನು ಅರಿಯುವ ಡಾಕ್ಟರ್, ತಾವೂ ಆ ಕಾಡಿನ ಭಾಗವೇ ಆಗಿ ಬದಲಾಗುವ ಪರಿ ಅನನ್ಯವಾಗಿದೆ.

ಈ ಕೃತಿಯಲ್ಲಿ ಒಟ್ಟು 5 ಕಥೆಗಳಿವೆ. (ಆನೆ ಡಾಕ್ಟರ್, ಊಟದ ಲೆಕ್ಕ, ಒಂದೇ ಜಗತ್ತು, ಧರ್ಮ ಮತ್ತು ತಾಯಿಯ ಪಾದ) ಜೆಯಮೋಹನ್ ಅವರ ನಿರೂಪಣಾ ಶೈಲಿಯು ತೀರ ಸಂಕೀರ್ಣವಾದ ಭಾವನೆಗಳನ್ನು ಅತ್ಯಂತ ಆಪ್ತವಾದ ಮತ್ತು ಸರಳವಾದ ಭಾಷೆಯಲ್ಲಿ ಹಿಡಿದಿಡುತ್ತದೆ. ಎಸ್. ನಾರಾಯಣ್ ಅವರು ಕನ್ನಡಕ್ಕೆ ಮಾಡಿರುವ ಭಾಷಾಂತರವು ಮೂಲ ತಮಿಳಿನ ಸೊಗಡನ್ನು ಎಲ್ಲೂ ಕಳೆದುಕೊಳ್ಳದೆ, ಪ್ರಾದೇಶಿಕ ಸಹಜತೆಯೊಂದಿಗೆ ಓದುಗನಿಗೆ ತಲುಪುತ್ತದೆ. ಲೇಖಕರು ಬಳಸುವ ಭಾಷೆಯು ಕಾವ್ಯಾತ್ಮಕವಾಗಿದ್ದರೂ ಕೃತಕ ಎನಿಸುವುದಿಲ್ಲ; ಬದಲಿಗೆ ಕಾಡಿನ ಹಸಿರು, ಹಸಿ ಮಣ್ಣಿನ ಘಮ ಮತ್ತು ಪ್ರಾಣಿಗಳ ಆರ್ತಧ್ವನಿಯನ್ನು ನಮ್ಮ ಕಣ್ಣಮುಂದೆ ತಂದು ನಿಲ್ಲಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ.
ಆಧುನಿಕ ಬದುಕಿನ ಯಾಂತ್ರಿಕತೆಯ ನಡುವೆ ಕಳೆದುಹೋಗುತ್ತಿರುವ ಮನುಷ್ಯತ್ವ ಮತ್ತು ಅಂತಃಕರಣವನ್ನು ಮರುಕಳಿಸುವಂತೆ ಮಾಡುವ ಶಕ್ತಿ ಈ ಕಥೆಗಳಿಗಿವೆ.
- ಶ್ರೀಧರ್ ಡಿ ಸಿ – ಲೇಖಕರು
