ಹೆಣ್ಣು ಮಕ್ಕಳಿಗಾಗಿ ಕಾಲೇಜು ತೆರೆಯಲು ಮಹಾರಾಣಿ ಕೆಂಪನಂಜಮ್ಮಣ್ಣಿಯವರಿಗೆ ಪ್ರೇರಣೆ ನೀಡಿದ ದೇಶ ವಿದೇಶಗಳನ್ನು ಸುತ್ತಿಬಂದಿದ್ದ ಆ ಸನ್ಯಾಸಿ ಯಾರು?… ವಿಶ್ರಾಂತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಅವರ ಈ ಲೇಖನವನ್ನು ತಪ್ಪದೆ ಪೂರ್ತಿಯಾಗಿ ಓದಿ…
ಮೈಸೂರಿನ ಅರಮನೆಗೆ ಸನ್ಯಾಸಿಯೊಬ್ಬ ನೋಡಲು ಬಂದ. ಒಂದು ಊರು ಇಷ್ಟೊಂದು ಮುಂದುವರೆದು ಸುಸಂಸ್ಕೃತರಾದ, ವಿದ್ಯಾವಂತರಾದ ಜನಗಳಿಂದ ಕೂಡಿ, ದೂರದರ್ಶಿತ್ವವುಳ್ಳ, ಜನಸೇವಾಸಕ್ತರಾದ ಮಹಾರಾಜರ ಬಗ್ಗೆ ಕೇಳಿ ಆತ ಅತೀವ ಸಂತಸಗೊಂಡಿದ್ದ ಆತ ರಾಜರನ್ನು ನೋಡಲು ಬಂದ.

ಸೂಕ್ತ ಸ್ವಾಗತವಾಯಿತು. ಆದರೋಪಚಾರಗಳಾದವು. ಲೋಕಾಭಿರಾಮವಾಗಿ ಹತ್ತನೇ ಚಾಮರಾಜೇಂದ್ರ ಒಡೆಯರ್ ಬಳಿ ಮಾತಾಡುತ್ತ ಕುಳಿತ ಆತ ಹೇಳಿದ :
” ಎಲ್ಲ ಸರಿ. ಎಲ್ಲವನ್ನೂ ಕಂಡೆ ನಾನಿಲ್ಲಿ.ಒಂದು ಕೊರತೆ. ಒಂದೇ ಒಂದು ಕೊರತೆ ನನ್ನ ಗಮನಕ್ಕೆ ಬಂತು.ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ಹೇಳಬಹುದೇ ? “.
” ಅರೇ. ಕೇಳ್ಬೇಕೇನೂ ? … ದಯಮಾಡಿ ಹೇಳಿ”.
ಅರಸರೂ , ಮಹಾರಾಣಿಯವರೂ ಮೈಯ್ಯೆಲ್ಲಾ ಕಿವಿಯಾಗಿ ಆ ಸನ್ಯಾಸಿಯನ್ನು ನೋಡಿದರು.
“ಹೆಣ್ಣು ಮಕ್ಕಳ ವಿದ್ಯಾಭ್ಯಾಸ ?”
” ದಯಮಾಡಿ ಅದೊಂದನ್ನು ಪ್ರೋತ್ಸಾಹಿಸಿ ಪುಣ್ಯ ಕಟ್ಟಿಕೊಳ್ಳಿ. ಹೆಣ್ಣು ಮಕ್ಕಳು ಶಾಲೆಗೆ , ಕಾಲೇಜಿಗೆ ಹೋಗುವಂತೆ ಪ್ರೋತ್ಸಾಹಿಸಿ. ಮುಂಬರುವ ದಿನಗಳಲ್ಲಿ ದೇಶದ ತುಂಬೆಲ್ಲಾ ವಿದ್ಯಾವಂತ ಯುವಕರು ಯುವತಿಯರು ತುಂಬಿರಬೇಕು. ಇಡೀ ಭಾರತದಲ್ಲೇ ಮುಂದುವರೆದ ಸಂಸ್ಥಾನವೆಂದು ಹೆಸರಾಗಿರುವ ಈ ಮೈಸೂರಿನಿಂದಲೇ ಅದು ಶುರುವಾಗಲಿ. ಹೆಣ್ಣು ಮಕ್ಕಳ ಕಾಲೇಜು ಶಿಕ್ಷಣಕ್ಕೆ ನಾಂದಿಯಾಗಲಿ”.
ದೇಶ ವಿದೇಶಗಳನ್ನು ಸುತ್ತಿಬಂದಿದ್ದ ಆ ಸನ್ಯಾಸಿಯ ಮಾತನ್ನು ಕೇಳಿ , ವಾಣಿವಿಲಾಸ ಸನ್ನಿಧಾನ ಆವತ್ತೇ … ಆ ಕ್ಷಣವೇ ನಿರ್ಧರಿಸಿಬಿಟ್ಟರು. ಭಾರತದಲ್ಲೇ ಮೊತ್ತ ಮೊದಲಬಾರಿಗೆ ಹೆಣ್ಣು ಮಕ್ಕಳಿಗೇ ಮೀಸಲಾದ ಪ್ರಪ್ರಥಮ ಮಹಾರಾಣಿ ಕಾಲೇಜು 1881 ರಲ್ಲಿ ಪ್ರಾರಂಭವಾಯಿತು.
ಅದು ಅಸ್ತಿತ್ವಕ್ಕೆ ಬರುವಂತೆ ಪ್ರೇರಣೆ ನೀಡಿದ ಸನ್ಯಾಸಿ ಸ್ವಾಮಿ ವಿವೇಕಾನಂದರು.

*
ಇದೊಂದು ಆರಂಭ ಅಷ್ಟೇ. ಮಹಾರಾಣಿಯವರು ಶಿವಮೊಗ್ಗದ ಪ್ರವಾಸದಲ್ಲಿದ್ದಾಗ ವಿದ್ರಾವಕ ದೃಶವೊಂದನ್ನು ಕಂಡರು. ತುಂಬು ಗರ್ಭಿಣಿಯೊಬ್ಬಳು ಚಿಕಿತ್ಸೆ ಸಿಕ್ಕದೆ ದಾರುಣವಾಗಿ ಮೃತಪಟ್ಟಳು.
ಮನಸ್ಸು ಕದಡಿ ಹೋಯಿತು. ತಮ್ಮ ಸಂಸ್ಥಾನದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಒಂದೊಂದು ಹೆರಿಗೆ ಆಸ್ಪತ್ರೆ ಮತ್ತು ಪಶು ಚಿಕಿತ್ಸಾ ಕೇಂದ್ರ ಪ್ರಾರಂಭಿಸುವುದೆಂದು ಸಂಕಲ್ಪ ಮಾಡಿದರು ಮತ್ತು ಅದನ್ನು ಆ ಕ್ಷಣವೇ ಪ್ರಕಟಿಸಿಯೂ ಬಿಟ್ಟರು.
ಮೈಸೂರಿಗೆ ಬಂದೊಡನೆ ಮಗ ನಾಲ್ವಡಿಯವರಲ್ಲಿ ವಿಷಯ ಪ್ರಸ್ಥಾಪಿಸಿದರು. ಮಹಾರಾಣಿಯವರ ಯಾವುದೇ ನಿರ್ಧಾರಕ್ಕೂ ಎಂದೂ ಪ್ರತಿಯಾಡದ ಮಗ , ಖಡಾಖಂಡಿತವಾಗಿ ನಿರಾಕರಿಸಿಬಿಟ್ಟರು.
” ಊರೂರಿನ ಜನಗಳಿಂದ ಸಾಲ ಎತ್ತಿದರೂ ಕನ್ನಂಬಾಡಿ ಕಟ್ಟೆಗೆ ಹಣ ಸಾಕಾಗುತ್ತಿಲ್ಲ. ಕಟ್ಟೆಯ ಕೆಲಸ ಮುಗಿಯುವ ತನಕ ಯಾವುದೇ ಹೊಸ ಯೋಜನೆ ಬೇಡವೇ ಬೇಡ. ಬೊಕ್ಕಸದಿಂದ ಒಂದು ಕಾಸನ್ನೂ ಕೊಡಲಾಗುವುದಿಲ್ಲ. ಮೊದಲು ಕೆಲಸ ಮುಗಿಯಲಿ ” ಎಂದರು.

” ಕಟ್ಟೆಯ ಕೆಲಸ ಮುಗಿಯೋದಿಕ್ಕೆ ಇನ್ನೂ ಹತ್ತಾರು ವರ್ಷಗಳು ಬೇಕು. ತುಂಬಿದ ಗರ್ಭಿಣಿಯರು , ಮೂಕ ಪ್ರಾಣಿಗಳು ಅಲ್ಲೀವರೆಗೆ ಅನ್ಯಾಯವಾಗಿ ಸಾಯಬೇಕೇ ?. ” ಸೋತು ಕೇಳಿದರು ಮಹಾರಾಣಿ.
ನಾಲ್ವಡಿಯವರು ಕೊಂಚವೂ ಕೆಂದಲಿಲ್ಲ.ಬಿಲ್ ಕುಲ್ ಆಗುವುದಿಲ್ಲವೆಂದರು. ಈ ಮೊದಲು ಎಂಟು ವರ್ಷಗಳ ಕಾಲ ರಾಜ್ಯಾಡಳಿತ ನಡೆಸಿದ್ದವರು ಕೆಂಪು ನಂಜಮ್ಮಣ್ಣಿ. ಕೈಯ್ಯೊಡ್ಡಿ ಕೇಳಿದರೂ ಮಗ ಕೊಡುತ್ತಿಲ್ಲ. ಆದರೆ ಅವನ ಮಾತು ಅರಗಿಸಿಕೊಳ್ಳಲಾಗದ ಕಹಿ ಸತ್ಯ. ತಾವೇ ಕಡು ನಿರ್ಧಾರವನ್ನು ತಾವೇ ಕೈಗೊಂಡರು. ತಮ್ಮ ತವರುಮನೆಯಿಂದ ತಂದಿದ್ದ ಚಿನ್ನವನ್ನು ಬೊಂಬಾಯಿಯಲ್ಲಿ ಮಾರಾಟ ಮಾಡಿಸಿ , ಅದರ ದುಡ್ಡಿನಲ್ಲಿ ಹತ್ತು ಹೆರಿಗೆ ಆಸ್ಪತ್ರೆಗಳನ್ನು ಮತ್ತು ಪಶು ಚಿಕಿತ್ಸಾಲಯಗಳನ್ನು ಸ್ವತಃ ಕಟ್ಟಿಸಿದರು.
*
ಹಿರಿಯೂರಿನ ವಾಣಿ ವಿಲಾಸ ಸಾಗರ , ಬ್ಲಫ್ ವಿದ್ಯುದಾಗಾರ ಇಂತಹ ಹತ್ತಾರು ಯೋಜನೆ ಗಳನ್ನು ಕಾರ್ಯಗತಗೊಳಿಸಿದ ಶ್ರೇಯಸ್ಸು ಅವರದು. ರೀಜೆಂಟರಾಗಿ ಅವರು ಕಾರ್ಯ ನಿರ್ವಹಿಸಿದ ಬಗ್ಗೆ , ವಿಕ್ಟೋರಿಯಾ ಮಹಾರಾಣಯ 19 Canon Salutes ಕುಶಾಲುತೋಪುಗಳ ಗೌರವವನ್ನು ಅವರು ಜೀವಿತವಿರುವವರೆಗೂ ದಯಪಾಲಿಸಿದ್ದರು.
- ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ , ಮೈಸೂರು
