ಅಪ್ಪ ಮತ್ತು ಮಕ್ಕಳ ಸಂಬಂಧ ಇಂದು ಗಟ್ಟಿಯಾಗಿಲ್ಲ. ಕಾರಣ ನಮ್ಮಲ್ಲಿನ ಮೊಬೈಲ್ ಸಂಸ್ಕೃತಿ. ಅಪ್ಪ ಮಕ್ಕಳ ನಡುವೆ ಮೊಬೈಲ್ ಬಂದು ಭಾವನೆಗಳನ್ನು ದೂರ ಮಾಡುತ್ತಿವೆ..ಈ ಕುರಿತು ಲೇಖಕರಾದ ಓಂಕಾರ ಪಾಟೀಲ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
“ತಂದೆ ನೀನು ತಾಯಿ
ನೀನು, ಬಂಧು ನೀನು
ಬಳಗ ನೀನು | ನೀನಲ್ಲದೆ
ಮತ್ತಾರು ಇಲ್ಲ
ಕೂಡಲಸಂಗಮದೇವ”
ಬಸವಣ್ಣನವರ ಈ ಒಂದು ವಚನದಲ್ಲಿ ತಂದೆಯ ಸ್ಥಾನ ಎಷ್ಟು ಎತ್ತರದಲ್ಲಿದೆ ಎಂದು ತಿಳಿಯುತ್ತದೆ. ತಂದೆ ಎಂದರೆ ಕೇವಲ ರಕ್ತ ಸಂಬಂಧವಲ್ಲ, ಅದು ಒಂದು ಭಾವನಾತ್ಮಕ ವಿಶ್ವವಿದ್ಯಾಲಯ. ಆದರೆ ಇಂದು ಈ ಧಾವಂತದ ಯುಗದಲ್ಲಿ ಈ ವಿಶ್ವವಿದ್ಯಾಲಯದ ಬಾಗಿಲುಗಳು ಮುಚ್ಚುತ್ತಿವೆ. ತಂದೆ ಬೆಳಗ್ಗೆ ೮ಕ್ಕೆ ಕೆಲಸಕ್ಕೆ ಹೋಗಿ ರಾತ್ರಿ ೧೦ಕ್ಕೆ ಬಂದರೆ, ಮಗು ಬೆಳಗ್ಗೆ ಶಾಲೆಗೆ ಹೋಗಿ ಸಂಜೆ ಟ್ಯೂಷನ್, ಮೊಬೈಲ್ನಲ್ಲಿ ಬ್ಯುಸಿ. ಇಬ್ಬರೂ ಒಂದೇ ಮನೆಯಲ್ಲಿ ಅಪರಿಚಿತರಂತೆ ಬದುಕುತ್ತಿರುವುದು ಇಂದು ಹಲವು ಮನೆಗಳಲ್ಲಿ ಕಂಡು ಬರುತ್ತದೆ.
ತಂದೆ-ಮಕ್ಕಳ ಬಾಂಧವ್ಯವನ್ನು ಗಟ್ಟಿಗೊಳಿಸಲು ೮೦೦ ವರ್ಷಗಳ ಹಿಂದಿನ ಶರಣರ ವಚನಗಳು ನಮಗೆ ದಾರಿದೀಪವಾಗಿವೆ.

ಶರಣ ಪರಂಪರೆಯಲ್ಲಿ ತಂದೆಯ ಮೂರು ರೂಪಗಳು
ಜನ್ಮದಾತನಾಗಿ ತಂದೆ:
ದೇಹ ಕೊಟ್ಟವನು. ಆದರೆ ವಚನಕಾರರು ಹೇಳುತ್ತಾರೆ, ದೇಹ ಕೊಡುವುದು ಮಾತ್ರ ತಂದೆಯ ಕೆಲಸವಲ್ಲ. ಒಳ್ಳೆಯ ಸಂಸ್ಕಾರ ನೀಡಿ ಬೆಳೆಸುವುದು ತಂದೆಯ ಆದ್ಯ ಕರ್ತವ್ಯ.
ಜ್ಞಾನದಾತನಾಗಿ ತಂದೆ – ಗುರು:
ಬಸವಣ್ಣನವರು ತಮ್ಮ ತಂದೆಯನ್ನೇ ಗುರು ಎಂದು ಕರೆದರು. ತಂದೆ ತನ್ನ ಮಗನಿಗೆ ಮೊದಲ ಗುರು. ಅವನು ಅಕ್ಷರ ಕಲಿಸುವ ಮೊದಲು ಆಚಾರ ಕಲಿಸಬೇಕು. ತಂದೆ ಸತ್ಯ ಮಾತನಾಡಿದರೆ, ಮಗು ಸತ್ಯವನ್ನೇ ನುಡಿಯುತ್ತದೆ. ತಂದೆ ಮನೆಯಲ್ಲಿ ಹೆಂಡತಿಯನ್ನು ಗೌರವಿಸಿದರೆ, ಮಗು ಹೆಣ್ಣನ್ನು ಗೌರವಿಸಲು ಕಲಿಯುತ್ತದೆ.
ಮಾರ್ಗದರ್ಶಕನಾಗಿ ತಂದೆ:
“ಗುರುವಿನ
ಗುಲಾಮನಾಗುವ ತನಕ
ದೊರೆಯದಣ್ಣ
ಮುಕುತಿ”
ಅಲ್ಲಮಪ್ರಭು ಅವರ ವಚನದಂತೆ ಇಲ್ಲಿ ಗುರು ಎಂದರೆ ತಂದೆಯೇ. ಮಗು ತಂದೆಯನ್ನು ಗುಲಾಮನಂತೆ ಅಲ್ಲ, ಮಾರ್ಗದರ್ಶಕನಂತೆ ಕಾಣಬೇಕು. ತಂದೆ ಮಗನ ಕೈ ಹಿಡಿದು ನಡೆಸಬೇಕು, ಬೆಳಕಿನ ದಾರಿ ತೋರಿಸಬೇಕು.
ಹಿಂದೆ ತಂದೆ ಹೊಲದಲ್ಲಿ, ಅಂಗಡಿಯಲ್ಲಿ ಇದ್ದರೂ ಸಂಜೆ ಮಕ್ಕಳೊಂದಿಗೆ ಕುಳಿತು ಹರಟೆ ಹೊಡೆಯುತ್ತಿದ್ದ, ಕಥೆ ಹೇಳುತ್ತಿದ್ದ. ಆದರೆ ಇಂದು ತಂದೆಗೆ ಮಕ್ಕಳಿಗಾಗಿ ಸಮಯವೇ ಇಲ್ಲದಂತಾಗಿದೆ.
“ನಾನು ಕಷ್ಟಪಟ್ಟು ನಿನ್ನನ್ನು ಓದಿಸುತ್ತಿದ್ದೇನೆ, ನೀನು ಚೆನ್ನಾಗಿ ಓದಿ ಹೆಚ್ಚು ಮಾರ್ಕ್ಸ್ ತೆಗೆದು ಪಾಸಾಗಬೇಕು” ಎಂದು ತಂದೆ ಮಗನ ಮೇಲೆ ತನ್ನ ಕನಸುಗಳನ್ನು ಹೇರುತ್ತಾನೆ. ಇದು ಪ್ರೀತಿಯಲ್ಲ, ಒತ್ತಡವಾಗುತ್ತದೆ.
ಮಗು ಮೊಬೈಲ್ ಕೇಳಿದಾಗ ತಂದೆ “ಇಲ್ಲ” ಎನ್ನುತ್ತಾನೆ, ಆದರೆ ಏಕೆ ಇಲ್ಲ ಎಂದು ವಿವರಿಸುವುದಿಲ್ಲ. ಮಗು “ಏಕೆ?” ಎಂದರೆ ತಂದೆ “ನಾನು ಹೇಳಿದ್ದು ಅಷ್ಟೇ” ಎನ್ನುತ್ತಾನೆ. ತಂದೆ ಮಕ್ಕಳಿಗೆ ಬುದ್ಧಿ ಹೇಳುವ ಮೊದಲು ತಾನು ಆ ಬುದ್ಧಿಯಂತೆ ಬದುಕಬೇಕು. ಮೊಬೈಲ್ ಬೇಡ ಎನ್ನುವ ತಂದೆಯೇ ದಿನವಿಡೀ ಮೊಬೈಲ್ ನೋಡಿದರೆ ಮಗು ಕೇಳುವುದಿಲ್ಲ.
ಮಗನಿಗೆ ದುಬಾರಿ ಬೈಕ್ ಕೊಡಿಸುವ ಬದಲು, ಆ ಬೈಕ್ಗೆ ಬೇಕಾದ ಹಣ ಹೇಗೆ ಬರುತ್ತದೆ, ಅದಕ್ಕಾಗಿ ಎಷ್ಟು ಬೆವರು ಹರಿಸಬೇಕು ಎಂದು ತಿಳಿಸಿ. ರಜಾ ದಿನಗಳಲ್ಲಿ ಮಗನನ್ನು ತನ್ನ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗಿ. ಶ್ರಮದ ಬೆಲೆ ಗೊತ್ತಾದ ಮಗು ಎಂದಿಗೂ ದಾರಿ ತಪ್ಪುವುದಿಲ್ಲ.
ತಂದೆ ತನ್ನ ಸಂಬಳ, ತನ್ನ ಸಂತೋಷ, ತನ್ನ ದುಃಖ ಎಲ್ಲವನ್ನೂ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. “ಇಂದು ನನಗೆ ಕೆಲಸದಲ್ಲಿ ಬೇಸರವಾಯಿತು” ಎಂದು ತಂದೆ ಮಗನ ಬಳಿ ಹೇಳಿಕೊಂಡಾಗ, ಮಗು “ನನಗೂ ಇಂದು ಶಾಲೆಯಲ್ಲಿ ಹಾಗಾಯಿತು ಅಪ್ಪ” ಎಂದು ತನ್ನ ಮನಸ್ಸು ತೆರೆಯುತ್ತದೆ.
ಮಗು ತಪ್ಪು ಮಾಡುವುದು ಸಹಜ. ಮಗುವಿಗೆ ಹೊಡೆಯಬೇಡಿ, ತಿದ್ದಿ. ಮೊದಲ ಬಾರಿ ಪ್ರೀತಿಯಿಂದ ತಿಳಿ ಹೇಳಿ, ಎರಡನೇ ಬಾರಿ ಎಚ್ಚರಿಸಿ. ತಂದೆಯ ಕ್ಷಮೆ ಮಗುವಿಗೆ ದೊಡ್ಡ ಶಕ್ತಿ.
ಮಗುವಿನ ಪಾಲಿಗೆ ೫ ವರ್ಷದವರೆಗೆ ತಂದೆ ದೇವರಂತೆ, ೧೫ ವರ್ಷದವರೆಗೆ ಹೀರೋನಂತೆ, ೨೦ ವರ್ಷದ ನಂತರ ಸ್ನೇಹಿತನಾಗಬೇಕು. ೨೦ ವರ್ಷದ ಮಗನನ್ನು ಇನ್ನೂ ಮಗು ಎಂದುಕೊಂಡು ಆಜ್ಞೆ ಮಾಡಿದರೆ ಸಂಬಂಧ ಹಾಳಾಗುತ್ತದೆ. ಅವನ ಅಭಿಪ್ರಾಯ ಕೇಳಿ, ನಿರ್ಧಾರಕ್ಕೆ ಗೌರವ ಕೊಡಿ.
ತಂದೆ-ಮಕ್ಕಳ ಸಂಬಂಧ ಅರ್ಥಪೂರ್ಣವಾಗಿರಬೇಕು ಮತ್ತು ಬದುಕಿಗೆ ದಾರಿ ತೋರಿಸುವಂತಿರಬೇಕು.
ಶರಣರ ವಚನದಂತೆ –
“ಎನ್ನ ತನು ನಿನ್ನದು, ಎನ್ನ ಮನ ನಿನ್ನದು, ಎನ್ನ ಧನ ನಿನ್ನದು”
ಎಂದು ತಂದೆ ಮಕ್ಕಳಿಗೆ ಅರ್ಪಿಸಿಕೊಂಡಾಗ, ಮಕ್ಕಳು “ತಂದೆ ನೀನೇ ನನ್ನ ಸರ್ವಸ್ವ” ಎನ್ನುತ್ತಾರೆ. ಇದುವೇ ನಿಜವಾದ ತಂದೆ-ಮಕ್ಕಳ ಬಾಂಧವ್ಯದ ಬೆಳಕು.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ್.
