‘ನೆನಪು ನೂರೆಂಟು’ ಕೃತಿ ಪರಿಚಯ

ಲೇಖಕಿ ಲಕ್ಷ್ಮೀ ಭಟ್‌ ರವರು ʼನೆನಪು ನೂರೆಂಟುʼ ಪುಸ್ತಕದ ಮೂಲಕ ಅವರ ಜೀವನದ ಅನೇಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಕೃತಿಯ ಕುರಿತು ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…

ಪುಸ್ತಕ : ನೆನಪು ನೂರೆಂಟು
ಲೇಖಕರು : ಲಕ್ಷ್ಮೀ ಭಟ್‌, ಪೂಕಳ.
ಬೆಲೆ :‌ ೧೦೦ ರೂಪಾಯಿ
ಪುಟ : ೬೦
ಪ್ರಕಾಶನ : ಶಾಂತಾದುರ್ಗಾ ಪಬ್ಲಿಕೇಷನ್ಸ್‌

ನೆನಪುಗಳ ಮಾತು ಮಧುರ. ಬಾಲ್ಯ, ಶಾಲಾದಿನಗಳ, ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತರೆ, ಆ ದಿನಗಳು ಎಷ್ಟು ಚಂದವಿತ್ತು ಎಂದು ಎನಿಸದಿರದು. ಬಾಲ್ಯದ ದಿನಗಳಲ್ಲಿ ಸೋದರ – ಸೋದರಿಯರೊಂದಿಗೆ ಕಳೆದ ನೆನಪು, ಅಜ್ಜಿಯೊಂದಿಗಿನ ಬಾಂಧವ್ಯ, ತಂದೆ-ತಾಯಂದಿರು ನಮಗೆ ಒಳ್ಳೆಯ ಹಾದಿ ತೋರಿಸಲು ಕಲಿಸಿದ ಪಾಠ, ಗುರುಗಳು ಹೇಳಿಕೊಟ್ಟ ಪಾಠಗಳು ಹೀಗೆ ನೆನಪುಗಳ ಸರಮಾಲೆಯೇ ಹರಿದು ಬರುತ್ತದೆ.

ಲೇಖಕಿ ಲಕ್ಷ್ಮೀ ಭಟ್‌ ರವರು ʼನೆನಪು ನೂರೆಂಟುʼ ಪುಸ್ತಕದ ಮೂಲಕ ಅವರ ಜೀವನದ ಅನೇಕ ಅನುಭವಗಳನ್ನು ನಮ್ಮ ಮುಂದಿರಿಸಿದ್ದಾರೆ. ಬಾಲ್ಯವಿವಾಹ ಪದ್ಧತಿಯಿಂದ ಅವರ ಅಜ್ಜಿ ೭ನೇ ವಯಸ್ಸಿನಲ್ಲೇ ಮದುವೆಯಾಗಿ ದಿಬ್ಬಣದಲ್ಲಿ ಮೇನೆಯ ಮೇಲೆ ಹೊತ್ತು ತಂದ ಪ್ರಸಂಗ, ವಿಧವೆಯಾದ ನಂತರ ಅವರ ತಲೆಬೋಳಿಸಿ, ಬಿಳಿಸೀರೆ ಉಟ್ಟುಕೊಂಡು ಮಡಿಯಾದದ್ದು, ಮೊಮ್ಮಕ್ಕಳೊಂದಿಗೆ ಕಥೆ ಹೇಳುವ, ತಾಳಮದ್ದಳೆಗೆ ಕರೆದುಕೊಂಡು ಹೋಗುವ, ನಂತರ ಅವರನ್ನು ಕಳೆದುಕೊಂಡ ನಂತರ ಬಹಳ ದಿನಗಳವರೆಗೆ ಅಜ್ಜಿ ಅವರನ್ನು ಎಬ್ಬಿಸಿದಂತೆ, ಹೀಗೆ ಅವರೊಂದಿಗೆ ಅಜ್ಜಿಯ ಆತ್ಮೀಯತೆಯನ್ನು ಹಂಚಿಕೊಂಡಿದ್ದಾರೆ.

ದೂರದ ಶಾಲೆಗೆ ನಡೆದುಕೊಂಡು ಹೋಗುವುದು, ಎಲೆ – ಅಡಿಕೆ ತಿಂದು ಬಾಯಿ ಕೆಂಪಗೆ ಮಾಡಿಕೊಳ್ಳುವ ಆಸೆಯಿಂದ ಜಾಸ್ತಿ ಸುಣ್ಣ ಹಚ್ಚಿಕೊಂಡು ಆದ ಅವಾಂತರ, ಶಾಲೆಯ ನಂತರ ಅವರ ಹೊಲಗದ್ದೆಗಳಿಗೆ ನೀರುಣಿಸಲು ಹೋಗುವ ಮಕ್ಕಳು, ಅಕ್ಕನ ಮದುವೆಯಾಗುತ್ತಲೇ ಮನೆಕೆಲಸಕ್ಕೆ ನೆರವಾಗಲು ಶಾಲೆ ಬಿಡಬೇಕಾದ ಅನಿವಾರ್ಯತೆ, ಓದುವ ಆಸೆಯಿಂದ ಮನೆಯಲ್ಲೇ ಓದಿ, ನೇರವಾಗಿ ಪರೀಕ್ಷೆ ಕಟ್ಟುವ ಅವರ ಸಾಹಸ ಹೀಗೆ ಸಿಹಿ – ಕಹಿ ನೆನಪುಗಳ ಮಿಶ್ರಣವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ನಂತರದ ಬದುಕಿನಲ್ಲಿ ಅವರು ಎದುರಿಸಬೇಕಾದ ಸವಾಲುಗಳು, ಪತಿಯ ಮನೆಯವರು ಹಲವು ಕಾಲದಿಂದ ನಡೆಸಿಕೊಂಡು ಬಂದ ದೇವರ, ದೈವನೇಮಗಳು, ಆ ಪದ್ಧತಿಗಳನ್ನು ಸರಿಯಾಗಿ ಅನುಸರಿಸಲಾಗದೇ ಅವರು ಪಡಬೇಕಾದ ಕಷ್ಟಗಳು, ಹೀಗೆ ಬದುಕಿನಲ್ಲಿ ಹಲವಾರು ಅನುಭವಗಳನ್ನುಂಡವರು ಕಷ್ಟಗಳು ಬಂದಾಗ ಎದೆಗುಂದದೇ ಎದುರಿಸಬೇಕೆಂಬ ಸಾರವನ್ನು ಇಂದಿನ ಯುವಜನತೆಗೆ ನೀಡುತ್ತಿದ್ದಾರೆ.

ಗೋಕರ್ಣ, ಗಾಣಗಾಪುರಕ್ಕೆ ಹೋಗುವಾಗ ಪ್ರಯಾಣದ ಪ್ರಯಾಸ, ದೇವರ ದರ್ಶನ ಪಡೆದ ನೆನಪು, ಸಮುದ್ರ ಸ್ನಾನ ಮಾಡಿದ್ದು ಇವೆಲ್ಲ ಹೇಳುವಾಗ ಇಂದಿನ ಪರಿಸ್ಥಿತಿಗೂ, ಅಂದಿನ ದಿನಗಳಿಗೂ ಇರುವ ವ್ಯತ್ಯಾಸ ಕಾಣಬಹುದು. ಬರೀಯ ಪತ್ರಗಳಿರುವ ಕಾಲದ ಕಥೆಗಳನ್ನು ಕೇಳುವಾಗ ಆ ದಿನಗಳನ್ನು ಊಹಿಸುವುದೂ ಕಷ್ಟವೇನೋ! ಎಂಬಷ್ಟು ನೆನಪುಗಳನ್ನೂ, ಮೊದಮೊದಲು ಮಾಡಿದ ಫೋನ್‌ ಕರೆ, ಅಮ್ಮನ ಶ್ರಾದ್ಧಕ್ಕಾಗಿ ಗೋಕರ್ಣಕ್ಕೆ ಹೋದರೆ, ತವರು ಮನೆಗೆ ಸೂತಕ ಬಂದ ಕಾರಣ ಅವರ್ಯಾರು ಬರದೇ ಇದದ್ದು ಅಲ್ಲಿಗೆ ಹೋದಮೇಲೆ ತಿಳಿದದ್ದು ಎಂದು ಹೇಳಿದರೆ ಇಂದಿನ ಯುವಜನತೆ ಫೋನ್‌ ಕರೆ ಮಾಡಬಹುದಲ್ಲ ಎಂದು ಕೇಳಬಹುದು. ಪೋನ್‌ ವ್ಯವಸ್ಥೆ ಇಲ್ಲದ ದಿನಗಳು ಅವು ಎಂದು ಯುವಜನತೆಗೆ ಊಹಿಸುವಂತೆ ಅಂದಿನ ದಿನಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.

ಅಂಗಡಿಯಿಂದ ತಂದ ಸಾಮಾನುಗಳನ್ನು ಕಟ್ಟಿದ ಪತ್ರಿಕೆಯಲ್ಲಿರುವ ಕಥೆಗಳನ್ನು ಓದಿ, ಮನೆಯಲ್ಲಿ ತಂದೆ, ಅಜ್ಜಿಯಿಂದ ಕೇಳಿದ ಕಥೆಗಳು, ಶಾಲಾ ದಿನಗಳಲ್ಲಿ ಲೇಖನ, ಕಥೆಗಳ ಕೃಷಿ ಮಾಡಿದ ಇವರು, ಬಹಳ ವರ್ಷಗಳ ಕಾಲ ಬರವಣಿಗೆಗೆ ಅರ್ಧವಿರಾಮ ನೀಡಿದವರು, ಇತ್ತೀಚೆಗೆ ಭಕ್ತಿಗೀತೆಗಳನ್ನು ಬರೆಯುತ್ತಿರುವ ಸಾಹಿತ್ಯ ದೇವಿಗೆ ಹೊಸಮಾಲಾರ್ಪಣೆ. ಈ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಯುಟ್ಯೂಬ್‌ ನಲ್ಲಿ ಸಿಗುವಂತೆ ರಾಗಸಂಯೋಜನೆ ಮಾಡಿದ ಶ್ರೀಮತಿ ಪ್ರಸನ್ನ ಕಾಕುಂಜೆಯವರ ಕಾರ್ಯ ಶ್ಲಾಘನೀಯವಾದದ್ದು.

ಇವರು ಆರಂಭಿಸಿರುವ ಸಾಹಿತ್ಯ ಕೃಷಿಯ ಹೊಸಪರ್ವಕ್ಕೆ ಇನ್ನೂ ಇಂಬು ಸಿಕ್ಕಂತಾಗಿ ಹೊಸ ಹೊಸ ಲೇಖನ, ಕಥೆಗಳು ಸಾಹಿತ್ಯಲೋಕಕ್ಕೆ ಸಿಗುವಂತಾದರೆ ಚೆನ್ನ.


  • ಸಾವಿತ್ರಿ ಶ್ಯಾನುಭಾಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading