ನನ್ನ ನೆಚ್ಚಿನ ಲೇಖಕಿ ಶ್ರೀಮತಿ ಎಂ.ಆರ್.ಕಮಲ ಮೇಡಂ ಅವರ ಆಫ್ರಿಕನ್ ಅಮೆರಿಕನ್ ಕಪ್ಪು ಲೇಖಕಿಯರ ಕೃತಿ ಸರಣಿಯ ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ ಇದು ವಿಶ್ವಮಾನ್ಯ ಕವಿ, ಶಿಕ್ಷಣ ತಜ್ಞೆ, ನಾಗರಿಕ ಹಕ್ಕುಗಳ ಚಳವಳಿಯ ಹೋರಾಟಗಾರ್ತಿ ಮಾಯಾ ಏಂಜೆಲೊ ಅವರ ಆತ್ಮಕಥೆಯಾದ I know why the caged Bird sings ಕೃತಿಯ ಅನುವಾದವಾಗಿದೆ. ಈ ಕೃತಿಯ ಕುರಿತು ಭವ್ಯ ಟಿ.ಎಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ
ಮಾಯಾ ಏಂಜೆಲೊ ಅವರ ಆತ್ಮಕಥೆ
ಅನುವಾದ : ಎಂ.ಆರ್.ಕಮಲ
ಪ್ರಕಾಶಕರು : ಅಮೂಲ್ಯ ಪುಸ್ತಕ ಬೆಂಗಳೂರು
ಪುಟಗಳು : 208
ಬೆಲೆ : 250
ಈ ಪುಸ್ತಕದಲ್ಲಿ ಮೂರು ವಿಭಾಗಗಳಿವೆ :
- ಒಂದು – ಆತ್ಮಕಥೆ
- ಎರಡು-ಮಾಯಾ ಕಾವ್ಯಲೋಕ
- ಮೂರು-ಸಂದರ್ಶನ
ಮಾಯಾ ಏಂಜೆಲೊ ಅವರ ಮೊದಲ ಹೆಸರು ಮಾರ್ಗರೇಟ್. ಇವರ ಅಣ್ಣ ಬೈಲಿ ಜಾನ್ ಸನ್. ಇವರಿಬ್ಬರೂ ಪುಟ್ಟ ಮಕ್ಕಳಿದ್ದಾಗ ಅವರ ತಂದೆತಾಯಿಯರ ವಿಚ್ಛೇದನದ ಕಾರಣದಿಂದ ಕ್ಯಾಲಿಫೋರ್ನಿಯಾದಿಂದ ಆರ್ಕಾನ್ಸ್ ನ ಸ್ಟ್ಯಾಂಪ್ಸ್ ನಲ್ಲಿದ್ದ ಅವರ ತಾಯಿಯ ತಾಯಿ ಅಂದರೆ ಅಜ್ಜಿ ಆ್ಯನಿ ಹೆಂಡರ್ ಸನ್ ಅವರ ಮನೆಗೆ ಬಂದು ಅಲ್ಲಿಯೇ ಅವರ ಬಾಲ್ಯದ ಮಹತ್ವದ ದಿನಗಳನ್ನು ಕಳೆಯುತ್ತಾರೆ. ಅಜ್ಜಿ ಹೆಂಡರ್ ಸನ್ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕನ್ನು ನಡೆಸುತ್ತಿರುತ್ತಾರೆ.ಅವರದ್ದೇ ಆದ ಒಂದು ಅಂಗಡಿಯಿರುತ್ತದೆ.

ವರ್ಣಭೇದ ಮತ್ತು ಅಸ್ಪೃಶ್ಯತೆಯ ಕರಾಳ ನೆರಳಿನಲ್ಲಿಯೇ ಇವರ ಬದುಕು ಸಾಗುತ್ತದೆ.ಮಾರ್ಗರೇಟ್ ನ ಮನಸ್ಸಿನ ಮೇಲೆ ಅಜ್ಜಿಯ ಶಿಸ್ತು ಮತ್ತು ಶ್ರಮದ ಜೀವನ ಬಹಳಷ್ಟು ಪ್ರಭಾವ ಬೀರುತ್ತದೆ. ಇವರ ಜೊತೆಗೆ ಚಿಕ್ಕಪ್ಪ ವಿಲ್ಲಿ ಸಹ ಪ್ರಮುಖ ಪಾತ್ರವಹಿಸುತ್ತಾರೆ. ಬಾಲ್ಯದಲ್ಲಿ ಮಾರ್ಗರೇಟ್ ಕಪ್ಪು ಜನಾಂಗದವರಿಗೆಂದೇ ಇದ್ದ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾರೆ.
ಪುಸ್ತಕಗಳನ್ನು ಓದುವ ಹವ್ಯಾಸದಿಂದ ವಯಸ್ಸಿಗೆ ಮೀರಿದ ಪ್ರಬುದ್ಧತೆ ಗಳಿಸುತ್ತಾರೆ. ಬಿಳಿಯರ ವೈಭವಯುತ ಬದುಕು, ಅವರು ನೀಗ್ರೋಗಳನ್ನು ಕೀಳಾಗಿ ನಡೆಸಿಕೊಳ್ಳುವ ರೀತಿಯನ್ನು ಕಂಡು ಮಾರ್ಗರೇಟ್ ಬಾಲ್ಯದಲ್ಲೇ ಕೋಪಗೊಳ್ಳುತ್ತಿದ್ದರು.ತಂದೆಯ ಅನಿರೀಕ್ಷಿತ ಆಗಮನ ಅವರಲ್ಲಿ ಹಲವು ಗೊಂದಲಗಳನ್ನು ಹುಟ್ಟುಹಾಕುತ್ತದೆ. ಅಪ್ಪ ಮಾರ್ಗರೇಟ್ ಮತ್ತು ಬೈಲಿಯನ್ನು ಕ್ಯಾಲಿಫೋರ್ನಿಯಾಕ್ಕೆ ಕರೆತರುತ್ತಾರೆ. ಸೇಂಟ್ ಲೂಯಿಸ್ ನಲ್ಲಿದ್ದ ತಾಯಿಯನ್ನು ಭೇಟಿ ಮಾಡಿಸುತ್ತಾನೆ. ಅಮ್ಮನ ಅದ್ಭುತ ಸೌಂದರ್ಯ ಇಬ್ಬರು ಮಕ್ಕಳಿಗೆ ಅತ್ಯಂತ ಪ್ರಿಯವೆನಿಸುತ್ತಿತ್ತು.
ಇಲ್ಲಿ ಅವರಿಬ್ಬರನ್ನು ಶಾಲೆಗೆ ಸೇರಿಸಲಾಯಿತು. ಸ್ಟ್ಯಾಂಪ್ಸ್ ನ ಶಾಲಾ ಪರಿಸರ,ಶಿಕ್ಷಕರಿಗೂ ಇಲ್ಲಿನ ಶಾಲಾ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು.ಈ ನಡುವೆ ಮಾರ್ಗರೇಟ್ ಗೆ ಎಂಟು ವರ್ಷವಿದ್ದಾಗ ತಾಯಿಯ ಸ್ನೇಹಿತನಾದ ಫ್ರೀಮನ್ ಎಂಬಾತ ಮಾರ್ಗರೇಟ್ ಮೇಲೆ ಅತ್ಯಾಚಾರವೆಸಗುತ್ತಾನೆ.
ಆತನಿಗೆ ಶಿಕ್ಷೆಯಾದರೂ,ಜಾಮೀನಿನ ಮೇಲೆ ಬಿಡುಗಡೆ ಪಡೆದಿರುತ್ತಾನೆ.ಆದರೆ ನಿಗೂಢವಾಗಿ ಕೊಲೆಯಾಗುತ್ತಾನೆ.ಈ ಘಟನೆಗಳಿಂದಾಗಿ ಅಪ್ರಾಪ್ತೆ ಮಾರ್ಗರೇಟ್ ಕಲ್ಲಿನಂತಾಗುತ್ತಾಳೆ. ಮಾತನಾಡುವುದನ್ನೇ ನಿಲ್ಲಿಸಿ ಮೌನಿಯಾಗುತ್ತಾಳೆ.ಪ್ರಕೃತಿಯೊಂದಿಗೆ ಮಾತ್ರ ಬೆರೆಯುತ್ತಾ,ಮನುಷ್ಯಲೋಕದಿಂದ ದೂರವಿರಲು ಪ್ರಯತ್ನಿಸುತ್ತಾಳೆ.ನಂತರ ಮಾರ್ಗರೇಟ್ ಮತ್ತು ಬೈಲಿಯನ್ನು ಮರಳಿ ಸ್ಟ್ಯಾಂಪ್ಸ್ ನ ಅಜ್ಜಿ ಮನೆಗೆ ಮರಳಿ ಕಳಿಸಲಾಗುತ್ತದೆ.
ಮೌನವಾಗಿ ಕತ್ತಲಿಗೆ ಜಾರಿದ್ದ ಮಾರ್ಗರೇಟ್ ನ ಬದುಕಿಗೆ ಮರಳಿ ಬೆಳಕು ನೀಡಿದವಳು ಶ್ರೀಮಂತ ಮತ್ತು ಸುಸಂಸ್ಕೃತ ಹೆಣ್ಣು ಮಗಳಾದ ಬರ್ತಾ ಪ್ಲವರ್ಸ್.ಕಪ್ಪು ಜನಾಂಗದ ಆಕೆಯ ವಿದ್ವತ್ತು, ಘನತೆಯುಕ್ತ ನಡವಳಿಕೆ,ಆಕರ್ಷಕ ಮಾತಿನ ಶೈಲಿ ಮಾರ್ಗರೇಟ್ ನ ಮೇಲೆ ಗಾಢ ಪರಿಣಾಮ ಬೀರಿದವು.
ಪ್ರಾಣಿಗಳಿಗಿಂತ ಮನುಷ್ಯ ಭಿನ್ನವಾಗಿರೋದೆ ತನ್ನ ವಾಕ್ ಶಕ್ತಿ ಯಿಂದ.ಮನುಷ್ಯನ ಧ್ವನಿ ಪದಗಳಿಗೆ ವಿಶೇಷವಾದ ಅರ್ಥ ನೀಡುತ್ತದೆ ಎಂಬ ಪ್ಲವರ್ಸ್ ಳ ಪ್ರೋತ್ಸಾಹದಾಯಕ ಮಾತುಗಳು ಮೌನಿಯಾಗಿದ್ದ ಮಾರ್ಗರೇಟ್ ಳಲ್ಲಿ ಹೊಸ ಉತ್ಸಾಹವನ್ನು ತುಂಬಿದವು.
ಮಿಸೆಸ್ ವಯೋಲಾ ಕ್ಯುಲಿಮನ್ ಎಂಬ ಬಿಳಿಯ ಹೆಂಗಸಿನ ಮನೆಯಲ್ಲಿ ತಾನು ಕೆಲಸ ಮಾಡುವಾಗ ಅಲ್ಲಿನ ಕೆಲಸದಾಕೆ ಮಿಸ್ ಗ್ಲೋರಿ ಪಡುತ್ತಿದ್ದ ಕಷ್ಟಗಳನ್ನು ಮಾರ್ಗರೇಟ್ ಹತ್ತಿರದಿಂದ ನೋಡುತ್ತಾಳೆ.ಒಡತಿಯ ದಬ್ಬಾಳಿಕೆಯ ವರ್ತನೆಗಳನ್ನು ಮನದಲ್ಲೇ ದ್ವೇಷಿಸುತ್ತಾಳೆ.ಆಕೆಯ ಮನೆಯಿಂದ ಮುಕ್ತಿ ಪಡೆಯಲು ಒಡತಿಗೆ ಬಹುಪ್ರಿಯವಾಗಿದ್ದ ಪಾತ್ರೆಗಳನ್ನು ಒಡೆದುಹಾಕುತ್ತಾಳೆ.ಹೀಗೆ ತನ್ನೊಳಗಿನ ಸ್ವಾಭಿಮಾನವನ್ನು ಪ್ರಖರಗೊಳಿಸುತ್ತಾ ಸಾಗುತ್ತಾಳೆ. ಶಿಕ್ಷಣದ ಮಹತ್ವದ ಬಗ್ಗೆ ಮಾರ್ಗರೇಟ್ ಳಿಗೆ ಸ್ಪಷ್ಟತೆ ಇತ್ತು.೧೯೪೦ ರಲ್ಲಿ
ಆಕೆ ಗ್ರ್ಯಾಜುಯೇಟ್ ಆದಾಗ ಪ್ರಪಂಚದಲ್ಲಿಯೇ ತಾನು ಅತ್ಯಂತ ಸುಂದರ, ಅದ್ಭುತ ನಿಗ್ರೊ ಜನಾಂಗದ ಸದಸ್ಯೆಯೆಂದು ಹೆಮ್ಮೆ ಪಡುತ್ತಾಳೆ.
ಮಾರ್ಗರೇಟ್ ಒಮ್ಮೆ ವಿಪರೀತ ಹಲ್ಲುನೋವಿನಿಂದ ಬಳಲುತ್ತಿರುವಾಗ ಅಜ್ಜಿ ಹೆಂಡರ್ಸನ್ ಬಿಳಿಯ ವೈದ್ಯನೊಬ್ಬನ ಬಳಿ ಚಿಕಿತ್ಸೆ ಕೊಡಿಸಲು ಕರೆದೊಯ್ಯುತ್ತಾಳೆ.ಆದರೆ ಆತ ನೀಗ್ರೊಗಳಿಗೆ ತಾನು ಚಿಕಿತ್ಸೆ ನೀಡುವುದಿಲ್ಲವೆಂದು ನಿರಾಕರಿಸುತ್ತಾನೆ.ಈ ಘಟನೆ ಮಾರ್ಗರೇಟ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಮುಂದೆ ತನ್ನ ಹದಿಮೂರನೇ ವಯಸ್ಸಿನಲ್ಲಿ ಮಾರ್ಗರೇಟ್ ತನ್ನ ಅಜ್ಜಿ ಮತ್ತು ಅಣ್ಣ ಬೈಲಿಯೊಂದಿಗೆ ಮರಳಿ ಕ್ಯಾಲಿಫೋರ್ನಿಯಾಕ್ಕೆ ಬಂದು ತಾಯಿಯೊಂದಿಗೆ ನೆಲೆಸಬೇಕಾಗುತ್ತದೆ. ತಾಯಿಯ ಧೈರ್ಯ, ಸ್ಥೈರ್ಯ, ಸ್ವಾವಲಂಬಿ ಬದುಕು, ಅವಳಲ್ಲಿ ಸದಾ ಚಿಮ್ಮುವ ಜೀವನೋತ್ಸಾಹಗಳು ಮಾರ್ಗರೇಟ್ ಒಳಗೂ ನವಚೈತನ್ಯವನ್ನು ಬಿತ್ತುತ್ತವೆ. ಮಾರ್ಗರೇಟ್ ಜಾರ್ಜ್ ವಾಶಿಂಗ್ಟನ್ ನ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸುವಾಗ ಅಲ್ಲಿ ಹದಿಹರೆಯದ ಮಕ್ಕಳನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ಮಾತನಾಡಿಸುವ ಮಿಸ್ ಕಿರ್ವಿನ್ ಎಂಬ ಶಿಕ್ಷಕಿಯಿಂದ ಪ್ರಭಾವಿತರಾಗುತ್ತಾರೆ.ಸದಾ ಯಾವುದಾದರೂ ಒಂದು ಹೊಸ ವಿಷಯವನ್ನು ಕುರಿತು ಹೇಳುತ್ತಾ ವಿದ್ಯಾರ್ಥಿಗಳಲ್ಲಿ ಓದುವ,ತಿಳಿಯುವ ಹಂಬಲ ಮೂಡಿಸುತ್ತಿದ್ದ ನಿಷ್ಪಕ್ಷಪಾತ ಮನೋಭಾವ ಹೊಂದಿದ್ದ ಇವರು ಮಾರ್ಗರೇಟ್ ಗೆ ಅತ್ಯಂತ ಪ್ರಿಯ ಶಿಕ್ಷಕಿಯಾಗಿದ್ದರು.ನಂತರ ಮಾರ್ಗರೇಟ್ ಕ್ಯಾಲಿಫೋರ್ನಿಯಾದ ಲೇಬರ್ ಶಾಲೆಯಲ್ಲಿ ಓದುವಾಗ ಸಾಯಂಕಾಲದ ತರಗತಿಗಳಲ್ಲಿ ನೃತ್ಯ, ನಾಟಕಗಳನ್ನು ಕಲಿಯುವ ಅವಕಾಶ ಪಡೆಯುತ್ತಾರೆ.
ಹೀಗೆ ಅಜ್ಜಿಯ ಗುರಿ ಸಾಧನೆಯ ಬಗ್ಗೆಗಿನ ಹಂಬಲ ಮತ್ತು ಪ್ರಯತ್ನ, ಮಿಸೆಸ್ ಪ್ಲವರ್ಸ್ ಮತ್ತು ಆಕೆ ತೆರೆದ ಪುಸ್ತಕ ಲೋಕ,ಅಣ್ಣ ಬೈಲಿಯ ಅಂತಃಕರಣ, ಅಮ್ಮನ ಉಲ್ಲಾಸ, ಉತ್ಸಾಹ, ಶಿಕ್ಷಕಿ ಕಿರ್ವಿನ್ ಅವರ ಅಗಾಧ ವಿಷಯ ಸಂಗ್ರಹಣೆ, ನಾಟಕ, ನೃತ್ಯಗಳ ಆಸಕ್ತಿ ಇವೆಲ್ಲವೂ ಸದೃಢ ವ್ಯಕ್ತಿಯಾಗಿ ತನ್ನನ್ನು ರೂಪಿಸಿಕೊಳ್ಳಲು ಮಾರ್ಗರೇಟ್ ಗೆ ಪ್ರೇರಕವಾದವು.
ಮಾರ್ಗರೇಟ್ ಮುಂದೆ ತನ್ನ ತಂದೆಯೊಂದಿಗೆ ವಾಸಿಸಲು ಹೋದಾಗ ಅನೇಕ ಸಂಘರ್ಷಗಳಿಗೆ ಮುಖಾಮುಖಿಯಾಗುತ್ತಾಳೆ.ಅವಳ ವ್ಯಕ್ತಿತ್ವ ಇನ್ನಷ್ಟು ಗಟ್ಟಿಯಾಗುವ ತಿರುವುಗಳು ಎದುರಾಗುತ್ತವೆ.ಮಾರ್ಗರೇಟ್ ಮಾಯಾ ಎಂಬ ಹೆಸರಿನಿಂದ ಬದಲಾಗುತ್ತಾಳೆ.

ಸ್ವಾವಲಂಬಿ ಬದುಕನ್ನು ಆರಂಭಿಸುತ್ತಾಳೆ.ಈ ನಡುವೆ ತನ್ನ ಹೆಣ್ತನವನ್ನು ಪರೀಕ್ಷೆ ಮಾಡುವ ಸಾಹಸಕ್ಕಿಳಿದು ತಾಯಿಯಾಗುತ್ತಾಳೆ.ಮುಂದೆ ಮಾಯಾ ಅವರದ್ದು ಬಹು ಜನಪ್ರಿಯ ಬಹುಮುಖಿ ವ್ಯಕ್ತಿತ್ವವಾಗಿ ಬದಲಾಗುತ್ತದೆ. ನಟಿಯಾಗಿ, ನಿರ್ದೇಶಕಿಯಾಗಿ, ಕವಿಯಾಗಿ, ಶಿಕ್ಷಕಿಯಾಗಿ ಅನೇಕರ ಮೇಲೆ ತನ್ನ ಪ್ರಭಾವ ಬೀರುತ್ತಾರೆ.
ಈ ಕೃತಿಯ ಎರಡನೇ ಭಾಗ ಮಾಯಾ ಕಾವ್ಯಲೋಕ ಇಲ್ಲಿ ಮಾಯಾ ಅವರ ಅದ್ಭುತ ಕವಿತೆಗಳ ಕನ್ನಡ ಅನುವಾದವಿದೆ. ನಾಚಿಕೆಗೆಟ್ಟ ಇತಿಹಾಸದ ಭಗ್ನ ಜೋಪಡಿಯೊಳಗಿಂದ
ನಾನು ಮೇಲೇಳುತ್ತೇನೆ. ನೋವಲ್ಲಿ ಹೂತ ಭೂತದೊಳಗಿಂದ ನಾನು ಮೇಲೇಳುತ್ತೇನೆ. ನಾನು ನನ್ನ ಗುಲಾಮ ಜನಗಳ ಭರವಸೆ, ಕನಸುಗಳ ಕಿರಣ ಈ ಮೇಲಿನ ಕವಿತೆಯ ಸಾಲುಗಳು ಮಾಯಾಳ ಇಡೀ ಬದುಕಿನ ಪ್ರತಿಬಿಂಬವೇ ಆಗಿವೆ.
ಸಹಜ, ಸರಳ ಪದಗಳೊಳಗಿಂದ ಪ್ರಬಲ ಸಂದೇಶಗಳನ್ನು ಹೊಮ್ಮಿಸುವ ಶಕ್ತಿ ಇವರ ಕವಿತೆಗಳಿಗಿದೆ. ಪಂಜರದ ಹಕ್ಕಿ ಕನಸುಗಳ ಗೋರಿಯಲಿ ನಿಲ್ಲುತ್ತೆ, ಸಿಂಹ ಸ್ವಪ್ನಗಳ ಕಂಡು ಅದರ ನೆರಳೂ ಬೆಚ್ಚುತ್ತೆ, ರೆಕ್ಕೆಗಳು ಹೊಲಿದಿವೆ, ಕಾಲುಗಳು ಕಟ್ಟಿವೆ.
ಹೀಗಾಗಿ ಹಾಡಲು ಬಾಯಿ ತೆರೆಯುತ್ತೆ.
ಪಂಜರದ ಹಕ್ಕಿ ಕಂಪಿಸುವ ದನಿಯಲ್ಲಿ
ಕಾಣದೂರನ್ನು ಕುರಿತು
ಕಾಣುವಾಸೆಯಲ್ಲಿ ಹಾಡುತ್ತೆ
ದೂರದ ಬೆಟ್ಟಗಳಲ್ಲಿ
ಹಕ್ಕಿಯ ರಾಗ ಮಾರ್ದನಿಸುತ್ತೆ
ಯಾಕೆಂದರೆ ಪಂಜರದ ಹಕ್ಕಿ
ಸ್ವಾತಂತ್ರ್ಯ ಗೀತೆಯ ಹಾಡುತ್ತೆ
ಎಂಬ ಪಂಜರದ ಪಕ್ಷಿ ಕವಿತೆಯ ಸಾಲುಗಳು ಇಡೀ ಕಪ್ಪು ಜನಾಂಗದ ಸ್ವಗತಗೀತೆಯಾಗಿ ಕೇಳುತ್ತದೆ. ಆತ್ಮಕಥೆಯ ಮೂರನೇ ಭಾಗ ಮಾಯಾ ಅವರ ಸಂದರ್ಶನವನ್ನೊಳಗೊಂಡ ಮಾಯಾ ಮಾತಿನ ಮೋಡಿ ಇಲ್ಲಿ ಮಹಿಳಾ ಸಮುದಾಯದ ನೋವುಗಳಿಗೆ,ಶೋಷಿತ ಜನಾಂಗದ ನೋವುಗಳಿಗೆ ಉಪಶಮನ ನೀಡುವ ಅವರನ್ನು ಮೇಲಕ್ಕೆತ್ತುವ ಅನೇಕ ಸ್ಫೂರ್ತಿದಾಯಕ ಮಾತುಗಳಿವೆ.
ಸೋಲು ನಿಮ್ಮನ್ನು ಸೋಲಿಸುವುದಕ್ಕೆ ಬಿಡಬೇಡಿ.ಅಕಸ್ಮಾತ್ ಬಿದ್ದರೂ ನಿಮ್ಮನ್ನು ನೀವೇ ಕ್ಷಮಿಸಿಕೊಂಡು ಮೇಲೇಳಿ. ನಮ್ಮೆಲ್ಲರಲ್ಲೂ ಅಮೂಲ್ಯವಾದದ್ದೇನೋ ಇದೆ.ಅದನ್ನು ಸಂರಕ್ಷಿಸಿಕೊಳ್ಳಬೇಕು.ಯಾರಿಗೂ ಇನ್ನೊಬ್ಬರ ಶಾಂತಿಯನ್ನು ಕದಡುವ ಹಕ್ಕಿಲ್ಲ,ಯಾರ ಮೇಲೂ ಯುದ್ಧಕ್ಕೆ ನಿಲ್ಲುವ ಹಕ್ಕಿಲ್ಲ.
“ನಾನು ಎಲ್ಲರಂತೆ ಒಬ್ಬ ಮನುಷ್ಯ, ನನಗಿಂತ ಮೇಲಾಗಲಿ,ಕೀಳಾಗಲಿ ಇರಲು ಸಾಧ್ಯವಿಲ್ಲ” ಎನ್ನುವುದು ಅರ್ಥ ಮಾಡಿಕೊಂಡರೆ ಸಾಕು. ಇಂದಿನ ಜಗತ್ತಿಗೆ ಅತ್ಯಂತ ಅಗತ್ಯವಾದ ಸಂದೇಶ ಮಾಯಾ ಅವರ ಈ ಮೇಲಿನ ಮಾತುಗಳಲ್ಲಿವೆ ಎನ್ನಬಹುದು.
ಮಾಯಾ ಏಂಜೆಲೋ ಅವರ ಈ ಆತ್ಮಕಥೆಯಲ್ಲಿ ನೀಗ್ರೋ ಹೆಣ್ಣುಮಕ್ಕಳ ನೋವುಗಳು,ಕಪ್ಪು ಜನಾಂಗದ ನಿರಂತರ ಸಂಘರ್ಷಗಳು, ಆ ಗಾಯಗಳ ಆಳದಿಂದ ಮೇಲೆದ್ದು ಬಂದ ಒಬ್ಬ ಯಶಸ್ವಿ ಮಹಿಳೆಯ ಯಶೋಗಾಥೆ.ಕವಿತೆಗಳೊಳಗಿಂದ ಹೊಮ್ಮಿ ಬರುವ ಜೀವನ ಪ್ರೀತಿಯ ಸ್ಪರ್ಶವಿದೆ.ಆಕೆಯ ಆತ್ಮವಿಶ್ವಾಸವನ್ನು ಜಗತ್ತಿಗೆ ಹಂಚುವ ಮಾತುಗಳು ಮತ್ತೆ ಮತ್ತೆ ಮಾರ್ದನಿಸಲಿ ಎಂಬ ಆಶಯವಿದೆ.ಇದು ನಾನು ಓದಿದ ಕಮಲ ಮೇಡಂ ಅವರ ಮೂರನೇ ಅನುವಾದಿತ ಆತ್ಮಕಥೆಯಾಗಿದೆ. ಪ್ರತಿಯೊಂದು ಕೃತಿ ಓದಿದ ನಂತರ ಆತ್ಮಸ್ಥೈರ್ಯ,ಕಠಿಣತೆಗಳನ್ನು ಎದುರಿಸಿ ಮುನ್ನುಗ್ಗಲು ಮನದೊಳಗೊಂದು ಶಕ್ತಿ ನಿರ್ಮಾಣಗೊಂಡಿದೆ.ಈ ದಸರಾ ರಜೆಯ ಸಾರ್ಥಕ ಓದು ಇದಾಗಿದ್ದು,ಇಲ್ಲಿನ ಕವಿತೆಗಳನ್ನು ಆಗಾಗ ಮನಸ್ಸಿನಲ್ಲಿ ಹಾಡಿಕೊಳ್ಳುತ್ತೇನೆ.ಇಂತಹ ಅಮೂಲ್ಯ ಕೃತಿಯನ್ನು ಕನ್ನಡಕ್ಕೆ ನೀಡಿದ ಕಮಲ ಮೇಡಂ ಅವರಿಗೆ ಅಭಿನಂದನೆಗಳು.
- ಭವ್ಯ ಟಿ.ಎಸ್ – ಶಿಕ್ಷಕರು, ಹೊಸನಗರ.
