ಅಮ್ಮಿಯ ಮೇಲೆ ಜೀವವೇ ಇಟ್ಟುಕೊಂಡಿದ್ದ ರಾಜಿಯಕ್ಕ ಹುಚ್ಚಿಯಾದಳು. ಅಂತದ್ದು ಅಮ್ಮಿ ಮಾಡಿದ್ದಾದರೂ ಏನು?, ರಾಜೇಶ್ವರಿ ಹೇಳಿದ ಮಾತು ಅಮ್ಮಿಗೆ ಕಂಟಕವಾಯಿತೇ?… ಕತೆಗಾರ್ತಿ ವಿಜಯಶ್ರೀ ಹಾಲಾಡಿ ಅವರ ಈ ಸಣ್ಣಕತೆಯನ್ನು ಪೂರ್ತಿಯಾಗಿ ಓದಿ…
ಮನೆಕೆಲಸವೆಲ್ಲ ಮುಗಿಸಿ ಮಧ್ಯಾಹ್ನದ ಊಟ ಮಾಡಿ ಸಣ್ಣದೊಂದು ನಿದ್ದೆ ತೆಗೆಯುವುದು ಪಲ್ಲವಿಯ ಅಭ್ಯಾಸ. ಸಂಜೆ ಮಕ್ಕಳು ಶಾಲೆಯಿಂದ ಬರುವುದರೊಳಗೆ ಎಂತಾದರೂ ತಿಂಡಿ ಮಾಡಿಡಬೇಕಲ್ಲ. ಆದರೆ ಆವತ್ತು ಊಟ, ನಿದ್ದೆ ದೂರವೇ ಉಳಿಯಿತು. ತರಕಾರಿ ತರಲೆಂದು ಪೇಟೆಗೆ ಹೋಗಿದ್ದಾಗ ಅಚಾನಕ್ ರಾಜಿಯಕ್ಕ ತೀವ್ರವಾಗಿ ನೆನಪಾಗಿದ್ದರು. ಬಾಲ್ಯದಲ್ಲಿ ತನ್ನನ್ನು ಮುದ್ದು ಮಾಡುತ್ತಿದ್ದ ರಾಜಿಯಕ್ಕ, ಕಡೆಗೆ ಹುಚ್ಚಿಯಾಗಿ ಲೋಕವನ್ನೇ ಮರೆತು ಬಿಟ್ಟ ರಾಜಿಯಕ್ಕ. ಅಮೃತಾಳ ರೂಪವೂ ಕಣ್ಣೆದುರು ಬಂದಿತ್ತು. ಮಂಗಳೂರಿನ ಉರಿ ಬಿಸಿಲಿಗೆ ಹೆದರಿ ಗಡಿಬಿಡಿಯಲ್ಲಿ ಮನೆಗೆ ಮರಳುತ್ತಿದ್ದಾಗ ಕೊಳಕು ಮೈಮಂಡೆ, ಅಸ್ತವ್ಯಸ್ತ ವಸ್ತ್ರದ ಅರವತ್ತರ ಆಸುಪಾಸಿನ ಹೆಂಗಸೊಬ್ಬಳು ಎದುರಾಗಿದ್ದಳು. ಕಾಣದ ಯಾರಿಗೋ ಶಾಪ ಹಾಕುತ್ತ, ಬಸ್ಸು, ರಿಕ್ಷಾಗಳಿಗೆ ಕೈ ಅಡ್ಡಹಿಡಿಯುತ್ತ ನಡುರಸ್ತೆಯಲ್ಲಿ ನಿಂತಿದ್ದಳು.
ಅಮ್ಮಿ ಈಗಿದ್ದಿದ್ದರೆ ತನ್ನಂತೆಯೇ ಮದುವೆಯಾಗಿ ಮಕ್ಕಳನ್ನು ಬೆಳೆಸುತ್ತ ಆರಾಮದಿಂದ ಸಂಸಾರ ಮಾಡಿಕೊಂಡಿರುತ್ತಿದ್ದಳು ಅಥವಾ ಕಲಿಯುವುದರಲ್ಲಿ ಚುರುಕಿದ್ದವಳು ಕೆಲಸಕ್ಕೆ ಸೇರಿ ರಾಜಿಯಕ್ಕನನ್ನೂ ನೋಡಿಕೊಂಡಿರುತ್ತಿದ್ದಳು. ಎಣಿಸುತ್ತ ಪಲ್ಲವಿಯ ಹೃದಯ ತಲ್ಲಣಿಸಿತು. ಆಗೆಲ್ಲ ಎಷ್ಟು ಚಂದವಿತ್ತು! ಹುಲಿ ಎರಗಬಹುದೆಂಬ ಭಯವಿಲ್ಲದೆ ಹಸಿರು ಮೇಯುತ್ತ ನೆಗೆದುಕೊಂಡಿರುವ ಜಿಂಕೆಯ ಮರಿಗಳಂತೆ ನಿರಾಳವಾಗಿದ್ದೆವು.
ಕುಂದಾಪ್ರದ ಕುಗ್ರಾಮವೊಂದರಿಂದ ಅಮೃತಾ, ಪಲ್ಲವಿ, ಚೈತ್ರ, ಭಾಗ್ಯ ಎಂಬ ಹೆಸರಿನ ತಾವೆಲ್ಲ ದೂರದ ಹೈಸ್ಕೂಲುಗಳಿಗೆ ನಿತ್ಯವೂ ಹೋಗಿಬರುತ್ತಿದ್ದೆವು. ಬೆಳಿಗ್ಗೆ -ಸಂಜೆ ಮೂರು ಮೈಲಿ ಕಾಡಿನ ದಾರಿಯಲ್ಲಿ ನಡೆಯಬೇಕು; ಬಸ್ಸಿನಲ್ಲೂ ಸುಮಾರು ಪ್ರಯಾಣಿಸಬೇಕು ಎಂಬೆಲ್ಲ ಅಡೆತಡೆಗಳಿದ್ದರೂ ಶಾಲೆ ಕಲಿಯಬೇಕೆಂಬ ಕೆಚ್ಚು ತಮ್ಮಲ್ಲೂ ಇತ್ತು; ಮಕ್ಕಳನ್ನು ಓದಿಸಲೇಬೇಕೆಂಬ ಹಠ ಮನೆಯವರಲ್ಲೂ ಇತ್ತು. ಆದರೆ ಎಲ್ಲರೂ ಕಷ್ಟದಲ್ಲೇ ಬದುಕುತ್ತ ಮಕ್ಕಳನ್ನು ಸಾಕುತ್ತಿದ್ದವರಾದರೂ ರಾಜಿಯಕ್ಕನ ಪರಿಸ್ಥಿತಿ ಮತ್ತಷ್ಟು ಅಧ್ವಾನವಾಗಿತ್ತು.
ವಿಧವೆಯಲ್ಲದ ರಾಜಿಯಕ್ಕನಿಗೆ ಗಂಡನಿರಲಿಲ್ಲ. ಅಮೃತಾ ಎಂಬ ಚಂದದ ಹೆಸರನ್ನು ಮಗಳಿಗಿಟ್ಟು ಸಮಾಧಾನದಿಂದಲೇ ಕಂಡುಕೊಳ್ಳುತ್ತಿದ್ದ ಅವರ ಗಂಡ ನಾರಾಯಣ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರಂತೆ. ಆಗ ಅಮ್ಮಿ ನಾಲ್ಕು ತಿಂಗಳ ಮಗು. ಹಿಮಾಲಯದ ಸನ್ಯಾಸಿಗಳ ಹುಚ್ಚು ಹಿಡಿಸಿಕೊಂಡಿದ್ದ ನಾರಾಯಣ ಅಲ್ಲಿಗೇ ಹೋಗಿರಬೇಕೆಂದು ಊರವರು ತೀರ್ಮಾನಿಸಿದ್ದರು. ತವರಿನವರ ಬೆಂಬಲವಿಲ್ಲದೆ ಎಳೆಮಗುವನ್ನು ಕಟ್ಟಿಕೊಂಡು ಅವರಿವರ ತೋಟದ ಕೆಲಸಕ್ಕೆ ಹೋಗಿ ರಾಜಿಯಕ್ಕ ದಿನತೆಗೆದಿದ್ದರು.
ಹುಟ್ಟಿನಿಂದಲೂ ಹಾಡಿ, ಗುಡ್ಡೆ, ಹಕ್ಕಲೆಂದು ತಿರುಗಿಕೊಂಡಿದ್ದ ಮಕ್ಕಳಿಗೆ ಶಾಲೆಗೆ ಹೋಗಿ ಬರುವ ಕಾಡಿನ ದಾರಿ, ಅಲ್ಲಿದ್ದ ತೊಡ್ಮೆ- ತೋಡುಗಳು, ಮಳೆಗಾಲದಲ್ಲಿ ಗಲಗಲನೆ ಅಲುಗುತ್ತಿದ್ದ ಸಂಕಗಳು ಎಲ್ಲವೂ ಸಹಜವಾಗಿತ್ತು. ಆದರೂ ಹೆದ್ರ್ ಪುಕ್ಲಿಯಾಗಿದ್ದ ಪಲ್ಲವಿಗೆ ಸಂಕ ಕನಸಿನಲ್ಲೂ ಸತಾಯಿಸುತ್ತಿತ್ತು! ಅಮ್ಮಿ ಓದಿನಲ್ಲಂತಲ್ಲದೆ ಕಾಡುದಾರಿಯಲ್ಲಿ ತಿರುಗಾಡುವುದರಲ್ಲೂ ಜಾಣೆ! ಆದರೆ ಮಾತು ತೀರಾ ಕಮ್ಮಿ, ತಾನಾಯಿತು ತನ್ನ ಕೆಲಸವಾಯಿತು ಎಂಬಂಥಾ ಗುಣ.
ಮಕ್ಕಳೆಲ್ಲರೂ ಒಟ್ಟಿಗೆ ಶಾಲೆಗೆ ಹೋಗಿಬರುತ್ತಿದ್ದದ್ದು ಹೌದಾದರೂ ಒಮ್ಮೊಮ್ಮೆ ಆಚೀಚೆಯಾಗುತ್ತಿತ್ತು. ಪಲ್ಲವಿ, ಭಾಗ್ಯ, ಅಮ್ಮಿ ಮೂವರೂ ಒಂಬತ್ತನೇ ಕ್ಲಾಸಿನಲ್ಲಿದ್ದರು. ಮಳೆಗಾಲದ ಆರಂಭದ ಸಮಯ. ಭೋರ್ಗುಡುವ ಮಳೆ, ಬಲವಾದ ಗಾಳಿ, ಕಿವಿ ಹೊಟ್ಟಿಹಾರುವಂಥಾ ಗುಡುಗುಗಳ ನಡುವೆಯೇ ಕೊಡೆಯನ್ನು ಹಿಡಿದು ಬಸ್ಸಿಗೆ ಓಡುವ ತರಾತುರಿ. ಅಂಥಾ ಸಮಯದಲ್ಲಿ ಜ್ವರವೆಂದು ಪಲ್ಲವಿ ರಜೆ ಹಾಕಿದ್ದಳು. ಹಾಗೆ ಮುಚ್ಹಾಕಿಕೊಂಡು ಮಲಗಿದ್ದ ಹೊತ್ತಲ್ಲಿ ಇಡೀ ಮನೆಗೇ ಸಿಡಿಲು ಬಡಿದಂತಾಗಿತ್ತು! “ಅಮ್ಮಿಹೆಣ್ಣ್ ಮನೆಬೆನ್ನರಿನ್ ಕ್ಯರಿಗ್ ಹಾರಿ ಜೀವ ತೆಕ್ಕಂಡಿತ್ ಮರೆತಿ. ಬೆಳ್ಗಾ ಮುಂಚೆ ಎದ್ದ್ ಹೆಣ್ಣ್ ಹಸ್ಯಂಗಿಲ್ಲೆ ಅಂದ್ ಹುಡುಕ್ವತಿಗೆ ಗುತ್ತಾಯ್ತ್ ಅಂಬ್ರ್. ನೀರ್ ಕುಡ್ದ್ ಮ್ಯಾಲ್ ಬಂದಿತ್ ಹೆಣ. ಈಗ ಬೆಟ್ಟಿಗ್ ಹಾಕ್ರ್” ಅಪ್ಪಯ್ಯ ಅಮ್ಮನಲ್ಲಿ ಹೇಳುತ್ತಿದ್ದರು. ಕೇಳಿಸಿಕೊಂಡು ಆಘಾತದಲ್ಲಿ ತತ್ತರಿಸಿದ ಪಲ್ಲವಿ ಮತ್ತೊಂದು ತಿಂಗಳು ಶಾಲೆಯ ಕಡೆಗೆ ಹೋಗಿರಲಿಲ್ಲ.
*
“ಅಂತಾ ಚಂದು ಗ್ವಾಂಪಿ ಹೆಣ್ಣಿಗ್ ಎಂತಾಯ್ತ್ ಹಂಗಾರೆ? ಜೊತಿಗ್ ಹೋಯಿಬಪ್ಪ್ ಮಕ್ಳನ್ನ್ ಕೇಂಡ್ರೆ ಗುತಾಪ್ಕೂ ಸಾಕ್” ಆಚೀಚಿನವರು ಭಾಗ್ಯನನ್ನು ಕೆದಕಿ ಕೇಳಿದಾಗ ಕಾರಣ ಹೊರಬಂದಿತ್ತು!
ಹಿಂದಿನ ವರ್ಷ ಹತ್ತನೇ ಕ್ಲಾಸಲ್ಲಿ ಫೇಲಾಗಿ ಶಾಲೆಬಿಟ್ಟು ಕೂತಿದ್ದ ಯತೀಂದ್ರ ಹಾಡಿಯ ದಾರಿಯಲ್ಲಿ ಅಮ್ಮಿಯ ಕೈಹಿಡಿದೆಳೆದಿದ್ದ. ಫಕ್ಕನೆ ಏನು ಮಾಡುವುದೆಂದು ಗೊತ್ತಾಗದೆ ಕಂಗಾಲಾಗಿ ನಿಂತಿದ್ದ ಅಮ್ಮಿಯನ್ನು ಅಪ್ಪಿಕೊಂಡು ತುಟಿಗೆ ಮುತ್ತುಕೊಟ್ಟಿದ್ದ! ಅಮ್ಮಿ ಹೆದರಿಕೆಯಲ್ಲಿ ಗಟ್ಟಿಯಾಗಿ ಕೂಗಿ ಅಲ್ಲಿಂದ ಓಡಿ ಬಸ್ಸು ಹತ್ತಿ ಶಾಲೆಗೆ ತಲುಪಿದ್ದಳು. ತನ್ನ ಬೆಂಚಿನಲ್ಲೇ ಕೂತುಕೊಳ್ಳುವ ರಾಜೇಶ್ವರಿಯಲ್ಲಿ ಅಳುತ್ತ ವಿಷಯ ಹೇಳಿದಾಗ ಹೆದರಿಸಿದ್ದಳಂತೆ. “ಅಯ್ಯಬ್ಬೇ, ಹೀಂಗೆಲ್ಲ ಆಯ್ತಾ? ಎಂತಾ, ಮುತ್ತ್ ಕೊಟ್ನಾ? ಇನ್ನ್ ಮಗುವಾತ್ತ್ ಕಾಣ್ ನಿಂಗೆ. ಕಡಿಕೆಂತ ಮಾಡ್ತೆ? ಮದಿಯಾಯ್ದೆ ಮಗುವಾರೆ ಕ್ಯರಿ ಬಾಮಿಯೇ ಗತಿ ಗೊತಿತಾ?” ತಮ್ಮ ನೆರೆಮನೆಯ ಕುಸುಮಾ ಮದುವೆಯಾಗದೆ ಬಸ್ರಿಯಾಗಿ ಊರವರು ಬಹಿಷ್ಕಾರ ಹಾಕಿ, ಅವಳು ಬಾಮಿಗೆ ಬಿದ್ದು ಸತ್ತದ್ದನ್ನು ತಿಳಿಸಿದ್ದಳಂತೆ. ಸಂಜೆ ಮನೆಗೆ ಬರುವಾಗ ಅಮ್ಮಿ ಹೇಳಿದ್ದನ್ನು ಕೇಳಿಸಿಕೊಂಡ ಭಾಗ್ಯ ಸ್ವತ: ತಾನೇ ಭಯಪಟ್ಟಿದ್ದರೂ “ಹೆದ್ರಕಬೇಡ ಅಕಾ, ಮನಿಗ್ ಹೋಯಿ ಅಮ್ಮನತ್ರ ಹೇಳ್” ಸಮಾಧಾನಿಸಿದ್ದಳಂತೆ.
*
ಮಗಳಲ್ಲಿ ಜೀವವನ್ನೇ ಇಟ್ಟುಕೊಂಡಿದ್ದ ರಾಜಿಯಕ್ಕ ಕೂತರೆ ಕೂತಲ್ಲೇ, ನಿಂತರೆ ನಿಂತಲ್ಲೇ ಆಗಿದ್ದರು. ಯಾರು ಮಾತಾಡಿಸಿದರೂ ಜುಳುಜುಳು ದೃಷ್ಟಿಸಿ ನೋಡುತ್ತಿದ್ದರು! ತಮ್ಮೊಳಗೇ ಮಣಮಣ ಮಾಡುತ್ತ, ನಗುತ್ತ- ಅಳುತ್ತ ಮುಲ್ಲೆ ಹಿಡಿದವರು ಮತ್ತೆಂದೂ ಮೊದಲಿನಂತಾಗಲಿಲ್ಲ.
ಪಲ್ಲವಿ ನಿಟ್ಟುಸಿರಿಟ್ಟಳು. ಅಮ್ಮಿ ಸೂಕ್ಷ್ಮದವಳು. ಬೆಕ್ಕು, ನಾಯಿಗಳಿಗೆ ಕಷ್ಟ ಬಂದರೂ ನೋಡಲಾಗದೆ ಬಿಕ್ಕಿಬಿಕ್ಕಿ ಅಳುತ್ತಿದ್ದವಳು. ಅದೇ ಯತೀಂದ್ರ ಹಾಡಿಯ ದಾರಿಯಲ್ಲಿ ಅನಿರೀಕ್ಷಿತವಾಗಿ ತನಗೂ ಮುತ್ತುಕೊಟ್ಟು ಓಡಿ ಹೋಗಿದ್ದ! ದಿಗಿಲು ಹಾರಿದ ತಾನು ಕುಸಿದು ಕೂತವಳು ಕ್ಷಣದಲ್ಲಿ ಎದ್ದು ಮನೆಯ ಕಡೆಗೆ ಓಡಿದ್ದೆ. ತೇಕುತ್ತ ಬಂದವಳು ‘ರಾವಿಕಲ್ಲಿರುವ ಗೋಳಿಮರದಡಿಯಲ್ಲಿ ಹೆಬ್ಬೆಟ್ಟಿಗೆ ಬೇರುಹೊಡೆದು ಎಡವಿ ಬಿದ್ದೆ; ತನಗೀಗ ಜ್ವರ ಬರುತ್ತಿದೆ’ ಎಂದು ಮನಸ್ಸಿಗೆ ಬಂದ ಸುಳ್ಳನ್ನು ಅಮ್ಮನಲ್ಲಿ ಹೇಳಿ ಮಲಗಿಬಿಟ್ಟಿದ್ದೆ. ಅಮ್ಮ ದೃಷ್ಟಿ ತೆಗೆದಿದ್ದರು. ತಾನು ರಜೆ ಮಾಡದೆ ಶಾಲೆಗೆ ಹೋಗಿ ಬರುತ್ತಿದ್ದ ಸಮಯವಾಗಿದ್ದರೆ ಅಮ್ಮಿಯನ್ನು ಸಂತೈಸುತ್ತಿದ್ದೆನೇ? ಆಗ ಅವಳು ಜೀವ ತೆಕ್ಕೊಳ್ಳುತ್ತಿರಲಿಲ್ಲವೇ? ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಪಲ್ಲವಿಯನ್ನು ಕಾಡಿ ಹಿಂಸಿಸುತ್ತವೆ. ಛೇ, ಅಮ್ಮಿ ಹಾಗೇಕೆ ಮಾಡಿದಳು?!
- ವಿಜಯಶ್ರೀ ಹಾಲಾಡಿ – ಕತೆಗಾರರು, ಕವಿಗಳು
