‘ಮಿಣುಕುಹುಳ’ ಕವನ – ವಿಜಯಶ್ರೀ ಹಾಲಾಡಿ

ಮನೆಯೊಳಗೆ ಬರುವ ಮಿಂಚುಹುಳವನ್ನು ಆ ಮನೆಗೆ ಸಂಬಂಧಿಸಿದ ಹಿರಿಯರ ಜಕ್ಣಿ ಎಂದು ಜನಪದರು ಗುರುತಿಸುತ್ತಾರೆ. – ವಿಜಯಶ್ರೀ ಹಾಲಾಡಿ, ತಪ್ಪದೆ ಮುಂದೆ ಓದಿ…

ನಡುರಾತ್ರಿ
ಒಗೆದ ಬಟ್ಟೆಗಳ ಹರಡಿ
ಅಡುಗೆಮನೆ ಶುಚಿಗೊಳಿಸಿ
ಹೊದಿಕೆ ಜೋಡಿಸಿಕೊಂಡು
ಮಲಗುವ ಮುನ್ನ
ಸಣ್ಣದೊಂದು ಬ್ಯಾಟರಿ ಬೆಳಕು
ಹಾಕಿಕೊಂಡು ಮನೆಯೆಲ್ಲ
ತಿರುಗಿ ಬರಬೇಕೆನಿಸಿತು

ಮಗುವಿನಂತೆ ನಿದ್ರಿಸಿದ ಮನೆ
ಮನೆಮಂದಿ, ಕಗ್ಗತ್ತಲ ಜಗ….!
ಕಪ್ಪೆ ಜೀರುಂಡೆ ಕೀಟಾದಿಗಳು
ಮೌನದೊಂದಿಗೆ ಸಂವಾದದಲ್ಲಿದ್ದವು
ಸುರಿದು ಸಾಕಾಗಿ ಬಿಟ್ಟ ಮಳೆಗೆ
ನೆಲವೆಲ್ಲ ಥಂಡಿ ಶೀತ
ಕಿಟಕಿಯಾಚೆಯ ಮಿಣುಕುಹುಳಗಳ
ಜೊತೆ – ನಾನೇ ಒಂದು
ಮಿಂಚುಹುಳವೆಂದು ಭ್ರಮಿಸುತ್ತ
ಕೋಣೆ ಕೋಣೆಗಳ ಸುತ್ತಾಡಿದೆ
ಪಾದದುಸುರಿಗೆ ಬೆಚ್ಚಿದ ಹಲ್ಲಿ
ಜಿರಳೆಗಳು ಮರೆಗೆ ಸರಿದವು
ದೂರದಲ್ಲೆಲ್ಲೋ ನಾಯಿಯೊಂದು
ಗೊಣಗುತ್ತ ಕಡುಬೇಸರದ
ಸೂಚನೆ ರವಾನಿಸುತ್ತಿರುವಾಗಲೇ…..
ಮಿಣುಕುಹುಳವೊಂದು ಮಿಣಿಮಿಣಿ
ಯೆಂದು ತೇಲಿಬಂದಿತು…
ಮನೆಯೊಳಗೇ!!

ಅಜ್ಜಿ ನೆನಪಿಸುತ್ತಿದ್ದ ‘ಜಕ್ಣಿ’ಯ ಕತೆಗಳು
ನುಗ್ಗಿ ಬಂದು ಕೈದೀಪವಾರಿಸಿದೆ!

ವಟಗುಟ್ಟುವ ಕಪ್ಪೆಗಳು;
ಕಣ್ಣ ಹಿತ ನೇವರಿಸುವ ಮಸಿಕತ್ತಲು!

****

ಜಕ್ಣಿ –  ಸತ್ತವರ ಆತ್ಮ/ ಪ್ರೇತ.


  • ವಿಜಯಶ್ರೀ ಹಾಲಾಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading