ಮದುವೆ ಅನ್ನೋದು ಬ್ರಹ್ಮ ಮಾಡಿದ ಗಂಟು ಎನ್ನುತ್ತಾರೆ. ಆ ಗಂಟನ್ನು ಬಿಡಿಸುವ ಅನಿವಾರ್ಯತೆ ವಕೀಲರಿಗೆ ಬಂದಾಗ ಅದನ್ನು ಹೇಗೆ ನಿಭಾಯಿಸುತ್ತಾರೆ. ವಕೀಲ ವೃತ್ತಿಯಲ್ಲಿ ಎದುರಾಗುವ ಸವಾಲನ್ನು ಕತೆಯಾಗಿಸಿ ಓದುಗರ ಮುಂದೆ ಅಂಕಣರೂಪದಲ್ಲಿ ತರುತ್ತಿದ್ದಾರೆ ವಕೀಲೆ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರು, ತಪ್ಪದೆ ಅವರ ಅಂಕಣವನ್ನು ಓದಿ…
‘ಮೇಡಂ, ನಿಮ್ಮ ಬಳಿ ಸ್ವಲ್ಪ ಮಾತಾಡಬೇಕಿತ್ತು… ಆಫೀಸ್ ಗೆ ಯಾವಾಗ ಬರಲಿ’ … ಎನ್ನುವ ಆ ಹೆಣ್ಣುಮಗಳ ಧ್ವನಿಗೆ ‘ಯಾವಾಗದರೂ ನನ್ನ ಕಛೇರಿ ಸಮಯಕ್ಕೆ ಬನ್ನಿ’… ಎಂದು ಫೋನ್ ಕಟ್ ಮಾಡಿದೆ. ಬಂದ ಆ ಕರೆ ಪರಿಚಿತರದ್ದೆಯಾಗಿತ್ತು. ಅವರ ಸಮಸ್ಯೆಯ ಎರಡುಮೂರು ಎಳೆಗಳು ನನಗೆ ಮೊದಲೇ ತಿಳಿದಿದ್ದರಿಂದ ಅವಳ ಸಮಸ್ಯೆಯನ್ನು ಪೂರ್ಣವಾಗಿ ಅರ್ಥಮಾಡಿಕೊಂಡಿದ್ದೆ, ಅವಳಿಗೆ ಗಂಡನಿಂದ ಮುಕ್ತಿಬೇಕಿತ್ತು. ಅವಳ ಮಕ್ಕಳಿಬ್ಬರೂ ಬೆಳೆದು ನಿಂತಿದ್ದರು, ಈ ವಯಸ್ಸಿನಲ್ಲಿ ತನ್ನ ದಾಂಪತ್ಯಗೀತೆಗೆ ತಿಲಾಂಜಲಿ ಹೇಳಲು ಆಕೆ ಹೊರಟಿದ್ದಳು.ಅದು ವಕೀಲೆಯಾಗಿ ಹಾಗೂ ಮಾನವೀಯ ದೃಷ್ಠಿಯಿಂದ ಅದು ನನಗೆ ಸರಿಕಾಣಲಿಲ್ಲ.
ಒಬ್ಬ ವಕೀಲಳಾಗಿ ಹಲವಾರು ಮಜಲುಗಳಿಂದ ಅವಲೋಕಿಸಿ ನೋಡಿದ್ರು ಅವರ ದಾಂಪತ್ಯದ ಜೀವನವನ್ನು ಮುರಿದುಕೊಳ್ಳಲು ಯಾವುದೇ ಬಲವಾದ ಕಾರಣ ಇರುವಂತೆ ಅವರಲ್ಲಿ ಕಂಡು ಬರಲಿಲ್ಲ. ಆದರೂ ವಿಚ್ಚೇದನ ಅವಳಿಗೆ ಬೇಕೇ ಬೇಕಿತ್ತು, ಅದರಲ್ಲೂ ನೀವೇ ಈ ಕೇಸ್ ತಗೋಬೇಕು ಅಂದಾಗ ಮನಸ್ಸಿಗೆ ತುಂಬಾ ಬೇಸರವಾಯ್ತು. ನಾನು ಅದುವರೆಗೂ ಒಂದೇ ಒಂದು ವಿಚ್ಚೇದನ ಮೊಕದ್ದಮೆ ನಡೆಸಿರಲಿಲ್ಲ. ಕಾರಣ ನಾನು ಭಾವನತ್ಮಕ ಜೀವಿ, ನಮ್ಮ ಕೈಯಲ್ಲಿ ಆದ್ರೆ ಎರಡು ಜೀವಗಳನ್ನು ಒಂದು ಮಾಡ್ಬೇಕು, ಇಲ್ಲದಿದ್ದರೆ ಸುಮ್ಮನಿರಬೇಕೆ ಹೊರತು ಬೇರೆ ಮಾಡುವ ಕೆಲಸ ಮಾಡಬಾರದು, ಸಂಸಾರ ಮುರಿದ ಪಾಪ ನನಗೆ ಅಟ್ಟಿಕೊಳ್ಳೋದು ಬೇಡ ಅನ್ನೋದು ನನ್ನ ಮನಸ್ಸು ಬಲವಾಗಿ ನಿರಾಕರಿಸುತ್ತಿತ್ತು.
ಈ ಕಾರಣದಿಂದ ನಾನು ವಿಚ್ಚೇದನಕ್ಕೆ ಸಂಬಂಧಿಸಿದ ಕೇಸುಗಳನ್ನು ತಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದೆ. ಆದರೆ ಈ ಕೇಸ್ ಬಂದಾಗ ನೀನು ವಿಚ್ಚೇದನ ಕೇಸ್ ತಗೆದುಕೊ, ಇದು ನಿನ್ನ ವೃತ್ತಿಯ ಒಂದು ಭಾಗ ಅಷ್ಟೆ. ಇದರ ಬಗ್ಗೆ ಅನುಕಂಪ, ಕೀಳಿರಿಮೆ ಬೇಡ, ನೀನು ಕೇಸ್ ತಗೊಂಡಿಲ್ಲಾ ಅಂದ್ರೆ ದಂಪತಿಗಳು ಬೇರೆ ಯಾಗುವುದನ್ನು ತಪ್ಪಿಸಲು ಸಾಧ್ಯವಾ ?? ನೀನು ತಗೊಂಡಿಲ್ಲಾ ಅಂದ್ರೆ ಅವರು ಇನ್ನೊಬ್ಬ ವಕೀಲರ ಬಳಿ ಹೋಗ್ತಾರೆ. ನೀನು ಕೇಸ್ ತಗೊಂಡ್ರೆ ದಂಪತಿಗಳನ್ನು ಒಂದು ಮಾಡಲಾದರೂ ಪ್ರಯತ್ನ ಮಾಡುಬಹುದಲ್ವಾ..!? ಎಂದು ಹೇಳಿದಾಗ, ನನ್ನ ಆತ್ಮಸಾಕ್ಷಿಗೂ ಅದು ಸರಿ ಅನಿಸಿತು. ಸಾಧ್ಯವಾದರೆ ಗಂಡ ಹೆಂಡತಿಯನ್ನು ಒಂದು ಮಾಡುವ ಅವಕಾಶ ಸಿಕ್ಕಿದಂತೆ ಆಗುತ್ತದೆ ಎಂದು ಇನ್ಮುಂದೆ ವಿಚ್ಚೇದನ ಕೇಸ್ಗಳನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದೆ.
ಆ ದಿನ ಹೇಳಿದಂತೆ ನನ್ನ ಆಫೀಸ್ ಗೆ ನನ್ನ ಕಕ್ಷೀದಾರೆ ಬಂದಳು. ಅವಳ ಹೆಸರು ನಿರ್ಮಲಾ. ಅವಳ ಗಂಡ ರಾಜೇಶ್. ಅವಳಿಗೆ ತನ್ನ ಗಂಡನಿಂದ ವಿಚ್ಛೇದನ ಯಾಕೆ ಬೇಕು ಎನ್ನುವ ನನ್ನ ಪ್ರಶ್ನೆಗೆ ಕತೆ ಹೇಳಲು ಶುರು ಮಾಡಿದಳು.
ಮದುವೆ ಆಗಿ 17 ವರ್ಷಗಳಾಗಿವೆ. ಮೊದಲ ಮಗಳು ಹತ್ತನೇ ತರಗತಿ ಕಲಿಯುತ್ತಿದ್ದರೆ, ಎರಡನೇ ಮಗಳು ಏಳನೆ ತರಗತಿಯಲ್ಲಿ ಓದುತ್ತಿದ್ದಳು. ಗಂಡ ನೋಡಲು ಸುರದ್ರೂಪಿ… ಒಳ್ಳೆಯ ಕೆಲಸದಲ್ಲಿದ್ದಾನೆ….ಗುಣವಂತ. ಯಾವುದೇ ಹೆಂಡ, ಸಿಗರೇಟು ಅನ್ನುವ ದುರಭ್ಯಾಸಗಳು ಇಲ್ಲ. ಆದರೂ ನಿರ್ಮಲಾಗೆ ಈಗ ಗಂಡ ಬೇಡಾವಾಗಿದೆ. ಅವನಿಂದ ಆದಷ್ಟು ಬೇಗ ನನಗೆ ಬಿಡುಗಡೆ ಬೇಕು ಎನ್ನುವ ಹಠ ಆಕೆಯದು. ಅವಳು ಬೇಕು ಎಂದಾಕ್ಷಣ ಬಿಡುಗಡೆ ಮಾಡಲು ಅದೇನು ತರಕಾರಿ ಅಲ್ಲ …ಕತ್ತರಿಸಿ ಒಗೆದರೆ ಮುಗಿತು ಅನ್ನೋಕೆ. ಅದಕ್ಕೂ ಕಾನೂನಿನಲ್ಲಿ ಕ್ರಮಗಳಿವೆ.ನಾನು ಮೊದಲು ಆಕೆಗೆ ಬುದ್ದಿ ಹೇಳಿದೆ. ಆಕೆ ಸುತಾರಾಂ ಏನು ಮಾಡಿದರೂ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಅವಳ ಮಾತುಗಳನ್ನು ಸೂಕ್ಶ್ಮವಾಗಿ ಗಮನಿಸುತ್ತಾ ಹೋದಾಗ ಅವನೊಟ್ಟಿಗೆ ಮೂರು ವರ್ಷಗಳಿಂದ ಬೇಕು ಅಂತಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ಒಂದೇ ಮನೆಯಲ್ಲಿ ಇದ್ದರು ದೂರವಿದ್ದಳು. ಇದರಿಂದ ರೋಸಿಹೋಗುತ್ತಿದ್ದ ರಾಜೇಶ್ ಹಲವಾರು ಬಾರಿ ಆಕೆಯ ರೂಮಿನ ಬಾಗಿಲು ಒಡೆದು ಒಳ ಹೋಗುವ ಪ್ರಯತ್ನ ಮಾಡಿದ್ದ. ಮಾನಸಿಕವಾಗಿಯು ಕುಗ್ಗಿದ್ದ. ಆದರೆ ಯಾವತ್ತು ಹೆಂಡತಿ ಬಿಟ್ಟು ಬೇರೆ ಹೆಣ್ಣಿನ ಸಹವಾಸವನ್ನು ಮಾಡಿರಲಿಲ್ಲ. ತನ್ನ ಹೆಂಡತಿ ಇಂದಲ್ಲ ನಾಳೆ ಬದಲಾಗುತ್ತಾಳೆ ಎಂದು ಕಾಯುತ್ತಿದ್ದ. ಆದರೆ ಆಕೆಗೆ ಇದ್ದದ್ದು ದೊಡ್ಡ ಸಮಸ್ಯೆ ಎಂದರೆ ಅವನ ತಂದೆ ತಾಯಿಗೆ ಒಬ್ಬನೇ ಮಗ, ಅವನ ಪಾಲಕರನ್ನು ತುಂಬಾ ಪ್ರೀತಿಸುತ್ತಾನೆ, ತಂದೆ ತಾಯಿಯನ್ನು ಜೊತೆಯಲ್ಲಿಟ್ಟುಕೊಂಡಿದ್ದಾನೆ, ಅಕ್ಕಂದಿರ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾನೆ, ಸಿಟಿಯಲ್ಲಿ ಮನೆ ಮಾಡು ಆಂದ್ರೆ ತೋಟದಲ್ಲಿ ಮನೆಮಾಡಿದ್ದಾನೆ ಇವು ಅವರನ್ನು ದೈಹಿಕವಾಗಿ ಬೆಸೆಯಲು ಬಿಟ್ಟಿರಲಿಲ್ಲ. ಈ ಕಾರಣಗಳಿಂದ ನನಗೆ ಡೈವೋರ್ಸ್ ಬೇಕು.
ನಿರ್ಮಲಾ ತನಗೆ ಜೀವನಾಂಶವು ಬೇಕಿಲ್ಲ, ನನ್ನ ಕೈಯಲ್ಲಿ ಕೆಲಸ ಇದೆ… ಮಕ್ಕಳನ್ನು ನಾನು ಸಾಕುವೆ… ಇಲ್ಲವಾದರೆ ಮಕ್ಕಳನ್ನ ಅವನು ಬೇಕಿದರೆ ಸಾಕಲಿ ಎನ್ನುವ ಸ್ವಪ್ರತಿಷ್ಠೆ ಅನ್ನುವುದಕಿಂತಲೂ ದುರಂಹಕಾರವೆ ತುಂಬಿದ ಮಾತುಗಳೆ ಅವಳಿಂದ ಬಂತು. ನಿರ್ಮಲಾಳಿಗೆ ಬುದ್ದಿ ಹೇಳಿ ಹೇಳಿ ಸುಸ್ತಾಗಿ ಹೋದೆನೇ ಹೊರತು ಯಾವ ಪ್ರಯೋಜನವಾಗಲಿಲ್ಲ. ಕೊನೆಗೆ ಸರಿ… ಹದಿನೈದು ದಿನ ಬಿಟ್ಟು ಬನ್ನಿ, ಕೇಸ್ ಫೈಲ್ ಮಾಡುವ ಅಂದೇ. ಅಷ್ಟು ದಿನ ಯಾಕೇ?…ಕೇಸ್ ಫೈಲ್ ನನಗೆ ಸಮಯವೇನು ಬೇಕಿರಲಿಲ್ಲ ಆದರೆ ನಾನು ಕೊಟ್ಟ ಸಮಯದಲ್ಲಿ ಅವರ ದಾಂಪತ್ಯ ಸರಿ ಹೋಗಬಹುದು ಎನ್ನುವ ಸಣ್ಣ ಆಸೆಯಿಂದ ಕೊಡಿದ ದೂರದ ಆಲೋಚನೆಯಿಂದ ಆ ಮಾತು ಹೇಳಿ ಕಳುಹಿಸಿದೆ.
ನಾನು ಕೊಟ್ಟ ೧೫ ದಿನ ಅವರ ಬದುಕು ಸರಿ ಮಾಡಿತಾ ಅಥವಾ ಇಲ್ವಾ….
ತಪ್ಪದೆ ಮುಂದಿನ ಭಾಗ ಓದಿ……..
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು