ಸ್ವಾತಿಯ ಚಂಚಲ ಮನಸ್ಸಿನಿಂದ ತನ್ನ ಕೈಯಾರೆ ಬಂಗಾರ ಬದುಕನ್ನು ಬಿಟ್ಟು ಕಾಗೆಬಂಗಾರದ ಹಿಂದೆ ಹೋದಳೋ ಯಾರಿಗೆ ತಾನೇ ಮರುಕ ಹುಟ್ಟುತ್ತದೆ. ಆದರೆ ಸಾಕಿದ ಕರಳು ಮಾತ್ರ ನನ್ನನ್ನು ಹುಡುಕಿನೋಡು ಬಂದಿತ್ತು. ತಪ್ಪದೆ ಓದಿ ವಕೀಲೆ,ಲೇಖಕಿ ಹೆಚ್.ಆರ್.ಪವಿತ್ರ ಧರ್ಮಪ್ಪ ಅವರ ‘ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು’ ಅಂಕಣವನ್ನು ಓದಿ, ತಪ್ಪದೆ ಶೇರ್ ಮಾಡಿ…
ಗಲಾಟೆ ನಡೆದ ನಂತರ ಕೋರ್ಟ್ಗೆ ಕಿರಣ್ ಬರಲೆ ಇಲ್ಲ, ಅವನ ಪರವಾಗಿ ಯಾವುದೇ ವಕೀಲರು ಹಾಜರಾಗಲಿಲ್ಲ. ಅವನಿಗೆ ನೋಟಿಸ್ ತಲುಪಿದ್ದು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ಸ್ವಾತಿಯೊಬ್ಬಳ ವಿಚಾರಣೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಸ್ವಾತಿಗೆ ವೈವಾಹಿಕ ಜೀವನದ ಬಂಧನದಿಂದ ಬಿಡುಗಡೆ ನೀಡಿತ್ತು.
ವಿಚ್ಛೇದನ ಸಿಕ್ಕಿದ ನಂತರ ಆಕೆಗೆ ಒಂದಷ್ಟು ತಿಳುವಳಿಕೆ ಹೇಳಿದಾಗ ಸ್ವಾತಿಯು ಇನ್ನು ಮುಂದೆ ಚಿಕ್ಕಮ್ಮ ಹೇಳಿದಂತೆ ನಡೆದುಕೊಳ್ಳುವೆ, ಅವರ ಮಾತು ಮೀರಿ ಹೋಗುವದಿಲ್ಲ.. ಎಂಬ ವಾಗ್ದಾನ ಮಾಡಿದ್ಲು. ಹೆಚ್ಚು ಕಡಿಮೆ ನಾನು ಈ ಕೇಸನ್ನು ಕಂಪ್ಲೀಟ್ ಮರೆತು ಬಿಟ್ಟಿದ್ದೆ, ಆರೇಳು ತಿಂಗಳ ನಂತರ ಒಂದು ಮುಸ್ಸಂಜೆ ಹೊತ್ತಿನಲ್ಲಿ ಸುಶೀಲಾರವರಿಂದ ನನಗೊಂದು ಕರೆ ಬಂತು, ಆ ಕರೆಯನ್ನು ನೋಡಿದಾಗ ಕೇಸ್ ಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಮತ್ತು ನ್ಯಾಯಾಲಯ ಆದೇಶದ ಪ್ರತಿಯನ್ನು ಕೋರ್ಟ್ನಿಂದ ತೆಗೆದುಕೊಟ್ಟಿರುವೆ, ಅವರು ಅಷ್ಟೆ ನನ್ನ ಫೀಸನ್ನು ಸರಿಯಾಗಿ ಕೊಟ್ಟಿದ್ದಾರೆ, ಅಂದ್ಮೇಲೆ ಮತ್ಯಾಕೆ ನನಗೆ ಕಾಲ್ ಮಾಡುತ್ತಿದ್ದಾರೆ ಎಂದು ಯೋಚಿಸುತ್ತಲೇ
“ಹಲೋ… ಎನ್ನಲು ಸುಶೀಲಾರವರು ಲಾಯರ್ರೇ ಫ್ರೀ ಇದ್ದಿರಾ?… ಸ್ವಲ್ಪ ವಿಚಾರ ಮಾತಾಡ್ಬೇಕಿತ್ತು ಅಂದಾಗ ಹೇಳಿ ಎನ್ನಲು…ಸ್ವಾತಿಗೆ ಮದುವೆ ಗೊತ್ತಾಯ್ತು ಆ ಹುಡುಗನು ವಿಚ್ಛೇದಿತ, ಇಲ್ಲೆ ಹತ್ತಿರದವನು, ಸಾಕಷ್ಟು ಸ್ದಿತಿವಂತ, ಸಾದು ಸ್ವಭಾದವ, ಗುಣವಂತ ಒಬ್ಬನೇ ಮಗ ಸ್ವಾತಿಯನ್ನು ನೋಡಿ ಒಪ್ಪಿದ್ದಾನೆ, ಅವನ ಮನೆಯವರು ಒಪ್ಪಿದ್ದಾರೆ, ಮುಂದಿನ ವಾರ ನಿಶ್ಚಿತಾರ್ಥ ಮಾಡುವ ಎಂದುಕೊಂಡಿದ್ವಿ.. ಅದಕ್ಕೆ ನಿಮಗೆ ಹೇಳಿದೆ, ಕಿರಣ್ ಮತ್ತೆ ತೊಂದರೆ ಮಾಡೋದಿಲ್ಲ ಅಲ್ವಾ ಅಂದ್ರು!!!
ಆವನ್ಯಾಕೆ ತೊಂದರೆ ಮಾಡುತ್ತಾನೆ. ಕೋರ್ಟ್ ಅವರಿಬ್ಬರ ವಿವಾಹವನ್ನು ರದ್ದುಪಡಿಸಿದೆ. ಅವರಿಬ್ಬರ ವಿವಾಹ ಕಾನೂನುಬದ್ದವಾಗಿ ರದ್ದಾಗಿರುವುದರಿಂದ ಆಕೆ ಈಗ ಯಾರನ್ನಾದರೂ ವಿವಾಹವಾಗಿ ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಅವರಿಗೆ ಒಂದಷ್ಟು ಧೈರ್ಯ ತುಂಬಿದೆ, ನನ್ನನ್ನು ನಿಶ್ಚಿತಾರ್ಥಕ್ಕೆ ಕರೆಯುವುದಾಗಿ ತಪ್ಪದೆ ಬರಬೇಕು ಎಂದು ಹೇಳಿ ಕರೆಯನ್ನು ಕಡಿತಗೊಳಿಸಿದರು.
ಇದಾದ ನಂತರ ನನಗೆ ಅವರಿಂದ ಯಾವ ಕರೆಯು ಬರಲಿಲ್ಲ, ನನಗೂ ಅವರಿಂದ ಯಾವುದೇ ನಿರೀಕ್ಷೆಗಳು ಇಲ್ಲದ ಕಾರಣ ಅದನ್ನು ಸಂಪೂರ್ಣವಾಗಿ ಮರೆತು ಬಿಟ್ಟಿದ್ದೆ !! ಇದ್ದಕ್ಕಿದ್ದಂತೆ ಹೆಚ್ಚು ಕಡಿಮೆ ಎರಡು ತಿಂಗಳಾಗಿರಬಹುದು ಮತ್ತೆ ಅವರಿಂದ ಕಾಲ್ ಬಂತು.. ಆಗ ನಾನು ಯೋಚಿಸಿದ್ದು ಮದುವೆಗೆ ಕರೆಯಲು ಪೋನ್ ಮಾಡಿರಬೇಕು ಎಂದುಕೊಂಡು ಸುಶೀಲಾರನ್ನು ಸ್ವಾತಿಯ ಮದುವೆ ಯಾವಾಗ..ಎಂದೆ ಅಷ್ಟೆ!! ಆ ಕಡೆಯಿಂದ ಒಂದೆ ಸಮನೆ ಅಳು..ಏನಾಯ್ತು ಹೇಳಿ ಎಂದಾಗ… ಕಿರಣ್ ಸ್ವಾತಿಯ ಮದುವೆ ವಿಚಾರ ತಿಳಿದು ಸ್ವಾತಿ ಕೆಲಸ ಮಾಡುತ್ತಿದ್ದ ಕಂಪನಿಯ ವಿಳಾಸವನ್ನು ಪತ್ತೆಹಚ್ಚಿ ಅಲ್ಲಿಗೆ ತುಂಬಾ ಸಲ ಹೋಗಿದ್ದಾನೆ, ಆದರೆ ಸ್ವಾತಿ ಮಾತಾಡಿಲ್ಲ, ಆಗ ಕಿರಣ್ ಅವಳ ಬರ್ತಡೆ ದಿನಕ್ಕೆ ಕಾಯ್ದು ಸರ್ಪೈಜ್ ಪಾರ್ಟಿ ಆರೆಂಜ್ ಮಾಡಿದ್ದು ಅಲ್ಲದೆ ಕೆಂಪು ಗುಲಾಬಿ ಹೂಗಳ ಬೊಕ್ಕೆಯನ್ನು ಕಳುಹಿಸಿದ್ದಾನೆ.
ಇದ್ಯಾವುದಕ್ಕೂ ಮರುಳಾಗದ ಸ್ವಾತಿಯನ್ನು ಮತ್ತೆ ಪಡೆಯಬೇಕು ಎಂಬ ಹಠಕ್ಕೆ ಬಿದ್ದು ಸ್ವಾತಿ ಮದುವೆ ಆಗುವ ಹುಡಗನ ಬಳಿ ಮಾತಾಡಿದ್ದಾನೆ..ನಾನು ಸ್ವಾತಿಯ ಬಳಿ ಸ್ವಲ್ಪ ಮಾತಾಡಬೇಕು ಅವಕಾಶ ಮಾಡಿಕೊಡಿ ಎಂದು ಕೇಳಿದಾಗ ಆತನು ವಿಚ್ಛೇದಿತ ಅವನ ಮನಸ್ಸಿನಲ್ಲಿ ನಡೆದ ಕದನ ಗೊತ್ತಿದ್ದರಿಂದಲೂ ಏನೋ ಎಲ್ಲಾ ವಿಷಯ ಗೊತ್ತಿದ್ದು ಸ್ವಾತಿ ಗೆ ಕಿರಣ್ ಬಳಿ ಒಮ್ಮೆ ಮಾತಾಡು ಅದೇನೋ ಹೇಳ್ತಾನೋ ನೋಡೋಣ ..ಹೆಂಗೂ ನಾಡಿದ್ದು ನಮ್ಮಿಬ್ಬರ ನಿಶ್ಚಿತಾರ್ಥ ಇದೆಯಲ್ವಾ ಎಂದಿದ್ದಾನೆ. ಆಗ ಸ್ವಾತಿ ಕಿರಣನ ಕರೆ ಸ್ವೀಕರಿಸಿ ಮಾತಾಡಿದ್ದಾಳೇ.. ಅದೇನೋ ಮಾತಾಡಿದ್ನೂ ಗೊತ್ತಿಲ್ಲ ,ಕರೆ ಮೇಲೆ ಕರೆ ಮುಗಿಯದ ಪೋನ್ ಸಂಭಾಷಣೆ, ಬೆಳಕು ಹರಿಯುವವರೆಗೂ ಮಾತಾಡಿದವಳು ನಿಶ್ಚಿತಾರ್ಥ ಮಾಡಿಕೊಳ್ಳಲು ತಯಾರಾಗಿದ್ದ ಹುಡಗನನ್ನು ತೊರೆದು ಕಿರಣ್ ಹಿಂದೆ ಯಾರಿಗೂ ಹೇಳದೆ ಕೇಳದೆ ಪುನಃ ಹೊರಟು ಹೋಗಿದ್ದಾಳೆ. ಎರಡು ದಿನಗಳ ನಂತರ ಕಿರಣ್ನೊಂದಿಗೆ ಇರುವ ವಿಚಾರವನ್ನು ಮದುವೆ ಆಗುವ ಹುಡುಗನಿಗೆ, ಚಿಕ್ಕಮನಿಗೂ ಹೇಳಿದ್ದಾಳೆ, ವಿಷಯ ತಿಳಿದ ಇವರು ಆ ಹುಂಬ ಹುಡುಗಿಗೆ ಅದೆಷ್ಟು ಬುದ್ಧಿ ಹೇಳಿದ್ರು ಅಷ್ಟೆ.. ಎಲ್ಲಿಯಾದರೂ ಹಾಳಾಗಿ ಹೋಗಲಿ ಎಂದುಕೊಂಡು ಸುಮ್ಮನಾಗಿದ್ದಾರೆ.
ಇಲ್ಲಿಯವರೆಗೆ ಸುಮ್ಮನಿದ್ದ ಕಾಮಾಕ್ಷಿ ಮಗ – ಸೊಸೆಯನ್ನು ಕರೆತಂದು ಊರಿನ ರೆಸಾರ್ಟ್ ಒಂದರಲ್ಲಿ ಪುನಃ ನೂರಾರು ಜನರ ಸಮ್ಮುಖದಲ್ಲಿ ವಿವಾಹ ಮಾಡಿಸಿ ಬಂದವರಿಗೆ ಮೃಷ್ಟಾನ್ನ ಭೋಜನ ಮಾಡಿ ಬಡಿಸಿ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮಗ ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತಾರೆ.
ಇಷ್ಟೆಲ್ಲಾ ಆದ ನಂತರ ಕಿರಣ್ ತನ್ನ ಬುದ್ಧಿಯನ್ನು ಬದಲಾಯಿಸಿಕೊಂಡು ಉತ್ತಮ ಗೃಹಸ್ಥನಾಗದೆ ನಾಯಿ ಬಾಲಡೊಂಕು ಎನ್ನುವಂತೆ ತನ್ನ ಚಾಳಿಯನ್ನು ಶುರುಮಾಡಿಕೊಂಡಿದ್ದಾನೆ.
ಮೊದಲು ಅವನೊಂದಿಗೆ ಓಡಿಹೋದಾಗ ಕಿರಣ್ ಒಬ್ಬನೇ ಹಿಂಸೆಕೊಡುತ್ತಿದ್ದ ,ಈಗ ಅವನ ಅಮ್ಮ ಕಾಮಾಕ್ಷಿ ಜೊತೆಗೆ ಹಿಂಸೆ ಶುರುವಾಯ್ತು, ಅಕ್ಷರಶಃ ಸ್ವಾತಿಯ ಬದಕು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಯ್ತು.
ಪ್ರತಿದಿನವೂ ಕಿರಣನಿಂದ ಏಟುಗಳು, ಕಾಮಾಕ್ಷಿಯವರಿಂದ ಮೂದಲಿಕೆ ಮಾತುಗಳು ಕೇಳಿ ಕೇಳಿ ರೋಸಿ ಹೋಗಿ ಸರಿಯಾಗಿ ಊಟವನ್ನು ಮಾಡದೆ ನಿತ್ರಾಣಗೊಂಡಿದ ಸ್ವಾತಿ ಮೇಲೆ ಒಂದು ತಡರಾತ್ರಿ ಕಿರಣ್ ಜೋರಾಗಿ ಹಲ್ಲೆಮಾಡಿ ಅವಳನ್ನು ಮನೆಯಿಂದ ಹೊರಹಾಕಿ ಬಾಗಿಲು ಹಾಕ್ಕಿದ್ದಾನೆ. ಮೊದಲೇ ನಿತ್ರಾಣಗೊಂಡಿದ ಸ್ವಾತಿ ಮನೆಯಿಂದ ಹೊರಗಿರುವ ಗೇಟ್ ಬಳಿ ಕುಸಿದು ಬಿದ್ದಿರುವಾಗ ಪಕ್ಕದ ಮನೆಯವರು ಎಬ್ಬಿಸಿ, ನೀರು ಕುಡಿಸಿ, ಊಟ ಮಾಡಿಸಿ ಜತನದಿಂದ ಒಂದು ರಾತ್ರಿ ಆಕೆಯನ್ನು ಜೋಪಾನ ಮಾಡಿ ಬೆಳಕು ಹರಿದಂತೆ ಸ್ವಾತಿಯಿಂದ ಅವರ ಚಿಕ್ಕಮ್ಮನ ನಂಬರ್ ಪಡೆದು ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಅಲ್ಲಿಯವರೆಗು ಮಗಳೊಂದಿಗೆ ಎಲ್ಲಾ ಸಂಪರ್ಕ ಕಡಿದುಕೊಂಡಿದ್ದರು. ನೆರಮನೆಯವರು ವಿಷಯ ಹೇಳುವಾಗ ನೊಂದುಕೊಂಡು ಹೋಗಿ ಮಗಳನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಹೀಗೆ ಮತ್ತೆ ಮನೆಗೆ ಮರಳಿ ಬಂದ ಮಗಳ ಭವಿಷ್ಯದ ಚಿಂತೆಯಿಂದ ಕಂಗಲಾಗಿದ್ದರು.
ಫೋಟೋ ಕೃಪೆ : google
ಒಮ್ಮೆ ವಿಚ್ಚೇದನ ಪಡೆದವನ ಜೊತೆಗೆ ಮತ್ತೆ ಹೋಗಿ ಹೊಂದಿಕೊಂಡು ಸಂಸಾರ ಮಾಡಿದ್ರೆ ಅದು ಎಲ್ಲಕ್ಕಿಂತ ಸಂತಸದ ವಿಚಾರ,ಇದೆಲ್ಲಾ ಸಾಧ್ಯವಾಗುವುದು ಹತ್ತಾರು ವರ್ಷಗಳ ಕಾಲ ಸಂಸಾರ ಮಾಡಿ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಬಯಸಿ ಪಡೆದ ದಂಪತಿಗಳು ಪಶ್ಚಾತ್ತಾಪ ಪಟ್ಟು ತಮ್ಮ ಮಕ್ಕಳ ಭವಿಷ್ಯಕ್ಕಾಗಿ, ಇಲ್ಲ ಉತ್ಕಟ ಪ್ರೀತಿಯಿಂದ ಮತ್ತೆ ಒಂದಾಗಿ ಸುಖಸಂಸಾರ ನಡೆಸುತ್ತಿರುವವರು ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಹಾಗೇನಾದರೂ ಆಗಿದ್ರೆ ನಾನು ನಿಜಕ್ಕೂ ಹೆಚ್ಚು ಖುಷಿ ಪಡುತ್ತಿದ್ದೆ ಆದರೆ ಇಲ್ಲಿ ಸ್ವಾತಿಯನ್ನು ಮದುವೆ ಆಗಿ ಸರಿಯಾಗಿ ಒಂದು ತಿಂಗಳು ಬಾಳಸದವ ಮತ್ತೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಮರು ಮದುವೆ ಆಗಲು ಬಂದಿದ್ದ ಗುಣವಂತ ಹುಡುಗನನ್ನು ದಿಕ್ಕರಿಸಿ ಕಿರಣನ ಮೋಡಿಮಾತಿಗೆ ಮರುಳಾಗಿ ಪುನಃ.
ಅವನೊಂದಿಗೆ ಹೋಗಿದ್ದು ಸರಿ ಕಾಣಲಿಲ್ಲಾ ಯಾರಿಗೂ… ಅವಳ ಬದುಕನ್ನು ಸರಿ ಮಾಡಬೇಕು ಎಂದು ಅವಳ ಸಾಕು ತಾಯಿ-ತಂದೆ, ಬಂಧು ಬಳಗ, ನಾನು ಎಲ್ಲರೂ ಪ್ರಯತ್ನಿಸಿದ್ದೆವು. ಆದರೆ ಸ್ವಾತಿಯ ಚಂಚಲ ಮನಸಿನಿಂದ ತನ್ನ ಕೈಯಾರೆ ಕಣ್ಮುಂದೆ ಇದ್ದ ಬಂಗಾರದಂತಹ ಭವಿಷ್ಯವನ್ನು ಬಿಟ್ಟು ಕಾಗೆಬಂಗಾರದ ಹಿಂದೆ ಹೋದವಳ ಬಗ್ಗೆ ಮರುಕ ಯಾರಿಗೆ ತಾನೇ ಇದ್ದಿತ್ತು. ಇವಳ ಇಂತಹ ಮಾನಗೇಡಿ ಕೆಲಸದಿಂದ ಹೊಸಬದುಕನ್ನು ಕೊಡಲು ಸಜ್ಜಾಗಿದ್ದ ಹುಡುಗ, ಹುಡುಗನ ಮನೆಯವರು, ಸ್ವಾತಿಯ ಕುಟುಂಬಸ್ಥರು ಸಂಬಂಧಿಕರು ಸ್ನೇಹಿತರು, ಪರಿಚಯಸ್ದರ ಮುಂದೆ ತಲೆತಗ್ಗಿಸುವಂತೆ ಆಯ್ತು, ಇದರಿಂದ ನೊಂದ ಸುಶೀಲಾ ನನ್ನ ಬಳಿಬಂದಿದ್ದು ಮತ್ತೆನಾದರೂ ಪರಿಹಾರ ಇದೆಯಾ ಎಂದು.
ಒಮ್ಮೆ ವಿಚ್ಛೇದನ ಪಡೆದು ವೈವಾಹಿಕ ಸಂಬಂಧ ಕಡಿದು ಕೊಂಡು ಮತ್ತೆ ಆತನ ಹಿಂದೆ ಹೋಗಿ ಅದ್ದೂರಿ ಮದುವೆ ಆಗುವ ಮೂಲಕ ಒಂದಷ್ಟು ದಿನ ಸಂಸಾರ ಮಾಡಿ ಆತನಿಂದ ಒದೆತಿಂದು ತವರಿಗೆ ವಾಪಸ್ ಆಗಿರುವ ಸ್ವಾತಿಗೆ ಮತ್ತೆ ಮತ್ತೆ ವಿಚ್ಛೇದನ ಪಡೆಯಲು ಸಾಧ್ಯವಾ..?? ಇದರ ಹೊರತಾಗಿ ಬೇರೆ ಪರಿಹಾರ ಏನಾದರೂ ಇದೆಯಾ ಎಂಬುದು ಈಗ ಸುಶೀಲಾರ ಪ್ರಶ್ನೆ ಆಗಿತ್ತು.
ಅವರಿಗೆ ಸಮಾಧಾನ ಹೇಳಿ ಸ್ವಾತಿಯ ಮೂಲಕ ಕಿರಣ್ ಮೇಲೆ ಜೀವನಾಂಶಕ್ಕೆ ಮತ್ತೊಂದು ದಾವೆ ಹೂಡಿ ಸ್ವಾತಿಗೆ ಒಂದಷ್ಟು ಪರಿಹಾರ ಮೊತ್ತವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು ಅವಳ ಬದುಕು ಎಲ್ಲರಂತೆ ಸುಂದರವಾಗಿರಬೇಕು ಎಂಬ ನಮ್ಮೆಲ್ಲರ ಕನಸು ಮಾತ್ರ ನೇರವೇರಲಿಲ್ಲ. ಯಾರೇ ಆಗಲಿ ಅದರಲ್ಲೂ ಹೆಣ್ಣು ಮಕ್ಕಳು ಬುದ್ಧಿಯ ಹಿಡಿತದಲ್ಲಿಟ್ಟುಕೊಂಡು ಭಾವನೆಗಳನ್ನು ಹತೋಟಿಗೆ ತರಬೇಕು ಅದು ಬಿಟ್ಟು ಭಾವನೆಗಳ ಕೈಯಲ್ಲಿ ಬುದ್ಧಿಕೊಟ್ಟರೆ ಹೀಗೆ ಬದಕು ಮೂರಾಬಟ್ಟೆ ಆಗಿ ಯಾರಿಗೂ ಬೇಡವಾದ ಜೀವನವನ್ನು ನಡೆಸಬೇಕಾದಿತ್ತು.
ನಮ್ಮ ಸಮಾಜದಲ್ಲಿ ಪ್ರೀತಿ ಪ್ರೇಮ, ಮದುವೆ, ಯಾವುದೇ ಇರಲಿ, ಇಲ್ಲಿ ಅವಿವಾಹಿತಳು ವಿವಾಹಿತಳು ಎಂಬುದು ವಿಷಯವಲ್ಲ.. ಯಾವುದೇ ಹೆಣ್ಣು ಬುದ್ಧಿಹೀನಳಾಗಿ ಚಂಚಲಮನಸಿನಿಂದ ಗಂಡಿನ ಮೋಡಿಯ ಮಾತಿಗೆ ಮರುಳಾಗಿ ಮನಕರಗಿ ಅದನ್ನೇ ನಿಜವಾದ ಪ್ರೀತಿ ಎಂದು ಭ್ರಮಿಸಿ ಹೋದರೆ ಜಗದ ಮುಂದೆ ಬೆತ್ತಲಾಗುವುದು ಹೆಣ್ಣಿನ ಜೀವನವೆ ಹೊರತು ಗಂಡಿನದಲ್ಲಾ, ಸ್ವಂಯಂಕೃತ ಅಪರಾಧಗಳಿಗೆ ಎಲ್ಲೂ ಕ್ಷಮೆ ಇರದು ಜೀವನಪರ್ಯಂತ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ನಡೆ ಮತ್ತು ನುಡಿಯಲ್ಲಿ ಸಂಯಮ ಇದ್ದರೆ ನಮ್ಮ ಜೀವನವು ಸುಂದರವಾಗಿರುವುದಲ್ಲದೆ ಹೆತ್ತವರ,ಸಾಕಿದವರ,ನಂಬಿದವರ,ಎಲ್ಲರ ಘನತೆಗೆ ದಕ್ಕೆ ಆಗದಂತೆ ಬದಕುಲು ಸಾಧ್ಯ. ಹೀಗೆ ಬದುಕಿದಾಗಲೇ ಮನುಷ್ಯನಾಗಿ ಹುಟ್ಟಿದಕ್ಕೂ ಒಂದು ಸಾರ್ಥಕತೆ.
(ಮುಗಿಯಿತು)
ಕಪ್ಪು ಕೋಟಿನ ಜೇಬಿನಲ್ಲಿ ಅವಿತ ಕತೆಗಳು…ಹಿಂದಿನ ಸಂಚಿಕೆಗಳು :
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ೧)
- ನಿರ್ಮಲಾ ಮತ್ತು ರಾಜೇಶ್ ಡೈವೋರ್ಸ್ ಕತೆ – (ಭಾಗ ೨)
- ಮತ್ತೆ ಬೆಸೆದ ಬೆಸುಗೆ ಕತೆ
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೧)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೨)
- ಪತಂಗವೇ ಬೇಡ ನಿನಗೆ ಬೆಂಕಿಯ ಸಂಗ – (ಭಾಗ೩)
- ಹೆಚ್.ಆರ್.ಪವಿತ್ರ ಧರ್ಮಪ್ಪ – ವಕೀಲರು