ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನವನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ವ್ಯಾಘ್ರನದೊ ಬಲು ಸೊಗಸು
ಕಾನನದ ಸಂಪತ್ತು
ಸಮೃದ್ಧಿಯ ಸೂಚಕವು
ಅರಣ್ಯಗಳ ಸೊತ್ತು
ಹರಿಣ ಮೊಲ ಕಾಡೆಮ್ಮೆ
ಸಾರಂಗ ಕುರಿ,ಹಂದಿ..
ಇರುವಲ್ಲಿ ರಾಜನಿವ ಭೋಗಜೀವಿ ಉದರಂಭರಣಕಷ್ಟೆ ಇವನ
ಕ್ರೌರ್ಯದಾ ಮಿತಿಯು
ಒಂದು ತರುವನು ಮುರಿಯ
ಕಾಡಿಗೆಂದೂ ಬೆಂಕಿಯಿಡ
ತನ್ನ ಉದರದ ಮಿತಿಯಲಿ
ಇವನ ಬದುಕು ಸಾಗಲು
ಒಬ್ಬ ಸಂಗಾತಿಯು
ಇವನ ಬದುಕಿನ ಕೆಳೆಯು
ಬದ್ಧನಾಗುವ ಈತ
ಸಂಸಾರ ಬದುಕಿಗೆ
ಅಯ್ಯೋ ವ್ಯಾಘ್ರನೆಂಬರು
ಜನ ಹೆದರಿ, ಕಾಡಿಗೆ ತೆರಳರು
ಅರಣ್ಯ ರಕ್ಷಕ ನಿವನು
ಅಶಾಸಿತ ವನರಾಜ
ಹೋಲಿಸುವರೇಕೆ ಹೀನ
ನರಪರಾಕ್ರಮಕೆ ಇವನ
ನಿಜಾರ್ಥದಲಿ ಹುಲಿಯಾಗದ
ಸ್ವಾರ್ಥಿ ಮನುಜರಿಗೆ
ತಿಂದುಟ್ಟು ಪಾಲಿಸುತ ತನ್ನ
ವಲಯದ ವಿಸ್ತಾರದಲಿ
ಬಾಳು ಸಾರ್ಥಕವಾದ
ಈ ವನರಾಜಗೆ ಸಲ್ಲದಾ ಸೊಲ್ಲು
ಸಾಹಸವನೇ ಮೆರೆಯದೆ
ಕೂತಲ್ಲೇ ಮುಕ್ಕಿ, ದೋಚಿ
ನೆಲಸಿರಿಯ ಬರಿದು ಮಾಡುವ
ಸ್ವಾರ್ಥಿನರನನು ಇವನೆದುರು
ನಿವಾಳಿಸಿ ಬಿಡುವ
ಕಲಿಯಬೇಕಿದೆ ಇವನ ಬದುಕು
ಪಾಠವಾಗಿ….
- ಶಿವದೇವಿ ಅವನೀಶಚಂದ್ರ