ಹೊನ್ನಾವರ ಸಮೀಪದ ಅಣ್ಣುಹಿತ್ಲು ಎಂಬ ಮೂಲೆ ಊರಲ್ಲಿ ಹುಟ್ಟಿದ ಸ್ವರವೊಂದು, ಮುಂದೆ ಬೆಂಗಳೂರಿನಲ್ಲಿ ರಾಗವಾಗಿ, ಮುಂಬೈಯಲ್ಲಿ ನಾದವಾಗಿ, ಭಾವವಾಗಿ ಅರಳಿ, ಉನ್ನತ ಮಟ್ಟದಲ್ಲಿ ಸಂಗೀತದ ಸ್ಥಾಯಿಯಾಗಿ ಆವಿರ್ಭವಿಸಿದ ಕಥೆಯಿದು. ಇದರ ಕಥಾ ನಾಯಕ ಧನಂಜಯ ಹೆಗಡೆ. ಅವರ ಸಾಧನೆಯ ಕುರಿತು ಪತ್ರಕರ್ತರಾದ ರಾಜು ಅಡಕಳ್ಳಿ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಪೂರ್ತಿಯಾಗಿ ಓದಿ…
ಇವರು ನಾಡಿನ ಸಂಗೀತ ಲೋಕದಲ್ಲಿ ಸಪ್ತಕ ಎಂಬ ಸಂಘಟನೆ ಹುಟ್ಟು ಹಾಕಿದ ಅಣ್ಣುಹಿತ್ಲುವಿನ ಕಲಾವಿದ ದಂಪತಿ ಜಿ.ಎಸ್. ಹೆಗಡೆ ಮತ್ತು ಗೀತಾ ಹೆಗಡೆಯವರ ಸುಪುತ್ರ. ಈ ದಂಪತಿ ಯಾವುದೇ ಸಿಂಪತಿ ಇಲ್ಲದೇ ಸಂಗೀತದ ಗಟ್ಟಿ ಪರಂಪರೆಯ ಕೊಂಡಿ ಕಟ್ಟಿದ್ದರಿಂದ ಪುತ್ರ ಧನಂಜಯ ಕೂಡ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಗೀತಗಾರರಾಗಲು ಸಾಧ್ಯವಾಗಿದೆ. ಅಪ್ಪ ಅಮ್ಮ ಮತ್ತು ಗುರುವರ್ಯರ ಒತ್ತಾಸೆಯಂತೆ ಸಂಗೀತವನ್ನೇ ತನ್ನ ಪ್ರಾಣಾಯಾಮ ಮತ್ತು ಪ್ರಾಣಯಾನವನ್ನಾಗಿ ಮಾಡಿಕೊಂಡಿರುವುದರಿಂದ ಧನಂಜಯನವರಿಗೆ ಸಂಗೀತ ಸರಸ್ವತಿ ಒಲಿದಿದ್ದಾಳೆ. ಹರಸಿದ್ದಾಳೆ. ನಾಲಿಗೆಯ ಮೇಲೆ ನಲಿಯುತ್ತಿದ್ದಾಳೆ.

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬುದು ಧನಂಜಯನವರ ಪಾಲಿಗಂತೂ ನೂರಕ್ಕೆ ನೂರು ಸತ್ಯ. ಇವರ ಅಮ್ಮ ಗೀತಕ್ಕ ಮನೆಯಲ್ಲಿ ಸಂಗೀತ ಶಾಲೆ ನಡೆಸುತ್ತಿರುವವರು. ಆದರೆ ಪ್ರಾರಂಭದಲ್ಲಿ ಪ್ರಸಿದ್ಧ ಸಂಗೀತಗಾರ ವೆಂಕಟೇಶ ಕುಮಾರ್ ಅವರಲ್ಲಿ ಕೆಲಕಾಲ ಶಿಷ್ಯರಾಗಿ ಧನಂಜಯ ಸೇರಿಕೊಂಡಾಗ ಅವರಿಗೆ ನಾಲ್ಕು ವರ್ಷವಾಗಿತ್ತಷ್ಟೇ. ಬಾಯಲ್ಲಿ ಪೆಪ್ಪರಮೆಂಟನ್ನು ಚಪ್ಪರಿಸುವ ಬಾಲ್ಯದಲ್ಲಿಯೇ ಇವರು ಸರಿಯಾಗಿಯೇ ಸರಿಗಮ ಕಲಿತಾಗಿತ್ತು.
ತದನಂತರ ಪಂಡಿತ್ ವಿನಾಯಕ ತೊರವಿ ಅವರಲ್ಲಿ ಇವರದ್ದು ದೀರ್ಘಕಾಲದ ಶಿಷ್ಯವೃತ್ತಿ. ಈಗ ಫ್ಯೂಜನ್, ಮಿಕ್ಸಿಂಗ್ ಹೆಸರಿನಲ್ಲಿ ಸಂಗೀತದ ವಾತಾವರಣ “ನಾತಾವರಣ”ವಾಗಿ ಕಾಡುತ್ತಿದ್ದರೂ ಧನಂಜಯ ಇವುಗಳಿಗೆಲ್ಲ ಮರುಳಾಗದೇ, ಯಾವುದೇ ರಾಜಿ ಇಲ್ಲದ, ಭಾಜಿ ಬೆರೆಸದ ಶುದ್ಧ ಸಂಗೀತದ ದೀರ್ಘ ಸಾಂಗತ್ಯ ಇಟ್ಟುಕೊಂಡಂಥವರು. ತಮ್ಮ ಸಂಗೀತ ಸುಗಂಧಕ್ಕೆ ಕಿಂಚಿತ್ತೂ ದುರ್ಗಂಧ ಅಂಟದಂತೆ ನೋಡಿಕೊಂಡ ಅಪರೂಪದ ಕಲಾವಿದರು. ಹೀಗಾಗಿ ಧನಂಜಯನವರ ನುಡಿ ಸಾಣಿಕೆ ತಂಪು ಇಂಪಿನ ದನಿ ಸೂಸುವ ಬೀಸಣಿಕೆ ಇದ್ದಂತೆ.
ಉತ್ತಮ ಗುರು ಶಿಷ್ಯರನ್ನು ಸೃಷ್ಟಿಸುವುದಿಲ್ಲವಂತೆ. ಮತ್ತೊಬ್ಬ ಗುರುವನ್ನೇ ಸೃಷ್ಟಿಸುತ್ತಾನಂತೆ ಎಂಬ ಮಾತಿದೆ. ತೊರವಿ ಸಾಹೇಬರ ಪಾಲಿಗಂತೂ ಇದು ನೂರಕ್ಕೆ ನೂರರಷ್ಟು ನಿಜ. ಏಕೆಂದರೆ ಇವರ ಪಟ್ಟದ ಶಿಷ್ಯ ಧನಂಜಯ ಈಗ ಬೇರೆಯವರಿಗೂ ಸಂಗೀತ ಕಲಿಸುವ ಪ್ರಭುದ್ಧ ಗುರು. ಇವರ ಕಯ್ಕೆಳಗೆ, ಬಾಯ್ಕೆಳಗೆ ಕಲಿತ ಅನೇಕರು ಈಗ ಒಳ್ಳೆಯ ಸಂಗೀತಗಾರರಾಗಿದ್ದಾರೆ.
ಕೆಲವರಂತೆ ಇವರು ಕುತ್ತಿಗೆ ತುಂಬಾ, ಅರ್ಧ ಬೆನ್ನಿನವರೆಗೆ ಗುಂಗುರುಗೂದಲು ಚೆಲ್ಲುತ್ತಾ, ಸ್ಟೈಲಿನಲ್ಲೇ ಹಿಕ್ಮತ್ ಮಾಡುವ ಗಾಯಕರಲ್ಲ. ತಾನು ತನ್ಮಯತೆಯಿಂದ, ಸ-ರಾಗವಾಗಿ ಹಾಡುತ್ತಾ, ಕೇಳುಗರನ್ನು ತನ್ನಯತೆಯಲ್ಲಿಯೇ ಮಿಂದೇಳಿಸುವ ಸಂಗೀತ ಕಲೆಯಲ್ಲಿ ಮಾತ್ರ ಇವರು ಕರತಲಾಮಲಕ. ಇದು ಸುಸ್ವರದ ಪುಳಕ . ಇವರ ಸಂಗೀತ ರಸಧಾರೆ ಸವಿಯುವುದೆಂದರೆ, ಆಪಾದ ಮಸ್ತಕದವರೆಗೂ ವಿಶಿಷ್ಟ ಅನುಭೂತಿ.
ಚೌತಿ ಹಬ್ಬದಲ್ಲಿ ಜೋರಾಗಿ ಜವಟೆ ಬಡಿಯುವಂತೆ ತಾನ್ ಹಾಕಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಿಂತ, ವಿಲಂಬಿತದಲ್ಲಿಯೂ ಕೇಳುಗರು ವಾವ್ ಎನ್ನುವಂತೆ ಸಂಗೀತ ಪ್ರಸ್ತಾರ ಹಾಕುವುದು ಇವರ ವಿಶೇಷ. ತಾಳಿದವನು ಬಾಳಿಯಾನು ಎನ್ನುವಂತೆ, ತಾಳ ಕಲಿತವನು ಸಂಗೀತ ಸಾಧನೆ ಮಾಡಿಯಾನು ಎಂಬುದನ್ನು ಈ ಧನಂಜಯ ಸಾಬೀತುಪಡಿಸಿದ್ದಾರೆ. ಬೇರೆಬೇರೆ ರಾಗ,
ತಾಳ ಸಂಯೋಜನೆಯಲ್ಲಿ ಇವರು ಸದ್ಗುರು ಅಲ್ಲ, ಆದರೆ ಶುದ್ಗುರು ಹೌದು.

ಕಿರಾನಾ ಘರಾನಾ ಮತ್ತು ಗ್ವಾಲಿಯರ್ ಘರಾನಾ ಇವೆರಡರ ಮಿಶ್ರ ಮಾಧುರ್ಯವನ್ನೂ ತಮ್ಮ ಸಂಗೀತದ ತಪಸ್ಸಿನಲ್ಲಿ ಸಿದ್ದಿಸಿಕೊಂಡವರು. ಇದರಿಂದಾಗಿ ಇವರು ನಮ್ಮ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಲ್ಲೊಂದಾದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೂ ಭಾಜನರಾಗುವುದು ಸಾಧ್ಯವಾಗಿದೆ. ರಾಜಗುರು ರಾಷ್ಟ್ರೀಯ ಯುವ ಪುರಸ್ಕಾರ, ಮ್ಯೂಸಿಕ್ ಅಕಾಡೆಮಿ ಪ್ರತಿಭಾ ಪುರಸ್ಕಾರ, ಫೇಲೋಶಿಪ್ ಮುಂತಾದ ಗೌರವಗಳೂ ಇವರ ಸಂಗೀತ ಸಾಧನೆಯ ಮುಡಿಗೇರಿವೆ.
ಬಾಲ್ಯ ಮತ್ತು ಯೌವನದಲ್ಲಿ ಧನಂಜಯ ಸಂಗೀತ ಶಿಕ್ಷಣದ ಜೊತೆ ಜೊತೆಗೆ ಕಾಲೇಜು ಶಿಕ್ಷಣವನ್ನು ಅಷ್ಟೇ ಮುತುವರ್ಜಿಯಿಂದ ಮುಗಿಸಿ ಎಂ.ಕಾಂ. ಡಿಗ್ರಿ ಸಂಪಾದಿಸಿದರು. ಹೀಗಾಗಿ ಕರ್ನಾಟಕ ಬ್ಯಾಂಕಿನಲ್ಲಿ ಇವರಿಗೆ ಉದ್ಯೋಗ ಸುಲಭವಾಗಿ ಸಿಕ್ಕಿದ್ದರಿಂದ ಇವರು ಮುಂಬೈಗೆ ಹೋಗಿ ನೆಲೆಸಬೇಕಾಯಿತು. ಅಲ್ಲಿ ಬ್ಯಾಂಕಿನಲ್ಲಿ ಇವರದ್ದು ಲಕ್ಷ್ಮಿಯ ( ದುಡ್ಡಿನ ) ಬಂಧವಾದರೆ, ಮನೆಯಲ್ಲಿ ಸಂಗೀತ ಸರಸ್ವತಿಯ ಅನುಬಂಧ.
ವೈದ್ಯ ಹೇಳಿದ್ದೂ ಹಾಲು ಅನ್ನ. ರೋಗಿ ಬಯಸಿದ್ದೂ ಇದನ್ನ… ಎಂಬ ಗಾದೆಯಂತೆ ಮುಂಬೈ ವಾಸ ಇವರ ಸಂಗೀತದ ಸಹವಾಸಕ್ಕೆ ಮತ್ತಷ್ಟು ವರದಾನವಾಯಿತು. ಕಾರಣ ಹಿಂದುಸ್ತಾನಿ ಸಂಗೀತಕ್ಕೆ ಮುಂಬೈ ಮತ್ತು ಪುಣೆ ಎಂದರೆ ರಾಜಧಾನಿಗಳಿದ್ದಂತೆ. ಮುಂಬೈಯ ಬೊರಿವಲಿ ಬಡಾವಣೆಯಲ್ಲಿರುವ ಇವರ ಮನೆ ಸಂಗೀತ ಶಾಲೆಯಾಯಿತು. ಇದು ಹೇಗೆಂದರೆ ಇವರ ಇಡೀ ಸಂಸಾರ ಸಂಗೀತದ ಸುಖ ಸಾಗರ.
ಇವರ ಪತ್ನಿ ಪ್ರತಿಮಾ ಕೂಡ ಸಂಗೀತ ಶಿಕ್ಷಕಿ. ಈ ದಂಪತಿಯ ಪುತ್ರ ಸುಯೋಗ್ ಎಂ.ಬಿ. ಬಿ. ಎಸ್. ಓದುತ್ತಿದ್ದರೂ ತಬಲಾ ಕಲಿಕೆಯನ್ನು ಮೈಗೂಡಿಸಿಕೊಂಡು ಅಪ್ಪ, ಅಮ್ಮನಿಗೆ ಸಾಥ್ ನೀಡುವಂಥವನು. ಹೀಗೆ ಇವರ ಮುಂಬೈ ಮನೆಯೇ ಪುಟ್ಟ ಸಂಗೀತ ಸಾಮ್ರಾಜ್ಯವಾಗುತ್ತಿದ್ದಂತೆ, ಇವರಿಗೆ ಸಂಗೀತ ಕಲಿಯುವ ಅನೇಕ ಶಿಷ್ಯರು ಒದಗಿಬಂದರು.
ಇದರಿಂದಾಗಿ ಧನಂಜಯ ದಂಪತಿ ಕೂಡ ಈಗ ಸಂಗೀತ ಕಲಾವಿದರಷ್ಟೇ ಅಲ್ಲ, ಸಂಗೀತ ಕಲಿಸುವ ಮೇಷ್ಟ್ರು ಆಗಿದ್ದಾರೆ. ‘ ಹಾಡು ಹರಡಬೇಕು – ಮಾತು ಮರೀಬೇಕು’ ಎಂದು ಹುಕ್ಕೇರಿ
ಬಾಳಪ್ಪಣ್ಣನವರು ಹೇಳುತ್ತಿದ್ದದು ಈ ಧನಂಜಯನವರ ಕುಟುಂಬಕ್ಕೇ ಅನ್ವಯಿಸಿದಂತಿದೆ. ಕಾರಣ ಇವರ ಇಡೀ ಖಾನ್ ದಾನ್ ಎಲ್ಲವೂ ಸಂಗೀತಮಯವೇ ಆಗಿ, ಹಾಡನ್ನು ಹರಡುವ, ಅಷ್ಟೇ ಏಕೆ ಹಾಡಿನಿಂದಲೇ ಹರಸುವ ಮೋಡಿಗಾರರಿಂದ ತುಂಬಿದೆ.
ಒಂದೆಡೆ ಮುಂಬೈಯಲ್ಲಿ ಧನಂಜಯನವರ ಸಂಗೀತದ ಬೇರು, ತೇರು ಹೆಚ್ಚುತ್ತಾ ಹೋದಂತೆ ಇವರ ಸಂಗೀತ ಕಚೇರಿಗಳೂ ಜಾಸ್ತಿಯಾಗಿ ಜನಪ್ರಿಯತೆ ಮತ್ತಷ್ಟು ಹರಿದು ಬರಲಾರಂಭಿಸಿತು. ಅಮೆರಿಕ, ಆಸ್ಟ್ರೇಲಿಯಾ, ಸಿಂಗಪುರ, ಥೈಲ್ಯಾಂಡು ಹೀಗೆ ವಿವಿಧ ದೇಶಗಳಿಗೆ ಇವರು ತಾಳ, ತಂಬೂರಿ ಹಿಡಿದುಕೊಂಡು ತಿಂಗಳಾನುಗಟ್ಟಲೇ ಸಂಗೀತ ಸವಾರಿ ಮಾಡಬೇಕಾಯಿತು.

ಇತ್ತ ಬ್ಯಾಂಕಿನಲ್ಲಿಯೂ ಇವರಿಗೆ ಪ್ರಮೋಷನ್ ಬಂದು ಮ್ಯಾನೇಜರ್ ಆಗಬೇಕಾಯಿತು. ಸಂಗೀತ ಮತ್ತು ಬ್ಯಾಂಕು ಇವೆರಡೂ ನಿಭಾಯಿಸುವುದಕ್ಕೆ ಸಮಯವೇ ಸಾಲದಾಗಿದ್ದರಿಂದ, ಇವೆರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದು ಇವರಿಗೆ ಅನಿವಾರ್ಯವಾಯಿತು. ಆಗ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಸಂಗೀತ ರಥದ ಪೂರ್ಣಾವಧಿ ಸಾರಥಿಯಾಗಿಬಿಟ್ಟರು. ಧನಂಜಯನವರ ಮೈ ಕೈ ಮತ್ತು ಮನಸ್ಸಿನ ನೋವಿಗೆಲ್ಲ ಸಂಗೀತವೇ ಮುಲಾಮು. ಹೀಗಾಗಿ ಇವರ ಸಂಗೀತ ಕಾಳಜಿಗೆ ನಾವೂ ಹೊಡೆಯೋಣ ಒಂದು ಸಲಾಮು!
ಧನಂಜಯನವರ ಸಂಗೀತವೆಂದರೆ ಅದು ಸ್ವರ ಸಿದ್ದಿಯ, ಭಾಷಾ ಶುದ್ಧಿಯ ಪ್ರತೀಕ. ಸಮರ್ಥ ಗತಿಯಲ್ಲಿ ರಾಗದ ಆರೋಹಣ, ಅವರೋಹಣಗಳ ಮಾಂತ್ರಿಕತೆಯ ದರ್ಶನ.
ನಿರ್ಮಲವಾದ, ನಿರ್ಮತ್ಸರದ ಮನಸುಳ್ಳವರಿಗೆ ಆನಂದದ ಗ್ರಂಥಿಗಳಿರುತ್ತವೆ ಎಂದು ಪು.ತಿ.ನ. ಹೇಳುತ್ತಾರೆ. ಒಂದು ವೇಳೆ ಇಂಥ ಆನಂದ ಗ್ರಂಥಿಗಳು ಇಲ್ಲದಿರುವ ಮಂದಿ ಧನಂಜಯ ಹೆಗಡೆಯವರ ಸಂಗೀತ ಕೇಳಿದರೆ ಅವರಲ್ಲಿಯೂ ಇಂಥ ಗ್ರಂಥಿಗಳು ತಂತಾನೆ ಕುಡಿಯೊಡೆಯಬಹುದೇನೋ. ಕಾರಣ ಪಂಡಿತರಿಗೂ, ಪಾಮರರಿಗೂ ಸೇರಿದಂತೆ ಎಲ್ಲರನ್ನೂ ಆನಂದ ತುಂದಿಲರನ್ನಾಗಿಸುವ ಸಾಮರ್ಥ್ಯ ಇವರ ಸಂಗೀತಕ್ಕಿದೆ.
ಸಂಗೀತಗಾರರಿಗೆ “ಬಾಯಿಯೇ ಆಯಿ” ಎಂಬಂತೆ ಧನಂಜಯನವರು ಬೊಂಬಾಯಿಗೆ ಹೋದರೂ ಅವರಿಗೆ ಬಾಯಿಯೇ ದೊಡ್ಡ ಆಸ್ತಿ. ಧನಂಜಯನವರು ರಾಗಗಳ ಆರಾಧನೆಯಲ್ಲಿದ್ದಾಗ ಒಂದು ಶಬ್ದದಿಂದ ಮತ್ತೊಂದು ಶಬ್ದಕ್ಕೆ ಜಿಗಿಯುವಾಗ ಕೆಲವೊಮ್ಮೆ ಒಂದು ರೀತಿಯ ನಿರ್ವಾತವನ್ನೋ, ಮೌನವನ್ನೋ ಬೇಕಂತಲೇ ಸೃಜಿಸುತ್ತಾರೆ. ಇವರ ಈ ಕಲಾಾವಂತಿಕೆಯನ್ನು ಗಮನಿಸುವಾಗ, ಇಂಗ್ಲಿಷ್ ಕವಿ ಜಾನ್ ಕೀಟ್ಸ್ ಹೇಳಿದ ಈ ಸಾಲು ನೆನಪಿಗೆ ಬರುತ್ತದೆ. ‘ ಹರ್ಡ್ ಮೆಲೋಡಿಸ್ ಆರ್ ಸ್ವೀಟ್.. ಬಟ್
ದೋಸ್ ಅನ್ ಹರ್ಡ್ ಆರ್ ಸ್ವೀಟರ್….
ಸಂಗೀತದ ಕುರಿತು ಬರೆಯುವಾಗ ಖ್ಯಾತ ವಿಮರ್ಶಕ ಎಸ್. ದಿವಾಕರ್ ಬರೆದ ಈ ಸಾಲು ನೆನಪಾಗುತ್ತದೆ : ಸೂರ್ಯಕಾಂತಿ ಸುಂದರ ಹೂವು. ಹೌದು. ಆದರೆ ನನಗೇಕೋ ಅದನ್ನು ಬಿಸಿಲಿನಲ್ಲಿ ನೋಡಿದಾಗಲೆಲ್ಲ ವಿಷಾದ ರಾಗವೊಂದನ್ನು ಕೇಳಿದಂತಾಗುತ್ತದೆ. ಕರ್ನಾಟಕ ಸಂಗೀತದಲ್ಲಿ ಸೂರ್ಯಕಾಂತ ಎಂಬುದು 17 ನೆಯ ಮೇಳಕರ್ತ ರಾಗ. ಇದು ಶೋಕರಸ ಪ್ರಧಾನವಾದ ಸಾರ್ವಕಾಲಿಕ ರಾಗವಂತೆ. ಶುದ್ಧ ರಿಷಭ, ಕಾಕಲಿ ನಿಷಾದ ಸ್ವರಗಳಿರುವ ಈ ರಾಗದಲ್ಲಿ, ಬಾಲಮುರಳಿ ಕೃಷ್ಣ ರಚಿಸಿರುವ ‘ಕರುಣಿಂಚರ ಕರಿವರದಾ ‘ ಎಂಬ ಕೃತಿಯಿದೆ. ಒಮ್ಮೆ ಅವರು ರಾಗಾಲಾಪನೆ ಮಾಡಿ ಈ ಕೃತಿ ಹಾಡಿದಾಗ, ನಾನು ಸೂರ್ಯಕಾಂತಿಯ ಒಂದು ಹೊಲದಲ್ಲಿರುವಂತೆ ನನಗೆ ಭಾಸವಾಗಿದ್ದುಂಟು.
ಧನಂಜಯನವರೂ ರಾಗ ಪ್ರಸ್ತುತಿಯಲ್ಲಿ ಪ್ರತಿ ಬಾರಿಯೂ ಹೊಸತನದ ಕಾವು ಕೊಟ್ಟು, ಕೇಳುಗರಲ್ಲಿ ಅಮೂರ್ತ ಕಲ್ಪನೆಗಳ ಭಿತ್ತಿ ಮೂಡಿಸುವುದಕ್ಕೆ ಪ್ರಯತ್ನಿಸುವುದರಿಂದ ಅವರು ವಿಭಿನ್ನ ಸಂಗೀತಗಾರರಾಗಿ ಬಂಧುರತೆ ಸೃಷ್ಟಿಸುತ್ತಾರೆ.
ಹೀಗಾಗಿ ಇವರು ಯಮನ್ ರಾಗ ಹಾಡಿದ್ದನ್ನು ಕೇಳಿದರೆ ಸಾಕ್ಷಾತ್ ಆ ಯಮನೇ ‘ ಚಾನ್ ಗಾಯಿಲೆ’ ಎಂದು ಮರಾಠಿಯಲ್ಲಿ ಹೊಗಳುತ್ತಾ ತಲೆದೂಗಬಹುದೇನೋ. ಧನಂಜಯನವರ ಆಲಾಪನೆಯಲ್ಲಿ ಪೂರಿಯ ರಾಗ ಕೇಳಿದವರ ಮನಸ್ಸು ಕೂಡ ಗೋಧಿಪುರಿಯಂತೆ ಉಬ್ಬಿ ಹಿಗ್ಗಬಹುದೇನೋ.
ಪ್ರಯೋಗಶೀಲತೆ ಇವರ ಹಾಡುಗಾರಿಕೆಯ ಮತ್ತೊಂದು ಚುಂಬಕ ಶಕ್ತಿ. ತರಾನಾ ಆಗಲೀ, ಬಂದಿಶ್ ಆಗಲಿ.. ತಮ್ಮ ಗಾಯನತನಕ್ಕೆ ಅವುಗಳನ್ನು ಸರಾಗವಾಗಿ ಒಗ್ಗಿಸಿ, ಬಗ್ಗಿಸಿಕೊಳ್ಳುವುದರಲ್ಲಿ ಇವರು ಸಿದ್ದ ಹಸ್ತರು. ನಮ್ಮಲ್ಲಿಯ ದಾಸ ಸಾಹಿತ್ಯ ಮತ್ತು ಮಹಾರಾಷ್ಟ್ರದ ಸಂತ ಸಾಹಿತ್ಯ ಇವೆರಡನ್ನೂ ಸಮೀಕರಿಸಿಕೊಂಡ ಭಕ್ತಿ ಪ್ರಧಾನ ಸಂಗೀತವನ್ನು
ಕೇಳುಗರಿಗೆ ಇವರು ಉಣಬಡಿಸುತ್ತಾ, ಮರಾಠಿ ಮಂದಿಗೂ ಇವರು ಮಸ್ತಾಗಿ ಮೋಡಿ ಮಾಡಿದ್ದಾರೆ.
ಸಂಗೀತ ಕಮ್ಮಟ, ಕಾರ್ಯಾಗಾರ, ತರಬೇತಿ ಶಿಬಿರಗಳಲ್ಲಿ ಮಾರ್ಗದರ್ಶಕರಾಗಿ ದಿನ ಬೆಳಗಾದರೆ ರಾಜಸ್ಥಾನ, ಹೈದರಾಬಾದು, ಮಧ್ಯಪ್ರದೇಶ ಎನ್ನುತ್ತಾ ತಾನಪುರ ಎತ್ತಿಕೊಂಡು ಸಂಗೀತ ಸಂತನಂತೆ ಓಡಾಡುವುದು ಇವರ ಪ್ರೀತಿಯ ಹವ್ಯಾಸ.
ದೇಶದ ನಾನಾ ಕಡೆ ಕೊಟ್ಟ ಸಂಗೀತ ಕಾರ್ಯಕ್ರಮಗಳಿಗೆ ಇವರು ಲೆಕ್ಕವಿಟ್ಟಿಲ್ಲ. ಸಂಗೀತವೆನ್ನುವುದು ಶಬ್ದಕೋಶವಿಲ್ಲದ ಒಂದು ದಿವ್ಯ ಭಾಷೆ. ಹೀಗಾಗಿ ಶ್ರಾವಕನಾದವನು ಸಂಗೀತದ ಸಂಕೇತಗಳನ್ನು ತನ್ನ ಭಾವನೆಗಳ ಬೆಳಕಿನಲ್ಲಿಯೇ ಅರ್ಥೈಸಿಕೊಳ್ಳಬೇಕಲ್ಲವೇ. ಈ ಹಿನ್ನೆಲೆಯಲ್ಲಿ ಧನಂಜಯನವರು ಕೇಳುಗರ ಮನಸ್ಸೆಂಬ ಹೊಲದಲ್ಲಿ ತಮ್ಮ ಇನಿ ದನಿಯಿಂದ ಭಾವನೆಗಳನ್ನು ಬಿತ್ತುತ್ತಾ ಸಂಗೀತದ ಹುಲುಸಾದ ಪೈರನ್ನು ಬೆಳೆಯುತ್ತಾರೆ.
ಧನಂಜಯ ಕೇವಲ ಸಂಗೀತಗಾರರಲ್ಲ. ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಪ್ರತಿಮ ಸಂಘಟಕರೂ ಹೌದು. ಈ ವಿಶಿಷ್ಟ ಗುಣವೂ ಧನಂಜಯನವರಿಗೆ ಅವರ ತಂದೆ ತಾಯಿಯಿಂದ ಬಂದಿದ್ದು. ಅವರು ಸ್ಥಾಪಿಸಿದ ಸಪ್ತಕ ಸಾಂಸ್ಕೃತಿಕ ಸಂಘಟನೆಗೆ ಈಗ 20ನೇ ವರ್ಷ.
ಒಂದು ಸಾವಿರದಷ್ಟು ಉಚಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇಶದಾದ್ಯಂತ ಏರ್ಪಡಿಸಿದ ಹೆಗ್ಗಳಿಕೆ ಇವರದ್ದು. ನಾಡಿದ್ದು 17ರಂದು ಬೆಂಗಳೂರಿನಲ್ಲಿ ಸಪ್ತಕದ ವಿಶೇಷ ಸಂಗೀತ ಹಬ್ಬದ ಸಂಭ್ರಮಾಚರಣೆ. ಈ ಸಂಸ್ಕೃತಿ ಸಂಘಟನೆ ಕಳೆ ಕಟ್ಟುವುದರಲ್ಲಿ, ಬೆಳೆ ತೆಗೆಯುವುದರಲ್ಲಿ ಧನಂಜಯನವರ ಕೊಡುಗೆಯೂ ಅನನ್ಯ. ಮುಂದಿನ ಸಾರಥಿಯಾಗಿ ಈ ಸಪ್ತಕದ ರಥವನ್ನು ಮುನ್ನಡೆಸುವ ಅನುಭವ, ಆಸಕ್ತಿಯೂ ಇವರಲ್ಲಿದೆ.
ಕೊನೆಗೊಂದು ಜೋಕ್: ಬಬ್ರುವಾಹನ ಚಿತ್ರದಲ್ಲಿ ಮಧ್ಯಮ ಪಾಂಡವನಾದ ಆ ಧನಂಜಯ ‘ಆರಾಧಿಸುವೆ ಮದನಾರಿ’:.. ಎನ್ನುತ್ತಾ ನಾರಿಮಣಿಯನ್ನು ಒಲಿಸಿಕೊಳ್ಳುವುದನ್ನು ನೋಡಬಹುದು. ಆದರೆ ಈ ಧನಂಜಯ ಹೆಗಡೆ ಹಾಗಲ್ಲ. ಇವರದ್ದು ಚಿತ್ರಗೀತೆ, ವಿಚಿತ್ರ ಗೀತೆಗಳ ಧಾಟಿ ಅಲ್ಲ. ಏನಿದ್ದರೂ ಇವರದ್ದು ಪರಿಶುದ್ಧ ಶಾಸ್ತ್ರೀಯ ಸಂಗೀತದ ನಾಟಿ!
- ರಾಜು ಅಡಕಳ್ಳಿ – ಪತ್ರಕರ್ತರು, ಲೇಖಕರು, ಬೆಂಗಳೂರು.
