ಜನಗಣತಿಯಲ್ಲಿ ಲಿವಿನ್ ಸಂಬಂಧ ಹೇಗೆ ಪರಿಗಣಿಸುತ್ತಾರೆ?

ಲಿವಿನ್ ಸಂಬಂಧದಲ್ಲಿ ಇರುವವರು ಜನಗಣತಿಯಲ್ಲಿ ಮದುವೆಯಾದ ದಂಪತಿಗಳು ಎಂದು ಘೋಷಿಸಿಕೊಂಡರೆ ಅದು ಕೇವಲ ಸಾಮಾಜಿಕ ಅಂಕಿಅಂಶಕ್ಕಾಗಿಯೇ ಹೊರತು ಅಂತಹ ಹೇಳಿಕೆಗಳಿಂದ ಆ ಸಂಬಂಧಕ್ಕೆ ಯಾವುದೇ ರೀತಿಯ ಕಾನೂನು ಮಾನ್ಯತೆ ಸಿಗುವುದಿಲ್ಲ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಜನಗಣತಿಯಲ್ಲಿ ಲಿವಿನ್ ಸಂಬಂಧದದ ಕುರಿತು ವಕೀಲರಾದ ಅಂಜಲಿ ರಾಮಣ್ಣ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಗಣತಿ ಆರಂಭವಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಮೊದಲ ಹಂತ ನಂತರ ನಿಯೋಜಿತ ಅಧಿಕಾರಿಗಳ ಭೇಟಿಯಲ್ಲಿ ಎರಡನೆಯ ಹಾಗೂ ಕೊನೆಯ ಹಂತದ ಜನಗಣತಿ ನಡೆಯಲಿದೆ ಎಂದು ಸರ್ಕಾರ ಹೇಳಿಯಾಗಿದೆ. ಈ ಬಾರಿ ಮತ್ತೊಂದು ವಿಷಯಕ್ಕೆ ನಾಂದಿ ಹಾಕಿದೆ ಈ ಜನಗಣತಿ. ಲಿವಿನ್ ಸಂಬಂಧದಲ್ಲಿ ವಾಸಿಸುತ್ತಿರುವ ಜೋಡಿಯು ಜನಗಣತಿಯ ಅರ್ಜಿಯಲ್ಲಿ ತಮ್ಮ ಸ್ಥಾನಮಾನವನ್ನು ಮದುವೆಯಾದ ದಂಪತಿಗಳು ಎಂದು ಘೋಷಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇಂತಹ ಸಂಬಂಧವನ್ನು ಘೋಷಿಸುವಾಗ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯ ಇರುವುದಿಲ್ಲ ಎಂದೂ ಹೇಳಲಾಗಿದೆ.

ವ್ಯಕ್ತಿಗಳ ಸಂಬಂಧಗಳ ಮಾದರಿಯ ಬಗ್ಗೆ ವಿವರ ಸಿಕ್ಕರೆ ಸಾಮಾಜಿಕ ಅಭಿವೃದ್ಧಿಯ ಕಾರ್ಯಕ್ರಮಗಳನ್ನು, ಯೋಜನೆಗಳನ್ನೂ ಸರ್ಕಾರ ರೂಪಿಸಲು ಅನುಕೂಲವಾಗುತ್ತದೆ ಮತ್ತು ಹೆಚ್ಚು ಕರಾರುವಕ್ಕಾಗಿ ಜಾರಿಗೆ ತರಲು ಸಾಧ್ಯವಾಗುತ್ತದೆ. ಹಾಗೆಯೇ ಮುಖ್ಯವಾಗಿ ಶಹರಗಳಲ್ಲಿ ಸಂಬಂಧಗಳ ಸ್ವರೂಪ ಬದಲಾಗುತ್ತಿರುವುದರ ವೇಗ ಮತ್ತು ಬಗೆಯನ್ನು ಸರ್ಕಾರ ಅರಿತುಕೊಂಡರೆ ಸಮಾಜದ ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿದಂತೆ ಆಗುತ್ತದೆ ಎನ್ನುವುದು ಈ ಬಾರಿಯ ಜನಗಣತಿಯಲ್ಲಿ ಲಿವಿನ್ ಸಂಬಂಧವನ್ನು ಸೇರಿಸಿರುವ ಉದ್ದೇಶವಾಗಿದೆ.

ಜನಗಣತಿಯ ಅರ್ಜಿಯಲ್ಲಿ Stable ಲಿವಿನ್ ಸಂಬಂಧವಿದ್ದರೆ, ಅದನ್ನು ವಿವಾಹವಾಗಿರುವ ದಂಪತಿಗಳು ಎಂದು ಪರಿಗಣಿಸಬಹುದು ಎಂದು ಹೇಳಲಾಗಿದೆ. ನ್ಯಾಯಾಲಯಗಳು ನೀಡಿರುವ ವ್ಯಾಖ್ಯಾನದ ಪ್ರಕಾರ ಲಿವಿನ್ ಸಂಬಂಧದ ಮೂಲ ಗುಣಲಕ್ಷಣಗಳಲ್ಲಿ ಒಂದು ಎಂದರೆ ಆ ಸಂಬಂಧದ ಕಾಲಾವಧಿ ಮತ್ತು ಸ್ಥಿರತೆ. ಆದರೆ ಎಲ್ಲಿಯೂ ಆ ದೀರ್ಘ ಕಾಲಾವಧಿಯನ್ನು ಎಷ್ಟು ಕಾಲ ಎಂದು ನಿಖರವಾಗಿ ಹೇಳಲಾಗಿಲ್ಲ. ಹೀಗಿರುವಾಗ ಜನಗಣತಿಯಲ್ಲಿ ಎಷ್ಟು ಸಮಯದಿಂದ ಒಟ್ಟಿಗೆ ಇರುವವರು ತಮ್ಮನ್ನು ದಂಪತಿಗಳು ಎಂದು ಗುರುತಿಸಿಕೊಳ್ಳಬಹುದು ಎನ್ನುವ ಗೊಂದಲಕ್ಕೆ ಪರಿಹಾರ ಎಲ್ಲಿದೆ?

ನಗರಗಳಲ್ಲಿ ಸಂಬಂಧಗಳ ಬಗ್ಗೆ ಇರುವ ಮನೋಭಾವದ ಅಧ್ಯಯನವಾಗುತ್ತದೆ ಎನ್ನುವ ಉದ್ದೇಶ ಹೊಂದಿರುವ ಈ ಸೇರ್ಪಡಿಕೆ ಇದರಲ್ಲೂ ಯಶಸ್ಸು ಕಾಣಲು ಸಾಧ್ಯವಾಗುವುದು ಅನುಮಾನವೇ ಸರಿ. ನಮ್ಮ ಸಂವಿಧಾನದ ಪರಿಚ್ಛೇದ 21 ಇದರಲ್ಲಿ ನೀಡಿರುವ ಮಾರ್ಗದರ್ಶನದಂತೆ ತಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳುವುದು ಪ್ರತೀ ವಯಸ್ಕನ ಮೂಲಭೂತ ಹಕ್ಕುಎಂತಿದ್ದರೂ ಇನ್ನೂ ಸಮಾಜದ ನೈತಿಕತೆಯ ವ್ಯಾಖ್ಯಾನದಡಿಯಲ್ಲಿ ಪೂರ್ತಿ ಒಪ್ಪಿಗೆಯನ್ನು ಗಳಿಸಿಕೊಳ್ಳದೆಯೇ ಇರುವ ಈ ಸಂಬಂಧಗಳಲ್ಲಿ ಇರುವವರು ಈಗೀಗ ನಗರ ಪ್ರದೇಶಗಳ ಒತ್ತಡದಿಂದ ದೂರವಿರಲು ಪಟ್ಟಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡಲು ಹೋಗುತ್ತಿದ್ದಾರೆ. ಅಂದಮೇಲೆ ನಗರಗಳಲ್ಲಿನ, ಪ್ರಮುಖವಾಗಿ ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲಿ ಅಧ್ಯಯನಕ್ಕಾಗಿ ಎಂದು ಸರ್ಕಾರ ಹೇಳಿರುವುದನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಏಳುತ್ತದೆ.

ಲಿವಿನ್ ಸಂಬಂಧದಲ್ಲಿ ಇರುವವರು ಜನಗಣತಿಯಲ್ಲಿ ಮದುವೆಯಾದ ದಂಪತಿಗಳು ಎಂದು ಘೋಷಿಸಿಕೊಂಡರೆ ಅದು ಕೇವಲ ಸಾಮಾಜಿಕ ಅಂಕಿಅಂಶಕ್ಕಾಗಿಯೇ ಹೊರತು ಅಂತಹ ಹೇಳಿಕೆಗಳಿಂದ ಆ ಸಂಬಂಧಕ್ಕೆ ಯಾವುದೇ ರೀತಿಯ ಕಾನೂನು ಮಾನ್ಯತೆ ಸಿಗುವುದಿಲ್ಲ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಅಂದಮೇಲೆ ಎಷ್ಟು ಜನ ಮುಂದೆ ಬಂದು ಹೇಳಿಕೊಳ್ಳುತ್ತಾರೆ? ಇಂತಹ ಸಂಬಂಧದಲ್ಲಿ ಇರುವ ಬಹುಪಾಲು ಜನರು ಸಂಬಂಧವನ್ನು ಗೋಪ್ಯವಾಗಿಯೇ ಇಡಲು ಬಯಸುತ್ತಾರೆ. ತಾವೇ ಖುದ್ದು ಮುಂದೆ ಬಂದು ಅದನ್ನು ಎಲ್ಲರಿಗೂ ತಿಳಿಸಿದರೆ ಅದರಿಂದ ಮಾನಸಿಕ ಕ್ಲೇಶ ಹೆಚ್ಚುತ್ತದೆ ಎನ್ನುವುದು ಸಹಜವಾದ ಕಾರಣವಾಗಿದೆ. ಅಂತಹದರಲ್ಲಿ ಜನಗಣತಿಯಲ್ಲಿ ಈ ಸಂಬಂಧಗಳ ನಿಜಾಂಶ ತಿಳಿಯಲು ಸಾಧ್ಯವೇ? ಹಾಗೆ ಸ್ವಯಂಘೋಷಿಸಿಕೊಳ್ಳುವುದರಿಂದ ಕಾನೂನು ರೀತ್ಯ ತಮಗೆ ಯಾವುದೇ ಲಾಭವಿಲ್ಲ ಎಂದು ತಿಳಿದಿರುವಾಗ ಎಷ್ಟು ಜನ ಮುಂದೆ ಬರುತ್ತಾರೆ?

ಹೊಸದಾಗಿ ಇಂತಹ ಸಂಬಂಧದಲ್ಲಿ ಒಟ್ಟಿಗೆ ವಾಸ ಮಾಡಲು ಶುರು ಮಾಡಿರುವವರು ತಮ್ಮ ಸಂಬಂಧವನ್ನು Stable ಎಂದು ಪರಿಭಾವಿಸಿ ಜನಗಣತಿಯಲ್ಲಿ ಹೇಳಿಬಿಟ್ಟರೆ ಸಾಕೆ? ಜನಗಣತಿ ನಡೆಯುತ್ತಿರುವ ಎರಡು ಹಂತಗಳು ಪೂರ್ಣವಾಗುವ ವೇಳೆಗೆ ಅಂತಹ ಸಂಬಂಧ ಮುಗಿದು ಹೋಗಿದ್ದರೆ ಆಶ್ಚರ್ಯವಿಲ್ಲ ಅಥವಾ ಜನಗಣತಿ ನಡೆದು ಅದರ ಅಂತಿಮ ಸಂಖ್ಯಾಂಶ ಹೊರಬೀಳುವುದರಲ್ಲಿ ಬದ್ಧತೆಯ ನಿರೀಕ್ಷೆಯಿಲ್ಲದ ಇಂತಹ ಸಂಬಂಧಗಳು ಮುರಿದುಬಿದ್ದರೆ ಜನಗಣತಿಯ ಫಲಿತಾಂಶದ ಸತ್ಯಾಸತ್ಯತೆಯನ್ನು ಪರಿಗಣಿಸುವುದು ಹೇಗೆ? ಮದುವೆಗಳು ತೀರಿ ಹೋಗುತ್ತವೆ ಈ ಕಾಲದಲ್ಲಿ ಎನ್ನುವುದಾದರೆ ಮದುವೆಗಳು ಅಷ್ಟು ಬೇಗ ವಿಚ್ಛೇದನದಲ್ಲಿ ಕೊನೆಗೊಳ್ಳಲು ನ್ಯಾಯಾಲಯದಲ್ಲಿ ಸಾಧ್ಯವಿಲ್ಲ. ಆದರೆ ಲಿವಿನ್ ಸಂಬಂಧ ಕೊನೆಯಾಗಲು ನ್ಯಾಯಾಲಯ ಮಾತ್ರವಲ್ಲ ಮತ್ತ್ಯಾರ ಅನುಮತಿಯೂ ಬೇಕಾಗಿರುವುದಿಲ್ಲ.

ಯಾರೊಬ್ಬರ ಮದುವೆಯೂ ಅಸ್ತಿತ್ವದಲ್ಲಿ ಇರುವಾಗ ಆತ ಅಥವಾ ಆಕೆ ಮತ್ತೊಬ್ಬರೊಡನೆ ಲಿವಿನ್ ಸಂಬಂಧದಲ್ಲಿ ಇರುವ ಹಾಗಿಲ್ಲ ಎನ್ನುತ್ತದೆ ಕಾನೂನು. ಆದರೆ ಇದನ್ನು ಕಡೆಗಣಿಸಿ ಕೆಲವರು ದಾಂಪತ್ಯವನ್ನು ಒಂದು ಊರಲ್ಲೂ ಲಿವಿನ್ ಸಂಬಂಧವನ್ನು ಮತ್ತೊಂದು ದೂರದ ಊರಿನಲ್ಲಿಯೂ ಇಟ್ಟುಕೊಂಡಿರುತ್ತಾರೆ. ಇದನ್ನು ಜನಗಣತಿಯಲ್ಲಿ ಹೇಗೆ ಪರಿಗಣಿಸಲಾಗುತ್ತದೆ? ಸ್ವಘೋಷಣೆ ಸಾಕು ಯಾವುದೇ ದಾಖಲೆ ಕೊಡಬೇಕಿಲ್ಲ ಎನ್ನುತ್ತಿದೆ ಸರ್ಕಾರ.

ಸರ್ವೋಚ್ಚ ನ್ಯಾಯಾಲಯವು 2006ನೆ ಇಸವಿಯ ತನ್ನ ತೀರ್ಪಿನಲ್ಲಿ ಲಿವಿನ್ ಸಂಬಂಧದಲ್ಲಿ ಗಂಡು ಹೆಣ್ಣು ಮಾತ್ರ ಆಗಿರಬೇಕು ಎಂದೇನಿಲ್ಲ ಎಂದು ಹೇಳುತ್ತದೆ. ಅರ್ಥಾತ್ ಒಂದೇ ಲಿಂಗಕ್ಕೆ ಸೇರಿದ ಇಬ್ಬರು ಕೂಡ ಲಿವಿನ್ ಸಂಬಂಧದಲ್ಲಿ ಇರಬಹುದು. ಜನಗಣತಿಯಲ್ಲಿ ಅಂಥವರು ವಿವಾಹಿತ ದಂಪತಿಗಳು ಎಂದು ಗುರುತಿಸಿಕೊಳ್ಳುವ ಹಾಗಿಲ್ಲ, ಕಾರಣವೇನೆಂದರೆ ನಮ್ಮ ದೇಶದಲ್ಲಿ ಸಮಲಿಂಗಿಗಳ ಮದುವೆಗೆ ಕಾನೂನು ಅವಕಾಶ ನೀಡುವುದಿಲ್ಲ. ಹೀಗಿದ್ದಲ್ಲಿ ಲಿವಿನ್ ಸಂಬಂಧಗಳ ಬಗ್ಗೆ ಅಧ್ಯಯನ ಆಗುತ್ತದೆ ಎನ್ನುವ ಸರ್ಕಾರದ ಉದ್ದೇಶ ಈಡೇರುವುದು ಹೇಗೆ?

ಹುಡುಗಿಗೆ 18 ವರ್ಷ ವಯಸ್ಸು ಮತ್ತು ಹುಡುಗನಿಗೆ 21 ವರ್ಷ ವಯಸ್ಸು ತುಂಬುವವರೆಗೂ ಮದುವೆ ಮಾಡುವ ಅಥವಾ ಮಾಡಿಕೊಳ್ಳುವ ಹಾಗಿಲ್ಲ. ಆದರೆ 18 ವರ್ಷ ವಯಸ್ಸು ತುಂಬಿರುವ ಹುಡುಗ ಲಿವಿನ್ ಸಂಬಂಧದಲ್ಲಿ ಇರಬಹುದು ಎನ್ನುತ್ತದೆ ನ್ಯಾಯಾಲಯದ ತೀರ್ಪುಗಳು. ಇಂತಹ ಹಿನ್ನೆಲೆಯಲ್ಲಿ 21 ವರ್ಷ ತುಂಬದ ಯುವಕನೊಬ್ಬ ಇರಬಹುದಾದ ಲಿವಿನ್ ಸಂಬಂಧವನ್ನು Stable ಎನ್ನುವ ಒಂದೇ ಕಾರಣದಿಂದ ಜನಗಣತಿಯಲ್ಲಿ ಮದುವೆಯಾದ ದಂಪತಿ ಎಂದು ಗುರುತಿಸಿಕೊಂಡರೆ ಅದು ಅಪರಾಧ ಆಗುತ್ತದೆ. ಈ ಸನ್ನಿವೇಶದಲ್ಲಿ ನಿಚ್ಚಳತೆ ಏನಿದೆ? ಎಲ್ಲಿದೆ?

ಈ ಸಂಬಂಧವನ್ನು ಕಾನೂನಿನ ಚೌಕಟ್ಟಿನೊಳಗೆ ಪೂರ್ಣ ಪ್ರಮಾಣದಲ್ಲಿ ಹಿಡಿದು ಕೂರಿಸಲು ನ್ಯಾಯಾಲಯವೂ ತಿಣುಕುತ್ತಿದೆ. ಮದುವೆ ಎನ್ನುವುದನ್ನು ಭದ್ರತೆಯ ಕುರುಹಾಗಿ ಪರಿಗಣಿಸುತ್ತಿರುವ ಸಮಾಜವೂ ಲಿವಿನ್ ಸಂಬಂಧವನ್ನು ಒಪ್ಪಿಕೊಳ್ಳಲು ದ್ವಂದ್ವದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಜನಗಣತಿಯಲ್ಲಿ ಈ ಸಂಬಂಧವನ್ನು ಮದುವೆ ಎನ್ನುವುದಕ್ಕೆ ಪರ್ಯಾಯಾವಾಗಿ ಗುರುತಿಸಿಕೊಳ್ಳಲು ಅವಕಾಶ ನೀಡಿರುವುದು ಉತ್ತರವೇ ಇಲ್ಲದ ಪ್ರಶ್ನೆಗಳನ್ನು ನಮ್ಮ ಮುಂದೆ ನಿಲ್ಲಿಸಿದಂತಾಗಿದೆ.


  • ಅಂಜಲಿ ರಾಮಣ್ಣ – ವಕೀಲರು, 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading