‘ಅಪ್ಪನ ಧ್ಯಾನ’ ಕೃತಿ ಪರಿಚಯ

ಹಿರಿಯ ಲೇಖಕರಾದ ರೇವತಿ ಉಪ್ಪಿನ ಅವರ ಆತ್ಮಕಥನ ‘ಅಪ್ಪನ ಧ್ಯಾನ’ ಇಡೀ ಕೃತಿಯುದ್ದಕ್ಕೂ ಹರಡಿಕೊಂಡಿರುವ ಲೇಖಕಿಯ ಬಾಲ್ಯ, ಯೌವ್ವನ ಹಾಗೂ ಕೌಟುಂಬಿಕ ಸ್ಥಿತ್ಯಂತರಗಳ ಚಿತ್ರಣವನ್ನು ಹೊರ ಹಾಕಿದೆ. ಲೇಖಕರಾದ ದೇವಿಕಾ ಎಸ್ ರಾಜ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಪುಸ್ತಕ : ಅಪ್ಪನ ಧ್ಯಾನ
ಲೇಖಕರು : ರೇವತಿ ಉಪ್ಪಿನ
ಪ್ರಕಾರ : ಆತ್ಮಕಥನ

ಹೆಣ್ಣುಮಗಳೊಬ್ಬಳ ಬದುಕಿನ ಆಕಾಶದಂತಿರುವ ತಂದೆಯನ್ನು ಮಹಿಳೆಯ ಒಳಗಣ್ಣಿನಿಂದ ಮತ್ತು ಅವಳದೇ ಆದ ಸ್ತ್ರೀ ಸಂವೇದನೆಗಳ ಹಿನ್ನೆಲೆಯಲ್ಲಿ ಅನ್ವೇಷಿಸುವ ಅಪರೂಪದ ಆತ್ಮಕಥನಾತ್ಮಕವೇ ‘ಅಪ್ಪನ ಧ್ಯಾನ’. ಹಿರಿಯ ಲೇಖಕಿ ಶ್ರೀಮತಿ ರೇವತಿ ಉಪ್ಪಿನ ಅವರು ತಮ್ಮ ಸ್ವಂತ ಅನುಭವಗಳ ಮೂಸೆಯಿಂದ ಮೂಡಿಸಿರುವ ಈ ಆತ್ಮಕಥನಾತ್ಮಕ ಕಾದಂಬರಿಯು ಕೇವಲ ಒಂದು ಅಳಿದ ಕಾಯದ ಕಥನವಲ್ಲ, ಬದಲಾಗಿ ಕರಳು ಕುದಿಯುವ ಕೌಟುಂಬಿಕ ಬಾಂಧವ್ಯದ ನಿರಂತರ ಆರಾಧನೆಯಾಗಿದೆ. ಹಂದಿಗನೂರಿನ ಗ್ರಾಮೀಣ ಸೊಗಡಿನ ನಡುವೆ ತಂದೆ ಗುರಣ್ಣ ಮತ್ತು ತಾಯಿ ಸೋನಾಬಾಯಿ ಅವರ ಒಲುಮೆಯ ಜೇನುಗೂಡನ್ನು ಕಟ್ಟಿಕೊಡುತ್ತಾ, ಕಳಚಿಕೊಳ್ಳುತ್ತಿರುವ ಇಂದಿನ ಸಂಬಂಧಗಳ ತಲ್ಲಣಗಳಿಗೆ ಈ ಬರಹವು ಕನ್ನಡಿ ಹಿಡಿಯುತ್ತದೆ.

ಇಡೀ ಕೃತಿಯುದ್ದಕ್ಕೂ ಹರಡಿಕೊಂಡಿರುವ ಲೇಖಕಿಯ ಬಾಲ್ಯ, ಯೌವ್ವನ ಹಾಗೂ ಕೌಟುಂಬಿಕ ಸ್ಥಿತ್ಯಂತರಗಳ ಚಿತ್ರಣವು ಓದುಗರನ್ನು ಭಾವುಕತೆಯ ಅಲೆಗಳಲ್ಲಿ ತೇಲಿಸುತ್ತದೆ. ಹೆತ್ತವರ ಒಲುಮೆಯನ್ನು ಮತ್ತು ಅವರ ಅಗಲಿಕೆಯ ನಂತರ ಎದುರಾಗುವ ಒಂಟಿತನವನ್ನು ದಾಟಿಸುವ ವಿಶಿಷ್ಟ ಪ್ರಯತ್ನ ಇಲ್ಲಿ ವ್ಯಕ್ತವಾಗಿದೆ. ರೇವತಿಯವರು ತಮ್ಮ ಅಂತರಾಳದ ತಲ್ಲಣಗಳನ್ನು ಅಕ್ಷರರೂಪಕ್ಕಿಳಿಸುವ ಮೂಲಕ ಇಡೀ ಸಮಾಜದ ಹೆಣ್ಣುಮಕ್ಕಳ ಭಾವನಾತ್ಮಕ ಜಗತ್ತನ್ನು ಇಲ್ಲಿ ಯಶಸ್ವಿಯಾಗಿ ಪ್ರತಿನಿಧೀಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳಾ ಸಂವೇದನೆಯ ಅನನ್ಯ ಬರವಣಿಗೆಯಾಗಿ ಗಮನ ಸೆಳೆಯುತ್ತದೆ.

ಆತ್ಮಕಥನಾತ್ಮಕ ಕಾದಂಬರಿಯು ವಿಜಯಪುರ ಜಿಲ್ಲೆಯ ಹಂದಿಗನೂರು ಎಂಬ ಪರಿಸರದಲ್ಲಿ ತೆರೆದುಕೊಳ್ಳುತ್ತದೆ. ಬಾಲ್ಯದಲ್ಲಿ ಸ್ವಚ್ಛಂದ ಹಕ್ಕಿಯಂತೆ ಹಾರಾಡುತ್ತಿದ್ದ ಹೆಣ್ಣುಮಗಳ ದಿನಗಳು, ಹಳ್ಳಿಯ ಆಚಾರ-ವಿಚಾರಗಳು ಮತ್ತು ಅಲ್ಲಿನ ಪರಿಸರ ಹೆಣ್ಣಿನ ಮನಸ್ಸಿನ ಮೇಲೆ ಬೀರಿದ ಪ್ರಭಾವವನ್ನು ಲೇಖಕಿ ಅತ್ಯಂತ ಮಧುರವಾಗಿ ಚಿತ್ರಿಸಿದ್ದಾರೆ. ಒಲೆಯ ಮುಂದೆ ಕುಳಿತು ಮಕ್ಕಳ ಹಸಿವು ನೀಗಿಸಲು ಗಾಬರಿಯಿಂದ ವಿಚಾರಿಸುವ ಅವ್ವನ ಚಿತ್ರಣವು ಗ್ರಾಮೀಣ ಸ್ತ್ರೀ ಸಹಜ ಬದುಕಿನ ವಾಸ್ತವಿಕತೆಗೆ ಹಿಡಿದ ಕನ್ನಡಿಯಾಗಿದೆ. ರೇಡಿಯೋದಲ್ಲಿ ಬರುವ ಅಪರಂಜಿ ಹಾಡುಗಳನ್ನು, ದೊಡ್ಡಾಟದ ಮಾತುಗಳನ್ನು ಕೇಳುತ್ತಾ ಮನೆಗೆಲಸ ಮಾಡುವ ಅವ್ವ, ಮುಂಜಾನೆ ಎದ್ದು ಕಸಗೂಡಿಸಿ ರಂಗೋಲಿ ಹಾಕುವ ಆ ದಿನಗಳನ್ನು ಲೇಖಕಿ ಇಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಹಳ್ಳಿಗಳಲ್ಲಿ ನೆರೆಹೊರೆಯ ಹೆಣ್ಣುಮಕ್ಕಳು ಪರಸ್ಪರ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ರೀತಿ, ಬಾವಿಯಿಂದ ನೀರು ತಂದು ಕೊಡಗಳನ್ನು ಒಣಬೂದಿಯಿಂದ ತಿಕ್ಕಿ ಥಳಥಳ ಹೊಳೆಯುವಂತೆ ಮಾಡುವ ಕಾಯಕ ನಿಷ್ಠೆ ಹೆಣ್ಣಿನ ಶ್ರಮ ಸಂಸ್ಕೃತಿಯನ್ನು ಧ್ವನಿಸುತ್ತದೆ.

ಗ್ರಾಮೀಣ ಭಾಗದ ಶೋಷಣೆ ಮತ್ತು ಮೂಢನಂಬಿಕೆಗಳು ಹೆಣ್ಣಿನ ಮನಸ್ಸನ್ನು ಹೇಗೆ ತಲ್ಲಣಗೊಳಿಸುತ್ತಿದ್ದವು ಎಂಬುದನ್ನು ಕಾದಂಬರಿಯ ಕೆಲವು ಕಟು ಘಟನೆಗಳು ಸಾಬೀತುಪಡಿಸುತ್ತವೆ. ಬಿಂಗೇರ ಯಲ್ಲವ್ವಳ ಮೈಮೇಲೆ ದೆವ್ವ ಬಂದು ಆಕೆ ಕೂದಲು ಬಿಚ್ಚಿಕೊಂಡು ನೆಲಕ್ಕೆ ಹಣೆ ಹಚ್ಚಿ ಚೀರುತ್ತಿದ್ದಾಗ, ಧೂಪಹಾಕಿ ಬೇವಿನ ತಪ್ಪಲಿನಿಂದ ಹೊಡೆಯುತ್ತಿದ್ದ ಬಾಬಾನ ಘಟನೆಯನ್ನು ಕಂಡು ಲೇಖಕಿ ಬಾಲ್ಯದಲ್ಲಿ ಹೆದರಿ ಅಡುಗೆಮನೆಗೆ ಓಡಿಹೋಗುತ್ತಾರೆ. ನಾಯಕೋಡಿ ಮಲ್ಲವ್ವನ ಮೈಮೇಲೆ ಸಿದ್ದವ್ವ ಬಂದಾಗ ಆಕೆ ನೆಲಕ್ಕೆ ಮೂಗು ಹಚ್ಚಿ ಜಿಕ್ಕಿಕೊಳ್ಳುತ್ತಾ ಬಂದಾಗ ಉಂಟಾದ ಭಯ, ಮತ್ತು ಅಮವಾಸ್ಯೆ-ಹುಣ್ಣಿಮೆಗಳಲ್ಲಿ ನಡೆಯುತ್ತಿದ್ದ ಮಾಟ-ಮಂತ್ರ, ನಿಂಬೆಕಾಯಿ ಒಗೆಯುವ ತಂತ್ರಗಳ ನಡುವೆ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ಅಸಹಾಯಕತೆಯನ್ನು ಲೇಖಕಿ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಇಂತಹ ಅಂಧಶ್ರದ್ಧೆಗಳ ಪರಿಸರದಲ್ಲೂ ಲೇಖಕಿಯ ಮನೆಯಲ್ಲಿ ವೈಚಾರಿಕ ವಾತಾವರಣವಿತ್ತು. ಅವರ ಅಪ್ಪ ವಿದ್ಯಾವಂತರಾಗಿದ್ದು, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಕಂದೀಲು ಬೆಳಕಿನಲ್ಲಿ ಓದಿ ಹೆಣ್ಣುಮಕ್ಕಳು ಮುಂದೆ ಬರಲು ಸಾಧ್ಯವಾಯಿತು.

ಕೃತಿಯ ಪರಾಕಾಷ್ಠೆ ಹಾಗೂ ಜೀವನಾಡಿಯಾಗಿ ಮೂಡಿಬರುವುದು ಲೇಖಕಿಯ ಪೋಷಕರಾದ ಅಪ್ಪ ಗುರಣ್ಣ ಮತ್ತು ಅವ್ವ ಸೋನಾಬಾಯಿ ಅವರ ಆತ್ಮಸ್ವರೂಪಿ ಚಿತ್ರಣ. ಅಪ್ಪ ಗುರಣ್ಣನವರು ಮೇಲ್ನೋಟಕ್ಕೆ ಶಿಸ್ತಿನ ಹಾಗೂ ಕಠಿಣ ವ್ಯಕ್ತಿಯಾಗಿ ಕಂಡರೂ, ಮಕ್ಕಳ ಪಾಲಿಗೆ ಭದ್ರತೆಯ ಹೆಮ್ಮರವಾಗಿದ್ದರು. ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಲಿಂಗಪೂಜೆ, ಕಂದೀಲು ಬೆಳಕಿನಲ್ಲಿ ಅಪ್ಪ ಮಾಡುತ್ತಿದ್ದ ಜಪ ಮತ್ತು ಶಿವಶರಣರ ವಚನಗಳ ಪಠಣ ಇಡೀ ಮನೆಗೆ ಒಂದು ಮಂದಿರದ ಕಳೆಯನ್ನು ತರುತ್ತಿತ್ತು. ಸಮಾಜದಲ್ಲಿ ಎಲ್ಲರೂ ಅಪ್ಪನನ್ನು ಗೌರವದಿಂದ, ಕೊಂಚ ಭಯದಿಂದ ನೋಡುತ್ತಿದ್ದರೂ, ಬಡವರ ಮತ್ತು ದೀನದಲಿತರ ವಿಷಯಕ್ಕೆ ಬಂದಾಗ ಅವರ ಹೃದಯ ಬೆಣ್ಣೆಯಾಗುತ್ತಿತ್ತು. ಊರಿನಲ್ಲಿ ಒಕ್ಕಲುತನದ ಕೂಲಿ ಆಳುಗಳ ವಿಷಯವಿರಲಿ, ಹೊಲದ ಲೆಕ್ಕವಿರಲಿ ಎಲ್ಲವನ್ನೂ ಅಪ್ಪನೇ ಮುಂಚೂಣಿಯಲ್ಲಿ ನಿಂತು ಸಂಭಾಳಿಸುತ್ತಿದ್ದರು. ಧರ್ಮದ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಗಳನ್ನು ವಿರೋಧಿಸುತ್ತಿದ್ದ ಅಪ್ಪ ಗುರಣ್ಣನವರ ವೈಚಾರಿಕ ಚಿಂತನೆಗಳು ಬಾಲ್ಯದಲ್ಲೇ ಲೇಖಕಿಯ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದವು.

ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಹಿಂಜರಿಯುತ್ತಿದ್ದ ಆ ಕಾಲದಲ್ಲಿ, ಅಪ್ಪ ಗುರಣ್ಣನವರು ತಳೆದ ನಿಲುವು ಕ್ರಾಂತಿಕಾರಕವಾಗಿತ್ತು. ಲೇಖಕಿ ರೇವತಿಯವರು ಶಾಲೆಯಲ್ಲಿ ಓದುತ್ತಿದ್ದಾಗ, ಪರೀಕ್ಷೆಯ ದಿನಗಳಲ್ಲಿ ಅವರೇ ಮುಂಜಾನೆ ಬೇಗ ಎದ್ದು, ಕಂದೀಲಿಗೆ ಎಣ್ಣೆ ಹಾಕಿ, ಮಗಳನ್ನು ನಿದ್ದೆಯಿಂದ ಎಬ್ಬಿಸಿ ಓದಲು ಕುಳ್ಳಿರಿಸುತ್ತಿದ್ದರು. ಹೆಣ್ಣುಮಕ್ಕಳು ಕೇವಲ ಅಡುಗೆಮನೆಗೆ ಸೀಮಿತವಾಗಬಾರದು, ಸಮಾಜದಲ್ಲಿ ಸ್ವಾವಲಂಬಿಗಳಾಗಿ ತಲೆಎತ್ತಿ ಬಾಳಬೇಕು ಎಂದು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು. ಈ ದಂಪತಿಗಳ ಸಂಸಾರವು ತುಂಬು ಜೇನುಗೂಡಿನಂತಿತ್ತು. ಕಾದಂಬರಿಯಲ್ಲಿ ಉಲ್ಲೇಖವಾಗಿರುವಂತೆ, ಅವರಿಗೆ ಹೆಣ್ಣು ಹಾಗೂ ಗಂಡು ಮಕ್ಕಳ ದೊಡ್ಡ ಬಂಧು-ಬಳಗವೇ ಇತ್ತು. ಲೇಖಕಿಯ ಒಡಹುಟ್ಟಿದವರಲ್ಲಿ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರು ಸೇರಿ ಇಡೀ ಮನೆ ತುಂಬ ಕೌಟುಂಬಿಕ ಒಲುಮೆಯಿತ್ತು. ಎಲ್ಲ ಹೆಣ್ಣುಮಕ್ಕಳಿಗೂ ಯೋಗ್ಯ ಮನೆತನದ ಕುಟುಂಬಗಳನ್ನು ನೋಡಿ ಮದುವೆ ಮಾಡಿಕೊಟ್ಟು, ಅವರ ಸುಖೀ ಸಂಸಾರಗಳನ್ನು ಕಂಡು ಕಣ್ಣುಂಬಿಕೊಳ್ಳುತ್ತಿದ್ದ ತಂದೆಯ ಮುಖದ ಪ್ರೀತಿ ಮಾಸದ್ದು. ತಾಯಿ ಸೋನಾಬಾಯಿಯವರ ವಾತ್ಸಲ್ಯದ ಮಡಿಲಲ್ಲಿ ಬೆಳೆದ ಮಗಳು, ಮುಂದೆ ಸಾಹಿತಿ ಸಿದ್ದರಾಮಪ್ಪ ಉಪ್ಪಿನ ಅವರ ಅರ್ಧಾಂಗಿಯಾಗಿ, ಜವಾಬ್ದಾರಿಯುತ ಗೃಹಸ್ಥ ಬದುಕಿನ ನಡುವೆಯೂ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಅನನ್ಯ ಕೊಡುಗೆಯನ್ನು ನೀಡಿದ ಪ್ರಬುದ್ಧ ಹಿನ್ನೆಲೆ ಇಲ್ಲಿ ಅನಾವರಣಗೊಂಡಿದೆ.

ಆದರೆ ಬದುಕಿನ ಪಯಣದಲ್ಲಿ ಅಪ್ಪನಿಗೆ ಮತ್ತು ಇಡೀ ಕುಟುಂಬಕ್ಕೆ ಎದುರಾದ ಅತ್ಯಂತ ಕಠೋರವಾದ ಘಟನೆ ಎಂದರೆ ಅದು ಅವ್ವ ಸೋನಾಬಾಯಿಯವರ ಅನಿರೀಕ್ಷಿತ ಸಾವು. ಕಣ್ಣೆದುರೇ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿ ಅವ್ವ ಇಹಲೋಕ ತ್ಯಜಿಸಿದಾಗ ಇಡೀ ಮನೆ ಶೂನ್ಯವಾಯಿತು. ಹೆಣ್ಣುಮಕ್ಕಳೆಲ್ಲ ಮದುವೆಯಾಗಿ ತಮ್ಮ ತಮ್ಮ ಸಂಸಾರಗಳಿಗೆ ಹೋದ ಬಳಿಕ, ಅಪ್ಪನಿಗೆ ಏಕೈಕ ಆಸರೆಯಾಗಿದ್ದ ಅವ್ವನ ವಿಯೋಗ ಅಪ್ಪನನ್ನು ಒಳಗಿನಿಂದ ಸಂಪೂರ್ಣವಾಗಿ ಕುಗ್ಗಿಸಿತು. ಹೆಗಲಿಗೆ ಹೆಗಲಾಗಿ ನಿಂತು ಸಂಸಾರ ತೂಗಿದ್ದ ಅರ್ಧಾಂಗಿ ಇಲ್ಲವಾದಾಗ, ಕೋಟೆಯಂತಿದ್ದ ಅಪ್ಪ ಒಂಟಿಯಾದರು. ಅವ್ವನ ನೆನೆದು ಅಪ್ಪ ಸದ್ದಿಲ್ಲದೆ ಕಣ್ಣೀರು ಸುರಿಸುತ್ತಿದ್ದ ಹೃದಯ ವಿದ್ರಾವಕ ದೃಶ್ಯಗಳು, ಒಬ್ಬ ಗಂಡನಾಗಿ ಹಾಗೂ ತಂದೆಯಾಗಿ ಅಪ್ಪ ಅನುಭವಿಸಿದ ಅಂತರಾಳದ ಯಾತನೆಯನ್ನು ಮತ್ತು ಸ್ತ್ರೀ ಸಂವೇದನೆಯು ಆ ಕೌಟುಂಬಿಕ ದುಃಖವನ್ನು ಹೇಗೆ ಗ್ರಹಿಸಿತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.

ಬದುಕಿನ ಸಂಜೆ ವೇಳೆಯಲ್ಲಿ ಅವ್ವನ ಅಗಲಿಕೆಯ ನಂತರ ಅಪ್ಪ ದೈಹಿಕವಾಗಿ ಮತ್ತಷ್ಟು ಕುಗ್ಗಿದಾಗಲೂ ಅವರಲ್ಲಿದ್ದ ಜವಾಬ್ದಾರಿಯ ಗುಣ ಕುಂದಿರಲಿಲ್ಲ. ಸೋನವ್ವಕ್ಕನ ಅನಾರೋಗ್ಯದ ಸಮಯದಲ್ಲಿ ಸ್ವತಃ ತಾವೇ ಜೀಪು ತೆಗೆದುಕೊಂಡು ಹೋಗಿ ದವಾಖಾನೆಗೆ ದಾಖಲಿಸಿದ ಅಪ್ಪನ ಧೈರ್ಯ ಕೊನೆಯವರೆಗೂ ಮಾಸಲಿಲ್ಲ. ಆದರೆ, ಕಾಲ ಬದಲಾದಂತೆ ಆಧುನಿಕತೆಯ ಗೀಳಿನಲ್ಲಿ ಕೌಟುಂಬಿಕ ಸರಪಳಿಯ ಕೊಂಡಿಗಳು ಬಿಚ್ಚಿಕೊಳ್ಳುತ್ತಿರುವುದು ಮತ್ತು ದೊಡ್ಡ ತಲೆಬಾಗಿಲ ಮನೆಗಳು ಹಿರಿಯರಿಲ್ಲದೆ ಬಿಕೋ ಎನ್ನುತ್ತಿರುವುದು ಇಂದಿನ ಸ್ತ್ರೀ ಸಂವೇದನೆಯ ದೊಡ್ಡ ಕಳವಳವಾಗಿದೆ.

ಈ ಕೃತಿಯ ಅತ್ಯಂತ ಪ್ರಮುಖ ಹಾಗೂ ಹೃದಯ ವಿದ್ರಾವಕ ಘಟ್ಟ ಎಂದರೆ ಅಪ್ಪನ ಕೊನೆಯ ದಿನಗಳು ಮತ್ತು ಅವರ ಸಾವಿನ ಕಟು ಕ್ಷಣಗಳು. ಯಾವಾಗಲೂ ಊರಿಗೆ ಹೋಗುವುದು, ಬರುವುದು ಮಾಡುತ್ತಿದ್ದ ಲೇಖಕಿಗೆ, ಅಪ್ಪ ಇಹಲೋಕ ತ್ಯಜಿಸುವ ಆ ಕೊನೆಯ ಕಠೋರ ಕ್ಷಣಗಳಲ್ಲಿ ಅವರ ಮಗ್ಗಲು ಇರಲು ಸಾಧ್ಯವಾಗಲಿಲ್ಲ. ಈ ಅಸಹಾಯಕತೆ ಮತ್ತು ಅಪರಾಧಿ ಪ್ರಜ್ಞೆ ಒಬ್ಬ ಮಗಳಾಗಿ ಅವರ ಅಂತರಾಳವನ್ನು ಇಂದಿಗೂ ತೀವ್ರವಾಗಿ ಕಾಡುತ್ತಿದೆ. ಅಪ್ಪನ ಶ್ರಾದ್ಧ ಕರ್ಮಗಳನ್ನು ಮುಗಿಸಿ ಎಂಟು ದಿನಗಳ ಕಾಲ ಆ ಹಳೆಯ ಮನೆಯಲ್ಲಿದ್ದಾಗ, ಮನೆಯ ಪ್ರತಿ ಮೂಲೆಯಲ್ಲೂ ಅಪ್ಪ ಓಡಾಡಿದಂತೆ, ಮಾತನಾಡಿಸಿದಂತೆ ಭಾಸವಾಗುತ್ತಿತ್ತು. “ಅಪ್ಪ ಇಲ್ಲ, ಇಲ್ಲ ಎನ್ನುವುದು ಒಪ್ಪಿಕೊಳ್ಳಲಿಕ್ಕಾಗದ ಸತ್ಯ, ಅರಗಿಸಿಕೊಳ್ಳಲಾಗದ ಕ್ಷಣ” ಎಂದು ಲೇಖಕಿ ಕಣ್ಣೀರಿಡುತ್ತಾರೆ. ಅಪ್ಪ ಇಲ್ಲ ಎನ್ನುವ ಕಟು ಸತ್ಯವನ್ನು ಅರಗಿಸಿಕೊಳ್ಳಲು ಲೇಖಕಿಗೆ ಏಳೆಂಟು ವರ್ಷಗಳೇ ಬೇಕಾಗುತ್ತವೆ. “ಸಾಸಿವೆ ಕಾಳಿನಷ್ಟು ಸುಖಕ್ಕೆ ಸಾಗರದಷ್ಟು ದುಃಖ” ನೀಡುವ ಬದುಕಿನಲ್ಲಿ, ಸಂಕಟವಾದಾಗಲೆಲ್ಲಾ ಒಂದೊಂದು ಪುಟ ಗೀಚಿ ಲೇಖಕಿ ಕಣ್ಣೀರು ಒರೆಸಿಕೊಂಡಿದ್ದಾರೆ.

ಕೊನೆಯಲ್ಲಿ, “APPA I LOVE YOU” ಎಂಬ ಆರ್ದ್ರತೆಯ ಒಕ್ಕಣೆಯೊಂದಿಗೆ ಮುಕ್ತಾಯವಾಗುವ ಈ ಕೃತಿ, ಹೆಣ್ಣುಮಗಳೊಬ್ಬಳ ಹೃದಯದ ಅನಂತ ಪ್ರೀತಿ ಮತ್ತು ಹೆತ್ತವರ ಮೇಲಿನ ಕೃತಜ್ಞತೆಯನ್ನು ಜಗತ್ತಿಗೆ ಸಾರುತ್ತದೆ. ಮನುಷ್ಯ ಮಾಡಿದ್ದೆಲ್ಲವೂ ಇರುತ್ತದೆ ಆದರೆ ಮನುಷ್ಯನೇ ಇರುವುದಿಲ್ಲ ಎಂಬ ಕಠೋರ ಬದುಕಿನ ಸತ್ಯವನ್ನು ನಮಗೆ ದಾಟಿಸುವ ಲೇಖಕಿ, ಪೋಷಕರು ಬದುಕಿ ಬಾಳಿದ ಮತ್ತು ನಡೆದಾಡಿದ ಆ ಹಳೆಯ ಮನೆಯೇ ಕಾಶಿ, ಕೇದಾರಕ್ಕಿಂತ ಪಾವನ ಸ್ಥಳ ಎನ್ನುವ ನೈಜ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾರೆ. ಕಳೆದುಕೊಂಡವರ ನೆನಪಿನಲ್ಲೇ ಬದುಕನ್ನು ಮರುಸೃಷ್ಟಿಸಿಕೊಳ್ಳುವ ಹೆಣ್ಣಿನ ಧೀಮಂತಿಕೆಯನ್ನು ಬಿಂಬಿಸುವ ಮೂಲಕ ರೇವತಿ ಉಪ್ಪಿನ ಅವರ ಈ ಬರಹವು ಪತ್ರಿಕೆಯ ಅಂಕಣದ ಗಡಿಯನ್ನು ಜಿಗಿದು ಓದುಗರ ಅಂತರಾಳವನ್ನು ತಟ್ಟುತ್ತದೆ. ಇಂದಿನ ಆಧುನಿಕ ಒಂಟಿತನದ ಕಾಲದಲ್ಲಿ, ಕಳಚಿಕೊಳ್ಳುತ್ತಿರುವ ಕೌಟುಂಬಿಕ ಕೊಂಡಿಗಳನ್ನು ಮರುಜೋಡಿಸಲು ಪ್ರತಿಯೊಬ್ಬರೂ ಓದಲೇಬೇಕಾದ ಮಹಿಳಾ ಸಂವೇದನೆಯ ಅತ್ಯುತ್ತಮ ಮಾದರಿ ಇದಾಗಿದೆ.


  • ದೇವಿಕಾ ಎಸ್ ರಾಜ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading