“ನನ್ನ ಡಿಜಿಟಲ್ ಉಪವಾಸ”

ಏಕಾದಶಿ ದಿವಸ ಉಪವಾಸ ಮಾಡುವಂತೆ ಒಂದು ಗಂಟೆ ಮೊಬೈಲ್‌ ನಿಂದ ದೂರ ಉಳಿದು ‘ಡಿಜಿಟಲ್ ಉಪವಾಸ’ ಮಾಡಲು ಹೋದ ಲೇಖಕರಾದ ಎನ್.ವಿ.ರಘುರಾಮ್ ಅವರ ಪಜೀತಿ ಕತೆಯನ್ನು ತಪ್ಪದೆ ಪೂರ್ತಿ ಓದಿ….

ಎಂದಿನಂತೆ ಇಂದೂ ಬೆಳಗಿನ ಕಾಫಿ ಕುಡಿಯುತ್ತಾ ದಿನ ಪತ್ರಿಕೆ ಓದುತ್ತಿದ್ದೆ. ಆಗ ಅದರಲ್ಲಿರುವ ಒಂದು ಲೇಖನ ಗಮನ ಸೆಳೆಯಿತು. ಆ ಲೇಖನದಲ್ಲಿ ನಿಮ್ಹಾನ್ಸ್ ತಜ್ಞರು ಪ್ರತಿದಿನ ಒಂದು ಗಂಟೆಯಾದರೂ ಸಾಮಾಜಿಕ ಜಾಲತಾಣಗಳಿಂದ ದೂರವಿರಲು ಸಲಹೆ ನೀಡಿದ್ದಾರೆ. ಅದರಿಂದ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ, ಇದೊಂದು ರೀತಿಯಲ್ಲಿ ‘ಡಿಜಿಟಲ್ ಉಪವಾಸ’ ಎನ್ನಬಹುದು ಎಂದಿತ್ತು. ಲೇಖನ ಓದಿದ ಕೂಡಲೇ ನನ್ನೊಳಗಿನ ಋಷಿಮುನಿ ಎಚ್ಚರಗೊಂಡ.

‘ಒಂದು ಗಂಟೆ ತಾನೇ? ನಮ್ಮ ಪೂರ್ವಜರು ಏಕಾದಶಿ ದಿವಸ ನಿಟ್ಟೂಪವಾಸ, ಚಾತುರ್ಮಾಸದ ವೃತಗಳು, ತಪಸ್ಸುಗಳನ್ನೇ ಮಾಡುತ್ತಿದ್ದವರು. ನಾನು ಒಂದು ಗಂಟೆ ಮೊಬೈಲ್‌ನಿಂದ ದೂರ ಇರಲಾರೆನೇ?’ ಎಂದುಕೊಂಡೆ.

ಸರಿ, ಬೆಳಿಗ್ಗೆ ತಿಂಡಿ ತಿಂದು, ಮೊಬೈಲ್ ಅನ್ನು ಮೇಜಿನ ಮೇಲೆ ಇಟ್ಟು, ರಾಮಾಯಣದ ಕಾರ್ಟೂನ್ ಇರುವ ಹಳೆಯ ಪುಸ್ತಕ ಇನ್ನೊಮ್ಮೆ ಓದಲು ತೆಗೆದುಕೊಂಡು ಗಡಿಯಾರ ನೋಡಿದೆ. ಬೆಳಿಗ್ಗೆ ಹತ್ತು ಗಂಟೆ ಆಗಿತ್ತು. ನನ್ನ ಡಿಜಿಟಲ್ ಉಪವಾಸ ಆರಂಭವಾಯಿತು.

ಒಂದು ನಿಮಿಷ ಕಳೆದಿರಬಹುದು.

ಟಿಂಗ್!

ಮೊಬೈಲ್‌ನಿಂದ ಸೂಚನೆಯ ಶಬ್ದ ಬಂದಿತು. ನನ್ನ ಕುತ್ತಿಗೆ ತನ್ನಷ್ಟಕ್ಕೆ ತಾನೇ ಆ ಕಡೆ ತಿರುಗಿತು. ‘ಒಮ್ಮೆ ನೋಡಿಬಿಡು. ಮುಖ್ಯ ವಿಷಯ ಇರಬಹುದು’ ಎಂದು ಮನಸ್ಸು ಹೇಳಿತು. ಆದರೆ ಸಂಕಲ್ಪ ಬಲವಾಗಿತ್ತು. ‘ಇಲ್ಲ. ಇದು ಪರೀಕ್ಷೆ, ಗೆಲ್ಲಲೇ ಬೇಕು’ ಎಂದುಕೊಂಡು ಮತ್ತೆ ಪುಸ್ತಕದ ಕಡೆ ಗಮನಹರಿಸಿದೆ.

ಹತ್ತು ಸೆಕೆಂಡು ತಡೆದುಕೊಂಡೆ. ಇನ್ನೂ ಹತ್ತು ಸೆಕೆಂಡು ಕಳೆದಿರಬಹುದು. ನಂತರ ಆಗಲಿಲ್ಲ. ಎದ್ದು ಹೋಗಿ ನೋಡಿದೆ. ಯಾವುದೋ ಆನ್‌ಲೈನ್ ಬಟ್ಟೆ ಅಂಗಡಿಯಿಂದ ಬಂದ ಸಂದೇಶ. “ಇಂದು ಮಾತ್ರ ವಿಶೇಷ ರಿಯಾಯಿತಿ!” ಕೋಪ ಬಂತು. ಎಲ್ಲಾ ನೋಟಿಫಿಕೇಶನ್‌ಗಳಿಂದ ಬರುವ ಶಬ್ದವನ್ನು ಆಫ್ ಮಾಡಿದೆ. ‘ಈಗ ನೋಡೋಣ ಯಾರು ತೊಂದರೆ ಕೊಡುತ್ತಾರೆ’ ಎಂದು ಮತ್ತೆ ಕುಳಿತೆ.

ಐದು ನಿಮಿಷ ಕಳೆಯಿತು. ಈ ಬಾರಿ ಮೊಬೈಲ್ ನಡುಗತೊಡಗಿತು. ವಾಟ್ಸಾಪ್ ಕರೆ. ಸಣ್ಣಕ್ಕನ ಹೆಸರು ಕಾಣಿಸಿತು. ‘ಇದು ಸಾಮಾಜಿಕ ಮಾಧ್ಯಮವಲ್ಲ. ಇದು ಕುಟುಂಬದ ವಿಷಯ’ ಎಂದು ಸಮರ್ಥಿಸಿಕೊಂಡು ಕರೆ ಸ್ವೀಕರಿಸಿದೆ. ಮಾತು ಸೋದರಳಿಯನ ಪರೀಕ್ಷೆ, ಭಾವನ ಆರೋಗ್ಯ, ಸಂಬಂಧಿಯ ಮದುವೆ, ಮಾವಿನ ಹಣ್ಣುಗಳ ಬೆಲೆ ಎಲ್ಲವೂ ಚರ್ಚೆಗೆ ಬಂದವು. ಕರೆ ಮುಗಿದಾಗ ಹದಿನೈದು ನಿಮಿಷ ಕಳೆದಿತ್ತು.

‘ಈಗ ನಿಜವಾದ ಉಪವಾಸ’ ಎಂದುಕೊಂಡೆ. ಮೊಬೈಲ್ ಅನ್ನು ಏರೋಪ್ಲೇನ್ ಮೋಡ್‌ಗೆ ಹಾಕಿ, ತಲೆಕೆಳಗಾಗಿ ಇಟ್ಟೆ. ಮನೆಯಲ್ಲಿ ಮೌನ ಆವರಿಸಿತು. ಕೈಯಲ್ಲಿ ರಾಮಾಯಣದ ಪುಸ್ತಕ ಇದ್ದರೂ ಮನಸ್ಸು ಮಾತ್ರ ಮೌನವಾಗಿ ‘ಕುಟುಂಬದ ವಾಟ್ಸಾಪ್ ಗುಂಪಿನಲ್ಲಿ ಈಗ ಏನಾಗುತ್ತಿರಬಹುದು?’ ಎಂದು ಯೋಚಿಸುತ್ತಿತ್ತು. ‘ಸಾಮಾನ್ಯವಾಗಿ ನನ್ನ ದೊಡ್ಡಕ್ಕ ಅವಳ ಮೊಮ್ಮಗ ಒಂದನೇ ತರಗತಿಗೆ ಹೊರಟ ಚಿತ್ರ ಇಷ್ಟು ಹೊತ್ತಿಗೆ ಹಾಕುತ್ತಾಳೆ. ನನ್ನ ತಮ್ಮ ಇಷ್ಟು ಹೊತ್ತಿಗೆ ಯಾವುದಾದರೂ ಹಳೆಯ ಫೋಟೋ ಹಾಕಿರುತ್ತಾನೆ’. ಕೈಗಳು ಪುಸ್ತಕದ ಪುಟಗಳನ್ನು ತಿರುಗಿಸುತ್ತಿದ್ದರೆ, ನನ್ನ ಯೋಚನೆಗಳು ಮಾತ್ರ ವಾಟ್ಸಪ್ ಸಮೂಹಗಳ ಸುತ್ತ ಸುತ್ತುತ್ತಿತ್ತು. ‘ಕಾಲೇಜಿನ ಸ್ನೇಹಿತರು ಏನನ್ನು ಚರ್ಚಿಸುತ್ತಿರಬಹುದು? ಬೆಳಿಗ್ಗೆ ನಾನು ಹಾಕಿದ ಹೊಸ ಕವನದ ಬಗ್ಗೆ ಅವರು ಮಾತನಾಡುತ್ತಿರುತ್ತಾರೆ, ಅದರಲ್ಲೂ ವೇಣು, ಮಲ್ಯ ಖಂಡಿತವಾಗಿ ಮೆಚ್ಚಿರುತ್ತಾರೆ’, ‘ಸಹೋದ್ಯೋಗಿಗಳ ಸಮೂಹದಲ್ಲಿ ರಾಜಕುಮಾರ್ ಚಾರ್ಧಾಮ್ ಪ್ರವಾಸದ ಫೋಟೋ ಹಾಕಿರುತ್ತಾನೆ’ ಮೊಬೈಲ್ ದೂರವಿದ್ದರೂ, ಅದರ ನೆರಳು ಮನಸ್ಸಿನ ಮೇಲೆ ಉಳಿದಿತ್ತು.

ಕೈಯಲ್ಲಿದ್ದ ಪುಸ್ತಕದಲ್ಲಿ ವಿಶ್ವಾಮಿತ್ರ ಋಷಿಗಳು ರಾಮ, ಲಕ್ಷಣರನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಕಣ್ಣ ಮುಂದೆ ಇತ್ತು. ‘ಅಲ್ಲಾ, ಆ ಕಾಲದಲ್ಲಿ ವಿಶ್ವಾಮಿತ್ರರ ತಪಸ್ಸು ಭಂಗ ಮಾಡಲು ಮೇನಕೆಯನ್ನು ಕಳುಹಿಸಿದ್ದರಂತೆ. ಅದರ ಬದಲು ಒಂದು ಸ್ಮಾರ್ಟ್‌ಫೋನ್ ಕಳುಹಿಸಿದ್ದರೆ ದೇವೇಂದ್ರನ ಕೆಲಸ ಇನ್ನೂ ಬೇಗ ಆಗುತ್ತಿತ್ತೇನೋ’ ಎಂಬ ಯೋಚನೆ ಬಂದಾಗ ಮನದಲ್ಲಿ ನಗು ಮೂಡಿತು. ಏನೇ ಓದಲಿ, ಏನೇ ಮಾಡಿಕೊಂಡಿರಲಿ, ಒಳ ಮನಸ್ಸು ಒಂದು ಮಟ್ಟಕ್ಕಿಂತ ಜಾಸ್ತಿ ಬೆಳೆಯುವುದಿಲ್ಲವೇನೋ?

‘ಮಂಗನಿಂದ ಮಾನವ’ ಎಂದು ಹೇಳಿಕೆ ಸುಳ್ಳಾಗದಂತೆ ನನ್ನ ಮನಸ್ಸು ಮಂಗನ ತರಹ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಿರಂತರವಾಗಿ ಹಾರುತ್ತಿತ್ತು. ‘ಫೇಸ್‌ಬುಕ್‌ನಲ್ಲಿ ಹಾಕಿದ ಲೇಖನಕ್ಕೆ ಎಷ್ಟು ಲೈಕ್ ಬಂದಿರಬಹುದು?’, ‘ಇನ್‌ಸ್ಟಾಗ್ರಾಂನಲ್ಲಿ ಹೊಸ ಟ್ರೆಂಡಿಂಗ್ ಏನಿರಬಹುದು?’, ‘ಯಾರಾದರೂ ಸಂದೇಶ ಕಳುಹಿಸಿದ್ದಾರೆಯೇ?’. ಒಂದಾದ ಮೇಲೊಂದರಂತೆ ಯೋಚನೆಗಳು ಅಲೆಗಳಂತೆ ಬಂದು ಮತ್ತೆ, ಮತ್ತೆ ಮನದಂಗಳದಲ್ಲಿ ಬೀಳುತ್ತಿತ್ತು. ಮೊಬೈಲ್ ಮೇಜಿನ ಮೇಲೆ ಮೌನವಾಗಿ ಮಲಗಿತ್ತು. ಆದರೆ ಮನಸ್ಸು ಮಾತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತಾಡುತ್ತಿತ್ತು.

ಹೀಗೆ ಯೋಚನೆ ಮಾಡುತ್ತಾ ಕೂತಿದ್ದಾಗ ಪುಸ್ತಕದಲ್ಲಿ ರಾಮ ಆಗಲೇ ಮಾಯದ ಜಿಂಕೆಯ ಹಿಂದೆ ಹೊರಟಿದ್ದ. ಈ ಮೊಬೈಲು ಕೂಡ ಒಂದು ರೀತಿಯಲ್ಲಿ ಮಾಯಾ ಜಿಂಕೆಯೇ ಸರಿ ಎನಿಸಿತು. ಆದರೂ ಗಟ್ಟಿ ಮನಸ್ಸು ಮಾಡಿ ಮತ್ತೊಮ್ಮೆ ಪುಸ್ತಕದ ಕಡೆ ಗಮನ ಹರಿಸಲು ಪ್ರಯತ್ನ ಪಟ್ಟೆ.

ಆಗ ನನಗೆ ಯಯಾತಿಯ ಕಥೆ ನೆನಪಾಯಿತು. ಆಸೆಗಳನ್ನು ಪೂರೈಸಿದಷ್ಟು ಅವು ಕಡಿಮೆಯಾಗುವುದಿಲ್ಲ; ಇನ್ನಷ್ಟು ಹೆಚ್ಚಾಗುತ್ತವೆ ಎಂಬುದು ಯಯಾತಿಯ ಅನುಭವ.
ಸಾಮಾಜಿಕ ಜಾಲತಾಣಗಳು ಹಾಗೆಯೇ. ಐದು ನಿಮಿಷಕ್ಕೊಮ್ಮೆ ನೋಡದೆ ಇರಲಾಗುವುದಿಲ್ಲ. ಮೊದಲಿಗೆ ವಾಟ್ಸಪ್, ಅಲ್ಲಿಂದ ಫೇಸ್‌ಬುಕ್, ನಂತರ ಇನ್‌ಸ್ಟಾಗ್ರಾಂ, ಯೂಟ್ಯೂಬ್, ರೀಲ್ಸ್ ಎಂದು ಒಂದರಿಂದ ಇನ್ನೊಂದು. ಆದು ಸಾಮಾಜಿಕ ಜಾಲತಾಣಗಳ ಚಕ್ರವ್ಯೂಹವೇ ಸರಿ. ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡವರು ಅಷ್ಟು ಸುಲಭವಾಗಿ ಹೊರಗೆ ಬಂದ ಉದಾಹರಣೆ ನನಗೆ ಕಂಡಿಲ್ಲ ಬಿಡಿ.

ಗಡಿಯಾರದಲ್ಲಿ ಹನ್ನೊಂದು ಹೊಡೆಯಿತು. ಒಂದು ಗಂಟೆ ಡಿಜಿಟಲ್ ಉಪವಾಸ ಮುಗಿದಿತ್ತು. ಉಪವಾಸ ಮುಗಿದ ಸಂತೋಷದಲ್ಲಿ ಮೊಬೈಲ್ ಕೈಗೆತ್ತಿಕೊಂಡೆ. ಏರೋಪ್ಲೇನ್ ಮೋಡ್ ತೆಗೆದೆ. ಸಂದೇಶಗಳು ಬರತೊಡಗಿದವು. ಇಪ್ಪತ್ತು ವಾಟ್ಸಾಪ್ ಸಂದೇಶಗಳು. ಮೂರು ಫೇಸ್‌ಬುಕ್ ಸೂಚನೆಗಳು. ಹನ್ನೆರೆಡು ಇನ್‌ಸ್ಟಾಗ್ರಾಂ ಸೂಚನೆಗಳು. ಆರು ಜಾಹೀರಾತುಗಳು. ಎಲ್ಲವನ್ನೂ ನೋಡಿದ ಮೇಲೆ ಒಂದು ದೊಡ್ಡ ಸತ್ಯ ಗೊತ್ತಾಯಿತು. ಆ ಒಂದು ಗಂಟೆಯಲ್ಲಿ ಜಗತ್ತಿನಲ್ಲಿ ಏನೂ ಬದಲಾಗಿರಲಿಲ್ಲ. ಭೂಮಿ ತನ್ನ ಅಕ್ಷದ ಸುತ್ತಲೇ ಸುತ್ತುತ್ತಿತ್ತು! ಸೂರ್ಯ ತನ್ನ ಪಾಡಿಗೆ ತನ್ನ ಪಯಣ ಮುಂದುವರೆಸಿದ್ದ!

ಆಗ ಡಿಜಿಟಲ್ ಉಪವಾಸ ಎಂದರೆ ಕೇವಲ ಮೊಬೈಲ್ನ ಸುತ್ತ ಲಕ್ಷ್ಮಣ ರೇಖೆ ಹಾಕುವುದಲ್ಲ, ಅದರ ಜೊತೆಗೆ ಮನಸ್ಸಿನ ಸುತ್ತಲೂ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕೆಂದು ತಿಳಿಯಿತು.

‘ಶ್ರೀರಾಮ, ನೀನೇ ಈ ರಘುರಾಮನ ಕಾಪಾಡ ಬೇಕಪ್ಪ’ ಎನ್ನುತ್ತಾ ಕೈಯಲ್ಲಿದ್ದ ರಾಮಾಯಣದ ಪುಸ್ತಕ ಕಣ್ಣಿಗೆ ಒತ್ತಿಕೊಂಡು ಬೀರುವಿನಲ್ಲಿಟ್ಟು ಮತ್ತೆ ಫೋನ್ ಕೈಗೆತ್ತುಕೊಂಡೆ!


  • ಎನ್.ವಿ.ರಘುರಾಮ್ –  ನಿವೃತ್ತ ಅಧೀಕ್ಷಕ ಅಭಿಯಂತರ(ವಿದ್ಯುತ್), ಕ.ವಿ.ನಿ.ನಿ., ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading