ನನ್ನ ಬೆನ್ನ ಮೇಲೆ ಸಾವಿರ ಗಾಯಗಳ ಚಿಪ್ಪುಗಳು, ನನ್ನ ಕಣ್ಣೊಳಗೆ ಸಾವಿರ ಚಂಡಮಾರುತಗಳ ಉಪ್ಪು…ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರಾದ ಟಿ.ಪಿ.ಉಮೇಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕಡಲಿಗೆ ಗೊತ್ತಿರುವ ರಹಸ್ಯಗಳೆಲ್ಲ
ತೀರದ ಮರಳಿಗೆ ಗೊತ್ತಿರುವುದಿಲ್ಲ!
ಅಲೆಗಳು ಪ್ರತಿಕ್ಷಣ ಬಂದು
ತಮ್ಮ ಸೋಲು ಗೆಲುವಿನ ಕಥೆಗಳನ್ನು
ಮರಳಿನ ಎದೆಯ ಮೇಲೆ ಬರೆದು ಹೋಗುತ್ತವೆ!
ಮರುಕ್ಷಣವೆ ಗಾಳಿ ಅವುಗಳ ನೆನಪಿನ ಮೇಲೆ
ಹೊಸ ಮರೆವುಗಳನ್ನು ಹಾಸಿರುತ್ತದೆ!
ನಾನೂ
ಕಾಲವೆಂಬ ಸಮುದ್ರದೊಳಗೆ ಮುಳುಗದಿರಲು
ಕೈಕಾಲು ಬಡಿಯುವ ಒಂದು ಸಣ್ಣ ತೆಪ್ಪವಾಗಿರುವೆ!
ನನ್ನ ಬೆನ್ನ ಮೇಲೆ ಸಾವಿರ ಗಾಯಗಳ ಚಿಪ್ಪುಗಳು!
ನನ್ನ ಕಣ್ಣೊಳಗೆ ಸಾವಿರ ಚಂಡಮಾರುತಗಳ ಉಪ್ಪು!
ಹಸಿವು
ಕೇವಲ ಹೊಟ್ಟೆಯ ನೋವಲ್ಲ;
ಅದು ಒಲೆಯ ಬೂದಿಯಲ್ಲಿ ಮಲಗಿರುವ
ಕಪ್ಪುಹಾವಿನ ನಿಟ್ಟುಸಿರು!
ಮಗುವಿನ ಕಣ್ಣಲ್ಲಿ ಅರ್ಧಕ್ಕೆ ನಿಂತ ಕನಸಿನ ಚಿತ್ರಪಟ!
ತಾಯಿಯ ಹರಿದ ಸೀರೆಯ ಅಂಚಿನಲ್ಲಿ
ಮರೆಮಾಚಿದ ಕಣ್ಣೀರಿನ ಕಲೆ!
ಎಷ್ಟು ಬಾರಿ ಬಿದ್ದರೂ
ಬದುಕು ನನ್ನನ್ನು ಎಬ್ಬಿಸುತ್ತದೆ!
ಮಣ್ಣಿಗೆ ಗೊತ್ತು
ಬೀಜ ಮೊಳೆಸುವುದು ಅಂತ್ಯವಲ್ಲ!
ಆಕಾಶಕ್ಕೆ ಗೊತ್ತು
ಕತ್ತಲೆಯೆಂಬುದು ಶಾಶ್ವತವಲ್ಲ!
ನದಿಗೆ ಗೊತ್ತು
ಕಲ್ಲುಗಳೇ ದಾರಿಯನ್ನು ತಡೆಯುವುದಿಲ್ಲ!
ನನಗೂ ಗೊತ್ತು ಈ ದುಃಖಗಳು
ಒಂದು ದಿನ ಚಿಗುರುಗಳಾಗುವವು!
ಈ ಕಣ್ಣೀರು ಒಂದು ದಿನ ಹೊಲಗಳ ಮೇಲೆ
ನಿಲ್ಲದ ಮಳೆಯಾಗುವುದು!
ಈ ಗಾಯಗಳು ಒಂದು ದಿನ ಮಕ್ಕಳ ನಗುವಿನಲ್ಲಿ
ಹೂಗಳಾಗಿ ಅರಳುವವು!
ಆ ದಿನ ಯಾವ ಮನೆಯ ಹೊಗೆಯು
ಹಸಿವಿನ ಸುದ್ದಿಯಾಗದಿರಲಿ!
ಯಾವ ಮಗುವಿನ ಕಣ್ಣು
ಹಾಲಿಗಾಗಿ ಆಕಾಶ ನೋಡದಿರಲಿ!
ಯಾವ ತಾಯಿಯ ಕೈಗಳು ಖಾಲಿ ಪಾತ್ರೆಗಳನ್ನು
ಅಪ್ಪಿಕೊಂಡು ನಿದ್ರಿಸದಿರಲಿ!
ಅಂದು ನಾನು ರಾತ್ರಿ ಆಕಾಶದ ಕೆಳಗೆ
ನಕ್ಷತ್ರಗಳನ್ನು ಎಣಿಸುತ್ತ ಕುಳಿತುಕೊಳ್ಳುವೆ!
ಹಾರುವ ಹಕ್ಕಿಗಳಲ್ಲಿ ನನ್ನ ಭವಿಷ್ಯವನ್ನು ಹುಡುಕುವೆ!
ಮುರಿದ ಕನಸುಗಳ ತುಂಡುಗಳಿಂದಲೇ
ಹೊಸ ದೀಪಗಳನ್ನು ಉರಿಸುವೆ!
ಕಡಲಿನಂತೆ ಒಡಲಿಗು ಗೊತ್ತಿರುವ ರಹಸ್ಯ
ಮನುಷ್ಯನನ್ನು ಬದುಕಿಸುವುದು
ಅವನ ಕೈಯಲ್ಲಿರುವ ಅನ್ನವಲ್ಲ!
ಅವನ ಎದೆಯೊಳಗೆ ಇನ್ನೂ ಸಾಯದೆ ಉಳಿದಿರುವ
ಒಂದು ಚಿಕ್ಕ ಭರವಸೆಯ ಸೂರ್ಯ!
- ಟಿ.ಪಿ.ಉಮೇಶ್ ಹೊಳಲ್ಕೆರೆ – ರಾಷ್ಟ್ರ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಪುರಸ್ಕೃತರು.
