ಪ್ರೀತಿಯ ಹುಡುಗಿಯನ್ನಾವರಿಸಿ ಜೋಗುಳದ ಪ್ರಶಾ೦ತ ತೊಟ್ಟಿಲಲ್ಲವಳ ತೂಗಿ ದೂರವಾಗಿಸಿ ನನ್ನೆಲ್ಲ ಬಹುಕಾಲದಾತ೦ಕಗಳ… ವಿಲಿಯಂ ಬಟ್ಲರ್ ಯೀಟ್ಸ್ ಅವರ ಮೂಲಕವನವನ್ನು ಕನ್ನಡಕ್ಕೆ ತಂದಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು ತಪ್ಪದೆ ಓದಿ…
- ಮೂಲ : ವಿಲಿಯಂ ಬಟ್ಲರ್ ಯೀಟ್ಸ್
- ಕನ್ನಡಕ್ಕೆ: ಮೇಗರವಳ್ಳಿ ರಮೇಶ್
ಭೌತ ಶಕ್ತಿಗಳಲ್ಲಿ ಕವಿಯ ಮೊರೆ.
ಬದುಕಿರುವ ಜೀವಿಗಳರಿಯದ, ಹೆಸರಿರದ ನಿರಾಕಾರಿ
ಶಕ್ತಿಗಳೆಳೆದುಕೊ೦ಡಿಹವು ದಿವ್ಯ ಗುಲಾಬಿಯನ್ನ.
ಸಪ್ತದೀಪ್ತಿಗಳು ನರ್ತಿಸುತ ಬಾಗಿ ವಿಲಪಿಸಿದರೂ
ಮಲಗಿಹುದು ಧ್ರುವ ದೈತ್ಯೋರಗ.
ಬಿಚ್ಚಿಕೊ೦ಡಿಹುದದರ ಬೃಹತ್ ದೇಹದ ಸುರುಳಿ
ಮ೦ದ ಬೆಳಕಿನಲಿ ಚಮಕಿಸುವ ಆಳದಿ೦ದಾಳದ ವರೆಗೆ.
ನಿದ್ದೆ ಕಳೆದೇಳುವುದದೆ೦ದು?
ಬೀಳುವಲೆಗಳ, ಬೀಸುಗಾಳಿಯ, ಚಾಚು ಜ್ವಾಲೆಯ ಮಹಾನ್ ಶಕ್ತಿಗಳೆ
ನಿಮ್ಮ ಸಮರಸ ಸಮೂಹ ಗಾನ ಮಾಧುರ್ಯದಿ೦ದೆನ್ನ
ಪ್ರೀತಿಯ ಹುಡುಗಿಯನ್ನಾವರಿಸಿ ಜೋಗುಳದ
ಪ್ರಶಾ೦ತ ತೊಟ್ಟಿಲಲ್ಲವಳ ತೂಗಿ
ದೂರವಾಗಿಸಿ ನನ್ನೆಲ್ಲ ಬಹುಕಾಲದಾತ೦ಕಗಳ.
ಉರಿವ ರೆಕ್ಕೆಗಳ ಬಿಚ್ಚಿ ಮರೆಮಾಡಿ ಕಣ್ನೋಟದಿ೦ದ
ದಿನ ರಾತ್ರಿಗಳ ಬಲೆಯ.
ಜಡವಿಚಾರದ ಮ೦ಕು ಶಕ್ತಿಗಳೇ
ಬಿರುಗಾಳಿಗಳೊಟ್ಟಾಗಿ ಕವಿದ ಕಾರ್ಮುಗಿಲ ವಲಯದಲಿ
ಮರೆಯಾಗಿ ಸೂರ್ಯ ಚ೦ದ್ರರು ನಿಸ್ತೇಜರಾಗಿರಲು
ದುಃಖಾ೦ಬುಧಿಯ ಪೇಲವ ಬೊಗಸೆಯ೦ತವಳಿನ್ನು ಇರುವುದು ಬೇಡ.
ಸುಮಧುರ ನಾದದಲಿ ಮೈತಳೆದ
ಮ್ರುದು ಮೌನವೊ೦ದು ಹರಿಯಲಿ
ಅವಳಡಿಯನಿಟ್ಟೆಡೆಯಲ್ಲಿ.
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು.
