ಸುಡುವ ಹಗಲಿನಲ್ಲು ನೆರಳಿನ ಹಿತ ತಂಪಿದೆ…ಎಡವಿ ಬಿಡುವೆ ತೊಡರಿ ಬಿಡುವೆ ಮರೆತಾಗ ನನ್ನನೇ ನಾನು…ಕವಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನೀನೆಂದರೆ ನನಗೆ ಜಗವ ತೋರ್ವ ಬೆಳಕಿಂಡಿ
ನನಗೆ ನನ್ನನೇ ಕಾಣಿಸುವ ಸ್ನೇಹಮಯ ಕನ್ನಡಿ
ನನ್ನ ಭಾವ ಬರಹಕೆ ನೀನೇ ಹೊನ್ನುಡಿ
ಸ್ನೇಹದ ದೀಕ್ಷೆಗೆ ನಿನ್ನದೇ ಮುನ್ನುಡಿ
ನೀನೆಂದರೆ ನನಗೆ ನಿರೀಕ್ಷೆಯಿರದ ಒಡನಾಟ
ಮಕ್ಕಳಾಟದಂತೆ ಮಣ್ಣಮಡಿಲಿಗೆ
ಮರಳಿಬಿಡುವ ಮಾಟ
ನೀನೆಂದರೆ ನನಗೆ ಹುಣ್ಣಿಮೆಯ ಚಂದ್ರಮ
ನನ್ನ ನೆಲದ ತುಂಬಾ ನಿನ್ನ ಬೆಳದಿಂಗಳ ನರ್ತನ
ನೀನೆಂದರೆ ನನಗೆ
ಭಾವನೆಗಳ ಹೊನಲು
ತನ್ನ ರೆಕ್ಕೆಯ ಮೇಲೆ ಇರಿಸಿ
ಜಗವ ತೋರ್ವ ಮುಗಿಲು
ನೀನೆಂದರೆ ನನಗೆ ಕನಸು
ನನಸುಗಳ ಹೂರಣ
ನನ್ನ ಭಾವಗಳ ಗುಡಿಗೆ
ನಿನ್ನ ಪ್ರೇಮ ಹಸಿರು ತೋರಣ
ನೀನೆಂದರೆ ನನ್ನ ಮನದಂಗಳದಿ
ನಿತ್ಯ ಕುಕಿಲುವ ಕೋಗಿಲೆ
ನೀನಿರಲು ಜೊತೆಗೆ ಅದು ಋತುವಸಂತಕು ಮಿಗಿಲೆ
ಎಟುಕಿದರೂ ದಕ್ಕದಂಥ
ಬಹುವರ್ಣದ ಕಾಮನಬಿಲ್ಲು
ಬಯಸಿದಾಗ ದೊರೆಯದಂಥ
ಮರುಭೂಮಿಯ ಮಳೆಬಿಲ್ಲು
ನೀನೆಂದರೆ ನನಗೆ
ಎದುರಿಗಿರುವ ಸತ್ಯ
ಮರೆಯಾದೊಡನೆ ಭ್ರಮೆಯೆನಿಸುವುದೇ
ಇದರೊಳೊಳಡಗಿದ ಸಾತತ್ಯ
ನಂಬಿದರೂ ನಂಬಲಾಗದಿರುವ
ಬಾಳ ತಥ್ಯ ನೀನು
ಇಂಬೆಂದು ಭಾವಿಸಿದರೂ
ಕಂಬನಿಯಾಗುವವ ನೀನು
ಕಂಡುಕೊಂಡೆ ನಿನ್ನ ಮಿತಿಯ ಅತಿಯ ನೆರಳು ಬೆಳಕನು ನನ್ನಲಿ
ಸಹಜವೆ ತಾನೆ ಅದು
ಈ ಹಗಲಿರುಳಿನ ಚಕ್ರದಿ
ಪ್ರೀತಿ ಬೆಳದಿಂಗಳ
ಮೀಹದಲ್ಲೂ ವಿರಹದ ತಾಪವಿದೆ
ಸುಡುವ ಹಗಲಿನಲ್ಲು
ನೆರಳಿನ ಹಿತ ತಂಪಿದೆ
ತಂಪು ತಾಪ ಬೆಳಕು ನಿಶೆ
ಎಲ್ಲ ನಿನ್ನೊಳಡಗಿದೆ
ನಿನಗಾಗಿಯೆ ಬದುಕುತಿರುವ
ಈ ಜೀವದಲ್ಲಿ ಅನಿಶ್ಚಿತತೆಯ
ಭಯವಿದೆ.
ಧ್ರುವ ತಾರೆಯಲ್ಲಿ ದಿಟ್ಟಿಯಿರಿಸಿ
ಹೆಜ್ಜೆ ನೆಟ್ಟರೂನು
ಎಡವಿ ಬಿಡುವೆ ತೊಡರಿ ಬಿಡುವೆ
ಮರೆತಾಗ ನನ್ನನೇ ನಾನು
ಹಾಂ..ಮರೆತೆ ನಲ್ಲ ನನ್ನ ನಾನು
ನಾವು ಇಲ್ಲಿ ನಶ್ವರ
ಶಾಶ್ವತತೆಯ ಭ್ರಮೆಯಲ್ಲಿ
ಸಾಗುತಿಹೆವು ನಿರಂತರ
- ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಅಂಕಣಕಾರ್ತಿ, ಚೆಟ್ಟಿಮಾನಿ.
