ಲೋಕದ ಕಣ್ಣಿಗೆ ಎಲ್ಲೂ ಕಾಣನು ರೈತ, ಉಣ್ಣುವ ಅಗುಳಲಿ ಬೆರೆತವನೀತ…ಕೊಡಗಿನ ಕವಿ ಹೇಮಂತ್ ಪಾರೇರಾ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಉಳುವವನೆಂದು ಮಣ್ಣಿಗೆ ಮಗನು
ಲೋಕದ ಹಸಿವನು ತಣಿಸುವನು !
ಉಳುವ ಎತ್ತಿನ ನೊಗದಲ್ಲಿ ಕೋಶ
ನೇಗಿಲ ಯೋಗಿಯ ಕೈಯಲ್ಲಿ ದೇಶ !!
ಬಾರದ ಮಳೆಗೆ ಉತ್ತಿ ಬಿತ್ತಿದ ಬೆಳೆಗೆ
ಆಗಸ ನೋಡುತ್ತಾ ಮೊರೆಯಿಡುವ !
ಸುಡು ಬಿಸಿಲಿಗೆ ಬಾಡಿಯೂ ಕುಗ್ಗದೆ
ರಾತ್ರಿಯ ಬಾನಿಗೆ ಮೋಡಗಳ ಕರೆವ !!
ರವಿಯನು ಕಾಯದೆ ಮಣ್ಣಿಗೆ ಇಳಿದು
ಮುಂಜಾನೆ ಮೊದಲು ಅವನಿಂದ !
ಹುಟ್ಟಿದ ಸಸಿಗೆ ಸಲಹುತ್ತಾ ಪೊರೆದು
ಹಸಿವನು ತಣಿಸುತ್ತಾ ಅವ ನಗುವ !!
ಲೋಕದ ಕಣ್ಣಿಗೆ ಎಲ್ಲೂ ಕಾಣನು ರೈತ
ಉಣ್ಣುವ ಅಗುಳಲಿ ಬೆರೆತವನೀತ !
ಬಿಸಿಲಿರಲೇನು ಚಳಿ ಮಳೆಯಿರಲೇನು
ನೇಗಿಲ ಹಿಡಿದು ಹೊರಟ ಅನ್ನದಾತ !!
ಉಳುವ ನೇಗಿಲ ಹಿಡಿದು ನಡೆಯಲು
ಉಳುಮೆಯೇ ದೇವರು ತಾ ನಂಬುವ !
ಬಡತನ ಸಿರಿತನ ಮಣ್ಣಲ್ಲಿ ಕಾಣಲು
ಕೆಸರಲ್ಲಿ ಮೊಸರು ಎನ್ನುತ್ತಾ ದುಡಿವ !!
- ಹೇಮಂತ್ ಪಾರೇರಾ – ಕೊಡಗು.
