ಶ್ರೀಮಂತರ ಆಟದ ಮೈದಾನ : ಮೊನಾಕೊ ದೇಶ

ವಿಶ್ವದ ಅತ್ಯಂತ ದಟ್ಟವಾದ ಜನಸಂಖ್ಯೆ, ರಸ್ತೆ ಓಟಗಳು, ಕಾರ್ ರೇಸ್‍ಗಳು ಮತ್ತು ದಡದಲ್ಲಿ ಗಾಳಿಯಾಡಿಸುವ ಯಾಟ್‍ಗಳಿಂದ ಕಲ್ಪನೆಗೆ ಬಣ್ಣ ತುಂಬುವ ದೇಶ ಮೊನಾಕೊ. ಈ ದೇಶಕ್ಕೆ ವಿಮಾನ ನಿಲ್ದಾಣಗಳಿಲ್ಲ, ನದಿಗಳಿಲ್ಲ, ತನ್ನದೇ ಸೇನೆ ಇಲ್ಲ ಮತ್ತು ಕೃಷಿಭೂಮಿಯೂ ಇಲ್ಲ. ಆದರೆ “ಲೆ ರೋಚರ್” (ಬಂಡೆ) ಇದೆ. ವಕೀಲರಾದ ಅಂಜಲಿ ರಾಮಣ್ಣ ಈ ದೇಶದ ಕುರಿತು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

Grand Prix ಎನ್ನುವ ಪದದಲ್ಲಿ X ಎನ್ನುವ ಅಕ್ಷರಕ್ಕೆ ಉಚ್ಚಾರಣೆಯಲ್ಲಿ ಅವಕಾಶವೇ ಇಲ್ಲ ಎನ್ನುವಷ್ಟೇ ಕುತೂಹಲಕಾರಿ ಮತ್ತು ರೋಚಕ ಅನುಭವ ಈ ಕಾರ್ ರೇಸ್ ಅನ್ನು ನೋಡುವುದು.

ಆ ಕ್ಷಣ ನನಗೆ ಇನ್ನೂ ನೆನಪಿದೆ, ಹೃದಯವು ಎಂಜಿನ್‌ಗಳಿಗಿಂತಲೂ ಜೋರಾಗಿ ಬುಸುಗುಡುತ್ತಿತ್ತು. ಮಾನ್‍ಟೆ ಕಾರ್ಲೊದ ತಡೆಗೋಡೆಗಳಿಂದ ಕೇವಲ ಮೀಟರ್‌ಗಳ ದೂರದಲ್ಲಿ ನಿಂತು, 20 ಎಫ್1 ಕಾರುಗಳು ಸುರಂಗದ ಮೂಲಕ ಜೋರಾಗಿ ಘರ್ಜಿಸುತ್ತಾ ಸೂರ್ಯನ ಬೆಳಕಿಗೆ ಮುಖಾಮುಖಿಯಾಗಿ ಯಾಟ್‌ಗಳಿಂದ ತುಂಬಿದ ಬಂದರಿನ ಇಂಚು ದೂರದಲ್ಲಿ ಹಾದುಹೋದಾಗ ನೆಲವೇ ನಡುಗುತ್ತಿರುವಂತೆ ಅನಿಸುತ್ತಿತ್ತು. ಪ್ರತಿ ಸುತ್ತಿನಲ್ಲೂ ಉಸಿರು ಬಿಗಿಹಿಡಿದು ನೋಡುತ್ತಿದ್ದೆವು ಅಲ್ಲಿದ್ದ ಜನಸಮೂಹ.

ಇದು ಕೇವಲ ಓಟವಾಗಿರಲಿಲ್ಲ, 3.3 ಕಿ.ಮೀ ಉದ್ದದ ಬೀದಿಗಳಲ್ಲಿ ತುಂಬಿದ ಸಂಚಲನ ಮತ್ತು ವೇಗಕ್ಕೆ ಇದ್ದ ಸದ್ದು ಆಗಿತ್ತದು. ಭೂಮಿಯ ಮೇಲೆ ಬೇರೆ ಯಾವ ಕ್ರೀಡೆಯೂ ಕಣ್ಣ ಮುಂದೆ ನಡೆಯುತ್ತಿದ್ದರೂ ಇಷ್ಟೊಂದು ಅವಾಸ್ತವ ಎನ್ನಿಸುವುದಿಲ್ಲ ಅಷ್ಟೊಂದು ಅನೂಹ್ಯ Grand Prix. “To finish first, you must first finish” ಎನ್ನುವ ಪಾಠದ ಸಾದೃಶ ರೂಪ.
ಇದು ಮೊನಾಕೊ ಎನ್ನುವ ಕೇವಲ 2.1 ಚದರ ಕಿ. ಮೀ ವಿಸ್ತೀರ್ಣವಿರುವ ಸಣ್ಣ ರಾಷ್ಟ್ರದ ಸಾರ. ವಿಶ್ವದ ಅತ್ಯಂತ ದಟ್ಟವಾದ ಜನಸಂಖ್ಯೆ, ರಸ್ತೆ ಓಟಗಳು, ಕಾರ್ ರೇಸ್‍ಗಳು ಮತ್ತು ದಡದಲ್ಲಿ ಗಾಳಿಯಾಡಿಸುವ ಯಾಟ್‍ಗಳಿಂದ ಕಲ್ಪನೆಗೆ ಬಣ್ಣ ತುಂಬುವ ದೇಶ ಮೊನಾಕೊ.

ಫೋಟೋ ಕೃಪೆ : ಅಂತರ್ಜಾಲ

ದಕ್ಷಿಣ ಯುರೋಪಿನಲ್ಲಿ ಮೂರು ಬದಿಗಳಲ್ಲಿ ಫ್ರಾನ್ಸ್ ಮತ್ತು ನಾಲ್ಕನೇ ಬದಿಯಲ್ಲಿ ಮೆಡಿಟರೇನಿಯನ್ ಸಮುದ್ರದಿಂದ ಸುತ್ತುವರೆದಿರುವ ಈ ಸಣಕಲು ಆದರೆ ಬಡಕಲು ಅಲ್ಲದ ಈ ದೇಶಕ್ಕೆ ವಿಮಾನ ನಿಲ್ದಾಣಗಳಿಲ್ಲ, ನದಿಗಳಿಲ್ಲ, ತನ್ನದೇ ಸೇನೆ ಇಲ್ಲ ಮತ್ತು ಕೃಷಿಭೂಮಿಯೂ ಇಲ್ಲ. ಆದರೆ “ಲೆ ರೋಚರ್” (ಬಂಡೆ) ಇದೆ. ಅದರ ಮೇಲೆ ಕಟ್ಟಿರುವ ನಾಗರೀಕತೆ ಇದಾಗಿದೆ.
ಮೊನಾಕೊದಲ್ಲಿನ ಒಂದು ಸಣ್ಣ ಜಿಲ್ಲೆ ಮಾನ್‍ಟೆ ಕಾರ್ಲೊ.

ಶುದ್ಧ ಮೆಡಿಟರೇನಿಯನ್ ಹವಾಮಾನ, ಸೌಮ್ಯವಾದ ಮಳೆ, ಬೆಚ್ಚಗಿನ ಚಳಿ, ಆಹ್ಲಾದಕರ ಬೇಸಿಗೆ ಇರುವ ಈ ಜಾಗ ಪ್ರವಾಸಿಗರ ಫ಼ೇವರೇಟ್ ಸ್ಥಳಗಳ ಪಟ್ಟಿಯಲ್ಲಿ ಮೊದಮೊದಲಿನ ಜಾಗವನ್ನೇ ಪಡೆದಿದೆ. ಪ್ರತಿ ಚದರ ಕಿ.ಮೀಗೆ 19,000ಕ್ಕೂ ಹೆಚ್ಚು ಜನರೊಂದಿಗೆ, ಮೊನಾಕೊ ಭೂಮಿಯ ಮೇಲಿನ ಅತ್ಯಂತ ದಟ್ಟವಾದ ಜನಸಂಖ್ಯೆಯ ರಾಷ್ಟ್ರವಾಗಿದೆ. ಯೂರೋಪಿನ ಅತ್ಯಂತ ಪುರಾತನ ರಾಜವಂಶ ಗ್ರಿಮಾಲ್ಡಿ ಕುಟುಂಬವು ಇಂದಿಗೂ ಆಳ್ವಿಕೆ ನಡೆಸುತ್ತಿದೆ. ಕಡಿಮೆ ತೆರಿಗೆಗಳು, ಹೆಚ್ಚು ಭದ್ರತೆ ಮತ್ತು ವೈಭವೋಪೇತ ಜೀವನಶೈಲಿಯಿಂದ ಆಕರ್ಷಿತರಾಗಿ ಬಂದ ಅನಿವಾಸಿಗಳೇ ಇಲ್ಲಿನ ನಿವಾಸಿಗಳು.

ಕುಟುಂಬದ ಜೊತೆಗಿದ್ದುಕೊಂಡು ಜೂಜಾಡಲು ಸಾಧ್ಯವಾಗದಂತಹ ಶ್ರೀಮಂತ ಫ್ರೆಂಚ್ ಜನರು ಜೂಜಾಡುವ ಉದ್ದೇಶದಿಂದ ಮಾತ್ರ ತಮ್ಮ ವಸಾಹತುವನ್ನಾಗಿ ಮಾಡಿಕೊಂಡಿದ್ದ ಮೊನಾಕೊ ದೇಶಕ್ಕೆ 1861 ರಲ್ಲಿ ಮೂರನೆಯ ಪ್ರಿನ್ಸ್ ಚಾರ್ಲ್ಸ್ ಸ್ವಾತಂತ್ರ್ಯ ತಂದುಕೊಟ್ಟ ಗೌರವಾರ್ಥ ಒಂದು ಜಿಲ್ಲೆಯನ್ನು “ಮಾನ್‍ಟೆ ಕಾರ್ಲೊ” ಎಂದು ಹೆಸರಿಸಲಾಗಿದೆ. ಮಾನ್‍ಟೆ ಎಂದರೆ ಇಟ್ಯಾಲಿಯನ್ ಭಾಷೆಯಲ್ಲಿ ಬಂಡೆ ಎನ್ನುವ ಅರ್ಥ. ಇಂಗ್ಲೀಷಿನ ಚಾರ್ಲ್ಸ್ ಇಟಲಿಯಲ್ಲಿ ಕಾರ್ಲ್ಸ್ ಆಗಿದ್ದಾನೆ.

ಇಲ್ಲಿನ ಸಂಪತ್ತಿನ ಸಾಂದ್ರತೆಯನ್ನು ಪರಿಗಣಿಸಿ ಮೊನಾಕೊ ದೇಶವನ್ನು “ಶ್ರೀಮಂತರ ಆಟದ ಮೈದಾನ” ಎಂದು ಗುರುತಿಸಲಾಗಿದೆ. ಅದಕ್ಕೇ ಅತ್ಯಂತ ಶ್ರೀಮಂತ ಕ್ರೀಡೆ ಎನಿಸಿಕೊಂಡ ಕಾರ್ ರೇಸ್ ಇಲ್ಲಿಯೇ ನಡೆಯುವುದು. ಅದು ನಡೆಯುವ ಸುರಳಿಯನ್ನು “ಸರ್ಕ್ಯೂಟ್ ಡಿ ಮೊನಾಕೊ” ಅಥವಾ “ಸರ್ಕ್ಯೂಟ್ ಡಿ ಮೊಂಟೆ-ಕಾರ್ಲೊ” ಎನ್ನುತ್ತಾರೆ. ಈ ಕಾರೋಟಗಳಿಗಾಗಿ ಇಲ್ಲಿ ಉದ್ದೇಶಪೂರ್ವಕವಾಗಿ ಟ್ರ್ಯಾಕ್‍ಗಳನ್ನು ನಿರ್ಮಾಣ ಮಾಡಿಲ್ಲ. ರಸ್ತೆಗಳ ಮೇಲೆಯೇ ಕಾರ್ ರೇಸ್ ಎನ್ನುವ ರೋಮಾಂಚಕ ಘಟನೆ ಜರುಗುತ್ತದೆ ಇಲ್ಲಿ. ಅದಕ್ಕಾಗಿಯೇ ಗ್ರ್ಯಾಂಡ್ ಪ್ರಿ ಇಲ್ಲಿ ಕೇವಲ ಕ್ರೀಡೆಗಿಂತ ಹೆಚ್ಚು. ಇದು ಮೊನಾಕೊದ ವಾರ್ಷಿಕ ಜಾಗತಿಕ ಜಾಹೀರಾತು.

ಫೋಟೋ ಕೃಪೆ : ಅಂತರ್ಜಾಲ

ಶತಕೋಟಿ ಜನರು ಪ್ರಪಂಚದಾದ್ಯಂತ ಇದನ್ನು ವೀಕ್ಷಿಸುತ್ತಾರೆ. ಕಾರ್ ರೇಸ್ ಸ್ಥಳೀಯ ಆರ್ಥಿಕತೆಗೆ 100 ಮಿಲಿಯನ್‍ ಯೂರೋಗಳಿಗಿಂತಲೂ ಹೆಚ್ಚು ಆದಾಯ ತರುತ್ತಿದೆ.
ಬಹ್ರೇನ್ ಜಿಪಿ, ಆಸ್ಟ್ರೇಲಿಯನ್ ಜಿಪಿ, ಜಪಾನೀಸ್ ಜಿಪಿ, ಮಿಯಾಮಿ ಜಿಪಿ, ಕೆನಡಿಯನ್ ಜಿಪಿ, ಸಿಲ್ವರ್‌ಸ್ಟೋನ್‌ನಲ್ಲಿ ಬ್ರಿಟಿಷ್ ಜಿಪಿ, ಮೊನ್ಜಾದಲ್ಲಿ ಇಟಾಲಿಯನ್ ಜಿಪಿ, ಸಿಂಗಾಪುರ್ ಜಿಪಿ, ಆಸ್ಟಿನ್‌ನಲ್ಲಿ ಯುಎಸ್ ಜಿಪಿ, ಲಾಸ್ ವೇಗಾಸ್ ಜಿಪಿ, ಕತಾರ್ ಜಿಪಿ ಮತ್ತು ಅಬುಧಾಬಿ ಜಿಪಿ ಹೀಗೆ ಹಲವು ಕಡೆಗಳಲ್ಲಿ ಕಾರ್ ರೇಸ್‍ಗಳು ನಡೆದರೂ ಮೊನಾಕೊದ ಗ್ರ್ಯಾಂಡ್ ಪ್ರೀ ಅತ್ಯಂತ ಹಳೆಯ, ಕಠಿಣ ಮತ್ತು ಅತ್ಯಂತ ವೈಭವಯುತವಾಗಿರುವುದರಿಂದ ವಿಶೇಷವಾಗಿದೆ.

ಕಾರ್ ರೇಸ್ ಕ್ರೀಡೆಯ ದಂತಕಥೆ ಎನಿಸಿಕೊಂಡಿರುವ ಜರ್ಮನಿಯ 7 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮೈಕೆಲ್ ಶೂಮೇಕರ್ ತನ್ನ ಅಷ್ಟೂ ಗೆಲುವಿನ ಕಿರೀಟವನ್ನು ಪಡೆದುಕೊಂಡಿದ್ದು ಇದೇ ಮೊನಾಕೊದ ರೇಸಿನಲ್ಲಿ. ಈಗ ಇಲ್ಲಿದೆ ಭಾರತೀಯರಿಗೆ ಮೊನಾಕೊ ಹತ್ತಿರವಾಗಲು ಕಾರಣವಾದ ಅಸಲಿ ಕಥೆ.

ಮಾನ್‍ಟೆ ಕಾರ್ಲೋ ಎಂದ ಕೂಡಲೇ ಭಾರತೀಯ ಮನಸ್ಸು ಆ ಬ್ರ್ಯಾಂಡಿನ ಉಣ್ಣೆ ಬಟ್ಟೆಯನ್ನು ಹೊದ್ದು ಮಲಗುತ್ತದೆ. ಭಾರತದ ಚಳಿಗಾಲದ ಬಟ್ಟೆಯ ಶೇಕಡ 53% ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿರುವುದು ಮಾನ್‍ಟೆ ಕಾರ್ಲೋ ಬ್ರ್ಯಾಂಡ್. ಸಹಜವಾಗಿ ಇದು ಅಲ್ಲಿನ ಉಣ್ಣೆಯಿಂದ ತಯಾರಾಗುವ ಸ್ವೆಟರ್, ಶಾಲುಗಳೆಂದೇ ನಂಬಿಕೊಂಡಿದ್ದೇವೆ.

ವಿಡಂಬನೆಯೆಂದರೆ, ಮೊನಾಕೊ ಉಣ್ಣೆಯನ್ನು ಉತ್ಪಾದಿಸುವುದಿಲ್ಲ. ಅಲ್ಲಿ ಕುರಿಗಳನ್ನು ಸಾಕಲು ಯೋಗ್ಯವಾದ ವಾತಾವರಣವೇ ಇಲ್ಲ. ಕಾರ್ಖಾನೆಗಳನ್ನು ನಡೆಸಲು ಬೇಕಾದಷ್ಟು ಸ್ಥಳವೂ ಇಲ್ಲ. ಆದರೆ “ಮಾನ್‍ಟೆ ಕಾರ್ಲೊ” ಎಂಬ ಹೆಸರು ಉಣ್ಣೆಯ ವಸ್ತುಗಳಿಗಾಗಿ ಮೆಡಿಟರೇನಿಯನ್‌ನ ಆಚೆಗೂ ಬಹಳ ದೂರ ಪ್ರಯಾಣಿಸಿದೆ.

1984ರಲ್ಲಿ ಭಾರತದ ಪಂಜಾಬ್‌ನ ಲುಧಿಯಾನದ ಓಸ್ವಾಲ್ ಕುಟುಂಬವು “ಮಾನ್‍ಟೆ ಕಾರ್ಲೊ ಫ್ಯಾಷನ್ಸ್ ಲಿಮಿಟೆಡ್” ಅನ್ನು ಪ್ರಾರಂಭಿಸಿತು. ಮಾನ್‍ಟೆ ಕಾರ್ಲೊ ಹೆಸರನ್ನು ಓಸ್ವಾಲ್ ಕುಟುಂಬಸ್ಥರು ಆಯ್ಕೆ ಮಾಡಲು ಇದ್ದ ಏಕೈಕ ಕಾರಣ ಎಂದರೆ ಅಲ್ಲಿನ ಸಿರಿವಂತ ಶೈಲಿಯ ಜೀವನ ಮತ್ತು ಐಷಾರಾಮ ಬದುಕು. ಭಾರತೀಯರು ಮೊದಲಿಗೆ ಇದು ಆಮದು ಮಾಡಿಕೊಂಡ ಬ್ರ್ಯಾಂಡ್ ಎಂದು ಭಾವಿಸಿದ್ದೆವು ಮತ್ತು ಇಂದಿಗೂ ಕೂಡ ಹಾಗೆಯೇ ಭಾವಿಸಿದ್ದೇವೆ.

ಆದರೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಾನ್ಟೆ ಕಾರ್ಲೊ ಉಲ್ಲನ್ ಬಟ್ಟೆಗಳು ಅಪ್ಪಟ ಭಾರತೀಯ ಉಲ್ಲನ್‍ನಲ್ಲಿ ತಯಾರಾದ ವಿದೇಶಿ ಹೆಸರಿನ ಉತ್ಪನ್ನಗಳು.
ನಾವು ಸ್ವದೇಶಿ ಉಲ್ಲನ್ ಮಾಲಿಗೆ ವಿದೇಶಿ ಹೆಸರನ್ನಿಟ್ಟು ವಿಖ್ಯಾತರಾದರೆ ಜರ್ಮನಿಯವರು ತಮ್ಮ ಶೂ ತಯಾರಿಕೆಗೆ ಮಾನ್‍ಟೆ ಕಾರ್ಲೊ ಎನ್ನುವ ಹೆಸರಿಟ್ಟು ಲಾಭ ಮಾಡಿಕೊಳ್ಳುತ್ತಿದ್ದಾರೆ.

ಮೊನಾಕೊದ ಭೂಗೋಳ, ಇತಿಹಾಸ, ಗ್ರ್ಯಾಂಡ್ ಪ್ರಿ ಮತ್ತು “ಮಾನ್‍ಟೆ ಕಾರ್ಲೊ” ಬ್ರ್ಯಾಂಡ್‌ಗಳನ್ನು ಒಟ್ಟಾರೆಯಾಗಿ ಬಂಧಿಸುವ ಎರಡು ಪದಗಳೆಂದರೆ ಗುಣಮಟ್ಟದ ಬಗೆಗಿನ ಪ್ರಮಾಣ ಮತ್ತು ಅದು ಬೀರುತ್ತಿರುವ ಪ್ರಭಾವ.

ಫೋಟೋ ಕೃಪೆ : ಅಂತರ್ಜಾಲ

ಆದರೂ 2026ರಲ್ಲಿ, ಮೊನಾಕೊ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ಬದಲಾವಣೆ, ಹಣಕಾಸು, ಕಾರ್ ರೇಸ್ ಮತ್ತು ಜೂಜಾಟದ ಆಚೆಗೆ ವಿಸ್ತರಿಸಲು ಬೇರೆ ಬೇರೆ ದೇಶಗಳಿಂದ ಒತ್ತಡಭರಿತ ಸ್ಪರ್ಧೆಯ ನಡುವೆಯೂ ಗ್ರ್ಯಾಂಡ್ ಪ್ರಿ ಕ್ರೀಡೆಯ ದುಬಾರಿ ಟಿಕೆಟ್‍ಗಳು ಇನ್ನೂ ಸೋಲ್ಡ್ ಔಟ್ ಆಗುತ್ತಿವೆ. ಕ್ಯಾಸಿನೊ ಇನ್ನೂ ದೇಶದೇಶಗಳಿಂದ ಜನರನ್ನು ಆಕರ್ಷಿಸುತ್ತಿದೆ.

ಮೊನಾಕೊ ದೇಶ ಯಾವ ವಿಧದಲ್ಲಿಯೂ ಅದ್ಭುತವಲ್ಲ. ಅಲ್ಲಿನ ಭೂಮಿ, ಸಂಸ್ಕೃತಿ ಯಾವುದೂ ವಿಶೇಷವಲ್ಲ. ಆದರೂ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಲೇ ಉಚ್ಚ್ರಾಯವಾಗಿ ಶೋಭಿಸುತ್ತಿದೆ. ಅದಕ್ಕೆ ಕಾರಣವಿಷ್ಟೆ ಅಲ್ಲಿನವರು ಮೊದಲೇ ಅರ್ಥಮಾಡಿಕೊಂಡಿದ್ದಾರೆ ಜನರು ಉತ್ಪನ್ನಗಳನ್ನು ಖರೀದಿಸುವುದಿಲ್ಲ ಅಥವಾ ದೇಶಗಳಿಗೆ ಭೇಟಿ ನೀಡುವುದಿಲ್ಲ, ಅವರು ಕಥೆಗಳನ್ನು ಖರೀದಿಸುತ್ತಾರೆ ಎಂದು. ಹಾಗಾಗಿಯೇ ಮೊನಾಕೊದ ಮನುಷ್ಯರು ಪುನರಾವಿಷ್ಕಾರದ ಕಥೆ ಹೇಳುತ್ತಿದ್ದಾರೆ.

ಅವರುಗಳು ಜಾಗತೀಕರಣದಲ್ಲಿ ಬೆರಕೆಯಾಗುವ ಮೊದಲೇ, ಯುದ್ಧ, ವೈರಾಣುಗಳಿಂದ ಬದಲಾಗುವ ಮೊದಲೇ ಒಂದು ಅಪ್ಪಟ ಕಥೆಯನ್ನು ಬದುಕಿನ ಪಯಣದಲ್ಲಿ ಹೆಜ್ಜೆಯಾಗಿಸಿಕೊಳ್ಳಲು ಮೊನಾಕೊ ದೇಶಕ್ಕೆ ಹೋಗಿ ಬರಬೇಕಿದೆ.


  • ಅಂಜಲಿ ರಾಮಣ್ಣ – ವಕೀಲರು, ಲೇಖಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading