‘ಅತೀತ’ ಕವನ – ರಶ್ಮಿ ಪ್ರಸಾದ್

ಐವತ್ತೊಂದು ವರ್ಷಗಳ ತುಂಬು ದಾಂಪತ್ಯ ಜೀವನದ ಅಮೃತಘಳಿಗೆಗೆ ಅಪ್ಪ-ಅಮ್ಮನ ಸಾಂಗತ್ಯದ ಹೆಜ್ಜೆಗಳನ್ನು ಅವಲೋಕಿಸಿದಾಗ ಮೂಡಿದ ಹೃದ್ಯ ಕವಿತೆಯಿದು. ರಶ್ಮಿ ಪ್ರಸಾದ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಈ ಬದುಕಿನ ಬವಣೆಯುದ್ದಕ್ಕೂ
ಏರಿಳಿತಗಳೆಷ್ಟೋ ಅರಿಯದಾದೆವು
ಕಷ್ಟ-ಸುಖದಿ ಸವೆದ ದಾರಿಯಲಿ
ಜೊತೆಜೊತೆಯಾಗಿ ಅರಳಿ ನಲಿದೆವು

ಕೂಡಿತು ಕನಸು ಮಾಗಿತು ಮನಸು
ನಡೆದ ದೂರವೆಷ್ಟೋ ಲೆಕ್ಕಿಸದಾದೆವು
ಸೋಲುಗಳೆಷ್ಟೋ.? ಗೆಲುವುಗಳೆಷ್ಟೋ.?
ಪಟ್ಟ ಸಂತಸಗಳೆಷ್ಟೋ.? ತಿಳಿಯದಾದೆವು

ಕೂಡುವುದೆಂತೋ.? ಕಳೆವುದೆಂತೋ.?
ಪ್ರೀತಿ ಸಮ್ಮಿಳಿತದ ನಿತ್ಯ ಸಾಂಗತ್ಯವಿದೆ
ನೋವುಗಳೇ ಬರಲಿ ನಲಿವುಗಳೇ ಬರಲಿ
ಬಾಳ ಹಂದರದಿ ಸಖ್ಯ ಒಡನಾಟವಿದೆ

ಬರೀ ದೇಹಕಷ್ಟೇ ಮುಪ್ಪು ಪ್ರೀತಿಗಲ್ಲ
ಹೃದಯ ಲಯತಾಳ ಮಿಳಿತವಾಗಿದೆ
ಬಯಸಿದಷ್ಟೂ ಪ್ರೀತಿ ಹೆಮ್ಮರವಾಗಿ
ಒಲಿದ ಜೀವ ಸುಖಾನುಭಾವವಾಗಿದೆ

ಉಳಿವಿಗೆಷ್ಟೋ.? ಅಳಿವಿಗಿನ್ನೆಷ್ಟೋ.?
ಲೆಕ್ಕಿಸದೆ ಬದುಕ ಹಂಚಿಕೊಂಡಿಹೆವು
ಜೀವ-ಜೀವ ಸಂಪ್ರೀತಿ ಸಂಪೂರ್ಣವಾಗಿ
ಒಲವ ಸಾಕ್ಷಾತ್ಕಾರದಿ ಅರಳಿರುವೆವು

ಜನ್ಮಗಳ ಬಾಳ-ಬಂಧವಿದು ಕಾಲಾತೀತ
ವ್ಯಾಖ್ಯೆ ವ್ಯಾಖ್ಯಾನಕೂ ದಕ್ಕದ ಪದಾತೀತ
ಭಾಷೆ-ಭಾಷ್ಯಗಳಿಗೂ ಎಟುಕದ ಭಾವಾತೀತ
ವಾಕ್ಯ ವರ್ಣನೆಗೂ ನಿಲುಕದ ಶಬ್ಧಾತೀತ


  • ರಶ್ಮಿ ಪ್ರಸಾದ್ (ರಾಶಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading