ಕೇಳಲಾಗದ ಶಬ್ಧಕ್ಕೆ ಕಿವುಡನಾಗು, ಹೇಳಲಾಗದ ಮಾತಿಗೆ ಮೌನಿಯಾಗು…ಕವಿ ಡಾ.ಅಶೋಕ ಕುಮಾರ ಎಸ್ ಅವರು ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಭವ ಕಳೆದ ಮೇಲೇಕೆ ಕೊರಗು
ಮನಸಿನ ಹೊಲ ಹದವಾಗಿ ಹರಗು
ಶುದ್ಧ ಹೃದಯದಲ್ಲಿ ಬೆಳದಿಂಗಳ ಮೆರುಗು.
ಭಕ್ತಿಯಿಂದ ಶಿರವ ಬಾಗು
ಸದ್ಗುಣ ಸತ್ಪಥದ ದಾರಿಯಲ್ಲಿ ಸಾಗು
ಸಜ್ಜನರ ಸತ್ಸಂಗಕ್ಕೆ ಮೊರೆಯ ಹೋಗು.
ದುಷ್ಟರು ಕಂಡರೆ ತೊಲಗು
ನೊಂದು ಬೆಂದವರ ಕಣ್ಣೀರಿಗೆ ಕರಗು
ದುಡಿದು ದಣಿದವರು ಕಂಡರೆ ಮರುಗು.
ಕೈಯೊಡ್ಡಿದವರ ಕಷ್ಟಕ್ಕಾಗು
ಬಡವರ ಬದುಕಿನ ಬವಣೆ ನೀಗು
ಶರಣರ ಸತ್ಸಂಗದಲ್ಲಿ ಶುದ್ಧನಾಗು.
ಆಸೆಯಳಿದು ಅಶೋಕನಾಗು
ಮೋಹ ಕಳೆದು ಮನುಷ್ಯನಾಗು
ಮಾಯೆ ಕಳೆದು ಮಹಾದೇವನಾಗು.
ಭವ ದಂಡಿಸಿ ಭಕ್ತನಾಗು
ದೇಹ ದಂಡಿಸಿ ಮನುಜನಾಗು
ಮನಸು ದಂಡಿಸಿ ಮಹಾತ್ಮಾನಾಗು.
ಕೇಳಲಾಗದ ಶಬ್ಧಕ್ಕೆ ಕಿವುಡನಾಗು
ಹೇಳಲಾಗದ ಮಾತಿಗೆ ಮೌನಿಯಾಗು
ನೋಡಲಾಗದ ನೋಟಕ್ಕೆ ಕುರುಡನಾಗು.
ಮನಸ್ಸಿನಿಂದ ಮುಕ್ತನಾಗು
ದುಡಿದು ತಿನ್ನುವುದಕ್ಕೆ ಶಕ್ತನಾಗು
ದುಡಿಮೆಯಲ್ಲಿ ದೇವರು ಕಂಡು ಧನ್ಯನಾಗು.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು, ಮುದ್ನಾಳ, ಯಾದಗಿರಿ ಜಿಲ್ಲೆ.
