ಅಭಿಯಂತರರ ದಿನ : ಚೇತನ ಭಾರ್ಗವ

೧೯೫೫ ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ಪ್ರಶಸ್ತಿಗೆ ವಿಶ್ವೇಶ್ವರಯ್ಯನವರು ಭಾಜನರಾದರು. 100 ವರ್ಷಗಳ ಶತಮಾನೋತ್ಸವ ಜೀವನವನ್ನು ಪೂರೈಸಿದ ಈ ಮಹಾನ್ ವ್ಯಕ್ತಿ ೧೪ ಏಪ್ರಿಲ್ ೧೯೬೨ರಂದು ಇಹಲೋಕವನ್ನು ತ್ಯಜಿಸಿದರು. ಅವರ ಜನ್ಮದಿನ 15 ಸೆಪ್ಟೆಂಬರ್ ಅನ್ನು “ಅಭಿಯಂತರರ ದಿನ” ವಾಗಿ ಆಚರಿಸಲಾಗುತ್ತದೆ.

ಜಗತ್ತಿನ ಸರ್ವಶ್ರೇಷ್ಠ  ಇಂಜಿನಿಯರ್ ಆದ ಡಾಕ್ಟರ್ ಸರ್. ಎಂ. ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಹಾಗೂ ತಾಂತ್ರಿಕ ಅಭಿವೃದ್ಧಿಯನ್ನು ಗುರುತಿಸಲು, ಅಭಿಯಂತರರ ಸೃಜನಶೀಲತೆ, ಆವಿಷ್ಕಾರಗಳನ್ನು ಪ್ರಶಂಸಿಸಿ, ಸಮಾಜಕ್ಕೆ ಅವರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯನವರ ಜನ್ಮದಿನವನ್ನು ರಾಷ್ಟ್ರೀಯ ಅಭಿಯಂತರರ ದಿನವೆಂದು ಆಚರಿಸಲಾಗುತ್ತದೆ.

ಅಭಿಯಂತರರನ್ನು “ಆವಿಷ್ಕಾರ ಶಿಲ್ಪಿಗಳು” ಎಂದರೆ ತಪ್ಪಾಗಲಾರದು. ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನದ ಸಹಾಯವಿಲ್ಲದೆ ಬದುಕಲು ಸಾಧ್ಯವಿಲ್ಲ. ಆಣೆಕಟ್ಟುಗಳು, ರಸ್ತೆಗಳು, ಸೇತುವೆ, ತಂತ್ರಜ್ಞಾನದ ಉಪಕರಣಗಳು, ಮಾಹಿತಿ ಮತ್ತು ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ , ಏರೋಸ್ಪೇಸ್, ಬಯೋಮೆಡಿಕಲ್, ಹೀಗೆ ಅನೇಕ ಕ್ಷೇತ್ರಗಳಲ್ಲಿ ಅಭಿಯಂತರರು ಕಾರ್ಯನಿರ್ವಹಿಸುವುದನ್ನು ನೋಡಬಹುದಾಗಿದೆ.

ನವ ನವೀನ ಆವಿಷ್ಕಾರ, ಡಿಜಿಟಲ್ ಕ್ರಾಂತಿ, ಇಂಧನದ ನವೀಕರಿಸುವಿಕೆ, ಇಂಧನ ಕೊರತೆ ನೀಗಿಸಲು, ಜಲ ಸಂಕಷ್ಟ ಪರಿಹರಿಸಲು, ಹವಾಮಾನ ಬದಲಾವಣೆಯ ಮುನ್ಸೂಚನೆ ನೀಡಲು, ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ಹೀಗೆ ಅನೇಕ ಕಾರ್ಯದಲ್ಲಿ ಅಭಿಯಂತರರ ಪರಿಶ್ರಮ ಹೆಚ್ಚಿದೆ.

ಶ್ರೇಷ್ಠ ಅಭಿಯಂತರರಾದ ಸರ್ .ಎಂ. ವಿಶ್ವೇಶ್ವರಯ್ಯನವರು 15 ಸೆಪ್ಟೆಂಬರ್ 1861 ರಂದು ಸಂಸ್ಕೃತ ಪಂಡಿತರಾದ ಶ್ರೀನಿವಾಸ ಶಾಸ್ತ್ರಿಗಳು ಹಾಗೂ ದೈವ ಭಕ್ತೆಯಾಗಿದ್ದ ವೆಂಕಟಲಕ್ಷಮ್ಮ ದಂಪತಿಗಳ ಸುಪುತ್ರನಾಗಿ ಮೈಸೂರು ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನಿಸಿದರು.

ಪ್ರಾಥಮಿಕ ವಿದ್ಯಾಭ್ಯಾಸವನ್ನು ಚಿಕ್ಕಬಳ್ಳಾಪುರದಲ್ಲಿ ಮುಗಿಸಿ ನಂತರ, ಇವರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮುಂದಿನ ಶಿಕ್ಷಣವನ್ನು ಮುಂದುವರಿಸಿ , ನಂತರ ಮುಂಬೈ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಇವರು ಮುಂಬೈ ಸರ್ಕಾರದಲ್ಲಿಯೇ ಇಂಜಿನಿಯರಿಂಗ್ ಸೇವೆಗೆ ಸೇರಿದರು. ಮುಂಬೈ ನಗರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ಸರ್ ಎಂ ವಿಶ್ವೇಶ್ವರಯ್ಯನವರು ಪುಣೆ, ಕೊಲ್ಲಾಪುರ, ಸೋಲಾಪುರ ವಿಜಾಪುರ, ಧಾರವಾಡ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲು ಶ್ರಮಿಸಿದರು.

ಮುಂಬೈ ರಾಜ್ಯದಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡ ನಂತರ ಹೈದರಾಬಾದ್ ಸಂಸ್ಥಾನದ ನಿಜಾನಾ ಕರೆಯ ಮೇರೆಗೆ ಹೈದರಾಬಾದ್ ನಗರದ ನೀರು ಸರಬರಾಜು ಒಳ ಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಯೋಜನೆಯನ್ನು ವಿನ್ಯಾಸಗೊಳಿಸಿದರು. ವಿಶ್ವೇಶ್ವರಯ್ಯನವರು ರೂಪಿಸಿದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ ನಿಜಾಮ ಹೈದರಾಬಾದ್ ನಗರವನ್ನು ನವೀಕರಿಸಿ ಆಧುನಿಕರಿಸಿದನು .

ಸಮುದ್ರದ ಕೊರೆತದಿಂದ ವಿಶಾಖಪಟ್ಟಣ ಬಂದರನ್ನು ರಕ್ಷಿಸುವ ವ್ಯವಸ್ಥೆ ಅಭಿವೃದ್ಧಿ ಪಡಿಸುವಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಪಾತ್ರ ಪ್ರಮುಖವಾಗಿತ್ತು. ಆಧುನಿಕ ಭಾರತದ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಹಿರಿದಾಗಿದೆ.

ಅವರು ಸಮಾಜದ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಜನರ ಅಭಿವೃದ್ಧಿಗೆ ಜನಸಾಮಾನ್ಯರ ಹಿತಕ್ಕಾಗಿ ಮೈಸೂರಿನ ಕೃಷ್ಣರಾಜಸಾಗರ ಆಣೆಕಟ್ಟು, ಬೆಂಗಳೂರು ನೀರು ಸರಬರಾಜು ಯೋಜನೆ, ಜಲ ವಿದ್ಯುತ್ ಯೋಜನೆ ಮುಂತಾದ ಹಲವಾರು ಯೋಜನೆಗಳನ್ನು ವಿನ್ಯಾಸಗೊಳಿಸಿದರು. ವಿಶ್ವೇಶ್ವರಯ್ಯನವರು ಕೃಷ್ಣರಾಜಸಾಗರ ಆಣೆಕಟ್ಟು ನಿರ್ಮಾಣದ ಮುಖ್ಯ ಇಂಜಿನಿಯರ್ ಆಗಿದ್ದರು. ಇದರಿಂದಾಗಿ ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಸಹಾಯವಾಯಿತು.

ಅಲ್ಲದೇ ಮೈಸೂರು ರಾಜ್ಯದ ಕೃಷಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಅಪಾರವಾದ ಕೊಡುಗೆ ದೊರೆಯಿತು. 1912ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ಅವರನ್ನು ದಿವಾನರಾಗಿ ನೇಮಿಸಿದರು. ಸುಮಾರು ಏಳು ವರ್ಷಗಳ ಕಾಲ ದಿವಾನರಾಗಿದ್ದಾಗ, ಅವರು ರಾಜ್ಯದ ಆರ್ಥಿಕ, ಶಿಕ್ಷಣ, ಕೈಗಾರಿಕಾ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಶ್ರೇಷ್ಠ ಸುಧಾರಣೆಗಳನ್ನು ತಂದರು. ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆ, ಭದ್ರಾವತಿ ಉಕ್ಕಿನ ಕಾರ್ಖಾನೆ, ಕೃಷಿ ಬ್ಯಾಂಕ್‌ಗಳ ಸ್ಥಾಪನೆ, ಹಿಂದುಸ್ತಾನ್ ಏರೋನಾಟಿಕ್ಸ್‌ನ ಬೆಳವಣಿಗೆ ಮುಂತಾದ ಮಹತ್ವದ ಕಾರ್ಯಗಳನ್ನು ಸಾಕಾರಗೊಳಿಸಿ,ರಾಜ್ಯಕ್ಕೆ ಕೊಡುಗೆಯನ್ನು ನೀಡಿದರು.

ಅವರು ತಮ್ಮ ಜೀವನವನ್ನು ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ ಹಾಗೂ ದೇಶಪ್ರೇಮದಿಂದ ಕಳೆದಿದ್ದಾರೆ. ಇಂದಿನ ಯುವ ಪೀಳಿಗೆಯವರು ವಿಶ್ವೇಶ್ವರಯ್ಯನವರ ಶಿಸ್ತು ನಿಷ್ಠೆ ಹಾಗೂ ನವ ಚಿಂತನೆಗಳನ್ನು ಅಳವಡಿಸಿಕೊಂಡರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಸಾಧನೆ ಮಾಡಲು ಸಾಧ್ಯವಾಗುತ್ತದೆ.

1955ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ “ಭಾರತ ರತ್ನ” ಪ್ರಶಸ್ತಿಗೆ ವಿಶ್ವೇಶ್ವರಯ್ಯನವರು ಭಾಜನರಾದರು. 100 ವರ್ಷಗಳ ಶತಮಾನೋತ್ಸವ ಜೀವನವನ್ನು ಪೂರೈಸಿದ ಈ ಮಹಾನ್ ವ್ಯಕ್ತಿ 14 ಏಪ್ರಿಲ್ 1962ರಂದು ಇಹಲೋಕವನ್ನು ತ್ಯಜಿಸಿದರು . ಅವರ ಜನ್ಮದಿನ 15 ಸೆಪ್ಟೆಂಬರ್ ಅನ್ನು “ಅಭಿಯಂತರರ ದಿನ”ವಾಗಿ ಆಚರಿಸಲಾಗುತ್ತದೆ.
ಯುವ ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಾಗಿ ಅಭಿಯಂತರರಾಗದೆ, ಸಮಾಜಮುಖಿಯಾಗಿ ಕೆಲಸ ಮಾಡುವ ಸಂಕಲ್ಪವನ್ನು ಮಾಡಿ ತಾಂತ್ರಿಕ ಜ್ಞಾನವನ್ನು ಮೌಲ್ಯಯುತವಾಗಿ ಬಳಸಿದರೆ ವಿಶ್ವೇಶ್ವರಯ್ಯನವರ ಪರಿಶ್ರಮಕ್ಕೆ ಫಲ ಸಿಕ್ಕಂತಾಗಿ ರಾಷ್ಟ್ರದ ಅಭಿವೃದ್ಧಿ ಆಗುತ್ತದೆ.


  • ಚೇತನ ಭಾರ್ಗವ – ಅರಮನೆ ತೋಟ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading