ಸಂಬಂಧ ಎನ್ನುವುದು ಒಂದು ಸುಂದರ ಅನುಭೂತಿ. ಒಂದು ಮಗು ಹುಟ್ಟಿದಾಗಲೇ ಅದರೊಂದಿಗೆ ಅನೇಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ಸಂಬಂಧ’ ತಪ್ಪದೆ ಮುಂದೆ ಓದಿ…
ಸಂಬಂಧ ಎನ್ನುವುದು ಒಂದು ಸುಂದರ ಅನುಭೂತಿ. ಒಂದು ಮಗು ಹುಟ್ಟಿದಾಗಲೇ ಅದರೊಂದಿಗೆ ಅನೇಕ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಅಪ್ಪ-ಅಮ್ಮ, ಅಜ್ಜಿ-ತಾತ, ಮಾವ, ಚಿಕ್ಕಪ್ಪ, ಅತ್ತೆ, ಅಣ್ಣ, ಅಕ್ಕ ಇತ್ಯಾದಿ. ನಂತರದ ದಿನಗಳಲ್ಲಿ ಶಾಲೆಯಲ್ಲಿ ಸ್ನೇಹಿತರ ಸಂಬಂಧ, ಗುರು ಶಿಷ್ಯರ ಸಂಬಂಧ. ಬೆಳೆಯುತ್ತಾ, ಬೆಳೆಯುತ್ತಾ ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಂಡಂತೆ ಇನ್ನೂ ಹೆಚ್ಚಿನ ಹೊಸ ಹೊಸ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ರೋಗಿ – ವೈದ್ಯರ ಸಂಬಂಧ, ಅಪರಿಚಿತರು ಪರಿಚಿತರಾಗಿ ಅವರಲ್ಲಿ ಮೊಳೆತು ಬೆಳೆಯುವ ಸಂಬಂಧ, ಗಂಡು-ಹೆಣ್ಣಿನ ಸಂಬಂಧ ಹೀಗೆ. ಕೆಲವೊಮ್ಮೆ ಹೊರಗಿನ ಸಂಬಂಧಗಳು ಮನೆಯವರಿಗಿಂತ ಹೆಚ್ಚಿನ ಆದ್ಯತೆ ಪಡೆದುಕೊಳ್ಳುವ ಸಂಭವವೂ ಇದೆ.
ಮಾಧ್ಯಮಗಳ ಮೂಲಕ, ಸಂಘ-ಸಂಸ್ಥೆಗಳ ಮೂಲಕ, ಕೆಲಸ ಮಾಡುವ ಸ್ಥಳದಲ್ಲಿ, ಸಮಾಜ ಸೇವೆಯ ಮುಖಾಂತರ, ಹವ್ಯಾಸಗಳಿಂದ, ಪ್ರಯಾಣದಲ್ಲಿ ಹೀಗೆ ಹಲವೆಡೆ ಕೆಲವರೊಂದಿಗೆ ಬೇಗ ಆತ್ಮೀಯತೆ ಬೆಳೆದು ಒಂದು ರೀತಿಯ ಬಾಂಧವ್ಯ ಏರ್ಪಡುತ್ತದೆ. ಕೆಲವು ಸಂಕುಚಿತ ಮನಸ್ಸುಗಳಿಂದ ಇವುಗಳಲ್ಲಿ ಬೇಗನೇ ಒಡಕೂ ಸಹ ಮೂಡುತ್ತದೆ. ಇನ್ನು ಕೆಲವು ಸಂಬಂಧಗಳು ಒಂದು ದಿನ ಮಾತನಾಡದಿದ್ದರೆ ಅಥವಾ ಒಂದು ದಿನ ಸಂದೇಶ ಕಳಿಸದಿದ್ದರೆ, ಉತ್ತರಿಸದಿದ್ದರೆ ಚಡಪಡಿಸುವಷ್ಟು ಮನಕ್ಕೆ ಹತ್ತಿರವಾಗಲೂಬಹುದು. ಆದರೆ ಹೊರಗಡೆಯ ಸಂಬಂಧ ಬೆಳೆಸುವ ಮುನ್ನ ಸ್ವಲ್ಪ ಮಟ್ಟಿನ ಎಚ್ಚರಿಕೆ ಅಗತ್ಯ. ಎಲ್ಲರೂ ಒಳ್ಳೆಯ ಮನೋಭಾವದಿಂದಲೇ ಸ್ನೇಹ ಹಸ್ತ ಚಾಚಿ ಬರುವುದಿಲ್ಲ. ಆದರೆ ಅದನ್ನು ತಿಳಿಯುವುದೂ ಸಹ ಕಷ್ಟ. ಅವರಿಂದ ಹಣದ ಅಥವಾ ಇನ್ಯಾವುದೇ ವಿಷಯಗಳಲ್ಲಿ ಮೋಸ ಹೋದ ಮೇಲೇ ಅದರ ಅರಿವಾಗುವುದು.

ಮಾನವ ಸಂಘಜೀವಿ. ಕಷ್ಟ, ಸುಖ ಹಂಚಿಕೊಳ್ಳಲು, ಪ್ರೀತಿ, ವಿಶ್ವಾಸ ತೋರಿಸಲು, ಕುಗ್ಗಿದಾಗ ಮೇಲೆತ್ತಲು, ಆರೋಗ್ಯ ಸಮಸ್ಯೆ ಉಂಟಾದಾಗ ಉಪಚರಿಸಲು, ಗೆದ್ದಾಗ ಸಂಭ್ರಮಿಸಲು, ಮಾನವ ಸಹಜವಾದ ಬಯಕೆಗಳಿಗೆ ಸ್ಪಂದಿಸಲು ಹೀಗೆ ಸದಾ ಜೊತೆಗಾರರು ಬೇಕು. ಇದು ಅನೇಕ ರೀತಿಯ ಸಂಬಂಧಗಳಿಂದ ಉಂಟಾಗುವ ಭಾವನಾತ್ಮಕ ಬೆಸುಗೆ ಎಂದರೆ ತಪ್ಪಲ್ಲ. ಎಲ್ಲಾ ಸಂಬಂಧಗಳಿಗೂ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಸರಿಯಾಗಿ ನಿಭಾಯಿಸಿದಾಗ ಸಂಬಂಧಗಳು ಗಟ್ಟಿಯಾಗಿರುತ್ತದೆ. ಯಾರಿಗೋ ನೀಡಬೇಕಾದ ಸ್ಥಾನಮಾನವನ್ನು ಇನ್ಯಾರಿಗೋ ನೀಡಿದಾಗ ಆ ವ್ಯಕ್ತಿಯ ಜೀವನದಲ್ಲಿ ತಮಗೆ ಸಿಗಬೇಕಾಗಿದ್ದ ಸ್ಥಾನಮಾನ ಸಿಗದಿರುವವರು ಅವಮಾನಿತರಾಗುತ್ತಾರೆ. ನಮ್ಮವರೆಂದುಕೊಂಡವರು ನಮ್ಮನ್ನು ಕಡೆಗಣಿಸಿದಾಗ ಆಗುವ ನೋವು ಅಪಾರ. ಈ ತಪ್ಪು ಕೆಲವೊಮ್ಮೆ ಗೊತ್ತಿಲ್ಲದೆಯೂ ಆಗಬಹುದು ಅಥವಾ ಉದ್ದೇಶಪೂರ್ವಕವಾಗಿಯೂ ಇರಬಹುದು. ಹೇಗಾದರೂ ಸರಿ, ತಿಳಿದು ತಿದ್ದಿಕೊಂಡರೆ ಮುಂದೆ ಆಗುವ ಸಮಸ್ಯೆಗಳನ್ನು ತಡೆಯಬಹುದು. ಇಲ್ಲದಿದ್ದರೆ ಮುಂದೆ ಇದೇ ದೊಡ್ಡದಾಗಿ ಶಾಶ್ವತವಾಗಿ ಸಂಬಂಧ ಕಡಿದು ಹೋಗಬಹುದು.
ಇನ್ನು ಕೆಲವು ಮನೆಗಳಲ್ಲಿನ ಸಂಬಂಧ ಬಹಳ ಚೆನ್ನಾಗಿರುತ್ತದೆ. ತಂದೆ-ತಾಯಿ, ಮಕ್ಕಳು, ಹಿರಿಯರಲ್ಲಿ ಉತ್ತಮ ಬಾಂಧವ್ಯವಿರುತ್ತದೆ. ಇದಕ್ಕೆ ಮನೆಯ ಹಿರಿಯರು ನಡೆದುಕೊಳ್ಳುವ ಹಾಗೂ ಇತರರನ್ನು ನಡೆಸಿಕೊಳ್ಳುವ ಉತ್ತಮ ಸಂಸ್ಕಾರ ಕಾರಣವಾಗಿರುತ್ತದೆ. ಒಂದು ಕುಟುಂಬದಲ್ಲಿ ಸಂಬಂಧಗಳು ಚೆನ್ನಾಗಿರಬೇಕೆಂದರೆ ಅದಕ್ಕೆ ಅಲ್ಲಿಯ ವಾತಾವರಣವೂ ಪೂರಕವಾಗಿರಬೇಕು. ತಪ್ಪು ಮಾಡಿದಾಗ ತಿದ್ದುವ ರೀತಿ, ಭೇದಭಾವವಿಲ್ಲದೇ ಮನೆಯವರೆಲ್ಲರನ್ನೂ ಒಂದೇ ರೀತಿ ನೋಡುವ ಮನೋಭಾವನೆ, ಮೆಚ್ಚುವ ಗುಣ, ನೀಡುವ ಸಹಕಾರ, ಪ್ರೋತ್ಸಾಹ, ಪರಸ್ಪರ ಪ್ರೀತಿ-ವಿಶ್ವಾಸ, ಗೌರವ, ಆಪ್ತತೆ, ಸುರಕ್ಷತೆಯ ಭಾವ ಎಲ್ಲವೂ ಇಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಮುಂದೆ ಜೊತೆಯಾಗುವ ಸಂಬಂಧಗಳನ್ನು ಯಾವ ರೀತಿ ನಿಭಾಯಿಸಬೇಕು ಎಂಬುದಕ್ಕೆ ಸಹಕಾರಿಯಾಗುತ್ತದೆ.
ತಂದೆ-ತಾಯಿ, ಮಕ್ಕಳ ಸಂಬಂಧ, ರಕ್ತ ಸಂಬಂಧ, ಒಡಹುಟ್ಟಿದವರ ಸಂಬಂಧ, ದಾಯಾದಿ ಸಂಬಂಧ, ದೂರದ ಸಂಬಂಧ, ಸ್ನೇಹ ಸಂಬಂಧ, ಗಂಡು ಹೆಣ್ಣಿನ ಸಂಬಂಧ, ಭಾವನಾತ್ಮಕ ಸಂಬಂಧ ಹೀಗೆ ಸಂಬಂಧಗಳಲ್ಲೂ ಅನೇಕ ವಿಧಗಳಿವೆ. ಒಂದು ಮದುವೆಯಾದಾಗ ಅಲ್ಲಿ ಬರೇ ಗಂಡು-ಹೆಣ್ಣಷ್ಟೇ ಅಲ್ಲದೇ ಎರಡೂ ಕುಟುಂಬಗಳ ಮಧ್ಯೆ ಬೀಗರೆಂಬ ಹೊಸ ಸಂಬಂಧ ಏರ್ಪಡುತ್ತದೆ. ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸ, ಜಗಳ, ಅಪಾರ್ಥ ಎಲ್ಲವೂ ಇದ್ದದ್ದೇ. ಯಾವುದನ್ನಾದರೂ ಅಷ್ಟೇ, ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೆ ಮುಂದಿನ ಹೆಜ್ಜೆ . ಪ್ರೀತಿ, ವಿಶ್ವಾಸಕ್ಕೆ ತಲೆಬಾಗದಿದ್ದರೆ ಮುಂದೆ ಅದು ಬೇಕೆಂದರೂ ಸಿಗದಿರಬಹುದು. ಜಗಳವನ್ನು ಮುಂದುವರೆಸಿದರೆ ಅದರ ಕೊನೆ ಊಹಿಸಲೂ ಸಾಧ್ಯವಾಗದಷ್ಟು ಕಠೋರವಾಗಬಹುದು. ಅಪಾರ್ಥ ಆದಾಗ ತಾಳ್ಮೆಯಿಂದ ಮಾತನಾಡಿ ಸರಿ ಮಾಡಿಕೊಂಡರೆ ಮುಂದಿನ ದಿನಗಳನ್ನು ಚೆನ್ನಾಗಿ ಕಳೆಯಬಹುದು. ದ್ವೇಷ, ಅಸೂಯೆ, ಹೊಟ್ಟೆಕಿಚ್ಚು, ಕಾಲೆಳೆತ, ಅಹಂಕಾರ ಇವೆಲ್ಲಾ ನಮ್ಮೊಳಗಿನ ಸಂಬಂಧವನ್ನು ಇನ್ನಷ್ಟು ಹಾಳುಗೆಡವುತ್ತವೆ. ಎಷ್ಟರ ಮಟ್ಟಿಗೆಂದರೆ ಇದರಿಂದ ಸಂಬಂಧಗಳು ಹೇಳ ಹೆಸರಿಲ್ಲದಂತೆ ದಿಕ್ಕಾಪಾಲಾಗಿ ಹೋಗುವ ಸಾಧ್ಯತೆಯೂ ಇದೆ. ಹಾಗಾಗಿ ಇವನ್ನೆಲ್ಲ ಹುಟ್ಟಿದಾಗಲೇ ಬೇರು ಸಮೇತ ಕಿತ್ತು ಹಾಕುವುದು ಒಳ್ಳೆಯದು. ಇನ್ನು ಸಂಬಂಧಗಳಲ್ಲಿ ಆಸ್ತಿ-ಅಂತಸ್ತುಗಳೆಂಬ ಭೇದಭಾವ ಮಾಡುವವರು, ಹಣ, ಶ್ರೀಮಂತಿಕೆ ನೋಡಿ ಮಣೆ ಹಾಕುವವರು, ಬಡವರೆಂದು ಕೊಡುವ ಮರ್ಯಾದೆ, ಗೌರವ, ಉಡುಗೊರೆಗಳಲ್ಲಿ ತಾರತಮ್ಯ ಮಾಡುವವರೂ ಇದ್ದಾರೆ. ಸಮಾರಂಭಗಳಲ್ಲಿ ಅವಮಾನ ಮಾಡಿ, ಅತ್ಯಂತ ನಿಕೃಷ್ಟವಾಗಿ ಕಾಣುವವರೂ ಇದ್ದಾರೆ.
ಸಂಬಂಧಗಳಲ್ಲಿ ಸ್ವಾರ್ಥ ಇದ್ದಾಗ ತಾಯಿ-ಮಕ್ಕಳು, ಒಡಹುಟ್ಟಿದವರು ಹೀಗೆ ಅಲ್ಲಿ ಯಾವುದಕ್ಕೂ ಬೆಲೆ ಇರುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಸಂಬಂಧಗಳಲ್ಲಿ ಕೊಳ್ಳಿ ಇಡುವವರು, ಒಬ್ಬರು ಆಡಿದ ಮಾತನ್ನು ತಮಗೆ ಬೇಕಾದಂತೆ ತಿರುಚಿ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೇಳಿ ಇಬ್ಬರ ಮಧ್ಯೆ ಮನಸ್ತಾಪ ತಂದೊಡ್ಡಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು, ಹಣದ ವಿಷಯದಲ್ಲಿ, ತಮ್ಮ ಅಧಿಕಾರದ ಧೋರಣೆಯಿಂದ, ಅಹಂಕಾರದ ಮನೋಭಾವದಿಂದ, ಸಂಬಂಧವನ್ನು ಹಾಳು ಮಾಡಿಕೊಳ್ಳುವವರು ಇವರೆಲ್ಲಾ ಸಂಬಂಧಗಳ ಮಹತ್ವ ಅರಿಯದವರು. ಕೆಲವರಿಗೆ ತಮ್ಮ ಮಾತಿನಂತೆ ಎಲ್ಲರೂ ನಡೆಯಬೇಕೆಂಬ ಹಪಾಹಪಿ. ಬೇರೆಯವರ ಭಾವನೆಗಳಿಗೆ, ಅವರ ಆಸೆ, ಆಕಾಂಕ್ಷೆಗಳಿಗೆ ಎಂದೂ ಬೆಲೆ ಕೊಡುವುದಿಲ್ಲ. ಆದ್ದರಿಂದ ಅಂತಹವರಿಗೆ ಯಾರಿಂದಲೂ ಪ್ರೀತಿ, ವಿಶ್ವಾಸ, ಮನಸ್ಸಿನಲ್ಲಿ ಒಂದು ಒಳ್ಳೆಯ ಸ್ಥಾನಮಾನ ಸಿಗುವುದಿಲ್ಲ. ಇನ್ನು ಕೆಲವು ಮನೆಗಳಲ್ಲಿ ಅತೀ ಶಿಸ್ತು, ದುರಾಡಳಿತ, ಗಲಾಟೆ, ಕೋಪ, ಕಟ್ಟುನಿಟ್ಟು ತಮ್ಮ ಸುತ್ತಲಿನ ವಾತಾವರಣ ಸದಾ ಹೀಗಿದ್ದಾಗ ಮನೆಯ ಇತರ ಸದಸ್ಯರಿಗೆ ಅಲ್ಲಿಂದ ಹೊರಗಡೆ ಹೋದರೆ ಸಾಕಪ್ಪ ಎನಿಸುತ್ತದೆ.

ಪತಿ ಅಥವಾ ಪತ್ನಿಯ ಅನೈತಿಕ ಸಂಬಂಧಗಳಿಂದ ಬೇಸತ್ತು ಸಮಾಜದ ಮುಂದೆ ಹೇಳಿಕೊಳ್ಳಲಾಗದೇ, ಸಂಬಂಧ ಕಡಿದುಕೊಳ್ಳಲೂ ಆಗದೇ ಉಸಿರು ಕಟ್ಟಿಕೊಂಡು ಬದುಕುತ್ತಿರುವವರು ಅನೇಕರು. ಮನೆತನದ ಮಾನ, ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರು ಹಲವರು. ಇನ್ನು ಕೆಲವರು ಆ ಸಂಬಂಧಗಳಿಂದ ಹೊರಬಂದು ಮುಂದಿನ ಜೀವನ ತಮಗೆ ಬೇಕಾದಂತೆ ರೂಪಿಸಿಕೊಂಡಿರುವವರು. ಇದಲ್ಲದೇ ಆಸ್ತಿಗೋಸ್ಕರ ಸಂಬಂಧ ಕಡಿದುಕೊಂಡವರು, ಯಾವುದೋ ವಿಷಯಕ್ಕೆ ಆದ ಜಗಳವನ್ನು ದೊಡ್ಡದು ಮಾಡಿ ತಮ್ಮ ಮನೆಯವರ್ಯಾರೂ ಆ ಮನೆಯವರನ್ನು ಮಾತನಾಡಿಸಬಾರದು, ಒಳ್ಳೆಯದು, ಕೆಟ್ಟದ್ದು ಯಾವುದಕ್ಕೂ ಹೋಗಬಾರದು ಎಂಬ ಮನೆಯ ಯಜಮಾನನ ಮಾತಿಗೆ ಕಟ್ಟು ಬಿದ್ದು ಮನೆಯವರೆಲ್ಲರೂ ಕೆಲವು ಸಂಬಂಧಗಳಿಂದ ದೂರ ಆದಂತಹ ಪರಿಸ್ಥಿತಿ ಅನೇಕ ಮನೆಗಳಲ್ಲಿದೆ.
ಹಿಂದೆಲ್ಲಾ ಸಂಬಂಧಗಳಿಗೆ ಹೆಚ್ಚಿನ ಮಹತ್ವ ಇರುತ್ತಿತ್ತು. ಅದು ಯಾವ ಸಂಬಂಧವಾದರೂ ಸರಿ ಉದಾಹರಣೆಗೆ ತಂದೆ-ತಾಯಿ, ಗುರುಹಿರಿಯರು ಎಂಬ ಭಯ, ಭಕ್ತಿ ಗೌರವ ಎಲ್ಲಾ ಇರುತ್ತಿತ್ತು. ಹಾಗಾಗಿಯೇ ಸಮಸ್ಯೆಗಳು ಬಂದಾಗ, ತಪ್ಪು ನಡೆದಾಗ, ಸಂಬಂಧಗಳಲ್ಲಿ ಬಿರುಕು ಉಂಟಾದಾಗ, ಆಸ್ತಿಯಲ್ಲಿ ವಾದ-ವಿವಾದಗಳಾದಾಗ, ಹಿರಿಯರ ಮಾತಿಗೆ ತಲೆಬಾಗಿ ಎಷ್ಟೋ ಸಂಬಂಧಗಳು ಗಟ್ಟಿಯಾಗಿ ಉಳಿದದ್ದು ಇದೆ. ಹಿರಿಯರು ನೋಡಿ ಮಾಡಿದ ಮದುವೆಗಳಲ್ಲೂ ಸಹ ಸಮಸ್ಯೆಗಳು ಉಂಟಾದಾಗ ಅವರೇ ಮುಂದೆ ಬಂದು ಅದನ್ನು ಬಗೆಹರಿಸಿ ಸಂಸಾರ ಸರಿ ಮಾಡಿದ ಉದಾಹರಣೆಗಳೂ ಬೇಕಾದಷ್ಟಿವೆ. ಈಗಂತೂ ಒಂದು, ಎರಡು ದಿನದ ಮದುವೆಗೆ ಕೋಟಿ ಖರ್ಚು ಮಾಡುವವರೂ ಇದ್ದಾರೆ. ಆದರೆ ಕೆಲವು ಮದುವೆಗಳು ಒಂದೆರಡು ವರ್ಷದೊಳಗೆ ಕೋರ್ಟ್ ಮೆಟ್ಟಿಲೇರಿ ಮುರಿದು ಬಿದ್ದದ್ದೂ ಇದೆ. ಇಂತಹ ಸಂದರ್ಭಗಳಲ್ಲಿ ತಂದೆ-ತಾಯಿ, ತಮ್ಮ ಮುಂದಿನ ಭವಿಷ್ಯ, ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮ, ಯಾವುದರ ಬಗ್ಗೆಯೂ ಯೋಚಿಸದೇ ಮೊದಲು ಇದರಿಂದ ಬಿಡುಗಡೆ ಸಿಕ್ಕಿದರೆ ಸಾಕಪ್ಪ ಎನ್ನುವಂತಹ ಮನಸ್ಥಿತಿಗೆ ತಲುಪಿರುತ್ತಾರೆ.
ಈ ಯಾಂತ್ರಿಕ ಬದುಕಿನಲ್ಲಿ ಎಲ್ಲರದೂ ವೇಗದ ಓಟವೇ. ಹಾಗಂತ ಬದುಕನ್ನೇ ಬಿಟ್ಟು ಎಲ್ಲಿಗೆಂದು ಓಡುವುದು? ಬದುಕಿನಲ್ಲಿ ಸಂಬಂಧಕ್ಕೆ ಮಹತ್ವವನ್ನೇ ನೀಡದೇ ಓಡಿ ಓಡಿ ಸುಸ್ತಾಗಿ ನಿಂತಾಗಲಾದರೂ ಯಾರಾದರೊಬ್ಬರು ನೀರು ಕೊಡುವವರು ಬೇಕಲ್ಲವೇ? ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಬಂಧಗಳು ಸತ್ತು ಹೋಗಿವೆ ಎಂದರೆ ಅತಿಶಯೋಕ್ತಿಯಲ್ಲ. ಹೇಗೆಂದರೆ, ಅದರಲ್ಲಿ ನಮ್ಮವರು, ತಮ್ಮವರು ಎಂಬ ಪ್ರೀತಿ-ವಿಶ್ವಾಸ ಇಲ್ಲ. ಬಂದು-ಹೋಗುವ, ಕರೆಯುವ, ಕೊನೇ ಪಕ್ಷ ಎಲ್ಲಾದರೂ ಸಿಕ್ಕಿದಾಗ ನಮ್ಮ ಸಂಬಂಧಿಕರೆಂದು ನಗು ಮುಖದಲ್ಲಿ ಮಾತನಾಡುವ ಮನಸ್ಸೂ ಇಲ್ಲ. ಆದರೂ ಸೂತಕ ಮಾತ್ರ ಆಚರಿಸಲೇಬೇಕು ಎಂಬಂತಾಗಿದೆ. ಇಷ್ಟೆಲ್ಲಾ ಇದ್ದಮೇಲೆ ಅಲ್ಲಿ ಕಣ್ಣೀರು, ಭಾವನಾತ್ಮಕತೆಗೆ ಬೆಲೆ ಎಲ್ಲಿದೆ? ಹಿಂದಿನಿಂದ ಬಂದ ಪದ್ಧತಿ ಆಚರಿಸಬೇಕು ಅಷ್ಟೇ ಎನ್ನುವಂತಾಗಿದೆ.
ಹೊಸಹೊಸ ಸಂಬಂಧಗಳನ್ನು ಮಾಡಿಕೊಳ್ತೀವೋ, ಇಲ್ವೋ. ಆದ್ರೆ ಇರೋ ಸಂಬಂಧಗಳನ್ನ ಉಳಿಸಿಕೊಂಡು ಹೋಗೋಣ. ಈ ಜನ್ಮದಲ್ಲಿ ಇಂತಿಂಥವರ ಜೊತೆ ನಮ್ಮ ಬದುಕು ಎಂದು ಆ ದೇವರು ಮೊದಲೇ ಜೊತೆ ಮಾಡಿ ಕಳಿಸಿರುವುದರಿಂದ ನಾವು ಹುಟ್ಟಿದ ಕ್ಷಣಕ್ಕೇ ನಮ್ಮವರೆಂದು ಒಂದಷ್ಟು ಸಂಬಂಧಗಳೂ ಸಹ ನಮ್ಮ ಜೊತೆಯಾಗುತ್ತವೆ. ಹಾಗಾಗಿ ಇರುವ ಸಂಬಂಧಗಳನ್ನು ಕೊನೆವರೆಗೂ ಕಾಪಾಡಿಕೊಳ್ಳುವ ಪ್ರಯತ್ನವಂತೂ ನಮ್ಮ ಕಡೆಯಿಂದ ಇರಲಿ ಎಂಬ ಆಶಯದೊಂದಿಗೆ.
-
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಅಂಗೈಯಲ್ಲಿ ಪ್ರಪಂಚ ‘ನಾನು ಆಸ್ಪತ್ರೆ’ (ಭಾಗ- ೩೮)
- ಅಂಗೈಯಲ್ಲಿ ಪ್ರಪಂಚ ‘ಮಧ್ಯವರ್ತಿಗಳು’ (ಭಾಗ- ೩೯)
- ಹಿಂದಿನ ಸಂಚಿಕೆಗಳು :
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.
