ಅಂಗೈಯಲ್ಲಿ ಪ್ರಪಂಚ (ಭಾಗ- ೩೨)

ಜಗತ್ತಿನಲ್ಲಿ ಸ್ನೇಹಿತರಿಲ್ಲದವರು ಯಾರೂ ಇಲ್ಲವೆನಿಸುತ್ತದೆ. ಚಿಕ್ಕಂದಿನಲ್ಲಿ ಬೆಳೆದ ಸ್ನೇಹವನ್ನು ಕೊನೆವರೆಗೂ ಕಾಪಾಡಿಕೊಂಡವರು ಇರುವಂತೆಯೇ ಸ್ನೇಹವನ್ನು ನಿಭಾಯಿಸುವಲ್ಲಿ ಎಡವಿ ಮಧ್ಯದಲ್ಲೇ ಬಿರುಕು ಮೂಡಿ ಸ್ನೇಹದ ಸಂಬಂಧ ಕಡಿದುಕೊಂಡವರೂ ಇದ್ದಾರೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ ಸ್ನೇಹ ಸಂಬಂಧ’ ತಪ್ಪದೆ ಮುಂದೆ ಓದಿ…

ಇಂದು ಶಂಕರನ ಮಗಳ ಮದುವೆ. ಹೇಳಿಕೊಳ್ಳುವಂತಹ ಅದ್ಧೂರಿತನವಿಲ್ಲದಿದ್ದರೂ ಒಂದು ಮಟ್ಟಿಗೆ ಸೈ ಎನಿಸಿಕೊಳ್ಳುವಂತಹ ವ್ಯವಸ್ಥೆಗೇನೂ ಕಡಿಮೆಯಿರಲಿಲ್ಲ. ಸಂತೋಷ-ಸಂಭ್ರಮವಂತೂ ಜೋರಾಗೇ ಇತ್ತು. ಬಂಧು-ಬಳಗದವರ, ಸ್ನೇಹಿತರ, ಗುರು ಹಿರಿಯರ ಸಮ್ಮುಖದಲ್ಲಿ ಯಾವುದೇ ಕುಂದು ಕೊರತೆಯಿಲ್ಲದೇ ನಡೆದ ಮದುವೆ ಶಂಕರನ ಮನಸ್ಸನ್ನು ನಿರಾಳಗೊಳಿಸಿತ್ತು. ಅಂತೂ ಮಗಳ ಮದುವೆ ಜವಾಬ್ದಾರಿ ಮುಗೀತು ನೋಡು, ಚೆನ್ನಾಗೇ ನಿಭಾಯ್ಸಿದ್ಯ ಎಂದು ಬಂದ ನೆಂಟರಿಷ್ಟರು ಹೇಳುವಾಗ ಶಂಕರ ಮನಸ್ಸಿನಲ್ಲೇ ತನ್ನ ಸ್ನೇಹಿತ ಸಹೋದ್ಯೋಗಿಗಳೆಲ್ಲರಿಗೂ ಮನದಲ್ಲೇ ಕೃತಜ್ಞತೆ ಸಲ್ಲಿಸುತ್ತಿದ್ದ.

ಬಡತನದಲ್ಲೇ ಹುಟ್ಟಿ ಬೆಳೆದ ಶಂಕರನಿಗೆ ಜೊತೆಯಾಗಿ ಬಂದವಳು ಲಕ್ಷ್ಮಿ. ತಮ್ಮನ ಓದು, ವಯಸ್ಸಾದ ತಂದೆ-ತಾಯಿಯ ಜವಾಬ್ದಾರಿ, ತನ್ನ ಸಂಸಾರ ಹೀಗೆ ಅವನಿಗೂ ಹೆಚ್ಚಿನ ಮೊತ್ತದ ಹಣವನ್ನು ಕೂಡಿಸಿಡಲು ಸಾಧ್ಯವಾಗಿರಲಿಲ್ಲ. ಪದವಿ ಮುಗಿಯುವಷ್ಟರಲ್ಲಿ ಮಗಳಿಗೆ ಕಂಕಣ ಬಲ ತಾನಾಗೇ ಕೂಡಿ ಬಂದಾಗ, ಎಲ್ಲಾ ಕಡೆಯಿಂದಲೂ ಒಳ್ಳೆಯ ಸಂಬಂಧ ಎಂದು ಕೇಳಿ ಬಂದಿದ್ದರಿಂದ, ಮಗಳಿಗೂ ಹುಡುಗ ಇಷ್ಟವಾದ ಕಾರಣ ನಿರೀಕ್ಷಿಸದೇ ಇದ್ದ ಸಮಯದಲ್ಲಿ ಮದುವೆ ನಿಶ್ಚಯವಾಗೇ ಬಿಟ್ಟಿತ್ತು. ಹೆಚ್ಚು ಸಮಯಾವಕಾಶ ಇರಲಿಲ್ಲವಾದ್ದರಿಂದ ಹಣ ಹೊಂದಿಸಲು ಶಂಕರನಿಗೆ ಬೆಂಬಲವಾಗಿ ನಿಂತವರು ಅವನು ಕೆಲಸ ಮಾಡುವಲ್ಲಿನ ಸ್ನೇಹಿತರು. ಅವನಿಗೆ ಧೈರ್ಯ ತುಂಬಿ, ಹಣ ಹೊಂದಿಸಿ ಕೊಟ್ಟು, ಒಂದು ಚೂರೂ ಕುಂದು- ಕೊರತೆ ಬರದಂತೆ, ತಮ್ಮ ಮನೆಯ ಕಾರ್ಯಕ್ರಮವೆಂಬಂತೆ ಓಡಾಡಿ ಎಲ್ಲವನ್ನೂ ಮಾಡಿದ್ದರು. ಇಂತಹ ಸ್ನೇಹಕ್ಕೆ ಎಲ್ಲಾದರೂ ಬೆಲೆ ಕಟ್ಟಲು ಸಾಧ್ಯವೇ…? ಎಲ್ಲಿ ಹಣ ಕೇಳುತ್ತಾನೋ ಎಂದು ಮದುವೆ ನಿಶ್ಚಯವಾದ ಸುದ್ದಿ ತಿಳಿದಾಗಿನಿಂದ ಎದುರು ಸಿಕ್ಕರೂ ತಪ್ಪಿಸಿಕೊಂಡು ಓಡಾಡುತ್ತಿದ್ದ ನೆಂಟರಿಷ್ಟರು, ಪರಿಚಯದವರ ಮುಂದೆ ತನ್ನನ್ನು ಗಟ್ಟಿಯಾಗಿ ನಿಲ್ಲಿಸಿದ ಸ್ನೇಹಿತರು ಅವನ ಪಾಲಿಗೆ ನಿಜವಾದ ದೇವರು.

ಲೋ ಸುರೇಶ, ನೋಡೋ, ಸುಧಾಮ ನಗರದಲ್ಲಿ ಯಾರಿಗೋ ‘ಎ ನೆಗೆಟಿವ್ ಬ್ಲಡ್’ ಬೇಕಂತೆ ಎಂದು ತನಗೆ ವಾಟ್ಸಪ್ನಲ್ಲಿ ಬಂದಿದ್ದ ಫಾರ್ವರ್ಡ್ ಮೆಸೇಜನ್ನು ಹಾಕುತ್ತಾ ಮಹೇಶ ಸುರೇಶನಿಗೆ ಹೇಳಿದ್ದ. ತಕ್ಷಣ ಪ್ರತಿಕ್ರಿಯಿಸಿದ ಸುರೇಶ ಇರು, ಅವರನ್ನ ಕಾಂಟ್ಯಾಕ್ಟ್ ಮಾಡ್ತೀನಿ ಎಂದು ರಾತ್ರಿ ಹನ್ನೊಂದು ಗಂಟೆಯಲ್ಲಿ ಮೆಸೇಜ್ನಲ್ಲಿದ್ದ ನಂಬರ್ಗೆ ಸಂಪರ್ಕಿಸಿ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ನರಳುತ್ತಿದ್ದ ವ್ಯಕ್ತಿಗೆ ತಕ್ಷಣಕ್ಕೆ ಬೇಕಾಗಿದ್ದ ರಕ್ತ ನೀಡಿ, ಅವರ ಮನೆಯವರಿಗೆ ಸಾಂತ್ವನ ಹೇಳಿ ಹಿಂದಿರುಗಿದ್ದ. ಮರುದಿನ ಆ ವ್ಯಕ್ತಿಯ ಕಡೆಯವರಿಂದ ನಿಮ್ಮಿಂದ ತುಂಬಾ ಉಪಕಾರವಾಯ್ತು , ನಮ್ಮ ತಂದೆ ಜೀವ ಉಳಿಸಿದವರು ನೀವು ಎಂಬ ಮಾತು ಕೇಳಿ ಧನ್ಯತೆಯಿಂದ ಕಣ್ಣೀರು ತುಂಬಿ ಬಂದಿತ್ತು.

ಇವುಗಳೊಂದೆರಡು ಉದಾಹರಣೆಗಳಷ್ಟೆ. ಸ್ನೇಹ ಎಂದರೆ ಬರೀ ಮೋಜು, ಮಸ್ತಿ, ಸುತ್ತಾಟ, ಆಗಾಗ ಸಣ್ಣಪುಟ್ಟ ಕಿತ್ತಾಟ, ಕೆಲವು ಹವ್ಯಾಸಗಳಿಗೆ ಜೊತೆಗಾರರು, ಇತ್ಯಾದಿ ಮಾತ್ರವಲ್ಲ. ಸ್ನೇಹಿತರುಗಳು ಸೇರಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮದೇ ಆದ ಗುಂಪುಗಳನ್ನು ಮಾಡಿಕೊಂಡು ಅದರ ಮೂಲಕ ಅಗತ್ಯವಿರುವವರಿಗೆ ಸಹಾಯಹಸ್ತ ಚಾಚುವುದು, ಅನಾಥಾಶ್ರಮ, ವೃದ್ಧಾಶ್ರಮ, ಸರ್ಕಾರಿ ಶಾಲೆಗಳು , ವಿದ್ಯಾರ್ಥಿಗಳು, ರೋಗಿಗಳು ಹೀಗೆ ಅವಶ್ಯಕತೆ ಇರುವವರಿಗೆ ತಮ್ಮ ಕೈಲಾದ ಸೇವೆ ಮಾಡುವವರು ಅನೇಕರು. ಇದಕ್ಕೆ ಕಣ್ಣ ಮುಂದಿನ ಉದಾಹರಣೆಯೆಂದರೆ , ಕೋವಿಡ್ ಸಮಯದಲ್ಲಿ ಸ್ನೇಹಿತರೆಲ್ಲರು ಒಂದೆಡೆ ಸೇರಿ ಆಹಾರ ತಯಾರಿಸಿ, ಮೂರು ಹೊತ್ತು ತಮ್ಮದೇ ಸ್ವಂತ ವಾಹನದಲ್ಲಿ ಹೋಗಿ ಹಂಚಿ ಬಂದವರು ಇದ್ದಾರೆ. ಬೇಕಾದ ದಿನಸಿ ವಸ್ತುಗಳು, ತರಕಾರಿಗಳನ್ನು ಕೊಟ್ಟವರೂ ಇದ್ದಾರೆ. ಬೀದಿ ನಾಯಿಗಳಿಗೆ ಊಟ ಹಾಕಿದವರು, ಭಿಕ್ಷುಕರಿಗೆ, ನಿರ್ಗತಿಕರಿಗೆ ಕೈಲಾಗದವರಿಗೆ, ತಮ್ಮ ಕೈಲಾದದ್ದನ್ನು ಮಾಡಿ ಹುಟ್ಟಿದ ಮಣ್ಣಿನ ಋಣವನ್ನು ತೀರಿಸುವ ಪ್ರಯತ್ನ ಮಾಡಿದವರು ಅನೇಕರು. ಇದನ್ನು ಹೇಳಿಕೊಂಡವರು ಹಲವರಾದರೆ, ಏನನ್ನೂ ಹೇಳಿಕೊಳ್ಳದೇ ಎಲೆಮರೆಯ ಕಾಯಂತೆ ಸಮಾಜಸೇವೆ ಮಾಡುವ ಅನೇಕ ಸ್ನೇಹಿತರ ಗುಂಪುಗಳಿವೆ ಎಂದರೆ ಅತಿಶಯೋಕ್ತಿಯಲ್ಲ. ಸ್ನೇಹದ ಶಕ್ತಿಯೇ ಅಂಥದ್ದು. ಅದು ಏನನ್ನು ಬೇಕಾದರೂ ಮಾಡಿಸುತ್ತದೆ. ಅದಕ್ಕೆ ವಯಸ್ಸಿನ ಹಂಗಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಸ್ನೇಹಿತರು ಒಟ್ಟಾಗಿ ಮಾಡುವ ಒಳ್ಳೆಯ ಕೆಲಸಗಳಿಗೆ ಎಂದಿಗೂ ಜಯವೇ.

ಬಹುಶಃ ಜಗತ್ತಿನಲ್ಲಿ ಸ್ನೇಹಿತರಿಲ್ಲದವರು ಯಾರೂ ಇಲ್ಲವೆನಿಸುತ್ತದೆ. ಕೊನೆಗೆ ಯಾವುದೇ ವಯಸ್ಸಿನಲ್ಲಾದರೂ ಒಬ್ಬರಾದರೂ ಇರದಿರಲು ಖಂಡಿತಾ ಸಾಧ್ಯವಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರಿಗೂ ಸ್ನೇಹಿತರ ಒಡನಾಟ ಬೇಕೇಬೇಕು. ಮನೆಯವರ ಬಳಿ ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು ಸ್ನೇಹಿತರ ಬಳಿ ಹೇಳಿಕೊಳ್ಳಬಹುದು. ಆಗ ಅವರಿಂದ ಸಿಗುವ ಸ್ಪಂದನೆ ತುಂಬಾ ಸಹಕಾರಿಯಾಗುತ್ತದೆ. ಹಗಲು-ರಾತ್ರಿ ಎನ್ನದೇ ಕಷ್ಟಸುಖದಲ್ಲಿ ಓಡಿಬರುವವರು, ಸಹಾಯಹಸ್ತ ಚಾಚುವವರು ಸ್ನೇಹಿತರು. ನಮ್ಮವರು ಎನಿಸಿಕೊಂಡವರು ಕೈಬಿಟ್ಟರೂ ಸ್ನೇಹಿತರು ಕೈಹಿಡಿದು ಜೊತೆಗೆ ಕರೆದೊಯ್ಯುತ್ತಾರೆ.

ಸ್ನೇಹಕ್ಕಾಗಿ ಪ್ರಾಣ ಕೊಡುವವರು, ಚಿಕ್ಕಂದಿನಲ್ಲಿ ಬೆಳೆದ ಸ್ನೇಹವನ್ನು ಕೊನೆವರೆಗೂ ಕಾಪಾಡಿಕೊಂಡವರು ಇರುವಂತೆಯೇ ಸ್ನೇಹವನ್ನು ನಿಭಾಯಿಸುವಲ್ಲಿ ಎಡವಿ ಮಧ್ಯದಲ್ಲೇ ಬಿರುಕು ಮೂಡಿ ಸ್ನೇಹದ ಸಂಬಂಧ ಕಡಿದುಕೊಂಡವರೂ ಇದ್ದಾರೆ. ವಿದ್ಯಾಭ್ಯಾಸ, ಕೆಲಸ ಎಂದು ಬೇರೆ ಬೇರೆಯಾದಾಗ ಮೊದಮೊದಲು ಪತ್ರಗಳ (ಈಗ ಮೊಬೈಲ್ ಇರುವುದರಿಂದ ತೊಂದರೆಯಿಲ್ಲ) ರವಾನೆಯಾದರೂ ನಂತರದ ದಿನಗಳಲ್ಲಿ ತಮ್ಮದೇ ಬದುಕಿನ ಜಂಜಾಟದಲ್ಲಿ ನಿಧಾನಕ್ಕೆ ಕಡಿಮೆಯಾಗುತ್ತಾ ಕೊನೆಗೊಮ್ಮೆ ಅದು ನಿಂತು ಹೋಗಿರುವುದೂ ಇದೆ. ಈಗ ಮತ್ತೆ ವಾಟ್ಸಪ್, ಫೇಸ್ಬುಕ್ನಿಂದಾಗಿ ಹಳೆಯ ಸ್ನೇಹಿತರು ಒಟ್ಟುಗೂಡಿ ವಯಸ್ಸಾದ ಕಾಲದಲ್ಲಿ ಮತ್ತೆ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ, ತಮ್ಮತಮ್ಮ ಸಂಸಾರದ ಆಗುಹೋಗುಗಳ ಬಗ್ಗೆ ಮಾತನಾಡುತ್ತಾ, ಹತ್ತಿರವಿದ್ದವರು ಆಗಾಗ ಭೇಟಿಯಾಗುತ್ತಾ , ದೂರದಲ್ಲಿರುವವರು ಊರಿಂದ ಊರಿಗೆ ಹೋಗಿ ತಾವು ಓದಿದ ಶಾಲೆಯಲ್ಲೋ, ಊರಿನ ದೇವಸ್ಥಾನದಲ್ಲೋ ನಿಗದಿತ ಸಮಯದಲ್ಲಿ ಭೇಟಿಯಾಗುವುದರೊಂದಿಗೆ ಮತ್ತೆ ತಮ್ಮ ಸ್ನೇಹವನ್ನು ಬಲಪಡಿಸಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ. ಅದರ ಜೊತೆಗೆ ಒಂದಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಸಹಾಯ ಮಾಡುವುದು ಹೀಗೆ ತಮ್ಮನ್ನು ತಾವು ತೊಡಗಿಸಿಕೊಂಡು ಉಲ್ಲಾಸದಾಯಕ ಬದುಕನ್ನು ಬದುಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ತಮ್ಮ ಇಷ್ಟದ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರ ಜೊತೆಗೆ ಅಲ್ಲಿಂದ ಶುರುವಾದ ಸಮಾನ ಮನಸ್ಕರೆಂಬ ಸ್ನೇಹವಲಯದಲ್ಲಿ ಸಾಹಿತ್ಯ, ಸಂಗೀತ, ಕಲೆ, ಅಡುಗೆ, ಕೈತೋಟ, ಹೀಗೆ ಅನೇಕ ವಿಷಯಗಳಲ್ಲಿ ಪ್ರೋತ್ಸಾಹ, ಮನ್ನಣೆ, ಗೌರವ ಎಲ್ಲಾ ದೊರೆತು ಖುಷಿ , ನೆಮ್ಮದಿ ಕಂಡುಕೊಂಡವರೂ ಇದ್ದಾರೆ.

ಕೆಲವರು ಪ್ರತಿದಿನ ಒಡನಾಟದಲ್ಲಿ ಕಷ್ಟದ ಸಮಯದಲ್ಲಿ ಓಡಿಹೋಗಿ ಸಹಾಯ ಮಾಡುತ್ತಾರೆ. ಅಂತೆಯೇ ಸ್ನೇಹದಲ್ಲಿ ಸಿಟ್ಟು, ಭಿನ್ನಾಭಿಪ್ರಾಯ ಬಂದರೂ ಸಹ ಸ್ನೇಹಕ್ಕೆ ಬೆಲೆ ಕೊಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ದೂರದಲ್ಲಿದ್ದರೂ, ದಿನನಿತ್ಯದ ಸಂಪರ್ಕದಲ್ಲಿ ಇಲ್ಲದಿದ್ದರೂ ಆ ಸ್ನೇಹ ಎನ್ನುವ ಸಂಬಂಧ ತುಂಬಾ ಗಟ್ಟಿಯಾಗಿಯೇ ಇರುತ್ತದೆ.

ಮಕ್ಕಳ ವಿಷಯಕ್ಕೆ ಬಂದರೆ ಬಾಲ್ಯದ ಗೆಳೆತನದಲ್ಲಿ ತುಂಬಾ ಮುಗ್ಧತೆ ಇರುತ್ತದೆ. ಏನು ತೆಗೆದುಕೊಂಡರೂ ಮೊದಲು ಸ್ನೇಹಿತರಿಗೆ ತೋರಿಸಬೇಕೆನ್ನುವ ಕಾತುರ, ಅವರು ಚೆನ್ನಾಗಿದೆ ಎಂದಾಗ ಆಗುವ ಸಂತೋಷ, ಅಪ್ಪ-ಅಮ್ಮನೋ, ಮನೆಗೆ ಬಂದ ನೆಂಟರೋ ತಂದುಕೊಟ್ಟಿದ್ದೆಂದು ಹೇಳುವಾಗ ಅವರಲ್ಲಿರುವ ಹೆಮ್ಮೆ , ಶಾಲೆಗೆ ತೆಗೆದುಕೊಂಡ ಹೋದ ಡಬ್ಬಿಯನ್ನು ಹಂಚಿ ತಿನ್ನುವ ಖುಷಿ, ಚಾಕಲೇಟ್, ಸಿಹಿತಿಂಡಿಗಳ ಕೊಡು-ಕೊಳ್ಳುವಿಕೆ, ರಬ್ಬರ್, ಪೆನ್ಸಿಲ್, ನೋಟ್ಸ್ಗಳ ವಿನಿಮಯ ಹೀಗೆ ಎಲ್ಲಾ ಚೆಂದದ ಘಳಿಗೆಗಳೇ. ಆಡುತ್ತಿದ್ದ ಆಟ, ಜಗಳ, ರಾಜಿ, ಅವರಿಗೇ ಅರಿವಿಲ್ಲದಂತೆ ಮತ್ತೆ ಮನಃಸ್ಫೂರ್ವಕವಾಗಿ ತಮ್ಮನ್ನು ತೆರೆದಿಟ್ಟುಕೊಂಡು ಕಳೆಯುವ ಖುಷಿಯ ಕ್ಷಣಗಳು, ಅಬ್ಬಾ! ಒಂದೇ, ಎರಡೇ. ಹೇಳುತ್ತಾ ಹೋದರೆ ಮತ್ತಷ್ಟು, ಮಗದಷ್ಟು ಬೆಳೆಯುವ ಪಟ್ಟಿಯಂತೆ.

ಹೈಸ್ಕೂಲ್ ಸಮಯದಲ್ಲಿ ಮಕ್ಕಳಿಗೆ ಮನೆಯವರಿಗಿಂತ ಸ್ನೇಹಿತರ ಒಡನಾಟವೇ ಹೆಚ್ಚು ಹಿತ ಎನಿಸುತ್ತದೆ. ಹಾಗಾಗೇ ಈ ಸಮಯದಲ್ಲಿ ಅವರ ದೈಹಿಕ ಬದಲಾವಣೆಯಿಂದ ಆಗುವ ಅವರ ಮನಸ್ಸಿನ ತಲ್ಲಣಗಳು, ಆಸೆ-ಆಕಾಂಕ್ಷೆಗಳು, ಹೊರಜಗತ್ತಿನ ಬಣ್ಣಬಣ್ಣದ ಕನಸುಗಳು ಎಲ್ಲವನ್ನೂ ಅವರು ಸ್ನೇಹಿತರೊಂದಿಗೇ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕೆ ತಂದೆ-ತಾಯಿಯ ಮೇಲಿನ ಭಯವೋ, ಹಿರಿಯರೆಂಬ ಗೌರವವೋ ಅಥವಾ ಮನಬಿಚ್ಚಿ ಹೇಳಿಕೊಳ್ಳಲು ಉಂಟಾಗುವ ಸಂಕೋಚವೂ ಕಾರಣವಾಗಿರಬಹುದು. ಅಲ್ಲದೇ ಪ್ರತಿಯೊಂದನ್ನೂ
ತಂದೆ-ತಾಯಿಯ ಬಳಿ ಹೇಳಿಕೊಳ್ಳಲಾಗದೇ ತಮ್ಮ ಸಮಾನ ವಯಸ್ಸಿನವರು ಹಾಗೂ ಅವರಿಗೂ ತಮ್ಮದೇ ರೀತಿಯ ವಯೋಸಹಜ ಬಯಕೆಗಳು ಇರುವುದರಿಂದ ಮಾತನಾಡಲು, ಕಷ್ಟ-ಸುಖ ಹೇಳಿಕೊಳ್ಳಲು ಎಲ್ಲವುದಕ್ಕೂ ಸ್ನೇಹಿತರನ್ನೇ ಹೆಚ್ಚಾಗಿ ಹಚ್ಚಿಕೊಂಡು ಬಿಡುತ್ತಾರೆ. ಇಲ್ಲಿ ತಿಳುವಳಿಕೆಯ ಕೊರತೆಯಿಂದ ಅನೇಕ ಬಾರಿ ತಪ್ಪು ನಿರ್ಣಯ ಕೈಗೊಳ್ಳುವ ಸಾಧ್ಯತೆಯೂ ಇರುತ್ತದೆ. ಸ್ನೇಹಿತರ ಮಾತಿನಿಂದ, ಆಕರ್ಷಣೆಯಿಂದ, ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಆ ವಯಸ್ಸಿನವರಿಗೆ ಎಲ್ಲರಿಗಿಂತ ತಮಗೇ ಹೆಚ್ಚು ಗೊತ್ತು ಎಂಬ ಧೋರಣೆಯೂ ಸಹಜವಾಗಿಯೇ ಇರುವುದರಿಂದ, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಅದೇ ವಯಸ್ಸಿನ ಅವರ ಸ್ನೇಹಿತರಿಗೂ ಕೆಲವು ವಿಷಯಗಳ ಆಳ-ಅರಿವು ಇಲ್ಲದಿರುವುದರಿಂದ ತಮಗೆ ತಿಳಿದದ್ದನ್ನು ಅವರು ಹೇಳಿದಾಗ, ಸ್ನೇಹಿತರ ಮಾತೇ ವೇದವಾಕ್ಯವೆಂಬಂತೆ ನಂಬಿ ಮೋಸ ಹೋಗುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಸ್ನೇಹಿತರ ಜೊತೆ ಮೊಬೈಲ್ ಚಾಟಿಂಗ್, ಸುತ್ತಾಟ ಎಲ್ಲವೂ ಶುರುವಾಗುವುದೇ ಈ ಹದಿಹರೆಯದ ಹೊಸ್ತಿಲಿನಲ್ಲಿ ಎಂದರೆ ತಪ್ಪಲ್ಲ. ಜೊತೆಗೆ ಸ್ನೇಹಿತರ ಜೊತೆ ಸಮಯ ಕಳೆಯುವುದನ್ನು ಅತೀ ಹೆಚ್ಚು ಪ್ರೀತಿಸುವ, ನಂಬುವ, ಸ್ನೇಹಕ್ಕೆ ಅತೀ ಹೆಚ್ಚು ಬೆಲೆ ಕೊಡುವ, ಅದೇ ಪ್ರಪಂಚವೆಂದು ಅಂದುಕೊಳ್ಳುವ ಅವಧಿಯೂ ಸಹ ಈ ಟೀನೇಜ್ ಎಂದರೆ ಅತಿಶಯೋಕ್ತಿಯಲ್ಲ. ಹಾಗಂತ ಇದರಲ್ಲಿ ಬರೀ ಹುಳುಕು ಹುಡುಕುವ ಅವಶ್ಯಕತೆಯೂ ಇಲ್ಲ. ಇದೆಲ್ಲ ವಯೋಸಹಜ ಭಾವನೆಗಳಷ್ಟೇ. ಇವರ ಸ್ನೇಹದಲ್ಲೂ ಕಷ್ಟಕ್ಕೆ ಜೊತೆಯಾಗುವ, ಓದಿಗೆ ಬೆಂಬಲವಾಗಿ ನಿಲ್ಲುವ, ಕುಗ್ಗಿದಾಗ ಸಂತೈಸುವ, ಸದಾ ಒಳಿತನ್ನು ಬಯಸುವ, ಕಷ್ಟದಲ್ಲಿ ತಾವೂ ಕಣ್ಣೀರು ಹಾಕುವ, ಧೈರ್ಯ ತುಂಬುವ, ಕಲಿಯುವ-ಕಲಿಸುವ ಗುಣ ಎಲ್ಲವೂ ಅಡಕವಾಗಿರುತ್ತದೆ. ಪ್ರಸ್ತುತ, ಅನೇಕ ತಂದೆ-ತಾಯಿಯರು ಈ ವಯಸ್ಸಿನ ಮಕ್ಕಳೊಂದಿಗೆ ಸ್ನೇಹಿತರಂತೆ ಇದ್ದು ಅವರು ನಿಸ್ಸಂಕೋಚವಾಗಿ ಎಲ್ಲವನ್ನೂ ತಮ್ಮೊಡನೆ ಹೇಳಿಕೊಳ್ಳುವಂತಹ ವಾತಾವರಣ ನೀಡುತ್ತಿರುವುದು ಬಹಳ ಒಳ್ಳೆಯ ಬೆಳವಣಿಗೆ ಎನ್ನಬಹುದು. ಇದರಿಂದ ಅರೆಬರೆ ಜ್ಞಾದಿಂದ ಹಾಗೂ ಹೊರಗಡೆಯವರಿಂದ ಆಗುವ ಅನಾಹುತ ತಪ್ಪಿಸಬಹುದು.

ನಂತರ ಕಾಲೇಜು, ಕೆಲಸ ಹೀಗೆ ದಿನಗಳುರುಳಿದಂತೆ ಅವರ ಸ್ನೇಹವೂ ಮಾಗುತ್ತಾ ಹೋಗುತ್ತದೆ. ಅಲ್ಲದೇ ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಂಡಂತೆ ಅವರ ಸ್ನೇಹ ವಲಯವೂ ವಿಸ್ತರಿಸುತ್ತಾ ಹೋಗುತ್ತದೆ. ಏಕೆಂದರೆ, ಸ್ನೇಹದಲ್ಲಿ ಬಡತನ-ಸಿರಿತನ ಎನ್ನುವ ಹಂಗಾಗಲೀ, ಗಂಡು-ಹೆಣ್ಣೆಂಬ ಭೇದವಾಗಲೀ, ವಯಸ್ಸಿನ ಅಂತರವಾಗಲೀ ಇಲ್ಲ. ಎಲ್ಲೋ ಹುಟ್ಟಿ ಬೆಳೆದವರು, ಇನ್ನೆಲ್ಲೋ ಜೊತೆಯಾಗಿ ಗೆಳೆತನದಿಂದ ಉಸಿರಿಗೆ ಉಸಿರು ಕೊಡುವಷ್ಟು ಹತ್ತಿರವಾಗಲೂಬಹುದು. ಆಸ್ಪತ್ರೆ, ಸಾಮಾಜಿಕ ಜಾಲತಾಣ, ಸಾಮಾಜಿಕ ಕಾರ್ಯಕ್ರಮಗಳು, ಕ್ರೀಡೆ, ಸಾಹಿತ್ಯ, ಸಂಗೀತ, ಚಾರಣ, ಕೆಲಸ ಮಾಡುವ ಸ್ಥಳ, ಹೋಟೆಲ್, ಕ್ಯಾಂಟೀನ್, ದಿನನಿತ್ಯದ ಪಯಣದಲ್ಲಿ ಜೊತೆಯಾಗುವ ಸಹಚರರು, ಡ್ರೈವರ್, ಕಂಡಕ್ಟರ್, ದೇವಸ್ಥಾನದ ಅರ್ಚಕರು, ಭಕ್ತಾದಿಗಳು, ಹಣ್ಣು-ತರಕಾರಿ, ದಿನಸಿ ತೆಗೆದುಕೊಳ್ಳುವ ಸ್ಥಳಗಳಲ್ಲಿ, ಬಟ್ಟೆ ಅಂಗಡಿ, ಜಿಮ್, ಬ್ಯಾಂಕ್, ಹೀಗೆ ಎಲ್ಲಿ ಬೇಕಾದರೂ, ಯಾರು ಬೇಕಾದರೂ ಸ್ನೇಹಿತರಾಗಬಹುದು. ಆದರೆ ಅದು ಎಷ್ಟರಮಟ್ಟಿಗೆ ಉಳಿಯುತ್ತದೆ ಎಂಬುದು ಮುಖ್ಯ. ಕೆಲವರು ಮೋಸ ಮಾಡುವ ಸಲುವಾಗಿ, ತಮ್ಮ ಲಾಭಕ್ಕಾಗಿ, ಸಮಯ ಕಳೆಯಲು ಇನ್ನು ಮುಂತಾದ ಕಾರಣಗಳಿಗೆ ಸ್ನೇಹದ ಹೆಸರಲ್ಲಿ ಹತ್ತಿರವಾಗುತ್ತಾರೆ. ಆದರೆ ಅದನ್ನು ಅರಿಯುವುದೂ ಕಷ್ಟ. ಹಣದ ವಿಷಯದಲ್ಲೋ ಅಥವಾ ಇನ್ನಾವುದೇ ವಿಷಯದಲ್ಲೋ ಮೋಸ ಆದ ನಂತರವೇ ಅದರ ಅರಿವಾಗುವುದು. ಹಾಗಾಗಿ ಹೊರಗಡೆಯ ಸ್ನೇಹ ಮಾಡುವಾಗ ಆದಷ್ಟು ಜಾಗೃತರಾಗಿರುವುದು ಒಳ್ಳೆಯದು.

ಒಟ್ಟಿನಲ್ಲಿ ಸ್ನೇಹ ಎನ್ನುವ ಪದವೇ ಮನುಷ್ಯನ ದಿನ ನಿತ್ಯದ ಬದುಕಿಗೆ ಒಂದು ಚೈತನ್ಯ, ಭರವಸೆ, ಬೆಳಕು ಎಲ್ಲವೂ. ಇಂತಹ ಸುಂದರ ಸಂಬಂಧದ ಹೆಸರಲ್ಲಿ ಮೋಸ, ವಂಚನೆ ಸುಳಿಯದೇ ಅದರ ಪಾವಿತ್ರ್ಯತೆ ಹಾಗೇ ಇರಲಿ ಎಂಬ ಆಶಯದೊಂದಿಗೆ.


  • ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading