ಉತ್ತರ ಕನ್ನಡದ ಜೋಯಿಡಾ ತುಂಬಾ ಹಿಂದುಳಿದ ತಾಲೂಕು. ಕಾರಣ ಇದು ಭಯಾನಕ ಕಾಡು. ಆಗಾಗ ಕೈ ಕೊಡುವ ವಿದ್ಯುತ್ತು. ಇಂಥ ಸ್ಥಿತಿಯಲ್ಲಿ ಈ ಊರಿಗೆ ಅಕ್ಷತೆ ಕೊಟ್ಟು ಕರೆಸಿಕೊಂಡಂತೆ ಬಂದವರು ಅಕ್ಷತಾ ಕೃಷ್ಣಮೂರ್ತಿ ಎಂಬ ಯುವತಿ. ಅಣಶಿಯ ಶಾಲಾ ಶಿಕ್ಷಕಿಯಾಗಿ ಬದುಕು ಕಟ್ಟಿಕೊಂಡವರು. ಅಕ್ಷತಾ ಕೃಷ್ಣಮೂರ್ತಿ ಅವರ ಸಾಧನೆಯ ಕುರಿತು ಪತ್ರಕರ್ತರಾದ ರಾಜು ಅಡಕಳ್ಳಿ ಅವರ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಅಣಶಿ ಪಕ್ಕಾ ದಂಡಕಾರಣ್ಯ. ಆನೆ, ಚಿರತೆಗಳ ಆವಾಸ ಸ್ಥಾನ. ಮನುಷ್ಯನ ಸುತ್ತವೂ ಭಯದ್ದೇ ನಿವಾಸ. ನಿಶ್ಯಬ್ದ ಬಗೆದು ಚಿತ್ರ ವಿಚಿತ್ರವಾಗಿ ನಲಿಯುವ ನರಳುವ ದಟ್ಟ ಕಾನು. ಇಂಥ ಕಡೆ ಇರಲು ಹುಲಿ, ಕರಡಿಗಳ ಹೊರತಾಗಿ ಬೇರೆಯವರು ಬರುವುದಿಲ್ಲ. ಆದರೆ ಅಕ್ಷತಾ ಕೃಷ್ಣಮೂರ್ತಿ ಎಂಬ ಹೆಣ್ಮಗಳು ಕಳೆದೆರಡು ದಶಕಗಳಿಂದ ಅಲ್ಲಿಯೇ ಮಾಸ್ತರ್ಣಿಯಾಗಿ, ರಾಜ್ಯ ಪ್ರಶಸ್ತಿ ವಿಜೇತೆಯಾಗಿ, ಅಲ್ಲಿಯ ಶಾಲೆಯನ್ನೇ ಮಾದರಿಯಾಗಿಸಿ, ಬದುಕಿಗೆ ಸಾರ್ಥಕತೆ ತಂದುಕೊಂಡಿದ್ದಾರೆ.
ಉತ್ತರ ಕನ್ನಡದ ಜೋಯಿಡಾ ತುಂಬಾ ಹಿಂದುಳಿದ ತಾಲೂಕು. ಅಲ್ಲಿಯ ಅಣಶಿ ಊರಿನ ಕಥೆಯಂತೂ ಕೇಳುವ ಹಾಗೇ ಇಲ್ಲ. ಕಾರಣ ಇದು ಭಯಾನಕ ಕಾಡು. ಹಾವು -ಹರಣೆ ವನ್ಯ ಪ್ರಾಣಿಗಳ ಕೇಂದ್ರಾಡಳಿತ ಪ್ರದೇಶ. ಆಗಾಗ ಕೈ ಕೊಡುವ ವಿದ್ಯುತ್ತು. ಹೆಚ್ಚಿಗೆ ವಾಹನ ಸಂಚಾರವಿಲ್ಲ. ಮನೋರಂಜನೆಗೆ ಸಿನಿಮಾ ಮಂದಿರವಿಲ್ಲ. ಶಾಪಿಂಗ್ ಮಾಡೋಣವೆಂದರೆ ಮಾಲುಗಳಂತೂ ಇಲ್ಲವೇ ಇಲ್ಲ. ಪಿಜ್ಜಾ, ಬರ್ಗರ್ ತಿನ್ನುವ ಆಸೆಯಂತೂ ದೂರವೇ ಉಳೀತು. ಹೋಗಲಿ ಚಂದಾಗಿ ಮಸಾಲೆ ದೋಸೆ, ಪಾನಿಪುರಿಯನ್ನಾದರೂ ತಿನ್ನೋಣವೆಂದರೆ ಒಳ್ಳೆಯ ಹೋಟೆಲೂ ಇಲ್ಲಿಲ್ಲ. ಕೆಲವೊಮ್ಮೆ ಮೊಬೈಲ್ ನೆಟ್ವರ್ಕಿಗೂ ತತ್ವಾರ. ಆರೋಗ್ಯ ಹದಗೆಟ್ಟರೆ ಆಸ್ಪತ್ರೆಯೂ ನಾಸ್ತಿ. ಆಗ ಹರೋಹರ ಎನ್ನುವವರೇ ಜಾಸ್ತಿ.
ಇಂಥ ಕೊಂಪೆಯಲ್ಲಿ ಕೆಲಸ ಮಾಡಲು ಯಾರು ಹೊರಗಿನಿಂದ ಬರುತ್ತಾರೆ?. ಸರ್ಕಾರಿ ಕೆಲಸದ ಮೇಲೆ ನಿಯೋಜನೆಗೊಂಡು ಅನಿವಾರ್ಯವಾಗಿ ಬಂದವರು ಕೂಡ ಇಲ್ಲಿ ಹೆರಿಗೆ ಬ್ಯಾನೆ ಬಂದರೆ ಕಷ್ಟವೆಂದು ನೆಪವೊಡ್ಡಿ ಬೇರೆಡೆಗೆ ವರ್ಗ ಮಾಡಿಕೊಂಡು ಹೋಗುವವರೇ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿಯೂ ಈ ಊರಿಗೆ ಅಕ್ಷತೆ ಕೊಟ್ಟು ಕರೆಸಿಕೊಂಡಂತೆ ಬಂದವರು ಅಕ್ಷತಾ ಕೃಷ್ಣಮೂರ್ತಿ ಎಂಬ ಯುವತಿ.
ಅಣಶಿಯ ಶಾಲಾ ಶಿಕ್ಷಕಿಯಾಗಿ ಇವರು ಬಂದು ಈಗಾಗಲೇ ಇಪ್ಪತ್ತು ವರ್ಷವಾದರೂ ಇವರು ಇಲ್ಲಿಯ ಮುಗ್ಧ ಮಕ್ಕಳನ್ನು ಬಿಟ್ಟು ಹೋಗುವ ಮನಸ್ಸು ಮಾಡಿಲ್ಲ. ಅಷ್ಟೇ ಅಲ್ಲ ಬೇರೆ ಊರಿನಲ್ಲಿದ್ದ ತಮ್ಮ ಗಂಡನನ್ನು ಕೂಡ ಇದೇ ಊರಿಗೆ ಕರೆಸಿಕೊಂಡು ಇಲ್ಲೇ ಸಂತೃಪ್ತಿಯ ಜೀವನ ನಡೆಸುತ್ತಿರುವುದು ವಿಶೇಷ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಕಾಡಿನಲ್ಲಿಯೇ ಇವರದ್ದು ಬದುಕಿನ ತಪಸ್ಸು. ಗೊಂಡಾರಣ್ಯದ ನಡುವೆಯೇ ಜೀವನದ ತೇಜಸ್ಸು.

ಹಾಗಂತ ಅಕ್ಷತಾ ಅಣಶಿಯಲ್ಲಿ ಹುಟ್ಟಿ ಬೆಳೆದವರೇನಲ್ಲ. ಇವರಜ್ಜಿ ಮನೆ ಅಣಶಿಯೂ ಅಲ್ಲ. ಇವರು ಕರಾವಳಿಯ ಬೇಲೆಕೇರಿಯವರು. ಪ್ರಯತ್ನಿಸಿದ್ದರೆ ದೊಡ್ಡ ಶಹರದಲ್ಲಿಯೇ ಇವರು ಬದುಕು ಕಟ್ಟಿಕೊಳ್ಳಬಹುದಿತ್ತು. ಕೈಯಲ್ಲಿ ಹೇಗೂ ಕನ್ನಡ ಎಂ. ಎ. ಮತ್ತು ಹಿಂದಿ ರತ್ನ ಡಿಗ್ರಿಗಳೂ ಇವರಿಗಿದ್ದವು. ಆದರೆ ಇವರು ಐಷಾರಾಮಿ ಜೀವನದಿಂದ ದೂರವಿದ್ದು, ಕಾಳಿ ನದಿ ದಂಡೆಯ ಗೋರಾಕಾರ ಅರಣ್ಯದಲ್ಲೇ ಬೀಡುಬಿಟ್ಟರು. ಕರಾವಳಿ ಪುತ್ರಿಯಾಗಿದ್ದ ಈಕೆ, ಕ್ರಮೇಣ ಕಾಳಿ ಪುತ್ರಿಯಾಗಿ ಬದಲಾದರು. ಸ್ಥಳೀಯ ಜನರಲ್ಲೇ ತಾವೂ ಕಲೆತು ಬೆರೆತು ಸ್ಥಳೀಯರಾದರು.
ಅಣಶಿ ಸರಕಾರಿ ಶಾಲೆಯಲ್ಲಿದ್ದ ಸುಮಾರು 75 ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಕಂಡರು. ಆ ಕಾಡು ಕಾಡು ಕಣಿವೆಯ ಹುಲಿ, ಚಿರತೆಗಳಿಗೆ ಬೆಣ್ಣೆ ಬಿಸ್ಕೆಟನ್ನೋ ಅಥವಾ ಎಣ್ಣೆ ಬಿಸ್ಕೆಟನ್ನೋ ಇವರು ಕೊಡಲು ಹೋಗಲಿಲ್ಲ. ಬದಲಿಗೆ ಅವುಗಳ ಚಿತ್ರ ಬಿಡಿಸುವ, ಬಣ್ಣ ಹಚ್ಚುವ ಕಲೆಯನ್ನು ಮಕ್ಕಳಿಗೆ ಕಲಿಸುತ್ತಾ, ಪರಿಸರ ಪಾಠ ತಿಳಿಸಿಕೊಟ್ಟರು. ರಜೆಯಲ್ಲಿ ಮಕ್ಕಳಿಗೆ ಬುಟ್ಟಿ ಹೆಣೆಯುವುದನ್ನು ಹೇಳಿಕೊಡುವ ಜೊತೆಗೆ ಕಥೆ, ಪದ್ಯ ಪ್ರಬಂಧಗಳನ್ನು ಹೆಣೆಯುವುದು ಹೇಗೆಂಬ ಅರಿವು ಮೂಡಿಸಿದರು. ಅಕ್ಷತಾ ಕೇವಲ ಶಿಕ್ಷಕಿಯಲ್ಲ. ಇವರು ಸ್ವತಃ ಲೇಖಕಿಯಾಗಿ ಹಲವು ಪುಸ್ತಕಗಳನ್ನು ಬರೆದಿರುವುದರಿಂದ ಇವೆಲ್ಲಾ ಸಾಧ್ಯವಾಗಿವೆ.
ಶಿರಸಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿದ್ದ ತಮ್ಮ ಪತಿ ಕೃಷ್ಣಮೂರ್ತಿಯವರಿದ್ದಲ್ಲಿಗೆ ತಾವು ತೆರಳದೇ, ಅವರನ್ನೇ ತಾವಿದ್ದ ಅಣಶಿಗೆ ವರ್ಗ ಮಾಡಿಸಿಕೊಂಡು, ವನವಾಸದಲ್ಲೇ ಆನಂದ ಪಡುವ ಜೋಡಿಗಳಾದರು. ಇವೆಲ್ಲವುಗಳ ಫಲಶ್ರುತಿಯಾಗಿ ಈ ಅಕ್ಷತಾ ಈಗ ಅಣಶಿಯ ಮಕ್ಕಳಿಗೆ ಪ್ರೀತಿಯ ಅಕ್ಕೋರಾಗಿದ್ದಾರೆ. ಅಣಶಿ ಸುತ್ತಮುತ್ತಲ ಕಾಡು ಕಣಿವೆಯ ಹತ್ತಿಪ್ಪತ್ತು ಊರು ಮಂದಿಯ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಇವರು ದೊಡ್ಡಕ್ಕನಾಗಿದ್ದಾರೆ. ಇದರಿಂದಾಗಿ ಇವರು ಈಗಲ್ಲಿ ಕೇವಲ ಶಿಕ್ಷಕಿಯಾಗಿ ಉಳಿದಿಲ್ಲ, ಬದಲಿಗೆ ಆ ಭಾಗಕ್ಕೆ ಹೊಸತನ ತಂದುಕೊಟ್ಟ ಹರಿಕಾರ್ತಿಯಾಗಿದ್ದಾರೆ. ಅಲ್ಲಿಯ ಕಾಡು ಜನರಲ್ಲೂ ಬದಲಾವಣೆಯ ಬೀಜ ಬಿತ್ತಿದ ಕ್ರಾಂತಿಮಾತೆಯಾಗಿದ್ದಾರೆ.
ಹಾಗಿದ್ದರೆ ಇವರು ಮಾಡಿದ್ದಾದರೂ ಏನು ಎಂದು ನೀವು ಕೇಳಿಯೇ ಕೇಳುತ್ತೀರಿ. ಮೊದಲನೆಯದಾಗಿ ಇವರು ಟೈಮ್ ನೋಡುತ್ತಾ ಪಾಠ ಮಾಡುವವರಲ್ಲ. ಸರ್ಕಾರ ಹೇಳಿದ ಪಾಠ ಪಠ್ಯಗಳನ್ನಷ್ಟೇ ಕಲಿಸಿಕೊಡುವವರಲ್ಲ. ಅದರಾಚೆಗೂ ಮೀರಿ ವಿದ್ಯಾರ್ಥಿಗಳ ಪ್ರತಿಭೆಗೆ ನೀರೆರೆದು ಅವರ ಆಸಕ್ತಿಗೆ ತಕ್ಕಂತೆ ಒಂದಷ್ಟು ಕ್ರಿಯಾಶೀಲ ಚಟುವಟಿಕೆಗಳನ್ನು ಸಂಘಟಿಸುವವರು. ಅಣಶಿಯ ತಮ್ಮ ಶಾಲೆ ವ್ಯಾಪ್ತಿಗೆ ಬರುವ ಸುಮಾರು ಹದಿನೆಂಟು ಇಪ್ಪತ್ತು ಊರುಗಳಿಗೂ ಸ್ವತಹ ತೆರಳಿ, ಅಲ್ಲಿಯ ಪಾಲಕರೊಂದಿಗೂ ಆತ್ಮೀಯ ಮಿತ್ರತ್ವ ಇಟ್ಟುಕೊಂಡವರು.
ಕೋವಿಡ್ ಅಂತಹ ಕಷ್ಟ ಕಾಲದಲ್ಲಿ ಮಕ್ಕಳ ಮನೆಗೇ ಹೋಗಿ ಪಾಠ ಹೇಳಿ ಬಂದಂಥವರು. ಮಕ್ಕಳಿಗೆ ಭಯವಾದಾಗ ಕಾಡನ್ನು ದಾಟಿಸಿ ಊರಿಗೆ ಸುರಕ್ಷಿತವಾಗಿ ತಲುಪಿಸಿ ಬಂದಂಥವರು. ಕಾಡಿನ ಹಸಿರನ್ನೇ ಉಸಿರನ್ನಾಗಿಸುವುದು ಹೇಗೆಂದು ಮಕ್ಕಳಿಗೆ ತಿಳಿಸಿಕೊಟ್ಟವರು. ಅಲ್ಲಿಯ ಬೆಟ್ಟ ಗುಡ್ಡಗಳ ಮಣ್ಣು, ಹಣ್ಣು, ಎಲೆ ಎಳೆ, ಚಿಗುರುಗಳೊಂದಿಗೇ ಖುಷಿಯ ಬದುಕು ಕಟ್ಟಿಕೊಳ್ಳುವುದು ಹೇಗೆಂದು ಮಕ್ಕಳಿಗೆ ಕಲಿಸಿಕೊಟ್ಟವರು. ಇದರಿಂದಾಗಿ ಆ ಭಾಗದವರಿಗೆ ಈಕೆ ಮನೆ ಮಗಳಂತೆ. ಅಕ್ಷತಾರಿಗೂ ಅಣಶಿ ತವರು ಮನೆಯಂತೆಯೇ.
ಅಕ್ಷತಾ ಶಿಕ್ಷಕಿಯಾಗಿ ಬಂದ ನಂತರ ಅಣಶಿ ಶಾಲೆಗೆ ಹೊಸ ಖದರು ಮೂಡುವಂತಾಯಿತು. ಏಕೆಂದರೆ ಇವರು ಕೇವಲ ಬಣ್ಣದ ತಗಡಿನ ತುತ್ತೂರಿ… ಕಾಸಿಗೆ ಕೊಂಡನು ಕಸ್ತೂರಿ.. ಎನ್ನುತ್ತಲೋ ಅಥವಾ ಕುನ್ನಿ ಮರಿ ಕುನ್ನಿ ಮರಿ ತಿಂಡಿ ಬೇಕೇ ಎನ್ನುತ್ತಲೋ ಪಾಠ ಮುಗಿಸಲಿಲ್ಲ. ಇದರ ಬದಲಿಗೆ, ಸಾಮಾಜಿಕವಾಗಿ ಅತಿ ಹಿಂದುಳಿದಿದ್ದ ಅಲ್ಲಿಯ ಕುಣುಬಿ ಮಕ್ಕಳಿಗೆ ಕ್ರಿಯಾಶೀಲತೆಯ ಹೊಸ ರೆಕ್ಕೆ ಪುಕ್ಕ ಕಟ್ಟಿದರು. ಕಾಡಿನಲ್ಲಿಯೇ ಮುರುಟಿ ಹೋಗುತ್ತಿದ್ದ ಮಕ್ಕಳಲ್ಲಿ ಕಲಿಕೆಯ ಹೊಸ ಉತ್ಸಾಹ ಮೂಡಿಸಿ, ಅವರ ಬದುಕಿಗೆ ಹೊಸ ದಿಕ್ಕು ದೆಸೆ ತೋರಿಸಿಕೊಟ್ಟರು.
ಅಲ್ಲಿನ ಕಾಡು ಮೇಡುಗಳಲ್ಲಿ ಸಿಗುವ ಬೇರು ಬಗಟೆ, ಹಣ್ಣು ಹಂಪಲ, ಗಿಡ ಮರ, ಪ್ರಾಣಿ ಪಕ್ಷಿ, ಹಳ್ಳ ಕೊಳ್ಳಗಳನ್ನು ಪ್ರೀತಿಸುವುದು ಹೇಗೆಂದು ಇವರು ಕಲಿಸಿಕೊಟ್ಟರು. ಊಟ ಮಾಡುವ ಅಕ್ಕಿ ಹೇಗೆ ಬೇಸಾಯದಿಂದ ಉತ್ಪತ್ತಿಯಾಗುತ್ತದೆ ಎಂದು ತೋರಿಸಿಕೊಡಲು ಮಕ್ಕಳ ಸೈನ್ಯ ಕಟ್ಟಿಕೊಂಡು ಗದ್ದೆಗೆ ಕರೆದೊಯ್ದು ನಾಟಿ ಮಾಡಿಸಿದರು.
ಒಂದು, ಎರಡನೇ ತರಗತಿಗಳ ಪುಟ್ಟ ಮಕ್ಕಳನ್ನು ಹಳ್ಳಿ ಗದ್ದೆಗೆ ಕರೆದೊಯ್ಯುವುದು ಕಷ್ಟವಾಗುತ್ತದೆಯೆಂದು ತಮ್ಮ ಶಾಲೆಯ ಅಂಗಳದಲ್ಲಿಯೇ ಪುಟ್ಟ ಗದ್ದೆ, ಕೈತೋಟ ಮಾಡಿ ಕೃಷಿ ಪ್ರಾತ್ಯಕ್ಷಿಕೆ ಹೇಳಿಕೊಟ್ಟರು. ಕೇವಲ ಪುಸ್ತಕದ ಬದನೆಕಾಯಿಯ ಪಾಠವನ್ನೇ ತಿರುಗಾ ಮುರುಗಾ ಮಾಡಿ ಹೇಳುತ್ತಾ ಹೋದರೆ, ಮಕ್ಕಳಿಗೆ ಜೀವನ ಪಾಠ ತಿಳಿಯುವುದಾದರೂ ಹೇಗೆ? ಕೃಷಿಯ ಖುಷಿ ಅರ್ಥವಾಗುವುದಾದರೂ ಹೇಗೆ ?
ಹೀಗಾಗಿ ಕಾಲು ಸಂಕದ ಮೇಲೆ ಮಕ್ಕಳ ಕೈಹಿಡಿದು ಕರೆದೊಯ್ದು, ಮಳೆ ಬಂದಾಗ ಹೊಳೆ ದಾಟುವುದರ ಜೊತೆಗೆ, ಬದುಕಿನ ಜಂಜಾಟ ದಾಟುವುದು ಹೇಗೆಂಬುದನ್ನೂ ಪ್ರತ್ಯಕ್ಷ ಕಲಿಸಿಕೊಟ್ಟರು. ಊರಿನ ಸುತ್ತಮುತ್ತಲ ಪ್ಲಾಸ್ಟಿಕ್ ಮತ್ತಿತರ ಕಸಗಳನ್ನು ಎತ್ತಿಸಿ ಸ್ವಚ್ಛತೆಯ ನೀತಿ ಪಾಠ ಬೋಧಿಸಿದರು. ಕೇವಲ ಕೊಂಕಣಿ ಗೊತ್ತಿದ್ದ ಕುಣುಬಿ ಮಕ್ಕಳ ಕೈಗೆ ಪಾಟಿ, ಬಳಪ ಕೊಟ್ಟು, ಕನ್ನಡದ ಕಥೆ, ಕವನ ಬರೆಯುವುದಕ್ಕೆ ಹಚ್ಚಿಸಿದರು.
ಅಣಶಿ ಶಾಲೆಯ ಅನುಭವದ ಬಗ್ಗೆ ಅಕ್ಷತಾ ಅವರು ತುಷಾರ ಮಾಸಪತ್ರಿಕೆಯಲ್ಲಿ ಬರೆಯುತ್ತಿದ್ದ ಇಸ್ಕೂಲು ಎಂಬ ಅಂಕಣಕ್ಕೆ ಸ್ಪಂದಿಸಿ ಅನೇಕರು ದೇಣಿಗೆ ಕಳಿಸಿಕೊಟ್ಟರು. ಇದರಿಂದಾಗಿ ವಿದ್ಯುತ್ ಇಲ್ಲದ ಈ ಶಾಲೆಯಲ್ಲೂ ಸೋಲಾರ್ ಬೆಳಕು ಕಾಣುವಂತಾಯಿತು. ದಾನಿಗಳಿಂದ ಲಕ್ಷ ಲಕ್ಷ ಹಣ ಒದಗಿ ಬಂದು ಶಾಲೆ ಸುಸಜ್ಜಿತ ರೂಪ ಪಡೆದುಕೊಂಡಿತು. ಒಂದು ಕಾಲಕ್ಕೆ ಅತಿ ಹಿಂದುಳಿದಿದ್ದ ಅಣಶಿ ಶಾಲೆ, ಇವೆಲ್ಲವುಗಳ ಪ್ರತಿಫಲವಾಗಿ, ನೋಡ ನೋಡುತ್ತಲೇ ಕ್ಲೀನ್ ಅಂಡ್ ಗ್ರೀನ್ ಶಾಲೆಯಾಗಿ ಬದಲಾಯಿತು.
ಅಕ್ಷತಾರ ಮುಖದ ಮೇಲೆ ಮುಗುಳ್ನಗೆ ಯಾವತ್ತೂ ಮಾಸುವುದಿಲ್ಲ. ಕೋಪದ ನೆರಿಗೆ ಎಂದಿಗೂ ಮೂಡುವುದಿಲ್ಲ. ಸಿಟ್ಟನ್ನು ಕೂಡ ನಗುನಗುತ್ತಲೇ ತೋರ್ಪಡಿಸುವಂಥ ಅಪರೂಪದ ಕಲೆ ಇವರಿಗೆ ಸಿದ್ಧಿಸಿದೆ. ಹೀಗಾಗಿ ಅಕ್ಷತಾರಲ್ಲಿ ಕಲಿಯಲು ಬರುವ ಮಕ್ಕಳಿಗೆ ಅಮ್ಮನ ವಾತ್ಸಲ್ಯ, ದೊಡ್ಡಮ್ಮನ ಪ್ರೀತಿ ಎಲ್ಲವೂ ಸಿಗುವಂತಾಗಿ, ಅಣಶಿ ಶಾಲೆ ಅವರ ಪಾಲಿಗೆ ಸೆಕೆಂಡ್ ಹೋಂ ಆಗುವಂತಾಗಿದೆ.
ಅಕ್ಷತಾ ಗುಮ್ಮನ ಗುಸ್ಕಿಯಲ್ಲ. ಹಾಗಂತ ವಾಚಾಳಿಯೂ ಅಲ್ಲ. ಪಾಠವು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವುದಕ್ಕೆ ಬೇಕಷ್ಟು ಮಾತಿನ ಹದದ ಮಂತ್ರಾಕ್ಷತೆ ಅಕ್ಷತಾರಲ್ಲಿದೆ. ಇವರು ಪಾಕ ಪ್ರವೀಣೆ, ಜೊತೆಗೆ ಆಟ ಪಾಠಗಳ ಪ್ರವೀಣೆಯೂ ಹೌದು. ಮಕ್ಕಳಿಗೆ ಪಾಠ ಕಲಿಸುವ ಪ್ರವೃತ್ತಿ ಇವರಿಗೆ ರಕ್ತಗತವಾಗಿಯೇ ಹರಿದು ಬಂದಿದೆ, ಹೇಗೆಂದರೆ ಇವರ ಅಜ್ಜ ನಾರಾಯಣ ಕಲಗುಜ್ಜಿ ಶಿಕ್ಷಕರಾಗಿದ್ದರು. ಇವರ ಅಮ್ಮ ಮಾಲಿನಿಯವರೂ ಶಿಕ್ಷಕಿಯಾಗಿದ್ದರು.
ಇವರು ಕಲಿಸುವ ಪಾಠ ದೀರ್ಘ ಹರಿಕಥೆಯಂತಿರುವುದಿಲ್ಲ ಅಥವಾ ಗೊಡ್ಡಮ್ಮೆ ಆಕಳಿಸುವಂತೆಯೂ ಇರುವುದಿಲ್ಲ. ಒಂದಷ್ಟು ಉಪಕಥೆಯೊಂದಿಗೆ, ಉಪ್ಪುಖಾರ ಹಾಕಿ ಇವರು ಪಾಠ ಮಾಡುತ್ತಾ, ಮಕ್ಕಳನ್ನೂ ಮಾತಿಗೆ ಹಚ್ಚುತ್ತಾ ಪಾಠ ಮಾಡುವುದರಿಂದ ಇವರ ತರಗತಿಗಳೆಂದರೆ ಮಕ್ಕಳಿಗೆ ಅಚ್ಚುಮೆಚ್ಚು.
ಕೋವಿಡ್ ಬಂದಾಗ ಇವರು ದೂರದ ಕುಂಭಗಾಳ, ಕಾಳಿಂಗ ಸರ್ಪದ ತವರು ಮನೆಯಾದ ಬರಪಾಲಿ, ನಾರಗಾಳಿ, ಮೈಂಗಿಣಿ, ಕೂಡುಗಾಳಿ, ಮಳೆ ( ಮಳೆ ಎಂಬ ಊರು ಕೂಡ ಅಲ್ಲಿದೆ ) ಮುಂತಾದ ಹಳ್ಳಿಗಳಿಗೆ ಭೋರ್ಗರೆಯುವ ಮಳೆಯಲ್ಲಿ ಉಂಬುಳ ಕಚ್ಚಿಸಿಕೊಳ್ಳುತ್ತಾ ಹೋಗಿ, ಕುಣುಬಿ ಮಕ್ಕಳ ಗುಡಿಸಲು ತಲುಪಿ, ಅಲ್ಲಿಯ ಅಂಗಳವನ್ನೇ ಶಾಲೆಯನ್ನಾಗಿಸಿಕೊಂಡು ಪಾಠ ಮಾಡಿದ್ದಿದೆ.
ಹೀಗೆ ಮಕ್ಕಳೊಂದಿಗೆ ಮಕ್ಕಳಾಗಿ, ಮಕ್ಕಳು ತಪ್ಪು ಮಾಡಿದಾಗ ತಿಳಿ ಹೇಳುವ ಅಕ್ಕನಾಗಿ, ಮಕ್ಕಳ ಆಟಕ್ಕೆ ಚಿಟಬಿಲ್ಲು ಮಾಡಿಕೊಟ್ಟ ಗೆಳತಿಯಾಗಿ, ಜೀವನದಲ್ಲೇ ಸಮುದ್ರ ನೋಡದ ಕುಣುಬಿ ಮಕ್ಕಳನ್ನು ಕಾರವಾರದ ಸಮುದ್ರ ತೀರಕ್ಕೆ ಕರೆದೊಯ್ದು ತೋರಿಸಿದ ಪ್ರವಾಸಿ ಗೈಡ್ ಆಗಿ ಇವರು ಶಾಲೆ ಕಟ್ಟಿದ ಬಗ್ಗೆ ಇಸ್ಕೂಲು ಎಂಬ ದೊಡ್ಡ ಪುಸ್ತಕವನ್ನೇ ಬರೆದಿದ್ದಾರೆ. ಇದರಲ್ಲಿ ಅಕ್ಷತಾ ಅಕ್ಕೋರ ಕಥೆಯಷ್ಟೇ ಅಲ್ಲ, ಇವರಿಂದ ಕಲಿತ ಬಲಿತ ನೂರಾರು ಮಕ್ಕಳ ಸಾಹಸಗಾಥೆಗಳೂ ಸೇರಿವೆ. ಎಷ್ಟೋ ಬಾರಿ ಪರಿಸರದ ಜೊತೆಗೆ ಬದುಕುವುದನ್ನು ಆ ಮಕ್ಕಳೇ ತಮಗೆ ಹೇಳಿಕೊಟ್ಟು ಗುರುವಾಗಿದ್ದೂ ಉಂಟು ಎಂಬುದು ಅಕ್ಷತಾರ ಅನುಭವ.
ಅಕ್ಷತಾ ಅವರು ಕಾಣದ ಕಡಲಿಗೆ ಹಂಬಲಿಸಿದೆ ಮನ ಎನ್ನುವ ಮನಸ್ಥಿತಿಯವರಲ್ಲ, ಬದಲಿಗೆ ಕಾಣುವ, ಕಾಡುವ ಕಾಡಿಗೆ ಹಂಬಲಿಸಿದೆ ಮನ ಎಂದು ಕಾಡಲ್ಲಿಯೇ ಕೂತು ಹಾಡುತ್ತಾ, ಅಲ್ಲಿಯ ವನಸುಮಗಳಿಗೆ ಸು’ಮಿತ್ರೆ’ ಯಾದವರು. ಇವರ ಕವನ ಸಂಕಲನ ‘ಹನ್ನೆರಡು ದಡೆ ಬೆಲ್ಲ’ದಲ್ಲೂ ಇಂಥ ವನಸುಮಗಳಲ್ಲಿಯ ಕುಸುಮದ ಸುಗಂಧ ಹಾಸು ಹೊಕ್ಕಾಗಿದೆ.
ಇವರ ‘ಇಸ್ಕೂಲು’ ಕೃತಿಯಂತೂ ನಿಶ್ಯಬ್ದ ಹೋರಾಟ ಎಂದು ಖ್ಯಾತ ಲೇಖಕಿ ವೈದೇಹಿ ಬಣ್ಣಿಸಿದ್ದಾರೆ. ಹಾಲಕ್ಕಿ ಒಕ್ಕಲರು, ಮಧುರ ಚೆನ್ನ, ಕೇದಿಗೆಯ ಕಂಪು, ಹಾಲಕ್ಕಿ ಕೋಗಿಲೆ, ಸುಕ್ರಿ ಬೊಮ್ಮಗೌಡ, ಕುಣುಬಿ ಅಧ್ಯಯನ ಇವರ ಇತರ ಕೃತಿಗಳು. ‘ಪಾವ್ಲಿ’ ಇವರ ಕವನ ಸಂಕಲನ. ಅಕ್ಷತಾ ಅವರ ಕಥಾ ಸಂಕಲನದಲ್ಲಿರುವ ಅಬ್ಬೊಲಿ ಎಂಬ ಕಥೆ ಮೈಸೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿರುವುದು ವಿಶೇಷ.
ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನದ ಪ್ರಶಸ್ತಿ, ಕಡಂಗೊಡ್ಲು ಶಂಕರ ಭಟ್ಟ ಕಾವ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಅನುಪಮಾ ನಿರಂಜನ ಕಥಾ ಪ್ರಶಸ್ತಿ ಮುಂತಾದವು ಇವರ ಕ್ರಿಯಾಶೀಲತೆಗೆ ಸಿಕ್ಕಂಥ ಗೌರವಗಳು. ಸುಧಾ, ಪ್ರಜಾವಾಣಿ, ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಇವರ ಬರವಣಿಗೆಗಳು ಬೆಳಕು ಕಂಡಿವೆ, ಅಷ್ಟೇಅಲ್ಲ ಇವರ ಬಗ್ಗೆಯೇ ವಿಶೇಷ ಲೇಖನಗಳು ಪ್ರಕಟವಾಗಿವೆ.
ವರ್ಷದಲ್ಲಿ ಆರು ತಿಂಗಳು ಮಳೆ ಬೀಳುವ ಪ್ರದೇಶ. ಸದಾ ಬೊಂಗುಡುವ ಕಾಡು. ಈ ಕಾಡುಮಂಡಲದ ಮಧ್ಯೆಯೂ ಕಮಂಡಲದಿಂದ ಮಕ್ಕಳ ಕೇಕೆ ಸುರಿಯುವಂತೆ ಅವರ ಸೃಜನಶೀಲತೆಯನ್ನು ಸಾಕಾರಗೊಳಿಸುವ ಕೇಂದ್ರವಾಗಿ ರೂಪಿಸಿರುವ ಅಣಶಿ ಶಾಲೆಯನ್ನು ನೋಡುವುದಕ್ಕೆ ದೂರದಿಂದ ಖ್ಯಾತ ವಿಜ್ಞಾನಿ ಸುರೇಂದ್ರ ಕುಲಕರ್ಣಿಯಂಥವರು ಹುಡುಕಿಕೊಂಡು ಬಂದು ಹೋಗಿದ್ದಾರೆ.
ಕೊಂಕಣಿ ಪ್ರಭಾವವೇ ಹೆಚ್ಚಿರುವ ಅಣಶಿ ಕಾನಲ್ಲಿ ಕನ್ನಡ ಪ್ರೀತಿ ಹೆಚ್ಚಿಸಲು ರಾಜ್ಯೋತ್ಸವದ ಸಂದರ್ಭದಲ್ಲಿ ‘ಕನ್ನಡ ಕೊಡೆ’ ಕಾರ್ಯಕ್ರಮ ರೂಪಿಸಿದ್ದು ಅಕ್ಷತಾ ಅವರಲ್ಲಿಯ ಹೊಸತನಕ್ಕೆ ಸಾಕ್ಷಿ. ಕೊಡೆಗಳ ಮೇಲೆ ಕನ್ನಡದಲ್ಲಿ ಮಕ್ಕಳಿಂದ ಮತ್ತು ಪಾಲಕರಿಂದ ಸಹಿ ಮಾಡಿಸಿ ಪ್ರದರ್ಶಿಸಿದ್ದು, ಅಣಶಿ ಸಮಾಚಾರ ಎಂಬ ಕೈಬರಹ ಪತ್ರಿಕೆಯನ್ನು ತಮ್ಮ ಶಾಲೆಯಲ್ಲಿ ಪ್ರಾರಂಭಿಸಿದ್ದು, ಜೇನು ಸಾಕಾಣಿಕೆ, ಗಿಡ ಮರಗಳ ಸಂತತಿ ಹೆಚ್ಚಿಸಲು ಮಕ್ಕಳಿಂದಲ್ಲಿ ಬೀಜದುಂಡೆ ಮಾಡಿಸಿ ಬಿತ್ತಿಸಿದ್ದು, ಶಾಲೆಯ ಕೈತೋಟದಲ್ಲಿ ಸೌತೆ ಬಳ್ಳಿ ಬೆಳೆಸಿದ್ದು …ಹೀಗೆ ಅಕ್ಷತಾ ಅವರ ಕಲಿಸುವಿಕೆಯ ಪ್ರಯೋಗ ಒಂದಲ್ಲ ಎರಡಲ್ಲ. ಇವರ ಪ್ರಯತ್ನಕ್ಕೆ ಶಾಲೆಯ ಇತರ ಶಿಕ್ಷಕರು ಕೈಜೋಡಿಸಿದ್ದನ್ನು ಇವರು ಮರೆಯುವುದಿಲ್ಲ.
ಅಕ್ಷತಾರ ಸಾಹಿತ್ಯಕ ಅನುಭವ ಬಳಸಿಕೊಂಡು, ನಾಡಿನ ಗಡಿ ಭಾಗಗಳಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತರಿಸುವ ಪ್ರಯತ್ನಕ್ಕೆ ಹಳಿಯಾಳದ ಪ್ರಕಾಶ ಪ್ರಭು, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಸರೆಯವರೆಲ್ಲ ಸೇರಿ ಪ್ರೋತ್ಸಾಹದ ನೀರೆರೆಯುತ್ತಿದ್ದಾರೆ.
ಒಟ್ಟಾರೆ ಕನ್ನಡ ಶಾಲೆಯ, ಅದರಲ್ಲಿಯೂ ಸರಕಾರಿ ಶಾಲೆಯ ಅಕ್ಕೋರೊಬ್ಬರು ಇಷ್ಟೆಲ್ಲ ಮಾಡಲು ಶಕ್ಯವೇ ಎಂಬ ಪ್ರಶ್ನೆ ಮೂಡಿಸುವಷ್ಟು ಅಕ್ಷತಾರ ಕೊಡುಗೆಗಳು ಅಣಶಿಯ ದಟ್ಟಡವಿಯಲ್ಲೂ ಪಸರಿಸಿವೆ. ಕೇವಲ ಸಂಬಳಕ್ಕಾಗಿ ಕೆಲಸ ಮಾಡದೇ, ಸ್ಥಳೀಯ ಪರಿಸರ ಪ್ರೀತಿ ಬೆಳೆಸುವುದಕ್ಕೆ ಪೂರಕವಾಗಿ, ಮಕ್ಕಳ ಭವಿಷ್ಯದ ಬದ್ಧತೆಯೊಂದಿಗೆ ಕೆಲಸ ಮಾಡುವ ಅಕ್ಷತಾ ಅವರಂತಹ ಶಿಕ್ಷಕರ ಸಮುದಾಯ ಎಲ್ಲ ಕಡೆಯೂ ಬೆಳೆದರೆ ನಮ್ಮ ಶಿಕ್ಷಣ ವ್ಯವಸ್ಥೆಯ ಅಂತರಂಗ ಮತ್ತು ಅಂತ:ಕರಣವೇ ಬದಲಾಗಿ ಮಾದರಿಯಾದೀತು.
ಕೊನೆಗೊಂದು ಜೋಕ್ : ಅಕ್ಷತಾರು ತರಗತಿಗೆ ಸಮಯಕ್ಕೆ ಸರಿಯಾಗಿ ಬಂದರೂ, ಕೆಲವೊಮ್ಮೆ ವಿಪರೀತ ಮಳೆಯ ಕಾರಣದಿಂದ ಮಕ್ಕಳು ಚಕ್ಕರ್ ಹೊಡೆದಾಗ ಕಾಡು ಮರಗಳ ಮೇಲಿಂದ ಜಿಗಿದು ಬಂದು ಖಾಲಿ ಬೇಂಚಿನ ಮೇಲೆ ಮಂಗನ ಮರಿಗಳು ಕುಳಿತ ಕುಣಿತ ಪ್ರಸಂಗಗಳಿದ್ದವು. ಆಗ ಈ ಅಕ್ಷತಕ್ಕೋರು ಮಂಗಗಳಿಗೆ ಪಾಠ ಮಾಡದೇ, ಮಂಗಗಳಿಂದಲೇ ತಾವು ಪಾಠ ಹೇಳಿಸಿಕೊಳ್ಳುತ್ತಿದ್ದರಂತೆ. ಎಷ್ಟೆಂದರೂ ಮಂಗನಿಂದಲೇ ಮಾನವನಲ್ಲವೇ..! ಹೀಗಾಗಿ ಮಂಗನನ್ನೂ ಮಾವನಂತೆ ಆದರದಿಂದ ಕಾಣಬೇಕಲ್ಲವೇ..
- ರಾಜು ಅಡಕಳ್ಳಿ – ಪತ್ರಕರ್ತರು, ಹಾಸ್ಯ ಲೇಖಕರು, ಬೆಂಗಳೂರು.
