‘ನಿನ್ನ ನೆನಪುಗಳು ಕಥೆಯಾಗುತ್ತವೆ’ ಕವನ

ನಿನ್ನನ್ನು ಮರೆತಿದ್ದೇನೆಂದು ಜಗತ್ತಿಗೆ ಸುಳ್ಳು ಹೇಳುತ್ತೇನೆ. ಆದರೆ ಪ್ರತಿರಾತ್ರಿ ಎಲ್ಲರೂ ನಿದ್ರಿಸಿದ ಮೇಲೆ ಎದೆ ಕೋಣೆಯ ಬಾಗಿಲು ಮೆಲ್ಲಗೆ ತೆಗೆಯುತ್ತೇನೆ… ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಅವರ ಲೇಖನದಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ನಿನ್ನ ನೆನಪುಗಳಿಗೆ
ನನ್ನ ಎದೆಯೊಳಗೊಂದು ಕೋಣೆಯಿದೆ
ಬಾಗಿಲಿದೆ ಕಿಟಕಿಯಿದೆ
ಕ್ಷಮಿಸು
ಯಾರಿಗೂ ತೆರೆಯದಂತೆ ಬೀಗ ಹಾಕಿರುವೆ

ನಿನ್ನನ್ನು ಮರೆತಿದ್ದೇನೆಂದು
ಜಗತ್ತಿಗೆ ಸುಳ್ಳು ಹೇಳುತ್ತೇನೆ
ಆದರೆ ಪ್ರತಿರಾತ್ರಿ
ಎಲ್ಲರೂ ನಿದ್ರಿಸಿದ ಮೇಲೆ
ಎದೆ ಕೋಣೆಯ ಬಾಗಿಲು ಮೆಲ್ಲಗೆ ತೆಗೆಯುತ್ತೇನೆ

ಅಲ್ಲಿ ಇನ್ನೂ
ನೀನು ಬಿಟ್ಟು ಹೋದ ಮೋಹಕ ನಗು
ಮಾತನಾಡದೆ ಉಳಿಸಿದ ಮಾತುಗಳು
ಮುಗಿಯದೆ ನಿಂತ ಸಂಭಾಷಣೆಗಳು
ಮತ್ತು ನನ್ನ ಕಣ್ಣುಗಳಲ್ಲಿ
ಇನ್ನೂ ಕರಗದ ಆ ರಂಗಿನ ಸಂಜೆ ಹಾಗೆಯೇ ಇವೆ

ಹೊರಗಿನ ಜಗತ್ತು
ನಮ್ಮ ಕಥೆಗೆ ಸಾವಿರ ಅರ್ಥಗಳನ್ನು ಕೊಡಬಹುದು
ಯಾರೋ ತಪ್ಪು ಎನ್ನಬಹುದು
ಯಾರೋ ಹುಚ್ಚು ಎನ್ನಬಹುದು
ಯಾರೋ ಮರೆತುಬಿಡು ಎನ್ನಬಹುದು

ಅವರಿಗೆ ಹೇಗೆ ತಿಳಿಯಬೇಕು
ಕೆಲವು ಸಂಬಂಧಗಳು
ಜೊತೆಯಾಗಿ ಬದುಕುವುದಕ್ಕಲ್ಲ
ಮನಸ್ಸಿನೊಳಗೆ ಯಾರಿಗೂ ಕಾಣದಂತೆ
ಜೀವಂತವಾಗಿರುವುದಕ್ಕಾಗಿಯೇ ಹುಟ್ಟಿರುತ್ತವೆ ಎಂದು

ನಿನ್ನನ್ನು ನನ್ನಿಂದ ದೂರ ಮಾಡಿಲ್ಲ
ಜಗತ್ತಿನಿಂದ ಮಾತ್ರ ದೂರವಿಟ್ಟಿದ್ದೇನೆ
ನಿನ್ನ ನೆನಪು ಹೊರಗೆ ಬಂದರೆ
ಅದು ಮತ್ತಷ್ಟು ಕಥೆಯಾಗುತ್ತದೆ
ಒಳಗೇ ಉಳಿದರೆ
ಅದು ನನ್ನದೇ ಬದುಕಾಗುತ್ತದೆ

ಪ್ರತಿ ಬಾರಿ ನನ್ನೆದೆಯ ಬಾಗಿಲು ಮುಚ್ಚುವಾಗ
ನಾನು ನಿನ್ನನ್ನು ಬಂಧಿಸುವುದಿಲ್ಲ
ನಮ್ಮ ನಡುವೆ ಉಳಿದಿರುವ
ಜೀವನ ಪವಿತ್ರತೆಯನ್ನು ಕಾಯ್ದುಕೊಳ್ಳುತ್ತೇನೆ


  • ಟಿ.ಪಿ.ಉಮೇಶ್ – ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಅಮೃತಾಪುರ, ಹೊಳಲ್ಕೆರೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading