ಅಂಗೈಯಲ್ಲಿ ಪ್ರಪಂಚ (ಭಾಗ- ೧೯)

ವಿಘ್ನ ಸಂತೋಷಿಗಳು ನಮ್ಮ ಸುತ್ತಮುತ್ತ ತುಂಬಾ ಜನರಿದ್ದಾರೆ. ಯಾರಾದರೂ ಖುಷಿಯಿಂದ ಇರುವಾಗ ಅಲ್ಲಿ ಅವಶ್ಯಕತೆಯಿಲ್ಲದ, ಬೇಡದ ಯಾವುಯಾವುದೋ ವಿಷಯಗಳನ್ನು ಮಾತನಾಡಿ ಅವರ ಖುಷಿ ಹಾಳು ಮಾಡುವವರಿದ್ದಾರೆ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ.’ ತಪ್ಪದೆ ಮುಂದೆ ಓದಿ…

ಅಂದು ಸ್ವತಂತ್ರ ದಿನಾಚರಣೆ. ದೇಶಭಕ್ತಿಗೀತೆ ಹಾಡುವ ಹತ್ತನೇ ತರಗತಿಯ ಮಕ್ಕಳ ಒಂದು ತಂಡಕ್ಕೆ ಶಿಕ್ಷಕರು ಒಂದೇ ಬಣ್ಣದ ಚೂಡಿದಾರ, ದುಪ್ಪಟ್ಟ ಧರಿಸಿ ಬರಲು ಹೇಳಿದ್ದರು. ಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ. ರೂಪವಂತೆ, ಗುಣವಂತೆ ಜೊತೆಗೆ ಓದುವುದರಲ್ಲಿ, ವಿಧೇಯತೆಯಲ್ಲಿ ಹೀಗೆ ಎಲ್ಲದರಲ್ಲಿಯೂ ತನ್ನದೇ ಛಾಪು ಮೂಡಿಸಿದವಳು. ಅಂದು ಬಹಳ ಉತ್ಸಾಹದಿಂದ ಹೊಸ ಬಟ್ಟೆ ಧರಿಸಿ ಶಾಲೆಗೆ ಹೋದಳು. ನಿಜಕ್ಕೂ ಆ ಬಣ್ಣ ಅವಳಿಗೆ ಬಹಳ ಒಪ್ಪುತ್ತಿತ್ತು. ಅವಳ ಸೌಂದರ್ಯ ಇಮ್ಮಡಿಸಿತ್ತು. ಅದನ್ನು ನೋಡಿದ ಒಂದಿಬ್ಬರು ಬೇಕೆಂದೇ, ನೀನು ಆಂಟಿ ತರ ಕಾಣ್ತಾ ಇದ್ಯಾ ಎಂದಾಗ ಆ ಹುಡುಗಿಗೆ ಅಳುವೇ ಬಂದಿತ್ತು. ಹಾಗಂತ ಅವಳೇನು ವಯಸ್ಸಿಗೆ ಮೀರಿದ ಬೆಳವಣಿಗೆ ಹೊಂದಿರಲಿಲ್ಲ. ಮುಖದಲ್ಲಿ ಇನ್ನೂ ಮುಗ್ಧತೆ ಹಾಗೇ ಇತ್ತು. ಖುಷಿಯಿಂದ ಹೋದವಳು ಇದರಿಂದ ಒಳಗೊಳಗೇ ಕುಗ್ಗಿ ಹೋದಳು. ಮೂರೂವರೆ ಸಾವಿರ ಕೊಟ್ಟು, ಬಹಳ ಇಷ್ಟಪಟ್ಟು ತಂದ ಚೂಡಿದಾರದ ಸೆಟ್ಟನ್ನು ಮುಂದೆ ಅವಳೆಂದೂ ಹಾಕಲೇ ಇಲ್ಲ. ಅವಳ ಮನೆಯವರು ಎಷ್ಟೋ ಹೇಳಿ ನೋಡಿದರು. ಆದರೆ ಆ ಮಗುವಿಗಾದ ಮಾನಸಿಕ ಆಘಾತ ಅವಳು ಅದನ್ನು ಮತ್ತೆ ಧರಿಸದಂತೆ ಮಾಡಿತ್ತು. ಇದನ್ನು ಆ ಹುಡುಗಿ ಅರ್ಥ ಮಾಡಿಕೊಳ್ಳಬೇಕಿತ್ತು, ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬಾರದಿತ್ತು ಎಂದೆಲ್ಲಾ ಹೇಳುವುದು ಬಹಳ ಸುಲಭ. ಆದರೆ ಆ ವಯಸ್ಸಿನಲ್ಲಾಗುವ ಮನಸ್ಸಿನ ತಲ್ಲಣ ಯಾವುದಕ್ಕೂ ಆಸ್ಪದ ಕೊಡುವುದಿಲ್ಲ ಎಂಬುದೂ ಸಹ ಅಷ್ಟೇ ಸತ್ಯ.

ಅದೊಂದು ಸಾರ್ವಜನಿಕ ಸಮಾರಂಭ. ರಾಗಿಣಿ ತನ್ನ ಸ್ನೇಹಿತೆಯೊಡಗೂಡಿ ಅಲ್ಲಿಗೆ ಹೋಗಿದ್ದಳು. ವರ್ಷದ ನಂತರ ಅವಳು ಮನೆಯಿಂದ ಹೊರ ಹೊರಟಿದ್ದು. ಹಾಗೂ ಹೀಗೂ ಅಲ್ಲಿ ಎಲ್ಲರೊಂದಿಗೆ ಬೆರೆತು ಖುಷಿಯಾಗಿದ್ದಳು. ತಡವಾಗಿ ಬಂದ ಶ್ರಾವಣಿ ಇವಳನ್ನು ನೋಡಿದ ತಕ್ಷಣ ಬಂದು ಅಯ್ಯೋ, ಹಿಂಗಾಗ್ಬಾರ್ದಾಗಿತ್ತು , ಎಷ್ಟು ಗಟ್ಟಿಮುಟ್ಟಾಗಿದ್ದ, ಎಷ್ಟು ಬುದ್ಧಿವಂತ, ನೋಡಕು ತುಂಬ ಚೆನ್ನಾಗಿದ್ದ, ಈಗ ಅವ್ನಿಲ್ಲಾಂತ ನಂಬಕು ಆಗ್ತಿಲ್ಲ ಪಾಪ, ಅಂತೆಲ್ಲಾ ರಾಗಿಣಿಯ ಮಗ ಅಪಘಾತದಲ್ಲಿ ತೀರಿಹೋದ ವಿಷಯದ ಬಗ್ಗೆ ಮಾತಾಡಿ ರಾಗಿಣಿ ಕಣ್ಣೀರು ಹಾಕುವಂತೆ ಮಾಡಿದ್ದಳು. ಮೊದಲೊಮ್ಮೆ ಈ ವಿಷಯದ ಬಗ್ಗೆ ಖುದ್ದು ಸಾಂತ್ವನ, ಸಮಾಧಾನ ಎಲ್ಲವೂ ಹೇಳಿಯಾಗಿತ್ತು. ಅದೇ ಕೊರಗಿನಲ್ಲಿದ್ದ ರಾಗಿಣಿ, ಆಗಷ್ಟೇ ಹೊರಪ್ರಪಂಚಕ್ಕೆ ತನ್ನನ್ನು ತಾನು ತೆರೆದುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಎಷ್ಟು ದಿನ ಅಂತ ಹೀಗೇ ಇರ್ತೀಯ, ಸ್ವಲ್ಪ ಬದಲಾವಣೆ ಇರುತ್ತೆ ಎಂಬ ಗಂಡನ ಹಾಗೂ ಗೆಳತಿಯ ಒತ್ತಾಯದ ಮೇರೆಗೆ, ರಾಗಿಣಿ ಅಂದು ಆ ಕಾರ್ಯಕ್ರಮಕ್ಕೆ ಹೋಗಿದ್ದು. ಬೆಳಿಗ್ಗೆಯಿಂದಲೂ ಆ ಒಂದು ವಾತಾವರಣದಲ್ಲಿ ಅವಳು ಖುಷಿಯಾಗೇ ಇದ್ದಳು. ಈಗ ಇವಳ ಮಾತಿನಿಂದ ಇನ್ನಷ್ಟು ದುಃಖದ ಭಾರ ಹೊತ್ತು ಮನೆಗೆ ಹಿಂತಿರುಗುವಂತಾಯ್ತು. ಅಲ್ಲಿಂದ ಅವಳಿಗೆ ಮತ್ತೆ ಮನೆಯೇ ಹಿತವೆನಿಸಲು ಶುರುವಾಯ್ತು.

ಶಶಾಂಕ್ ಕಾಲೇಜು ವಿದ್ಯಾರ್ಥಿ. ಹದಿಹರೆಯಕ್ಕೆ ತಕ್ಕಂತೆ ಆಗುವ ಹಾರ್ಮೋನ್ ಬದಲಾವಣೆಯಿಂದ ಮುಖದ ತುಂಬಾ ಮೊಡವೆ ಆಗಿತ್ತು. ಅವನೂ ಅದನ್ನು ಹೋಗಲಾಡಿಸಲು ಶತಪ್ರಯತ್ನ ಮಾಡುತ್ತಿದ್ದ. ಆದರೂ ಅದು ಕಡಿಮೆ, ಜಾಸ್ತಿ ಹೀಗೆ ಆಗುತ್ತಲೇ ಇತ್ತು. ಕೊನೆಗೆ ವೈದ್ಯರ ಬಳಿ ಹೋಗಿ ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದ. ಮೊದಲೊಂದೆರಡು ಬಾರಿ ಸಿಕ್ಕಾಗ ಇದರ ಬಗ್ಗೆ ಕೇಳಿದ್ದ ಹತ್ತಿರದವರೇ, ಅಂದು ಆ ಮದುವೆ ಸಮಾರಂಭದಲ್ಲೂ ಇವನನ್ನು ನೋಡಿದ ತಕ್ಷಣ ಎಲ್ಲರ ಮುಂದೆ, ಏನೋ ಅದು ಮುಖದ ತುಂಬಾ ಅಷ್ಟೊಂದು ಮೊಡ್ವೆ ಆಗಿದೆ ಎಂದಾಗ ಅದರ ಚಿಂತೆ ಬಿಟ್ಟು ಸಂಬಂಧಿಕರೊಂದಿಗೆ ಖುಷಿಯಾಗಿ ಓಡಾಡಿಕೊಂಡಿದ್ದ ಹುಡುಗನಿಗೆ ಒಂಥರಾ ಅವಮಾನವಾದಂತೆನಿಸಿ ಅವನ ಮುಖ ಸಪ್ಪಗಾಯಿತು.

ಈ ರೀತಿ ವಿಘ್ನ ಸಂತೋಷಿಗಳು ನಮ್ಮ ಸುತ್ತಮುತ್ತ ತುಂಬಾ ಜನರಿದ್ದಾರೆ. ಯಾರಾದರೂ ಖುಷಿಯಿಂದ ಇರುವಾಗ ಅಲ್ಲಿ ಅವಶ್ಯಕತೆಯಿಲ್ಲದ, ಬೇಡದ ಯಾವುಯಾವುದೋ ವಿಷಯಗಳನ್ನು ಮಾತನಾಡಿ ಅವರ ಖುಷಿ ಹಾಳು ಮಾಡುವವರು ಒಂದಷ್ಟು ಜನರಾದರೆ, ಯಾರಾದರೂ /ಯಾವುದನ್ನಾದರೂ ಇಷ್ಟಪಟ್ಟು ಮಾಡಿದಾಗ /ಧರಿಸಿದಾಗ /ತಂದಾಗ ಅದು ಎಷ್ಟೇ ಚೆನ್ನಾಗಿದ್ದರೂ/ ಚೆನ್ನಾಗಿ ಕಾಣುತ್ತಿದ್ದರೂ, ತನಗಿಲ್ಲವಲ್ಲ /ತನ್ನಿಂದ ಮಾಡಲಾಗಲಿಲ್ಲವಲ್ಲ ಎಂಬ ಅಸೂಯೆಗೆ ಕೊಂಕು ನುಡಿದು ಅವರ ಖುಷಿ, ನೆಮ್ಮದಿ, ಅಂದಿನ ದಿನವನ್ನು ಹಾಳು ಮಾಡುವ ಮಂದಿ ಇನ್ನೊಂದಷ್ಟು. ಒಂಚೂರೂ ಮನುಷ್ಯತ್ವ , ಮಾನವೀಯತೆ ಹೊಂದಿರದೆ ತಾವೇ ಎಂದು ಹಾರಾಟ ಮಾಡುವವರು ಇವರುಗಳು. ಎಲ್ಲಿ ಹೋದರೂ ತಾವೇ ಹೈಲೈಟ್ ಆಗಬೇಕೆಂಬ ಹಪಾಹಪಿ ಹೊಂದಿರುವವರು. ಜೊತೆಗೆ ತಮ್ಮಷ್ಟು ಬುದ್ಧಿವಂತರು ಪ್ರಪಂಚದಲ್ಲೇ ಇಲ್ಲವೆಂಬ ಮನೋಧೋರಣೆ. ಹಾಗಾಗಿ ಯಾರ ಭಾವನೆಗಳಿಗೂ ಬೆಲೆ ಕೊಡದೇ, ಎಲ್ಲರ ಮುಂದೆ ಇನ್ನೊಬ್ಬರನ್ನು ಏನಾದರೊಂದು ಅಂದು ಅವರು ಕಣ್ಣೀರು ಹಾಕಿದರೇ ಇವರಿಗೆ ಸಮಾಧಾನ. ಅದನ್ನು ನೋಡಿಯೂ, ಕಿಂಚಿತ್ತೂ ಪಶ್ಚಾತಾಪಪಡದೇ ಅಲ್ಲೇ ಉಳಿದವರ ಜೊತೆ ನಗುನಗುತ್ತಾ ತಮ್ಮ ದಿನವನ್ನು ಸಂತೋಷದಿಂದ ಕಳೆದು ಹೋಗುವವರು. ಒಬ್ಬರ ಮನಸ್ಸಿಗೆ ಘಾಸಿ ಮಾಡಿದ ಪಾಪಪ್ರಜ್ಞೆ ಇಂಥವರನ್ನು ಕಾಡುವುದೇ ಇಲ್ಲ. ಎಲ್ಲೇ ಹೋದರೂ ಮಕ್ಕಳು, ಮರಿಗಳೆನ್ನದೇ, ಹಿರಿಯರು, ಕಿರಿಯರೆನ್ನದೇ ಎಲ್ಲರಿಗೂ ಅಂದು, ಖುಷಿಪಡುವ ವಿಕೃತ ಮನಸ್ಥಿತಿಯವರು.

ಇದು ಮನೆ, ಶಾಲೆ, ಕಾಲೇಜು, ಸಮಾರಂಭ, ಕೆಲಸ ಮಾಡುವ ಸ್ಥಳ, ಸಾರ್ವಜನಿಕ ಸ್ಥಳ ಹೀಗೆ ಎಲ್ಲೆಡೆಯೂ ಕಂಡುಬರುವಂಥದ್ದು. ಇದಕ್ಕೆ ವಯಸ್ಸಿನ ಭೇದವಿಲ್ಲ. ಕೆಲವರಿಗೆ ಚಿಕ್ಕವಯಸ್ಸಿನಿಂದಲೇ ಈ ರೀತಿಯ ಗುಣ ಬಂದಿರುತ್ತದೆ. ಬೆಳೆದ/ ಸುತ್ತಮುತ್ತಲಿನ ವಾತಾವರಣವೂ ಇದಕ್ಕೆ ಕಾರಣ ಇರಬಹುದು. ಮಕ್ಕಳು ಅಸೂಯೆಯಿಂದ ಈ ರೀತಿ ವರ್ತಿಸಿದಾಗ ತಂದೆ-ತಾಯಿ ಬುದ್ಧಿ ಹೇಳಿ ಸರಿದಾರಿಗೆ ತರಬೇಕು. ದೊಡ್ಡವರು ಈ ರೀತಿ ವರ್ತಿಸುವ ಮುನ್ನ ಸ್ವಲ್ಪವಾದರೂ ಯೋಚಿಸಲಿ. ಏಕೆಂದರೆ, ಇಂದು ಅವರಿಗೆ ಅದು ಖುಷಿ ನೀಡಬಹುದು. ಆದರೆ, ಜನರ ಅಭಿಪ್ರಾಯದಲ್ಲಿ ಅಂಥಹವರಿಗೆ ಯಾವ ಬೆಲೆಯೂ ಇರುವುದಿಲ್ಲ. ತಾವಾಗೇ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಇಂಥವರು, ಬೇರೆಯವರನ್ನು ಆಡಿಕೊಂಡು ತಾವೇ ಗ್ರೇಟ್ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತ ಕ್ಷಣಿಕ ಸುಖ ಅನುಭವಿಸುವವರು. ನಮ್ಮ ಜೊತೆಗೇ ಇದ್ದು, ಹತ್ತಿರದವರು ಎನಿಸಿಕೊಂಡು, ನಮ್ಮ ಏಳಿಗೆಯನ್ನು ಸಹಿಸದ, ನಾವು ಸಂತೋಷವಾಗಿರುವುದನ್ನು ಬಯಸದ ಇಂತಹವರಿಗೆ ಒಮ್ಮೆ ತಮಗೆ ಹೊಡೆತ ಬಿದ್ದಾಗಲೇ ಬುದ್ಧಿ ಬರಬಹುದೇನೋ. ಆದರೆ, ಯಾವ ತಪ್ಪೂ ಮಾಡದವರು ಅನುಭವಿಸುವ ಮಾನಸಿಕ ನೋವು, ಇವರಾಡಿದ ಮಾತಿನಿಂದ ಅವರಿಗೆ ಹಾಗೂ ಅವರ ಮನೆಯವರಿಗೆ ಆಗುವ ತೊಂದರೆಗಳ ಪಟ್ಟಿ, ಅದಕ್ಕೆ ಅವರು ತೆರಬೇಕಾದ ಬೆಲೆ ಮಾತ್ರ ಬಹಳ ದೊಡ್ಡದು. ಮಕ್ಕಳ ಕುಗ್ಗಿದ ಮನಸ್ಸನ್ನು ಮತ್ತೆ ಮೊದಲಿನಂತಾಗಿಸಲು ಹೆಣಗಾಡಬೇಕಾದ ಪರಿಸ್ಥಿತಿ (ಇದರಿಂದ ಡಿಪ್ರೆಶನ್ ಗೆ ಹೋದರಂತೂ ಅವರ ಮನೆಯವರ ಪಾಡು ಯಾರಿಗೂ ಬೇಡ), ಕಳೆದುಕೊಳ್ಳುವ ಅವರ ಜೀವನದ ಅಮೂಲ್ಯ ಸಮಯ, ಹಣಕಾಸು, ಹಾಳಾದ ಮನೆಯ ವಾತಾವರಣ ಹೀಗೆ ಇನ್ನೂ ಹತ್ತು ಹಲವು. ಇನ್ನಾದರೂ ಇದನ್ನೆಲ್ಲಾ ಅರಿತು ಇನ್ನೊಬ್ಬರ ಮನ ನೋಯಿಸುವ ಬದಲು ಎದುರಿಗೆ ಸಿಕ್ಕಾಗ ನಕ್ಕು, ನಾಲ್ಕು ಮಾತಾಡಿ ಎಲ್ಲರ ಜೊತೆಗೂಡಿ ಬದುಕುವ ಕಲೆ ಕಲಿಯಲಿ ಎಂಬ ಆಶಯದೊಂದಿಗೆ.


  •  ಮಂಗಳ ಎಂ ನಾಡಿಗ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading