ಸೊಂಪಾದ ನಿದ್ರೆಯ ಹವಣಿಕೆ. ಸೊಗಡಿನ ಕನವರಿಕೆ. ಆದರೆ ಏನಿದೇನಿದು ವಿಪರ್ಯಾಸ??!.. ಸ್ವಯಂಕೃತ ಅಪರಾಧವೇ? ತಲೆಯನ್ನು ಮಲಗಿಸಿಕೊಂಡು ವಿಶ್ರಾಂತಿ ಕೊಡುವ ಗ್ಯಾರಂಟಿ ಇಲ್ಲದ ಈ ದಿಂಬು ಎಂಬ ವಸ್ತುವಿಗಷ್ಟು ಮಹತ್ವವೇ? ಲೇಖಕರಾದ ವೈ.ಕೆ.ಸಂಧ್ಯಾ ಶರ್ಮ ಅವರು ಲೇಖನವನ್ನು ತಪ್ಪದೆ ಮುಂದೆ ಓದಿ…
ಕೋಪದಿಂದ ಭುಸುಗುಡುತ್ತ ದಿಂಬು ಮೇಲೆದ್ದು ಸರಸರನೆ ರೂಮಿನಿಂದ ಹೊರನಡೆದು ಪಕ್ಕದ ಕೋಣೆ ಪ್ರವೇಶಿಸುತ್ತದೆ. ಮಧ್ಯರಾತ್ರಿ… ಕಲ್ಲು ನೀರು ಕರಗುವ ಸಮಯ.
‘ಅದೆಷ್ಟು ದಿನಾಂತ ಸಹಿಸುವುದು. ಇನ್ನು ಸಾಧ್ಯವೇ ಇಲ್ಲ. ಥೂ ಗುಟುರು ಶಬ್ದ. ಮೂಗು ತಿಕ್ಕಿಕೊಳ್ಳುವಂಥ ವಾಸನೆ’.
ಕೊರಳಲ್ಲೇ ಕರಗಿ ಹೋದ ಅಸಹನೆಯ ಪಿಸುದನಿ ಅವಳದು. ಮಣಕುಗಟ್ಟಿದ ದಿಂಬನ್ನು ಮೂಲೆಗೆ ಎಸೆಯುತ್ತಾಳೆ. ಹಾಸಿಗೆಯೇನೋ ಮೆತ್ತಗಿದೆ. ಹೊಸ ದಿಂಬೂ ಇಂಬಾಗಿದೆ. ವ್ಯತ್ಯಾಸ ಇಷ್ಟೇ, ಇದು ಮಗ್ಗುಲ ಕೋಣೆ. ಇದುವರೆಗೂ ಯಾರೂ ಮಲಗಿರದ ಫ್ರೆಷ್ ವಾತಾವರಣ. ಬೀಸಲಾರಂಭಿಸಿದ ಫ್ಯಾನಿನ ಗಾಳಿಯಲ್ಲೂ ತಂಪಿದೆ. ಆದರೂ, ನಿದ್ದೆ ಯಾಕೋ ಬರವಲ್ಲದು. ಹೊಸ ಜಾಗ. ಮಗ್ಗುಲು ಹಾಸಿಗೆ ಸುಕ್ಕಾಗುವಷ್ಟು ಹೊರಳಿದ್ದೇ ಬಂತು.
ನೆನಪು ಸುಲಿಯುತ್ತದೆ. ತಪ್ಪಾಯಿತೇ ಎಂಬ ಅಳುಕು. ಎದೆಯಲ್ಲಿ ಕುಟ್ಟುವ ಕಳವಳ. ಗತ್ಯಂತರವಿಲ್ಲ. ಇನ್ನು ಅಸಾಧ್ಯ, ನಿರ್ಧರಿಸಿಯಾಗಿದೆ. ಎಷ್ಟೆಂದು ಸಹಿಸುವುದು?. ಕೊರಳ ಕಮಾನಿಗೆ ಮೆತ್ತೆಯಾಗಿ ತಲೆ ಒತ್ತು, ಹಿತವಾಗಿ ಆಸರೆಯಾಗದೆ ಅಹೋರಾತ್ರಿ ಒಂದೇ ಸಮನೆ ತಿದಿ ಒತ್ತಿದಂತೆ ತಲೆ ಒತ್ತುತಲೇ ಇರಬೇಕೇ?. ಈ ಛಂದಕ್ಕೆ ತಲೆ ಕೆಡಿಸುವ ಇದನ್ನು ದಿಂಡಾದ ದಿಂಬು ಎನ್ನುವರೇ? ತಲೆ ಎಂಬ ಬಾಲಂಗೋಚಿ ಅನ್ವಯವೇ ಈ ದಿಂಬಿಗೆ ? ನಿಟ್ಟುಸಿರು ಮಾಲೆ ಮಾಲೆಯಾಗಿ ಉಕ್ಕಿ, ಭುಸುಭುಸು ಬಿಸಿಯುಸಿರು ಮುಖಕ್ಕೇ ಬಡಿದು ಧಗೆಯೆನಿಸಿತು.
ಇದು ಸ್ವಯಂಕೃತ ಅಪರಾಧವೇ? ತಲೆಯನ್ನು ಮಲಗಿಸಿಕೊಂಡು ವಿಶ್ರಾಂತಿ ಕೊಡುವ ಗ್ಯಾರಂಟಿ ಇಲ್ಲದ ಈ ದಿಂಬು ಎಂಬ ವಸ್ತುವಿಗಷ್ಟು ಮಹತ್ವವೇ? ಮೊದಲ ನೋಟದಲ್ಲಿ ಕಂಡಂತೆಯೇ ಮೆತ್ತನೆಯದೋ ಅಥವಾ ಒಳಗೊಳಗೇ ಗುಮ್ಮನ ಗುಸಕನಂತೆ ಒತ್ತುವುದೋ ಎಂಬ ಪರೀಕ್ಷೆ ನಡೆಯಬೇಕಿತ್ತೇ?. ತಲೆ ಇಟ್ಟ ಮೇಲೆಯೇ ಅಲ್ಲವೇ ಅದರ ಒಡಲ ಗರ್ಭದ ಸ್ಪರ್ಶ ಅರಿವು?. ಹೌದು ಮೊದಮೊದಲ ಅನುಭವಗಳೆಲ್ಲ ಸೊಗಸೇ- ಹಿತವೇ- ಭ್ರಾಂತುಗಳ ಸರಮಾಲೆ. ಸುಮ್ಮಾನದ ಸುಹಾಸವೇ.ದಿನಕ್ರಮೇಣ ತಲೆ ಇಟ್ಟು ಇಟ್ಟೂ ಭಾರ. ಮಣ ಭಾರವಾಗಿ ತಗ್ಗು ಬಿದ್ದುಹೋಯಿತೇ ? ಅಳತೆ ಅರಿಯದ ಅನುಮಾನ – ಪ್ರಶ್ನೆಗಳ ಕುಣಿಕೆ. ಸರಪಳಿಯ ಬಂಧನ.
ಹುಷ್… ಸೋತು ಸುಣ್ಣವಾಗಿ ಉಳಿದ ತ್ರಾಣವ ಬಾಚಿಕೊಂಡು ಬೋರಲು ಬಿದ್ದಾಗಿದೆ. ನಂತರ ತೆವಳುವುದು ತಾನೇ ಸಹಜ ನಿಯಮ. ಹಾಗೆ ಅಂಬೆಗಾಲಿಕ್ಕುತ್ತ ಹೇಗೂ ಹೊಸಿಲು ದಾಟಿ, ಕೋಣೆ ಬದಲಿಸಿಯಾಗಿದೆ.
ಹೂಂ… ಎದ್ದು ಕೂರುವ ಹವಣಿಕೆ. ಅನಂತರವೇ ಮೇಲೆದ್ದು ನಿಂತು, ತಪ್ಪು ಹೆಜ್ಜೆಗಳ ನಡಿಗೆ. ಇದ್ದಕ್ಕಿದ್ದ ಹಾಗೇ ಒಂದು ಬಗೆಯ ನಿರಾಳ…ಪೇರುಸಿರು. ಹಾಸಿಗೆ ತುಂಬಾ ಒಬ್ಬಳೇ ಹೊರಳುವಾಗ ಬಿಡುಗಡೆಯ ಭಾವ… ಮಜದ ಅನುಭವ… ಅತ್ತಿಂದಿತ್ತ ಇತ್ತಿಂದತ್ತ … ಜೋ ಜೋ ಲಾಲಿ ಹಾಡುವವರಿಲ್ಲ ಅಷ್ಟೇ ..ಚಿಂತೆ ಇಲ್ಲ… ಅದಕ್ಯಾಕೆ ಅಳಬೇಕು, ನಾನೇ ಹಾಡಿಕೊಂಡರಾಯ್ತು.
ಕಣ್ ಎವೆ ಬಿಗಿದು ಸುಖಗನಸು ಕಾಣಲು ಅನುವಾದ ನೀರವ ನಿನಾದ…ಸದ್ಯ, ಎದೆ ನಡುಗಿಸುವ ಕರ್ಕಶ ಆ ಗೊರಕೆಯ ಗುಮ್ಮನಿಲ್ಲ.. ಹೆಬ್ಬಾವಿನುಸಿರಿನ ದುರ್ಗಂಧವಿಲ್ಲ … (ಕ್ಷಮೆ ಇರಲಿ, ಹಿಂದೆ ಅದೇ ಅತ್ತರು ಸುಗಂಧ .. ನವಿಲುಗರಿಯ ಬೀಸಣಿಕೆ… ಸುಖದ ಹಾಯಿದೋಣಿ)
ಈಗ ಹೊಸ ಕೋಣೆ… ಹೊಸ ಗಾಳಿ…. ಅಸಹನೆಯೆನಿಸುವ ಯಾವ ಕಿರಿಕ್ಕುಗಳೂ ಇಲ್ಲದ ಪ್ರಶಾಂತ ನೆಮ್ಮದಿಯ ವಾತಾವರಣ. ಈಗಿಲ್ಲಿ ಎಲ್ಲವೂ ಮುಕ್ತ ಮುಕ್ತ ಮುಕ್ತ.
ಬದಲಾದ ಪರ್ವ!
ಸೊಂಪಾದ ನಿದ್ರೆಯ ಹವಣಿಕೆ. ಸೊಗಡಿನ ಕನವರಿಕೆ. ಆದರೆ ಏನಿದೇನಿದು ವಿಪರ್ಯಾಸ??!.. ಗಾಢ ನೀ..ರ..ವ.. ನಿಶ್ಶಬ್ದದ ಶಬ್ದವೇ ಕಿವಿಗಡಚಿಕ್ಕುತ್ತಿದೆಯಲ್ಲ?! … ಅಚ್ಚರಿಯ ಸೋನೆ!
ಓಹ್ ಈ ಮೊದಲು, ದಿಂಬಿಗೆ ತಲೆಯಾನಿಸಿದ್ದೇ ಹಂಸ ತುಪ್ಪಳವೆನಿಸಿ, ಖುರಪುಟಗಳ ಟೇನ್ಕಾರ ….ಗೊರಸುಗಳ ಶಬ್ದಗಳದೇ ಸಾಮ್ರಾಜ್ಯ!!! ಹಿತ- ಅಹಿತಗಳ ನಡುವಣ ಗೆರೆ ಅಳಿಸಿ ಅಯೋಮಯದ ನಲಿವು. ಪ್ರತಿಯೊಂದೂ ಸುಖದ ಜೀಕು. ಮಧುರ ಮುಗುಳು ನಗು …ಜೇನ ಹನಿ, ತಣಿದ ಸುಖದಲೆಯ ಇನಿದನಿ ಬೆಳಗೂ- ಬೈಗೂ ಸಂತಸದ ಮರ್ಮರ ಧ್ವನಿ.
ಹೀಗೇಕಾಯ್ತು, ದನಿಗಳ ಏರಿಳಿತ?.. ದಿನ -ರಾತ್ರಿ ತಿರುಗಿದಂತೆ ಆ ಸ್ವರಮಾಧುರ್ಯ ಆಯ್ತೇಕೆ ಗಡಸು ಕಂಠದ ವ್ಯಾಘ್ರ ಮೊಳಗಿನ ಗರ್ಜನೆ! ಹಂತ ಹಂತವಾಗಿ ಬಣ್ಣ ಕಳಚಿ ಕಂಡಿತೇಕೆ ಮುದ್ದು ಜಿಂಕೆಯ ಹುಲಿಯ ಚರ್ಮ?.
ನಿಜ, ನಲವತ್ತು ವರುಷಗಳ ರಾತ್ರಿಗಳೂ ತರಹಾವರಿ. ಕುಣಿವ ನೆನಪುಗಳು ಮತ್ತೂ ಲಾಗ ಹಾಕುತ್ತವೆ. ಮೊದಲರಾತ್ರಿಯ ಕುಂಚ ಎಳೆದ ಬಣ್ಣದೆಳೆಗಳ ಚಿತ್ತಾರ ರಂಗೋ ರಂಗು. ಹೊಚ್ಚ ಹೊಸ ದಿಂಬಿನ ತಾಜಾ ಹತ್ತಿಯ ಮೃದುತ್ವ, ಘಮಲು… ದಿಂಬಿನ ಮೇಲುಚೀಲದ ಒಡಲಲ್ಲಿ ಹೆಣೆದ ನವಿರು ಅಂದದ ಕಸೂತಿ. ಮೇಲೆ ಹರವಿದ ಜಾಜಿ, ಮಲ್ಲಿಗೆ, ಕೆಂಡಸಂಪಿಗೆ, ಕೇದಿಗೆಯ ಹೂ ರಾಶಿಯೊಂದಿಗೆ ಗಂಧ-ಧೂಪದ ಸೊಂಪು ಬನಿ…ಪುಷ್ಪವತಿ…ಸವಿ ನಿರೀಕ್ಷೆಯ ತನನ.. ಹೃದಯದಲ್ಲಿ ಧಿಮಕಿಟವಾಡುವ ಪುಳಕದ ನರ್ತನ… ಕಾಮನಬಿಲ್ಲ ಕನಸುಗಳ ರಾಶಿ ರಾಶಿ.
ಸ್ವರ್ಗದ ಬಾಗಿಲು ತೆರೆ ತೆರೆದಂತೆ ಸುಖದಲೆಯ ಬೀಸು. ತಾಯಗರ್ಭದಿಂದ ಚಿಗಿದಂತೆ ಎಲ್ಲವೂ ಅಯೋಮಯ!…ಹೊಸ ಬೆಳಕ ಬಿಸಿಯಪ್ಪುಗೆಯ ನೂತನಾನುಭವ..ಸುಖದ ಅಮಲು.. ತಣಿದ ಉದ್ಗಾರ…. ಉಸಿರ ಹೊಯ್ದಾಟ ತುಂತುರು ತುಂತುರು… ಓಹ್ ಕಚಗುಳಿಯ ಅಲೆ… ಅವ್ಯಕ್ತ ವಿನೂತಾನುಭವದ ಹೊನಲು. ಬಿಗಿತದುಯ್ಯಾಲೆ… ಅನೂಹ್ಯ ಮೆಲುಕು. ಅಭಯ ಸಾನಿಧ್ಯ- ಬಿಸುಪು. ಹಿತಾನುಭವದ ಮಜಲು ಮಜಲು ಏರಿದಂತೆ… ಮಗ್ಗುಲು ಬದಲಿಸಿದಂತೆಲ್ಲ ರುಚಿಕಟ್ಟು… ಕನಸುಗಳ ಕಾರಂಜಿ.
ಅನುದಿನ ಅನುಪಮ – ತಲೆಯೂರಿದಂತೆ ಸ್ವರ್ಗಲೋಕಕೆ ಸೋಪಾನ. ಮೃದುತ್ವದ ಸಿಹಿಯೂಟೆ, ಬೆನ್ನೇರಿದ ಕನಸ ಮೂಟೆ. ತಲೆಯೂರಿ ಹೊರಳಿದಷ್ಟೂ ವರ್ಣಗಳ ಜಾತ್ರೆ. ಕಣ್ಣು ಕಟ್ಟಿದ ಹಾದಿಯಲ್ಲಿ ದಿನ ದಿನವು ಜಾರಿದವು. ಇದೇನು ಸೋಜಿಗ ! ಮೊದಮೊದಲ ಹನಿಯ ಕಡು ಸವಿಯ ಸೊಗಡು ಮಾಸಿ, ರುಚಿಯಿರದ ನೀರಸ, ಸಪ್ಪೆ-ಒಗರು.
ನಂತರ ಕಲ್ಲುದಿಂಬಿನ ಮೇಲೆ ತಲೆ ಇಡುವುದೇ ಬೇಡವೆನಿಸುವ ಹಿಂಸೆ ಹಿಂಡು. ಎಲ್ಲೆಲ್ಲೋ ಒತ್ತುವ, ಇರುಸುಮುರುಸು, ಸೂಜಿ ಚುಚ್ಚು. ಪುಳಕ್ಕನೆ ಕಂಬನಿ ಒಸರಿಸುವ, ಅಹಿತ – ನಿಷ್ಕರುಣಿ ಒರಟು-ಉರುಟು ತಲೆಯೊತ್ತು! ಗಟ್ಟಿ ಒತ್ತಿದ್ದೇ ಬಂತು. ತಲೆಯೂರಿದಂತೆ ಕಲ್ಲು ಗಂಟು ಗಂಟು . ದಿಂಬುಗಳು ಹೀಗೂ ಇರುತ್ತವೆಯೇ?!!! ಹಾಂ … ಇರುತ್ತವೆ… ಕೆಲವು ಮೊದಲಲ್ಲಿ ಬಣ್ಣ- ಕಸೂತಿ, ಆಕಾರ ಹಿತವೆನಿಸದ್ದು, ಬರುಬರುತ್ತಾ ಪಳಗಿ ಹಿತಗಾಣಿಸುತ್ತವೆ. ಮತ್ತೆ ಕೆಲವು ಚೆಂದ ಕಂಡದ್ದು ಎಲ್ಲೆಲ್ಲೋ ಒತ್ತುತ್ತವೆ… ನಿದ್ದೆಯಲ್ಲೂ ಬೆದರಿಸುತ್ತವೆ. ಸುಳ್ಳಲ್ಲ ಕಾಣಿ… ನಿಜ.. ನಿಜ.
ಎಲ್ಲ ಅನುಭವಗಳೂ ವ್ಯಾಖ್ಯೆ ಬರೆಯುತ್ತವೆ. ಅವಳ ಪಾಲಿಗೆ ಅದೇ ದಿಂಬಿನಾಸರೆಯಲ್ಲಿ ದಿನಗಳು ಸಾಯುತ್ತ, ಸಾಯುತ್ತ ಕ್ಷೀಣಿಸಿವೆ. ಮುಸ್ಸಂಜೆ ಬಾಡಿ, ಕತ್ತಲು ಹೆರುವ ರಾತ್ರಿಗಳಲ್ಲಿ ಸವಿಜೇನು ಇಳಿ ಇಳಿಯುತ್ತ, ಅದು ಬರೀ ಹೆಜ್ಜೇನು ಕುಟುಕು. ಚಡಪಡಿಕೆ… ಮುಜುಗರದ ಮೇರು…ಹಿತವೆನಿಸದ ಸಾಂಗತ್ಯ ಬೇವು…ಬೆಚ್ಚನೆಯ ಸ್ಪರ್ಶ ಸುಡು ಸುಡು ಕೆಂಡ. ಇಲ್ಲವೇ ಹಿಮಾಲಯದ ಮಂಜುಗುಡ್ಡೆ .
ನೊರೆಯಾಗಿ ಬುರಬುರನೆ ಉಬ್ಬಿದ ಆಸೆ. ಕನಸುಗಳೆಲ್ಲ ಬತ್ತಿ, ಭಾವದ ಬನಿ ಇಂಗಿ, ನಿಜದ ಒಳ ಪದರಗಳು ರಿವ್ವನೆ ಬಿಚ್ಚಿಕೊಂಡ ಸತ್ಯದರ್ಶನ. ರಾತ್ರಿಗಳ ಕತ್ತಲು, ಹಗಲಿಗೂ ಮೆತ್ತಿಕೊಂಡು, ರಸ-ಗಂಧ- ಸ್ಪಂದನ, ಸ್ಪರ್ಶವಿರದ, ಕೃತಕ ಬಣ್ಣಗಳೆಲ್ಲ ಕಳಚಿ, ಬಣ್ಣಗಳು ನೀರಾದ, ಬರೀ ನಿಪ್ಪಾಟೆ ನೀರೆನಿಸಿದರೂ ಎದೆ ನೆನೆಸದ ಕ್ಷಾಮ. ನೋವು ಸೋಸುವ ಕ್ಷಣಗಣನೆ. ಹೆಚ್ಚೇನು ಯಾಂತ್ರಿಕತೆಯ ಅಯೋಮಯತೆ. ನಿಷ್ಕರುಣ ಕಾಲಕೆ ವೇಗದ ಧಾವಂತ ಬಯಕೆ. ಅದಕ್ಕೆ ಹೆಜ್ಜೆಗಳನ್ನು ಪೋಣಿಸಲೇಬೇಕು ಅನಿವಾರ್ಯ.
ಆದರೆ ಅವಳ ಹೆಜ್ಜೆ ಗುರುತು ಮೂಡದ ದಾರಿ. ಗರಿಕೆ ಚಿಗುರಿರದ ಹಸಿರು ತೆನೆ ಒಡೆಯದ ಸಾರ್ಥಕ್ಯ ಕಾಣದ ನಿರ್ವಿಣ್ಣ ಬದುಕು. ಗತ್ಯಂತರವಿರದ, ನಡೆದಷ್ಟೂ ಒಣ ಕಾಷ್ಠದ ದೃಶ್ಯ. ಸಹಪಯಣವೇ ಇದು ?… ಅಪರಿಚಿತ ಸಾಂಗತ್ಯ. .. ಎತ್ತು ಏರಿಗೆ ಎಳೆದರೆ, ಕೋಣ ನೀರಿನೊಳಗೆ ಓಡಿತ್ತು. ಅದರೂ ನೊಗದ ಕೊಂಡಿ ಕಳಚದ ಜೋಡಿ. ಬದುಕಿನುದ್ದಕ್ಕೂ ಉಸಿರುಗಟ್ಟಿಸುವ ನಿರ್ವಾತ. ಏಕತಾನತೆ- ಯಾಂತ್ರಿಕತೆಗಳೇ ಸಹಯಾತ್ರಿಗಳು. ನಲವತ್ತು ಪದರದ ದಾರಿಗುಂಟ ಎದೆಯ ಹಬೆಗೂಡಲ್ಲಿ ಉಬ್ಬಸಪಡುವ ಅತೃಪ್ತ ಬಿಕ್ಕುಗಳು .
ಎಷ್ಟು ಬಿಕ್ಕಿದರೇನು, ಏನು ಕುಕ್ಕಿದರೇನು … ಯಾರನ್ನೂ ಲೆಕ್ಕಿಸದ ವರ್ಷಗಳು ತಂತಾನೇ ಉರು ಉರುಳಿದವು ಲೆಕ್ಕದಲ್ಲಿ – ಅಳಗುಳಿಮನೆಯ ಆಟ. ಗುಳಿಯಿಂದ ಗುಳಿಗೆ ಕಾಯಿಗಳು ಕುಪ್ಪಳಿಸುತ್ತ ಸಾಗುವುದಷ್ಟೇ ಪರಿಕ್ರಮಣ. ಬಿಟ್ಟೂ ಬಿಡದ ನಂಟು.
ಪ್ರಯಾಸದಿ ಹೆಜ್ಜೆ ಎಳೆವ ಜರ್ಜರಿತ ಇವಳ, ದಿಂಬುಗಳಿಂದ ದಿಂಬುಗಳಿಗೆ ಸಾಗುವ ಈ ಇತಿಹಾಸ ಮತ್ತೆ ಮರುಕೊಳಿಸುತ್ತ, ಹೊಸ ಹುಟ್ಟು ಹುಟ್ಟುತ್ತ, ರಿಂಗಣಗುಣಿವ ಚಕ್ರದ ಗರಗಸಕ್ಕೆ ಸಿಕ್ಕು, ಹಿಂದೆ ಮುಂದಕ್ಕೆ ಆಡುತ್ತ ನವೆದು ಹೋಗುವ ಈ ಬದುಕಲ್ಲಿ ಇವಳದು, ಪ್ರತಿಯೊಂದೂ ಅಶ್ವತ್ಥ ಭಾರದ ಹೆಜ್ಜೆಗಳೇ… ಭಾಜಾ ಭಜಂತ್ರಿಗಳಿಲ್ಲದ ಯಾಂತ್ರಿಕ ದೈನ್ಯ ದಿಬ್ಬಣವೇ ದಿಟ.
ಅವಳ ಭಾವಕೋಶದಲ್ಲಿ ಇಟ್ಟಾಡುವ ಭಾವಗಳ ಕಿಂಕಿಣಿ ತಾರಕಕ್ಕೇರಿ ಕೆನೆದಾಡುತ್ತವೆ. ಕಪ್ಪು ಕಾವಳದ ಇರುಳಲ್ಲಿ, ಮೆದುಳ ನರಗಳ ಮೀಟಿ ಎಳೆದು ಹಿಂಡಿ, ಗಂಟು ಕಟ್ಟುವ ನೋವ ತಿದಿ.
ಮೃದುವಾಗಿದ್ದುದೇ ಸುಳ್ಳೆನಿಸುವ ಉಸಿರುಗಟ್ಟಿಸುವ ಈ ಹಳೆಯ ಮಣಕುಗಟ್ಟಿದ, ಕಾಠಿಣ್ಯದ ನೆಲೆಯನ್ನು ನಂಬಿ, ವಿಧಿಯಿರದೆ ತಲೆಯಾನಿಸಿಕೊಂಡು ಬಂದ ಈ ಪುರಾತನ ಗಟ್ಟಿ, ಕಲ್ಲು ದಿಂಬು ಈಗ ಯಾತನೆಯ ಗೂಟ. ನೋವ ಬಿತ್ತುವ ಭೂಮಿ. ಚರಮ ಹಾದಿಗುಂಟ ವ್ಯರ್ಥ ನಡೆದಾಟ ಅವಳದು ಎಂಬುದು ಖಾತ್ರಿ. ಹೃದಯ – ಮನಸ್ಸು ಭಣಗುಡುವ ಈ ಇಳಿ ಹೊತ್ತಿನಲ್ಲಿ, ಸ್ವಾತಂತ್ರ್ಯ ಬಿಕರಿಯಾದ ನೋವು-ಬಿಕ್ಕಳಿಕೆ ಅವ್ಯಾಹತ. ಕೊನೆಯುಸಿರು ಹೊಯ್ದಾಡುವ ಕ್ಷಣಗಳಲ್ಲಿ ಇದ್ಯಾವ ವಿಚಿತ್ರ ಅಸ್ಮಿತೆ ಹೆಡೆಯೆತ್ತಿ ಅವಳನ್ನು ಬಡಿ ಬಡಿದು ಕುಟುಕುತ್ತಿದೆ ??!!.
ಇನ್ನಾದರೂ ಸ್ವಂತ ಬದುಕ ಚಿಗುರೊಡೆಸಿ, ತನ್ನೊಡಲ ಸದ್ದು-ವಾಸನೆಗಳ, ರಾಜಾರೋಷ, ಮನಸೋ ಇಚ್ಛೆ, ಚಿತ್ತಾಗುವಷ್ಟು ಹೊರಚೆಲ್ಲಾಡೋ ಇವಳ ವಾಂಛೆ ಈಡೇರುವುದೇ?
- ವೈ.ಕೆ.ಸಂಧ್ಯಾ ಶರ್ಮ
