ಪುಟ್ಟಣ್ಣ ಬಳಿ ಸಿನಿಮಾ ವ್ಯಾಕರಣ ಕಲಿತ ಭಾರತಿರಾಜಾ, ತಮ್ಮ ಗುರುಗಳ ಬಗ್ಗೆ ಕೊನೆಯವರೆಗೂ ಗೌರವವಾಗಿ ನಡೆದುಕೊಂಡರು. ಬೆಂಗಳೂರಿನಲ್ಲಿ ಸನ್ಮಾನ ಸ್ವೀಕರಿಸಿ ‘ಕನ್ನಡದಲ್ಲಿ ಒಂದು ಚಿತ್ರ ಮಾಡಿಯೇ ತೀರುತ್ತೇನೆ’ ಎಂದು ಶಪಥ ಮಾಡಿಹೋಗಿದ್ದರು. ಅವರ ಶಪಥ ಈಡೇರಲಿಲ್ಲ. ಭಾರತಿರಾಜಾ ಮನಮುಟ್ಟುವ ಚಿತ್ರಗಳಿಂದ ಅವರು ಸದಾ ಸ್ಮರಣಾರ್ಹರು. ರಾಘವನ್ ಚಕ್ರವರ್ತಿ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
‘ಎನ್ ಇನಿಯ ತಮಿಳ್ ಮಕ್ಕಳೇ’ ಎನ್ನುತ್ತಾ ನೆರೆದಿರುವ ಸಭಿಕರಲ್ಲಿ ಆತ್ಮೀಯತೆ-ರೋಮಾಂಚನಗಳನ್ನು ಒಟ್ಟಿಗೇ ಉಂಟುಮಾಡುತ್ತಾ, ಮಾತು ಆರಂಭಿಸುತ್ತಿದ್ದ ಭಾರತೀರಾಜಾ, ಇನ್ನು ನೆನಪು ಮಾತ್ರ. ತಮಿಳು ಸಿನಿಮಾದಲ್ಲಿ ’ಹೊಸಅಲೆ’ಯ ಸಾಧ್ಯತೆಯನ್ನು ವಿಸ್ತರಿಸಿದ, ಅಂತಹ ಪರಿಕಲ್ಪನೆಗೆ ಭದ್ರಬುನಾದಿ ಹಾಕಿದವರಲ್ಲಿ ಭಾರತಿರಾಜಾ ಪ್ರಮುಖರು.
ಇಳಯರಾಜಾರಂತೆ ತಮಿಳುನಾಡಿನ ಥೇನಿ ಜಿಲ್ಲೆಯವರಾದ ಭಾರತಿರಾಜಾ, ಸರ್ಕಾರಿ ನೌಕರರಾಗಿ ತಮ್ಮ ಜೀವನ ಆರಂಭಿಸಿದರು. ಆದರೆ ಬಿಡಲಾಗದ ಸಿನಿಮಾ-ನಾಟಕದ ಗೀಳು ಅವರನ್ನು ಮದರಾಸಿನ ಕಡೆಗೆ ದೂಡಿತು. ಪುಟ್ಟಣ್ಣ, ಪಿ.ಪುಲ್ಲಯ್ಯ ಮೊದಲಾದ ನಿರ್ದೇಶಕರೊಂದಿಗೆ ಕೈಜೋಡಿಸಿದರು. ಸಿನಿಮಾದ ಪಟ್ಟುಗಳನ್ನು ಕಲಿತರೂ ಸ್ವತಂತ್ರ ನಿರ್ದೇಶಕರಾಗಲು ಅವಸರಿಸಲಿಲ್ಲ. ೧೯೭೭ ರಲ್ಲಿ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಮಲ್-ರಜನಿ-ಶ್ರೀದೇವಿಯರ ಅಭಿನಯದ ’ಪದಿನಾರು ವಯದಿನಿಲೆ’, ತಮಿಳು ಸಿನಿಮಾದ ದಿಕ್ಕನ್ನೇ ಬದಲಿಸಿತು. ಸಿನಿಮಾದ ವ್ಯಾಖ್ಯೆ-ವ್ಯಾಕರಣಗಳನ್ನೆಲ್ಲಾ ಭಾರತಿರಾಜಾ, ತಮ್ಮ ಈ ಮೊದಲ ಚಿತ್ರದ ಮೂಲಕ,ಹೊಸದಾಗಿ ಬರೆದಿದ್ದರು.
ನನ್ನನ್ನು ಬಹಳ ಕಲಕಿದ ಅವರ ನಿರ್ದೇಶನದ ಚಿತ್ರಗಳು ’ನಿಳಲ್‍ಗಳ್’ (ನೆರಳುಗಳು) ಮತ್ತು ಮುದಲ್ ಮರಿಯಾದೈ (ಆತ್ಮಗೌರವವೇ ಮೊದಲು). ಸಿನಿಮಾ ರಂಗ ಸೇರಲು, ಸಂಗೀತಜ್ಞನಾಗಲು ಹಾತೊರೆಯುವ ನಿರುದ್ಯೋಗಿ ಯುವಕರನ್ನು ಎಡೆಬಿಡದೇ ನೆರಳಿನಂತೆ ಹಿಂಬಾಲಿಸುವ ದುರಾದೃಷ್ಟ, ಕೊನೆಯಲ್ಲಿ ವಿಷಾದದಲ್ಲಿ ಚಿತ್ರ ಕೊನೆಯಾಗುತ್ತದೆ.

ಸಿನಿಮಾದಲ್ಲೊಬ್ಬ ಸ್ಟಾರ್ ಇರಬೇಕು….ಕಣ್ಣುಕೂರೈಸುವ ಸೆಟ್‍ಗಳಿರಬೇಕು..ಫೈಟ್ ಇರಬೇಕು..ಮುಂತಾದ ಮಿಥ್(myth) ಗಳನ್ನೆಲ್ಲಾ ಕಿತ್ತೆಸೆದ ’ನಿಳಲ್‍ಗಳ್’ ನಲ್ಲಿ ಪೀಚುದೇಹದ ರಾಜಶೇಖರ್ ರೊಂದಿಗೆ ಸ್ವತಃ ಭಾರತಿರಾಜಾ ಕೂಡಾ ಅಭಿನಯಿಸಿದ್ದರು. ಚಿತ್ರದ ವಿಷಾದ-ದುರಂತದ ಮೂಡ್‍ಗೆ ಹೇಳಿ ಮಾಡಿಸಿದ ಇಳಯರಾಜಾರ ಸಂಗೀತ, ಚಿತ್ರದ ಗಮನಾರ್ಹ ಅಂಶ. ಮನಕಲಕುವ ಈ ಚಿತ್ರ ಲಾಭವನ್ನೇನೂ ತರಲಿಲ್ಲ. ಆದರೆ ಹಲವು ಪನೋರಮಾಗಳಲ್ಲಿ ಪ್ರದರ್ಶಿತವಾಯಿತು. ತಮಿಳಿನಲ್ಲಿ ಕಲ್ಟ್ ಸಿನಿಮಾಗಳ ಪರಂಪರೆಗೆ ಪುಷ್ಟಿದೊರೆಯಿತು.
ವೈವಾಹಿಕ ಜೀವನದಲ್ಲಿ ಯಾವುದೇ ಸುಖ-ನೆಮ್ಮದಿ ಕಾಣದ ಮಲೈಚಾಮಿ (ಶಿವಾಜಿಗಣೇಶನ್) ತನ್ನ ಮಗಳ ವಯಸ್ಸಿನ ಕುಯಿಲ್ (ರಾಧಾ) ಳೊಂದಿಗೆ ಪ್ರೇಮಪಾಶಕ್ಕೆ ಸಿಲುಕುವ ಚಿತ್ರದಲ್ಲಿ ಎದ್ದು ಕಾಣುವ ಅಂಶ, ಭಾರತಿರಾಜಾರ ಕಥಾಸಂವಿಧಾನ. ಆರ್.ಸೆಲ್ವರಾಜ್ ರಂತಹ ಪ್ರತಿಭಾವಂತ ಲೇಖಕ ಭಾರತಿರಾಜಾರೊಂದಿಗೆ ಕೈ ಜೋಡಿಸಿದ್ದರು. ಪಾತ್ರಪೋಷಣೆ-ಗ್ರಾಮೀಣ ಸೊಗಡಿನ ಮಾತುಗಳು, ತಲಕಾಡಿನ ಪರಿಸರವನ್ನು ಕಣ್ಣಿಗೆ ಕಟ್ಟಿವಂತೆ ಚಿತ್ರಿಸಿದ ಬಿ.ಕಣ್ಣನ್ ರ ಕ್ಯಾಮೆರಾಕುಸುರಿ ಒಂದಿಕಡೆಯಾದರೆ, ಶಿವಾಜಿ-ರಾಧಾ-ವಡಿವುಕ್ಕರಸಿ ಪಾತ್ರಗಳೇ ತಾವಾಗುವ ಪರಿ..ಚಿತ್ರವನ್ನು ನೋಡಿಯೇ ಅನುಭವಿಸುವಂತೆ ಮಾಡಿತ್ತು. ಮಲೈಚಾಮಿ-ಕುಯಿಲ್, ಮಲೈಚಾಮಿ-ಪೊನ್ನಾತಾ(ವಡಿವುಕ್ಕರಸಿ)ರ ಸಂಬಂಧಗಳ ಹಿನ್ನಲೆಯಲ್ಲಿ, ಹಳ್ಳಿಗಳಲ್ಲಿನ ಜಾತಿವ್ಯವಸ್ಥೆ ಹೇಗೆ ಸುಪ್ತವಾಗಿ, ಅಷ್ಟೇ ಆಳವಾಗಿ ಬೇರೂರಿದೆ ಎಂಬುದನ್ನು ಭಾರತಿರಾಜಾ ತಾದಾತ್ಮ್ಯತೆಯಿಂದ ಹೇಳುತ್ತಾ ಹೋಗುತ್ತಾರೆ. ಕೆಲವೇ ನಿಮಿಷಗಳು ಬಂದುಹೋಗುವ ಸತ್ಯರಾಜ್ ಪಾತ್ರವನ್ನು ನಿರೂಪಿಸಿರುವ ರೀತಿ, ಭಾರತಿರಾಜಾ ಸೂಕ್ಷ್ಮತೆಗೆ ಸಾಕ್ಷಿಯಾಗಿದೆ. ’ಗೌರವಂ’ ಅಥವಾ ’ತಂಗಪ್ಪದಕ್ಕಮ್’ ತರಹದ ಪಾತ್ರಗಳ ಮೂಡ್ ನಲ್ಲೇ ಇದ್ದುಬಿಡಬಹುದಾಗಿದ್ದ ಶಿವಾಜಿ ಗಣೇಶನ್ ಅವರನ್ನು, ಮಲೈಚಾಮಿಯಾಗಿಸಿದ್ದು ಕಡಿಮೆ ಸಾಧನೆಯಲ್ಲ. ಅತಿಭಾವುಕತೆ, ಕೊಚ್ಚಿ ಬೀಸಾಡುವ ಸಂಭಾಷಣೆಗಳಿಂದ ಮುಕ್ತವಾಗಿಸಿ, ಶಿವಾಜಿಯವರಲ್ಲಿದ್ದ ಅಪ್ಪಟ ಕಲಾವಿದನನ್ನು ಅನಾವರಣಗೊಳಿಸುವುದರಲ್ಲಿ ಭಾರತಿರಾಜಾ ಅಚ್ಚರಿಯ ಸಾಧನೆ ಮಾಡಿದ್ದರು.

ತ್ರಿವಳಿಗಳಂತಿದ್ದ ಇಳಯರಾಜಾ-ಭಾರತಿರಾಜಾ-ವೈರಮುತ್ತು
ಭಾರತಿರಾಜಾ ಸಿನಿಮಾಗಳ ಮೂಲ ದ್ರವ್ಯವೇ ವಿಷಾದವೇನೋ ಅನಿಸಿದರೆ ಅದು ಸಹಜವೇ. ತಮ್ಮದಲ್ಲದ ಜೆನರ್(genre) ನ ’ಟಿಕ್ ಟಿಕ್ ಟಿಕ್’ ಮತ್ತು ’ಸಿಗಪ್ಪು ರೋಜಾಗಳ್’ ಮಾಡಿ ಜೈಸಿದ ಭಾರತಿರಾಜಾ, ನಂತರ ತಮ್ಮ ಸ್ವಸ್ಥಾನ ಸೇರಿದರು. ತಮ್ಮೆಲ್ಲಾ ಸಮಕಾಲೀನ ನಿರ್ದೇಶಕರಿಗಿಂತ ಹೆಚ್ಚು ಅರ್ಥಪೂರ್ಣ-ಸಾಮಾಜಿಕ ಕಳಕಳಿಯ ಚಿತ್ರಗಳತ್ತಲೇ ಗಮನಹರಿಸಿದರು. ‘ಮಣ್‍ವಾಸನೈ’ ತರದ ಬಹುತೇಕ ಹೊಸಬರಿದ್ದ ಚಿತ್ರ ಕೂಡಾ ಭಾರತಿರಾಜಾ ಕೈಯಲ್ಲಿ ಅಪ್ರತಿಮ ಕಲಾಕೃತಿಯಾಯ್ತು. ಜೀವನನಿರ್ವಹಣೆಗೆ ಮಧುರೈನ ಬೀದಿಬದಿಗಳಲ್ಲಿ ಬಳೆ ಮಾರುತ್ತಿದ್ದ ಪಾಂಡ್ಯನ್ ಎಂಬ ಸಿನಿಮಾದ ಗಂಧಗಾಳಿ ಗೊತ್ತಿಲ್ಲದ ಯುವಕನನ್ನು ‘ಮಣ್‍ವಾಸನೈ’ ಚಿತ್ರದ ಹೀರೋ ಪಾತ್ರಕ್ಕೆ ಆಯ್ಕೆ ಮಾಡಿದಾಗ, ಇಡೇ ಕೊಡಂಬಾಕಂ ಗಹಗಹಿಸಿತ್ತು. ಆದರೆ ಚಿತ್ರ ಬಿಡುಗಡೆಯಾದಾಗ, ತಮಿಳು ಚಿತ್ರರಂಗವೇ ಸ್ತಂಭೀಭೂತಗೊಂಡಿತ್ತು. ನಟಿ ರೇವತಿಗೂ ಇದು ಮೊದಲ್ ಚಿತ್ರ. ತಮಿಳುನಾಡಿನ ಗ್ರಾಮಗಳಲ್ಲಿ ಹುದುಗಿಹೋಗಿದ್ದ ಮಣ್ಣನ್ನು ಅಗೆದು, ಅದರ ಘಾಟು-ಘಮಲುಗಳನ್ನು ನಗರದವರೂ ಆಘ್ರಾಣಿಸಲು ಅನುವು ಮಾಡಿಕೊಟ್ಟ ಭಾರತಿರಾಜಾ ಸ್ಮರಣಾರ್ಹರು. ವೈರಮುತ್ತು-ಇಳಯರಾಜಾ, ಭಾರತಿರಾಜಾ ಚಿತ್ರಗಳಲ್ಲಿ ಹೃದಯ-ಆತ್ಮಗಳಂತಿದ್ದರು.
ತಾವು ನಿರ್ದೇಶಕರಾಗಿದ್ದಲ್ಲದೇ, ಒಂದು ಶಾಲೆಯಾಗಿಯೇ ಬೆಳೆದ ಭಾರತಿರಾಜಾ, ಕೆ ಭಾಗ್ಯರಾಜ್, ಮನಿವಣ್ಣನ್, ಸೆಲ್ವರಾಜ್, ಮನೋಬಲ, ತ್ಯಾಗರಾಜನ್ ಮುಂತಾದ ಪ್ರತಿಭಾವಂತರ ದಂಡನ್ನೇ ಬೆಳೆಸಿದರು. ಕಮಲ್-ರೇವತಿ ಅಭಿನಯದ ’ಒರು ಖೈದಿಯಿನ್ ಡೈರಿ’, ಭಾರತಿರಾಜಾ-ಭಾಗ್ಯರಾಜ್ ಜೋಡಿಯ ಸ್ಮರಣೀಯ ಥ್ರಿಲ್ಲರ್ ಗಳಲ್ಲೊಂದು. ಇದನ್ನೇ ಭಾಗ್ಯರಾಜ್ ಹಿಂದಿಯಲ್ಲಿ ’ಆಖ್ರೀ ರಾಸ್ತಾ’ ಎಂದು ರೀಮೇಕ್ ಮಾಡಿ ಗೆದ್ದರು.
೧೯೯೪ರಲ್ಲಿಬಿಡುಗಡೆಯಾದ ’ಕರುತ್ತಮ್ಮ’, ಭಾರತಿರಾಜಾರ ದೈತ್ಯಪ್ರತಿಭೆಗೆ, ಗ್ರಾಮೀಣಭಾಗದ ಜನಜೀವನದ ಬಗ್ಗೆ ಅವರಿಗಿರುವ ಕಳಕಳಿಗೆ ದ್ಯೋತಕ. ವರದಕ್ಷಿಣೆ ಕೊಡಲು ಸಾಧ್ಯವೇ ಇಲ್ಲದ ಬಡತನದ ಬೇಗೆಯಲ್ಲಿ ಬೇಯುತ್ತಿರುವ ಥೇನಿಯ ಕುಗ್ರಾಮವೊಂದರಲ್ಲಿ, ಹೆಣ್ಣು ಶಿಶು ಹುಟ್ಟುತ್ತಿಂದತೆಯೇ ಅದನ್ನು ಕೊಂದುಬಿಡುವ ರಾಕ್ಷಸೀ ವ್ಯಕ್ತಿಗಳ ವಿರುದ್ಧ ಕರುತ್ತಮ್ಮನ ಹೋರಾಟವಿರುವ ಈ ಚಿತ್ರ, ಯಶಸ್ವಿಯೂ ಆಯಿತು. ಭಾರತಿರಾಜಾರ ತಾಯಿಯ ಹೆಸರೂ ’ಕರುತ್ತಮ್ಮಾಳ್’.

ಭಾರತಿರಾಜಾರ ’’ ಚಿತ್ರದ ಒಂದು ತುಣುಕು
ತಮ್ಮ ಮಗ ಮನೋಜ್ ಕಳೆದ ವರ್ಷ ತೀರಿಕೊಂಡಾಗ, ಜರ್ಝರಿತರಾದ ಭಾರತಿರಾಜಾ ಚೇತರಿಸಿಕೊಳ್ಳಲೇ ಇಲ್ಲ. ಪುಟ್ಟಣ್ಣ ಬಳಿ ಸಿನಿಮಾ ವ್ಯಾಕರಣ ಕಲಿತ ಭಾರತಿರಾಜಾ, ತಮ್ಮ ಗುರುಗಳ ಬಗ್ಗೆ ಕೊನೆಯವರೆಗೂ ಗೌರವವಾಗಿ ನಡೆದುಕೊಂಡರು. ಬೆಂಗಳೂರಿನಲ್ಲಿ ಸನ್ಮಾನ ಸ್ವೀಕರಿಸಿ ’ಕನ್ನಡದಲ್ಲಿ ಒಂದು ಚಿತ್ರ ಮಾಡಿಯೇ ತೀರುತ್ತೇನೆ’ ಎಂದು ಶಪಥ ಮಾಡಿಹೋಗಿದ್ದರು. ಅವರ ಶಪಥ ಈಡೇರಲಿಲ್ಲ. ತಮಿಳು ಅಸ್ಮಿತೆ-ಕಾವೇರಿ ವಿಚಾರ ಬಂದಾಗಲೆಲ್ಲಾ, ನೆಲದಾಳಕ್ಕೆ ಕಾಲುಗಳನ್ನು ಊರಿ, ತಮಿಳರ ಪರ ನಿಲ್ಲುತ್ತಿದ್ದರು. ಶ್ರೀಲಂಕಾಗೂ ಭೇಟಿನೀಡಿ, ಎಲ್‍ಟಿಟಿಇ ನ ಮುಖ್ಯಸ್ಥ ವೇಲುಪಲ್ಲಿ ಪ್ರಭಾಕರನ್ ಜೊತೆ ಮಾತುಕತೆಯಾಡಿ ಬಂದಿದ್ದರು. ಎಲ್‍ಟಿಟಿಇ ವಿಚಾರದಲ್ಲಿ ಮೃದುಧೋರಣೆಯಿತ್ತು.
ಇಂದು ತಮಿಳು ಸಿನಿಮಾದಲ್ಲಿ ಹತ್ತು ಹಲವು ಯಶಸ್ವೀ ಪ್ರಯೋಗಗಳಾಗಿವೆ. ಸಾಮಾಜಿಕ ಸಮಸ್ಯೆ, ಶೋಷಣೆ-ಜಾತೀಯತೆಯ ವಿರುದ್ಧ ಸಡ್ಡುಹೊಡೆಯುವ ಕಥೆಗಳನ್ನು ಸಿನಿಮಾದ ಭಾಷೆಗೆ ಪರಿಣಾಮಕಾರಿಯಾಗಿ ಅಳವಡಿಸುವಲ್ಲಿ ಅಲ್ಲಿನ ಹೊಸ ನಿರ್ದೇಶಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ಈ ಪ್ರಯತ್ನಗಳ ಮೂಲಬೇರನ್ನು ಗಟ್ಟಿಗೊಳಿಸಿದ್ದು, ಪೊರೆದದ್ದು ಭಾರತಿರಾಜಾ. ’ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಎಲ್ಲಾ ವಿಧದಲ್ಲೂ ಅರ್ಹರಾಗಿದ್ದ ಭಾರತಿರಾಜಾ, ಪ್ರಶಸ್ತಿಪಡೆಯದೇ ’ಕಟ್’ ಹೇಳಿಬಿಟ್ಟರು.
ಮನಮುಟ್ಟುವ ಚಿತ್ರಗಳಿಂದ ಅವರು ಸದಾ ಸ್ಮರಣಾರ್ಹರು.
- ರಾಘವನ್ ಚಕ್ರವರ್ತಿ – ಪತ್ರಕರ್ತರು, ಲೇಖಕರು, ಬೆಂಗಳೂರು
