ಹೊರಗಿನ ಆಡಂಬರ ಮುಖ್ಯವಲ್ಲ ಆಂತರಿಕ ಪರಿಶುದ್ಧತೆ ಮುಖ್ಯ

ಬಾಹ್ಯ ಪ್ರಪಂಚದಲ್ಲಿ ನಾವು ನಮ್ಮ ಬ್ರಾಂಡೆಡ್ ಬಟ್ಟೆ ಮೋಜು, ಮಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡುವ ನಾವುಗಳು ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಸಂಸ್ಕಾರವನ್ನು ಮರೆತಿದ್ದೇವೆ. ಓಂಕಾರ ಪಾಟೀಲ ಅವರು ಆಂತರಿಕ ಶುದ್ದಿಯ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಹೊರಗಣ ತನುವಿಗೆ ಒಡವೇ ವಸ್ತ್ರದ ಹೊಳಪು
ಒಳಗಣ ಮನಕೆ ಮತ್ಸರ ಮೋಹದ ಕಳಂಕು,
ಫಳ ಫಳ ಹೊಳೆಯುವ ಕನ್ನಡಿಯ ನೋಡಿದರೇನು
ತನ್ನ ತಾನಿರಿಯದ ಮಲಿನವಾಗಿರಲಾಗಿ?
ಹೊರಗಿನ ಡಾoಬಿಕಕ್ಕೆ ಮರುಳಾಗದಿರಯ್ಯ
ಅಂತರಂಗ ಶುದ್ದಿಯೇ
ಮುಕ್ತಿಗೆ ಹಾದಿ ಕಾಣ ಕೂಡಲ ಸಂಗಮದೇವ.

ಮೇಲಿನ ವಚನದ ಸಾರದಂತೆ ಜಗತ್ತಿನಲ್ಲಿ ಮನುಷ್ಯ ತನ್ನ ಬಾಹ್ಯ ಸೌಂದರ್ಯ ಬಟ್ಟೆ ಹಾಗು ಆಸ್ತಿ ಅಂತಸ್ತುಗಳನ್ನು ಹೊಳೆಯುವಂತೆ ಸುಂದರವಾಗಿ ಇಟ್ಟಿಕೊಳ್ಳಲು ಬಯಸುತ್ತಾನೆ. ಆದರೆ ಅವನ ಅಂತರಂಗದ ಮನಸ್ಸು ಮಾತ್ರ ಕಾಮ, ಕ್ರೋದ, ಮದ, ಮತ್ಸರ ಹಾಗು ಕೆಟ್ಟ ಆಲೋಚನೆಗಳಿಂದ ಮಲಿನ ವಾಗುತ್ತಿದೆ.

ಇಪ್ಪತ್ತೊಂದನೇ ಶತಮಾನದ ಭಾರತ ಒಂದು ಕಡೆ ಚಂದ್ರನ ಮೇಲೆ ರಾಕೆಟ್ ಕಳಿಸುತಿದ್ದೇವೆ, ಇನ್ನೊಂದು ಕಡೆ ರಸ್ತೆಯಲ್ಲಿ ನ್ಯಾಯ ಕೇಳುವ ಯುವಕರ ಮೇಲೆ ಗುಂಡು ಹಾರಿಸುತ್ತಿದ್ದೇವೆ, ಒಂದು ಕಡೆ ಏರುತ್ತಿರುವ ನೂರು ಅಂತಸ್ತಿನ ಗಗನ ಚುಂಬಿ ಕಟ್ಟಡ ಕಟ್ಟಡ, ಇನ್ನೊಂದು ಕಡೆ ಅಸೂಯೆ, ದ್ವೇಷ ಮತ್ಸರದ ಬೇಗುದಿಯಿಂದ ಕುಸಿದು ಬೀಳುತ್ತಿರುವ ಮನಸುಗಳು.

ಇವತ್ತು ನಾವು ಅಭಿವೃದ್ಧಿ ಹೆಸರಲ್ಲಿ ಏನೆಲ್ಲಾ ಸಾದಿಸಿದ್ದೇವೆ. 6 ಲೇನ್ ರಸ್ತೆ, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ, ಮನೆಯಲ್ಲಿ ಕೆಲಸ ಮಾಡಲು ರೋಬೋಟ್ ಬಳಕೆ, ಮಾತಾಡಲು ಲೇಟೆಸ್ಟ್ ಐ. ಫೋನ್, ಬ್ರಾಂಡೆಡ್ ಬಟ್ಟೆ, ಬ್ರಾಂಡೆಡ್ ಗಡಿಯಾರ, ಶಾಪಿಂಗ್ ಮಾಲನಲ್ಲಿ ಝಗಮಗಿಸುವ ಬೆಳಕಿನ ಚಿತ್ತಾರ ಅಷ್ಟೇ ಏಕೇ ದೇವಸ್ಥಾನ, ಶಾಲಾ ಕಾಲೇಜುಗಳು ಕೂಡ ಪ್ರಕಾಶಿಸುತ್ತಿವೆ. ಅದಕ್ಕಾಗಿ ಹೇಳಿರಬಹುದು ಭಾರತ ಪ್ರಕಾಶಿಸುತ್ತಿದೆ (india shining ) ಎಂದು ಭಾವಿಸಬಹುದು.

ಇದು ಬಾಹ್ಯ ಪ್ರಪಂಚದ ಒಂದು ಕಥೆ ಒಂದು ಕಡೆಯಾದರೆ ಇವುಗಳ ನಡುವೆ ನಾವುಗಳು ನಮ್ಮ ಬದುಕಿನ ಮೌಲ್ಯಗಳನ್ನು ಅರಿಯದೆ ಅಸೂಯೆ, ಅನುಮಾನ, ದ್ವೇಷ ಇನ್ನೊಬ್ಬರು ಮುಂದೆ ಹೋದರೆ ಸಹಿಸದ ಪ್ರವೃತ್ತಿಗಳನ್ನು ಬೆಳೆಸಿಕೊಂಡು ನಮ್ಮ ಮನಸ್ಸನ್ನು ಮಲಿನ ಮಾಡಿಕೊಂಡು ಅಧಿಕಾರ ಅಂತಸ್ತಿನ ಹಿಂದೆ ಬಿದ್ದು ಎಲ್ಲವನ್ನು ಹಣ ಮತ್ತು ಅಧಿಕಾರದ ದಾಸರಾಗಿ ಮೆರೆಯುತಿದ್ದೇವೆ.

ಜಗತ್ತಿನಲ್ಲಿ ನಾವು ಹಣ ಗಳಿಸುವ ಆತುರದಲ್ಲಿ ನೈತಿಕತೆಯನ್ನು ಮರೆಯುತ್ತಿದ್ದೇವೆ. ಭ್ರಷ್ಟಾಚಾರ, ಮೋಸ, ವಂಚನೆಗಳು ದೈನಂದಿನ ಕಾಯಕಗಳಾಗಿ ಮಾಡಿಕೊಂಡು ಮೆರೆಯುತಿದ್ದೇವೆ. ಬಾಹ್ಯ ಪ್ರಪಂಚದಲ್ಲಿ ನಾವು ನಮ್ಮ ಬ್ರಾಂಡೆಡ್ ಬಟ್ಟೆ ಮೋಜು, ಮಸ್ತಿಗಾಗಿ ಸಾವಿರಾರು ರೂಪಾಯಿ ಖರ್ಚುಮಾಡುವ ನಾವುಗಳು ನಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವ ಸಂಸ್ಕಾರವನ್ನು ಮರೆತಿದ್ದೇವೆ.

ತಾಂತ್ರಿಕಯುಗದಲ್ಲಿ ನಾವುಗಳು ಎಷ್ಟೇ ಪ್ರಗತಿ ಸಾಧಿಸಿದ್ದರೂ ನಮ್ಮಲ್ಲಿ ಸಂಸ್ಕೃತಿ, ಸಂಸ್ಕಾರ, ಇರದೇ ಇದ್ದರೆ ಆ ಬದುಕಿಗೆ ಯಾವುದೇ ಅರ್ಥವಿರುವುದಿಲ್ಲ.

ಕನ್ನಡಿ ಎಷ್ಟೇ ಹೊಳೆದರೂ ಅದರಲ್ಲಿ ಮೂಡುವ ಬಿಂಬ ಸ್ವಚ್ಛವಾಗಿರುವಂತೆ ನಮ್ಮ “ಹೊರಗಿನ ಆಡಂಬರ ಮುಖ್ಯವಲ್ಲ, ಆಂತರಿಕ ಮನಸಿನ ಪರಿಶುದ್ಧತೆಯೇ ಮುಖ್ಯ,” ಅನ್ನುವದನ್ನು ಅರ್ಥೈಸಿಕೊಂಡು ನಮ್ಮಲ್ಲಿರುವ ಕಾಮ, ಕ್ರೋದ , ಮತ್ಸರ ಹಾಗು ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಒಳ್ಳೆ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂದುವರೆದರೆ ಬದುಕಿಗೊಂದು ಅರ್ಥವಿರುತ್ತದೆ.


  • ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading