‘ ಭೂಲ್‌ಭುಲಯ್ಯ’ ಕವನ

ಬಣ್ಣಬಣ್ಣದ ಬಲೂನುಗಳ ಆಕಾಶಕೇರಿಸಿ, ಕೊಪ್ಪೆ ಕಂಬಳಿಯ ಹೊದಿಸಿ, ಕನಸುಗಳ ಬೀಳಿಸಲು ಹೊರಟಿಹರು…ಕವಿ ಬೆಂಶ್ರೀ ರವೀಂದ್ರ ಅವರ ಕವನವನ್ನು ಪೂರ್ತಿಯಾಗಿ ಓದಿ…

ಮುಚ್ಚಿಟ್ಟ ಅಕ್ಷರವ ಬಿಚ್ಚಿಟ್ಟು
ಮಾರಿದರು
ಅಮರಾವತಿಯ ಕನಸು
ನಕಲಿ ಛಾತ್ರಗೆ ಛತ್ರಿ ಹಿಡಿದು

ದಿವಾರಾತ್ರಿ ಅಕ್ಷರಮಂತ್ರವ ಧೇನಿಸಿದವಗಾಗಲಿಲ್ಲ ಸಾಕ್ಷಾತ್ಕಾರ
ಎಂಥ ಮಾಯದ ಚಮತ್ಕಾರ
ಆರದ ಗಾಯದ ಸತ್ಕಾರ

ಸೋರುತ್ತಿದೆ ಎಂದೋ ಕಟ್ಟಿದ್ದ ಮುರುಕು ಚಾವಡಿ
ತೂತು ಪಾತ್ರೆಗಳನಿಟ್ಟಾಯ್ತು
ಬಸಿದ ಬೆವರು ಮಡುಗಟ್ಟಿದ ರಕ್ತ
ಕೂಡಿ ಧುಮ್ಮುಕ್ಕುತ್ತಿದೆ ಪ್ರವಾಹ
ಇನ್ನೇನು ಗೂಡು ಕೊಚ್ಚಿ ಹೋಗುತ್ತದೆ

ಬಣ್ಣಬಣ್ಣದ ಬಲೂನುಗಳ ಆಕಾಶಕೇರಿಸಿ
ಕೊಪ್ಪೆ ಕಂಬಳಿಯ ಹೊದಿಸಿ
ಕನಸುಗಳ ಬೀಳಿಸಲು ಹೊರಟಿಹರು
ಒದ್ದೆ ಗಂಧದಕಡ್ಡಿ ಸೂಸುವುದೆ ಸುವಾಸನೆ

ಸಿಂಹಾಸನದಲಿ ಕುಂತ ಸಾವಿರದ ಕಣ್ಣವನು ಮುಚ್ಚಿಕೊಂಡಿಹ ಕಣ್ಣು
ನನದಲ್ಲವೆನುತ ಮೌನವಾಗಿ
ಜೊತೆಗಾರರಿಗೆ ಹರಿದ ಲಂಗೋಟಿ

ಎಲ್ಲ ಸುಗಮ ನನ್ನ ನುಡಿಯ ಗಮ
ಮುಟ್ಟುತ್ತದೆ ಉದ್ದಗಲ ಗಲಗಲ
ಜಕ್ಕಣ್ಣನ ಕೈಲೇ ಕೆತ್ತಿಸಿದ‌ ಮೂರ್ತಿ
ಹೊಳಪು ಮಾಸದು
ಮುರಿದ ಚಷ್ಮದ ನೋಟ

ಮಾತಿನರಮನೆಯು ನೀಡುವುದೇ ಸೂರು
ಛಳಿಸೂಳಿಯ ಗಾಳಿ ಎದೆಯ ಬೆಚ್ಚಗಾಗಿಸುವುದೆ

ಮಯಕದ ನಡೆಯೋ ಮಾಯಕದ ನುಡಿಯೋ
ಎದ್ದಿದೆ ಅನುಮಾನದ ಹುತ್ತ
ಭೂಲ್‌ಭುಲಯ್ಯನೊಳಗೆ
ದಾರಿಯೆತ್ತ
ಮಳೆಯೇ ಬೀಳದಿರುವಾಗ ಚಾತಕಕ್ಕೀವರೆ ತುತ್ತ?


  •  ಬೆಂಶ್ರೀ ರವೀಂದ್ರ – ಕವಿಗಳು, ಬೆಂಗಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading