‘ಹೃದಯಗಳ ಹಿಡಿದಿಡುವ ಕಲೆ’ ಕವನ

ಪ್ರೀತಿಯ ಪ್ರತಿ ಗಾಯವು ಒಂದು ಕಿಟಕಿಯಾಗಬಹುದು, ಅಲ್ಲಿಂದಲೇ ತಾನೆ ಬೆಳಕು ಒಳಬರುವುದು..ಕವಿ ಟಿ.ಪಿ.ಉಮೇಶ್ ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಪ್ರೇಮ ನದಿಯಂತೆ
ಆಳಗಲ ಏರಿಳಿವು ಎಣಿಸದೆ ಲೆಕ್ಕಿಸದೆ
ಹರಿಯುವುದರಲ್ಲಿ ಮಾತ್ರ ಶ್ರದ್ಧೆಯಿದೆ!
ಅದು ನಮ್ಮಿಂದ
ಮಾತುಗಳ ಬಣ್ಣನೆ ಬಡಿವಾರ
ಮುಖವಾಡಗಳನ್ನು ಬಯಸುವುದಿಲ್ಲ
ನಮ್ಮ ಚಹರೆಗಳನ್ನು ಮುಚ್ಚುಮರೆಯಿಲ್ಲದೆ ಬಿಚ್ಚಿಡುವ
ಧೈರ್ಯವನ್ನು ತೋರುತ್ತದೆ!

ನಾವು ನಮ್ಮ
ಸೋಲುಗಳನ್ನು ಗೆಲುವುಗಳನ್ನು
ಒಂದೇ ಕೈಯಲ್ಲಿ ಹಿಡಿದು ನಿಂತಿರುವಾಗ
ಪ್ರೇಮ ನಮ್ಮ ಪಕ್ಕದಲ್ಲೇ ನಗುತ್ತಾ ನಡೆಯುತ್ತಿರುತ್ತದೆ!

ಪ್ರೀತಿಯ ಪ್ರತಿ ಗಾಯವು
ಒಂದು ಕಿಟಕಿಯಾಗಬಹುದು
ಅಲ್ಲಿಂದಲೇ ತಾನೆ ಬೆಳಕು ಒಳಬರುವುದು!

ಪ್ರೇಮದಲ್ಲಿ
ಗೆಲ್ಲುವವರಿಲ್ಲ ಸೋಲುವವರಿಲ್ಲ
ಒಬ್ಬರೊಳಗೆ ಮತ್ತೊಬ್ಬರು ನೆಮ್ಮದಿಯಾಗಿ
ನೆಲೆಸುವವರಿಗೆ ಮಾತ್ರ ಅವಕಾಶ!

ಪ್ರೇಮ ಮಾತಿನ ಗದ್ದಲದಲ್ಲಿ ಹುಟ್ಟುವುದಿಲ್ಲ
ದೀರ್ಘ ಮೌನಗಳ ನಡುವೆ
ಒಬ್ಬರ ಉಸಿರನ್ನು ಮತ್ತೊಬ್ಬರು ನಂಬಿದಾಗ
ನಿಧಾನವಾಗಿ ಅರಳುತ್ತದೆ!

ಮಳೆ ಬಂದು ಹೋದ ಮೇಲು
ತೇವ ಉಳಿಸಿಕೊಳ್ಳುವ ಮಣ್ಣಿನಂತೆ
ಪ್ರೇಮ ದೂರದಲ್ಲಿದ್ದರು
ಹೃದಯದಲ್ಲಿ ನೆನಪನ್ನು ಉಳಿಸಿಕೊಳ್ಳುತ್ತದೆ!

ಗಾಳಿಗೆ ಗೊತ್ತು
ಮರವನ್ನು ಕದಲಿಸುವ ಕಲೆ!
ಕಾಲಕ್ಕೆ ಗೊತ್ತು!
ಬೇರುಗಳನ್ನು ಗಟ್ಟಿಗೊಳಿಸುವ ಕಲೆ
ಆಕರ್ಷಣೆಗೆ ಗೊತ್ತು
ಹೃದಯವನ್ನು ತಟ್ಟುವ ಕಲೆ!
ಜೀವನವಿಡೀ
ಹೃದಯಗಳ ಹಿಡಿದಿಡುವ ಕಲೆ
ಪ್ರೇಮಕ್ಕೆ ಮಾತ್ರ ಗೊತ್ತು!


  •  – ರಾಷ್ಟ್ರ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃರು, ಚಿತ್ರದುರ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading